ಎಲ್ಲೂ ಪಯಣಿಸದೇ ನೆಲದಲೇ ಬೇರು ಕಚ್ಚಿದಂತೆ ನಿಂತಲ್ಲಿಯೇ ಕುಂತಾಗ
ಪುಸ್ತಕವೊಂದರ ಪುಟಗಳಲಿ ನೀ ಮೊಗವಿಟ್ಟು ಓದದೇ ಮಗುಮ್ಮಾದಾಗ
ಜೀವಭಾವದ ಏರಿಳಿತಗಳ ಸಶಬ್ದಕೆ ಕಿವಿಗೊಡದೆ ಅಸೂಕ್ಷ್ಮ ಮತಿಯಾದಾಗ
ಸ್ವತಃ ನಿನ್ನನು ಯಾವ ಪರಾಮರ್ಶೆಗೂ ಒಳಪಡಿಸಿ ಕೊಳ್ಳದೇ ಸ್ಥಗಿತವಾದಾಗ
ನಿನ್ನಮೂಲ್ಯ ಆತ್ಮಗೌರವವನು ಹರಾಜಿಗಿಟ್ಟು ಬೇಕಾಬಿಟ್ಟಿ ಬದುಕಿ ಬಿಟ್ಟಾಗ
ಸಹಬಾಳ್ವೆ ಮರೆತು ಏಕಾಕಿತನದ ಗೋಡೆ ಕಟ್ಟಿಕೊಂಡು ವಾಸ ಮಾಡುವಾಗ
ನಿಸ್ತೇಜವೆನಿಪ ಹಳೆಯ ಪ್ರವೃತ್ತಿಗಳಿಗೇ ಲಗತ್ತಾಗಿ ಅದರ ಗುಲಾಮನಾದಾಗ
ಹೊಸದಾರಿಯನು ಅನ್ವೇಷಿಸದೇ ಹಳೆಯ ದಾರಿಯಲೇ ನಡೆದು ಬಿಟ್ಟಾಗ
ಹೊಸತಿಗೆ ತುಡಿಯದೇ ಹೊಸ ಸ್ನೇಹಕ್ಕೆ ಮಿಡಿಯದೇ ನಿಂತ ನೀರಾದಾಗ
ಜೀವಿತದಲಿ ಘಟಿಸುವ ಏನೆಲ್ಲಾ ಸಂಭವಗಳಿಗೆ ಒಳಿತು ಕೆಡುಕುಗಳಿಗೆ
ಮುಖಾಮುಖಿಯಾಗದೇ ಸತ್ವ ಕಳೆದುಕೊಂಡು ಅಧೀರನಾದಾಗ
ತೀವ್ರತರ ಭಾವಗಳ ಹೃದಯಪೂರ್ವಕವಾಗಿ ಸ್ವೀಕರಿಸದೇ ಹೋದಾಗ
ಸುರಕ್ಷಿತ ವಲಯದಿಂದೀಚೆ ಬಂದು ಅಪರಿಚಿತಕ್ಕೆ ಎದುರಾಗದಿದ್ದಾಗ
ಮಾಡುವ ಕೆಲಸದಲಿ ತೃಪ್ತಿ ಕಾಣದೆ ನೀರಸವೇ ಯಾಂತ್ರಿಕವಾದಾಗ
ಕನಸುಗಳ ಕಚಗುಳಿಗೆ ಸ್ವಲ್ಪವಾದರೂ ಭಾವುಕವಾಗದೇ ಹೋದಾಗ
ಕನಿಷ್ಠ ಒಮ್ಮೆಯಾದರೂ ಎದೆಯ ಪಿಸುದನಿಗೆ ಓಗೊಡದೇ ಇದ್ದಾಗ
ಬುದ್ಧಿ ತರ್ಕಿಸುವ ಎಲ್ಲವನೂ ತೆಗೆದಿರಿಸಿ,
ಕರುಳ ಕೂಗಿಗೆ ಸ್ಪಂದಿಸದೇ ಹೋದಾಗ
ನಿನಗೆ ನೀನೇ ಅಪರಿಚಿತನಾಗಿ ಬಿಟ್ಟಾಗ
ನಿಧಾನವಾಗಿ ನೀ ಸಾಯಲಾರಂಭಿಸುವೆ !
ಮೂಲ : ಚಿಲಿ ದೇಶದ ರಾಷ್ಟ್ರೀಯ ಕವಿ ಪಾಬ್ಲೊ ನೆರೂಡಾ
ಇಂಗ್ಲಿಷ್ ಅವತರಣಿಕೆ : ಮಾರ್ತಾ ಮೆಡಿರೋಸ್
ಕನ್ನಡಕ್ಕೆ : ಡಾ. ಹೆಚ್ ಎನ್ ಮಂಜುರಾಜ್, ಮೈಸೂರು



ತುಂಬಾ ಸುಂದರ ಕವನ . ಚೆನ್ನಾಗಿ ಅನುವಾದ ಮಾಡಿದಿರಿ
ಧನ್ಯವಾದ ಮೇಡಂ
ನಿಮ್ಮ ಪ್ರತಿಕ್ರಿಯೆ ಕಂಡು ಖುಷಿಯಾಯಿತು
ಚೆನ್ನಾಗಿದೆ
ನಿವೃತ್ತಿಯ ನಂತರದ
ಅನುಭವಗಳ ದೃಷ್ಟಿಯಿಂದ ಈ ಪದ್ಯ ಓದಿದಾಗ ಒಮ್ಮೊಮ್ಮೆ ನಶಿಸುತ್ತಿರುವಂತೆ ಅನಿಸುತ್ತದೆ
ತುಂಬಾ ಚಂದದ ಅನುವಾದ ಸರ್
ಸುಂದರವಾದ ಕವನ ಗುರೂಜಿ ❤
Thank you sir. Nice one
ಯಾವಾಗ ನಮ್ಮ ಕೊಳೆಯುವಿಕೆ ಶುರುವಾಗುತ್ತದೆ….. ಎಂಬುದನ್ನು ಬಹಳ ಚೆನ್ನಾಗಿ …..ಬರೆದಿದ್ದಾರೆ ಮೂಲ ಬರಹಗಾರರು… ಅದನ್ನು ಅಷ್ಟೇ ಅರ್ಥವತ್ತಾಗಿ ಕನ್ನಡದ ಸೊಗಡನ್ನು ತುಂಬಿ ಅನುವಾದಿಸಿದ್ದೀರಿ….ಅಭಿನಂದನೆಗಳು ಸರ್
ನಿಜ ಸರ್, ನಿಮ್ಮ ಮೆಚ್ಚುಮಾತಿಗೆ ಧನ್ಯವಾದಗಳು
ವಾವ್ ಚಂದದ ಅನುವಾದ ಕವನ ಸಾರ್
ಜೀವನದ ವೇಗದ ಓಟದಲ್ಲಿ ನಾವು ಕಳೆದು ಹೋಗಬಾರದೆಂಬ ,ಆಶಯ ಕವನದಲ್ಲಿ ಚೆನ್ನಾಗಿ ಮೂಡಿ ಬಂದಿದ
ನಿಜ ಮೇಡಂ, ಧನ್ಯವಾದಗಳು
ಜೀವನದ ವೇಗದ ಓಟದಲ್ಲಿ ನಾವು ಕಳೆದು ಹೋಗಬಾರದೆಂಬ ,ಆಶಯ ಕವನದಲ್ಲಿ ಚೆನ್ನಾಗಿ ಮೂಡಿ ಬಂದಿದೆ
ನಿನಗೆ ನೀನೇ ಅಪರಿಚಿತನಾಗಿ ಬಿಟ್ಟಾಗ
ನಿಧಾನವಾಗಿ ನೀ ಸಾಯಲಾರಂಭಿಸುವೆ !…ಆಹಾ ಅದ್ಭುತ ಬಾವಾನುವಾದ!
ಅತ್ಯಂತ ಭಾವಪೂರ್ಣ, ಅರ್ಥಪೂರ್ಣ ಕವಿತೆ. ಓದಿ ಮುಗಿಸಿದಾಗ ಆತ್ಮ ವಿಮರ್ಶೆಗೆ ಒಳಪಟ್ಟು ರೋಮಾಂಚನಗೊಳ್ಳುವಂತಾಯಿತು. ಸಶಕ್ತ ಭಾವಾನುವಾದ.
ಕೊನೆಯ ಸಾಲುಗಳು
ನಿನಗೆ ನೀನೆ ಅಪರಿಚಿತನಾಗಿ ಬಿಟ್ಟಾಗ
ನಿಧಾನವಾಗಿ ನಶಿಸಲಾರಂಭಿಸುವೆ
ಇಡೀ ಪದ್ಯದ ಮುಖವಾಣಿಯಾಗಿ ನಿಲ್ಲುವುದು
ಚಂದದ ಅನುವಾದ ವಂದನೆಗಳು ಸರ್