ಕಾದಂಬರಿ

ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 40

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ನಂದಾ ಹೇಳಿದಳು. “ಅದು ಸಹಜ ವಾರುಣಿ. ಮೊದಲನೇ ಸೆಮಿಸ್ಟರ್‌ನಲ್ಲಿ ಹೊಸಪರಿಸರಕ್ಕೆ ಹೊಸ ಸ್ನೇಹಿತರಿಗೆ ಹೊಂದಿಕೊಳ್ಳುವುದರಲ್ಲರ‍್ತೇವೆ. ಹೇಗೋ ಏನೋ ಅನ್ನುವ ಆತಂಕ ಕೆಲವರನ್ನು ನೋಡಿ ಆಶ್ಚರ್ಯ ಮತ್ತೆ ಕೆಲವರ ಬೋಲ್ಡ್ನೆಸ್ ನೋಡಿದಾಗ ನಾವು ‘ಗೂಬೆಗಳು’ ಅನ್ನಿಸತ್ತೆ.”
“ಹೌದು…… ಹೌದು.”

“ಎರಡನೇ ಸೆಮಿಸ್ಟರ್ ಬರುವ ವೇಳೆಗೆ ಪರಿಸರಕ್ಕೆ, ಸ್ನೇಹಿತರಿಗೆ ಹೊಂದಿಕೊಂಡಿರುತ್ತೇವೆ. ಆಗ ನಮ್ಮ ಓದು, ಪೇಪರ್ ಪ್ರಸೆಂಟೇಷನ್ ಇತ್ಯಾದಿ ವಿಚಾರಗಳು ಕಾಡುತ್ತವೆ. ‘ಈ ಕೋರ್ಸ್ ಮುಗಿಸ್ತೀವಾ?” ಅನ್ನುವ ಭಯ ಇರತ್ತೆ.”
“ಎಕ್ಸಾಕ್ಟ್ಲಿ……”
“ಮೂರನೇ ಸೆಮಿಸ್ಟರ್ ಬರುವ ಹೊತ್ತಿಗೆ ನಾವು ಹಳಬರಾಗಿರುತ್ತೇವೆ. ನಾವು ಹುಟ್ಟಿದಾಗಲಿಂದ ಇಲ್ಲೇ ಇದ್ದವೇನೋ ಎನ್ನುವ ಭಾವ ಮಾಡುತ್ತದೆ. ಜೊತೆಗೆ ನಮ್ಮನ್ನು ನಾವು ಗುರುತಿಸಿಕೊಂಡಿರುತ್ತೇವೆ. ಇವನು ಬುದ್ಧಿವಂತ, ಇವಳು ದಡ್ಡಿ, ಇವನು ಸೋಮಾರಿ, ಇವನು ಶೋಕಿಲಾಲ – ಇತ್ಯಾದಿ ನಿರ್ಧಾರಕ್ಕೆ ಬಂದರ‍್ತೇವೆ. ಇದು ನಮ್ಮದೇ ಮನೆ ಅನ್ನುವ ಹಾಗೆ ಕಾಲ ಕಳೆಯುತ್ತೇವೆ. ಆದ್ದರಿಂದ ಕಾಲ ಕಳೆಯುವುದೇ ಗೊತ್ತಾಗಲ್ಲ.”
“ತುಂಬಾ ಚೆನ್ನಾಗಿ ಹೇಳಿದ್ರಿ” ಅಂದ ಆರ್.ಜಿ.

“ನಾಲ್ಕನೇ ಸೆಮಿಸ್ಟರ್?”
“ಅಷ್ಟು ಹೊತ್ತಿಗೆ ನಾವೆಲ್ಲಾ ಚಿರಪರಿಚಿತರಾಗಿರುತ್ತೇವೆ. ನಮ್ಮ ಸಾಮಾಜಿಕ ಹಿನ್ನೆಲೆ, ಆರ್ಥಿಕ ಹಿನ್ನಲೆ ಗೊತ್ತಿರುತ್ತದೆ. ಮುಂದಿನ ಗುರಿ ಸ್ಪಷ್ಟವಿರುತ್ತದೆ. ಭವಿಷ್ಯದ ಬಗ್ಗೆ ಕನಸು ಕಾಣುತ್ತಾ ಆರಾಮವಾಗಿರುತ್ತೇವೆ. ಸಾಮಾನ್ಯವಾಗಿ ಆ ವೇಳೆಗೆ ಯಾರು ಯಾರಿಗೆ ಇಷ್ಟ ಅನ್ನುವ ಸ್ಪಷ್ಟತೆ ಇರುತ್ತದೆ. ಆದ್ದರಿಂದ ನಮಗೆ ದಿನಗಳು ಓಡುವುದೇ ಗೊತ್ತಾಗಲ್ಲ. ಅಯ್ಯೋ ಈ ಪರಿಸರ ಬಿಟ್ಟು ಹೋಗಬೇಕಲ್ಲ’ ಅನ್ನುವ ದುಃಖವೂ ಇರುತ್ತದೆ.”
“ನಂದಾ ನೀನು ಹೇಳಿದ್ದು ಸರಿ. ನನಗೂ ಹೀಗೆಲ್ಲಾ ಅನ್ನಿಸ್ತಿತ್ತು. ಆದರೆ ನಿನ್ನಷ್ಟು ಚೆನ್ನಾಗಿ ಹೇಳಕ್ಕೆ ಬರಲ್ಲ” ಎಂದ ಅನಿಕೇತ್.

“ವರೂ ಆರ್.ಜಿ. ನಾನು ಈಗಲೇ ಹೇಳ್ತಿದ್ದೇನೆ. ನೀವು ಯಾವ ಕಾರಣಕ್ಕೂ ಮದುವೆಗೆ ತಪ್ಪಿಸುವಂತಿಲ್ಲ. ಮಂಗಳೂರಿನಲ್ಲೇ ಮದುವೆ. ಆ ವೇಳೆಗೆ ನಿಮ್ಮ ಪರೀಕ್ಷೆ ಮುಗಿದು ಫಲಿತಾಂಶ ಬಂದಿರಬಹುದು.”
“ಖಂಡಿತಾ ಬಂದೇ ರ‍್ತೀವಿ.”
“ಕೆಲಸದ ಬಗ್ಗೆ ಸೀರಿಯಸ್ ಆಗಿ ಟ್ರೈ ಮಾಡಿ “
“ಆರಾಧ್ಯ ಸರ್ ವಾರುಣಿಯವರಿಗೆ ಕೆಲಸತೊಡಿಸುವುದಾಗಿ ಹೇಳಿದ್ದಾರೆ. ನನಗೂ ಹೇಳಿದ್ರು. ನಾನು ನೆಗ್ಲೆಕ್ಟ್ ಮಾಡಿಬಿಟ್ಟೆ.”
“ನೀವು ಅವರ ಹತ್ತಿರ ಮಾತಾಡಿ. ಮೈಸೂರಲ್ಲಿ ಸೆಟ್ಲ್ ಆಗೋದೂಂತ ತೀರ್ಮಾನಿಸಿದ್ದೀಯಾ ವರು?”
“ನನಗೆ ಇಲ್ಲಿ ಕೆಲಸ ಸಿಕ್ಕಿದರೆ ಅಮ್ಮ, ಅಪ್ಪ ನನ್ನ ಜೊತೆ ಬಂದರ‍್ತಾರೆ. ಶಂಕರ ಇಲ್ಲೇ ಪಿ.ಯು.ಸಿ ಓದ್ತಾನೆ. ಈಗಾಗಲೇ ಜಾನಕಿ ಆಂಟಿ ಸುಧಾಕರ್ ಚಿಕ್ಕಪ್ಪ ಬೇರೆ ಊರಿಗೆ ಟ್ರಾನ್ಸ್ಫರ್‌ಗೆ ಪ್ರಯತ್ನಿಸ್ತಿದ್ದಾರೆ.”
“ಉಳಿದವರು?”
“ದೇವಕಿ ಅತ್ತೆ-ಅವರ ಗಂಡ ಬಹುಶಃ ಮಡಿಕೇರಿಗೆ ಹೋಗ್ತಾರೇಂತ ಕಾಣತ್ತೆ. ಶೋಭಾ ಚಿಕ್ಕಮ್ಮ-ಶಿವೂ ಚಿಕ್ಕಪ್ಪಂಗೆ ಬೆಂಗಳೂರು ಬಿಡಲು ಇಷ್ಟವಿಲ್ಲ.”

“ನೀವು ಆರ್.ಜಿ?”
“ನಾನು ಬೆಂಗಳೂರು ಅಥವಾ ಮೈಸೂರಲ್ಲಿ ಸೆಟ್ಲ್ ಆಗ್ತೀನಿ. ನಮ್ತಂದೆ-ತಾಯಿ ನನ್ನ ಜೊತೆ ಬಂದಿರ್ತಾರೆ. ನಮ್ಮ ದೊಡ್ಡಪ್ಪಂದಿರು ಬೆಂಗಳೂರಿನಲ್ಲಿ ಮನೆಗಳನ್ನು ಕೊಳ್ಳಬೇಕೂಂತಿದ್ದಾರೆ. ಕೀರ್ತಿಯ ಬಗ್ಗೆ ಗೊತ್ತಿಲ್ಲ. ಧರ್ಮ ಹಾಸನದಲ್ಲಿ ಮನೆ ಮಾಡ್ತಿದ್ದಾನೆ. ಉಳಿದವರು ಎಷ್ಟು ದಿನ ಆ ಹಳ್ಳಿಯಲ್ಲರ‍್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಜೇನುಗೂಡಿಗೆ ಕಲ್ಲು ಬಿದ್ದಂತಾಗಿದೆ….” ಆರ್.ಜಿ. ಮಾತಿನಲ್ಲಿ ನೋವಿತ್ತು.
“ನೀವು ಯಾಕೆ ಅಷ್ಟು ಬೇಜಾರು ಮಾಡಿಕೊಳ್ತೀರ. ನೀವೇನು ಜಗಳವಾಡಿಕೊಂಡು ಬೇರೆ ಆಗ್ತಿದ್ದೀರಾ? ಪರಿಸ್ಥಿತಿಗೆ ತಕ್ಕ ಹಾಗೆ ಮನಸ್ಥಿತಿ ಬದಲಾಯಸಿಕೊಳ್ಳಲೇ ಬೇಕಲ್ವಾ? ನಿಮ್ಮ ತಂದೆ-ನಿಮ್ಮ ದೊಡ್ಡಪ್ಪಂದಿರು ಈಗಲೂ ಚೆನ್ನಾಗಿದ್ದಾರೆ. ನೀವು ಯಾರೂ ಜಗಳವಾಡಿಲ್ಲ. ನಿಮ್ಮ ಅಣ್ಣ ಧರ್ಮರಾಜ್ ಹೆಂಡತಿಗೋಸ್ಕರ ಹಾಸನಕ್ಕೆ ಹೋಗ್ತಿದ್ದಾರೆ” ವರು ಅವನಿಗೆ ಅರ್ಥವಾಗುವಂತೆ ಹೇಳಿದಳು.

“ಅದು ತಪ್ಪಲ್ವಾ?”
“ಹೇಗೆ ತಪ್ಪು? ಆ ಹುಡುಗಿ ಓದಲು ಇಷ್ಟಪಟ್ಟಿರುವುದು ತಪ್ಪಾ? ಅವಳು ಬುದ್ಧಿವಂತೆ ಅನ್ನಿಸತ್ತೆ. ಭವಿಷ್ಯದ ಬಗ್ಗೆ ಆಕೆಗೆ ಯೋಚನೆಯಿದೆ. ನಾಳೆ ಡೈರಿ ವ್ಯಾಪಾರದಲ್ಲಿ ನಷ್ಟವಾದರೂ ಅವರ ಸಂಪಾದನೆ ಇರತ್ತದಲ್ವಾ?”
“ನನಗೆ ಇದು ಹೊಳೆಯಲೇ ಇಲ್ಲ.”
“ಆ ಹುಡುಗಿ ಕೆಲಸ ವಿದ್ಯೆಗೆ ಬೆಲೆ ಕೊಡ್ತಿಲ್ಲ. ನಿಜವಾಗಿ ನಿಮ್ಮಣ್ಣನ್ನ ಪ್ರೀತಿಸ್ತಿದ್ದಾಳೆ ಅನ್ನಿಸತ್ತೆ” ನಂದಾ ಹೇಳಿದಳು.
“ಆರ್.ಜಿ. ನೀವು ನಾನು ಇವರ ರೀತಿ ಯೋಚಿಸಲು ಸಾಧ್ಯವಿಲ್ಲ. ಬನ್ನಿ ಹೊರಡೋಣ.”

ಅವರು ಊಟ ಮಾಡಿಕೊಂಡು ಊರಿಗೆ ಹೊರಟರು. ಆರ್.ಜಿ. ವರು ಪರೀಕ್ಷೆ ಸಿದ್ಧತೆಯಲ್ಲಿ ಮುಳುಗಿದರು. ಅಮೃತಾ, ಬಕುಳಾ, ವರುಮನೆಗೇ ಓದಲು ಬರುತ್ತಿದ್ದರು. ಆರ್.ಜಿ. ಮಾತ್ರ ತನ್ನ ಪಾಡಿಗೆ ತಾನು ಓದಿಕೊಳ್ಳುತ್ತಿದ್ದ. ಚಂದ್ರಾವತಿ ತಮ್ಮನ ಮನೆಯಿಂದ ಊಟ, ತಿಂಡಿ ತರಿಸಿಕೊಳ್ಳುತ್ತಿದ್ದ. ಅಪರೂಪಕ್ಕೆ ಚಂದ್ರಾವತಿ ಮನೆಗೆ ಬರುತ್ತಿದ್ದ.
“ಆರ್.ಜಿ. ಸ್ವಲ್ಪ ದಿನ ಅಮ್ಮನ್ನ ಕರೆಸಿಕೊಳ್ಳಬಾರದಾ?”
“ಅಮ್ಮ ಆಮೇಲೆ ಇಲ್ಲಿಗೆ ಬರಲೇಬೇಕಲ್ಲವಾ? ಅವರಿಗೆ ಶಾರದಾ ದೊಡ್ಡಮ್ಮ, ಗಿರಿಜಾ ಅತ್ತಿಗೇಂದ್ರೆ ತುಂಬಾ ಇಷ್ಟ. ಅವಕಾಶವಿರುವಷ್ಟು ದಿನ ಒಟ್ಟಿಗೆ ಇರಲಿ ಬಿಡಿ. ನನಗೇನೂ ತೊಂದರೆಯಾಗ್ತಿಲ್ಲ. ಆರಾಮವಾಗಿ ಓದಿಕೊಂಡಿದ್ದೇನೆ.”
“ಊಟ, ತಿಂಡಿ……..”
“ನಿಮ್ಮ ತಮ್ಮನೇ ಕಳಿಸ್ತಿದ್ದಾರೆ. ನಾನು ಈ ಸಲ ಫಸ್ಟ್ ರ‍್ಯಾಂಕ್ ತೆಗೆದುಕೊಂಡರೆ ಆರಾಧ್ಯಸರ್ ಒಳ್ಳೆಯ ಕಡೆ ಕೆಲಸಕೊಡ್ತಾರಂತೆ.”
“ಹಾಗಾದರೆ ನಿನ್ನ ಓದಿಗೆ ನಾನು ಅಡ್ಡಿ ಬರಲ್ಲ.”

ಮೊದಲ ವರ್ಷದ ಎಂ.ಎ ಅವರಿಗೆ ವೆಲ್‌ಕಂ, ಕೊನೆಯ ವರ್ಷದವರಿಗೆ ಸೆಂಡಾಫ್, ಸ್ಟಾಫ್‌ನಿಂದ ಸೆಂಡಾಫ್, ಸ್ಟೂಡೆಂಟ್ಸ್ ಇಂದ ಗುರುವಂದನೆ ಕಾರ್ಯಕ್ರಮಗಳಲ್ಲಿ ಎಲ್ಲರೂ ಮುಳುಗಿಹೋದರು.
ಪರೀಕ್ಷೆಗಳು ಮುಗಿದವು. ವಿದ್ಯಾರ್ಥಿಗಳು ತಮ್ಮ ತಮ್ಮ ಊರಿಗಳಿಗೆ ಹೊರಟರು. ಹೊರಡುವ ಮೊದಲು ಆರ್.ಜಿ. ಮತ್ತು ವಾರುಣಿ ಆರಾಧ್ಯಸರ್ ಅವರನ್ನು ಭೇಟಿ ಮಾಡಿದರು.
“ವಾರುಣಿ ನಿನ್ನ ಕೆಲಸದ ಗ್ಯಾರಂಟಿ ಕೊಡಬಲ್ಲೆ. ಯಾಕೇಂದ್ರೆ ನನ್ನ ವಿದ್ಯಾರ್ಥಿಯ ಕಾಲೇಜ್ ಅದು. ಅವರ ತಂದೆ ನನಗೆ ಚೆನ್ನಾಗಿ ಪರಿಚಯ.”
“ನೀವು ಹೇಳಿದ ಮೇಲೆ ಕೊಟ್ಟೇ ಕೊಡುತ್ತೇನೆ. ಆದರೆ ಅವರು ಒಳ್ಳೆಯ ವರ್ಕರ್ ಆಗಿರಬೇಕು” ಅಂದಿದ್ದಾರೆ. “ನನಗೆ ನಿನ್ನ ಮೇಲೆ ನಂಬಿಕೆಯಿದೆ. ಆ ನಂಬಿಕೆ ಉಳಿಸಿಕೋ.”
“ಥ್ಯಾಂಕ್ಸ್ ಸರ್.”
“ರಾಮ್‌ಗೋಪಾಲ್ ನಾನು ಬೇರೊಂದು ಕಾಲೇಜ್‌ನಲ್ಲಿ ವಿಚಾರಿಸ್ತಿದ್ದೇನೆ. ನೋಡೋಣ” ಎಂದರು.
“ನೀವೆಲ್ಲರೂ ಊರಿಗೆ ಹೋದರೆ ನನಗೆ ತುಂಬಾ ಬೇಜಾರಾಗತ್ತೆ” ಚಂದ್ರಾವತಿ ಒದ್ದಾಡಿದರು.
“ಅದೃಷ್ಟ ಚೆನ್ನಾಗಿದ್ದರೆ ನಾವು ವಾಪಸ್ಸು ಬರ‍್ತೀವಲ್ಲಾ” ಎಂದಳು ವರು. ಊರಿಗೆ ಹೊರಡುವ ಮೊದಲು ವರು ಪಾರ್ವತಿ ಅತ್ತೆಯ ಮನೆಗೆ ಹೇಳಿ ಬರಲು ಹೊರಟಳು.
“ನಾಳೆ ಬೆಳಿಗ್ಗೇನೇ ಬಾ, ನನಗೆ ರಜವಿದೆ” ಎಂದಳು ರೇಖಾ.
“ಆಗಲಿ ಬರ‍್ತೀನಿ” ಎಂದಳು ವರು.

ಮರು ದಿನ ಬೆಳಿಗ್ಗೆ ತಿಂಡಿತಿಂದುಕೊಂಡು ಅವಳು ನಾಗರಾಜನ ಮನೆಗೆ ಹೊರಟಳು. ಮನೆ ಈಗ ತುಂಬಾ ಚೆನ್ನಾಗಿ ಕಾಣುತ್ತಿತ್ತು. ಪಾರ್ವತಿ ಅತ್ತೆ ಕೊಂಚ ಬಿಗಿಯಾಗೇ ಇದ್ದರು. ಸುಮಿ ಕಂಪ್ಯೂಟರ್ ಕಲಿಯುತ್ತಿದ್ದಳು.
“ನಾಗರಾಜ ಇಲ್ವಾ?”
“ಮಧ್ಯಾಹ್ನ ರಜ ಹಾಕಿ ಎರಡು ಗಂಟೆಗೆ ಬರ‍್ತಾರೆ. ಬಾ ಮಹಡಿಗೆ ಹೋಗೋಣ.”
“ಅತ್ತೆ ಏನೂ ಅನ್ನಲ್ವಾ?”
“ಅವರ ಬಾಯಿಗೆ ಮಗ ಬೀಗ ಹಾಕಿದ್ದಾರೆ.”
“ನಟು ಹೇಗಿದ್ದಾನೆ?”
“ಯಾಕೆ ನಿನಗೆ ವಿಚಾರ ಗೊತ್ತಿಲ್ವಾ?”
“ಇಲ್ಲ”
“ಅವನು ಅಂಗಡಿ ಇಟ್ಟಿದ್ನಲ್ಲಾ ಸಾಮಾನು ಕೊಂಡುಕೊಳ್ಳಲು ಒಂದು ಹುಡುಗಿ ಬರ‍್ತಿದ್ದಳು. ದೇವಿ ಅಂತ. ಬ್ರಾಹ್ಮಣರಲ್ಲ. ನನಗೆ ತಿಳಿದಂತೆ ಮೊದಲಿಯರು. ಕೊಂಚ ಕಪ್ಪು. ಕಾಲು ಎಳೆದೆಳೆದು ಹಾಕ್ತಿದ್ದಳು. ಇವರಿಬ್ಬರಿಗೂ ಲವ್ ಆಯ್ತು.”
“ನಮ್ಮ ನಟ್ಟು ಲವ್ ಮಾಡಿದ್ನಾ?”
“ನಟ್ಟೂಗೆ ತುಂಬಾ ಧೈರ್ಯ ಬಂದಿದೆ. ಮುಂದೇನಾಯ್ತು ಕೇಳು. ಅವರು ಬೆಂಗಳೂರಲ್ಲಿ ಬಟ್ಟೆ ಅಂಗಡಿ ಇಟ್ಟಿದ್ದಾರಂತೆ. ಮಗಳ ಬಣ್ಣ, ಸೊಟ್ಟ ಕಾಲು ಅವರಿಗೆ ಸಮಸ್ಯೆಯಾಗಿತ್ತು. ನಟ್ಟು ಮದುವೆಯಾಗ್ತೀನಿ ಅಂದ ತಕ್ಷಣ ಒಪ್ಪಿ ಮನೆಗೆ ಬಂದ್ರು.”
“ಅತ್ತೆ ಒಪ್ಪಿದರಾ?”
“ಕೂಗಾಡಿದರು. ‘ನೀನು ಅವಳನ್ನು ಮದುವೆಯಾಗುವುದಾದರೆ ಮನೆ ಬಿಟ್ಟು ಹೋಗು. ನನಗೂ ನಿನಗೂ ಯಾವ ಸಂಬಂಧವೂ ಇಲ್ಲ’ ಅಂದರು.”
“ಆಮೇಲೆ?”
“ಮೊದಲಿಯಾರ್ ‘ಬನ್ನಿ ಸರ್. ನೀವು ನಮ್ಮನೆ ಅಳಿಯನಾಗಿ ಮಗನ ತರಹ ಇರಿ’ ಅಂದರು. ನಟ್ಟು ಬೈ ಹೇಳಿ ಹೊರಟುಹೋದ.”
“ಮದುವೆ ಆಯ್ತಾ?”
“ಕಳೆದ ಭಾನುವಾರ ನಿಮಿಷಾಂಭ ದೇವಸ್ಥಾನದಲ್ಲಿ ಮದುವೆಯಾಯ್ತು. ನಾನು, ನಾಗರಾಜ್ ಹೋಗಿ ಬಂದೆವು.”
“ಆ ಹುಡುಗಿ ಯಾಕೆ ಮೈಸೂರಿನಲ್ಲಿದ್ದಳು?”
“ತಾತನ ಮನೆಯಲ್ಲಿ ಓದುತ್ತಿದ್ದಳು”

“ಸುಮಿ ವಿಚಾರ ಏನು?”
“ಅವಳಿಗೆ ಒಂದು ಹುಡುಗನ್ನ ನೋಡಿದ್ದೀವಿ. ಹುಡುಗ ಗೌರ‍್ನಮೆಂಟ್ ಶಾಲೆಯಲ್ಲಿ ಕ್ಲರ್ಕ್. ಜಾತಕ ಕೂಡಿದೆ. ಎರಡು ಮನೆಯವರೂ ಒಪ್ಪಿದ್ದಾರೆ. ನಟ್ಟು ಬೇರೆ ಜಾತಿ ಹುಡುಗೀನ್ನ ಮದುವೆಯಾಗಿರೋದ್ರಿಂದ ತೊಂದರೆ ಆಗಬಹುದು ಅಂತಿದ್ದಾರೆ.
“ಓ, ಈಗಿನ ಕಾಲದಲ್ಲಿ ಅದೆಲ್ಲಾ ನೋಡಲ್ಲ ಅನ್ನಿಸತ್ತೆ.”
“ಅವರ ವಿಚಾರ ಬಿಡು ಏನಂತಾರೆ ನಿಮ್ಮ ಆರ್.ಜಿ.”
“ಪರೀಕ್ಷೆ ಮುಗಿಯಿತು. ಊರಿಗೆ ಹೊರಟಿದ್ದಾರೆ. ರಿಸಲ್ಟ್ ಬಂದಮೇಲೆ ಕೆಲಸಕ್ಕೆ ಸರ‍್ತಾರೆ. ಅವರ ತಂದೆ-ತಾಯಿ ಬಂದು ಮಗನ ಜೊತೆ ಇರ‍್ತಾರಂತೆ.”
“ಅವರೇನೋ ಶಾಲೆ ಶುರುಮಾಡಬೇಕೂಂತಿದ್ರು ಅಲ್ವಾ?”
“ಹೊಸದಾಗಿ `ಶಾಲೆ ಶುರುಮಾಡುವುದಕ್ಕಿಂತ ಇರುವ ಸರ್ಕಾರಿ ಪ್ರೈಮರಿ ಶಾಲೆಗಳಿಗೆ ಸಹಾಯ ಮಾಡಬೇಕು’ ಅಂತ ಅಂದುಕೊಳ್ತಿದ್ದಾರೆ.”
“ತುಂಬಾ ಒಳ್ಳೆಯ ಯೋಜನೆ. ಅವರ ಊರಿನ ಹತ್ತಿರದ ಶಾಲೆಗಳಿಗೆ ಸಹಾಯ ಮಾಡ್ತಾರಾ?”
“ಇಲ್ಲ. ಯಾವುದೇ ಊರಿನ ಸರ್ಕಾರಿ ಶಾಲೆಯಾಗಲಿ ಸಹಾಯ ಮಾಡೋಣ ಅಂತಿದ್ರು. ಬಹುಶಃ ನಿನ್ನ ಸಹಾಯ ಬೇಕಾಗಬಹುದು.”
“ಖಂಡಿತಾ ಮಾಡ್ತೀನಿ. ನಮ್ಮ ಶಾಲೆಗೆ ನಾನು ಈಗಾಗಲೇ ಬಹಳ ಕೊಟ್ಟಿದ್ದೇನೆ. ನಮ್ಮ ಊರಿನವರೂ ನನ್ನ ಜೊತೆ ಸಹಾಯ ಮಾಡಿದ್ದಾರೆ. ನಮ್ಮ ಊರಿನ ಹತ್ತಿರದ ಎರಡು ಶಾಲೆಗಳ ಬಗ್ಗೆ ಹೇಳ್ತೀನಿ.”
“ಸರಿ ಹಾಗೇ ಮಾಡು.”

“ನಿನ್ನ ಮದುವೆ ವಿಚಾರ ಏನಾಯ್ತು?”
“ನಾನೇನೂ ಯೋಚನೆ ಮಾಡಿಲ್ಲ.”
“ನಿಮ್ತಂದೆ-ತಾಯಿ ಮೈಸೂರಿಗೆ ಬಂದು ನಿನ್ನ ಜೊತೆ ಬರ‍್ತಾರೇಂತ ನನಗೆ ಗೊತ್ತು. ನಿನಗೆ ಕೆಲಸ ಸಿಗುವ ಹಾಗಿರುವಾಗ ಶಂಕರನ ಓದು ಕಷ್ಟವಾಗಲ್ಲ ಅಲ್ವಾ?”
“ಹೌದು.”
“ಆರ್.ಜಿ.ನ್ನ ಮದುವೆಯಾಗು. ನಿಮ್ಮ ಜೋಡಿ ಚೆನ್ನಾಗಿದೆ. ನಿನ್ನನ್ನು ಅವನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ನಿನ್ನನ್ನು ಅವನು ತುಂಬಾ ಪ್ರೀತಿಸ್ತಾರೆ……….”
“ನಿನಗೆ ಹೇಗೆ ಗೊತ್ತು?”
“ಅವನು-ನಾಗರಾಜ ಆಗಾಗ್ಗೆ ಭೇಟಿಯಾಗ್ತಿರ‍್ತಾರೆ. ಆಗ ಅವನು ಮನಸ್ಸು ಬಿಚ್ಚಿ ಮಾತಾಡಿದ್ದಾರೆ. ನೀನೂ ಅವರನ್ನು ಇಷ್ಟಪಡ್ತಿದ್ದೀಯ ಅಂತ ನನಗೆ ಗೊತ್ತು.”
ಅವರು ಮಾತಾಡುತ್ತಿರುವಾಗಲೇ ನಾಗರಾಜನ ಆಗಮನವಾಯ್ತು.
“ಹೇಗಿದ್ದೀಯೋ?”
“ಫೈನ್. ಊರಿಗೆ ಯಾವಾಗ ಹೋಗ್ತೀಯಾ?”
“ನಾಳೆ ಹೋಗ್ತೀನಿ.”

“ಒಂದು ಪ್ರಶ್ನೆ ಕೇಳಲಾ?”
“ಕೇಳಪ್ಪ.”
“ನೀನು ರೇಖಾ ಯಾವಾಗ ಇಷ್ಟು ಫ್ರೆಂಡ್ಸ್ ಆದ್ರಿ?”
“ರೇಖಾ ಆಗಾಗ್ಗೆ ಫೋನ್ ಮಾಡ್ತಿರ‍್ತಾಳೆ. ಸಮಾನವಯಸ್ಸಿನವರು. ಸಮಾನ ವಯಸ್ಕರು ಫ್ರೆಂಡ್ಸ್ ಆಗುವುದರಲ್ಲಿ ಆಶ್ಚರ್ಯವೇನಿದೆ?”
ಅವನು ಜೋರಾಗಿ ನಕ್ಕ.
ಮರುದಿನ ಅವಳು ಉಳಿಯಬೇಕಾಯ್ತು. ಚಂದ್ರಾವತಿಯ ಮೇಲಿನ ಮನೆಯಲ್ಲಿದ್ದ ಅವಳ ಸ್ನೇಹಿತರು ಪಾರ್ಟಿ ಕೊಟ್ಟರು.
“ಮನೆ ಖಾಲಿ ಮಾಡ್ತಿದ್ದೀರಾ?”
“ಹೌದು ಕಣೆ. ನಾವ್ಯಾರೂ ಕೆಲಸಕ್ಕೆ ಸೇರಲ್ಲ. ಅಕಸ್ಮಾತ್ ಏನಾದರೂ ಮೈಸೂರಿಗೆ ಬಂದರೆ ಚಂದ್ರಾ ಆಂಟಿ ಮನೆ ಇದೆ……..”
“ಅದೇನೋ ನಿಜ.”

ರಾತ್ರಿ ಪಾರ್ಟಿಯಾಯಿತು. ಮರುದಿನ ಅವಳು ಆರ್.ಜಿ. ಜೊತೆ ಬೆಂಗಳೂರಿಗೆ ಹೊರಟಳು.
“ಆಗಾಗ್ಗೆ ಬರ‍್ತಿರು” ಎಂದರು ಚಂದ್ರಾವತಿ.
“ನಮ್ಮ ಮನೆಯಲ್ಲಿರವವರೆಲ್ಲಾ ಬೇರೆಯಾಗ್ತಿದ್ದೇವೆ. ಜಗಳ, ಕೋಪ, ತಾಪ, ನಗು-ಅಳು, ಸಂತೋಷ-ದುಃಖ ಎಲ್ಲವೂ ಇದ್ದರೂ ಆ ಜೀವನ ಒಂದು ತರಹ ಚೆನ್ನಾಗಿತ್ತು. ಅವಿಭಕ್ತ ಕುಟುಂಬದಲ್ಲಿ ಇದ್ದುದರಿಂದ ತುಂಬಾ ಕಲಿತೆ. ತಗ್ಗಿ-ಬಗ್ಗಿ ನಡೆಯುವುದರ ಜೊತೆಗೆ ಪ್ರತಿಭಟನಾ ಶಕ್ತಿಯನ್ನೂ ಬೆಳೆಸಿಕೊಂಡೆ. ಆ ಮನೆ ಬಿಡ್ತಾ ಇದ್ದೇವೆ. ಅಲ್ಲಿ ಇರಬೇಕೂಂತ ಆಸೆ ಆಗ್ತಿದೆ.”
“ನನಗೆ ನಿನ್ನ ಮನಸ್ಸು ಅರ್ಥವಾಗ್ತಿದೆ. ರಿಸಲ್ಟ್ ಬಂದಾಗ ಬಂದೇ ರ‍್ತೀಯ. ನನಗೂ ಕೆಲಸವಿರತ್ತೆ. ಸಿಂಧು, ಕೃತ್ತಿಕಾ ಮನೆ ಬಿಟ್ಟ ಮೇಲೆ ಮನೆ ಪೆಯಿಂಟ್ ಮಾಡಿಸಬೇಕು. ಅವರೆಲ್ಲಾ ಬರುವ ಹೊತ್ತಿಗೆ ಮನೆ ಸರಿಯಾಗಿರಬೇಕಲ್ಲವಾ?”

“ಓ ನಿಮ್ಮ ಹಳೆಯ ಟೆನೆಂಟ್ ಇಲ್ಲೇ ಬಂದು ಸೆಟ್ಲ್ ಆಗ್ತಾರಾ?”
“ಆ ವಿಚಾರ ಏನೂ ಹೇಳಲ್ಲ. ಅವರು ಬಂದ ಮೇಲೇ ಗೊತ್ತಾಗೋದು” ಎಂದರು ಚಂದ್ರಾವತಿ.
ಆರ್.ಜಿ. ಅವಳನ್ನು ಬಿಟ್ಟು ಬಂದು ಶಕುಂತಲಾ ಹಾಗೂ ಶ್ರೀನಿವಾಸ್‌ ರಾವ್‌ನ ಮಾತನಾಡಿಸಿಕೊಂಡು ಹೊರಟ.
“ಶರು ಬಂದಿದ್ದಾಳೆ. ದೇವಕಿ ಜೊತೆ ಹೊರಗೆ ಹೋಗಿದ್ದಾಳೆ.”
“ನಾನು ಅಪ್ಪನ್ನ ಕರೆದುಕೊಂಡು ಊರಿಗೆ ಹೊರಟಿದ್ದೇನೆ. ಕೀರ್ತಿನೂ ಬಂದಿದ್ದಾನಾ?”
“ಇಲ್ಲ. ಅವರು ಬಂದು ಬಿಟ್ಟು ಹೋದರು.”

ಶೋಭಾ, ಶಕುಂತಲಾ ವಾರುಣಿಯನ್ನು ಅಡುಗೆ ಮನೆಯಲ್ಲೇ ಕೂಡಿಸಿಕೊಂಡು ಮೈಸೂರಿನ ಸಮಾಚಾರ ಕೇಳಿದರು.
“ಅತ್ತಿಗೆ ಮನೆಗೆ ಹೋಗಿದ್ದೆಯಾ?”
“ಹುಂ. ಅಲ್ಲೇ ಊಟ ಮಾಡಿಕೊಂಡು ಬಂದೆ. ರೇಖಾ ತುಂಬಾ ಚೆನ್ನಾಗಿ ಮಾತಾಡಿಸಿದಳು. ಅತ್ತೆ ಮುಖ ಊದಿಸಿಕೊಂಡಿದ್ರು.”
“ಯಾಕೆ?”
“ನಿನಗೆ ಥ್ರಿಲ್ಲಿಂಗ್ ನ್ಯೂಸ್ ಗೊತ್ತಿಲ್ವಾ?”
“ಇಲ್ಲ”
“ದೇವಕಿ ಅತ್ತೇಗೂ ಗೊತ್ತಿಲ್ಲವಾ?”
“ಇಲ್ಲಾಂತ ಕಾಣತ್ತೆ.”
ವರು ನಟ್ಟು ವಿವಾಹ ಪ್ರಸಂಗ ಹೇಳಿದಳು.
“ಆಶ್ಚರ್ಯವಾಗಿದೆ. ನಟ್ಟೂಗೆ ಅಷ್ಟೊಂದು ಧೈರ್ಯ ಎಲ್ಲಿಂದ ಬಂತು?”
“ಅಕ್ಕ, ಅತ್ತಿಗೆ ಮೊದಲಿಂದಲೂ ಅವನನ್ನು ನೆಗ್‌ಲೆಕ್ಟ್ ಮಾಡ್ತಿದ್ರು. ನಾಗರಾಜನ ಮದುವೆ ಆದ ಮೇಲೆ ಅದು ಜಾಸ್ತಿಯಾಗಿತ್ತು. ಯಾವಾಗ ಅವನನ್ನು ಮೆಚ್ಚಿರುವ ಹುಡುಗಿ, ಶ್ರೀಮಂತ ಮಾವನ ಸಪೋರ್ಟ್ ಸಿಕ್ಕಿತೋ ಹೊರಟುಬಿಟ್ಟಾಂತ ಕಾಣತ್ತೆ.”
“ಒಳ್ಳೆಯದು ಮಾಡಿದ” ಎಂದರು ಶಕುಂತಲಾ.

“ನಾನೀಗ ಇನ್ನೊಂದು ಥ್ರಿಲ್ಲಿಂಗ್ ನ್ಯೂಸ್ ಹೇಳ್ತೀನಿ ಕೇಳು.”
“ಹೇಳಿ ಹೇಳಿ.”
“ದೇವಕಿ, ಅವಳ ಗಂಡ ಇಬ್ಬರಿಗೂ ಮಡಿಕೇರಿಗೆ ವರ್ಗ ಸಿಗುವಂತಿದೆ. ಅವರಿಬ್ರೂ ಒಂದು ಮಗೂನ್ನ ದತ್ತು ತೆಗೆದುಕೊಳ್ತಿದ್ದಾರೆ. ಯಾರೋ ಹಾಸನದ ಕಡೆಯವರ ಹೆಣ್ಣು ಮಗ. 2 ವರ್ಷವಂತೆ. ತಂದೆ-ತಾಯಿ ಇಬ್ಬರೂ ಆಕ್ಸಿಡೆಂಟ್‌ನಲ್ಲಿ ಹೋಗಿಬಿಟ್ಟಿದ್ದಾರಂತೆ. ಮಗುವಿನ ಕಡೆಯವರು ಸಾಕಲು ಸಿದ್ಧವಿಲ್ಲ. ಆ ಮಗು ಅಪ್ಪ-ಅಮ್ಮ ಅಂಗಡಿಗಳಲ್ಲಿ ಏನೋ ಕೆಲಸ ಮಾಡ್ತಿದ್ದರಂತೆ.”
“ಒಳ್ಳೆಯ ಕೆಲಸ.”
“ಮಗು ದತ್ತು ತೆಗೆದುಕೊಂಡ ಮೇಲೆ ಪಾರ್ವತಿ ಅತ್ತಿಗೆ ಮಡಿಕೇರಿಗೆ ಹೋಗಿ ಮಗೂನ್ನ ಸಾಕಿಕೊಡ್ತಾರಂತೆ.”
“ಸುಮಿ ಗತಿ?”
“ಅಣ್ಣ-ಅತ್ತಿಗೆ ನನ್ನನ್ನು ನಿನಗಿಂತ ಚೆನ್ನಾಗಿ ನೋಡಿಕೊಳ್ತಾರೆ” ಅಂದಳಂತೆ.
ವರು ಜೋರಾಗಿ ನಕ್ಕಳು.

ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45053
(ಮುಂದುವರಿಯುವುದು)

ಸಿ.ಎನ್. ಮುಕ್ತಾಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *