ಲಹರಿ

ಮೊದಲ ಟಿ.ವಿ. ತಂದ ಸಂಭ್ರಮ

Share Button

ಯಾವುದೇ ಒಂದು ವಸ್ತುವಾಗಲೀ ಅಥವಾ ಉಪಕರಣವೇ ಆಗಲಿ, ಮೊದಲನೇ ಬಾರಿ ಖರೀದಿ ಮಾಡುವಾಗ ಉಂಟಾಗುವ ಸಂತೋಷ, ಆನಂದ, ಖುಷಿ ಹಾಗೂ ಉತ್ಸುಕತೆಗೆ ವಯಸ್ಸಿನ ಅಡ್ಡಿ ಇರುವುದಿಲ್ಲ. ಕಿರಿಯರು, ಯುವಕರು ಮತ್ತು ದೊಡ್ಡವರೇ ಇರಲಿ, ಆ ಅನುಭವವೇ ವಿಭಿನ್ನ ಹಾಗೂ ವಿಶಿಷ್ಟ. ಇವುಗಳನ್ನು ಮತ್ತೊಮ್ಮೆ ಅನುಭವಿಸಲು ಸಾಧ್ಯವಿಲ್ಲ. ಆ ನೆನೆಪುಗಳ ಮೆಲುಕು ಅತಿ ಮಧುರ. ಪ್ರಥಮ ಬಾರಿ ನಮ್ಮ ಮನೆಗೆ ಟಿ.ವಿ. ಬಂದಾಗ ಆದ ಸಡಗರ, ಕುತೂಹಲ, ಉಲ್ಲಾಸಭರಿತ ಆ ದಿನಗಳ ನೆನಪುಗಳು ಇನ್ನೂ ಮಾಸಿಲ್ಲ.

ನನಗೆ ಚೆನ್ನಾಗಿ ನೆನಪಿದೆ. 1984ರ ಸಮಯ. ನಾನು ಸ್ನಾತಕೋತ್ತರ ಪದವಿಯಲ್ಲಿ ಕಲಿಯುತ್ತಿದ್ದೆ. ಅಂದು ಅಕ್ಟೋಬರ್ 31. ಬುಧವಾರ ಮಧ್ಯಾಹ್ನ 12.30 ಗಂಟೆ ಆಗಿರಬೇಕು. ಇಡೀ ದೇಶವೇ ಬೆಚ್ಚಿ ಬೀಳುವ ಬರ ಸಿಡಿಲಿನಂತಹ ಸುದ್ದಿ ಬಂದೆರಗಿತ್ತು. ನಮ್ಮ ದೇಶದ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರನ್ನು ಹತ್ಯೆಗೈಯಲಾಗಿತ್ತು. ಎಲ್ಲೆಲ್ಲಿಯೂ ಅಶಾಂತಿ, ಹಿಂಸಾಚಾರ, ಭಯ, ದು:ಖದ ವಾತಾವರಣ. ಕೂಡಲೇ ನಮಗೆಲ್ಲಾ ರಜೆ ಘೋಷಿಸಿ ಮನೆಗೆ ಕಳುಹಿಸಲಾಯಿತು. ಭಾರತದಾದ್ಯಂತ ಬಂದ್, ಕರ್ಫ್ಯೂ, ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ನಾವೆಲ್ಲರೂ ಮಂಗಳೂರಿಗೆ ಕಾಲ್ನಡಿಗೆಯಲ್ಲಿ ತೆರಳಿದೆವು. ಮನೆ ತಲುಪುವಾಗ ಸಾಯಂಕಾಲವಾಗಿತ್ತು. ಅಂದು ನನ್ನ ಇಬ್ಬರು ಸಹಪಾಠಿಗಳು ನಮ್ಮ ಮನೆಯಲ್ಲೇ ಉಳಕೊಂಡರು. ಮರುದಿನ ಬಸ್ ಸಂಚಾರ ಆರಂಭವಾದಾಗ ಬಳಿಕವೇ ಅವರು ತಮ್ಮ ಮನೆಗೆ ಹೊರಟಿದ್ದರು. ಅಂದಿನ ಆಂತಕಭರಿತ ದಿನಗಳ ನೆನಪುಗಳಂತೂ ಖಂಡಿತಾ ಮರೆಯಲು ಅಸಾಧ್ಯ.

ಇಂದಿರಾ ಗಾಂಧಿಯವರ ಅಂತ್ಯಕ್ರಿಯೆಯನ್ನು ದೂರದರ್ಶನದಲ್ಲಿ ನೇರ ಪ್ರಸಾರ ಮಾಡುತ್ತಾರೆ ಎಂಬ ಮಾತು ಎಲ್ಲೆಡೆ ಕೇಳಿ ಬಂತು. ಆ ಕಾಲದಲ್ಲಿ ದೂರದರ್ಶನ ಎಂಬುದು ಐಶಾರಾಮಿ ವಸ್ತುವಾಗಿದ್ದು, ಸಾಮಾನ್ಯ ಜನರ ಕನಸಿನ ಮಾತಾಗಿತ್ತು. ಅನುಕೂಲಸ್ಥರ ಮನೆಯಲ್ಲಿ ಮಾತ್ರವೇ ಇರುತ್ತಿತ್ತು. ನನಗೂ ಮನೆಯಲ್ಲಿ ಟಿ.ವಿ. ಇರಬೇಕೆಂದು ತುಂಬಾ ಆಸೆಯಾಗುತ್ತಿತ್ತು. ರಜೆ ಇರುವಾಗ ನಾವೆಲ್ಲರೂ ಸಾಯಂಕಾಲ ಪಕ್ಕದ ಮನೆಗೆ ಟಿವಿ. ನೋಡಲು ಹೋಗುತ್ತಿದ್ದೆವು. ತಂದೆಯವರಿಗೆ ನಾವು ಬೇರೆಯವರ ಮನೆಗೆ ಹೋಗುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಟಿ.ವಿ. ತೆಗೆದುಕೊಳ್ಳುವ ಎಂದೇ ಹೇಳುತ್ತಾ ಮುಂದೂಡುತ್ತಿದ್ದರು. ಕೊನೆಗೆ ಆ ದಿನವೂ ಬಂದೇ ಬಿಟ್ಟಿತ್ತು. ಇಂದಿರಾ ಗಾಂಧಿಯವರ ಅಂತ್ಯಕ್ರಿಯೆಯನ್ನು ದೂರದರ್ಶನದ ಮೂಲಕ ನೇರ ಪ್ರಸಾರ ಮಾಡುತ್ತಾರೆ ಎಂಬ ಮಾಹಿತಿ ದೊರಕಿತ್ತು. ನಮಗೂ ಈ ಕಾರ್ಯಕ್ರಮವನ್ನು ನೋಡಬೇಕೆಂಬ ಬಯಕೆಯನ್ನು ತಂದೆಯ ಬಳಿ ಹೇಳಿದಾಗ, ಕೂಡಲೇ ಒಪ್ಪಿಕೊಂಡರು. ಟೆಕ್ಸ್ಲಾ ಕಂಪೆನಿಯ ಒಂದು ಬ್ಲಾಕ್ ಆಂಡ್ ವೈಟ್ ಟಿ.ವಿ.ಯನ್ನು ನವೆಂಬರ್ 02ನೇ ತಾರೀಕಿನಂದು ಖರೀದಿಸಿದರು. ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಎಲ್ಲಾ ಕಡೆಯಲ್ಲೂ ಸೂತಕದ ಛಾಯೆ ಇದ್ದರೂ ನಾವು ಮಕ್ಕಳು ಟಿ.ವಿ. ಬಂದ ಸಂಭ್ರಮದಲ್ಲಿದ್ದೆವು. ಮರುದಿನ ಅಂತ್ಯಕ್ರಿಯೆಯ ನೇರ ಪ್ರಸಾರದ ದೃಶ್ಯಾವಳಿಗಳನ್ನು ನಾವು ತದೇಕ ಚಿತ್ತರಾಗಿ ವೀಕ್ಷಿಸಿದೆವು. ಅಂದು ಸುತ್ತಮುತ್ತಲಿನ ಮನೆಯವರೆಲ್ಲಾ ಟಿ.ವಿಯಲ್ಲಿ ಪ್ರಸಾರವಾಗುವ ಅಂತ್ಯಕ್ರಿಯೆಯನ್ನು ನೋಡಲು ಆಗಮಿಸಿದ್ದರು. ಎಲ್ಲರ ಕಣ್ಣುಗಳನ್ನು ತೇವಗೊಳಿಸಿದ ಆ ಕ್ಷಣಗಳು ಹೃದಯಸ್ಪರ್ಶಿಯಾಗಿತ್ತು. ಈ ಮಧುರ ನೆನಪುಗಳು ಶಾಶ್ವತವಾಗಿ ಉಳಿದಿವೆ.

ಅಂದಿನಿಂದ ನಮಗೆ ದಿನಾಲೂ ಸಾಯಂಕಾಲ ಟಿ.ವಿ. ಕಾರ್ಯಕ್ರಮವನ್ನು ವೀಕ್ಷಿಸುವುದು ಅತ್ಯಂತ ಖುಷಿಯ ವಿಷಯವಾಗಿತ್ತು. ವಾರ್ತೆಗಳಿಂದ ಹಿಡಿದು ಚಿತ್ರಹಾರ್, ಸೀರಿಯಲ್, ಕೃಷಿ ದರ್ಶನ್, ಕಾಣೆಯಾದವರ ವಿವರ, ವಿವಿಧ ಭಾಷೆಗಳ ಚಲನ ಚಿತ್ರ, ನೃತ್ಯ ರೂಪಕ, ಸಾಂಸ್ಕೃತಿಕ, ಸಂಗೀತ, ಹೀಗೆ ಎಲ್ಲಾ ಕಾರ್ಯಕ್ರಮಗಳನ್ನು ನೋಡಿ ಆನಂದಿಸುತ್ತಿದ್ದೆವು. ಶನಿವಾರ, ಆದಿತ್ಯವಾರ ಮತ್ತು ರಜೆಯ ದಿನಗಳಲ್ಲಂತೂ ನಮ್ಮ ಮನೆ ಜನರಿಂದ ತುಂಬಿ ತುಳುಕುತ್ತಿತ್ತು. ಅಮ್ಮ ತುಂಬಾ ಸಂತೋಷದಿಂದ ಎಲ್ಲರನ್ನೂ ಸ್ವಾಗತಿಸುತ್ತಿದ್ದರು. ನೆರೆಹೊರೆಯವರೆಲ್ಲರೂ ಬಂದು ಸೇರಿದಾಗ ಒಮ್ಮೊಮ್ಮೆ ನನಗೆ ಕಿರಿಕಿರಿಯಾಗುತ್ತಿತ್ತು. ಹಾಲ್‌ನಿಂದ ಒಳಗೆ ಹೊರಗೆ ನಡೆದಾಡಲೂ ಕಷ್ಟವಾಗುತ್ತಿತ್ತು. ಇವರು ದಿನಾಲೂ ಯಾಕೆ ಬರುವುದು ಎಂದು ಅನಿಸುತ್ತಿತ್ತು. ನಾನೂ ಮೊದಲು ಟಿ.ವಿ. ನೋಡಲು ಬೇರೆಯವರ ಮನೆಗೆ ಹೋಗುತ್ತಿದ್ದೆನಲ್ಲಾ ಎಂಬುದನ್ನು ಮರೆತ್ತಿದ್ದೆ.

ಕಾಲ ಕ್ರಮೇಣ ದೂರದರ್ಶನ ಎಂಬುದು ಸಾಮಾನ್ಯ ವಸ್ತುವಾಗಿ ಎಲ್ಲರ ಮನೆಯಲ್ಲೂ ಕಂಡು ಬಂತು. ಈಗಂತೂ ದೂರದರ್ಶನವು ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಾಡಾಗಿದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಸ್ಮಾರ್ಟ್ ಟಿ.ವಿ. ಇರುತ್ತದೆ. ಹಿಂದಿನ ಕಾಲದಲ್ಲಿ ದೂರದರ್ಶನವು ಕೇವಲ ಮನರಂಜನೆಯ ಸಾಧನವಾಗದೆ, ಜನರನ್ನೂ ಒಟ್ಟಾಗಿ ಸೇರಿಸುವ ಒಂದು ಮಾಧ್ಯಮ ಆಗಿತ್ತು. ಇಡೀ ಕುಟುಂಬ ಒಟ್ಟಾಗಿ ಕುಳಿತು ಟಿ.ವಿ. ನೋಡುವ ಸಂಪ್ರದಾಯವಿತ್ತು. ಇಂದು ಹಾಗಲ್ಲ. ವೈಯಕ್ತಿಕ ವೀಕ್ಷಣೆಯನ್ನು ಇಷ್ಟ ಪಡುವವರೇ ಹೆಚ್ಚು. ಮನೆಯ ಪ್ರತೀ ಸದಸ್ಯರಿಗೆ ಪ್ರತ್ಯೇಕ ಟಿ.ವಿ.ಯ ವ್ಯವಸ್ಥೆ ಇರುತ್ತದೆ. ತಮ್ಮ ತಮ್ಮ ಕೊಠಡಿಗಳಲ್ಲಿ ತಮಗೆ ಬೇಕಾದ ಕಾರ್ಯಕ್ರಮವನ್ನು ನೋಡುತ್ತಾ ಕಾಲ ಕಳೆಯುತ್ತಾರೆ. ಹಿಂದಿನ ಸಾಮಾಜಿಕ ಒಗ್ಗೂಡುವಿಕೆ ಈಗ ಇಲ್ಲ. ಬದಲಾವಣೆ ಅನಿವಾರ್ಯ. ಮೊದಲ ದೂರದರ್ಶನವು ಕಪುö್ಪ, ಬಿಳುಪಿನದಾದರೂ ನಮ್ಮ ಬದುಕಿಗೆ ರಂಗು ರಂಗಿನ ಬಣ್ಣಗಳನ್ನು ತುಂಬಿಸಿತ್ತು. ಅದೊಂದು ಮಾಯಾ ಕಿಟಕಿಯಾಗಿತ್ತು. ಹಳೆಯ ದಿನಗಳ ಸಂಭ್ರಮವನ್ನು ಎಷ್ಟೇ ನೆನಪಿಸಿದರೂ ಮತ್ತೆ ಬರಲು ಸಾಧ್ಯವಿಲ್ಲ. ಒಟ್ಟಿನಲ್ಲಿ ನಮ್ಮ ಮನೆಗೆ ಮೊತ್ತ ಮೊದಲ ಬಾರಿ ಟಿ.ವಿ. ಬಂದಾಗ ಉಂಟಾದ ಸಂಭ್ರಮ, ನಾವು ಮನೆಯವರೆಲ್ಲಾ ಒಟ್ಟಾಗಿ ಕುಳಿತು ದೂರದರ್ಶನದ ಕಾರ್ಯಕ್ರಮಗಳನ್ನು ಆನಂದಿಸಿದ ದಿನಗಳ ಮಧುರ ನೆನಪುಗಳು, ವಿಶಿಷ್ಟ ಅನುಭವಗಳು ಇಂದಿಗೂ ನನಗೆ ಮುದ ನೀಡುತ್ತಿವೆ.

-ಶೈಲಾರಾಣಿ. ಬಿ. ಮಂಗಳೂರು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *