ಜೀವನವು ನಿರಂತರ ಬದಲಾವಣೆ ಮತ್ತು ಬೆಳವಣಿಗೆಯ ಪಯಣ. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ತಮ್ಮ ಬದುಕಿನಲ್ಲಿ ಸಾಗಿ ಬಂದ ದಾರಿಯನ್ನು ಹಿಂತಿರುಗಿ ನೋಡಿದಾಗ ಅದೊಂದು ಅನುಭವಗಳ ಜೋಳಿಗೆ ಎಂದರೆ ತಪ್ಪಾಗಲಾರದು. ಒಂದರ್ಥದಲ್ಲಿ ವಿಭಿನ್ನ ಪುಟಗಳಿರುವ ಒಂದು ಸುಂದರ ಪುಸ್ತಕ. ಪ್ರತಿಯೊಂದು ಪುಟವನ್ನು ತಿರುಗಿ ನೋಡಿದಾಗ ಅಲ್ಲಿ ನೋವು, ನಲಿವು, ಸಂತೋಷ, ಗೆಲುವು, ಸೋಲು, ಎಲ್ಲವೂ ಅಡಗಿದೆ.
ನಮ್ಮನ್ನು ನಾವು ಚೆನ್ನಾಗಿ ಅರಿತುಕೊಂಡಿದ್ದೇವೆ ಎಂಬ ಭ್ರಮೆ ನಮಗಿರುತ್ತದೆ. ಆದರೆ ನಮಗೇ ಗೊತ್ತಾಗದೇ ಇರುವ ಎಷ್ಟೋ ವಿಷಯಗಳು ಬೇರೆಯವರಿಗೆ ಗೊತ್ತಿರುತ್ತದೆ. ಆದರೆ ನಾವು ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಕೆಲವೊಮ್ಮೆ ನಮ್ಮ ಪಕ್ಕದಲ್ಲಿ ಓಡಾಡುವವರನ್ನು ದಿನಾಲೂ ನೋಡಿ ಅವರ ಬಗ್ಗೆ ನಮ್ಮದೇ ಆದ ಅಭಿಪ್ರಾಯ ಬೆಳೆಸಿಕೊಡಿರುತ್ತೇವೆ. ಆದರೆ ನಿಜಕ್ಕೂ ನಮಗೆ ಅವರ ಬಗ್ಗೆ ಎಳ್ಳಷ್ಟೂ ತಿಳಿದಿರುವುದಿಲ್ಲ. ಇನ್ನೊಬ್ಬರನ್ನು ನೋಡಿದಾಗ ನಾವು ಅಂದುಕೊಳ್ಳುತ್ತೇವೆ, “ಎಷ್ಟೊಂದು ಖುಷಿಯಾಗಿದ್ದಾರೆ. ಏನೂ ಚಿಂತೆ, ಟೆನ್ಶನ್ ಇಲ್ಲ. ತುಂಬಾ ಲಕ್ಕಿ” ಅಂತ. ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ನಗುಮುಖಗಳು ಸ್ಪಷ್ಟ ಪ್ರತಿಬಿಂಬವಾಗಿರದೆ, ಬಲವಂತದ ಮುಖವಾಡವಾಗಿರುತ್ತದೆ. ವಾಸ್ತವದಲ್ಲಿ ಮನುಷ್ಯ ಮನುಷ್ಯನಿಗೆ ನಿಗೂಢವಾಗಿರುತ್ತಾನೆ.
ನನ್ನ ಮಟ್ಟಿಗೆ ಹೇಳುವುದಾದರೆ, ಬಾಲ್ಯದಿಂದಲೇ ನಾನು ಸ್ವಲ್ಪ ಗರ್ವಿಷ್ಟೆ. ಒರಟು, ಅಸಹನೆ, ಎಲ್ಲದರಲ್ಲೂ ಆತುರ, ನಾನು ಹೇಳಿದ್ದೇ ಸರಿ, ಅಸ್ಥಿರ ಮನಸ್ಸು, ಮತ್ತು ಎಲ್ಲರೊಡನೆ ಬೆರೆಯುತ್ತಿರಲ್ಲಿಲ್ಲ. ಶಾಲಾ, ಕಾಲೇಜು ದಿನಗಳಲ್ಲಿಯೂ ಕಲಿಕೆಯಲ್ಲಿ, ರೂಪದಲ್ಲಿ, ಅಂತಸ್ತಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳೊಡನೆ ಒಡನಾಟ ಇರಲಿಲ್ಲ. ಅಮ್ಮ ಹೇಳುತ್ತಿದ್ದ ನೆನಪು, “ನಿನಗೆ ಸಾಧಾರಣದವರು ಕಣ್ಣಿಗೆ ಹಿಡಿಸೊಲ್ಲ. ನಿನ್ನ ಈ ಗುಣ ನಿನ್ನ ತಂದೆಯವರ ಕಡೆಯಿಂದಲೇ ಸಿಕ್ಕಿದ್ದು” ಅಂತ. ಆದರೆ ನಾನು ಇದರ ಬಗ್ಗೆ ಹೆಚ್ಚು ತಲೆಕೆಡಿಸುತ್ತಿರಲ್ಲಿಲ್ಲ. ಜಂಬ, ದೌಲತ್ತು, ಧಿಮಾಕಿನಿಂದ ಕೂಡಿದ ವ್ಯಕ್ತಿತ್ವ ನನ್ನದಾಗಿತ್ತು. ಮಧ್ಯ ವಯಸ್ಕಳವರೆಗೂ ಬಹುಶ: ಇದೇ ವರ್ತನೆ ಮುಂದುವರಿದಿತ್ತು. ನನ್ನ ಕೊರತೆಗಳಿಗೆ ನಾನೇ ಕುರುಡಾಗಿದ್ದೆ. ಇತರರ ಭಾವನೆಗಳಿಗೆ ಸ್ಪಂದಿಸುವ ಮನೋಭಾವನೆ ಕಿಂಚಿತ್ತೂ ಇರಲಿಲ್ಲ. ಮನೆಯಲ್ಲೂ ನನ್ನ ತೀರ್ಮಾನವೇ ಅಂತಿಮವಾಗಬೇಕೆಂಬ ಹಠ.
ಕಾಲೇಜು ದಿನಗಳ ಒಂದು ಘಟನೆ ನನಗಿಲ್ಲಿ ನೆನಪಾಗುತ್ತಿದೆ. ಅಂತಿಮ ಬಿ.ಎ.ಯಲ್ಲಿರುವಾಗ ನಾವೆಲ್ಲರೂ ಪ್ರವಾಸಕ್ಕೆ ಹೋಗಿದ್ದೆವು. ರಾತ್ರಿ ಮಲಗಲು ವಸತಿಗೃಹವೊಂದರಲ್ಲಿ ಏರ್ಪಾಡು ಮಾಡಲಾಗಿತ್ತು. ಇಬ್ಬಿಬ್ಬರಿಗೆ ಒಂದು ಕೊಠಡಿಯನ್ನು ಹಂಚಿಕೆ ಮಾಡಲಾಗಿತ್ತು. ನನ್ನ ಬಳಿ ಮಲಗಿದ್ದ ಸಹಪಾಠಿಗೆ ಫ್ಯಾನ್ ಅಲರ್ಜಿ. ಆದರೆ ನನಗೆ ಫ್ಯಾನ್ ಇಲ್ಲದೆ ನಿದ್ದೆ ಬರುತ್ತಿರಲ್ಲಿಲ್ಲ. ಅವಳು ತುಂಬಾ ವಿನಂತಿಸಿದರೂ ನಾನು ಫ್ಯಾನ್ ಆಫ್ ಮಾಡಲು ಒಪ್ಪಲಿಲ್ಲ. ವಿಧಿಯಿಲ್ಲದೇ ಅವಳು ಸುಮ್ಮನಾಗಿ ರಾತ್ರಿಯಿಡೀ ಮಲಗಲಿಲ್ಲ. ಆಗ ನನಗೇನೂ ಅನಿಸಲಿಲ್ಲ. ನಾನು ಯಾಕೆ ಹಾಗೆ ವರ್ತಿಸಿದೆ ಎಂದು ನಂತರ ನನಗೆ ಅರಿವಾದಾಗ ಬಹಳ ವರ್ಷಗಳೇ ಕಳೆದಿದ್ದವು. ಪದವಿಯ ಬಳಿಕ ಅವಳ ಭೇಟಿಯಾಗಲೇ ಇಲ್ಲ. ಈಗಲೂ ಒಮ್ಮೆ ಸಿಕ್ಕಿದರೆ ಕ್ಷಮೆ ಕೇಳಬೇಕು ಎಂದು ಯಾವಾಗಲೂ ಅನಿಸುತ್ತದೆ.
ಜೀವನದಲ್ಲಿ ನಾನು ನನ್ನನ್ನು ಎಂದೂ ಕ್ಷಮಿಸಲಾಗದ ಇನ್ನೊಂದು ಘಟನೆ ಇಲ್ಲಿ ಹೇಳಲೇಬೇಕು. ನಮ್ಮ ತಾಯಿಯವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಅಮ್ಮ ಸರ್ಕಾರಿ ಉದ್ಯೋಗದಲ್ಲಿದ್ದು, ಪಿಂಚಣಿ ದೊರೆಯುತ್ತಿದ್ದರೂ ಚಿಕಿತ್ಸೆಗಾಗಿ ತುಂಬಾ ಖರ್ಚಾಗುತ್ತಿತ್ತು. ಎಲ್ಲಾ ಮಕ್ಕಳೂ ಅಮ್ಮನಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದರು. ನಾನೂ ಪ್ರತೀ ತಿಂಗಳು ಹಣ ಕೊಟ್ಟು, ನೋಡಿ, ಬರುತ್ತಿದ್ದೆ. ತುಂಬಾ ಹೊತ್ತು ಕುಳಿತು ಮಾತಾನಾಡುವ ವ್ಯವಧಾನವಿರಲ್ಲಿಲ್ಲ. ಅವರು ನನಗೆ ಕೆಲವೊಮ್ಮೆ ಫೋನ್ ಮಾಡಿ ಆಗಾಗ್ಗೆ ಕರೆಯುತ್ತಿದ್ದರು. “ಒಮ್ಮೆ ಬಂದು ಹೋಗು.” ಆದರೆ ನನ್ನ ಕೆಲಸದ ಒತ್ತಡ, ವೈಯಕ್ತಿಕ ಕೆಲಸ, ಇನ್ನಿತರ ಬದ್ಧತೆಯಿಂದಾಗಿ ಅವರಿಗೆ ಅಗತ್ಯವಿದ್ದ ಸಮಯ ಕೊಡುತ್ತಿರಲ್ಲಿಲ್ಲ. ಆರ್ಥಿಕವಾಗಿ ಸಹಾಯ ಮಾಡುತ್ತಿದ್ದೇನೆ ಎಂಬ ಸಮಾಧಾನವಿತ್ತು. ತಂಗಿ ಆಗಾಗ್ಗೆ ಹೋಗಿ ಅವರನ್ನು ಉಪಚರಿಸುವುದು, ಅವರಿಗೆ ಇಷ್ಟವಾದ ವಸ್ತುಗಳನ್ನು ತಂದು ಕೊಡುವುದು, ಹೀಗೆ ಚೆನ್ನಾಗಿ ಆರೈಕೆ ಮಾಡುತ್ತಿದ್ದಳು. ಆದರೆ ಹಣಕಾಸಿಕ್ಕಿಂತಲೂ ಮಿಗಿಲಾಗಿ ನಮ್ಮ ಅಲ್ಪ ಸಮಯ, ಎರಡು ಪ್ರೀತಿಯ ಮಾತುಗಳು, ಸ್ವಲ್ಪ ಗಮನ, ವೈಯಕ್ತಿಕ ಕಾಳಜಿ ಇವು ನಿಜವಾಗಿಯೂ ನಾವು ಕೊಡುವ ಅತೀ ದೊಡ್ಡ ನೆರವು ಎಂದು ಅರಿವಾದಾಗ ಅವರನ್ನು ಕಳಕೊಂಡು ಬಿಟ್ಟಿದ್ದೆ. ಆ ವಿಷಾದ, ಪಶ್ಚಾತ್ತಾಪ, ದಿನಾಲೂ ಕಾಡುತ್ತದೆ. ವಾರಕ್ಕೊಮ್ಮೆಯಾದರೂ ಹೋಗಬೇಕಿತ್ತು ಎಂದು ನೆನೆದು ದು:ಖಿಸುತ್ತೇನೆ. ಉತ್ತಮ ವಿದ್ಯಾಭ್ಯಾಸ ಕೊಟ್ಟು, ಉನ್ನತ ಹುದ್ದೆ ದೊರಕುವಲ್ಲಿ ಮಹತ್ತರ ಪಾತ್ರ ವಹಿಸಿದ್ದ, ಅಮ್ಮನ ತ್ಯಾಗವನ್ನು ಗುರುತಿಸಲಾಗದ ನಿಷ್ಕರುಣಿಯಾದೆನಲ್ಲಾ ಎಂಬ ಪಾಪ ಪ್ರಜ್ಞೆ ಇಂದಿಗೂ ಕಾಡುತ್ತದೆ. ಬದುಕು ಹಾಗೂ ವೃತ್ತಿಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ವಿಫಲಳಾದೆ ಎಂದು ಮನಸ್ಸು ವ್ಯಥೆಗೊಳ್ಳುತ್ತದೆ. ಅಗಲಿದ ನನ್ನ ಪತಿಯವರೊಂದಿಗೆ ಅದೆಷ್ಟು ಬಾರಿ ಅನಗತ್ಯ ವಾದ ವಿವಾದಕ್ಕಿಳಿದು ಕೊನೆಗೆ ನಾನೇ ಗೆದ್ದೆ ಎಂಬ ಹುಂಬತನವನ್ನು ನೆನೆದಾಗಲೆಲ್ಲಾ ಭಾವುಕಳಾಗುತ್ತೇನೆ.
2002ರಲ್ಲಿ ಮಂಗಳಾದೇವಿಯಲ್ಲಿ ನಡೆದ ಶ್ರೀ ರವಿಶಂಕರ್ ಗುರೂಜಿಯವರ ‘ಆರ್ಟ್ ಓಫ್ ಲಿವಿಂಗ್’ ಶಿಬಿರದಲ್ಲಿ ಪಾಲ್ಗೊಂಡಿದ್ದು ನನ್ನ ಜೀವನದ ಮೊದಲನೇ ತಿರುವು. ನನ್ನಲ್ಲಿರುವ ಲೋಪಗಳನ್ನು ತಿದ್ದಿಕೊಳ್ಳಲು ಅಪೂರ್ವ ವೇದಿಕೆಯಾಗಿತ್ತು. ಸುದರ್ಶನಾ ಕ್ರಿಯೆ, ಉಸಿರಾಟ, ಧ್ಯಾನದ ಮೂಲಕ ಸಿಟ್ಟನ್ನು ನಿಯಂತ್ರಿಸಿ, ತಾಳ್ಮೆಯನ್ನು ಕಲಿತು ಬಹಳಷ್ಟು ಸುಧಾರಿಸಿದ್ದೆ. ನಂತರ ನನ್ನ ವ್ಯಕ್ತಿತ್ವದಲ್ಲಿ ಗಮನಾರ್ಹ ಬದಲಾವಣೆಯಾದದ್ದು, ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ನಡೆದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂದರ್ಭದಲ್ಲಿ. ಮೂರು ವಾರಗಳ ಕಾಲ ನಡೆಯುವ “ಜೀವನ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ” ತರಬೇತಿ ಕಾರ್ಯಕ್ರಮಕ್ಕೆ ಕಾಲೇಜಿನಿಂದ ನಿಯೋಜಿಸಲ್ಪಟ್ಟಿದ್ದೆ. ಇದೊಂದು ನನ್ನ ಬದುಕಿನ ಸುವರ್ಣ ಅವಕಾಶವಾಗಿತ್ತು. ಸಕರಾತ್ಮಕ ಚಿಂತನೆಯಿಂದ ಮಾನಸಿಕ ಆರೋಗ್ಯ ವೃದ್ದಿಸುವ ಸರ್ವ ಕಲೆಯನ್ನು ಕಲಿಸಿ ಕೊಡಲಾಗುತ್ತಿತ್ತು. ಈ ನಿಮ್ಹಾನ್ಸ್ ನಲ್ಲಿ ದೊರಕಿದ ತರಬೇತಿಯು ನನ್ನ ವ್ಯಕ್ತಿತ್ವವನ್ನೇ ಬದಲಾಯಿಸಿತು. ಪ್ರಾಯೋಗಿಕ ತರಗತಿಗಳು ಅದ್ಭುತವಾಗಿ ನನ್ನಲ್ಲಿ ಪರಿಣಾಮ ಬೀರಿತ್ತು. ಆ ದಿನದಿಂದಲೇ ಜೀವನ ಕೌಶಲ್ಯಗಳಾದ ಸಂಯಮ, ಸಹನೆ, ಸಹಾನುಭೂತಿ, ಕ್ಷಮೆ, ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ, ಒತ್ತಡ ನಿರ್ವಹಣೆ, ಮತ್ತು ಇತರ ಕಲೆಗಳನ್ನು ಮೈಗೂಡಿಸಿಕೊಂಡ ನಾನು, ಇನ್ನು ಮುಂದೆ ಈ ಕೌಶಲ್ಯಗಳನ್ನು ಜೀವನದುದ್ದಕ್ಕೂ ಅಳವಡಿಸಬೇಕೇಂದು ತೀರ್ಮಾನಿಸಿದೆ. ನಾನು, ನನ್ನದೇ ಸರಿ ಎಂಬ ಹುಂಬತನ, ಅಹಂ ಹಾಗೂ ಎಲ್ಲವನ್ನೂ ನಿಯಂತ್ರಿಸಬಲ್ಲೆ ಎಂಬ ಭ್ರಮೆಯಿಂದ ಹೊರಬಂದೆ. ಯಾವತ್ತೂ ದುಡುಕದೆ, ಸಮ ಚಿತ್ತದಿಂದ, ಶಾಂತಿಯಿಂದ ವ್ಯವಹರಿಸಬೇಕೆಂದು, ಯಾರ ಮೇಲೂ ಹಗೆತನ, ಸೇಡು, ಋಣಾತ್ಮಕ ಭಾವನೆ ಇತ್ಯಾದಿಗಳಿಗೆಲ್ಲಾ ಮುಕ್ತಿ ನೀಡಬೇಕೆಂದೂ ಮನಸ್ಸಿನಲ್ಲೇ ದೃಢ ಸಂಕಲ್ಪ ಮಾಡಿಕೂಂಡೆ. ಅಂದಿನಿಂದ ನಾನು ಯಾರಲ್ಲೂ ಭೇದ-ಭಾವ ಮಾಡಿಲ್ಲ. ನನ್ನಲ್ಲಾದ ಬದಲಾವಣೆಯನ್ನು ಮನೆಯವರೂ, ಸ್ನೇಹಿತರೂ ಗುರುತಿಸಿದ್ದೇ ನನಗೆ ಸಿಕ್ಕ ಟೆಸ್ಟಿಮೋನಿಯಲ್ ಅಥವಾ ಪ್ರಶಂಸಾ ಪತ್ರ.
ನನ್ನ ವ್ಯಕ್ತಿತ್ವಕ್ಕೆ ಇನ್ನಷ್ಟು ಮೆರುಗು ನೀಡಿ, ಅಭೂತಪೂರ್ವವಾಗಿ ಬದಲಾಯಿಸಿದ ಇನ್ನೊಂದು ಪ್ರಬಲ ಅಸ್ತ್ರ, ನನ್ನ ಸಹದ್ಯೋಗಿ ಮಿತ್ರರೊಬ್ಬರು ಉಡುಗೊರೆಯಾಗಿ ನೀಡಿದ, ರಾಬಿನ್ ಶರ್ಮಾ ಬರೆದ ‘ದ ವೆಲ್ತ್ ಮನಿ ಕಾಂಟ್ ಬೈ’ ಎಂಬ ಪುಸ್ತಕ. ಪ್ರತಿಯೊಬ್ಬರೂ ತಪ್ಪದೇ ಓದಲೇಬೇಕಾದ ಈ ಪುಸ್ತಕವು ನನ್ನಲ್ಲಿ ಆತ್ಮ ಪರಿವರ್ತನೆಗೆ ಪೂರಕವಾಯಿತು. ಜೀವನದ ಬಗ್ಗೆ ನನ್ನ ದೃಷ್ಟಿಕೋನವೇ ಬದಲಾಯಿಸಿತು. ಹಣದಿಂದ ಶ್ರೀಮಂತಿಕೆ ಬದುಕು ನಡೆಸುವುದಕ್ಕಿಂತಲೂ ಉತ್ತಮ ನಡವಳಿಕೆ, ಮಾನವೀಯ ಸಂಬಧಗಳು, ಆಂತರಿಕ ಶಾಂತಿ, ಆತ್ಮತೃಪ್ತಿಯ ಜೀವನವೇ ಎಲ್ಲಕ್ಕಿಂತಲೂ ಶ್ರೇಷ್ಠ ಎಂಬುದನ್ನು ಅರ್ಥಗರ್ಭಿತವಾಗಿ ಈ ಪುಸ್ತಕವು ತಿಳಿಸಿಕೊಟ್ಟಿತ್ತು. ಜೀವನ ಪೂರ್ತಿ ಹಣ ಸಂಪಾದನೆಗಾಗಿ ಕುಟುಂಬಕ್ಕಿಂತ ಕರ್ತವ್ಯಕ್ಕೇ ಆದ್ಯತೆ ಕೊಟ್ಟ ನನಗೆ ಹಣ, ಸ್ಥಾನಮಾನ, ಯಶಸ್ಸು ಇವುಗಳಿಗಿಂತಲೂ ಮಿಗಿಲಾಗಿ ನಮ್ಮ ನಡವಳಿಕೆ, ವರ್ತನೆ, ಇತರರಿಗೆ ಸ್ಪಂದಿಸುವ ಮನೋಭಾವನೆ, ಹಾಗೂ ಜೀವನ ಮೌಲ್ಯಗಳೇ ನಿಜವಾದ ಸಂಪತ್ತು ಎಂದು ಮನವರಿಕೆ ಮಾಡಿದ ಆ ಪುಸ್ತಕದಿಂದ ಬಹಳಷ್ಟು ಪ್ರಭಾವಿತಳಾದೆ. ಈಗಲೂ ಮನಸ್ಸಾದಾಗ ದಿನಾಲೂ ಒಂದೆರಡು ಪುಟಗಳನ್ನು ಓದುತ್ತಿರುತ್ತೇನೆ. ಪ್ರತೀ ಬಾರಿ ಓದುವಾಗಲೂ ಧೈರ್ಯ, ಸ್ಪೂರ್ತಿ, ಹಾಗೂ ಅರ್ಥಪೂರ್ಣ ಬದುಕು ನಡೆಸಲು ಪ್ರೇರೇಪಿಸುತ್ತದೆ.
‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ’ ಎಂಬ ಬಸವಣ್ಣನವರ ವಚನದಂತೆ, ನಾವು ಇಲ್ಲಿಂದಲೇ ಸ್ವಯಂ ಪರಿವರ್ತನೆಗೊಂಡು ವಿಮೋಚನೆ ಹೊಂದಬೇಕು. ಜೀವಿಸುವುದಕ್ಕಿಂತಲೂ, ಹೇಗೆ ಜೀವಿಸುತ್ತಿದ್ದೇವೆ ಎಂಬುದು ಮುಖ್ಯ. “ನಿನ್ನೊಳಗೆ ನೀ ಹೊಕ್ಕು, ನಿನ್ನನ್ನೇ ನೀ ಕಂಡು, ನೀನು ನೀನಾಗು ಗೆಳೆಯ” ಎಂಬ ಬೇಂದ್ರೆಯವರ ಕವನದ ಸಾಲಿನಂತೆ ಎಲ್ಲಾ ಶಕ್ತಿಗಳು ನಮ್ಮ ಆಂತರ್ಯದಲ್ಲಿ ಅಡಗಿವೆ. ನಮ್ಮೊಳಗೆ ಹೊಕ್ಕು ಸರಿಪಡಿಸಬೇಕಾದದ್ದು ನಾವೇ. ಈ ಜೀವನವೆಂಬ ಪಾಠಶಾಲೆಯಲ್ಲಿ ಕಲಿತ ಅನುಭವಗಳಿಂದಲೂ, ಆತ್ಮಾವಲೋಕನದಿಂದಲೂ ನನ್ನ ನೈಜ ಸ್ವರೂಪ ತಿಳಿದು ಕೊಳ್ಳುವಲ್ಲಿ ನಾನು ಯಶಸ್ವಿಯಾಗಿದ್ದೇನೆ. ತಾಯಿಯವರ ಸ್ಮರಣೆ ನನ್ನನ್ನು ಸಂವೇದನಾಶೀಲ ವ್ಯಕ್ತಿಯನ್ನಾಗಿಸಿದೆ. ನಮೃತೆ, ಕೃತಜ್ಞತೆ ಬದುಕನ್ನು ಬಹಳ ಹಗುರಾಗಿಸಿದೆ. ಕೆಲವೊಂದು ತಪುö್ಪಗಳನ್ನು ಸರಿಪಡಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲದಿದ್ದರೂ, ಅವುಗಳಿಂದ ಕಲಿತ ಪಾಠ ನನ್ನನ್ನು ಸೌಮ್ಯವಾಗಿರಿಸಿ ಉತ್ತಮ ವ್ಯಕ್ತಿಯನ್ನಾಗಿ ಮಾಡಿದೆ. ನನ್ನ ತಪ್ಪುಗಳನ್ನು ಅರಿತು ತಿದ್ದಿಕೊಳ್ಳುವ ಪ್ರಯತ್ನವು ತಡವಾದರೂ ದೊರೆತ ಅವಕಾಶಗಳನ್ನು ಬಳಸಿ ಸಂಪೂರ್ಣವಾಗಿ ನನ್ನನ್ನೇ ಬದಲಾಯಿಸಿಕೊಂಡೆ. ಇಂದು ಹಿಂತಿರುಗಿ ನೋಡಿದಾಗ ಪಶ್ಚಾತಾಪವೂ ಇದೆ. ಆ ಸ್ವಾರ್ಥದ ಬದುಕಿನಿಂದ ಮುಕ್ತಳಾಗಿದ್ದಕ್ಕೆ ಕೃತಜ್ಞತೆಯೂ ಇದೆ. ಒಟ್ಟಿನಲ್ಲಿ ನನ್ನೊಳಗಿನ ಹುಡುಕಾಟವು ಅಂಧಕಾರವನ್ನು ಕಳೆದು ಬೆಳಕನ್ನು ಮೂಡಿಸಿದೆಯಾದರೂ, ಎಂದೆಂದಿಗೂ ಸರಿಪಡಿಸಲಾಗದ ಹಿಂದಿನ ಕೆಲವು ಪ್ರಮಾದಗಳು ಕೊನೆಯವರೆಗೂ ಕಾಡುತ್ತಲೇ ಇರುತ್ತವೆ.

ಶೈಲಾರಾಣಿ ಬಿ. ಮಂಗಳೂರು

