ಒಬ್ಬ ಚಂದದ ಹುಡುಗಿಯನ್ನು ಒಬ್ಬ ಹುಡುಗ ಪ್ರೀತಿಸಿ ಮದುವೆ ಮಾಡಿಕೊಂಡ. ಇಬ್ಬರೂ ತುಂಬ ಅನ್ಯೋನ್ಯತೆಯಿಂದ ಬಾಳುತ್ತಿದ್ದರು. ಪರಸ್ಪರ ಅತ್ಯಂತ ಪ್ರೀತಿಯಿಂದ ಇದ್ದರು. ಕೆಲವು ವರ್ಷಗಳ ನಂತರ ಹೆಂಡತಿಗೆ ಎಂಥದ್ದೋ ಒಂದು ಚರ್ಮರೋಗ ತಗುಲಿತು. ಔಷಧಿ ಪತ್ಯ ಎಲ್ಲ ಮಾಡಿದರೂ ಅದು ನಿಯಂತ್ರಣಕ್ಕೆ ಬರದೇ ಹೆಚ್ಚಾಯಿತು. ಆ ಹುಡುಗಿಗೆ ರೋಗದಿಂದಾಗಿ ನಾನು ಕುರೂಪಿಯಾಗುತ್ತಿದ್ದೇನೆ ಎಂದು ಕೀಳರಿಮೆ ಪ್ರಾರಂಭವಾಯಿತು. ಗಂಡ ಎಷ್ಟು ಧೈರ್ಯ ಹೇಳಿದರೂ ಆಕೆಗೆ ಸಮಾಧಾನವಾಗಲಿಲ್ಲ. ದಿನೇದಿನೇ ಆಕೆ ಖಿನ್ನತೆಗೆ ಒಳಗಾದಳು. ಇದರಿಂದ ಗಂಡನಿಗೂ ತುಂಬ ದುಃಖವಾಯಿತು.
ಕೆಲವು ದಿನಗಳ ನಂತರ ದಾರಿಯಲ್ಲಿ ಹೋಗುತ್ತಿರುವಾಗ ಗಂಡನಿಗೆ ಒಂದು ಅಪಘಾತವಾಯಿತು. ಸ್ವಲ್ಪ ಮಟ್ಟಿಗೆ ಪೆಟ್ಟುಗಳಾಗಿ ಅವನು ಬದುಕಿ ಉಳಿದ. ಆದರೆ ಅಪಘಾತದಲ್ಲಿ ಅವನ ದೃಷ್ಟಿ ಹಾಳಾಯಿತು. ಕುರುಡನಾದ ಅವನ ಬಗ್ಗೆ ಹೆಂಡತಿ ತುಂಬ ಕಾಳಜಿ ವಹಿಸಿದಳು. ಅವನನ್ನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದಳು. ಯಾವಾಗಲೂ ಅವನದ್ದೇ ಚಿಂತೆ. ಅವನಿಗೆ ಅವಳೇ ಕಣ್ಣಾಗಿ ಕಾಪಾಡಿದಳು. ಅವರ ನಡುವಿನ ಪ್ರೀತಿ ಹಿಂದಿನಂತೆಯೇ ಗಾಢವಾಗಿತ್ತು.
ಕೆಲವು ಕಾಲದ ನಂತರ ಹೆಂಡತಿಗೆ ಖಾಯಿಲೆ ಉಲ್ಬಣವಾಗಿ ಆಕೆ ಮೃತಳಾದಳು. ಆಕೆಯ ಸಂಸ್ಕಾರ ಮುಗಿಸಿ ಬಂದ ಗಂಡನು ಆ ಊರನ್ನೇ ಬಿಟ್ಟು ಬೇರೆಲ್ಲಾದರೂ ಹೋಗಿಬಿಡಬೇಕೆಂದು ನಿರ್ಧರಿಸಿದ. ಆತನ ಕೆಲವು ಹಿತೈಷಿಗಳು “ನೀನು ಒಬ್ಬನೇ ಎಲ್ಲಿಗೆ ಹೋಗಿರುತ್ತೀಯೆ? ನಿನಗೆ ಕಣ್ಣು ಕೂಡ ಕಾಣಿಸುವುದಿಲ್ಲ.” ಎಂದು ಕರುಣೆ ತೋರಿದರು. ಆಗ ಆತ “ಯಾರು ಹೇಳಿದ್ದು ನನಗೆ ಕಣ್ಣು ಕಾಣಿಸುವುದಿಲ್ಲ ಎಂದು. ನನಗೆಲ್ಲಾ ಕಾಣುತ್ತದೆ. ಅಪಘಾತದಲ್ಲಿ ನನ್ನ ದೃಷ್ಟಿಗೇನೂ ಹಾನಿಯಾಗಲಿಲ್ಲ. ಆದರೆ ನನ್ನನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದ ನನ್ನ ಹೆಂಡತಿ ತಾನು ಅನುಭವಿಸುತ್ತಿದ್ದ ಖಿನ್ನತೆಯಿಂದ ಈ ಕಾರಣಕ್ಕಾಗಿಯಾದರೂ ಹೊರಬರಲಿ ಎಂದು ನಾನು ಕುರುಡುತನದ ನಾಟಕವಾಡಬೇಕಾಯಿತು. ಅವಳ ಕಾಳಜಿಯೆಲ್ಲ ನನ್ನ ಕಡೆಗೆ ತಿರುಗಿ ತನ್ನ ಕುರೂಪದ ಬಗ್ಗೆ ಯಾವಾಗಲೂ ಚಿಂತಿಸುವುದು ಇದರಿಂದ ಕಡಿಮೆಯಾಗಿತ್ತು. ಅವಳ ಸಂತೋಷಕ್ಕಾಗಿ ನಾನು ಕುರುಡನಾಗಿ ವರ್ತಿಸಿದೆ” ಎಂದನು. ಎಲ್ಲರಿಗೂ ಅವರಿಬ್ಬರಲ್ಲಿದ್ದ ಪ್ರೇಮವನ್ನು ಕಂಡು ಮೆಚ್ಚುಗೆಯಾಯಿತು. ಬರಿಯ ಮನೆ ದೊಡ್ಡದಾಗಿದ್ದರೆ ಸಾಲದು ಮನಸ್ಸೂ ವಿಶಾಲವಾಗಿರಬೇಕು. ಒಬ್ಬರಿಗೊಬ್ಬರು ಆಸರೆಯಾಗಿರುವ ಹೃದಯ ವೈಶಾಲ್ಯತೆ ಇರಬೇಕು.

ಸಂಗ್ರಹಣೆ ಮತ್ತು ರೇಖಾಚಿತ್ರ ರಚನೆ : ಬಿ.ಆರ್.ನಾಗರತ್ನ, ಮೈಸೂರು

