ಭೂಮಿಯ ಮೇಲಿನ ಜೀವಿಗಳಿಗೆ ದಿನವಿಡೀ ಚಟುವಟಿಕೆಯಲ್ಲಿ ಕಾಲ ಕಳೆದ ನಂತರ ದೇಹಕ್ಕೆ ದಣಿವು, ಮನಸ್ಸಿಗೆ ಆಯಾಸ ಉಂಟಾಗುತ್ತದೆ. ಇದು ಸಹಜ ಪ್ರಕ್ರಿಯೆ. ಆಗ ಅಗತ್ಯವಾಗಿ ದಣಿವಾರಿಸಿಕೊಳ್ಳಲು ವಿಶ್ರಾಂತಿಯ ಆವಶ್ಯಕತೆ ಉಂಟಾಗುತ್ತದೆ. ಊಟ, ತಿಂಡಿಗಳ ಜೊತೆಗೆ ನಿದ್ದೆ ಇದಕ್ಕೆ ಪರಿಹಾರ ನೀಡುತ್ತದೆ. ನಿದ್ದೆ ಮಾಡುವ ರೀತಿ ಪ್ರತಿಯೊಂದು ಜೀವಿಗಳಲ್ಲಿ ಬೇರೆ ಬೇರೆ ರೀತಿಯದು. ಸದ್ಯಕ್ಕೆ ನಾವು ಮನುಷ್ಯರ ಬಗ್ಗೆ ಮಾತ್ರ ಗಮನ ಹರಿಸೋಣ. ನಿದ್ದೆ ಮಾಡಿದಾಗ ದೇಹದ ಅಂಗಾಂಗಗಳಿಗೆ ವಿರಾಮ ದೊರಕಿ ದೇಹಾಯಾಸ ಪರಿಹಾರವಾಗುತ್ತದೆ. ನಿದ್ದೆಯಿಂದ ಎಚ್ಚರಗೊಂಡಾಗ ಪುನಃ ಕೆಲಸ ಮಾಡುವ ಉತ್ಸಾಹ ಬರುತ್ತದೆ. ಅದೇ ರೀತಿಯಾಗಿ ಮನಸ್ಸಿಗೂ ಯಾವುದೇ ಯೋಚನೆಗಳ ಒತ್ತಡವಿಲ್ಲದೆ ನೆಮ್ಮದಿಯ ವಿಶ್ರಾಂತಿ ದೊರೆತು ಪುನಶ್ಚೇತನಗೊಳ್ಳುತ್ತದೆ.
ಉದಾಹರಣೆಗೆ ಒಬ್ಬ ಕಟ್ಟಿಗೆ ಸೀಳುವ ಕಾಯಕ ಮಾಡುವ ಮನುಷ್ಯ ತನ್ನ ಜೀವನ ನಿರ್ವಹಣೆಗಾಗಿ ಆ ಕೆಲಸದಲ್ಲಿ ತೊಡಗಿರುತ್ತಾನೆ. ಅದು ದೈಹಿಕವಾಗಿ ಶ್ರಮದಾಯಕವಾದದ್ದು. ಕೆಲಸದ ಮಧ್ಯೆ ಅಲ್ಪ ವಿರಾಮ ಪಡೆದರೂ ಸಂಜೆಯವರೆಗೆ ನಿರಂತರ ಕೆಲಸ. ಕೈಕಾಲುಗಳು ಸಾಕಷ್ಟು ದಣಿದು ವಿಶ್ರಾಂತಿ ಬಯಸುತ್ತಿರುತ್ತವೆ. ರಾತ್ರಿ ಅವನು ಊಟಮಾಡಿದ ಬಳಿಕ ಮಲಗಿದರೆ ಸ್ವಲ್ಪ ಕಾಲದಲ್ಲೇ ನಿದ್ದೆಗೆ ಒಳಗಾಗುತ್ತಾನೆ. ಏಕೆಂದರೆ ಅವನು ದಿನದಿಂದ ದಿನಕ್ಕೆ ದುಡಿದು ಬದುಕುವ ಕಾಯಕದವನು. ಹೆಚ್ಚಾಗಿ ತನ್ನ ಭವಿಷ್ಯದ ಆಗುಹೋಗುಗಳ ಬಗ್ಗೆ ಚಿಂತೆ ಮಾಡುವುದಿಲ್ಲ. ಆದ್ದರಿಂದಲೆ “ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ” ಎಂಬ ಗಾದೆ ಹುಟ್ಟಿದೆ. ಆದರೆ ಸ್ವಲ್ಪ ಮಧ್ಯಮ ವರ್ಗದ ಜನರಲ್ಲಿ ಬೌದ್ಧಿಕ ಕಾಯಕದಲ್ಲಿ ತೊಡಗುವವರಲ್ಲಿ ಜೀವನದ ರೀತಿಯೇ ಬೇರೆಯದಾಗಿರುತ್ತದೆ. ಬೆಳಗ್ಗೆ ಕೆಲಸಕ್ಕೆ ಹೋದರೆ ಸಂಜೆಗೆ ನಿಯಮಿತ ಅವಧಿಯವರೆಗೆ ದುಡಿದು ಮನೆಗೆ ದೌಡಾಯಿಸುತ್ತಾರೆ. ಅವರು ಕುಟುಂಬ ನಿರ್ವಹಣೆಯ ಹಲವು ಕರ್ತವ್ಯಗಳನ್ನು ಅನಿವಾರ್ಯವಾಗಿ ಮಾಡಬೇಕಾಗಿರುತ್ತವೆ. ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹರ್ಷಚಿತ್ತರಾಗಿ ರಾತ್ರಿ ನಿದ್ದೆಗೆ ಹೋಗುವವರಾದರೆ ಅವರು ಸುಖಿಯೇ. ಅವರು ಜೀವನದ ಭದ್ರತೆ, ಭವಿಷ್ಯದ ಬಗ್ಗೆ ಮುಂದಾಗಿಯೇ ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಜರುಗಿಸಿರುವುದರಿಂದ ಅನಗತ್ಯ ಚಿಂತೆಗೆ ಅವಕಾಶ ಇರದು. ಆದರೆ “ತಲೆಗೆ ಹೊದ್ದರೆ ಕಾಲಿಗೆ ಸಾಲದು, ಕಾಲಿಗೆ ಹೊದ್ದರೆ ತಲೆಗೆ ಸಾಲದು” ಹೀಗೆ ದುಡಿಮೆಯ ಮೊತ್ತ ಜೀವನ ನಿರ್ವಹಣೆಗೆ ಸಾಲದಾದವರಿಗೆ ಸದಾ ಚಿಂತೆ ಆವರಿಸಿಕೊಂಡಿರುತ್ತದೆ. ಅವರಿಗೆ ದಿನ ನಿತ್ಯ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಅವುಗಳನ್ನು ನಿವಾರಿಸಿಕೊಳ್ಳುವುದರಲ್ಲಿ ಅವರು ಸುಸ್ತಾಗಿರುತ್ತಾರೆ. ಇನ್ನು ನಿದ್ದೆ ಮಾಡುತ್ತಿರುವಾಗಲೂ ತಲೆತುಂಬ ಚಿಂತೆ ತುಂಬಿಕೊಂಡಿರುವುದರಿಂದ ನೆಮ್ಮದಿ ದೊರೆಯದು.
ಇನ್ನು ಹೆಚ್ಚಾಗಿ ಸಂಪಾದನೆ ಮಾಡುವವರಿಗೆ ಬೇರೆಯೇ ಚಿಂತೆ. ಇದ್ದರೆ ಇನ್ನಷ್ಟು ಬೇಕೆಂಬ ಚಿಂತೆ. ಅದನ್ನು ಕಾಪಾಡಿಕೊಳ್ಳುವ ಚಿಂತೆ. ಹೂಡಿಕೆ ಮಾಡಿ ಅದನ್ನು ದ್ವಿಗುಣಗೊಳಿಸುವ ಚಿಂತೆ. ಒಬ್ಬ ಸಾಹುಕಾರ ತನ್ನ ಗುಮಾಸ್ತನಿಗೆ ತನ್ನ ಆಸ್ತಿಪಾಸ್ತಿಯನ್ನೆಲ್ಲ ಲೆಕ್ಕಹಾಕಿ ತನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ ಸಾಕಾಗುತ್ತದೆಯೇ ಎಂದು ಕೇಳಿದನಂತೆ. ಗುಮಾಸ್ತನು ಎಲ್ಲ ಲೆಕ್ಕಹಾಕಿ “ಸೇಟಜೀ ಇನ್ನು ಏಳು ತಲೆಮಾರಿನವರೆಗೆ ಸಾಕಾಗುವಷ್ಟಿದೆ” ಎಂದುತ್ತರಿಸಿದನಂತೆ. ಆಗ ಚಿಂತಕ್ರಾಂತನಾಗಿ ಕುಳಿತ ಸಾಹುಕಾರನನ್ನು ಗುಮಾಸ್ತ ಪ್ರಶ್ನಿಸಿದನಂತೆ “ಸೇಟಜೀ ಇನ್ನೇಕೆ ಚಿಂತೆ?” ಎಂದು ಅದಕ್ಕೆ ಸಾಹುಕಾರ ಉತ್ತರಿಸಿದ್ದನ್ನು ಕೇಳಿದರೆ ಆಶ್ಚರ್ಯವಾಗುತ್ತದೆ. “ಅಲ್ಲಯ್ಯಾ ಏಳು ತಲೆಮಾರಿನ ನಂತರ ಎಂಟನೆಯವನಿಗೆ ಏನೂ ಉಳಿಯುವುದಿಲ್ಲವಲ್ಲಾ, ಅದೇ ನನ್ನ ಚಿಂತೆಗೆ ಕಾರಣ” ಎಂದನಂತೆ. ಇಂದಿನ ಸಮಾಜದಲ್ಲಿನ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲ. ಇಂಥಹವರು ನಿದ್ದೆ ಹೇಗೆ ಮಾಡುತ್ತಾರೆ? ಎಂಬ ಪ್ರಶ್ನೆ ಮೂಡಬಹುದು. ಇದಕ್ಕೆ ಅವರು ನಾನಾ ರೀತಿಯ ಪರಿಹಾರಗಳನ್ನು ಕಂಡುಕೊಂಡಿರುತ್ತಾರೆ. ಕೆಲವರು ಪಾನೀಯಗಳಿಗೆ ಮೊರೆಹೋದರೆ ಕೆಲವರು ನಿದ್ದೆ ಬರಿಸುವ ಮಾತ್ರೆಗಳಿಗೆ ಮೊರೆ ಹೋಗುತ್ತಾರೆ.
ಹಾಗಾದರೆ ನಿದ್ದೆ ಹೇಗೆ ಮಾಡುವುದು? ಮನುಷ್ಯನಿಗೆ ಎಷ್ಟು ನಿದ್ದೆ ಬೇಕು? ಪ್ರಶ್ನೆಗಳಿಗೆ ತಜ್ಞರು, ವೈದ್ಯರು ನೀಡಿರುವ ಸಲಹೆಗಳನ್ನು ನೋಡೋಣ. ಮಕ್ಕಳಿಗೆ ದಿನಕ್ಕೆ ಹದಿನೆಂಟು ಗಂಟೆಗಳ ನಿದ್ದೆ ಬೇಕಂತೆ. ವಯಸ್ಕರಿಗೆ ಎಂಟುಗಂಟೆಗಳ ನಿದ್ದೆ ಬೇಕು. ವೃದ್ಧರಿಗೂ ಏಳು ಗಂಟೆಗಳ ನಿದ್ದೆ ಆವಶ್ಯಕವಂತೆ.
ಮಕ್ಕಳು ಅನಾರೋಗ್ಯ ಕಾರಣಗಳಿಂದ ತೊಂದರೆಗೊಳಗಾಗುವುದನ್ನು ಬಿಟ್ಟರೆ ಉಳಿದಂತೆ ಇದನ್ನು ಪಾಲಿಸುತ್ತವೆ. ಅವುಗಳಿಗೆ ಹೊಟ್ಟೆ ತುಂಬಿದರೆ ಸಾಕು, ಕೈಕಾಲು ಆಡಿಸುತ್ತಾ ಅಥವಾ ಬಾಲಲೀಲೆಗಳು, ಆಟಗಳು ಇಂತಹ ಸಾಕಷ್ಟು ಚಟುವಟಿಕೆಯಲ್ಲಿ ತೊಡಗುತ್ತವೆ. ನಿದ್ದೆಯ ಅಗತ್ಯವಾದಾಗ ಅವೇ ಅದರ ಸೂಚನೆ ನೀಡುತ್ತವೆ. ಆಗ ತಾಯಿಯೋ, ಪೋಷಕರೋ ಅವನ್ನು ಸ್ವಸ್ಥವಾಗಿ ಮಲಗಿಸಿಬಿಟ್ಟರೆ ದೇವರಂತೆ ಮಲಗಿಬಿಡುತ್ತವೆ. ಆಯಾಸ ಪರಿಹಾರವಾದ ನಂತರ ಅವೇ ಎಚ್ಚರಗೊಳ್ಳುತ್ತವೆ. ಎಲ್ಲ ಮಕ್ಕಳಲ್ಲೂ ನಿದ್ದೆ ಮಾಡುವ ರೀತಿ ಒಂದೇ ನಮೂನೆಯಾಗಿರುವುದಿಲ್ಲ. ಕೆಲವು ಮಕ್ಕಳು ತೊಂದರೆ ಕೊಡದೆ ಮಲಗಿದರೆ ಮೂರುನಾಲ್ಕು ಗಂಟೆಗಳ ಕಾಲ ನಿದ್ರೆ ಮಾಡುತ್ತವೆ. ಮಧ್ಯದಲ್ಲಿ ಎಚ್ಚರಗೊಂಡರೂ ಪೋಷಕರು ಆಹಾರ ಕೊಟ್ಟು ತಟ್ಟಿ, ಸಮಾಧಾನ ಮಾಡಿದರೆ ಮತ್ತೆ ನಿದ್ದೆಯನ್ನು ಮುಂದುವರಿಸುತ್ತವೆ.
ಕೆಲವು ವಿಶೇಷ ರೀತಿಯ ಮಕ್ಕಳು ಎಲ್ಲವೂ ಸರಿಯಾಗಿದ್ದರೂ ನಿದ್ದೆ ಮಾಡುವುದು ಬಹಳ ಕಷ್ಟ. “ಕೋಳಿ ನಿದ್ದೆ”ಯಂತೆ ಮತ್ತೆ ಮತ್ತೆ ಏಳುತ್ತಲೇ ಇರುತ್ತವೆ. ಇವುಗಳನ್ನು ಸುಧಾರಿಸುವುದು, ನಿದ್ದೆ ಮಾಡಿಸುವುದು ಕಷ್ಟದ ಕೆಲಸ. ಇದಕ್ಕೆ ನನ್ನ ಸ್ವಂತ ಅನುಭವವೇ ಸಾಕ್ಷಿ. ನನ್ನ ಮುದ್ದಿನ ಮೊಮ್ಮಗಳು ಜನಿಸಿದಾಗ ನಾವೆಲ್ಲ ಬಹಳ ಸಂತಸಪಟ್ಟವು. ಏಕೆಂದರೆ ನಮ್ಮಲ್ಲಿ ಹೆಣ್ಣುಮಕ್ಕಳು ವಿರಳ. ಆಗ ನಮ್ಮ ವಯಸ್ಸು ನಿವೃತ್ತಿಗೆ ಹತ್ತಿರವಾಗಿತ್ತು. ಮಗು ಮುದ್ದಾಗಿದ್ದು ನಮ್ಮೆಲ್ಲರ ಕಣ್ಮಣಿಯಾಗಿತ್ತು. ಆದರೆ ಕ್ರಮವಾಗಿ ನಿದ್ದೆ ಮಾಡುತ್ತಿರಲಿಲ್ಲ. ಅದನ್ನೆತ್ತಿ ನಮ್ಮ ತೊಡೆಯಮೇಲಿಟ್ಟು ಚುಕ್ಕು ತಟ್ಟುತಿದ್ದರೆ ಕಣ್ಮುಚ್ಚಿ ಮಲಗುತ್ತಿತ್ತು. ಅಗ ಮೆಲ್ಲಗೆ ಅದನ್ನು ಹಾಸಿಗೆಗೋ ತೊಟ್ಟಿಲೊಳಕ್ಕೋ ವರ್ಗಾಯಿಸಲು ಪ್ರಯತ್ನಿಸಿದರೆ ತಕ್ಷಣ ಅಗಲವಾಗಿ ಕಣ್ತೆರೆದು ನೋಡಿ ನೀನು ಸೋತೆ ಎನ್ನುವಂತೆ ಮಾಡುತ್ತಿತ್ತು. ಮತ್ತೆ ತೊಡೆಯಮೇಲೆ ಹಾಕಿಕೊಳ್ಳುತ್ತಿದ್ದೆವು. ಹೀಗೇ ಹಲವಾರು ಪ್ರಯತ್ನಗಳು ನಡೆದಾಗ ಹೌದೋ ಅಲ್ಲವೋ ಎಂಬಂತೆ ಅರ್ಧಗಂಟೆ ಮಲಗಿದರೆ ನಮ್ಮ ಪುಣ್ಯ. ಹಗಲು ಹೊತ್ತು ತನ್ನ ಕೋಟಾವನ್ನು ಪುರ್ತಿಮಾಡಿಕೊಂಡು ರಾತ್ರಿ ನಮ್ಮನ್ನು ಆಟವಾಡಿಸುತ್ತಿತ್ತು. ಕೆಲವು ದಿನಗಳ ಪ್ರಯತ್ನದ ನಂತರ ನಾವೇ ಒಂದು ಹೊಸ ತಂತ್ರಕ್ಕೆ ಶರಣಾದೆವು. ರಾತ್ರಿ ಹನ್ನೊಂದು ಗಂಟೆಯವರೆಗೆ ಒಬ್ಬರು, ಹನ್ನೊಂದರಿಂದ ಬೆಳಗಿನ ಜಾವ ಮೂರುಗಂಟೆಯ ವರೆಗೆ ಇನ್ನೊಬ್ಬರು. ಮೂರರಿಂದ ಆರರವರೆಗೆ ಮತ್ತೊಬ್ಬರು ಸರತಿಯ ಪ್ರಕಾರ ಅದನ್ನು ತಮ್ಮ ತೊಡೆಯ ಮೇಲೇ ಮಲಗಿಸಿ ಸುಧಾರಿಸಿ ಬೆಳಕು ಹರಿಸುತ್ತಿದ್ದೆವು. ಅದು ಸ್ವಲ್ಪ ದೊಡ್ಡದಾಗುವವರೆಗೂ ಹೀಗೇ ಮುಂದುವರೆಯಿತು. ಇಲ್ಲವಾದರೆ ಅದರ ತಾಯಿಗೆ ನಿದ್ರೆಗೆ ಅವಕಾಶವೇ ದೊರೆಯುತ್ತಿರಲಿಲ್ಲ. ಹಗಲು ಹೇಗೋ ಕಳೆದು ರಾತ್ರಿ ಈ ಕ್ರಮವನ್ನು ಅನುಸರಿಸಿ ನಮ್ಮ ಜಾಗರಣೆಯನ್ನು ಅದರ ನಿದ್ದೆಗಾಗಿ ಮೀಸಲಿಟ್ಟಿದ್ದೆವು. ಈಗ ಅದೇ ಮಗು ಬೆಳೆದು ಕಾಲೇಜಿಗೆ ಹೋಗುತ್ತಾಳೆ. ಅವಳು ನಿದ್ದೆ ಹೋದರೆ ಎಚ್ಚರಗೊಳಿಸಲು ಹರ ಪ್ರಯಾಸ ಪಡಬೇಕು. ಅಂತಹ ಬದಲಾವಣೆಯಾಗಿದೆ.
ನಮ್ಮ ಮಾವನವರು ಅವರ ವಿದ್ಯಾರ್ಥಿ ದೆಸೆಯಲ್ಲಿ ನಡೆದ ಒಂದು ಘಟನೆಯನ್ನು ಹೇಳುತ್ತಿದ್ದರು. ಆಗ ಅವರು ವಿದ್ಯಾರ್ಥಿನಿಲಯದಲ್ಲಿದ್ದು ಓದುತ್ತಿದ್ದರು. ಡಿಪ್ಲೊಮಾ ಪರೀಕ್ಷೆಯ ಸಮಯದಲ್ಲಿ ಒಂದು ರಾತ್ರಿ ಬಹಳ ಹೊತ್ತಿನ ವರೆಗೆ ಓದಿ ಬೆಳಗಿನ ಜಾವಕ್ಕೆ ಮಲಗಿದ್ದರಂತೆ. ಹಿಂದಿನ ಹಲವು ರಾತ್ರಿಗಳಲ್ಲೂ ಸರಿಯಾದ ನಿದ್ದೆಯಿರಲಿಲ್ಲ. ಹೀಗಾಗಿ ಗಾಢನಿದ್ದೆಗೆ ಒಳಗಾಗಿದ್ದಾರೆ. ಬೆಳಗ್ಗೆ 10-30ಕ್ಕೆ ಪರೀಕ್ಷೆಗೆ ಹೋಗಬೇಕಾಗಿತ್ತು. ಇವರು ಒಂಬತ್ತಾದರೂ ಏಳಲಿಲ್ಲ. ಅವರ ರೂಂಮೇಟ್ ಬಲವಂತವಾಗಿ ಅವರನ್ನು ಹೊದಿಕೆ ಎಳೆದು ಎಬ್ಬಿಸಲು ಪ್ರಯತ್ನ ಪಟ್ಟರಂತೆ. ತನ್ನ ನಿದ್ರಾಭಂಗ ಮಾಡಿದನೆಂದು ನಿದ್ದೆಗಣ್ಣಲ್ಲಿ ಅವನ ಕೆನ್ನೆಗೊಂದು ಬಲವಾದ ಎಟು ಕೊಟ್ಟುಬಿಟ್ಟರಂತೆ. ಆತನು ಸೌಮ್ಯ ಸ್ವಭಾವದವನಾಗಿದ್ದರಿಂದ “ಏ ಹತ್ತೂವರೆಗೆ ಪರೀಕ್ಷೆ ಇದೆ. ಒಂಬತ್ತಾದರೂ ಎದ್ದಿಲ್ಲ ಅಂತ ನಾನು ನಿನ್ನೊಳ್ಳೆಯದಕ್ಕೆ ಎಬ್ಬಿಸಿದರೆ ನನಗೇ ಹೊಡೆಯುತ್ತೀಯಾ” ಎಂದು ಗಟ್ಟಿಯಾಗಿ ಹೇಳಿದಾಗ ಇವರಿಗೆ ಥಟ್ಟನೆ ವಾಸ್ತವ ಅರಿವಾಗಿ ಅವಸರವಸರವಾಗಿ ಎದ್ದು ಸ್ನೇಹಿತನಿಗೆ ಸಾರಿ ಹೇಳಿ ಸಿದ್ದರಾಗಿ ಪರೀಕ್ಷೆಗೆ ಹೋದರಂತೆ. ಅಂತಹ ಗಾಢನಿದ್ದೆ ಅವರದ್ದು. ನಾವೆಲ್ಲ ಪ್ರಸಂಗ ಕೇಳಿ ನಕ್ಕಿದ್ದೆವು.
ನನ್ನ ಪತಿ ಇನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಅವರ ಚಿಕ್ಕಪ್ಪನ ಮನೆಯಲ್ಲಿದ್ದರು. ಆಗ ನಡೆದ ಒಂದು ಘಟನೆ. ಅವರು ಮತ್ತು ಅವರ ಚಿಕ್ಕಮ್ಮನ ತಮ್ಮ ಇಬ್ಬರೂ ಅವರ ಚಿಕ್ಕಪ್ಪನ ಮನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಅವರು ವಾಸವಾಗಿದ್ದ ಬಾಡಿಗೆಯ ಮನೆ ಚಿಕ್ಕದಾಗಿದ್ದರಿಂದ ಹುಡುಗರಿಗೆ ಓದಿಕೊಳ್ಳಲು ತೊಂದರೆಯಾಗಬಾರದೆಂದು ಎದುರಗಡೆ ಮನೆಯ ಹೊರ ಜಗುಲಿಯ ಬಳಿ ಪ್ರತ್ಯೇಕವಾಗಿದ್ದ ಒಂದು ರೂಮನ್ನು ಬಾಡಿಗೆಗೆ ತೆಗೆದುಕೊಂಡು ಇವರಿಬ್ಬರನ್ನು ಅಲ್ಲಿ ಇರಿಸಿದ್ದರು. ಓದುವುದು ಮಲಗುವುದು ಅಲ್ಲಿಯೇ. ಅದೊಂದು ರಜಾದಿನ ಮಧ್ಯಾಹ್ನ ಊಟವಾದನಂತರ ನನ್ನ ಪತಿ ಒಬ್ಬರೇ ರೂಮಿನ ಬಾಗಿಲು ಬಂದ್ ಮಾಡಿಕೊಂಡು ಮಲಗಿದ್ದರಂತೆ. ಆಗೆಲ್ಲ ಮನೆಗಳಿಗೆ ನಲ್ಲಿಯ ಸಂಪರ್ಕವಿರಲಿಲ್ಲ. ಬೀದಿಯಲ್ಲಿ ಇದ್ದ ನಲ್ಲಿಯಲ್ಲೇ ಆ ಬೀದಿಯವರೆಲ್ಲ ನೀರನ್ನು ಹಿಡಿದು ಉಪಯೋಗಿಸುತ್ತಿದ್ದರು. ನನ್ನ ಪತಿ ಮಲಗಿದ್ದ ರೂಮಿನ ಮುಂಭಾಗದಲ್ಲಿ ರಸ್ತೆಯ ಮೂಲೆಯಲ್ಲಿ ನಲ್ಲಿಯಿದ್ದು ಬೀದಿಯ ಹೆಣ್ಣುಮಕ್ಕಳೆಲ್ಲ ಅಲ್ಲಿಯೇ ಸರದಿಯಂತೆ ನೀರು ಹಿಡಿಯುವುದು ರೂಢಿ. ಆ ದಿನ ಸಾಯಂಕಾಲ ನೀರು ಬಿಟ್ಟಿದ್ದರಿಂದ ಸಾಕಷ್ಟು ಜನ ಮಹಿಳೆಯರು ನೀರು ಹಿಡಿಯಲು ಬಂದಿದ್ದರು. ಇವರ ಚಿಕ್ಕಮ್ಮನವರೂ ಅಲ್ಲಿಗೆ ಹೋದವರು ಇವನೇನು ಇನ್ನೂ ಎದ್ದು ಬರಲೇ ಇಲ್ಲವಲ್ಲ ಎಂದು ಬಾಗಿಲು ಚಿಲಕ ಬಡಿದು ಕೂಗಿ ಕರೆದು ಇವರನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಜಪ್ಪಯ್ಯಾಂದ್ರೂ ಇವರಿಗೆ ಎಚ್ಚರವಿಲ್ಲ. ಕೊನೆಗೆ ಅಲ್ಲಿದ್ದ ಹೆಣ್ಣುಮಕ್ಕಳಲ್ಲಿ ಕೆಲವರು ಸೇರಿ ಒಟ್ಟಿಗೆ ಕೂಗಿ ಕರೆದಾಗ ಇವರಿಗೆ ಯಾರೋ ಕರೆದಂತಾಗಿ ಎಚ್ಚರವಾಯಿತಂತೆ. ಬಾಗಿಲು ತೆರೆದು ಹೊರಗೆ ಬಂದಾಗ ನಾಲ್ಕಾರು ಹೆಣ್ಣುಮಕ್ಕಳು ಅವರ ಚಿಕ್ಕಮ್ಮನ ಜೊತೆ ಅಲ್ಲಿ ನಿಂತು “ಏನಪ್ಪಾ ಜೂನಿಯರ್ ಕುಂಭಕರ್ಣಾ” ಎಂದು ಅಣಕಿಸಿದರಂತೆ. ಇವರಿಗೆ ನಾಚಿಕೆಯಾಗಿ ಅಲ್ಲಿಂದ ಓಡಿಬಿಟ್ಟರಂತೆ. ಇಂಥಹ ಹಳೆಯ ನೆನಪನ್ನು ಜ್ಞಾಪಿಸಿಕೊಂಡು ನಗುವುದುಂಟು.
ಕುಂಭಕರ್ಣನ ಪ್ರಸ್ತಾಪ ಬಂದದ್ದರಿಂದ ನಿದ್ದೆಯ ಆ ಮಹಾನ್ ನಾಯಕನ ಬಗ್ಗೆ ಹೇಳದಿದ್ದರೆ ಹೇಗೆ? ಕುಂಭಕರ್ಣನು ಋಷಿಮುನಿ ವಿಶ್ರವಸು ಮತ್ತು ಕೈಕಸಿಯರ ಎರಡನೆಯ ಸಂತಾನ. ಹುಟ್ಟಿದಾಗಲೇ ಗಾತ್ರದಲ್ಲಿ ತುಂಬ ದೊಡ್ಡದಾಗಿದ್ದ. ಬೆಳೆಯುತ್ತಿದ್ದಂತೆ ಅವನಿಗೆ ಯವಾಗಲೂ ತಿನ್ನುವುದರಲ್ಲಿ ಆಸಕ್ತಿ. ಸಿಕ್ಕಿದ್ದನ್ನೆಲ್ಲ ತಿಂದರೂ ಅವನ ಹಸಿವು ತಣಿಯದು. ದೊಡ್ಡವನಾದ ಮೇಲೆ ಕಾಡಿನಲ್ಲಿದ್ದ ಋಷಿಮುನಿಗಳ ಆಶ್ರಮಗಳಿಗೆ ನುಗ್ಗಿ ಅಲ್ಲಿದ್ದುದನ್ನೆಲ್ಲ ಭಕ್ಷಿಸುತ್ತಿದ್ದನು. ಜೊತೆಗೆ ನರಭಕ್ಷಣೆ ಕೂಡ ಮಾಡುತ್ತಿದ್ದನಂತೆ. ಹೀಗಾಗಿ ಆಶ್ರಮವಾಸಿಗಳೆಲ್ಲ ಇವನಿಗೆ ಹೆದರುತ್ತಿದ್ದರು. ಈತ ತಾನು ಜಗತ್ತಿನಲ್ಲಿ ಅಸಾಧಾರಣವಾದದ್ದನ್ನು ಗಳಿಸಿಕೊಳ್ಳಬೇಕೆಂದು ಘೋರ ತಪಸ್ಸನ್ನಾಚರಿಸಿದ. ಬ್ರಹ್ಮದೇವರು ಪ್ರತ್ಯಕ್ಷವಾದರು. “ನಿನ್ನ ಮನದ ಇಷ್ಟಾರ್ಥವೇನು. ಅದನ್ನು ನಾನು ಈಡೇರಿಸುತ್ತೇನೆ” ಎಂದ ಆಶ್ವಾಸನೆ ಇತ್ತರು. ಅಷ್ಟರಲ್ಲಿ ಇವನ ದುರಾಚಾರಗಳ ಬಗ್ಗೆ ತಿಳಿದಿದ್ದ ಸರಸ್ವತೀ ದೇವಿ ಅವನ ಮನಸ್ಸನ್ನಾಕ್ರಮಿಸಿ ಅಸಾಧ್ಯವಾದನ್ನೇನನ್ನೂ ಕೇಳದಂತೆ ಅವನ ಬುದ್ಧಿಗೆ ಮಂಕು ಕವಿಯುವಂತೆ ಮಾಡಿದಳು. ಕುಂಭಕರ್ಣನು ತನಗೆ ನಿದ್ದೆಯೆಂದರೆ ಬಹಳ ಇಷ್ಟವೆಂದು ಹೇಳಿದ. ಬ್ರಹ್ಮದೇವರು ತಥಾಸ್ತು ಎಂದು ಅನುಗ್ರಹಿಸಿದರು. ಅವನಿಗೆ ಆರು ತಿಂಗಳಿಗೊಮ್ಮೆ ಎಚ್ಚರವಾಗುವಂತೆ, ಆಗ ಅವನು ತನಗೆ ಬೇಕಾದ ಆಹಾರವನ್ನು ಸೇವಿಸಿ ಮತ್ತೆ ಇನ್ನಾರು ತಿಂಗಳು ನಿದ್ದೆಗೆ ಜಾರುವಂತೆ ಆಶೀರ್ವದಿಸಿದರು. ಸ್ವಲ್ಪ ಕಾಲದ ನಂತರ ಮನಸ್ಸು ತಿಳಿಯಾದಾಗ ಅವನಿಗೆ ತನ್ನ ತಪ್ಪಿನ ಅರಿವಾಯಿತು. ಎಂಥಹ ಅವಕಾಶವನ್ನು ಕಳೆದುಕೊಂಡೆನೆಂದು ಪಶ್ಚಾತ್ತಾಪ ಪಟ್ಟನು. ಆದರೆ ಕಾಲ ಮಿಂಚಿಹೋಗಿತ್ತು. ಹೀಗಾಗಿ ಅವನು ನಿದ್ರಾದೇವಿಗೆ ಪ್ರಿಯನಾದ. ರಾಮಾಯಣದಲ್ಲಿ ಲಂಕೆಯ ಯುದ್ಧದ ಸಂದರ್ಭದಲ್ಲಿ ಅವನನ್ನು ಎಚ್ಚರಿಸಿ ಯುದ್ದಕ್ಕೆ ಕಳುಹಿಸಲು ಲಂಕೆಯ ಸೈನಿಕರು ಪಡುವ ಪ್ರಯಾಸವೆಲ್ಲವನ್ನು ಓದಲು ಬಹಳ ಮನೋರಂಜಕವಾಗಿದೆ.
ಇಷ್ಟೆಲ್ಲ ಹೇಳಿದ ಮೇಲೆ ನನ್ನ ಒಂದು ಸ್ವಂತ ಅನುಭವವನ್ನು ಉಲ್ಲೇಖಿಸದಿದ್ದರೆ ಹೇಗೆ. ಮದುವೆಯಾದ ನಂತರ ನಾನು ಮೊದಲ ಬಾರಿಗೆ ತುಮಕೂರಿನಿಂದ ಕಲ್ಬುರ್ಗಿಗೆ ಗೃಹಿಣಿಯಾಗಿ ನನ್ನದೇ ಸಂಸಾರ ಹೂಡಲು ಹೋದೆ. ನನಗೂ ಇನ್ನೂ ಹದಿಹರೆಯದ ವಯಸ್ಸು. ನಾನೇ ಮನೆಯ ಯಜಮಾನಿಯಾದ ಹುಮ್ಮಸ್ಸು. ನಮ್ಮವರು ಆಫೀಸಿಗೆ ಬೆಳಗ್ಗೆ 10-00 ಗಂಟೆಗೆ ಹೋದರೆ ಮಧ್ಯಾಹ್ನ ಊಟಕ್ಕೆ 1-45ಕ್ಕೆ ಬರುತ್ತಿದ್ದರು. ಉಳಿದ ಮನೆಗೆಲಸಗಳನ್ನು ಮಾಡಿ ಮುಗಿಸಿದ ನಂತರ ನನಗೆ ಪೂರ್ಣ ಬಿಡುವು. ಒಂದುದಿನ ಕೈಯಲ್ಲೊಂದು ಪುಸ್ತಕ ಹಿಡಿದು ಹಾಸಿಗೆಯ ಮೇಲೆ ಉರುಳಿದ್ದೆ. ಯಾವುದೋ ಮಾಯದಲ್ಲಿ ನಿದ್ದೆ ಬಂದಿದೆ. ಗಾಢ ನಿದ್ದೆ. ಹೊತ್ತು ಸರಿದದ್ದೇ ತಿಳಿಯಲಿಲ್ಲ. ಸಮಯವಾಗಿ ನನ್ನವರು ಊಟಕ್ಕೆ ಮನೆಗೆ ಬಂದು ನನ್ನ ಹೆಸರು ಹಿಡಿದು ಕರೆದಿದ್ದಾರೆ, ಬಾಗಿಲು ಚಿಲಕ ಸಪ್ಪಳ ಮಾಡಿದ್ದಾರೆ ಏನೂ ಪ್ರತಿಕ್ರಿಯೆ ಇಲ್ಲ. ಅವರಿಗೆ ಗಾಬರಿ. ನಮ್ಮದು ಒಂಬತ್ತು ಸಾಲುಮನೆಗಳಲ್ಲಿ ಮಧ್ಯದ ಮನೆ. ಹೀಗಾಗಿ ಅಕ್ಕಪಕ್ಕದ ಮನೆಯ ಹುಡುಗರು ನನಗೆ ಪರಿಚಿತರಾಗಿದ್ದರು. ಅಂಕಲ್ ಮಾಡಿದ ಪ್ರಯತ್ನವನ್ನು ಕಂಡು ಅವರಲ್ಲೊಬ್ಬನು ಮನೆಯ ಮೇಲ್ಛಾವಣಿಯ ಮೇಲೆಹತ್ತಿ ನಮ್ಮ ಮನೆಯ ಮೇಲಿದ್ದ ಬೆಳಕಿಂಡಿಯಲ್ಲಿ ತಲೆಹಾಕಿ ಜೋರಾಗಿ ಕೂಗಿಕರೆದ. ನನಗೆ ಥಟ್ಟನೆ ಎಚ್ಚರವಾಯಿತು ಸಮಯ ನೋಡಿ ಗಾಬರಿಯಿಂದ ಬಾಗಿಲು ತೆರೆದು ನೋಡಿದೆ. ನಮ್ಮವರು ಇನ್ನಿಬ್ಬರು ಹುಡುಗರ ಜೊತೆಯಲ್ಲಿ ನಿಂತಿದ್ದಾರೆ. ಅವರು ನನ್ನನ್ನು ಎಚ್ಚರಗೊಳಿಸಲು ಮಾಡಿದ ಪ್ರಯತ್ನವನ್ನು ಹೇಳಿದಾಗ ನನಗೆ ತುಂಬ ನಾಚಿಕೆಯಾಯಿತು. ಅಂದಿನಿಂದ ಮುಂದೆಂದೂ ಅಷ್ಟು ಮೈಮರೆತು ಮಲಗುವ ಅಭ್ಯಾಸ ಮಾಯವಾಯಿತು.
ಈಗ ವೃದ್ದಾಪ್ಯಕ್ಕೆ ಕಾಲಿಟ್ಟಿರುವಾಗ ಅಂಥಹ ಗಾಢನಿದ್ದೆ ಬರುವುದೇ ಇಲ್ಲ. ಅಂತೂ ನಿದ್ದೆಯ ಪುರಾಣ ಬರೆಯುತ್ತಾ ಅದರ ಪ್ರಭಾವದಿಂದ ಸ್ವಲ್ಪ ಕಣ್ಣಿಗೆ ಜೊಂಪು ಬಂದ ಅನುಭವವಾಗುತ್ತಿದೆ. ನಿದ್ದೆಯ ನಂತರ ಮತ್ತೆ ಭೇಟಿಯಾಗುವೆ.

ಬಿ.ಆರ್,ನಾಗರತ್ನ. ಮೈಸೂರು.


