ಪೂಜಾ, ಹನ್ನೊಂದೂವರೆಯ ವೇಳೆಗೆ ತಯಾರಾಗಿ ಹೊರಡಬೇಕು, ರಿಯಲ್ ಎಸ್ಟೇಟ್ ಏಜೆಂಟ್ ರಾಕೇಶರಿಂದ ಫೋನ್ ಬಂದಿತ್ತು, ಬಾಡಿಗೆದಾರರು ಯಾರೋ ಬರುತ್ತಾರಂತೆ, ಮುಖಾಮುಖಿ ಮಾತಾಡಿ ತೀರ್ಮಾನಿಸಿಬಿಡಿ, ಎಂದರು. ನೀನು ಲೇಟ್ ಮಾಡಬೇಡ.
ಹೋಗಿ ವೆಂಕಿ, ಈವತ್ತು ಶನಿವಾರ, ವಾರಪೂರ್ತಿ ಕೆಲಸ ಮಾಡಿ ಮಾಡಿ ಸಾಕಾಗಿದೆ, ಸ್ವಲ್ಪ ನಿಧಾನಕ್ಕೆ ಈವತ್ತಾದರೂ ಇರುತ್ತೇನೆ, ಮಧ್ಯಾನ್ಹಕ್ಕೆ ಹೋಗೋಣ.
ನಂಗೆ ಗೊತ್ತಮ್ಮ, ನಿಂಗೆ ಶನಿವಾರ ಬೆಳಗ್ಗೆ ಎಲ್ಲೂ ಹೋಗೋಕ್ಕೆ ಇಷ್ಟ ಇಲ್ಲ ಅಂತ. ನಾನು ಹೇಳಿದೆ, ಆದ್ರೆ ಸಾಧ್ಯ ಆಗಲ್ಲವಂತೆ, ಮನೆ 2 ತಿಂಗಳಿಂದ ಖಾಲಿ ಇದೆ, ನೀನು ನಾಳೆ ರೆಸ್ಟ್ ತೆಗೆದುಕೋ, ಇವತ್ತು ಮಾತ್ರ ಹೊರಟುಬಿಡು, ಪ್ಲೀಸ್.
ಸ್ಸರಿ, ಯಾವಾಗ್ಲೂ ನಾನೇ ಕಾಂಪ್ರೊಮೈಸ್ ಮಾಡಿಕೊಳ್ಳೊದು, ಆಯ್ತು ರೆಡಿ ಆಗ್ತೀನಿ ಬಿಡಿ.
ಗೊಣಗುತ್ತಲೇ ಪೂಜಾ ಬೆಳಗಿನ ಕೆಲಸಗಳನ್ನೆಲ್ಲಾ ಮುಗಿಸಿ ಗಂಡ ವೆಂಕಟೇಶ್ ಜೊತೆ ಜೆ ಪಿ ನಗರ 6 ನೇ ಹಂತದಲ್ಲಿದ್ದ ರಾಕೇಶ್ ಅವರ ಆಫೀಸಿಗೆ 11.20 ರ ವೇಳೆಗೆ ಬಂದಳು.
ರಾಕೇಶ್ ಇವರುಗಳಿಗಾಗಿಯೇ ಕಾಯುತ್ತಿದ್ದರು. ಅವರ ಎದುರಿನ ಸೋಫಾದಲ್ಲಿ 26-28 ವಯಸ್ಸಿನ ತರುಣಿ-ತರುಣ ಕುಳಿತಿದ್ದರು.
ರಾಕೇಶ್ – ಇವರಿಬ್ಬರೂ ಮುಂದಿನ ತಿಂಗಳು ಮದುವೆಯಾಗುತ್ತಿದ್ದಾರೆ. ಪ್ರಜ್ಞಾ ಬೆಳಗಾವಿಯವರಾದರೆ, ಮಾಧವ್ ರಾಠೋಡ್ ನಾಸಿಕ್ ಹತ್ತಿರದ ಒಂದು ಚಿಕ್ಕ ಊರಿನವರು. ಇಲ್ಲಿ, ಬೆಂಗಳೂರಿನ ಸಾಫ್ಟವೇರ್ ಕಂಪನಿಗಳಲ್ಲಿ ಇಬ್ಬರಿಗೂ ಕೆಲಸ. ನಿಮ್ಮ ಮನೆ ಇವರಿಗೆ ತೋರಿಸಿದ್ದೀನಿ, ಇಷ್ಟ ಪಟ್ಟಿದ್ದಾರೆ. 40,000/- ಬಾಡಿಗೆಗೆ ಒಪ್ಪಿದ್ದಾರೆ, ಮತ್ತೇನಾದರೂ ಮಾತುಕತೆಯಾಡುವುದಿದ್ದರೆ ಮುಗಿಸಿ – ಎಂದರು.
ಪೂಜಾ, ವೆಂಕಟೇಶರಿಗೆ ಹೇಳುವುದು, ಕೇಳುವುದಕ್ಕೇನೂ ಇರಲಿಲ್ಲ. ಈ ಫ್ಲಾಟ್ ಕೊಂಡುಕೊಂಡದ್ದೇ ಬಾಡಿಗೆಗೆ ಬಿಡಲು. ಪೂರ್ತಿ ಫರ್ನಿಷ್ ಮಾಡಿ ಬಾಡಿಗೆಗೆ ಬಿಟ್ಟರೆ 35 ರಿಂದ 38 ಸಾವಿರದವರೆಗೆ ಬಾಡಿಗೆ ಬರುತ್ತೆ, ಒಳ್ಳೇ ಇನ್ವೆಸ್ಟಮೆಂಟ್ ಆಗುತ್ತೆ ಎಂಬ ಯೋಚನೆಯಾಗಿದ್ದರಿಂದ, ಅಂದುಕೊಂಡಿದ್ದಕ್ಕಿಂತ ಎರಡು ಸಾವಿರ ಬಾಡಿಗೆ ಜಾಸ್ತಿಯೇ ಬರುವ ವಿಚಾರ ಖುಷಿ ತಂದಿತು.
ಎಲ್ಲರೂ ಹಾರ್ದಿಕವಾಗಿ ಮಾತುಕತೆಗಳನ್ನಾಡಿಕೊಂಡು ಕಾಫಿ ಕುಡಿದರು.
ರಾಕೇಶ್ ಹೇಳಿದರು – ನಾಳೆ ನಾನು ಬಾಡಿಗೆಯ ಕರಾರುಪತ್ರವನ್ನು ತಯಾರು ಮಾಡಿಟ್ಟಿರುತ್ತೇನೆ. ಎರಡೂ ಕಡೆಯವರೂ ನಿಮಗಾದಾಗ ಬಂದು ಸಹಿ ಮಾಡಿರಿ, ಈಗ ಟೋಕನ್ ಅಡ್ವಾನ್ಸ್ ವಿನಿಮಯ ಮಾಡಿಕೊಂಡು ಬಾಯಿ ಸಿಹಿ ಮಾಡಿಕೊಳ್ಳೋಣ.
ಮಾಧವ್ ರಾಠೋಡ್ ಹೇಳಿದ – ಈಗ ಹತ್ತು ಸಾವಿರ ಕ್ಯಾಷ್ ತಂದಿದ್ದೇನೆ, ಕೊಡುತ್ತೇನೆ. ನಾಳೆ ಬಂದು ಸಹಿ ಹಾಕುವಾಗ ಇನ್ನೂ ಹದಿನೈದು ಸಾವಿರ ನೀಡುತ್ತೇನೆ. ಇಂದು ತಾರೀಖು ಮಾರ್ಚ್ 19. ಮುಂದಿನ ತಿಂಗಳು ಏಪ್ರಿಲ್ 24 ರಂದು ನಾವಿಬ್ಬರೂ ಬೆಳಗಾವಿಯಲ್ಲಿ ಮದುವೆಯಾಗುತ್ತಿದ್ದೇವೆ. ಮೇ ಒಂದರ ಹೊತ್ತಿಗೆ ಬರುತ್ತೇವೆ, ಅಂದಿನಿಂದ ಬಾಡಿಗೆ ಪ್ರಾರಂಭವಾಗುವ ರೀತಿ ಕರಾರು ಪತ್ರ ಇರಲಿ.
ಪೂಜಾ – ಮನೆ ಈಗಾಗಲೇ ಎರಡು ತಿಂಗಳುಗಳಿಂದ ಖಾಲಿ ಇದೆ. ಇನ್ನೂ ಒಂದು ತಿಂಗಳು, ಹತ್ತು ದಿನಗಳ ಬಾಡಿಗೆ ನಮಗೆ ನಷ್ಟವಾಗುತ್ತದೆ. ನೀವುಗಳು ಹತ್ತು ತಿಂಗಳ ಅಡ್ವಾನ್ಸ್ ಬೇರೆ ಕೊಡಲು ಸಾಧ್ಯವಿಲ್ಲ, ಒಂದು ಲಕ್ಷ ಮಾತ್ರ ಕೊಡುತ್ತೇವೆ, ಎಂದಿರಿ, ಅದಕ್ಕೂ ಒಪ್ಪಿಕೊಂಡಿದ್ದೇವೆ, ಆದರೂ . . . .
ಮಾಧವ್ – ನಾವುಗಳೂ ಈಗ ತಾನೆ ಮದುವೆಯಾಗುತ್ತಿದ್ದೇವೆ. ಮದುವೆಯ, ಹೊಸ ಸಂಸಾರದ ಹಲವಾರು ಖರ್ಚುಗಳು ಇರುತ್ತವೆ, ದಯವಿಟ್ಟು ಅಡ್ಜಸ್ಟ್ ಮಾಡಿಕೊಳ್ಳಿರಿ.
ವೆಂಕಟೇಶ್ ʼಇರಲಿ, ಬಿಡು ಪೂಜಾʼ, ಎಂದು ಹೆಂಡತಿಗೆ ಹೇಳುತ್ತಾ – ಆಯ್ತು ಹಾಗೇ ಮಾಡೋಣ – ಎಂದುಬಿಟ್ಟರು.
ಮುಂದಿನದೆಲ್ಲಾ ಸರಸರಾಂತ ನಡೆಯಿತು. ಮನೆ ಪೂಜಾ ಹೆಸರಿನಲ್ಲಿ ಇದ್ದ ಕಾರಣ ಪೂಜಾ ಮತ್ತು ಮಾಧವ್ ರಾಠೋಡ್ ಮಧ್ಯೆ ಕರಾರು ಪತ್ರವಾಯಿತು. ಏಪ್ರಿಲ್ ಹತ್ತರ ಒಳಗೆ ಮಿಕ್ಕ ಅಡ್ವಾನ್ಸ್ ಹಣ ಎಪ್ಪತೈದು ಸಾವಿರವನ್ನು ಕಳುಹಿಸುತ್ತೇನೆ, ನಾವಿಬ್ಬರೂ ಮೊದಲ ವಾರದಲ್ಲೇ ಊರಿಗೆ ಹೋಗುವವರಿದ್ದೇವೆ, ಎಂಬ ರಾಠೋಡನ ಕೋರಿಕೆಗೆ ಎಲ್ಲರೂ ಒಪ್ಪಿದರು. ರಾಕೇಶ್ ತಮ್ಮ ಬ್ರೋಕರೇಜ್ ಪಡೆದು ಶುಭ ಕೋರಿದರು.
ಏಪ್ರಿಲ್ 10 ಆಯಿತು, 12 ಆಯಿತು, ಮಿಕ್ಕ ಅಡ್ವಾನ್ಸ್ ಹಣ ಬರಲಿಲ್ಲ. ವೆಂಕಟೇಶ್ ಫೋನ್ ಮೇಲೆ ಫೋನ್ ಮಾಡಿದರು. ಮಾಧವ್ ʼಈಗ, ಆಗʼ ಹೇಳತೊಡಗಿದ. ಮದುವೆ ಖರ್ಚು, ಅದೂ, ಇದೂ, ಸಬೂಬು ಹೇಳತೊಡಗಿದ.
ವೆಂಕಟೇಶ್ ಬಿಡಲಿಲ್ಲ. ʼನೀವು ಅಡ್ವಾನ್ಸ್ ಹಣ ತಕ್ಷಣ ಕಳುಹಿಸದಿದ್ದರೆ ನಾವು ಮನೆಯನ್ನು ಬೇರೆಯವರಿಗೆ ಕೊಟ್ಟುಬಿಡುತ್ತೇವೆʼ, ಎಂದು ಸ್ವಲ್ಪ ಖಾರವಾಗಿ ಹೇಳಿದರು. ಅಷ್ಟರ ವೇಳೆಗಾಗಲೇ ತಾರೀಖು 20 ಆಗಿತ್ತು.
ಮಾಧವ್ – ಎಲ್ಲಾ ಹಾಗೆ ಮಾಡಬೇಡಿ, ನಾವು ಹೊಸದಾಗಿ ಮದುವೆಯಾಗಿ ಬೆಂಗಳೂರಿಗೆ ಬಂದಾಗ ಇರಲು ನಮಗೆ ಮನೆ ಬೇಕು, ಆಯ್ತು, ಇಂದೇ ಕಳುಹಿಸುತ್ತೇನೆ – ಎಂದು ಮಿಕ್ಕ ಎಪ್ಪತೈದು ಸಾವಿರ ರೂಪಾಯಿಗಳನ್ನು ಕಳುಹಿಸಿದ. ಹಣ ಅಕೌಂಟಿಗೆ ಬಂದುದಕ್ಕೆ ಮೊಬೈಲಿನಲ್ಲಿ ಟಿಣ್ ಟಿಣ್ ಸಂದೇಶ ಬಂತು.
ಏಪ್ರಿಲ್ 24 ರಂದು ಶುಭಾಶಯ ಕೋರಿ ಸಂದೇಶ ಕಳುಹಿಸಿದರು, ಪೂಜಾ ಮತ್ತು ವೆಂಕಟೇಶ್. ಯಾಕೋ ಡಬಲ್ ಟಿಕ್ ಮೊಬೈಲಿನಲ್ಲಿ ಬರಲೇ ಇಲ್ಲ. ʼಇರಲಿ, ಮದುವೆ ಸಂಭ್ರಮದಲ್ಲಿರುತ್ತಾರೆʼ ಎಂದುಕೊಂಡರು.
ಏಪ್ರಿಲ್ 30 ನೇ ತಾರೀಖು ತಮ್ಮ ಮನೆ ಕೆಲಸದ ನಿಂಗಮ್ಮನನ್ನು ಕರೆದೊಯ್ದು ಮತ್ತೊಮ್ಮೆ ಹೊಸಮನೆಯನ್ನೆಲ್ಲಾ ಕ್ಲೀನ್ ಮಾಡಿಸಿ ಹೊಸ ಮಧುಮಕ್ಕಳಿಗೆ ಶುಭ ಕೋರುವ ಚಂದದ ಕಾರ್ಡ್ ಒಂದನ್ನು ಮೇಜಿನ ಮೇಲಿಟ್ಟು ಹಿಂದಿರುಗಿದರು.
ಏಪ್ರಿಲ್ 2 ಆಯಿತು,4 ಆಯಿತು, ಯಾರೂ ಬರಲೇ ಇಲ್ಲ. 6 ನೇ ತಾರೀಖಿನಂದು, ಇನ್ನು ಸುಮ್ಮನಿದ್ದರೆ ಮತ್ತೆ 10, 15 ಎಂದು ಮುಂದೂಡುತ್ತಾ ಎಲ್ಲಿ ಬಾಡಿಗೆ ಕಮ್ಮಿ ಮಾಡುತ್ತಾರೋ ಎಂದು ವೆಂಕಟೇಶ್ ಫೋನಾಯಿಸಿದರೆ ರಾಠೋಡನ ಫೋನ್ ಸ್ವಿಚ್ ಆಫ್ ಬರತೊಡಗಿತು. ಸಂದೇಶಗಳೂ ತಲುಪುತ್ತಿರಲಿಲ್ಲ. ಎಲ್ಲೋ ಹಾಗಿಂದ ಹಾಗೇ ʼಹನಿಮೂನ್ʼ ಹೋಗಿರಬಹುದು, ಒಂದು ಮಾತು ಹೇಳಿ ಹೋಗಬಾರದೆ ಎಂದಂದುಕೊಂಡು ಮತ್ತೆರಡು ದಿನಗಳನ್ನು ನೂಕಿದರೂ ಉಭ ಇಲ್ಲ, ಶುಭ ಇಲ್ಲ.
ಕರಾರು ಪತ್ರ ಮಾಡಿಕೊಳ್ಳುವಾಗ ಸೌಹಾರ್ದಯುದ ಮಾತುಕತೆಗಳ ನಡುವೆ ಮಾಧವ್ ಹೇಳಿದ್ದ – ನಾವಿಬ್ಬರೂ ಸಂಸಾರದ ಜವಾಬ್ದಾರಿಗಳನ್ನು ಸಮನಾಗಿ ಹಂಚಿಕೊಳ್ಳಲು ತೀರ್ಮಾನಿಸಿದ್ದೇವೆ. ನಾನು ಫರ್ನಿಶ್ ಆಗಿರುವ ಮನೆಯ ಜವಾಬ್ದಾರಿ ವಹಸಿಕೊಂಡರೆ ಪ್ರಜ್ಞಾ ಮನೆಯ ಇನ್ನಿತರ ಖರ್ಚುವೆಚ್ಚಗಳ ಜವಾಬ್ದಾರಿ ಹಂಚಿಕೊಂಡಿದ್ದಾಳೆ.
ಪೂಜಾ – ನಿಮ್ಮಿಬ್ಬರ ಅಂಡರಸ್ಟಾಂಡಿಂಗ್ ನೋಡಿದರೆ ಖುಷಿಯಾಗುತ್ತೆ, ಒಳ್ಳೆಯದಾಗಲಿ – ಎಂದಿದ್ದಳು.
ಹಾಗಾಗಿಯೇ ಎಲ್ಲೂ ಪ್ರಜ್ಞಾಳ ಫೋನ್ ನಂಬರ್ ಕೂಡ ಇರಲಿಲ್ಲ. ಈಗ ನೋಡಿದರೆ ಹೀಗೆ! ಏನು ಮಾಡುವುದು ತೋಚದೆ ವೆಂಕಟೇಶ್ ರಾಕೇಶ್ ಅವರನ್ನು ಖುದ್ದಾಗಿ ಸಂಪರ್ಕಿಸಿದರು –
ಇಲ್ಲಾ, ನನಗೂ ಏನೂ ಸುದ್ದಿಯಿಲ್ಲ. ಅಂದು ಜೊತೆಯಲ್ಲಿ ಬಂದ ಪ್ರಜ್ಞಾಳನ್ನು ನೋಡಿದ್ದು ಬಿಟ್ಟರೆ ಎಲ್ಲ ವ್ಯವಹಾರವನ್ನೂ ಮಾಧವ್ ರಾಠೋಡ್ ನಡೆಸುತ್ತಿದ್ದುದರಿಂದ ನನ್ನ ಹತ್ತಿರವೂ ಮಾಧವ್ ಫೋನ್ ನಂಬರ್ ಮಾತ್ರ ಇರುವುದು – ಎನ್ನುತ್ತಾ ತಮ್ಮ ಫೋನಿನಿಂದಲೂ ಸಂಪರ್ಕಿಸಲು ಪ್ರಯತ್ನಿಸಿದರೆ, ಅಲ್ಲಿಗೂ ಬಂದ ಉತ್ತರ – ಸ್ವಿಚಡ್ ಆಫ್.
ರಾಕೇಶ್ ಅವರೇ ಯೋಚಿಸಿ, – ಇರಿ, ಅವರನ್ನು ನನಗೆ ಪರಿಚಯ ಮಾಡಿಸಿದ್ದು ಪ್ರಜ್ಞಾಳ ಸಹೋದ್ಯೋಗಿ ರಚನಾ ಎಂಬ ನನ್ನ ಹಳೆಯ ಗ್ರಾಹಕರು. ರಚನಾ ಫೋನ್ ನಂಬರ್ ನನ್ನ ಹತ್ತಿರ ಇದೆ – ಎನ್ನುತ್ತಾ ರಚನಾಳನ್ನು ಸಂಪರ್ಕಿಸಿ ಅವಳಿಂದ ಪ್ರಜ್ಞಾ ಫೋನ್ ನಂಬರ್ ಪಡೆದರು.
ಪೂಜಾ ನಾನೇ ಮಾತನಾಡುತ್ತೇನೆ ಎಂದು ತನ್ನ ಫೋನಿನಿಂದ ಪ್ರಜ್ಞಾಳಿಗೆ ಫೋನಾಯಿಸಿದಾಗ ರಿಸೀವ್ ಆಯಿತು –
ಹಲೋ, ಇದು ಪ್ರಜ್ಞಾ ಅವರಾ?
ಹೌದು, ನಿವ್ಯಾರು?
ನಾನು ಬೆಂಗಳೂರಿನಿಂದ ಪೂಜಾ. ನೀವು ಒಂದನೇ ತಾರೀಖಿಗೇ ಬೆಂಗಳೂರಿಗೆ ಬರಬೇಕಿತ್ತಲ್ಲವಾ? ಆಗಲೇ ತಾರೀಖು ಒಂಭತ್ತು ಆಯಿತು, ಏನೂ ಸುದ್ದಿಯಿಲ್ಲ. ಮಾಧವ್ ಅವರಿಂದ ಯಾವ ಸುದ್ದಿ ಸಮಾಚಾರವೂ ಇಲ್ಲ, ಫೋನ್ ಸ್ವಿಚ್ ಆಫ್ ಬರುತ್ತಿದೆ – ಸ್ವಲ್ಪ ಖಾರವಾಗಿಯೇ ಪೂಜಾ ಹೇಳಿದಳು.
ವೆಂಕಟೇಶ್ – ಸ್ವಲ್ಪ ನಿಧಾನವಾಗಿ ಪೂಜಾ, ಹೊಸದಾಗಿ ಮದುವೆಯಾಗಿದೆ, ಏನೋ ಬಿಜ಼ಿ ಇರಬಹುದು, ಸ್ವಲ್ಪ ತಾಳ್ಮೆಯಿರಲಿ – ಎಂದರು.
ಪೂಜಾ ವೆಂಕಟೇಶರೆಡೆಗೆ ಬಿರುಗಣ್ಣು ಬಿಡುತ್ತಾ ಶಾಂತವಾಗಲು ಪ್ರಯತ್ನಿಸಿದಳು.
ಅತ್ತಲಿಂದ ಪ್ರಜ್ಞಾ – ಆಹ್, ಹ, ಹಾ . . . ಅವನು ನಿಮಗೆ ಫೋನ್ ಮಾಡುವುದೂ ಇಲ್ಲ, ನಿಮ್ಮ ಫೋನ್ ರಿಸೀವ್ ಮಾಡುವುದೂ ಇಲ್ಲ, ಬರುವುದೂ ಇಲ್ಲ, ಹಾಗೇ ಅವನ ಫೋನ್ ಆನ್ ಆಗುವುದೂ ಇಲ್ಲ ಬಿಡಿ – ಎಂದು ಜೋರಾಗಿ ನಗುತ್ತಾ ಹೇಳಿದಳು.
ಅಂದರೆ. .
ಹೌದು ಪೂಜಾ ಅವರೆ, ನಿಮಗೆ ಶಾಕ್ ಆಗಬಹುದು, ನಮಗೆಲ್ಲರಿಗೂ ಆದ ಹಾಗೆ. ಏಪ್ರಿಲ್ 23 ರಂದು ದಿಬ್ಬಣ್ಣ ಬರಬೇಕಿತ್ತು, ನಾವೆಲ್ಲರೂ ಮದುವೆಗೆ ಎಲ್ಲಾ ತಯಾರಿ ಮಾಡಿಕೊಂಡು ಭಾಜಾ ಭಜಂತ್ರಿಯೊಂದಿಗೆ ಕಾಯುತ್ತಿದ್ದೆವು. ಮಧ್ಯಾನದ ನಂತರ ಸ್ವಿಚ್ ಆಫ್ ಆದ ಮಾಧವ್, ಮತ್ತವನ ಅಪ್ಪ, ಅಮ್ಮ, ಅಕ್ಕ, ಎಲ್ಲರ ಫೋನ್ ಇನ್ನೂ ಆನ್ ಆಗಿಲ್ಲ, ಬರಲೂ ಇಲ್ಲ, ಯಾವುದೇ ವಿಚಾರವೂ ತಿಳಿದಿಲ್ಲ.
ವ್ಹಾಟ್?
ಹೌದು ಪೂಜಾ ಅವರೆ, ಮದುವೆ ನಡೆಯಲಿಲ್ಲ, ನಮಗೂ ಅಂದು ನಿಮ್ಮಂತೆ ಶಾಕ್ ಆಯಿತು.
ನೀವೇನೂ ವಿಚಾರಿಸಲಿಲ್ಲವಾ? ಅಲ್ಲಿಗೆ ನಿಮ್ಮ ತಾಯಿ, ತಂದೆ ಹೋಗಲಿಲ್ಲವಾ?
ನೋ ವ್ಹೇ, ನನ್ನ ಕುಟುಂಬದವರೆಲ್ಲರೂ ಎಷ್ಟು ವಿನಯಶೀಲರೋ ಅಷ್ಟೇ ವಿಚಾರವಂತರು. ನಾನು ನಗುತ್ತಾ ಉತ್ತರ ಕೊಟ್ಟದ್ದು ನೋಡಿ ನಿಮಗೆಲ್ಲಾ ಆಶ್ಚರ್ಯವಾಗಬಹುದು. ಆದರೆ ಇಷ್ಟೊಂದು ಮುಂದುವರೆದ, ಸಂಪರ್ಕಸಾಧನಗಳಿರುವ ಈ ಕಾಲದಲ್ಲೂ, ಇರುವ ಯಾವುದೇ ಕಠಿಣ ಪರಿಸ್ಥಿತಿಯಾದರೂ ಸರಿ, ನಮಗೆ ತಿಳಿಸುವ ಕನಿಷ್ಟ ಬದ್ಧತೆಯೂ ಇರದ ವ್ಯಕ್ತಿ ನನಗೆ ಬಾಳಸಂಗಾತಿಯಾಗುವುದು ಬೇಡ, ನಮ್ಮ ಮನೆ ಅಳಿಯನಾಗುವುದೂ ಬೇಡ ಎಂದು ಯೋಚಿಸಿ ಸುಮ್ಮನಾಗಿದ್ದೇವೆ. ಮಾತನಾಡಿದ್ದರೆ, ಇರುವ ತೊಂದರೆಯನ್ನು ತಿಳಿಸಿದ್ದರೆ ಏನಾದರೂ ಪರಿಹಾರ ದೊರೆಯುತಿತ್ತೋ ಏನೋ. ಇಂತಹ ಹೇಡಿ ನಮಗೆ ಬೇಡ, ಯಾವುದೇ ಕಾರಣವಾದರೂ ಸರಿ, ಈ ಮದುವೆ ತಪ್ಪಿದ್ದೇ ಒಳ್ಳೆಯದಾಯಿತು.
ಆದರೆ ನಿಮ್ಮದು ಲವ್ ಮ್ಯಾರೇಜ್ ಅಲ್ಲವಾ?
ಹೌದು, ಮೆಚ್ಯೂರ್ಡ ಲವ್ ಮ್ಯಾರೇಜ್. ನಮ್ಮದೇನೂ ಹದಿಹರೆಯದ, 18-20 ವರ್ಷದವರ ತರಹ ಇನಫ್ಯಾಚುಯೇಷನ್ನಿಂದ ಕೂಡಿದ ಲವ್ ಅಲ್ಲ. ಅರೇಂಜ್ಡ ಬೈ ವಧು ವರ ಅಷ್ಟೆ, ನಮ್ಮಿಬ್ಬರದು ಎಂಟು ತಿಂಗಳುಗಳ ಪರಿಚಯ. ಈ ಮಧ್ಯೆ ಮಾಧವ್‌ನ ಬದ್ಧತೆಯನ್ನು ಪರೀಕ್ಷಿಸುವ ಪರಿಸ್ಥಿತಿ ಎದುರಾಗಿರಲಿಲ್ಲ, ಹಾಗಾಗಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವಿದೆ ಅನ್ನಿಸುತ್ತೆ, ಮದುವೆಯ ನಂತರ ಅವನ ಈ ವ್ಯಕ್ತಿತ್ವ ತಿಳಿದಿದ್ದರೆ ಕಾನೂನು ಮುಂತಾದ ರಗಳೆಗಳನ್ನೆಲ್ಲಾ ಎದುರಿಸಬೇಕಾಗುತಿತ್ತು. ಸಧ್ಯ ಈಗಲೇ ತಿಳಿದದ್ದು ಒಳ್ಳೆಯದಾಯಿತು. ನಮ್ಮ ಮನೆಯವರೆಲ್ಲ ಮದುವೆ ನಿಂತು ಹೋಯಿತು, ಇನ್ನೇನು ಗತಿ ಮಾನ ಹೋಯಿತು ಎಂದು ಯೋಚಿಸಿ ತೆಲೆಯ ಮೇಲೆ ಕೈಇಟ್ಟುಕೊಂಡು ಯೋಚಿಸುತ್ತಾ ಕುಳಿತುಕೊಳ್ಳುವಂತಹ ಜನರಲ್ಲ. ನಾವೆಲ್ಲಾ ಯೋಚಿಸುವುದು ಮಾನ ಹೋಗಿದ್ದರೆ ಅದು ಮಾಧವ್‌ದು, ಅವನ ಕುಟುಂಬದ್ದು, ನಮ್ಮದಲ್ಲ. ಹಾಂ, ನಾವೆಲ್ಲರೂ ಸ್ವಲ್ಫ ಡಿಸ್ಟರ್ಬ್ ಆಗಿರುವುದು ನಿಜ. ಸರಿ ಹೋಗುತ್ತೆ. ಕಾಲಾಯ ತಸ್ಮೈ ನಮಃ. ಈಗ ಉಳಿದಿರುವುದೇನು? ಅವನು ಬಂದರೂ, ಬಂದು ಏನೇ ಕಾರಣ ಕೊಟ್ಟರೂ ನಾನಂತೂ ಅವನನ್ನು ಮದುವೆಯಾಗುವುದಿಲ್ಲ. ಹಾಗೆಯೇ ಸುಮ್ಮನೆಯೂ ಬಿಡುವುದಿಲ್ಲ. ಈಗ ಹೋದರೆ ನಾವ್ಯಾರಾದರೂ ಬರಬಹುದೆಂಬ ಯೋಚನೆಯಿಂದ ತಪ್ಪಿಸಿಕೊಳ್ಳುವ ಉಪಾಯಗಳನ್ನು ಹುಡುಕಿರಬಹುದು. ಕೆಲದಿನಗಳ ನಂತರ ಅಪ್ಪ, ಚಿಕ್ಕಪ್ಪನೊಂದಿಗೆ ಹೋಗಿ ಅವನ ಮತ್ತು ಅವನ ಕುಟುಂಬದವರ ಈ ನಡುವಳಿಕೆಗೆ ಚೆನ್ನಾಗಿ ಉಗಿದು ನಮಗೆ ಆಗಿರುವ ಆರ್ಥಿಕ ನಷ್ಟಕ್ಕೆ ಹೊಣೆಗಾರರನ್ನಾಗಿ ಮಾಡಿ ಬರುತ್ತೇನೆ, ಅಷ್ಟೆ. ನಿಮಗೇನಾದರೂ ಆರ್ಥಿಕ ನಷ್ಟ ಆಗಿದೆಯೇ?
ಪೂಜಾ, ಪ್ರಜ್ಞಾಳ ವ್ಯಕ್ತಿತ್ವಕ್ಕೆ ಮತ್ತವಳ ಕುಟುಂಬದ ಧೈರ್ಯದ ನಡುವಳಿಕೆಗಳಿಗೆ ದಂಗಾಗಿಬಿಟ್ಟಿದ್ದಳು.
ಹೇಳಿದಳು -ಇಲ್ಲಾ, ಹಾಗೇನಿಲ್ಲ, ಅಡ್ವಾನ್ಸ್ ಕಳುಹಿಸಿದ್ದಾನೆ.
ಸರಿ, ನೀವು ಬೇರೆಯವರಿಗೆ ಬಾಡಿಗೆಗೆ ಕೊಡಿ, ಅಷ್ಟೆ.
ನಾನು ನಿಮ್ಮ ಮನಃಸ್ಥಿತಿಯ ಬಗ್ಗೆ ಗರ್ವ ಪಡುತ್ತೇನೆ ಪ್ರಜ್ಞಾ. ನೀವಂದದ್ದು ನಿಜ. ಮರ್ಯಾದೆ ಹೋಗಿರುವುದು ಮಾಧವ್‌ದು. ನಿಮ್ಮದಲ್ಲ. ಹೆಣ್ಣೊಬ್ಬಳು ಕಲಿತು ಆರ್ಥಿಕವಾಗಿಯೂ ಸ್ವತಂತ್ರಳಾದಾಗ ಜೀವನದಲ್ಲಿ ಬರುವ ಎಡರು ತೊಡರುಗಳನ್ನು ಹೇಗೆ ಬದಲಾದ ಮನೋಭಾವದಿಂದ ಎದುರಿಸಿ ನಿವಾರಿಸಿಕೊಳ್ಳಬಹುದು ಎಂಬುದಕ್ಕೆ ನೀವು ಮತ್ತು ನಿಮ್ಮ ಮನೆಯವರು ಮಾದರಿಯಾಗುತ್ತೀರಿ. ಮುಂದಿನ ದಿನಗಳಲ್ಲಿ ಎಲ್ಲಾ ಒಳ್ಳೆಯದಾಗಲಿ, ಬೆಂಗಳೂರಿಗೆ ಹಿಂದಿರುಗಿದ ನಂತರ ಏನಾದರೂ ಸಹಾಯ, ಸಹಕಾರ ನೀಡಲು ಈ ಪೂಜಾ ಎಂಬ ನಿಮ್ಮ ಗೆಳತಿ ಸದಾ ಸಿದ್ಧ – ಎನ್ನುತ್ತಾ ಫೋನ್ ಇಟ್ಟಳು ಪೂಜಾ.

ಪದ್ಮಾ ಆನಂದ್, ಮೈಸೂರು
