ಪೌರಾಣಿಕ ಕತೆ

ಕಾವ್ಯ ಭಾಗವತ 93 : ಪ್ರದ್ಯುಮ್ನ

Share Button

ದಶಮ ಸ್ಕಂದ – ಉತ್ತರಾರ್ಧ – ಅಧ್ಯಾಯ – 8
ಪ್ರದ್ಯುಮ್ನ

ಮಹಾರುದ್ರದೇವ ಉಗ್ರ ತಪಸ್ಸಿಗೆ ಕುಳಿತಿರೆ
ದೇವಕಾರ್ಯಾರ್ಥಕೆ ಅವನ ಬಹಿರ್ಮುಖನಾಗಿಸಿ
ತಪಸ್ವಿನಿ ಪರ್ವತ ರಾಜಪುತ್ರಿ
ಉಮಾದೇವಿಯ ವರಿಸಲೆಂಬ
ಅಪೇಕ್ಷೆಯಲಿ
ಕಾಮದೇವ ಪುಷ್ಪಬಾಣದಿ ಘಾತಿಸೆ
ಕೆರಳಿದ ರುದ್ರದೇವ ಮನ್ಮಥನ
ತನ್ನ ಹಣೆಗಣ್ಣಿನಿಂದ ಧಹಿಸಿದ

ಮನ್ಮಥ ವಸುದೇವಾಂಗ ಸಂಭೂತ
ಹರಿಯ ಅನುಗ್ರಹದಿಂ
ರುಕ್ಮಿಣೀದೇವಿಯ ಉದರದಲಿ
ಕೃಷ್ಣ ಪುತ್ರನಾಗಿ ಜನಿಸಿದ

ಜನಿಸಿದ ಹತ್ತು ದಿನದೊಳಗೆ
ಶಂಬರಾಸುರ ರಕ್ಕಸ
ಶಿಶುವನಪಹರಿಸಿ
ಸಮುದ್ರದಲಿ ಬಿಸುಟಿದನು

ಆ ಶಿಶುವ ನುಂಗಿದ ಮೀನು
ಬೆಸ್ತನ ಬಲೆಗೆ ಸಿಲುಕೆ
ಬೆಸ್ತ ತನ್ನ ರಕ್ಕಸ ರಾಜ ಶಂಬರಾಸುರಗೆ ಒಪ್ಪಿಸೆ
ಯೋಗ್ಯ ಪಾಕವ ಸಿದ್ಧಪಡಿಸಲೋಸುಗ
ಪಾಕಶಾಲೆಯಲಿ ಅದ ಕೊಯ್ದಾಗ
ಅದರುದರಲಿರುವ ಮನೋಹರ ಶಿಶುವ ನೋಡಿ
ಪರಮಾಶ್ಚರ್ಯದಿ ಪಾಚಕನು ಶಿಶುವ
ಶಂಬರಾಸುರಗೆ ಒಪ್ಪಿಸೆ
ಅಸುರ ಅದ ಪೋಷಿಸಲು
ದಾಸಿ ಮಾಯಾವತಿಗೊಪ್ಪಿಸಿದ

ಮಾಯಾವತಿ ಮನ್ಮಥನ ಪತ್ನಿ ರತಿದೇವಿ
ಶಿಶುವು ತನ್ನ ಪೂರ್ವಜನ್ಮದ ಪತಿಯೆಂಬ
ತಿಳಿವಿನಿಂದ ಅದನು
ವಿಶೇಷ ಪ್ರೀತಿಯಲಿ ಪೋಷಿಸಿದಳು

ಕಾಲಕ್ರಮದಿ ಯೌವನ ವಯಸ್ಕನಾದವನಲಿ
ಮಾಯಾವತಿ ಮೋಹವನು ಪ್ರಕಟಿಸೆ
ಪ್ರದ್ಯುಮ್ನ ವಿಚಲಿತನಾಗಿ
ತನ್ನ ಶೈವಾವಸ್ಥೆಯಿಂದಲೂ
ತಾಯಿಯಂತೆ ಪೋಷಿಸಿ ಈಗ
ಮೋಹಪರವಶಳಾಗಿಹ
ವಿಚಿತ್ರವ ಪ್ರಶ್ನಿಸೆ
ಮಾಯಾವತಿ ಪೂರ್ವಜನ್ಮದಿ ಅವನು
ಮನ್ಮಥನಾಗಿ ಅವಳವನ ಬಾರ್ಯೆ
ರತಿ ಎಂಬುದ ಅರುಹುದಳು

ನಂತರ ಇಬ್ಬರೂ ದ್ವಾರಕೆಗೆ
ತೆರಳುವ ಮೊದಲು
ಆಜನ್ಮ ಶತ್ರು ಶಂಬರಾಸುರನ ವಧಿಸಿ
ದ್ವಾರಕೆಯ ತಲುಪಿದರು

ಕೃಷ್ಣನಂತೆಯೇ ಶ್ಯಾಮಲವರ್ಣ ವಿಶಿಷ್ಟನಾಗಿ
ವಸ್ತ್ರಾಭರಣಗಳಿಂದ ವಿಭೂಷಿತನಾಗಿರ್ಪ
ಪ್ರದ್ಯುಮ್ನನ ಕಂಡು
ಅಂತಃಪುರ ಸ್ತ್ರೀಯರೆಲ್ಲರೂ ಅವನ
ಶ್ರೀಕೃಷ್ಣನೆಂದೇ ಭ್ರಮಿಸಿದರು

ಅಂತಃಪುರದಿ ಸ್ವತಃ ರುಕ್ಮಿಣೀದೇವಿಗೆ
ಈ ನೂತನ ಪುರುಷನ ನೋಡಿ
ಸ್ತನಗಳಲಿ ಹಾಲು ತೊರೆಯಲಾರಂಭಿಸೆ
ಅಪಹೃತ ಅವಳ ಮಗುವೇ ಜೀವಿಸಿ
ವಯಸ್ಕನಾಗಿಹನೆಂಬ ಭಾವ ಸ್ಪುರಿಸೆ
ಆ ಸಮಯಕೆ ಆಗಮಿಸಿದ ನಾರದ ಮಹರ್ಷಿ
ಶಂಬರಾಸುರ ಅಪಹರಿಸಿದ ಕೃಷ್ಣ ಪುತ್ರ
ಪ್ರದ್ಯುಮ್ನ ಇವನೇ ಎಂದರುಹುದರು

ಪ್ರದ್ಯುಮ್ನ ಮಾಯಾವತಿಯರ
ಮಗ ಸೊಸೆಯಾಗಿ ಸ್ವೀಕರಿಸಿ
ಕೃಷ್ಣ ರುಕ್ಮಿಣಿಯರು ಸಂಭ್ರಮಿಸಿದರು

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :
 https://surahonne.com/?p=45010

-ಎಂ. ಆರ್.‌ ಆನಂದ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *