ಪ್ರವಾಸ

ಯೂರೋಪ್‌ ಪ್ರವಾಸ (ಏಕೀಕೃತ) : ಭಾಗ-8

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಭಾಗ -4 ಫ್ರಾನ್ಸ್- ಪ್ಯಾರಿ ಪ್ಯಾರಿ ಪ್ಯಾರಿಸ್
ದಿನ 5.

ಬೆಳಗ್ಗೆ ಎದ್ದಾಗ ನಾವು ಫ್ರಾನ್ಸ್ ದೇಶದಲ್ಲಿ ಇರುವುದು ತಿಳಿದು ಪುಳಕಿತರಾದೆವು. ಹೋಟೆಲ್ ನ ಸುತ್ತಮುತ್ತ ಗಿಡಮರಗಳು, ಅಗಲವಾದ ರಸ್ತೆಗಳಿದ್ದು, ಆಹ್ಲಾದಕರ ವಾತಾವರಣ ಇದ್ದಿದ್ದರಿಂದ, ಬೇಗ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ, ತೊಳೆಯುವ ಸಂಸ್ಕೃತಿಯಿಂದ ಒರೆಸುವ ಸಂಸ್ಕೃತಿಗೆ ಒಲ್ಲದ ಮನಸ್ಸಿನಿಂದ ನಿರ್ವಾಹವಿಲ್ಲದೆ ಒಗ್ಗಿಕೊಂಡು, ಒಬ್ಬನೇ ಒಂದು ಸುತ್ತು ವಾಯುವಿಹಾರಕ್ಕೆ ಹೊರಟು, ಸುತ್ತಮುತ್ತ ಕೆಲವೊಂದು ಫೋಟೋ, ತೆಗೆದು ಮನೆಗೆ ಮಕ್ಕಳಿಗೆ ಫೋನ್ ಮಾಡಿ, ನಾವು ಈಗ ಪ್ಯಾರಿಸ್ ನಲ್ಲಿ ವಾಕಿಂಗ್ ಮಾಡುತ್ತಿರುವುದಾಗಿ ತಿಳಿಸಿ, ಇಲ್ಲಿ ಜ೦ಗಲ್ ನ ಇದ್ದೇವೆ ಎ೦ದು ತಿಳಿಸಿ ಕೊನೆಗೆ ಜಂಗಲ್ ಎನ್ನುವುದು ಹೋಟೆಲ್ ಹೆಸರು ಎಂದು ತಿಳಿಸಿದೆವು.

1967 ರಲ್ಲಿ ಶಮ್ಮಿ ಕಪೂರ್ ಮತ್ತು ಶರ್ಮಿಳಾ ಟ್ಯಾಗೋರ್”ಎನ್ ಈವ್ನಿ೦ಗ್ ಇನ್ ಪ್ಯಾರಿಸ್”ಚಿತ್ರದಲ್ಲಿ ಕೈ ಕೈ ಹಿಡಿದು,
“ಐಸಾ ಮೌಕಾ ಫಿರ್ಕಹಾ ಮಿಲೇಗಾ,
ಹಮಾರೆ ಜೈಸಾ ದಿಲ್ವಾಲ ಕಹಾ ಮಿಲೇಗಾ
ಎನ್ ಈವ್ನಿ೦ಗ್ ಇನ್ ಪ್ಯಾರಿಸ್”
ಹಾಡು ಹಾಡಿಕೊ೦ಡು ಪ್ಯಾರಿಸ್ ನಗರದಲ್ಲಿ ಓಡಾಡಿದ್ದನ್ನು ನೆನಪಿಸಿಕೊ೦ಡು ಈ ದಿನ ನಾವು ಪ್ಯಾರಿಸ್ ನೋಡಲು ಹೊರಟೆವು. ನಮ್ಮ ಭೇಟಿ ಜಗತ್ಪ್ರಸಿದ್ದ “ಐಫೆಲ್ ಟವರ್”ಗೆ. ಬೇಗ ಬೇಗ ತಿಂಡಿ ಕಾರ್ಯಕ್ರಮ, ಅದೇ ಬ್ರೆಡ್ ಜಾಮ್, ಕಟ್ ಫ್ರೂಟ್ಸ್, ಒಟ್ಟಿನಲ್ಲಿ ಕಾಂಟಿನೆಂಟಲ್ ಬ್ರೇಕ್ಫಾಸ್ಟ್ ಮುಗಿಸಿ ನಿಗದಿತ ಸಮಯ ಒಂಬತ್ತು ಗಂಟೆಗೆ ಬಂದು ಬಸ್ ಹತ್ತಿದೆವು. ಅಲ್ಲಿಂದ ಸುಮಾರು 2:00 ಗ೦ಟೆ ಪ್ರಯಾಣ. ಮೊದಲು ಪ್ಯಾರಿಸ್ ನಗರ ಪ್ರದಕ್ಷಿಣೆ. ಅನೇಕ ಪ್ರವಾಸಿ ತಾಣಗಳನ್ನು ತೋರಿಸಿದರು. ಅದರ ಹೆಸರುಗಳು ಎಲ್ಲಾ ಫ್ರೆಂಚ್ ಭಾಷೆಯಲ್ಲಿ ಇದ್ದಿದ್ದರಿಂದ, ನಮಗೆ ಹೆಸರುಗಳು ನೆನಪಿನಲ್ಲಿ ಉಳಿಯಲಿಲ್ಲ. ಆದರೆ ನಗರದ ಒಂದು ಬೀದಿಯಲ್ಲಿ ಹೋಗುವಾಗ ಒಂದು ಟನಲ್ ಬಂತು, ನಂತರ ಎರಡನೇ ಟನಲ್ ಬಂದಾಗ ನಮ್ಮ ಗೈಡ್ ಇ೦ಗ್ಲೆ೦ಡಿನ ರಾಜಕುಮಾರಿ ಪ್ರಿನ್ಸೆಸ್ ಡಯಾನ ಇದೇ ಟನಲ್ ನಲ್ಲಿ ಅಪಘಾತದಲ್ಲಿ ಮರಣ ಹೊಂದಿದರು ಎ೦ದು ತಿಳಿಸಿದಾಗ, ನಮ್ಮ ಗಮನ ಅತ್ತಕಡೆ ಹೋಗಿ, ನಮ್ಮ ನೆನಪು ಸುಮಾರು 30 ವರ್ಷ ಹಿ೦ದೆ ಹೋಯಿತು. 1997 ರಲ್ಲಿ ಮುದ್ದು ಮುದ್ದಾದ ಡಯಾನ ತನ್ನ 36 ನೇ ವಯಸ್ಸಿನಲ್ಲಿ ತನ್ನ ಪ್ರಿಯಕರ ದೋದಿ ಫಾಯೆದ್ ಜೊತೆ ಬೆ೦ಜ್ ಕಾರ್ ನಲ್ಲಿ ಹೋಗುತ್ತಿದ್ದಾಗ ಪಾಪಾರಜಿ (ಖ್ಯಾತ ನಾಮರ ಖಾಸಗಿ ಕ್ಷಣಗಳನ್ನು ಚಿತ್ರಗಳಲ್ಲಿ ಸೆರೆ ಹಿಡಿಯುವ ಛಾಯಾಗ್ರಾಹಕರು, ಮಾಧ್ಯಮದವರು).) ಗಳಿ೦ದ ತಪ್ಪಿಸಿಕೊಳ್ಳಲು ಅತಿವೇಗದಿ೦ದ ಕಾರು ಚಲಾಯಿಸಿ, ಅಪಘಾತದಲ್ಲಿ ಮರಣ ಹೊ೦ದಿದ ಜಾಗ ನೋಡಿ ಮನಸ್ಸು ಮಮ್ಮುಲ ಮರುಗಿತು. ಒಂದೆರಡು ಕಡೆ ಮೈಸೂರು ನಗರದಲ್ಲಿರುವ ದೊಡ್ಡ ದೊಡ್ಡ ಕಮಾನುಗಳ ತರಹ, ಮು೦ಬೈ ನ ಗೇಟ್ ವೇ ಆಫ್ ಇಂಡಿಯಾ ತರಹದ ರಚನೆಗಳು ಇದ್ದು, ಅಲ್ಲೇ ಪ್ರವಾಸಿಗರ ಜನ ಸಂದಣಿ ಹೆಚ್ಚಾಗಿತ್ತು. ಒ೦ದು ಮಾರ್ಗದಲ್ಲಿ ಹೋಗುವಾಗ ನಮ್ಮ ಗೈಡ್ ಇದು ಪ್ರಪಂಚದಲ್ಲೇ ಅತ್ಯಂತ ದುಬಾರಿ ಮತ್ತು ಫ್ಯಾಷನ್ ಶಾಪಿಂಗ್ ಏರಿಯಾ ಎಂದು ತಿಳಿಸಿದರು. ಅಲ್ಲಿ ಎಲ್ಲಾ ಬ್ರಾಂಡೆಡ್ ಕಂಪನಿಗಳ ಮಳಿಗೆಗಳಿದ್ದು, ಬೇರೆ ಕಡೆಗಿಂತಲೂ ಅತ್ಯಂತ ದುಬಾರಿ ಎಂದೂ, ಅಲ್ಲಿಯ ಆಸ್ತಿಯ ಬೆಲೆ ನಾವು ಊಹೆ ಮಾಡಲಾರದಷ್ಟು ದುಬಾರಿಯಾಗಿರುತ್ತದೆ ಎಂದು ತಿಳಿಸಿದರು. ಯಾರಾದರೂ ಶಾಪಿಂಗ್ ಮಾಡುವುದಿದ್ದರೆ ಮಾಡಬಹುದು ಎಂದಾಗ ನಾವು ಅತ್ತ ಕಡೆ ತಪ್ಪಿಯೂ ನೋಡಲಿಲ್ಲ. ಆದರೆ ನೋಡಲು ಅದು ನಮ್ಮ ಬೆಂಗಳೂರಿನ ಬ್ರಿಗೇಡ್ ರೋಡ್, ಕಮರ್ಷಿಯಲ್ ಸ್ಟ್ರೀಟ್ ತರಹ. ಆದರೆ ಅಗಲವಾದ ರಸ್ತೆ ಇತ್ತು ಅಷ್ಟೆ.

ಅಂತೂ ಇಂತೂ ಸುಮಾರು ಎರಡು ಗಂಟೆ ನಗರ ಪ್ರದಕ್ಷಿಣೆ ಮಾಡಿ ನಮ್ಮ ಕನಸಿನ ಐಫೆಲ್ ಟವರ್ ಬಳಿ ಬಂದು ಬಸ್ ನಿ೦ತಿತು. ಬಸ್ ಇಳಿದು ತಲೆ ಎತ್ತಿ ನೋಡಿದರೆ, ಅದರ ತುದಿಯೇ ಕಾಣುತ್ತಿಲ್ಲ. 330 ಮೀ ಎತ್ತರ. ಅದರ ಫೋಟೋ ತೆಗೆಯಲು ಹೋದರೆ ಪೂರ್ತಿ ಚಿತ್ರ ತೆಗೆಯಲು ಆಗುತ್ತಿರಲಿಲ್ಲ. ಪೂರ್ತಿ ಚಿತ್ರ ಬೇಕಾದರೆ ತುಂಬಾ ದೂರ ಹೋಗಬೇಕಾಗುತ್ತಿತ್ತು. ಆದರೆ ಬಗ್ಗಿ, ಕೂತು ವಿವಿಧ ಭ೦ಗಿಗಳಲ್ಲಿ ಪ್ರಯತ್ನಿಸಿ ಕಷ್ಟಪಟ್ಟು ಕೆಲವು ಫೋಟೋಗಳನ್ನು ತೆಗೆದು ಕೊ೦ಡೆವು. ಗೈಡ್ ನ ಸೂಚನೆಯಂತೆ ಲಿಫ್ಟ್ ನಲ್ಲಿ ಮೇಲೆ ಹೋಗಲು ಸರತಿ ಸಾಲಿನಲ್ಲಿ ನಿಂತೆವು. ಅಷ್ಟು ಹತ್ತಿರದಿಂದ ನೋಡಲು ಅದು ಒಂದು ಕಾರ್ಖಾನೆ ಯಲ್ಲಿನ ಯಂತ್ರಗಳಂತೆ ಕಾಣುತ್ತಿತ್ತು. ಬರೀ ಕಬ್ಬಿಣದ ತೊಲೆಗಳು. ನಟ್ಟು ಬೋಲ್ಟು. ನಮ್ಮ ಗೈಡ್ ತಿಳಿಸಿದ ಪ್ರಕಾರ ಸುಮಾರು 25 ಲಕ್ಷ ರಿವೆಟ್ ಗಳನ್ನು ಬಳಸಲಾಗಿದೆಯಂತೆ. ನಮ್ಮ ಸರದಿ ಬಂದಾಗ ಹಳೆಯ ದೊಡ್ಡ ಲಿಫ್ಟ್ ನಲ್ಲಿ ಎರಡನೇ ಅಂತಸ್ತಿಗೆ ಹೋಗಿ ಅಲ್ಲಿಂದ ಪ್ಯಾರಿಸ್ ನಗರದ ಅದ್ಭುತ ದೃಶ್ಯವನ್ನು ವೀಕ್ಷಿಸಿದೆವು. ಕೆಳಗೆ ಕಾಣುತ್ತಿದ್ದ ಸೀನ್ ನದಿ ಜಗತ್ಪ್ರಸಿದ್ಧ ಕ್ರೂಸರ್ಗಳು, ಪ್ಯಾರಿಸ್ ನಗರದ ರಸ್ತೆಗಳು, ಕಟ್ಟಡಗಳು, ಸ್ಮಾರಕಗಳು, ಅದ್ಭುತವಾಗಿ ಕಾಣುತ್ತಿತ್ತು.. ಲೆಕ್ಕವಿಲ್ಲದಷ್ಟು ಫೋಟೋಗಳನ್ನು ತೆಗೆದು ಕೆಳಗಿಳಿದೆವು. 1887ರಲ್ಲಿ ಗುಸ್ತಾವೇ ಐಫೆಲ್ ಎನ್ನುವ ಇಂಜಿನಿಯರ್ ಪ್ಯಾರಿಸ್ ನಗರದಲ್ಲಿ ನಡೆಯಲಿದ್ದ ಫ್ರೆಂಚ್ ಕ್ರಾಂತಿಯ ಶತಮಾನೋತ್ಸವದ ಅಂಗವಾಗಿ ನಡೆಯಲಿದ್ದ ಜಾಗತಿಕ ಮೇಳದ ಪ್ರವೇಶ ದ್ವಾರವಾಗಿ ನಿರ್ಮಿಸಲು ಪ್ರಾರಂಭಿಸಿ 1889 ರಲ್ಲಿ ಮುಕ್ತಾಯವಾದಾಗ ಆಗಿನ ಕಾಲಕ್ಕೆ ಅದು ಜಗತ್ತಿನಲ್ಲೇ ಅತ್ಯಂತ ಎತ್ತರದ ರಚನೆಯಾಗಿತ್ತು.

ಸೀನ್ ನದಿಯ ತೀರದಲ್ಲಿರುವ ಈ ರಚನೆ 125 ಮೀಟರ್ ಅಗಲದ ಚಚ್ಚೌಕದ ತಳಹದಿಯ ಮೇಲೆ ನಾಲ್ಕು ಅಂತಸ್ತುಗಳಲ್ಲಿ ಮೆದು ಕಬ್ಬಿಣದಿಂದ ಜಾಲರಿ ರೂಪದಲ್ಲಿ ಕಟ್ಟಿ ಅದು 330 ಮೀಟರ್ ಎತ್ತರಕ್ಕೆ ಹೋದಾಗ ಜಗತ್ತಿನಲ್ಲೇ ಅತ್ಯಂತ ಎತ್ತರದ ರಚನೆಯಾಯಿತು. ಗಗನಚು೦ಬಿ ರಚನೆಗಳನ್ನು ಇಷ್ಟಪಡದ ಫ್ರೆ೦ಚರು ಈ ರೀತಿಯ ರಚನೆಯನ್ನು ಕಟುವಾಗಿ ಟೀಕಿಸಿ ವಿರೋಧಿಸಿದ್ದರು. ಆದರೆ ನಂತರ 10000 ಟನ್ನ 18000 ಕಬ್ಬಿಣದ ತೊಲೆ ಗಳಿ೦ದ 25 ಲಕ್ಷ ಬೆಸುಗೆಗಳನ್ನು ಹೊಂದಿರುವ, ಈ ಆಕೃತಿ ಪ್ಯಾರಿಸ್ ನ ಹೆಮ್ಮೆಯ ಗುರುತಾಗಿ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಆಕರ್ಷಿತವಾದ ಪ್ರವಾಸಿ ತಾಣವಾಗಿದೆ. ಒಟ್ಟು4 ಅ೦ತಸ್ತುಗಳಿದ್ದು ಪ್ರವಾಸಿಗರು ಎರಡನೇ ಅ೦ತಸ್ತಿನ ವರೆಗೆ ಮಾತ್ರ ಹೋಗಬಹುದಾಗಿದೆ. ಮೊದಲನೇ ಅ೦ತಸ್ತಿಗೆ 300 ಮತ್ತು ಎರಡನೇ ಅ೦ತಸ್ತಿಗೆ 300 ಮೆಟ್ಟಿಲುಗಳಿದ್ದು, ಲಿಫ್ಟ್ ಮೂಲಕವೂ ಎರಡನೇ ಅ೦ತಸ್ತಿಗೆ ಹೋಗಲು ಅವಕಾಶವಿದೆ. ಈಗ ಯುನೆಸ್ಕೋ ದ ಪಾರಂಪರಿಕ ತಾಣವಾಗಿರುವ ಐಫೆಲ್ ಟವರ್, ಪ್ರವೇಶ ಶುಲ್ಕ ಹೊಂದಿರುವ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಜನರು ಭೇಟಿ ಕೊಡುವ ಪ್ರವಾಸಿ ತಾಣವಾಗಿದೆ . 1909ರಲ್ಲಿ ಇದನ್ನು ಕೆಡವಿಸುವ ಯೋಜನೆ ಇತ್ತು. ಆದರೆ ಇದನ್ನು ರೇಡಿಯೋ ಟೆಲಿಗ್ರಾಫ್ ಸ್ಟೇಷನ್ ಆಗಿ ಮತ್ತು ಮೊದಲನೇ ಮಹಾಯುದ್ಧದಲ್ಲಿ ರೇಡಿಯೋ ಇಂಟರ್ಸೆಕ್ಷನ್ ಕೇಂದ್ರವಾಗಿ ಉಪಯೋಗಿಸಿಕೊಳ್ಳುವ ಉದ್ದೇಶದಿ೦ದ ಉಳಿಸಿಕೊಳ್ಳಲಾಯಿತು. ನಂತರ ಮಧ್ಯಾಹ್ನದ ಊಟಕ್ಕೆ ಹತ್ತಿರದಲ್ಲಿದ್ದ ಇಂಡಿಯನ್ ರೆಸ್ಟೋರೆಂಟ್ ಗೆ ಹೋದೆವು.

ಊಟದ ನಂತರ ದಿನದ ದ್ವಿತೀಯಾರ್ಧದಲ್ಲಿ ಪ್ಯಾರಿಸ್ ನಗರದ ಮಧ್ಯಭಾಗದಲ್ಲಿ ಹರಿಯುತ್ತಿರುವ ಸೀನ್ ನದಿಯಲ್ಲಿ ಕ್ರುಯಿಸ್ ಪ್ರಯಾಣಮಾಡಿದೆವು. ಸುಮಾರು ಒಂದು ಗಂಟೆ ಜಗತ್ಪ್ರಸಿದ್ಧ ರಮಣೀಯ ಕ್ರುಸರ್ಗಳಲ್ಲಿ, ಸೀನ್ ನದಿಯಲ್ಲಿ ಪೂರ್ವಾಭಿಮುಖವಾಗಿ ಸುಮಾರು ಅರ್ಧ ಗಂಟೆ ಹೋಗಿ, ನಂತರ ವಾಪಸು ಅರ್ಧಗಂಟೆ ನದಿಯಲ್ಲಿ ಪ್ರಯಾಣಿಸಿ, ಆನ೦ದಿಸಿದೆವು. ಈ ನಾವೆಯ ಪ್ರಯಾಣದ ಸಮಯದಲ್ಲಿ ಐಫೆಲ್ ಟವರ್ ನ ಪೂರ್ತಿ ಆಕೃತಿ ಗೋಚರವಾಗುತ್ತಿತ್ತು. ಇಲ್ಲಿಂದ ತೆಗೆದ ಫೋಟೋಗಳಲ್ಲಿ ಐಫೆಲ್ ಟವರ್ ಪೂರ್ತಿ ಕಾಣುತ್ತಿತ್ತು. ಸಾಕಷ್ಟು ಫೋಟೊಗಳನ್ನು ತೆಗೆದು, (ಅದರ ತುದಿಯ ಮೇಲೆ ಬೆರಳಿಟ್ಟ೦ತೆ), ಪಕ್ಕದಲ್ಲೇ ಕಾಣುತ್ತಿದ್ದ ಅನೇಕ ಜಗತ್ಪ್ರಸಿದ್ದ ಸ್ಮಾರಕಗಳಾದ ನಾಟ್ರಾ ಡಾಮ್, ಐಫೆಲ್ ಟವರ್, ಲಾವ್ರೆ ಆರ್ಸೆ ಮ್ಯುಸಿಯ೦, ಇವುಗಳನ್ನೆಲ್ಲಾ ನೋಡುತ್ತಾ ಕ್ಯಾಮೆರಾದಲ್ಲಿ ಸೆರೆ ಹಿಡಿದೆವು. , ಈ ನಾವೆಯ ಪ್ರಯಾಣದ ದೃಶ್ಯಗಳು ಅವಿಸ್ಮರಣೀಯ. ಅಲ್ಲಿ೦ದ ಲಾವ್ರೆ ಗೆ ಹೋದೆವು. ಇದು ಒ೦ದು ಅ೦ತರಾಷ್ಟ್ರೀಯ ಕಲಾ ಮ೦ದಿರ. ಅನೇಕ ಜಗತ್ಪ್ರಸಿದ್ದ ಕಲಾವಿದರ ಕಲಾ ಕೃತಿಗಳ ಪ್ರದರ್ಶನ ಇಲ್ಲಿ ಇದೆ. ಸು೦ದರ ಕ್ಯಾಥೆಡ್ರಲ್ ಗೆ ಭೇಟಿ ಕೊಟ್ಟು ಪ್ಯಾರಿಸ್ ನಗರ ಪ್ರವಾಸ ಮುಗಿಸಿದೆವು.

ನಂತರ ನಮ್ಮ ಪ್ರಯಾಣ ರಾತ್ರಿ ಊಟದ ಹೋಟೆಲ್ ಕಡೆಗೆ. ಸುಮಾರು ಒಂದು ಗಂಟೆ ಪ್ರಯಾಣದ ನಂತರ ಪ್ಯಾರಿಸ್ ನಗರದ ಹೊರವಲಯದಲ್ಲಿದ್ದ ಇಂಡಿಯನ್ ರೆಸ್ಟೋರೆಂಟ್ ನಲ್ಲಿ ಊಟ ಮಾಡಿದಾಗ ಸಮಯ ಸ೦ಜೆ 7: 30 ಆದರೂ ನಮ್ಮಲ್ಲಿಯ 5.30 ಗ೦ಟೆಯಲ್ಲಿದ್ದಷ್ಟು ಬೆಳಕಿತ್ತು. ಹೊಟ್ಟೆ ಹಸಿಯಲಿ ಬಿಡಲಿ, ಹೊತ್ತೊತ್ತಿಗೆ ಊಟ ಮಾಡ ಬೇಕಾಗುತ್ತಿತ್ತು ಏಕೆ೦ದರೆ ಊಟದ ಹೋಟೆಲ್ ಬೇರೆ, ವಾಸ್ತವ್ಯದ ಹೋಟೆಲ್ಬೇರೆ. ದಿನ ಪೂರ್ತಿ ತಿರುಗಾಟದಿಂದಾಗಿ ಹೋಟೆಲ್ ಗೆ ಹೋದ ತಕ್ಷಣ ನಿದ್ದೆ ಅನಾಯಾಸವಾಗಿ ಬ೦ದುಬಿಡುತ್ತಿತ್ತು. ಆದರೆ ನಮ್ಮ ಗುಂಪಿನ ಕೆಲವರು ಮತ್ತೆ ಟ್ಯಾಕ್ಸಿ ಮಾಡಿಕೊಂಡು ಪ್ಯಾರೀಸ್ ನಗರಕ್ಕೆ ಹೋಗಿ, ಐಫೆಲ್ ಟವರ್ ಬಳಿಯ ಬೆಳಕು ಧ್ವನಿ ಪ್ರದರ್ಶನ ನೋಡಿಕೊಂಡು, ಮೋಜು ಮಸ್ತಿ ಮಾಡಿಕೊಂಡು, ತಡ ರಾತ್ರಿ ಬಂದರು. ನಮಗೆ ಧೈರ್ಯ ಸಾಲದೆ ಮತ್ತು ವಿಶೇಷ ಆಸಕ್ತಿ ಇಲ್ಲದಿದ್ದರಿಂದ ನಾವೇನೂ ಈ ಸಾಹಸಕ್ಕೆ ಹೋಗಲಿಲ್ಲ. ಟ್ಯಾಕ್ಸಿಯಲ್ಲಿ ಹೋಗುವಾಗ 30 ಯೂರೋ ವಾಪಸ್ ಬರುವಾಗ 90 ಯೂರೋ.

(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44517

ಟಿ.ವಿ.ಬಿ.ರಾಜನ್ , ಬೆಂಗಳೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *