ಎಲ್ಲೋ ಹುಟ್ಟಿ ಇನ್ನೆಲ್ಲೋ ಹರಿದು ಮತ್ತಾವುದೋ ಸಾಗರ ಸೇರುವ ನದಿಗೆ ಗೊತ್ತಿಲ್ಲ, ತಾನು ತಲಪುವ ಗಮ್ಯ. ಆದರೆ ಅದಕ್ಕೆಷ್ಟು ನಂಬುಗೆಯೆಂದರೆ ಹೀಗೇ ಹರಿಯುತಿದ್ದರೆ ಖಂಡಿತ ಸಮುದ್ರವನು ಕಂಡೇ ತೀರುತ್ತೇನೆಂಬುದು. ಹರಿಯುತಿದ್ದರೆ ನದಿ, ಚಲಿಸುತಿದ್ದರೆ ಬದುಕು, ಓದುತಿದ್ದರೆ ಜ್ಞಾನ, ಬರೆಯುತಿದ್ದರೆ ಆತ್ಮಶೋಧ. ನಿಂತ ನೀರಾಗುವುದಕಿಂತ ಹರಿದು ಬಯಲಾಗುವುದು ಸೂಕ್ತ. ಇಷ್ಟಕೂ ಬುವಿಯ ಆಳದಲ್ಲೋ ಪರ್ವತಾರಣ್ಯದ ಶಿಖರದಲ್ಲೋ ಹುಟ್ಟುವ ಹೊಳೆಗೆ ತಾನು ಹರಿಯುವಾಗ ‘ಎಷ್ಟುದ್ದ ಎಷ್ಟಗಲ’ ಆಗುತ್ತೇನೆಂಬ ಕಲ್ಪನೆಯೇ ಇರುವುದಿಲ್ಲ! ಹರಿಯುತ್ತಾ ಬೆರೆಯುತ್ತಾ ಹೋಗುವಾಗ ಹಳ್ಳ ಕೊಳ್ಳಗಳನ್ನು ಆವರಿಸಿ, ಅದರೊಂದಿಗೆ ತಾನೂ ಸಡಗರಿಸಿ ದಾರಿಯಲಿ ಸಿಕ್ಕ ಎಲ್ಲ ಕಸಕಡ್ಡಿಗಳ ಜೊತೆಗೇ ಸಾಗುತ್ತದೆ. ಹಾಗೆಯೇ ಅಲ್ಲಲ್ಲಿ ಸುರಿವ ಮಳೆಯನೂ ಜೊತೆಗೂಡಿಸಿಕೊಂಡೇ ದೊಡ್ಡದಾಗುತ್ತದೆ. ಯಾರು ಬಳಸಿಕೊಂಡರೂ ಸುಮ್ಮನಿರುತ್ತದೆ. ಎತ್ತರಕೆ ಹತ್ತುತಾ ಇಳಿಯುತಾ ಬೀಳುತ್ತದೆ. ಅಣೆಕಟ್ಟು ಸಿಕ್ಕಾಗ ಸಂಗ್ರಹವಾಗುತ್ತದೆ. ಸೇತುವೆ ಕಂಡಾಗ ನಿಧಾನಿಸುತ್ತದೆ. ಅದಕೆ ಜಲಪಾತವಾಗುವುದೂ ಗೊತ್ತು; ಪ್ರವಾಹವಾಗುವುದೂ ಗೊತ್ತು ಅಂತೆಯೇ ಹರಿವು ಕಡಮೆಯಾದಾಗ ನಿಧಾನವಾಗುವುದೂ ಗೊತ್ತು. ಒಟ್ಟಿನಲ್ಲಿ ನದಿಯದು ಕಡಲ ಸೇರುವ ತವಕ ತಲ್ಲಣ. ಹುಟ್ಟಿದಾರಾಭ್ಯ ಕಾಣದ ಕಡೆಗೆ ಧಾವಿಸುವ ಅದರ ಹೆಸರೇ ವಿಶ್ವಾಸ; ಇಂದಲ್ಲ ನಾಳೆ ಸೇರುವೆನೆಂಬ ಅದಮ್ಯವೇ ಅದರ ಶ್ವಾಸ! ಹೀಗೆ ನದಿಯಾಗಲು ಬೇಕಾಗಿರುವುದು ಎರಡು ತೀರ. ನದಿಯಿಂದ ಎರಡು ದಡ ನಿರ್ಮಾಣವಾಗುವುದೆಂಬುದು ಎಷ್ಟು ನಿಜವೋ ದಡವಿಲ್ಲದ್ದನ್ನು ನದಿಯೆಂದು ಕರೆಯಲಾಗದೆಂಬುದೂ ಅಷ್ಟೇ ನಿಜ! ಅಂದರೆ ಈ ದಡದಿಂದ ಆ ದಡಕೆ ಹೋಗಲು ನದಿಯನು ಬಳಸಲೇಬೇಕು; ನದಿಯನು ದಾಟಲೇಬೇಕು. ಇತ್ತ ಇರುವ ಈ ತೀರದಂತೆಯೇ ಆ ತೀರವೂ! ಒಮ್ಮೊಮ್ಮೆ ಆ ತೀರವ ಮುಟ್ಟಿ ಮರಳಿ ಈ ತೀರಕೆ ಬರುವುದೂ ಇದೆ. ಅಥವಾ ಆ ತೀರದಾಚೆಯೇ ಇದ್ದುಬಿಡುವ ಉಮೇದು ಕೂಡ. ಒಟ್ಟಿನಲ್ಲಿ ನಮ್ಮ ಬದುಕನ್ನು ನದಿಗೆ ಹೋಲಿಸಿಕೊಂಡು ಇನ್ನಷ್ಟು ಅರ್ಥ ಮಾಡಿಕೊಳ್ಳಬಹುದು ಮತ್ತು ಅರ್ಥ ಮಾಡಿಸಬಹುದು. ನಾನೀಗ ಹೇಳಿಕೊಳ್ಳಲಿರುವ ನನ್ನ ಸ್ವಕಥನಕ್ಕೆ ಹೊಳೆಯ ಪ್ರತೀಕವನ್ನು ಬಳಸಲು ಕಾರಣ: ಅದರ ಎರಡು ತೀರ. ಒಂದೇ ರೀತಿ ಕಂಡರೂ ಇದು ಬೇರೆ; ಅದು ಬೇರೆ. ಅತ್ತ ಇರುವವರಿಗೆ ಇತ್ತ ಗಮನ; ಇತ್ತ ಇರುವವರಿಗೆ ಅತ್ತ ಗಮನ; ಕಣ್ಣಿಗೆ ಕಂಡರೂ ಅತ್ತ ಹೋಗಿಯೇ ನೋಡಬೇಕೆಂಬ ಮನನ. ಏಕೆಂದರೆ ಅನುಭವಿಸಿದ್ದು ಮಾತ್ರ ಸತ್ಯ; ಉಳಿದದ್ದು ಕಲ್ಪನೆ ಅಥವಾ ಭ್ರಮೆ. ಈ ಅನುಭವವು ಸ್ವಾನುಭವವೂ ಆಗಬಹುದು; ಪರಾನುಭವವೂ ಆಗಬಹುದು. ಒಟ್ಟಿನಲ್ಲಿ ಅನುಭವವು ನಮಗೆ ದಕ್ಕಬೇಕು. ಗೊತ್ತಾಗುವ ತನಕ ಸಂಭ್ರಮ; ಗೊತ್ತಾದ ಮೇಲೆ ವಿಭ್ರಮ. ಎಲ್ಲವೂ ಅಷ್ಟೇ: ಕಾಣುವುದಕಿಂತ ಕಾಣುವ ಸಿದ್ಧತೆಯೇ ಚೆಂದ. ಸಿದ್ಧತೆಯಲ್ಲೇ ಬದುಕಿರುತ್ತದೆ; ಬದುಕಿದ ಮೇಲೆ ಏನೂ ಉಳಿಯುವುದಿಲ್ಲ. ಕೊನೆಪಕ್ಷ ಸಿದ್ಧತೆ ಮಾಡಿಕೊಳ್ಳಲಾದರೂ ಬದುಕಬೇಕಾಗಿರುತ್ತದೆ; ಅಲ್ಲೊಂದು ಬದ್ಧತೆ ಕೆಲಸ ಮಾಡುತ್ತಿರುತ್ತದೆ. ಸಿದ್ಧತೆ ಮುಗಿದು ಅನುಭವಿಸಿಯಾದ ಮೇಲೆ ಉಳಿಯುವುದು ಕೇವಲ ನೆನಪು ಮತ್ತದರ ಒನಪು!
ನನ್ನ ಜೀವನದಲ್ಲಿ ‘ಮಾತು ಮತ್ತು ಮಾತಿಲ್ಲದ ಮೌನ’ಗಳು ಉಳಿದ ಸಂಗತಿಗಳಿಗಿಂತ ಹೆಚ್ಚು ಪ್ರಾಮುಖ್ಯ ವಹಿಸಿವೆ. ಮಾತು ನನಗೆ ಬದುಕಾದ ಮೇಲಂತೂ ಅದರೆಲ್ಲ ಮೂಲಚೂಲಗಳನ್ನು ಅನ್ವೇಷಿಸಿ, ಸಾಕೆನಿಸುವಷ್ಟು ಸಹವಾಸದಲ್ಲಿ ತನ್ಮಯ. ಆದರೆ ನಾನು ಮಾತಾಡಲು ಪ್ರಾರಂಭಿಸಿದ್ದೇ ನಾನು ಹುಟ್ಟಿದ ಐದು ವರುಷ ಆದ ಮೇಲೆ! ನೆರೆಹೊರೆಯವರು ಮತ್ತು ಸಂಬಂಧಿಕರು ‘ನಿನ್ನನ್ನು ಮೂಕಮಗುವೆಂದೇ ಪರಿಗಣಿಸಿದ್ದರು’ ಎಂದು ನಮ್ಮಮ್ಮ ಹೇಳುವಾಗ ದಿಗ್ಭ್ರಮೆ ಆಗುತ್ತಿತ್ತು. ಐದು ವರುಷಗಳ ಕಾಲ ನಾನು ಮಾತಾಡದೇ ಸುಮ್ಮನಿದ್ದೆನಂತೆ. ಈಗ ಮತ್ತೆ ನಾನು ಆದಷ್ಟೂ ಮೌನಕ್ಕೆ ಶರಣಾಗಿದ್ದೇನೆ. ಎಷ್ಟು ವ್ಯತ್ಯಾಸವೆಂದರೆ, ಮಾತು ಬರದ ನನ್ನ ಆಗಿನ ಮೌನಕ್ಕೂ ಮಾತಾಡಿ ಸಾಕಾದ ಮೇಲಿನ ಈಗಿನ ಮೌನಕ್ಕೂ ಅಜಗಜಾಂತರ! ಎರಡೂ ಮೌನಗಳು ನನ್ನ ಬದುಕನ್ನು ರೂಪಿಸಿವೆ. ನದಿಗೆ ಹೇಗೆ ಎರಡು ತೀರಗಳು ಇವೆಯೋ ಹಾಗೆ. ಎರಡೂ ತೀರಗಳು ಒಂದೇ ರೀತಿ ಕಂಡರೂ ಅಂತಿಮವಾಗಿ ಅವು ಬೇರೆ. ಇದು ಈ ದಿಕ್ಕಿನದು; ಅದು ಆ ದಿಕ್ಕಿನದು. ದಿಕ್ಕು ಬದಲಾದರೆ ದೆಸೆ ಬದಲಾಗುತ್ತದಂತೆ. ಹಾಗೆ ನನ್ನ ಬದುಕು ಬದಲಾಯಿತು. ಎರಡು ಮೌನಗಳ ನಡುವೆ ಮಾತು ನನ್ನನ್ನು ಆಳಿತು; ನನ್ನನ್ನು ನುಡಿಸಿತು; ನನ್ನನ್ನು ಪೋಷಿಸಿತು; ಎಷ್ಟೆಂದರೆ ಸಾಕೆನಿಸುವಷ್ಟು! ಮಾತು ಬೇಡ; ಮೌನ ಬೇಕು; ಮೌನವಾಗಿರಬೇಕು ಎಂದೆನಿಸುವಷ್ಟು!!
ನಮ್ಮದು ಒಂಥರಾ ಮೂಗರ ವಂಶ. ನನ್ನ ತಂದೆಯ ವಂಶಸ್ಥರಲ್ಲಿ ಮೂಗು ಮತ್ತು ಕಿವುಡು ಎಂಬವು ಹೆರಿಡಿಟಿ. ಮೂರ‍್ನಾಲ್ಕು ತಲೆಮಾರುಗಳ ಹಿಂದೆಯೇ ರಕ್ತ ಸಂಬಂಧಗಳಲ್ಲಿ ಕೊಟ್ಟು ತಂದು ಮಾಡಿಯೋ ಏನೋ ನಮ್ಮಜ್ಜಿಗೆ ಹುಟ್ಟಿದ ಆರೇಳು ಮಕ್ಕಳಲ್ಲಿ ಮೂವರು ಮೂಗರು ಮತ್ತು ಕಿವುಡರು! ಅಂದರೆ ನನ್ನ ಒಬ್ಬರು ದೊಡ್ಡಪ್ಪ, ಇನ್ನೊಬ್ಬರು ಚಿಕ್ಕಪ್ಪ ಮತ್ತು ಸೋದರತ್ತೆ. ನನ್ನ ತಂದೆಯವರು ಮಾತಾಡುತ್ತಿದ್ದರಾದರೂ ನಿರಂತರವಾಗಿ ಮಾತಾಡಲು ಹೋದರೆ ಒಣಕೆಮ್ಮು ಬರುತ್ತಿತ್ತು. ಸ್ವಲ್ಪ ಹೊತ್ತಾದ ಮೇಲೆ ಮಾತು ನಿಲ್ಲಿಸಿ ಬಿಡುತ್ತಿದ್ದರು. ಈ ಅನಾಹುತ ಸಾಲದೆಂಬಂತೆ, ಮತ್ತೆ ನಮ್ಮಜ್ಜಿಯು ನಮ್ಮತ್ತೆಯನ್ನು ಅಂದರೆ ತನ್ನ ಮೂಗು ಮಗಳನ್ನು ತನ್ನ ತಮ್ಮನಿಗೇ ಕೊಟ್ಟು ಮದುವೆ ಮಾಡಿದ್ದರು! ಇದೆಲ್ಲವನ್ನು ಗಮನಿಸಿಯೋ ಏನೋ ನನ್ನ ಇನ್ನೋರ್ವ ಮಾತು ಬರುವ ದೊಡ್ಡಪ್ಪನ ಮಡದಿ ಅಂದರೆ ನನ್ನ ದೊಡ್ಡಮ್ಮನು ವಿವಾಹವಾಗಿ ಹದಿನೆಂಟು ವರುಷಗಳಾದ ಮೇಲೆ ಅಂದರೆ ನಾನು ನನ್ನ ತಾಯಿಗೆ ಜನಿಸಿದ ಮೇಲೆ ಮತ್ತು ನಾನು ಮಾತಾಡಲು ಶುರು ಮಾಡಿದ ಮೇಲೆ ಒಂದು ಮಗುವನ್ನು ಮಾಡಿಕೊಂಡರು! ನನಗೆ ಮಾತು ಬಂದಿದ್ದೇ ಐದು ವರುಷವಾದ ಮೇಲೆ! ಅಲ್ಲಿಯವರೆಗೆ ನಾನು ‘ಹರ-ಶಿವ’ ಎನ್ನುತ್ತಿರಲಿಲ್ಲವಂತೆ. ಕುಟುಂಬ ವೈದ್ಯರು ಸಲಹೆ ನೀಡಿದ ಮೇಲೆ ನನ್ನನ್ನು ಮೈಸೂರಿನ ಸ್ಪೀಚ್ ಅಂಡ್ ಹಿಯರಿಂಗ್ ಇನ್‌ಸ್ಟಿಟ್ಯೂಟಿಗೆ ಕರೆದುಕೊಂಡು ಹೋಗಿ ತೋರಿಸುತ್ತಿದ್ದರಂತೆ. ಏಕೆಂದರೆ ನಮ್ಮ ವಂಶದಲ್ಲಿ ಕಿವುಡರು ಮತ್ತು ಮೂಗರು ಇದ್ದರಲ್ಲ, ಅದಕ್ಕಾಗಿ ಹೆದರಿಯೋ ಏನೋ! ಪರೀಕ್ಷಿಸಿದ ವೈದ್ಯರು ‘ಧ್ವನಿಪೆಟ್ಟಿಗೆ ಮತ್ತು ಶ್ರವಣದೋಷವೇನೂ ಈ ಮಗುವಿಗೆ ಇಲ್ಲ, ಮಾತು ಮತ್ತು ಕಲಿಕೆ ನಿಧಾನವಾಗಬಹುದು’ ಎಂದು ಆ ಕಾಲದಲ್ಲೇ ಭರವಸೆ ನೀಡಿದ್ದರಂತೆ. ಅಂತೂ ನನಗೆ ಐದು ವರುಷ ಆದ ಮೇಲೆ ಒಂದೊಂದೇ ಮಾತು ಬರಹತ್ತಿತಂತೆ. ನಾನು ಮಾತು ಕಲಿತೆ ಎಂಬುದನ್ನು ಖಚಿತಪಡಿಸಿಕೊಂಡ ಮೇಲೆಯೇ ನನ್ನ ದೊಡ್ಡಮ್ಮನು ಒಂದು ಮಗು ಹೆರಲು ನಿರ್ಧರಿಸಿದ್ದು. ‘ಮೂಕ ಮಗು ಹುಟ್ಟಿದರೇನು ಗತಿ?’ ಎಂಬುದೇ ಅವರ ಚಿಂತೆಯಾಗಿತ್ತು.
ನಿಧಾನವಾಗಿ ನಾನು ಮಾತು ಕಲಿತರೂ ಉಳಿದ ಮಕ್ಕಳಂತೆ ಬಿಡುಬೀಸಾಗಿ ಮಾತಾಡುತ್ತಿರಲಿಲ್ಲವಂತೆ. ನನಗೇ ನೆನಪಿರುವ ಹಾಗೆ ಹೈಸ್ಕೂಲಿಗೆ ಬರುವತನಕ ಜನರ ಮುಂದೆ ಮಾತಾಡಲು ಹೆದರುತ್ತಿದ್ದೆ. ಎಲ್ಲಿ ಪದಗಳು ತಪ್ಪಾಗುವುದೋ ಎಂಬ ಅಂಜಿಕೆಯಿಂದ. ಒತ್ತಕ್ಷರಗಳು ಇರುವ ಪದಗಳನ್ನು ಉಚ್ಚರಿಸಲು ನನಗೆ ತೊಂದರೆಯಾಗುತ್ತಿತ್ತು. ಚಿಕ್ಕಂದಿನಲ್ಲಿ ‘ಡಿಫ್ತೀರಿಯಾ’ ಎಂಬ ಸೋಂಕುರೋಗ ತಗುಲಿ ನನ್ನ ಗಂಟಲು ಚಿಕ್ಕದಾಗಿದ್ದೂ ಇದರ ಇನ್ನೊಂದು ದೋಷ. ನನಗೆ ಈಗಲೂ ಆಹಾರ ಪದಾರ್ಥ ತಿನ್ನುವ ಮೊದಲು ನೀರು ಕುಡಿಯಬೇಕು; ಇಲ್ಲದಿದ್ದರೆ ಗಂಟಲು ಹಿಡಿಯುತ್ತದೆ. ಕುಡಿಯುವ ನೀರನ್ನು ಸಿದ್ಧ ಮಾಡಿಕೊಂಡೇ ತಿನ್ನಲು ಶುರುವಿಡುವುದು. ನಮ್ಮ ತಂದೆಗೆ ಸ್ಪಷ್ಟವಾಗಿ ಗಂಟಲಿನ ದೋಷವಿತ್ತು. ತಿನ್ನುವಾಗ ನೆತ್ತಿ ಹತ್ತಿಸಿಕೊಳ್ಳುತ್ತಿದ್ದರು, ಕೆಮ್ಮುತ್ತಿದ್ದರು. ಮೂಗು ಬಾಯಿ ಒರೆಸಿಕೊಂಡರೇನೇ ಅವರಿಗೆ ಸಮಾಧಾನ. ಈಗಲೂ ನನ್ನದು ಇದೇ ಪರಿಸ್ಥಿತಿ. ಹೀಗೆ ನನಗೆ ಸರಿಯಾಗಿ ಮಾತಾಡಲು ಬರುವುದಿಲ್ಲವೆಂಬ ಕೀಳರಿಮೆಯು ಮನೆ ಮಾಡಿ, ಮಾತಾಡಲೇ ಹೆದರುತ್ತಿದ್ದೆ. ಹಲವು ಕನ್ನಡ ಶಬ್ದಗಳನ್ನು ತಪ್ಪಾಗಿ ಉಚ್ಚರಿಸುತ್ತಿದ್ದೆ. ಸಾಕಷ್ಟು ಮನೋಬಲವಿಲ್ಲದ ನಾನು (ಹಾಗೆಂದರೇನೆಂದು ಸಹ ಗೊತ್ತಿಲ್ಲದ ಅವಧಿ) ಅಳುಕು ಮತ್ತು ಅಂಜಿಕೆಗಳಿಂದಾಗಿ ತೊದಲುವುದನ್ನು ಶುರುಮಾಡಿಕೊಂಡೆ. ಯಾರಾದರೂ ಸಡನ್ನಾಗಿ ಮಾತಾಡಿಸಿದರೆ ತಕ್ಷಣ ಉತ್ತರಿಸಲು ತೊಡಕಾಗುತ್ತಿತ್ತು. ಒಂದು ಹಂತದಲ್ಲಿ ಉಗ್ಗುವಿಕೆಯೆಂದು ಸ್ಪಷ್ಟವಾಗಿ ಹೇಳಬಹುದಾದ ಮಾತಿನ ದೋಷದಿಂದ ನರಳಿದ್ದು ಖಂಡಿತ.
ಸರ್ಕಾರಿ ಮಾಧ್ಯಮಿಕ ಶಾಲೆಯ ಕನ್ನಡ ಮೇಡಮ್ಮೊಬ್ಬರು ನನ್ನ ಉಚ್ಚಾರಣಾ ದೋಷವನ್ನು ಸರಿಪಡಿಸಲು ನಿರಂತರ ಪ್ರಯತ್ನ ಹಾಕುತ್ತಿದ್ದರು. ದೃಢಚಿತ್ತ ಮತ್ತು ಆತ್ಮವಿಶ್ವಾಸವಿಲ್ಲದ ನನ್ನಂಥವನಿಗೆ ತಿದ್ದಿಸಿಕೊಳ್ಳುವ ಸಾಮರ್ಥ್ಯವೂ ಇರಲಿಲ್ಲ. ಮುಸಂಡೀತನ ಮತ್ತು ಅಂಜುಬುರುಕುತನ ಮನೆ ಮಾಡಿತ್ತು. ಮಾತಾಡಿದರೆ ತಪ್ಪಾದೀತು ಎಂಬ ಭಯದಿಂದ ಮಾತಾಡಲೇ ಪ್ರಯತ್ನಿಸುತ್ತಿರಲಿಲ್ಲ. ಇದು ಮಾತು ಬಾರದ ನನ್ನ ಪ್ರಾರಂಭಿಕ ಘಟ್ಟ. ಎಲ್ಲ ಮಕ್ಕಳೂ ಸಲೀಸಾಗಿ ಸುಲಲಿತವಾಗಿ ಮಾತಾಡುತ್ತಾ ಆಟವಾಡುತ್ತಿದ್ದರೆ ನಾನು ‘ಪೆದ್ದೂಸ್’ ಆಗಿ ಮುಖ ಮುಖ ನೋಡುತ್ತಿದ್ದೆ. ನನಗೂ ಅವರಂತೆ ಮಾತಾಡಲು ಆಸೆಯಾಗುತ್ತಿತ್ತು. ಆದರೆ ಯಾವುದೋ ಅವ್ಯಕ್ತ ಅಂಜಿಕೆ ನನ್ನನ್ನು ತಡೆಯುತ್ತಿತ್ತು. ನನ್ನ ದಯನೀಯ ಪರಿಸ್ಥಿತಿಯನ್ನು ನೋಡಿದ ಸರ್ಕಾರಿ ಶಾಲೆಯ ಕೆಲವು ಮಾಸ್ತರರು ಉಕ್ತಲೇಖನ ಬರೆಸಿ, ಎದ್ದು ನಿಲ್ಲಿಸಿ, ಗಟ್ಟಿಯಾಗಿ ಓದುವಂತೆ ಪ್ರೇರೇಪಿಸುತ್ತಿದ್ದರು. ನಾನು ತಪ್ಪು ತಪ್ಪು ಹೇಳುವಾಗ ತಿದ್ದುತ್ತಿದ್ದರು. ‘ಪಶ್ಚಿಮ’ ಎಂಬ ಪದವನ್ನು ನನಗೆ ಉಚ್ಚಾರ ಮಾಡಲು ಬರುತ್ತಿರಲಿಲ್ಲ. ‘ಪಚ್ಚಿಮ’ ಎನ್ನುತ್ತಿದ್ದೆ. ಹಾಗಾಗಿ ಹತ್ತು ಸಲ ‘ಪಶ್’ ಎಂದು ನಿರಂತರವಾಗಿ ಹೇಳಿಸಿ, ಆಮೇಲೆ ‘ಚಿಮ’ ಎಂದು ಹತ್ತು ಸಲ ಹೇಳಿಸಿ, ಒಟ್ಟಿಗೆ ಹತ್ತು ಸಲ ಬೇಗ ಬೇಗ ಹೇಳು ಎಂದು ಪುಸಲಾಯಿಸುತ್ತಿದ್ದರು. ದೇಗುಲಗಳಲ್ಲಿ ಸಂಸ್ಕೃತದ ಶ್ಲೋಕ ಮತ್ತು ಮಂತ್ರಗಳು ಕಿವಿಗೆ ಬಿದ್ದಾಗ ‘ಎಷ್ಟೊಂದು ಕಷ್ಟದ ಭಾಷೆಯಿದು!’ ಎಂದು ದಿಗಿಲುಗೊಳ್ಳುತ್ತಿದ್ದೆ. ಕನ್ನಡವನ್ನೇ ಸರಿಯಾಗಿ ಮಾತಾಡಲು ಬರದ ನನಗೆ ಅದು ಗಗನಕುಸುಮವಾಗಿತ್ತು. ಇನ್ನು ಏಳನೇ ತರಗತಿಯಿಂದ ಇಂಗ್ಲಿಷು ಕಲಿಕೆ ಆರಂಭಗೊಂಡಿದ್ದರೂ ನನ್ನೊಳಗಿನ ಕೀಳರಿಮೆಯು ಬೃಹದಾಕಾರವಾಗಿ ಬೆಳೆದು ಅದನ್ನು ಹೊರಗಿಟ್ಟಿತ್ತು. ಪದವಿ ತರಗತಿಗೆ ಸೇರಿಕೊಂಡಾಗ ಮತ್ತು ಹೊರಗಿನ ಪ್ರಪಂಚಕ್ಕೆ ತೆರೆದುಕೊಂಡಾಗ ಈ ಕೀಳರಿಮೆಯು ನಿಧಾನವಾಗಿ ಕರಗಲಾರಂಭಿಸಿದ್ದು ಈಗಲೂ ಚೆನ್ನಾಗಿ ನೆನಪಿದೆ. ಪತ್ರಿಕೆ ಹಂಚುವ ಹುಡುಗನಾಗಿ, ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವಲ್ಲಿ, ಸೈಕಲ್ ಶಾಪಿನಲ್ಲಿ ಕೆಲಸ ಮಾಡಲು ತೊಡಗಿದ ಮೇಲೆ ಸಾರ್ವಜನಿಕರೊಂದಿಗೆ ವ್ಯವಹರಿಸುವ ಅನಿವಾರ್ಯ ಎದುರಾದಾಗ ನಾನು ಮಾತಾಡಲು ಶುರುವಿಟ್ಟೆ. ನಾನು ಮೊದಲ ಸಲ ನಿರರ್ಗಳವಾಗಿ ಮಾತಾಡಿದ್ದೇ ಎಂಎ ತರಗತಿಯಲ್ಲಿ. ಸೆಮಿನಾರುಗಳನ್ನು ಮಾಡಬೇಕಾದ ದರ್ದು ಎದುರಾದಾಗ. ಅದಾದ ಮೇಲೆ ಅರೆಕಾಲಿಕ ಅಧ್ಯಾಪಕನಾಗಿ ಪಾಠ ಮಾಡಬೇಕಾದ ಸಂದರ್ಭದಲ್ಲಿ!
ಹೀಗೆ ಮಾತಾಡಲು ಕಲಿತ ನನ್ನ ಪ್ರಾರಂಭಿಕ ಘಟ್ಟವು ದುಗುಡ ದುಮ್ಮಾನದ ನೆಲೆಯದು. ದಿನವೊಂದರಲ್ಲಿ ಸುಮಾರು ಮೂರ‍್ನಾಲ್ಕು ಗಂಟೆಗಳ ಪಾಠ ಮಾಡುವಾಗ ಮಾತು ನನಗೆ ಸರಾಗವಾಯಿತು. ಭಾಷಣ ಉಪನ್ಯಾಸಗಳಲ್ಲಿ ಅದು ಓತಪ್ರೋತವಾಯಿತು. ಚೆನ್ನಾಗಿ ಮಾತಾಡುತ್ತಾರೆಂಬ ಅಭಿಧಾನ ದೊರೆತ ಮೇಲಂತೂ ಮಾತು ಎಂಬುದು ನನ್ನ ಸಾಮರ್ಥ್ಯವಾಯಿತು, ಕಲಿಸುತ್ತಾ ಕಲಿಯುವ ಸಾಧನವಾಯಿತು, ನನ್ನೊಳಗೊಂದು ಚಿಂತನಾಕ್ರಮ ರೂಪುಗೊಂಡಿತು. ಏನು ಮಾತಾಡಬೇಕು? ಎಷ್ಟು ಮಾತಾಡಬೇಕು? ಹೇಗೆ ಮಾತಾಡಬೇಕು? ಎಂಬುದು ಕರಗತವಾಯಿತು. ಇದು ನನ್ನ ಮಾತಿನ ಗ್ರಾಫ್ ಏರುವಿಕೆಯ ಕಾಲ. ಸಾಂಸ್ಕೃತಿಕ ಚಟುವಟಿಕೆಗಳ ಸಂಚಾಲಕನಾಗಿ, ವಿದ್ಯಾರ್ಥಿಗಳನ್ನು ತರಬೇತುಗೊಳಿಸುವಾಗ ಏಕಪಾತ್ರಾಭಿನಯ, ನಾಟಕ, ಹಾಡುಗಳನ್ನು ಹೇಳುವಂತಾಯಿತು. ಎಷ್ಟೇ ಜನರಿದ್ದರೂ ಮಾತಾಡಬಲ್ಲೆ ಎಂಬ ವಿಶ್ವಾಸ ಮೂಡಿತು.
ಏರಿದವರು ಇಳಿಯಲೇಬೇಕು. ಅದರಂತೆ ನನಗೆ ಒಮ್ಮಿದೊಮ್ಮೆಗೆ ಮಾತು ಬೇಸರವಾಗತೊಡಗಿತು. ‘ಮಾತಿನಿಂದ ಲಾಭವಿಲ್ಲ’ ಎಂಬುದಕಿಂತ ಮಾತಾಡುವ ನನ್ನ ‘ಬಾಹ್ಯ ದಿನಚರಿಗೆ ಬ್ರೇಕು’ ಬೇಕೆಂದೆನಿಸಿತು. ಎಷ್ಟಂತ ಬಯಲಾಗುವುದು, ಎಷ್ಟಂತ ಮಾತಾಡುತ್ತಾ ಇರುವುದು? ಬಾಹ್ಯ ರೂಪಸ್ವರೂಪಗಳೂ ಕಡುಲೌಕಿಕ ಮಂದಿ ಮೆಹನತ್ತುಗಳೂ ಸಾಕು ಎಂದೆನಿಸಿತು. ಬಹುಶಃ ಸಮೃದ್ಧವಾಗಿ ಮನಸಾರೆ ಪಾಠ ಮಾಡುವ ಮೂಲಕ ನನ್ನೆಲ್ಲ ಮಾತುಗಳು ಖಾಲಿಯಾಗುತ್ತಿದ್ದ ದಿನಮಾನಗಳಲ್ಲಿ ಅಲ್ಲಿ ಇಲ್ಲಿ ಕರೆಯುತ್ತಿದ್ದ ಭಾಷಣೋಪನ್ಯಾಸಗಳೂ ಸೇರಿ ನನಗೆ ಮಾತಿನ ಮೇಲೆ ಅಲರ್ಜಿ ಹುಟ್ಟಲು ಶುರುವಾಯಿತೆನಿಸುತ್ತದೆ. ಜೊತೆಗೆ ಮನುಷ್ಯರ ಸೈಕಾಲಜಿ ಅರ್ಥವಾಗುತ್ತಿದ್ದ ಹೊತ್ತು ಕೂಡ. ನನ್ನ ಮಾತಿನ, ಭಾಷಣದ ಅಭಿಮಾನಿಗಳು ಸಹ ಹುಟ್ಟಿಕೊಂಡರು. ಮುಖ್ಯವಾಗಿ ಚೆನ್ನಾಗಿ ಮಾತಾಡುತ್ತಾರೆಂದೋ ಕರೆದಾಕ್ಷಣ ಒಪ್ಪಿಕೊಂಡು ಬರುತ್ತಾರೆಂದೋ ಹೇಳುವಲ್ಲಿ ಇರುವ ಸರಳತೆಯೇ ನನಗೆ ಸಮಸ್ಯೆಯಾಗಿರಬೇಕು. ಸಂಘಟಕರು ಇಷ್ಟಪಟ್ಟು ಕರೆಯುತ್ತಿದ್ದುದು ನಿಜವಾಗಿದ್ದರೂ ಶಿಷ್ಟಾಚಾರದ ನೆಪದಲ್ಲಿ ಅಸಾಹಿತ್ಯಕ ಮಾತುಗಳು ವಿಜೃಂಭಿಸುವಾಗ ಕೇಳಿಸಿಕೊಂಡು ಕುಳಿತುಕೊಳ್ಳುವ ನನ್ನ ತಾಳುಮೆಯೂ ಕರಗಿ, ಸಾರ್ವಜನಿಕ ಮಾತು ಸಾಕೆನಿಸಿರಬೇಕು. ‘ಬಹಿರ್ಮುಖ ಚಲನೆಯು ಇನ್ನೆಷ್ಟು ದಿವಸ?’ ಎಂದು ನನ್ನ ಮನಸೇ ಪ್ರಶ್ನಿಸಿರಬೇಕು. ಅಂತರ್ಯಾತ್ರೆ ಪ್ರಾರಂಭವಾಗುವ ಸೂಚನೆಯಿದು. ಹಾಗಾಗಿ ವೇದಿಕೆಯ ಮಾತು-ಕತೆಗಳು ಬೇಡವೆನಿಸಿ ದೂರವಾಗ ತೊಡಗಿದೆ. ಕಷ್ಟಪಟ್ಟು ಮಾತಾಡಲು ಕಲಿತ ನಾನು ಇಷ್ಟಪಟ್ಟು ಮಾತಾಡುವ ಹೊತ್ತಿಗೇನೇ ಮಾತು ಬೇಸರವೆನಿಸತೊಡಗಿದ್ದು ನನ್ನ ಜೀವನದ ಬಹು ದೊಡ್ಡ ವಿಸ್ಮಯ ಮತ್ತು ವಿಪರ್ಯಾಸ! ಹೊಳೆಗೆರಡು ದಡವಿರುವಂತೆ, ಮಾತಿನ ತೀರ ನನ್ನ ಬದುಕಿನ ಆಚೆ ಮತ್ತು ಈಚೆ! ಆದರೆ ಆ ದಡಕೂ ಈ ದಡಕೂ ಎಷ್ಟೊಂದು ವ್ಯತ್ಯಾಸ! ಒಂದರದು ಬೇಕೆಂಬ ಹುಂಬತನ; ಇನ್ನೊಂದರದು ಸಾಕೆಂಬ ಸಾಚಾತನ. ಯಾವುದೇ ವಿವಾದಾಸ್ಪದ ಹೇಳಿಕೆ, ಮಾತು, ಬರೆಹಗಳು ನನ್ನಿಂದ ಅಚಾನಕ್ಕಾಗಿಯೂ ಉದುರಿದವಲ್ಲ. ಯಾರನ್ನೋ ಟಾರ್ಗೆಟ್ಟು ಮಾಡಿಕೊಂಡು ಮಾತಾಡಿ, ‘ನಿಂತ ನೀರಿಗೆ ಕಲ್ಲೆಸೆಯುವ ಬುದ್ಧಿ’ಯೂ ನನಗಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಮಾತು ಸಾಕೆನಿಸಿತು. ‘ಬರೆಹದಲಿ ಮಾತಾಡು; ಬಾಯಲಲ್ಲ! ಕರುಳಿಂದ ಬರೆದುಬಿಡು; ಬೆರಳಲಲ್ಲ!!’ ಎಂಬುದು ನನ್ನ ಅಜೆಂಡಾ ಆಯಿತು. ಮಾತು ತರುವ ಮತ್ತು ತರಬಹುದಾದ ಮಾರುತಗಳನ್ನೋ ಅದನು ಉಪಶಮನಗೊಳಿಸಲು ಮಾಡುವ ಸರ್ಕಸ್ಸುಗಳನ್ನೋ ನಾನು ಇಷ್ಟಪಡುವುದಿಲ್ಲ ಜೊತೆಗೆ ಇದು ನನ್ನ ಜಾಯಮಾನ ಅಲ್ಲ ಎಂಬುದು ಮನವರಿಕೆ ಆಯಿತು. ಇಂಥ ಹೊತ್ತಲ್ಲೇ ನನಗೆ ತುಂಬ ಮಾತಾಡುವ ಜನರು ಇಷ್ಟವಾಗದೇ ಕಷ್ಟವಾಗತೊಡಗಿದರು. ತಮ್ಮನ್ನು ತಾವೇ ಹೊಗಳಿಕೊಳ್ಳುವುದು, ಇತರರನ್ನು ನಿಂದಿಸುವುದು, ರಾಜಕಾರಣ ಮಾತಾಡುವುದು, ಹರಟೆ ಹೊಡೆಯುವ ನೆಪದಲ್ಲಿ ಯಾರದೋ ಖಾಸಗೀ ಸಂಗತಿಗಳನ್ನು ವ್ಯಾಖ್ಯಾನಿಸುವುದು ಘನತೆಯೂ ಅಲ್ಲ; ಮಮತೆಯೂ ಅಲ್ಲ ಎಂಬುದು ಮನದಟ್ಟಾಗ ತೊಡಗಿತು. ‘ಬೇರೊಬ್ಬರೊಂದಿಗೆ ಮಾತಾಡುವುದಕಿಂತ ನನ್ನೊಳಗೆ ಮಾತಾಡಿಕೊಳ್ಳುವ ದರ್ದು ಇದೆ’ ಎಂಬುದೇ ನಿಜ ಜ್ಞಾನೋದಯ. ಇದಕ್ಕೆ ಬೇಕಾದುದು ಮಾತಲ್ಲ; ಮೌನ. ಬರೀ ಮೌನವಲ್ಲ; ಅರ್ಥಪೂರ್ಣ ಮೌನ. ರಮಣರು ಹೇಳುವ ಮೌನ. ಇದು ನಮ್ಮನ್ನು ಪಕ್ವತೆಯತ್ತ ಕೊಂಡೊಯ್ಯುತ್ತದೆ. ನಮಗೆ ಗೊತ್ತೋ ಗೊತ್ತಿಲ್ಲದೆಯೋ ಮಾತು ಎಂಬುದು ‘ಜ್ಯೋತಿರ್ಲಿಂಗ’ವಾಗದೇ ಸುಟ್ಟುರಿಯುವ ‘ಬೆಂಕಿಕೆಂಡ’ವಾಗಿ ಬಿಡಬಹುದಾದ ಅಪಾಯವೂ ಇದೆ. ಇಬ್ಬರು ಮೊಸರಿನವರು ಮಾತಾಡುವಾಗ ಇಲ್ಲದ ಆತಂಕವು ಓರ್ವ ಹಾಲಿನವರು ಮತ್ತು ಓರ್ವ ಮೊಸರಿನವರು ಮಾತಾಡುವಾಗ ಇರುತ್ತದೆಂಬ ತಿಳಿವು ಬಂದ ಮೇಲೆ ‘ಮಾತಿಗೆ ಅರ್ಥವಿಲ್ಲ’ ಎನಿಸಿತು. ಏಕೆಂದರೆ ಹಾಲು, ಮೊಸರಿನ ಮೇಲೆ ಬಿದ್ದರೂ ಮೊಸರು ಹಾಲಿನ ಮೇಲೆ ಬಿದ್ದರೂ ಕೆಡುವುದು ಹಾಲೇ! ಮುಖ್ಯವಾಗಿ ಕೀಳರಿಮೆಯಿಂದಾಗಿ ಮಾತಾಡಲು ಕಷ್ಟ ಪಡುತ್ತಿದ್ದ ಕಾಲದಿಂದ ಹೊರಬಿದ್ದ ನಾನು, ಇದೀಗ ಮತ್ತದೇ ಮಹಾಮೌನಕ್ಕೆ ಜಾರುತ್ತಿದ್ದೇನೆಂಬುದು ದೃಢವಾಯಿತು. ಚಿಕ್ಕಂದಿನದು ಮಾತಾಡಲು ಆಗದೇ ಹೋದ ಆದರೆ ಮಾತು ಇಷ್ಟವಾಗಿದ್ದ ಘಟ್ಟ. ಈಗಿನದು ಅದಕ್ಕೆ ಉಲ್ಟಾ! ಮಾತು ಬಂದರೂ ಬೇಡವೆಂಬ ಬೇಸರ. ಈ ಎರಡೂ ಅವಸ್ಥೆಗಳ ನಡುವೆ ನನ್ನ ಬದುಕು ಚಾಚಿಕೊಂಡಿತು. ಎರಡು ದಡಗಳ ನಡುವೆ ಹರಿವ ನದಿಯ ಸೆಳವಿನಂತೆ. ಒಮ್ಮೊಮ್ಮೆ ಮನೆಯಲ್ಲಿ ಕೂಡ ಕೈಸನ್ನೆ, ಕಣ್ಸನ್ನೆಗಳಿಂದ ನನ್ನವಳಿಗೆ ಉತ್ತರ ಕೊಟ್ಟಾಗ, ತಮಾಷೆಗೆ ಕಿಚಾಯಿಸುತ್ತಾಳೆ: ‘ಎಲ್ಲಿ ಹೋಗುತ್ತದೆ ನಿಮ್ಮದು ಮೂಗುವಂಶ’ ಎಂದು! ನನ್ನ ಮಡದಿಗೆ ಮಾತು ಇಷ್ಟ, ಅವಳು ಮಾತಾಡುವುದನ್ನು ಕೇಳಿಸಿಕೊಳ್ಳುವುದು ನನಗೆ ಇಷ್ಟ.
ಸದಾ ವಟಗುಟುವ ಮನವನು ಸುಮ್ಮನಾಗಿಸಲು ಧ್ಯಾನಕೆ ಕೂರಬೇಕಂತೆ. ನನ್ನ ಅನಿಸಿಕೆಯ ಪ್ರಕಾರ ಮೊದಲು ಹೊರಗಿನ ಮಾತನ್ನು ಕಡಮೆ ಮಾಡಬೇಕು. ವಯಸಾದ ಮೇಲೆ ಹಲವರು ಮಾತಿನ ಚಪಲಕ್ಕೆ ಬೀಳುತ್ತಾರೆ. ತಮ್ಮ ಕಾಲದ ವೈಭೋಗ ವೈಮನಸ್ಸುಗಳನ್ನು ಎದುರಿನವರ ಮುಂದೆ ಹರವಿ, ಹಗುರವಾಗುತ್ತಾರೆ. ಇನ್ನು ಕೆಲವರು ಮಾತನ್ನು ಕಡಮೆ ಮಾಡುತ್ತಾರೆ. ಬಹಿರ್ಮುಖ ಚಲನೆಯನ್ನು ನಿಲ್ಲಿಸಿ ಅಂತರ್ಮುಖಿಗಳಾಗುತ್ತಾರೆ. ಬದುಕಿನ ಸತ್ಯಗಳು ಅರ್ಥವಾಗುತ್ತಾ ಹೋದ ಹಾಗೆ ನಾವೇ ಮಾತನ್ನು ಕಡಮೆ ಮಾಡುತ್ತೇವೆ. ಮಾತಾಡಬಾರದು ಎಂಬುದಕಿಂತ ತಂತಾನೇ ಇಂಥ ಅವಸ್ಥೆಯಲ್ಲಿ ಮಾತುಗಳು ಮಹಾಮೌನದತ್ತ ಮುಖ ಮಾಡುತ್ತವೆ. ನಮ್ಮ ಆಸ್ಥೆ ಆಸಕ್ತಿಗಳು ಬೇರೊಂದಾದಾಗ, ಲೌಕಿಕ ಆಗುಹೋಗುಗಳು ತಮ್ಮ ಆಕರ್ಷಣೆಗಳನ್ನು ಕಳೆದುಕೊಂಡಾಗ ನಾವು ಸುಮ್ಮನಿರಲು ಶುರು ಮಾಡುತ್ತೇವೇನೋ! ಒಂದಂತೂ ಸತ್ಯ: ವಂಶಪಾರಂಪರ್ಯವಾಗಿ ಬಂದ ತಲೆಶೂಲೆಯನ್ನು ನಾನು ಪ್ರತಿದಿನ ಅನುಭವಿಸುವಾಗ ‘ಯಾರೂ ಬೇಡ; ಏನೂ ಬೇಡ; ಯಾವುದೂ ಬೇಡ’ ಎಂದೆನಿಸುತ್ತಿರುತ್ತದೆ. ಮಾತಿರಲಿ, ಚಿಕ್ಕಪುಟ್ಟ ಶಬ್ದವೂ ಅಸಹನೀಯವಾಗುವ ಕ್ಷಣದಲ್ಲಿ ಮಾತಂತೂ ಬಲು ದೂರ. ಇದರಿಂದಲೋ ಏನೋ ಮಾತು ನನ್ನ ಪಾಲಿಗೆ ‘ದೋಣಿಯ ತೂತು’ ಎಂದೆನಿಸಿಬಿಟ್ಟಿದೆ.
ಆಗ ‘Be quite, that is truth; Be still, that is God’ ಎಂಬ ರಮಣ ಮಹರ್ಷಿಗಳ ಮೌನದ ಮಹಾಕಾವ್ಯದಲಿ ನೆಲೆಸಲು ಮನ ಬಯಸುತ್ತದೆ. ಹಾಗಂತ ಮಾತಾಡಲೇ ಬಾರದೆಂದೇನಲ್ಲ. ಅಗತ್ಯ ಮತ್ತು ಅನಿವಾರ್ಯಗಳು ಎದುರಾದಾಗ ಮಾತಾಡಲೇ ಬೇಕು; ಇಲ್ಲದಿದ್ದರೆ ಅನಾಹುತಕ್ಕೆ ದಾರಿ. ‘ಮಾತಾಡುವ ಕಾಯಕ’ದಲ್ಲಿರುವ ನಾನು ಪಾಠ ಮಾಡುವಾಗ ಮಾತಾಡಲೇಬೇಕು. ಸಹೋದ್ಯೋಗಿಗಳೊಂದಿಗೆ, ಅಧಿಕಾರಿಗಳೊಂದಿಗೆ, ಕಲಿಕಾರ್ಥಿಗಳೊಂದಿಗೆ ಸಂವಹನಿಸುವಾಗ ಮಾತು ಬೇಕೇ ಬೇಕು. ಇಲ್ಲದಿದ್ದರೆ ಅದು ಅಹಂಕಾರವೆಂದೋ ಕರ್ತವ್ಯಲೋಪವೆಂದೋ ಎನಿಸಿಕೊಳ್ಳುತ್ತದೆ. ಉಳಿದಂತೆ ಮಾತಿನ ಅಗತ್ಯ ಇಲ್ಲದ ಸಂದರ್ಭದಲ್ಲೂ ಮಾತಾಡುವುದು ತಪ್ಪು ಎಂದೆನಿಸಿಬಿಟ್ಟಿದೆ. ಹಾಗೇನಾದರೂ ಮಾತಾಡಿ ಬಿಟ್ಟರೆ ದಿನವೆಲ್ಲಾ ಕೊರಗುತ್ತೇನೆ. ‘ರಮಣರನ್ನು ಮರೆತೆನಲ್ಲ’ ಎಂದು ಅಲವತ್ತುಕೊಳ್ಳುತ್ತೇನೆ. ಓದುವುದು ಮತ್ತು ಬರೆಯುವುದು ಮಾತಿಗೆ ಪರ್ಯಾಯ ಎಂದಾಗಿ ಬಿಟ್ಟಿದೆ. ಬಾಲ್ಯಕಾಲದ ಮೂಗುತನವೀಗ ವೃದ್ಧಾಪ್ಯದ ಲಕ್ಷಣವಾಗಿರುವುದೇ ನನ್ನ ಜೀವನದ ವಿಶೇಷ. ಆದರೆ ಒಂದು ವ್ಯತ್ಯಾಸ. ಹಿಂದಿನದು ಮಾತು ಬಾರದ ದಿನ. ಈಗಿನದು ಮಾತು ಬಂದರೂ ಆಡಬೇಕೆನಿಸದ ದಿನ! ಜೀವನವೆಂಬ ಜೀವನದಿಯ ಈಚೆ ದಡದಿಂದ ಆಚೆ ದಡಕೆ ಸಾಗುತ್ತಿದ್ದೇನೆ; ಮಾತಿನ ದಡದಿಂದ ಮೌನದ ದಡಕೆ ಪಯಣಸುತ್ತಿದ್ದೇನೆ. ಕ್ರಿಯೆಗೆ ಪ್ರತಿ-ಕ್ರಿಯೆ ಆಗದೇ ಸಾಕ್ಷಿತ್ವವಾಗಲು ಹಾತೊರೆಯುತ್ತಿದ್ದೇನೆ. ತಪ್ಪೋ ಸರಿಯೋ ಗೊತ್ತಾಗುತಿಲ್ಲ! ‘Speak only when you feel that your words are better than your Silence’ ನಿಶ್ಶಬ್ದವನು ಇನ್ನಷ್ಟು ಸಿಂಗರಿಸುವಂತಿರಬೇಕು ನಮ್ಮ ಮಾತು; ಹಾಳುಗೆಡಹುವಂತಲ್ಲ! ಎಂಬುದರ ಸೊಗಸಿಗೆ ಮರುಳಾಗಿದ್ದೇನೆ. ಜೊತೆಗೆ ಎಷ್ಟು ಮಾತಾಡಿದರೂ ಅದೇನೂ ಮುಗಿಯುವುದಿಲ್ಲ; ಇನ್ನೂ ಇದ್ದೇ ಇರುತ್ತದೆ. ಅದನು ಹೇಳದೇ ಬಿಟ್ಟೆ; ಇದನು ಕೇಳದೇ ಬಿಟ್ಟೆ ಎಂದು ಪರಿತಪಿಸುತ್ತಲೇ ಇರುತ್ತೇವೆ. ಮೌನ ಹಾಗಲ್ಲ! ಅದೊಂದು ಆಧ್ಯಾತ್ಮಿಕ ಹತಾರ. ನಮ್ಮನು ವಿಮರ್ಶೆಗೂ ಅಂತರಾವಲೋಕನಕೂ ಒಡ್ಡುತ್ತದೆ. ವ್ಯಕ್ತಿತ್ವದ ಉನ್ನತೀಕರಣಕ್ಕೋ ಪಕ್ವತೆಯ ಕಡೆಗೋ ನೂಕುತ್ತದೆ. ಮುಖ್ಯವಾಗಿ ನೆಮ್ಮದಿಗೆ ದಾರಿಯಾಗುತ್ತದೆ. ಏನೇ ಮಾತಾಡಿದರೂ ‘ಮಾತು ಬೆಳ್ಳಿಯೇ; ಮೌನ ಬಂಗಾರವೇ!’ ನಮ್ಮ ಮೌನವನ್ನು ಅರ್ಥ ಮಾಡಿಕೊಳ್ಳಲಾಗದವರು ನಮ್ಮ ಮಾತನ್ನೂ ಅರ್ಥ ಮಾಡಿಕೊಳ್ಳಲಾರರು ಎಂಬ ಹೇಳಿಕೆಯಿದೆ. ಅದರಂತೆ ‘ಮೌನವೂ ಒಂದು ತೆರನಾದ ಮಾತೇ; ಅದು ತನ್ನ ಗರ್ಭದಲಿ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನಿರಿಸಿಕೊಂಡಿದೆ’ ಎಂದು ಅರಿಯಬೇಕಿದೆ. ಜೆ಼ನ್ ಒಗಟೊಂದರ ಮೂಲಕ ಈ ಬರೆಹಕ್ಕೊಂದು ವಿರಾಮ ನೀಡಲು ಬಯಸುವೆ: ಅದೇನೆಂದರೆ, ‘ನೀವು ಮಾತನಾಡುವಾಗ ಮೌನವಾಗಿರುತ್ತದೆ; ನೀವು ಮೌನವಾಗಿರುವಾಗ ಮಾತನಾಡುತ್ತದೆ’ ಇದೇನೆಂದು ಯಾರಿಗೂ ಕೇಳಲು ಹೋಗದೆ ನನ್ನಲೇ ಕೇಳಿಕೊಳ್ಳುತ್ತೇನೆ, ಮೌನವಾಗಿ, ಎಚ್ಚರಿದ್ದೇ ಧ್ಯಾನಸ್ಥವಾಗಿ!
ಡಾ. ಹೆಚ್ ಎನ್ ಮಂಜುರಾಜ್, ಮೈಸೂರು


