ಹೊರಗೆ ಕೆಲಸಕ್ಕೆ ಹೋಗುತ್ತಿದ್ದ ತಾಯಿಯು ಮನೆಗೆ ಬಂದಾಗ ತಾಯಿಯನ್ನು ಪುಟ್ಟ ಮಗುವೊಂದು ಕೇಳಿತು. “ಅಮ್ಮಾ, ಮನೆಯಿಂದ ಹೋಗುವಾಗ ಮನೆಯ ಅಲಮಾರಿಗಳ ಬೀಗದಕೈಗಳನ್ನು ನೀನೇ ತೆಗೆದುಕೊಂಡು ಹೋಗುತ್ತೀಯೆ ಏಕೆ? ಅವನ್ನು ಮನೆಕೆಲಸ ಮಾಡಿ ಮನೆಯನ್ನು ನೋಡಿಕೊಳ್ಳುವ ಹೆಂಗಸಿನ ಕೈಗೇಕೆ ಕೊಡುವುದಿಲ್ಲ?”
ತಾಯಿಯು “ಮಗೂ ಅದರೊಳಗೆ ಬೆಲೆಬಾಳುವ ಒಡವೆಗಳು, ರೇಷಿಮೆಯ ಸೀರೆಗಳು ಮತ್ತು ಮುಖ್ಯವಾದ ವಸ್ತುಗಳನ್ನಿಡಲಾಗಿದೆ. ಅವುಗಳ ಭದ್ರತೆಗಾಗಿ ಬೀಗದಕೈಗಳನ್ನು ನಾನೇ ತೆಗೆದುಕೊಂಡು ಹೋಗುತ್ತೇನೆ. ಅವುಗಳನ್ನು ಕೆಲಸದವಳ ಕೈಯಿಗೆ ಕೊಟ್ಟರೆ ಅವಳು ಏನನ್ನಾದರೂ ಕಳವು ಮಾಡಬಹುದಲ್ಲವೇ?” ಎಂದಳು.
“ ಹೌದಾಮ್ಮಾ, ನನಗ್ಗೊತ್ತಿರಲಿಲ್ಲ. ಹಾಗಾದರೆ ನಾನು ನಿಮಗೆ ಅಮೂಲ್ಯವಾದವನಲ್ಲವೇ?”
“ಯಾರು ಹಾಗೆಂದವರು. ನೀನು ನೀನು ನನ್ನ ಪಾಲಿಗೆ ಚಿನ್ನಕ್ಕಿಂತ ಹೆಚ್ಚು ಬೆಲೆಯುಳ್ಳವನು”
“ಹಾಗಿದ್ದರೂ ನನ್ನನ್ನು ನಿಶ್ಚಿಂತೆಯಾಗಿ ಕೆಲಸದಮ್ಮನ ಬಳಿಬಿಟ್ಟು ಹೋಗಿಬಿಡುತ್ತೀಯೆ. ನಾನು ನಿನಗೆ ಮುಖ್ಯವಲ್ಲವೆಂದಾಯಿತು” ಎಂದಿತು ಮಗು.
ಅದನ್ನು ಕೇಳಿದ ತಾಯಿಯ ಕಣ್ಣುಗಳೆರಡೂ ತುಂಬಿ ಬಂದವು. ಉತ್ತರ ಹೇಳಲು ಗಂಟಲು ಕಟ್ಟಿತು. ಮೌನಕ್ಕೆ ಶರಣಾದಳು. ಇದೇ ನಮ್ಮ ಸಾಮಾನ್ಯ ತಿಳುವಳಿಕೆ. ಆದರೆ ಮಗುವಿನ ಮಾತನ್ನು ವಿಶ್ಲೇಷಿಸಿ ನೋಡಿ.

ಸಂಗ್ರಹಣೆ ಮತ್ತು ರೇಖಾಚಿತ್ರ ರಚನೆ : ಬಿ.ಆರ್.ನಾಗರತ್ನ, ಮೈಸೂರು

