ಪ್ರವಾಸ

ಸಿಂಹದ ನಾಡು ಸಿಂಗಪೂರ್- ಹೆಜ್ಜೆ 3

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಚೈನಾ ಟೌನ್

ಅಂದು ಸಂಜೆ ನಾವು ಚೈನಾಟೌನ್ ನೋಡಲು ಹೊರಟೆವು. ಹತ್ತೊಂಭತ್ತನೆಯ ಶತಮಾನದಲ್ಲಿ ಸಿಂಗಪೂರಿಗೆ ಬಂದು ನೆಲಸಿದ ಚೈನೀಯರು ತಮ್ಮದೇ ಒಂದು ಕಾಲೋನಿಯನ್ನು ಕಟ್ಟಿಕೊಳ್ಳುವರು. ಇಲ್ಲಿ ಸದಾ ಗಿಜಿಗುಡುವ ಮಾರ್ಕೆಟ್‌ಗಳು, ಚೈನೀಸ್ ರೆಸ್ಟೊರಾಂಟ್‌ಗಳೂ ಹಾಗೂ ಐತಿಹಾಸಿಕ ದೇಗುಲಗಳೂ ಇವೆ. ಚೀನಾದ ವಾಸ್ತುಶಿಲ್ಪ ಬಿಂಬಿಸುವ ಕಟ್ಟಡಗಳು, ಅಲ್ಲಲಿ ಚೈನಾದ ಸಾಂಪ್ರದಾಯಿಕ ಉಡುಪು ಧರಿಸಿ ಪ್ರವಾಸಿಗರನ್ನು ಸ್ವಾಗತಿಸುವ ಚೀನೀಯರು, ಮಸಾಜ್ ಮಾಡುವ ಪಾರ್ಲರ್‌ಗಳು, ತರಹೇವಾರು ತಿಂಡಿ ತಿನಿಸುಗಳು, ಸಿಂಗಪೂರ್‌ಗೆ ವಲಸೆ ಬಂದ ಚೀನೀಯರ ಇತಿಹಾಸವನ್ನು ಪ್ರದರ್ಶಿಸುವ ಒಂದು ವಸ್ತು ಸಂಗ್ರಹಾಲಯವೂ ಇತ್ತು. ಚೀನೀಯರ ಪುರಾತನವಾದ ಕಟ್ಟಡಗಳನ್ನು ಸಂರಕ್ಷಿಸಿ, ಆಫೀಸು, ಅಂಗಡಿ ಮುಂಗಟ್ಟುಗಳನ್ನು ಅಲ್ಲಿ ತೆರೆದಿದ್ದರು.

ನಾವು ಮೊದಲು ಬೌದ್ಧ ದೇಗುಲವನ್ನು ನೋಡಲು ಹೋದೆವು. ಈ ಐದು ಅಂತಸ್ತಿನ ಟ್ಯಾಂಗ್ ರಾಜವಂಶಸ್ಥರ ದೇಗುಲದಲ್ಲಿ ಬುದ್ಧನ ಪವಿತ್ರ ದಂತವನ್ನು ಸಂರಕ್ಷಿಸಿಡಲಾಗಿತ್ತು. ದೇಗುಲದ ಪಾರಂಪರಿಕ ಕಟ್ಟಡ, ಚಿನ್ನದ ಲೇಪನವುಳ್ಳ ಧ್ಯಾನಸ್ಥ ಬುದ್ಧನ ಮೂರ್ತಿಗಳು, ಸುತ್ತಲಿನ ಗೋಡೆಗಳ ಮೇಲೆಲ್ಲಾ ವಿವಿಧ ಮುದ್ರೆಗಳಲ್ಲಿ ಪದ್ಮಾಸನದಲ್ಲಿ ಕುಳಿತಿದ್ದ ಪುಟ್ಟ ಪುಟ್ಟ ಬುದ್ಧನ ಮೂರ್ತಿಗಳು, ಎಲ್ಲೆಡೆ ಫೋಟೋಗಳನ್ನು ಕ್ಲಿಕ್ಕಿಸುತ್ತಾ ಸಾಗಿದೆವು. ಚೀನಾದವರ ಹೊಸ ವರ್ಷ ಫೆಬ್ರವರಿ 17 ಆಗಿದ್ದುದ್ದರಿಂದ ಇಡೀ ದೇಗುಲ ದೀಪಾಲಂಕಾರದಿಂದ ಝಗಮಗಿಸುತ್ತಿತ್ತು.

ಧ್ಯಾನಸ್ಥನಾಗಿದ್ದ ಬುದ್ಧನಿಗೆ ವಂದಿಸಿ, ಹೊರಗಿದ್ದ ಪವಿತ್ರ ಚಕ್ರಗಳನ್ನು ತಿರುಗಿಸುತ್ತಾ, ಬೌದ್ಧರಿಗೆ ಪವಿತ್ರ ಸ್ಮಾರಕವಾದ ಬುದ್ಧನ ದಂತವನ್ನು ನೋಡಿದೆವು. ಬುದ್ಧನ ತಲೆಗೂದಲನ್ನು, ಹಲ್ಲನ್ನೂ ಸುರಕ್ಷಿತವಾದ ಪೆಟ್ಟಿಗೆಗಳಲ್ಲಿಟ್ಟು, ಅದನ್ನು ಪೂಜಿಸುವ ಇವರ ಸಂಪ್ರದಾಯವನ್ನು ಕಂಡು ಬೆರಗಾದೆವು. ಬೌದ್ಧ ದೇಗುಲದ ಬದಿಯಲ್ಲಿಯೇ ಇದ್ದ ಸಿಂಗಪೂರ್‌ನ ಅತ್ಯಂತ ಪುರಾತನವಾದ ‘ಶ್ರೀ ಮಾರಿಯಮ್ಮನ್ ದೇಗುಲವನ್ನು’ ನೋಡಲು ಹೋದೆವು. ಆಕರ್ಷಕವಾದ ದೇವಾನುದೇವತೆಗಳ ವಿಗ್ರಹಗಳನ್ನೊಳಗೊಂಡ ರಾಜಗೋಪುರ, ವಿಸ್ತಾರವಾದ ಒಳಾಂಗಣ, ಸರ್ವಾಲಂಕಾರಭೂಷಿತಳಾದ ದೇವಿ, ಗಂಟೆಗಳ ಸದ್ದು, ಮಂಗಳಾರತಿ ಮಾಡುತ್ತಿದ್ದ ಪುರೋಹಿತರು ಎಲ್ಲವನ್ನು ನೋಡುತ್ತಾ, ಭಕ್ತಿಯಿಂದ ನಮಸ್ಕರಿಸುತ್ತಾ, ಕಣ್ಣುಮುಚ್ಚಿದಾಗ ತಮಿಳುನಾಡಿನಲ್ಲಿ ಇದ್ದ ಭಾವ ಮನದಲ್ಲಿ. ಎಲ್ಲೆಲ್ಲಿಂದಲೋ ಬಂದು ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು, ದೇಗುಲಗಳನ್ನು ಕಟ್ಟಿ, ತಮ್ಮವರನ್ನೆಲ್ಲಾ ಒಂದುಗೂಡಿಸಿದವರ ಸಾಹಸವನ್ನು ಮೆಚ್ಚುತ್ತಾ ಮುಂದೆ ಸಾಗಿದೆವು.

ಈ ಎರಡೂ ದೇಗುಲಗಳಲ್ಲಿ ಇರುವ ವ್ಯತ್ಯಾಸ ಢಾಳಾಗಿ ಕಾಣುತ್ತಿತ್ತು. ಬೌದ್ಧ ದೇಗುಲದಲ್ಲಿ ಇರುವ ನಿಶ್ಯಬ್ಧವಾದ ವಾತಾವರಣ, ಸ್ವಚ್ಛತೆ, ಶಿಸ್ತು ಮಾರಿಯಮ್ಮನ್ ದೇಗುಲದಲ್ಲಿ ಕಂಡು ಬರುವುದಿಲ್ಲ. ಆದರಿಲ್ಲಿ ಗೌಜು ಗದ್ದಲದ ಜೊತೆ ಜೊತೆಗೇ ಸಡಗರ, ಸಂಭ್ರಮದ ವಾತಾವರಣ. ಗಂಟೆ ಜಾಗಟೆಗಳ ಸದ್ದು, ಮಂತ್ರಪಠಣದ ನಾದ, ತೀರ್ಥ ಪ್ರಸಾದವನ್ನು ಸ್ವೀಕರಿಸಿ, ದೀರ್ಘ ದಂಡ ನಮಸ್ಕಾರ ಮಾಡಿ, ಅಲ್ಲಿಯೇ ಕ್ಷಣಕಾಲ ಕುಳಿತು ಹರಟೆಕೊಚ್ಚುವ ಭಕ್ತರು, ಅಲ್ಲಲ್ಲಿ ತೆಂಗಿನಕಾಯಿಯ ಜುಟ್ಟು, ಬಾಳೆಹಣ್ಣಿನ ಸಿಪ್ಪೆ, ಊದಿನಕಡ್ಡಿಯ ಕವರ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮನಸ್ಸು ನುಡಿಯುತ್ತಿತ್ತು – ‘ಇರಲಿ ಬಿಡು, ಇಬ್ಬರ ಮನದಲ್ಲೂ ದೇವರ ಬಗ್ಗೆ ಭಕ್ತಿಯಿದೆ, ನಂಬಿಕೆ ಇದೆ, ತನ್ಮಯತೆಯಿದೆ. ಅದು ಮುಖ್ಯ ಅಲ್ವಾ? ಬಾಹ್ಯ ಜಗತ್ತಿನ ಗೋಜಲು ಏಕೆ? ಆಂತರಿಕ ಜಗತ್ತು ಶುಭ್ರವಾಗಿದ್ದರೆ ಸಾಕಲ್ವಾ?’

ದೇಗುಲದಿಂದ ಹೊರಟವರು ಸೀದಾ, ‘ಫೌಂಟೆನ್ ಆಫ್ ವೆಲ್ತ್’ ಅಂದರೆ ಸಂಪತ್ತಿನ ಕಾರಂಜಿ ನೋಡಲು ಹೊರಟೆವು. ಸಂಪತ್ತು ತುಳುಕಾಡುತ್ತಿರುವ ಈ ನಾಡಿನಲ್ಲಿ ಸಂಪತ್ತಿನ ಕಾರಂಜಿ ಇರಲೇಬೇಕಲ್ಲ. ಸನ್‌ಟೆಕ್ ಮಾಲ್ ಬಳಿ ಇತ್ತು ಈ ವಿಶೇಷವಾದ ಕಾರಂಜಿ. ನಮ್ಮ ಗೈಡ್ ಹೇಳಿದರು, ‘ಈ ಕಾರಂಜಿ ಈ ನಾಡಿನ ಐಶ್ವರ್ಯ, ಒಗ್ಗಟ್ಟು ಹಾಗೂ ಸೌಹಾರ್ದತೆಯ ಸಂಕೇತ. 1995 ರಲ್ಲಿ ನಿರ್ಮಾಣವಾದ ಈ ಕಾರಂಜಿಯು 13.8 ಮೀಟರ್ ಎತ್ತರವಿದ್ದು, ಹಿಂದೂ ಧರ್ಮದ ಮಂಡಲಗಳು ಹಾಗೂ ಚೀನೀಯರ ಫೆಂಗ್‌ಷು ಸಂಪ್ರದಾಯದಂತೆ ರೂಪಿಸಲಾಗಿದೆ. 1998 ರಲ್ಲಿ ವಿಶ್ವದ ಅತ್ಯಂತ ದೊಡ್ಡ ಕಾರಂಜಿಯೆಂದು ಗಿನ್ನೆಸ್ ದಾಖಲೆಯಲ್ಲಿ ಸೇರ್ಪಡೆಯಾಗಿದೆ.’ ಗೈಡ್ ಮಾತುಗಳನ್ನು ಆಲಿಸುತ್ತಾ ನಾವು ಕುತೂಹಲದಿಂದ ಕಾರಂಜಿಯ ಬಳಿ ಸಾರಿದೆವು. ಇದು ಅತ್ಯಂತ ಆಕರ್ಷಕವಾದ ವರ್ಣರಂಜಿತವಾದ ಸಂಗೀತ ಕಾರಂಜಿಯಂತೆ ಪುಟಿಯುತ್ತಿತ್ತು. ಕಾರಂಜಿಯ ಒಳ ಆವರಣದಲ್ಲಿ ವೃತ್ತಾಕಾರದಲ್ಲಿ ಹಾಲಿನ ನೊರೆಯಂತೆ ನೀರು ಚಿಮ್ಮುತ್ತಿತ್ತು. ಆ ನೀರನ್ನು ಸ್ಪರ್ಶಿಸುತ್ತಾ ಮೂರು ಬಾರಿ ಕಾರಂಜಿಯ ಸುತ್ತ ಪ್ರದಕ್ಷಿಣೆ ಮಾಡಿದರೆ ಐಶ್ವರ್ಯ ಹಾಗೂ ಆಯುಷ್ಯ ಲಭಿಸುತ್ತದೆ ಎಂಬ ನಂಬಿಕೆ ಅವರದು. ಸರಿ, ಇನ್ನೇಕೆ ತಡ, ಐಶ್ವರ್ಯ ದೊರೆತರೆ ಇನ್ನೂ ದೂರ ದೂರದ ದೇಶಗಳಿಗೆ ಪ್ರವಾಸ ಮಾಡಬಹುದಲ್ಲಾ ಎಂಬ ಆಸೆಯಿಂದ ನಾವೆಲ್ಲರೂ ಗಂಗೆಯನ್ನು ಸ್ಪರ್ಶಿಸುತ್ತಾ ಕಾರಂಜಿಯ ಸುತ್ತಲೂ ಮೂರು ಪ್ರದಕ್ಷಿಣೆ ಹಾಕಿದೆವು. ಗಂಗೆಯ ಸ್ಪರ್ಶವೇ ನಮ್ಮಲ್ಲಿ ಹೊಸತನ, ಉಲ್ಲಾಸ ಮೂಡಿಸಿತ್ತು. ಇನ್ನೂ ಹೆಚ್ಚಿನ ಸಂಪತ್ತು ಏನು ಬೇಕು ಎಂದು ನಮ್ಮನ್ನ ನಾವು ಪ್ರಶ್ನಿಸಿಕೊಳ್ಳುತ್ತಾ ಮುಂದೆ ಸಾಗಿದೆವು.

(ಮುಂದುವರೆಯುವುದು)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=45089

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *