ಲಹರಿ

ಓ… ವಾಸನೆ?

Share Button

ನಾಸಿಕವಿರುವುದೇ ಉಸಿರಾಡಲು, ಜೊತೆಗೆ ವಾಸನೆ ಗ್ರಹಿಸುವ ಕೆಲಸವೂ ಅದರದ್ದೇ. ವಾಸನೆಯಲ್ಲಿ ವಿಧಗಳೆಷ್ಟಿರಬಹುದೆಂದು ಯೋಚಿಸಿದರೆ ಲೆಕ್ಕ ಸಿಗುವುದು ತುಸು ಕಷ್ಟವೇ. ಒಂದು ರೀತಿಯ ಆಹ್ಲಾದಕರ, ಮನಸ್ಸಿಗೆ ಹಿತವೆನಿಸುವಂತಹ ವಾಸನೆಗಳನ್ನು ಸುವಾಸನೆ ಅಥವಾ ಸುಗಂಧ ಎನ್ನಬಹುದು. ಸುವಾಸನೆ- ಮತ್ತೆ ಮತ್ತೆ ಆ ವಾಸನೆಯನ್ನು ಆಘ್ರಾಣಿಸಬೇಕೆನ್ನುವ ಹಂಬಲ ಮೂಡಿಸುತ್ತದೆ. ಮೂಗನ್ನು ಮುಚ್ಚಿಕೊಳ್ಳುವಂತೆ ಮಾಡುವ ವಾಸನೆಗಳನ್ನು ದುರ್ಗಂಧ, ದುರ್ನಾತ ಅಥವಾ ದುರ್ವಾಸನೆ ಎನ್ನಬಹುದು. ಇಲ್ಲೊಂದು ವಿಷಯ ತುಂಬಾ ಸೋಜಿಗವೆನಿಸುತ್ತದೆ. ವಾಸನೆ ಅಥವಾ ಪರಿಮಳ ಒಂದೇ ಶಬ್ದಗಳಾದರೂ, ವಾಸನೆ ಎಂದ ಕೂಡಲೇ ಮನಸ್ಸಿನ ಮುಂದೆ ಕೆಟ್ಟ ವಾಸನೆಯ ಕಲ್ಪನೆ ಬರುತ್ತದೆ. ಅದೇ ಪರಿಮಳ ಎಂದ ಕೂಡಲೇ ಸುವಾಸನೆಯ ಕಲ್ಪನೆ ಬರುತ್ತದೆ. ನನಗಂತೂ ಹಾಗೆ. ಸುವಾಸನೆ ಮತ್ತು ದುರ್ವಾಸನೆ ಎಂದು ವರ್ಗೀಕರಣವನ್ನು ಮಾಡಿದರೂ ಕೆಲವೊಮ್ಮೆ ಸುವಾಸನೆ ಅತಿಯಾದಾಗ ಮೂಗು ಮುಚ್ಚಿಕೊಳ್ಳಬೇಕಾದ ಸಂದರ್ಭವೂ ಇಲ್ಲವೆಂದಲ್ಲ. ಕೆಲವೊಂದು ದುರ್ವಾಸನೆಯನ್ನು ಮೂಗು ಮುಚ್ಚದೆ ಸಹಿಸಿಕೊಳ್ಳಬಹುದು.

ಪ್ರಾಯೋಗಿಕ ಪರೀಕ್ಷೆಗಳ ಬಾಹ್ಯ ಪರೀಕ್ಷಕಳಾಗಿ ಹತ್ತಿರದ ಕಾಲೇಜಿಗೆ ಹೋಗಿದ್ದೆ. ಅಲ್ಲಿ, ವಿದ್ಯಾರ್ಥಿನಿಯೊಬ್ಬಳು ಹಾಕಿದ ಸೆಂಟಿನ ಘಮವನ್ನು ತಾಳಿಕೊಳ್ಳಲಾಗದೆ ವಿಪರೀತ ತಲೆನೋವು ಬಂದಿತ್ತು. ತಲೆನೋವಿಗೆ ಮಾತ್ರ ಸೀಮಿತವಾಗದೆ ಮೈಕೈ ನೋವು ಹಾಗೂ ಜ್ವರದಿಂದ ಬಳಲಿದ್ದೆ. “ಪರೀಕ್ಷೆಗೆ ಬರುವಾಗ ಸೆಂಟು ಬಳಸಬೇಕಿತ್ತೇ?” ಎಂದು ಅವಳ ಬಳಿ ಕೇಳಿದ್ದೆ. ಆದರೆ ಖಂಡಿತವಾಗಿಯೂ ನಾನು ಆ ಪ್ರಶ್ನೆಯನ್ನು ಕೇಳಬಾರದಾಗಿತ್ತು ಅಂತ ಮತ್ತೆ ಅನ್ನಿಸಿತು. ಕೆಲವೊಮ್ಮೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಸಹಪ್ರಯಾಣಿಕರ ಸೆಂಟಿನ ವಾಸನೆ ಸಹ ಕಿರಿಕಿರಿ ಅನಿಸುವುದುಂಟು. ಸೆಂಟು ಬಳಸುವಾಗ ಕೆಲವರು ತೀಕ್ಷ್ಣ, ಗಾಢ ಪರಿಮಳವನ್ನು ಇಷ್ಟಪಡುತ್ತಾರೆ. ಮೂಗಿನ ಘ್ರಾಣಶಕ್ತಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಕೆಲವು ಸ್ತ್ರೀಯರಿಗೆ ಮಲ್ಲಿಗೆ/ಜಾಜಿ ಮಲ್ಲಿಗೆ ಮುಡಿದರೆ ತಲೆನೋವು ಬಂದರೆ, ಇನ್ನು ಕೆಲವರಿಗೆ ಸಂಪಿಗೆಯ ಪರಿಮಳದಿಂದ ತಲೆನೋವು ಬರುವುದೆಂದು ಕೇಳಿದ್ದೇನೆ. ಹೂವು ಮುಡಿಯಲು ಇಷ್ಟಪಡದಿರುವವರಿಗೆ ಈ ಸಮಸ್ಯೆಯೇ ಇಲ್ಲ ನೋಡಿ!

ಯಾವುದೇ ವಯೋಮಾನದ ಸ್ತ್ರೀ ಪುರುಷರು ಇರಬಹುದು- ಶೃಂಗಾರ ಪ್ರಸಾಧನಗಳನ್ನು ಬಳಸದವರಿಲ್ಲ. ಕಡೇ ಪಕ್ಷ ಸ್ನಾನದ ಸಾಬೂನನ್ನಾದರೂ. ಮುಖಕ್ಕೆ ಹಚ್ಚುವ ಕ್ರೀಮ್, ಪೌಡರ್, ತಲೆಗೂದಲಿಗೆ ಬಳಸುವ ಶಾಂಪೂ, ಸ್ನಾನದ ಸಾಬೂನು, ಮೈಕಾಂತಿ ಹೆಚ್ಚಿಸುವ ಸೌಂದರ್ಯ ಸಾಧನಗಳು, ತುಟಿಬಣ್ಣ, ಮೈಗೆ ಅಥವಾ ಬಟ್ಟೆಯ ಮೇಲೆ ಹಾಕುವಂತ ಸೆಂಟು/ಅತ್ತರು, ,… ಹೀಗೆ ಎಲ್ಲದರ ಪರಿಮಳ ಹಿತವಾಗಿರಬೇಕೆಂದು ಬಯಸುವರು. ಒಬ್ಬೊಬ್ಬರದು ಒಂದೊಂಡು ಬ್ರ್ಯಾಂಡ್! ಕೆಲವರು ಒಂದೇ ಬ್ರ್ಯಾಂಡಿಗೆ ಸೀಮಿತವಾಗಿದ್ದರೆ, ಇನ್ನು ಕೆಲವರು ಹಲವಾರು ಬ್ರ್ಯಾಂಡುಗಳ ಉತ್ಪನ್ನಗಳನ್ನು ಬಳಸುತ್ತಾರೆ.

ವಾಸನೆಯ ಬಗ್ಗೆ ಚಿಂತನೆ ಮಾಡಿದಾಗ ಮನದೊಳಗೆ ಮೂಡಿದ ವಿಚಾರಗಳು ಹಲವು. ಅವೆಷ್ಟು ವಾಸನೆಗಳ ಗುರುತು ನಮಗಿರಬಹುದು ಅನ್ನುವ ಪ್ರಶ್ನೆಗೆ ಉತ್ತರ ಬೃಹದಾಕಾರವಾಗಿ ಬೆಳೆಯುತ್ತಾ ಹೋಯಿತು. ಪ್ರಕೃತಿಯಲ್ಲಿರುವ ವಿಧವಿಧದ ಸಸ್ಯಸಂಕುಲಗಳು,ಸಸ್ಯಗಳ ಎಲೆಗಳು, ಹೂವುಗಳು, ಹಣ್ಣುಗಳು,ದವಸಧಾನ್ಯಗಳು, ತರಕಾರಿಗಳು, ಬೀಜಗಳು, ಬೇರುಗಳು,… ಒಂದೊಂದಕ್ಕೂ ಬೇರೆ ಬೇರೆ ವಾಸನೆ. ಕ್ರಿಮಿ ಕೀಟಗಳು, ಪ್ರಾಣಿಗಳು, ಸರೀಸೃಪಗಳು, ತಿಂಡಿ ತಿನಸುಗಳು, ಕರಿದ/ಬೇಯಿಸಿದ/ಹುರಿದ/ ಸಸ್ಯಾಹಾರಿ ಯಾ ಮಾಂಸಾಹಾರಿ ಆಹಾರ ಪದಾರ್ಥಗಳು, ವಿವಿಧ ಪಾನೀಯಗಳು, ಅಮಲು ಪದಾರ್ಥಗಳು, ದೇಹದ ವಿವಿಧ ಭಾಗಗಳಿಂದ ಒಸರುವ ಸ್ರಾವಗಳು, ಕೀವು, ಮಲಮೂತ್ರಾದಿಗಳು, ಬೆವರು, ಅಪಾನವಾಯು, ಕೊಳೆತ ವಸ್ತುಗಳು, ಸ್ವಾಭಾವಿಕ/ಕೃತಕ ರಾಸಾಯನಿಕಗಳು, ….. ಪಟ್ಟಿ ಮಾಡಿ ಮುಗಿಯದಷ್ಟು. ವಾಸನೆಯನ್ನು ನಮ್ಮ ಮೂಗು ಗ್ರಹಿಸಿ ಅದನ್ನು ಮೆದುಳಿನ ಕೋಶಗಳಿಗೆ ರವಾನಿಸುವ ಪ್ರಕ್ರಿಯೆ ನಮಗರಿವಿಲ್ಲದೆ ನಡೆಯುತ್ತದೆ. ಯಾವುದರ ವಾಸನೆ ಅನ್ನುವುದು ಗೊತ್ತಿದ್ದರೆ, ಆ ಮಾಹಿತಿಯೂ ಕೂಡಾ ನೆನಪಿನ ಕೋಶಗಳಲ್ಲಿ ದಾಖಲಾಗಿರುತ್ತದೆ.

ನೆನಪಿನ ಕೋಶಗಳಲ್ಲಿ ಅವಿತು ಕುಳಿತಿರುವ ವಾಸನೆಗಳ ಮಾಹಿತಿಯಿಂದಾಗಿ, ಯಾವುದೇ ವಾಸನೆಯನ್ನು ಗ್ರಹಿಸಿದಾಗ ಆ ವಾಸನೆಯನ್ನು ಗುರುತು ಹಿಡಿಯಲು ಸಾಧ್ಯವಾಗುತ್ತದೆ. ಒಗ್ಗರಣೆಯ ಘಮದಲ್ಲಿ ಬೆಳ್ಳುಳ್ಳಿಯಿದೆಯೇ ಗೊತ್ತಾಗುತ್ತದೆ. ಇಂಗಿನ ಒಗ್ಗರಣೆ ಮೂಗರಳಿಸುತ್ತದೆ. ಮೆಣಸು ಹುರಿದಾಗ ಬರುವ ಘಾಟು ಸೀನು ತರಿಸುತ್ತದೆ. ಮೊದಲ ಮಳೆ ಬದಾಗ ಮಣ್ಣಿನ ಪರಿಮಳ ಹಾಯ್ ಅನಿಸುತ್ತದೆ. ಭತ್ತ ಬೇಯುವ ಪರಿಮಳ ಆಹ್ಲಾದತೆಯನ್ನು ತುಂಬುತ್ತದೆ. ಒಗೆದ ಬಟ್ಟೆಯೇ/ಒಗೆಯದ ಬಟ್ಟೆಯೇ ಅನ್ನುವುದನ್ನು ಬಟ್ಟೆಯ ವಾಸನೆ ಖಚಿತಪಡಿಸುತ್ತದೆ. ಸಾಬೂನಿನ ಬದಲು ಅಂಟುವಾಳದ ಕಾಯಿ ಬಳಸಿ ಒಗೆದ ಬಟ್ಟೆಗಳನ್ನು ಸೂರ್ಯನ ಬೆಳಕಿನಲ್ಲಿ ಒಣಗಿಸಿದಾಗ, ಆ ಬಟ್ಟೆಗಳ ಪರಿಮಳ… ಆಹಾ…ಅನುಭವಿಸಿದವರಿಗೆ ಮಾತ್ರ ಗೊತ್ತು. “ಒಳ್ಳೆ ಘಮಗುಡುತಿಯಲ್ಲೇ ಸೀಗೆಯೇ- ನಿನ್ನ ವಾಸನೇ ಹರಡಿರಲಿ ಹೀಗೆಯೇ” ಅನ್ನುವ ಹಾಡಿನ ಸಾಲುಗಳು ಕೂಡಾ ಉತ್ಪ್ರೇಕ್ಷೆ ಅನ್ನಿಸುವುದಿಲ್ಲ. ಏಲಕ್ಕಿ , ಲವಂಗ, ಜಾಯಿಕಾಯಿ, ಪತ್ರೆ, ದಾಲ್ಚಿನ್ನಿ,…ಇವುಗಳ ಪರಿಮಳ ಹಿತವಾಗುತ್ತದೆ. ವಿವಿಧ ಹೂವುಗಳ ಪರಿಮಳ ಆಪ್ಯಾಯಮಾನವಾಗುತ್ತದೆ. ವಿವಿಧ ಆಹಾರಪದಾರ್ಥಗಳ, ಹಸಿ/ಬೇಯಿಸಿದ ತರಕಾರಿಗಳ, ಸಿಹಿ ತಿಂಡಿಗಳ, ಬೇಯಿಸಿದ/ಕರಿದ ತಿಂಡಿಗಳ ಪರಿಮಳ ಗೊತ್ತಾಗುತ್ತದೆ. ಹಳಸಿದಾಗ/ಕೊಳೆತಾಗ/ಕರಟಿದಾಗ ಬದಲಾಗುವ ವಾಸನೆಯ ಮಾಹಿತಿಯೂ ನೆನಪಿನ ಕೋಶಗಳಲ್ಲಿ ದಾಖಲಾಗಿರುತ್ತದೆ. ಮೆದುಳಿನ ಕೋಶಗಳಲ್ಲಿ ಗಟ್ಟಿ ಕುಳಿತಿರುವ ವಾಸನೆಗಳ ಮಾಹಿತಿ ಎಷ್ಟಿದೆ ಅನ್ನುವುದನ್ನು ಅವಲಂಬಿಸಿ ಯಾವುದೇ ವಾಸನೆಯಾದರೂ ಆ ವಾಸನೆ ಎಲ್ಲಿಂದ ಬರುತ್ತಿದೆ, ವಾಸನೆಯ ಮೂಲ ಯಾವುದು, ಹೂವಿನದ್ದೇ, ಹಣ್ಣಿನದ್ದೇ, ಕರಟಿದ್ದೇ, ಯಾವ ಹೂವು, ಯಾವ ಹಣ್ಣು,….. ಅನ್ನುವುದನ್ನು ತಿಳಿಯಲು ಸಾಧ್ಯವಾಗುತ್ತದೆ.
ಹ್ಞಾ! ಇನ್ನೊಂದು ವಿಷಯ- ವಾಸನೆಗೂ ರುಚಿಗೂ ನಿಕಟ ಸಂಬಂಧವಿದೆ. ವಾಸನೆಯನ್ನು ಮೂಗು ಗ್ರಹಿಸಿದರೆ ಮಾತ್ರ, ನಾಲಿಗೆ ರುಚಿಯನ್ನು ಸಮರ್ಥವಾಗಿ ಗ್ರಹಿಸುತ್ತದೆ. ಜ್ವರ/ಶೀತದಿಂದ ಬಳಲುವಾಗ ಆಹಾರ ರುಚಿಸುವುದಿಲ್ಲ. ಆಗ ಮೂಗಿನ ಗ್ರಹಣ ಶಕ್ತಿ ಕಡಿಮೆಯಾಗಿರುತ್ತದೆ. ವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ಪೂರ್ತಿಯಾಗಿ ಕಳೆದುಕೊಂಡರೆ ಹೇಗಿರುತ್ತದೆ ಅನ್ನುವ ಅನುಭವವೂ ಕೋವಿಡ್ ಸಂದರ್ಭದಲ್ಲಿ ನನಗಾಗಿತ್ತು. ಮೈಸೂರು ಸ್ಯಾಂಡಲ್ ಸೋಪ್ ನ ಗಂಧದ ಪರಿಮಳವನ್ನು ಗುರುತಿಸಲು ಮೂಗು ವಿಫಲವಾಗಿತ್ತು. ಕಣ್ಣು ಕಾಣದವ ಕುರುಡನಾದರೆ ವಾಸನೆಯನ್ನು ಗ್ರಹಿಸಲಾಗದವನಿಗೆ ಏನೆಂದು ಕರೆಯುವರು ಎಂಬ ಪ್ರಶ್ನೆ ಧುತ್ತನೆ ಎದುರು ಬಂದು ನಿಂತಾಗ, ಘ್ರಾಣಹೀನತೆ (ಅನೋಸ್ಮಿಯ) ಬಗ್ಗೆ ಜಾಸ್ತಿ ತಿಳಿದುಕೊಳ್ಳುವಂತಾಗಿತ್ತು.

ವಿವಿಧ ವಾಸನೆಗಳ ಬಗ್ಗೆ ಬರೆಯಹೊರಟರೆ ಅದು ಮುಗಿಯದ ಕಥೆ. ಇನ್ನು ಬೆಕ್ಕು, ನಾಯಿ, ಮುಂತಾದ ಪ್ರಾಣಿಗಳ ಘ್ರಾಣಶಕ್ತಿಯೂ ಅದ್ಭುತವೇ. ವಾಸನೆ ಇರುವ ಯಾವುದೇ ಸಜೀವಿಗಳ ಬಗ್ಗೆ, ನಿರ್ಜೀವ ವಸ್ತುಗಳ ಬಗ್ಗೆ ಬರೆಯುತ್ತಾ ಹೋಗಬಹುದು. ಒಂದು ಬೆವರಿನ ಕಥೆ, ಒಂದು ಸೆಂಟಿನ ಕಥೆ, ಒಂದು ಹಣ್ಣಿನ ಕಥೆ, ಒಂದು ಹೂವಿನ ಕಥೆ,…..ಹೀಗೆ ಪಟ್ಟಿ ಮುಂದುವರೆಯುತ್ತಾ ಹೋಗುತ್ತದೆ. ಕೆಲವರಿಗೆ ಕೆಲವು ವಾಸನೆ ಸಹಿಸಲು ಆಗುವುದಿಲ್ಲ. ಹವಾನಿಯಂತ್ರಣ ಇರುವ ಕೊಠಡಿಗಳಲ್ಲಿ/ ವಾಹನಗಳಲ್ಲಿ ಇರುವ ಒಂದು ವಿಧದ ವಾಸನೆ ಕೆಲವರಿಗೆ ಅಲರ್ಜಿ. ಹವಾನಿಯಂತ್ರಕವನ್ನು ಅಳವಡಿಸಿರುವ ಬಸ್ಸು/ರೈಲು/ವಿಮಾನ ಯಾನ ಮಾಡುವಾಗ ಅನುಭವಿಸುವ ಕಿರಿಕಿರಿಗಳು ಅವೆಷ್ಟೋ.

ಒಟ್ಟಿನಲ್ಲಿ ಹೇಳಬೇಕೆಂದರೆ, ಈ ಸೃಷ್ಟಿಯೇ ಅದ್ಭುತ. ಜ್ಞಾನೇಂದ್ರಿಯಗಳಲ್ಲಿ ಒಂದಾದ ಮೂಗು ವಾಸನೆಯನ್ನು ಗ್ರಹಿಸಿ, ಮೆದುಳಿಗೆ ರವಾನಿಸುವುದು ಮಾತ್ರವಲ್ಲ ಮತ್ತದೇ ವಾಸನೆಯನ್ನು ಗ್ರಹಿಸಿದಾಗ ಇದು ಇದರದೇ ವಾಸನೆ ಎಂದು ಕೂಡಲೇ ನಮ್ಮರಿವಿಗೆ ಬರುವ ಆ ಪ್ರಕ್ರಿಯೆ ಹೇಗೆ ಸಂಭವಿಸುತ್ತದೆ ಅನ್ನುವುದೇ ಅಗೋಚರ ವಿಷಯ. ಚಂದದ ದೃಶ್ಯವನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯಬಹುದು ಆದರೆ ಹಿತವಾದ ಪರಿಮಳವನ್ನು ಅನುಭವಿಸಿ ಮಾತ್ರ ತಿಳಿಯಬಹುದು ಅಲ್ಲವೇ? ಈ ಲೇಖನ ಸುರಹೊನ್ನೆಯ ಕಂಪು ಬಲ್ಲವರಿಗೆ ಅರ್ಪಣೆ!

ಡಾ. ಕೃಷ್ಣಪ್ರಭ ಎಂ, ಮಂಗಳೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *