80 – ದಶಮ ಸ್ಕಂದ – ಪೂರ್ವಾರ್ಧ – ಅಧ್ಯಾಯ – 4
ಕಾಳಿಂಗಮರ್ದನ
ಗೋಪಾಲಕರೆಲ್ಲ ಬಿಸಿಲಬೇಗೆಯಲಿ ಬಲವಳಿದು
ಯಮುನೆಯ ತೀರಕೆ ಬಂದು
ಒಂದು ಮಡುವಿನ್ನಲ್ಲಿಳಿದು ಜಲಪಾನ ಮಾಡೆ
ಕಾಳೀಯ ಸರ್ಪದ ವಾಸಸ್ಥಾನವಾದ
ಆ ಮಡುವಿನ ಜಲವೆಲ್ಲ ವಿಷಪ್ರಾಯವಾಗಿರೆ
ಜಲಪಾನ ಮಾಡಿದೆಲ್ಲ ಗೋಪರು
ಮೂರ್ಛಿತರಾದರು
ಶ್ರೀಕೃಷ್ಣನ ಮೃತಸಂಜೀವಿನಿ ನೋಟಕೆ
ಎಚ್ಚೆತ್ತು ಮೃತಪಾಯರಾಗಿ ಬಿದ್ದವರು
ಕೃಷ್ಣ ಮಹಿಮೆಯಿಂ ಬದುಕುಳಿದರು
ಕಾಳೀಯ ಮಡುವಿಂದ ಹೊರಡಿಸಿ
ಮಡುವಿನೆಲ್ಲ ನೀರನು ಶುದ್ಧೀಮಾಡಲೆತ್ನಿಸಿದ ಕೃಷ್ಣ
ಏಕಾಂಗಿಯಾಗಿ ಮಡುವಿನೊಳಗೆ ಬಹು ಎತ್ತರದಲ್ಲಿದ್ದ
ಕದಂಬ ವೃಕ್ಷವನ್ನೇರಿ ಜಲದ ಮಡುವಿಗೆ ಧುಮುಕಿದೊಡನೆ
ಭಯದಿಂದ ಅಲ್ಲಿರ್ಪ ಸರ್ಪಗಳೆಲ್ಲ
ದಿಕ್ಕಾಪಾಲಾಗಿ ಚದುರಿ ತಮ್ಮ ವಿಷವನ್ನೆಲ್ಲ ಕಕ್ಕಿದರು
ವಿಷಪೂರಿತ ಜಲದಿ ಕೃಷ್ಣನು ನಿರ್ಭಯದಿ ಈಜುತಿರೆ
ಮಡುವ ತಳದಿ ಸುಖನಿದ್ರೆಯಲ್ಲಿದ್ದ ಕಾಳಿಂಗ ನಾಗೇಂದ್ರನು
ರೋಷಾವೇಷದಿ ಕೃಷ್ಣನ ತನ್ನ ನೀಳಕಾಯದಿ ಸುತ್ತಿ ಹಿಡಿದು
ಅವನ ಮರ್ಮರ್ಸ್ಥಾನವನ್ನೆಲ್ಲಾ
ಹೆಡೆಗಳ ನೂರಾರು ಕೋರೆದಾಡಿಗಳಿಂದ ಕಚ್ಚಿದನು
ಕ್ಷಣಕಾಲ ನಿಶ್ಚೇತನಾದಂತಿದ್ದ ಕೃಷ್ಣನ ದೂರದಿ ನಿಂತು
ವೀಕ್ಷಿಸುತ್ತಿರ್ಪ ಗೋಪಾಲಕರು ಹಾಹಾಕಾರ ಮಾಡಲು
ಬಲರಾಮ ಅವರೆಲ್ಲರನು ಸಂತೈಸಿದ
ತದನಂತರದಿ ಕಣ್ತೆರೆದ ಕೃಷ್ಣ
ತನ್ನ ಕೈಕಾಲುಗಳ ಬಿಗಿತವಂ ತಪ್ಪಿಸುತೆ
ಒಮ್ಮೆಗೆ ಟಣ್ಣನೆ ನೆಗೆದು
ಕಾಳಿಂಗನ ಹೆಡೆಗಳ ಮೇಲೆ ಪಾದಗಳನ್ನಿಟ್ಟು
ನರ್ತಿಸಲಾರಂಭಿಸೆ
ಸೋತು ಬೆಂಡಾಗಿದ್ದ ಕಾಳೀಯ ನೂರು
ಬಾಯಿಗಳಿಂದಲೂ ಬಿಸಿಯುಸಿರ ಬಿಡುತ್ತಾ
ಆ ಸ್ಥಳದಲೆಲ್ಲಾ ಉಷ್ಣವಾತಾವರಣವನ್ನುಂಟುಮಾಡಿ
ಬಸವಳಿದು ತಮ್ಮೆಲ್ಲಾಪರಾಧವ ಮನ್ನಿಸಲು ಶರಣಾಗಿ ಪ್ರಾರ್ಥಿಸೆ
ಮದವಿಳಿದು ನಮ್ರನಾದವನ ಕ್ಷಮಿಸಲು
ಕಾಳಿಂಗನ ಪತ್ನಿಯರಾದ ನಾಗಸ್ರ್ತೀಯರು ತಮ್ಮ
ಮಾಂಗಲ್ಯ ರಕ್ಷಣೆಯ ಬೇಡಲು
ಕೃಷ್ಣ ಹೆಡೆಯಿಂದ ತನ್ನ ಪಾದಗಳ ತೆಗೆದು
ಕಾಳಿಂಗನಿಗೆ ತನ್ನ ಪರಿವಾರದೊಡಗೂಡಿ
ಮಡುವ ಬಿಟ್ಟು ಸಮುದ್ರದೆಡೆ ತೆರಳಲು ತಿಳಿಸಿ
ವಿಷಮಯವಾದ ಮಡುವ
ಶುಚಿರ್ಭೂತ ಮಡುವನ್ನಾಗಿಸಿ
ಗೋಪಾಲಕರ ಮನಗೆದ್ದನು ಶ್ರೀಕೃಷ್ಣ
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44542

-ಎಂ. ಆರ್. ಆನಂದ, ಮೈಸೂರು

