ಇಂದಿನ ದಿನಗಳಲ್ಲಿ ತನ್ನ ಆಕರ್ಷಣೆಯನ್ನು ಕಳೆದುಕೊಂಡಿರುವ ಸೈಕಲ್ಲುಗಳು ನಮ್ಮ ಬಾಲ್ಯಕಾಲದಲ್ಲಿ ಬಹು ದೊಡ್ಡ ಆಕರ್ಷಣೆ. ಬ್ಯಾಲೆನ್ಸ್ ವೀಲ್ ಇಲ್ಲದ ಕಾಲದಲ್ಲಿ ನಾವೆಲ್ಲ ಸೈಕಲ್ ಕಲಿತವರು. ನಿಜಕ್ಕೂ ಇದು ಬಡವಾಧಾರಿ. ಆ ಕಾಲದಲ್ಲಿ ಮಧ್ಯಮವರ್ಗದವರಾದಿಯಾಗಿ ಬಡವರ ಏಕೈಕ ವಾಹನವಿದು. ಸ್ಕೂಟರು, ಕಾರುಗಳು ಬಲು ಅಪರೂಪವಾಗಿದ್ದ ಕಾಲದಲ್ಲಿ ರಸ್ತೆ ತುಂಬ ಸಂಚರಿಸುತ್ತಿದ್ದುದೇ ಈ ಸೈಕಲ್ಲುಗಳು. ಗಟ್ಟಿಮುಟ್ಟಾದ ಕಬ್ಬಿಣದಿಂದ ತಯಾರಿಸುತ್ತಿದ್ದ ಆ ಕಾಲದ ಸೈಕಲ್ಲುಗಳು ಬಳಸದೇ ಗುಜರಿಯ ಪಾಲಾದವೇ ವಿನಾ ತುಕ್ಕು ಹಿಡಿದು ಅಲ್ಲ! ಬರು ಬರುತ್ತಾ ಎಲ್ಲದರ ಕ್ವಾಲಿಟಿ ಕಡಮೆಯಾಗುತ್ತವೆಂಬುದಕ್ಕೆ ಈಗಿನ ವಾಹನಗಳೇ ಸಾಕ್ಷಿ. ಮೈಲೇಜ್ ಬರಬೇಕೆಂಬ ಏಕೈಕ ದೃಷ್ಟಿಯಿಂದ ಇಂದಿನ ಇಂಧನಚಾಲಿತ ವಾಹನಗಳು ಹಗೂರವಾಗಿ, ಅಂದಚೆಂದವನ್ನು ಮೈಗೂಡಿಸಿಕೊಂಡು ಆಕರ್ಷಕವಾಗಿ ಕಾಣುತ್ತವೆಯೇ ವಿನಾ ಬಾಳಿಕೆಯ ದೃಷ್ಟಿಯಿಂದ ಇವಕ್ಕೆ ಸೊನ್ನೆ ಅಂಕ. ನಮ್ಮ ಮನಸ್ಥಿತಿಯೂ ಹಾಗೆಯೇ ಬದಲಾಗಿದೆ. ಬಾಳಿಕೆ ಮತ್ತು ತಾಳಿಕೆಗಳಿಗಿಂತ ಚೆಲುವಿಗೆ ಮನ ಸೋಲುತ್ತದೆ. ಹಿಂದೆಲ್ಲಾ ಒಂದು ಸೈಕಲ್ ತೆಗೆದುಕೊಂಡರೆ ಕನಿಷ್ಠ ಹದಿನೈದಿಪ್ಪತ್ತು ವರ್ಷಗಳ ಕಾಲ ಜನರು ಬಳಸುತ್ತಿದ್ದರು ಮತ್ತು ತಮ್ಮಲ್ಲೇ ಇಟ್ಟುಕೊಳ್ಳುತ್ತಿದ್ದರು. ವಸ್ತು ಪದಾರ್ಥಗಳನ್ನು ಅವು ಬಾಳಿಕೆ ಬರುವ ಕೊನೆಯ ಕ್ಷಣದವರೆಗೂ ಉಪಯೋಗಿಸಬೇಕೆಂಬ ಮನೋಧರ್ಮ ನಮ್ಮ ಹಿಂದಿನವರದು. ಬಟ್ಟೆಗಳು ಹರಿದರೆ ಅವಕ್ಕೆ ತೇಪೆ ಹಾಕಿ, ಬಳಸುತ್ತಿದ್ದೆವು; ಎಸೆಯುತ್ತಿರಲಿಲ್ಲ. ಪಾತ್ರೆಗಳು ತೂತಾದರೆ ಅದನ್ನು ರಿಪೇರಿ ಮಾಡಿಸುತ್ತಿದ್ದೆವು. ಬಕೆಟುಗಳು ಸೀಳು ಬಿಟ್ಟರೆ ಪ್ಲಾಸ್ಟಿಕ್ ಬಕೆಟ್ ರಿಪೇರಿ ಎಂದು ರಸ್ತೆಯಲ್ಲಿ ಕೂಗಿಕೊಂಡು ಬರುವವರ ಬಳಿ ಕೊಟ್ಟು ಮತ್ತೆ ಬಳಕೆಯೋಗ್ಯ ಮಾಡಿಕೊಳ್ಳುತ್ತಿದ್ದೆವು. ಜನರನ್ನು ಪ್ರೀತಿಸುತ್ತಿದ್ದೆವು; ವಸ್ತುಗಳನ್ನು ಬಳಸುತ್ತಿದ್ದೆವು. ಈಗ ಇದು ಉಲ್ಟಾ! ವಸ್ತುಗಳು ನಮ್ಮ ಜೀವವಾಗಿವೆ. ಮೊಬೈಲು ಫೋನು, ಲ್ಯಾಪ್‌ಟಾಪು, ವಾಹನಗಳೇ ಮುಂತಾದ ವೈಯಕ್ತಿಕ ಬಳಕೆಯ ಪದಾರ್ಥಗಳನ್ನು ಯಾರಿಗೂ ಕೊಡುವುದಿಲ್ಲ; ಅವನ್ನು ಬಹಳವೇ ಜೋಪಾನ ಮಾಡುತ್ತೇವೆ. ಸಂಬಂಧಗಳನ್ನು ಕಾಲಕಸ ಮಾಡಿಕೊಂಡಿದ್ದೇವೆ. ಸಂಬಂಧಗಳು ಇಲ್ಲದಿದ್ದರೂ ಬದುಕಬಹುದು; ಇಂಥ ವಸ್ತುಗಳು ಸುಸ್ಥಿತಿಯಲ್ಲಿ ಇಲ್ಲದೇ ಹೋದರೆ ಬದುಕಲಾದೀತೇ? ಎಂದು ಕೇಳುವಷ್ಟರಮಟ್ಟಿಗೆ ನಾವು ಸಂಕುಚಿತರಾಗಿದ್ದೇವೆ. ಮಡದಿಯು ತನ್ನ ಗಂಡನನ್ನು ಮುಟ್ಟಬಹುದು; ಆದರೆ ಆತನ ಫೋನನ್ನಲ್ಲ! ಇದರ ತದ್ವಿರುದ್ಧವೂ ಇದೆ. ಲೋಕದಲ್ಲಿ ನಾವೆಷ್ಟು ವಸ್ತುಪ್ರಿಯರಾಗಿದ್ದೇವೆಂದರೆ ತಾಂತ್ರಿಕತೆಯು ನಮ್ಮ ಶರೀರದ ಒಂದಂಗವಾಗಿಬಿಟ್ಟಿದೆ. ಆಪರೇಷನ್ ಮಾಡಿ ಸಿಮ್ ಕಾರ್ಡನ್ನು ಕಿವಿಗೋ ಮಿದುಳಿಗೋ ಲಗತ್ತಿಸುವುದೊಂದು ಬಾಕಿಯಿದೆ.
ನಾನು, ನನ್ನದು, ನನ್ನ ತಟ್ಟೆಲೋಟ, ನನ್ನ ಟವೆಲು, ನನ್ನ ಬಾತುರೂಮು, ನನ್ನ ಮನೆ, ನನ್ನ ರೂಮು ಎಂದೆಲ್ಲಾ ನಾವು ಬರು ಬರುತ್ತಾ ಭಾರತೀಯ ಜಾಯಮಾನಕ್ಕೆ ಹೊರತಾದ ಮೆಂಟಾಲಿಟಿಯಲ್ಲಿ ಅಂಟುನಂಟಾಗಿದ್ದೇವೆ. ಅಟ್ಯಾಚ್ ಬಾತುರೂಮೆಂದರೇನೆಂದೇ ಗೊತ್ತಿಲ್ಲದ ವಠಾರದ ಮನೆಗಳಲ್ಲಿ ಸಹಬಾಳ್ವೆ ನಡೆಸಿ ಬಂದವರು ನಾವು. ಸಮಾನತೆ ಮತ್ತು ಸಹಿಷ್ಣುತೆ ಎಂಬ ಮೌಲ್ಯಗಳನ್ನು ಉಸಿರಾಡಿದ ಪೀಳಿಗೆ; ಕೇವಲ ಗಿಳಿಯೋದಲ್ಲ. ಈಗಿನ ಮಕ್ಕಳಿಗೆ ಇದನ್ನೆಲ್ಲ ಹೇಳಿ ಪ್ರಯೋಜನವಿಲ್ಲ. ‘ಅದು ನಿಮ್ಮ ಕರ್ಮ, ಹಣೆಯಬರೆಹ’ ಎಂದವರು ಅಂದುಕೊಳ್ಳುವ ಸಾಧ್ಯತೆಯಿದೆ. ಒಂದಂತೂ ಸತ್ಯ. ಅವರಿಗಿರಲಿ, ನಮಗೇ ಈಗ ಹಾಗೆ ಬದುಕಲು ಸಾಧ್ಯವಿಲ್ಲ, ಅಷ್ಟು ದೂರ ನಡೆದು ಬಂದಿದ್ದೇವೆ. ಬಹುಶಃ ಅಭಿವೃದ್ಧಿ, ಪ್ರಗತಿ, ಬೆಳವಣಿಗೆ ಎಂಬುದು ಸುಖವನ್ನು ದೋಚುತ್ತದೆ; ಶಾಂತಿ, ಸಹಿಷ್ಣುತೆ ಮತ್ತು ವಿಶಾಲ ಮನೋಭಾವವನ್ನು ಕಸಿದುಕೊಳ್ಳುತ್ತದೆ.
ಸೈಕಲ್ಲಿನ ಬಹು ದೊಡ್ಡ ಉಪಯೋಗವೆಂದರೆ ಅದನ್ನು ಸಾಕಬೇಕಿಲ್ಲದಿರುವುದು. ಪದೇ ಪದೇ ರಿಪೇರಿಗೆ ಬರುವುದಿಲ್ಲ; ಇಂಧನ ಬೇಕಾಗಿಲ್ಲ. ನಿರ್ವಹಣಾ ವೆಚ್ಚವಿಲ್ಲ. ವಾರಕ್ಕೊಮ್ಮೆ ಚೆನ್ನಾಗಿ ಒರೆಸಿಟ್ಟು, ಚೈನು, ಫ್ರಿವೀಲು, ಬ್ರೇಕು ಮತ್ತು ಚಕ್ರಗಳ ತಿರುಗುಣಿಗಳಿಗೆ ಎಣ್ಣೆ ತೋರಿದರೆ ಮುಗಿಯಿತು. ಯಾವಾಗಲಾದರೂ ಬ್ರೇಕುಗಳನ್ನು ಬಿಗಿ ಮಾಡಿಸಿಕೊಂಡರಾಯಿತು. ಅದಕಾಗಿ ಸೈಕಲ್ಲು ಬಡವರ ವಾಹನ, ಮುಖ್ಯವಾಗಿ ಅಂಗಾಂಗಗಳಿಗೆ ಸಾಕಷ್ಟು ವ್ಯಾಯಾಮ ನೀಡುವ ಅಂಗಸಾಧನೋಪಕರಣ! ನಾವೆಲ್ಲ ಪುಟ್ಟವರಿದ್ದಾಗ ಸಾಕಷ್ಟು ಸೈಕಲ್ಲು ಸವಾರಿ ಮಾಡಿಯೇ ಕೈಕಾಲುಗಳನ್ನು ಗಟ್ಟಿ ಮಾಡಿಕೊಂಡಿದ್ದು, ಇದೀಗ ಅಂಗಸಾಧನ ಕೊಠಡಿ (ಜಿಮ್ ರೂಮ್) ಗಳಲ್ಲಿ ಟ್ರೆಡ್‌ಮಿಲ್ ಮೇಲೆ ಓಡುತ್ತಾರೆ, ತಾವು ಹಿಂದೆ ಸವಾರಿ ಮಾಡಿದ್ದ ಸೈಕಲ್ಲನ್ನು ನೆನಪಿಸಿಕೊಂಡು. ಈಗಿನ ಮಕ್ಕಳಿಗೆ ಮೋಟಾರುಬೈಕು, ಕಾರುಗಳ ಬಗ್ಗೆ ಮಾಹಿತಿ ಇರುವಂತೆ, ನಮಗೆ ಆಗಿನ ಕಾಲದಲ್ಲಿ ಹಲವು ಬಗೆಯ ಸೈಕಲ್ಲುಗಳ ಅರಿವಿತ್ತು. ಸಿರಿವಂತರು ತಮ್ಮ ಮಕ್ಕಳಿಗೆ ತೆಗೆದು ಕೊಡುತ್ತಿದ್ದ ಪುಟ್ಟ ಸೈಕಲ್ಲುಗಳನ್ನು ರಸ್ತೆಯಲ್ಲಿ ನೋಡುವಾಗ್ಗೆ ನಮಗೂ ಆಸೆಯಾಗುತ್ತಿತ್ತು. ವಠಾರದ ದೊಡ್ಡ ಹುಡುಗರು ನಮ್ಮ ತಾಯಿಯನ್ನು ಕಂಡು, ನಾಲ್ಕಾಣೆ ಪಡೆದುಕೊಂಡು, ಸೈಕಲ್ ಷಾಪಿಗೆ ಹೋಗಿ ನನ್ನ ಕಾಲು ನಿಲುಕುವಂಥ ಪುಟ್ಟ ಸೈಕಲ್ಲನ್ನು ಬಾಡಿಗೆಗೆ ತೆಗೆದುಕೊಂಡು ಸರ್ಕಾರಿ ಶಾಲೆಯ ಮೈದಾನದಲ್ಲಿ ಬ್ಯಾಲೆನ್ಸ್ ಹೇಳಿ ಕೊಡಲು ಹರಸಾಹಸ ಪಟ್ಟಿದ್ದು ನನಗಿನ್ನೂ ನೆನಪಿದೆ. ಆಗೆಲ್ಲಾ ಸೈಕಲ್ ಷಾಪುಗಳಿರುತ್ತಿದ್ದವು. ಥರಾವರಿ ಸೈಕಲ್ಲುಗಳನ್ನು ಬಾಡಿಗೆಗೆ ಕೊಡುತ್ತಿದ್ದರು. ಅರ್ಧ ಗಂಟೆಗೆ, ಒಂದು ಗಂಟೆಗೆ ಎಂದು ದುಡ್ಡು ತೆಗೆದುಕೊಳ್ಳುತ್ತಿದ್ದರು. ದೂರದ ಏರಿಯಾದ ಸಂಬಂಧಿಕರ ಮನೆಗೆ ಹೋಗಬೇಕಿದ್ದರೆ ಬಾಡಿಗೆ ಸೈಕಲ್ಲನ್ನು ತೆಗೆದುಕೊಂಡು ಹೋಗಿ ಏನಾದರೂ ಕೊಡುವುದಿದ್ದರೆ, ತೆಗೆದುಕೊಂಡು ಬರುವುದಿದ್ದರೆ ಇದರ ಬಳಕೆ. ಮಿಕ್ಕಂತೆ ಸ್ವಲ್ಪ ದೊಡ್ಡ ಮಕ್ಕಳು ಸೈಕಲನ್ನು ಬಾಡಿಗೆಗೆ ತೆಗೆದುಕೊಂಡು ಬಂದು, ತಮಗಿಂತ ಚಿಕ್ಕವರಿಗೆ ಸೈಕಲ್ ಪ್ರಾಕ್ಟೀಸು ಮಾಡಿಸುತ್ತಿದ್ದರು. ಅಡುಗೆಗೆ ಸೀಮೇಯೆಣ್ಣೆ ಸ್ಟವ್; ಸ್ನಾನಕ್ಕೆ ಸೌದೆಯೊಲೆ. ಹಾಗಾಗಿ ನಾನು ಸೈಕಲ್ ಕಲಿತ ಮೇಲೆ ಬಾಡಿಗೆ ಸೈಕಲ್ಲಿನಲ್ಲೇ ಸಾಮಿಲ್ಲಿಗೆ ಹೋಗಿ ದುಡ್ಡು ಕೊಟ್ಟು ಸೌದೆ ತರುತ್ತಿದ್ದೆ. ನಮ್ಮಜ್ಜಿ ಮನೆ ಶಿವರಾಮಪೇಟೆ. ಅಲ್ಲಿನ ಪಕ್ಕದ ಬೀದಿಯೇ ಗಾಡಿಚೌಕ. ಅಲ್ಲಿಗೆ ಹೋಗಿ ಸೌದೆ ತೆಗೆದುಕೊಂಡು ಸೈಕಲ್ಲಿನಲ್ಲಿ ಹೇರಿಕೊಂಡು ಅಜ್ಜಿಮನೆಗೆ ಕೊಟ್ಟು ಹೋಗುತ್ತಿದ್ದೆ. ‘ಸೌದೆ ಮುಗಿದು ಹೋಗಿದೆ ಕಣೋ ಗೋಪಾಲ’ ಎಂದರೆ, ನಾನು ‘ನಾಳೆ ಬಾಡಿಗೆ ಸೈಕಲ್ಲಿನಲ್ಲಿ ಬಂದು, ಸೌದೆ ತಂದು ಕೊಡುವೆ ಸುಮ್ನಿರು ಅಜ್ಜಿ’ ಎನ್ನುತ್ತಿದ್ದೆ. (ನಮ್ಮಜ್ಜಿಯು ನನ್ನನ್ನು ಗೋಪಾಲ ಎಂದೇ ಕರೆಯುತ್ತಿದ್ದುದು) ‘ಹಸೀಸೌದೆ ತರಬೇಡ, ಒಣಗಿದ್ದು ನೋಡಿ ತೊಗೊಂಬಾ’ ಎನ್ನುತ್ತಿದ್ದರು. ನನಗಿಂತ ಸ್ವಲ್ಪ ದೊಡ್ಡವನಾದ ನನ್ನ ಅತ್ತೆಯ ಮಗನ ಬಳಿ ಸ್ವಂತ ಸೈಕಲ್ಲು ಇದ್ದರೂ ಅದೇನೋ ರಿಪೇರಿ ಮಾಡಲು ಹೋಗಿ ಕೆಡಿಸಿಕೊಂಡು ಕೂತಿದ್ದ. ಹಾಗಾಗಿ ನನ್ನ ಮೇಲೆ ಅವಲಂಬಿತರಾಗಿದ್ದರು.
ಹೀಗೆಯೇ ಕುವೆಂಪು ಅವರು ತಮ್ಮ ಮಗ ತೇಜಸ್ವಿಯವರಿಗೆ ಒಂದು ಸೈಕಲ್ಲನ್ನು ತೆಗೆದುಕೊಟ್ಟಿದ್ದರಂತೆ. ಆಗಲೇ ಪೂರ್ಣಚಂದ್ರತೇಜಸ್ವಿಯವರದು ಅನ್ವೇಷಣಾ ಬುದ್ಧಿ. ‘ಏನೇನಿದೆ? ಹೇಗೆ ಜೋಡಿಸಿರುತ್ತಾರೆ?’ ಎಂದು ನೋಡಲು ಹೋಗಿ ಇಡೀ ಸೈಕಲ್ಲನ್ನು ಪೂರ್ಣ ಬಿಚ್ಚಿಮೂಲೆಯಲ್ಲಿ ಸುರುವಿಕೊಂಡಿದ್ದರಂತೆ. ಕುವೆಂಪು ಅವರು ಮನೆಗೆ ಬಂದು ‘ನಿನ್ನ ಸೈಕಲೆಲ್ಲಿ?’ ಎಂದಾಗ ಹೋಗಿ ತೋರಿಸಿದರಂತೆ! ‘ಇದೇನೋ ಈ ಥರ ಗುಜರಿ ಅಂಗಡಿ ಮಾಡ್ಕೊಂಡಿದೀಯಾ?’ ಎಂದರೆ ‘ನೋಡ್ತಾಯಿರು ಅಣ್ಣಾ, ನಾಳೆಯೊಳಗೆ ಜೋಡಿಸಿ ಇಡುವೆ’ ಎಂದಾಗ ತಲೆ ಚಚ್ಚಿಕೊಂಡರಂತೆ. ತೇಜಸ್ವಿಯವರ ‘ಅಣ್ಣನ ನೆನಪು’ ಪುಸ್ತಕದಲ್ಲಿ ಬರುವ ಸ್ವಾರಸ್ಯಕರ ಪ್ರಸಂಗಗಳಲ್ಲಿ ಇದೂ ಒಂದು. ಹೀಗೆ ಸೈಕಲ್ಲೆಂಬುದು ನಮ್ಮ ಕಾಲದ ಮಕ್ಕಳಿಗೆ ಕೇವಲ ಸೈಕಲ್ ಆಗಿರಲಿಲ್ಲ. ನಮ್ಮೆಲ್ಲ ಸಕಲೆಂಟು ಸಂಶೋಧನಾ ಪ್ರವೃತ್ತಿಗಳಿಗೆ ಆಡುಂಬೊಲವಾಗಿತ್ತು. ಅಟ್ಲಾಸು, ಹೀರೊ, ಹರ್ಕ್ಯುಲೆಸ್, ಏವನ್, ಬಿಎಸ್ಎ ಕಂಪೆನಿಗಳ ನಾನಾ ನಮೂನೆಯ ಸೈಕಲ್ಲುಗಳನ್ನು ಅಷ್ಟು ದೂರದಿಂದಲೇ ಗುರುತಿಸುವಷ್ಟು ಅದರ ಮಾರುಕಟ್ಟೆಯ ಬೆಲೆ ತಿಳಿಯುವಷ್ಟು ಪ್ರಾಜ್ಞತೆಯನ್ನು ನಾವು ಪಡೆದುಕೊಂಡಿದ್ದೆವು. ನನ್ನ ಜೀವನದ ಮಹತ್ವಾಕಾಂಕ್ಷೆ ಎಂದರೆ ಚೆನ್ನಾಗಿ ಓದಿ ದೊಡ್ಡ ಹುದ್ದೆಯನ್ನು ಹೊಂದಬೇಕೆಂಬುದಾಗಿರಲಿಲ್ಲ. ಒಂದು ಸೆಕೆಂಡ್ ಹ್ಯಾಂಡ್ ಸೈಕಲನ್ನು ತೆಗೆದುಕೊಳ್ಳಬೇಕೆಂಬುದೇ ಮಹತ್ತಾದ ಕನಸಾಗಿತ್ತು. ಅಂತೂ ಆ ಕನಸು ನನಸಾಯಿತು. ಎಂಟನೇ ಕ್ಲಾಸಿನ ಬೇಸಗೆ ರಜೆಯಲ್ಲಿ ನಾನು ಮನೆ ಮನೆಗೆ ಪೇಪರ್ ಹಾಕುವ ಕೆಲಸಕ್ಕೆ ಸೇರಿಕೊಂಡಾಗ ಸೈಕಲ್ ಅಗತ್ಯಬಿತ್ತು. ಸೈಕಲ್ ಇದ್ದರೆ ಮಾತ್ರ ಆ ಕೆಲಸ ಮಾಡುವ ಅರ್ಹತೆ. ಹಾಗಾಗಿ ನಮ್ಮ ತಂದೆಯವರು ಇನ್ನೂರ ಹತ್ತು ರೂಪಾಯಿಗೆ ಒಂದು ಸೆಕೆಂಡ್ ಹ್ಯಾಂಡ್ ಸೈಕಲನ್ನು ತೆಗೆದುಕೊಟ್ಟರು. ಬೇಸಗೆ ರಜೆ ಮುಗಿದ ಮೇಲೂ ಬೆಳಗಿನ ವೇಳೆ ಪೇಪರ್ ಹಾಕುವ ಕಾಯಕವನ್ನು ಮುಂದುವರಿಸಿದೆ. ಪ್ರತಿ ತಿಂಗಳೂ ನಲವತ್ತು ರೂಪಾಯಿಗಳನ್ನು ಸಂಬಳವಾಗಿ ಕೊಡುತ್ತಿದ್ದರು. ಆ ಕಾಲದಲ್ಲಿ ಹುಣಸೂರಿನ ಶ್ರೀನಿವಾಸ್ ಅವರು ಪ್ರಜಾವಾಣಿಯ ಏಜೆಂಟರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆನಂತರ ಇವರ ಮಗ ಸಚ್ಚಿತ್ ಎಂಬುವವರು ವಹಿಸಿಕೊಂಡರು. ಇವರೇ ನನಗೆ ಮೊತ್ತ ಮೊದಲ ಸಂಬಳ ಕೊಟ್ಟ ಪುಣ್ಯಾತ್ಮರು. ಇವರು ಕೊಟ್ಟ ಸಂಬಳದಲ್ಲಿ ಕೂಡಿಸಿದ ಹಣ (ಆರೇಳು ತಿಂಗಳ ಮೊತ್ತ) ವನ್ನು ನಮ್ಮ ತಂದೆಯ ಕೈಗಿತ್ತಾಗ ಕಣ್ಣೀರು ಹಾಕಿಕೊಂಡರು. ‘ನೀನು ಸೈಕಲ್ಲಿಗೆ ಕೊಟ್ಟ ದುಡ್ಡನ್ನು ವಾಪಸು ಮಾಡಿರುವೆ’ ಎಂದಾಗ ಮೊದಲ ಬಾರಿಗೆ ನನ್ನ ತಲೆ ಸವರಿ, ಗದ್ಗದಿತರಾಗಿ, ಆನಂದಾಶ್ರು ಸುರಿಸಿದ್ದು ನನಗಿನ್ನೂ ನೆನಪಿದೆ. ‘ಉಳಿದ ದುಡ್ಡನ್ನು ಸೈಕಲ್ ರಿಪೇರಿಗೆ ಬಳಸಿದ್ದೆ’ ಎಂದಾಗ ಮಾತಿಲ್ಲದೇ ಮೌನವಾದರು. ಹೀಗೇ ಮುಂದುವರಿದ ನನ್ನ ಸೈಕಲ್ ಸವಾರಿಯು ಸೈಕಲ್ ಷಾಪಿನಲ್ಲಿ ಕೆಲಸ ಮಾಡುವವರೆಗೂ ಮುಂದುವರಿಯಿತು. ನನ್ನ ಸೈಕಲ್ ಕ್ರೇಜು ಆ ಮಟ್ಟವನ್ನೂ ಮುಟ್ಟಿತು. ನನಗೆ ಸೈಕಲನ್ನು ಮಾರಾಟ ಮಾಡಿದ ಖಾಲಿದ್ ಎಂಬ ಸೈಕಲ್ ಮೆಕಾನಿಕ್ ಕೆಲಸ ಮಾಡುವ ಅಂಗಡಿಯಲ್ಲೇ ಪ್ರತಿದಿನ ಸಂಜೆ ಕೆಲಸ ಮಾಡಲು ಆರಂಭಿಸಿದೆ. ‘ನೀನು ನನ್ನಂತೆ ಟೈಲರ್ ಆಗುವುದು ಬೇಡ, ಚೆನ್ನಾಗಿ ಓದು’ ಎಂದು ನನ್ನ ತಂದೆಯವರು ಹೇಳುತ್ತಿದ್ದರು. ನಾನಾದರೋ ಓದನ್ನು ಪಕ್ಕಕ್ಕೆ ಸರಿಸಿ, ಬೆಳಗಿನವೇಳೆ ಪತ್ರಿಕಾ ಸಹವಾಸ, ಸಂಜೆಯ ವೇಳೆ ಸೈಕಲ್ ಷಾಪಿನಲ್ಲಿ ಕೆಲಸ ಕಲಿವ ಹರಸಾಹಸಕ್ಕೆ ವಶವಾದೆ. ಸೈಕಲ್ ರಿಪೇರಿ ಮಾಡುವುದನ್ನು ಚೆನ್ನಾಗಿ ಕಲಿತ ಮೇಲೆ ಆ ಅಂಗಡಿಯವರೂ ನನಗೆ ತಿಂಗಳ ಸಂಬಳ ಕೊಡುವುದನ್ನು ಶುರು ಮಾಡಿದರು. ಆಗಲೇ ತಿಂಗಳಿಗೆ ನೂರು ರೂಪಾಯಿ ದುಡಿಮೆ ಮಾಡುತ್ತಿದ್ದೆ. ಆ ಕಾಲಕ್ಕೆ ಇದು ಕಡಮೆ ಅಲ್ಲದ ಮೊತ್ತ. ಕನಸು ಮನಸೆಲ್ಲಾ ಸೈಕಲ್ಲೇ ತುಂಬಿಕೊಂಡ ದಿನಮಾನ. ಸರ್ಕಾರಿ ಶಾಲೆಗೂ ಸೈಕಲ್ಲಿನಲ್ಲೇ ಹೋಗಾಟ, ಬರಾಟ. ಆಮೇಲೆ ನಾವು ಚಿಲ್ಲರೆ ಅಂಗಡಿಯನ್ನು ಇಟ್ಟಾಗ ನನ್ನ ಸೈಕಲ್ಲು ಬಹಳವೇ ಉಪಯೋಗಕ್ಕೆ ಬಂದಿತು. ಹೋಲ್ ಸೇಲ್ ಅಂಗಡಿಯಿಂದ ಪದಾರ್ಥಗಳನ್ನು ತರಲು ಬಳಸಲಾರಂಭಿಸಿದೆ. ನಮ್ಮ ತಂದೆಯವರಿಗೆ ಸೈಕಲ್ ಸವಾರಿ ಗೊತ್ತಿರಲಿಲ್ಲ. ಅವರೆಂದೂ ತಮ್ಮ ಜೀವನದಲ್ಲಿ ಸೈಕಲ್ ಮುಟ್ಟಿರಲಿಲ್ಲ. ನಾನು ಸೈಕಲ್ ಸವಾರಿ ಕಲಿತಿದ್ದು, ಸೆಕೆಂಡ್ ಹ್ಯಾಂಡ್ ಸೈಕಲ್ ಮೇನ್‌ಟೇನ್ ಮಾಡುತ್ತಿದ್ದುದು ನಮ್ಮ ಜೀವಜೀವನದ ಮಹಾನ್ ಸಾಧನೆ. ಮೈಸೂರಿನ ಬೀದಿಗಳಲ್ಲಿ ನನಗೆ ಸೈಕಲ್ ತುಳಿಯುವುದನ್ನು ಹೇಳಿಕೊಟ್ಟ ಹಳ್ಳದಕೇರಿಯ ವಠಾರದ ಹುಡುಗರಿಗೆ ನಾನು ಚಿರಋಣಿಯಾಗಿರಬೇಕು. ಬದುಕಿನಲ್ಲಿ ಕಲಿತ ಮೊದಲ ಕೌಶಲವಿದು. ಸೈಕಲ್ಲಿಗೂ ನನ್ನ ಮೊದ ಮೊದಲ ಸಂಪಾದನೆಗೂ ಅವಿನಾಭಾವ. ಹಾಗಾಗಿ ಸೈಕಲೆಂಬುದು ನನಗೆ ಕೇವಲ ವಾಹನವಲ್ಲ; ಅದು ಬಾಳುವೆಯನ್ನು ಕಲಿಸಿದ ಸಾಧನ ಸಲಕರಣ.
ಸೈಕಲ್ಲುಗಳು ರಿಪೇರಿಗೆ ಬರುವುದು ಅಪರೂಪ. ನಾವು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಮತ್ತು ಸರಿಯಾದ ರೀತಿಯಲ್ಲಿ ಸವಾರಿ ಮಾಡಿದರೆ ತುಂಬ ವರುಷಗಳ ಕಾಲ ಅವು ನಮ್ಮ ಸಂಗಾತಿಯಾಗಿರಬಲ್ಲವು. ಅಡ್ಡಾದಿಡ್ಡಿ ಓಡಿಸಿದರೆ, ವಾರಕ್ಕೊಮ್ಮೆ ಅವನ್ನು ಒರೆಸಿ, ಚೈನು-ಬ್ರೇಕುಗಳಿಗೆ ಎಣ್ಣೆ ತೋರಿ ಸುಸ್ಥಿತಿಯಲ್ಲಿಟ್ಟುಕೊಂಡರೆ ಅವು ನಮ್ಮ ಆಪ್ತಮಿತ್ರರು. ಆದರೆ ಬಹಳ ಮಂದಿ ಹಾಗೆ ನೋಡಿಕೊಳ್ಳದೇ ಪದೇ ಪದೇ ರಿಪೇರಿಗೆ ತಂದು ಬಿಡುತ್ತಿದ್ದರು. ಕೆಲವೊಂದು ಸೈಕಲ್ ಷಾಪುಗಳು ಕೇವಲ ಬಾಡಿಗೆಗೆ ಮಾತ್ರ ಸೈಕಲ್ಲುಗಳನ್ನು ಕೊಡುತ್ತಿದ್ದರು. ಇನ್ನು ಕೆಲವು ಸೈಕಲ್ ಷಾಪಿನವರು ಮೆಕಾನಿಕ್‌ಗಳನ್ನು ಕೆಲಸಕ್ಕಿಟ್ಟುಕೊಂಡು ರಿಪೇರಿಯನ್ನು ಸಹ ಮಾಡಿಸಿ ಕೊಡುತ್ತಿದ್ದರು. ಪ್ರಾರಂಭದಲ್ಲಿ ನನಗೆ ಕೆಲಸ ಕೊಟ್ಟಿದ್ದು ಸೈಕಲ್ಲುಗಳ ಚಕ್ರಕ್ಕೆ ಗಾಳಿ ತುಂಬಿಸುವುದು. ಪಂಪಿನ ಸಹಾಯದಿಂದ ಮೇಲಕ್ಕೂ ಕೆಳಕ್ಕೂ ಎಗರಿ ಗಾಳಿ ಹೊಡೆಯಬೇಕಿತ್ತು. ಆಮೇಲೆ ಕಲಿಸಿ ಕೊಟ್ಟಿದ್ದು ಟ್ಯೂಬುಗಳು ಪಂಚರ್ ಆದಾಗ ಅವನ್ನು ಸರಿ ಮಾಡಿ ಕೊಡುವುದು. ತದನಂತರ ಬ್ರೇಕು ಸರಿ ಮಾಡುವುದು, ತರುವಾಯ ಹ್ಯಾಂಡಲ್ ರಿಪೇರಿ, ಚೈನು ರಿಪೇರಿ ಕೊನೆಯದೆಂದರೆ ಎರಡೂ ಚಕ್ರಗಳನ್ನು ಬಿಚ್ಚಿ, ಟೈರು-ಟ್ಯೂಬು ಕಳಚಿ, ರಿಮ್‌ಗೆ ಲಗತ್ತಾಗಿರುವ ಸ್ಪೋಕ್ಸ್ ಕಡ್ಡಿಗಳ ವಕ್ರತೆಯನ್ನೂ ಸಡಿಲತೆಯನ್ನೂ ಸರಿ ಮಾಡುವುದು. ಇದು ಸೈಕಲ್ ರಿಪೇರಿಯ ಕೊನೆಯ ವಿದ್ಯೆ. ಈ ಹಂತಕ್ಕೆ ಬರಲು ಕನಿಷ್ಠ ಒಂದು ವರುಷದ ರಿಪೇರಿಯ ಅನುಭವ ಇರಬೇಕು. ಕೆಲವೊಂದು ಉಪಕರಣಗಳ ಸಹಾಯದಿಂದ ಇಂಥ ರಿಪೇರಿಯನ್ನು ಮಾಡುವ ಕ್ರಮಶ್ರಮಗಳನ್ನು ನಾನು ಸಹ ಕಲಿತೆ. ಆಗ ಸಂಬಳ ಹೆಚ್ಚಾಯಿತು. ನನ್ನ ಸೈಕಲ್ ಕ್ರೇಜು ಹೀಗೆ ಸೈಕಲ್ ರಿಪೇರಿಯ ಕೊನೆಯ ಹಂತದ ಕಲಿಕೆಯ ತನಕ ಕೊಂಡೊಯ್ಯಿತು ಎಂಬುದೇ ಆಶ್ಚರ್ಯ. ಕುತೂಹಲಾಸಕ್ತಿಗಳು ಕೌಶಲ್ಯ ಕಲಿಸುವ ಪರಿಪಾಠಕ್ಕೆ ಇದೊಂದು ಉತ್ತಮ ನಿದರ್ಶನ. ‘ನಿನಗೆ ವಿದ್ಯೆ ಮೈಗೆ ಹತ್ತುತ್ತದೆ, ಚೆನ್ನಾಗಿ ಓದು, ಈ ಕೆಲಸ ಬೇಡ, ಇದು ದೇಹದ ಉಷ್ಣತೆಯನ್ನು ಹೆಚ್ಚಿಸುವ ಕೆಲಸ, ಜೊತೆಗೆ ಅನ್ನ ತಿಳಿಸಾರು ತಿನ್ನುವ ನಿನ್ನಂಥವರಿಗೆ ಇದು ಸರಿ ಬರದು’ ಎಂದೇ ಸೈಕಲ್ ಷಾಪಿನ ಓನರು ಮತ್ತು ಕೆಲಸ ಕಲಿಸಿದ ಮೆಕಾನಿಕ್ ಗುರು ಖಾಲಿದ್ ಇಬ್ಬರೂ ಕೃಶ ಶರೀರಿಯಾದ ನನಗೆ ತಿಳಿವಳಿಕೆ ಹೇಳುತ್ತಲೇ ಇದ್ದರು. ಎಸೆಸೆಲ್ಸಿ ಮತ್ತು ಪಿಯುಸಿ ಮುಗಿಸಿದ ಮೇಲೆ ಸೈಕಲ್ ಷಾಪಿನ ಕೆಲಸದಿಂದ ಬಟ್ಟೆ ಅಂಗಡಿಗೆ ವರ್ಗವಾದೆ; ಕೈ ಮೈ ಬಟ್ಟೆಯೆಲ್ಲಾ ಗಲೀಜಾಗುವ ಕೆಲಸದಿಂದ ಡೀಸೆಂಟು ಜಾಬಿಗೆ ಶಿಫ್ಟಾದೆ!
ಶ್ರೀಮಂತರು ತಮ್ಮ ಪುಟ್ಟ ಮಕ್ಕಳಿಗೆ ಮೂರು ಚಕ್ರದ ಪುಟ್ಟ ಸೈಕಲನ್ನು ತೆಗೆದುಕೊಡುತ್ತಿದ್ದರು. ನಾವದನ್ನು ನೋಡಿದ್ದೆವೇ ವಿನಾ ಅದರ ಭಾಗ್ಯ ಒದಗಿ ಬರಲಿಲ್ಲ. ನನ್ನ ಮಗನ ಕಾಲಕ್ಕೆ ಬ್ಯಾಲೆನ್ಸ್ ವ್ಹೀಲ್ ಆವಿಷ್ಕಾರವಾಗಿತ್ತು. ನಾವು ಎದ್ದೂ ಬಿದ್ದೂ ಸೈಕಲ್ ಕಲಿತ ಕಷ್ಟನಷ್ಟಗಳೂ ನೋವುಗಾಯಗಳೂ ನಮ್ಮ ಮುಂದಿನ ಪೀಳಿಗೆಗೆ ಇಲ್ಲವಾಯಿತು. ಬ್ಯಾಲೆನ್ಸ್ ವ್ಹೀಲ್‌ನಲ್ಲಿ ಸೈಕಲ್ ಸವಾರಿ ಕಲಿತ ಮೇಲೆ ಬ್ಯಾಲೆನ್ಸ್ ವ್ಹೀಲ್ ಅನ್ನು ತೆಗೆಸಿ ತುಳಿಯುವ ಮಜದಾನಂದವನ್ನು ಮಕ್ಕಳ ಕಣ್ಣಲ್ಲಿ ನೋಡಬೇಕು! ಗಾಳಿಯಲ್ಲಿ ತೇಲುವ ಅನುಭವವನ್ನು ಹೊಂದುವರು. ಪುಟ್ಟ ಸೈಕಲಿಂದ ದೊಡ್ಡ ಸೈಕಲ್ಲಿಗೆ ಬಡ್ತಿ ಪಡೆಯುವಾಗ್ಗೆ ನಾವೆಲ್ಲ ತಳ್ಳಿಕೊಂಡು ಅಷ್ಟು ದೂರ ಹೋಗಿ, ಎತ್ತರದ ಕಟ್ಟೆಯೋ ಕಲ್ಲೋ ಹುಡುಕಿ ಅಲ್ಲಿ ಹತ್ತಿ ಕುಳಿತು ಮತ್ತೆ ಅಲ್ಲಿಗೇ ಬಂದು ಇಳಿಯುವ ಪ್ರಯಾಸವು ಒಂದು ಬಗೆಯ ಥ್ರಿಲ್. ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಅವರ ಬಳಿ ಬೀಗದೆಸಳು ಪಡೆದು, ಸುಮ್ಮನೆ ಅಷ್ಟು ದೂರ ಸೈಕಲನ್ನು ತಳ್ಳಿಕೊಂಡು ಹೋಗುವ ದುರಭ್ಯಾಸ ನಮ್ಮದಾಗಿತ್ತು. ಅಂದರೆ ಸೈಕಲ್ ಚಲಾಯಿಸುವ ಮೊದಲ ವಿದ್ಯೆಯೇ ಈ ತಳ್ಳಿಕೊಂಡು ಹೋಗುವುದು. ದರ್ಜಿ ಅಂಗಡಿಯಲ್ಲಿ ಕೆಲಸ ಕಲಿಯುವಾಗ ಮೊದಲಿಗೇ ಎರಡು ಬೆಂಕಿಕಡ್ಡಿಯನ್ನು ಕೈಯಲ್ಲಿರಿಸಿ ‘ಕಡ್ಡಿ ಎತ್ತಿಸುವ’ ಕೌಶಲ್ಯ ಕಲಿಸುತ್ತಾರಲ್ಲಾ ಹಾಗೆ. ಹೆಮಿಂಗ್ ಮಾಡಲು ಸೂಜಿಯನ್ನು ಹೇಗೆ ಹಿಡಿಯಬೇಕು? ಹೇಗೆ ಎತ್ತಿ ಇಳಿಸಬೇಕು? ಎಂಬುದರ ಪೂರ್ವಾಭ್ಯಾಸವಿದು. ಡೈನಮೋ ಮತ್ತು ಕ್ಯಾರಿಯರ್ ಇರುವ ಸೈಕಲ್ಲನ್ನು ಕಂಡರೆ ನಮಗೆಂಥದೋ ಗೌರವಾದರ. ಇದ್ದುದರಲ್ಲಿ ಅವರು ಸೈಕಲ್ ಶ್ರೀಮಂತರು. ಹತ್ತಾರು ಲಕ್ಷ ರೂಪಾಯಿಯ ಕಾರುಗಳನ್ನು ನೋಡಿದಾಗ ಆಗುವ ಭಯಕೌತುಕದಂತೆ. ರಾತ್ರಿ ವೇಳೆ ಡೈನಮೋ ಸೈಕಲ್ಲನ್ನು ತುಳಿಯಬೇಕೆಂಬ ಮಹದಾಸೆ ಆಗಿನ ನಮ್ಮಂಥ ಪುಟ್ಟ ಹುಡುಗರದು. ಹುಡುಗಿಯರು ಸೈಕಲ್ ಕಲಿಯಲು ಬರುತ್ತಿದ್ದುದು ತುಂಬಾನೇ ಕಡಮೆ. ಹೆಣ್ಣುಮಕ್ಕಳಿಗೆ ಆಸೆಯಿದ್ದರೂ ತಾಯ್ತಂದೆಯರು ಅವಕಾಶ ಕೊಡುತ್ತಿರಲಿಲ್ಲ. ಈಗಿನಂತೆ ಲಿಂಗ ಸಮಾನತೆಯಾಗಲೀ, ಮಹಿಳಾ ಸಬಲೀಕರಣವಾಗಲೀ ಇಲ್ಲದ ಕಾಲವದು. ಹಾಗೊಮ್ಮೆ ಗಂಡುಮಕ್ಕಳ ಜೊತೆ ಸೇರಿ ಸೈಕಲ್ ಕಲಿತರೆ ಅಂಥ ಹೆಣ್ಣುಮಕ್ಕಳನ್ನು ಹೆಂಗಸರೇ ‘ಗಂಡುಬೀರಿʼ ಎಂದು ಕರೆದು ಲೇವಡಿ ಮಾಡುತ್ತಿದ್ದರು. ಲೇಡಿಸ್ ಸೈಕಲ್ ಎಂದು ಬಂದ ಮೇಲೆ (ಮುಂಭಾಗದ ಕಬ್ಬಿಣದ ಬಾರ್ ಸಮಾಂತರವಾಗಿರದೇ ಓರೆಯಾಗಿ ಇರುವ) ಮೇಲ್ಮಧ್ಯಮ ವರ್ಗದ ಹೆಣ್ಣುಮಕ್ಕಳು ಸೈಕಲ್ ಕಲಿಯಲು ಮುಂದಾದರು. ಇನ್ನು ಹಾಲು ಮಾರುವವರು, ಪೇಪರ್ ಹಾಕುವವರು, ಅಂಚೆಪೇದೆ, ಅಷ್ಟೇಕೆ, ಪೊಲೀಸ್ ಕಾನ್‌ಸ್ಟೇಬಲ್ ಸಹ ಸೈಕಲ್ ಸವಾರಿ ಮಾಡುತ್ತಿದ್ದರು. ಕಾರ್ಖಾನೆಗಳ ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿಗಳು ಸಹ. ಒಂದರ್ಥದಲ್ಲಿ ಈಗ ಯಾರ‍್ಯಾರೆಲ್ಲರು ಮೋಟಾರು ಬೈಕು ಮತ್ತು ಸ್ಕೂಟರುಗಳನ್ನು ಬಳಸುತ್ತಿದ್ದಾರೆಯೋ ಅಂಥವರೆಲ್ಲ ಹಿಂದೆ ಸೈಕಲ್ಲನ್ನೇ ಏರಿ ತಮ್ಮ ಕೆಲಸಕಾರ್ಯಗಳಿಗೆ ಹೋಗುತ್ತಿದ್ದುದು. ಪರಿಸರಸ್ನೇಹಿಯಾದ ಬೈಸಿಕಲ್ಲುಗಳು ವಿದೇಶದಲ್ಲಿ ಜನಪ್ರೀತಿ ಗಳಿಸಿಕೊಂಡಿದೆ. ನಮ್ಮ ದೇಶದಲ್ಲಿಯೇ ಯಾಕೋ ಸೊರಗಿ ಹೋಗಿದೆ. ಸೈಕಲ್ ತುಳಿಯುವುದು ಬಡತನದ ಸಂಕೇತ ಎಂದೋ ಎಂಥದೋ ಕೀಳರಿಮೆ ಬೆಳೆಸಿಕೊಂಡ ಒಂದು ವರ್ಗವಿದೆ. ಅಂಥವರಿಗೆ ಮೋಟಾರು ಬೈಕುಗಳು ಆಕರ್ಷಕ ಮತ್ತು ಮನಮೋಹಕ. ಜೊತೆಗೆ ಹಿಂದೆ ಮನೆಗೂ ಕೆಲಸ ಮಾಡುವ ಸ್ಥಳಕ್ಕೂ ಅಂತರ ಕಡಮೆ ಇರುತ್ತಿತ್ತು. ಸೈಕಲ್ ಬಳಕೆಯಾಗುತ್ತಿತ್ತು. ಈಗ ಹತ್ತಾರು ಕಿಲೋಮೀಟರು ದೂರ. ಸೈಕಲ್ಲು ಏರಿ ಕೆಲಸಕ್ಕೆ ಹೊರಟರೆ ನಾವು ಗಮ್ಯ ತಲಪುವುದು ಯಾವಾಗ? ಹಾಗಾಗಿ ಆಧುನೀಕರಣದ ಒಂದು ಭಾಗವಾದ ನಗರೀಕರಣದಿಂದಾಗಿ ಸೈಕಲ್ಲು ಸವಾರಿ ಕಡಮೆಯಾಗ ತೊಡಗಿತು. ಕೆಲವು ವರುಷಗಳ ಹಿಂದೆ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ನೀಡುವ ಯೋಜನೆಯೊಂದು ಅಸ್ತಿತ್ವಕ್ಕೆ ಬಂದು, ಮತ್ತೆ ಸೈಕಲ್ ಏರಿ ಶಾಲೆಗೆ ಹೋಗಿ ಬರುವ ಮಕ್ಕಳನ್ನು ನೋಡುವಂತಾಗಿತ್ತು. ಆಮೇಲೆ ಇದು ಸಹ ಚರಿತ್ರೆಗೆ ಸೇರಿ ಹೋಯಿತು. ಈಗ ಎಲ್ಲೆಂದರಲ್ಲಿ ಮೋಟಾರು ಬೈಕು ಮತ್ತು ಸ್ಕೂಟರುಗಳ ಕಾಲ. ಅಷ್ಟಲ್ಲದೇ ವಿದ್ಯುತ್ ಚಾಲಿತ ಮೊಪೆಡ್‌ಗಳು. ಸುಯ್ಯನೆ ಬಂದು ರೊಯ್ಯನೆ ಹೋಗುವ ಸ್ವಲ್ಪ ಶಬ್ದವೂ ಇಲ್ಲದ ಎಲೆಕ್ಟ್ರಿಕ್ ವಾಹನಗಳು ಸೈಕಲನ್ನು ಮತ್ತಷ್ಟು ಮೂಲೆಗುಂಪು ಮಾಡಿವೆ.
ಸೈಕಲ್ಲು ಎಂದರೆ ಆಯಾಚಿತವಾಗಿ ನೆನಪಾಗುವುದು ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಮಹಾಕಾದಂಬರಿಯಲ್ಲಿ ಬರುವ ಬೀಸೆಕಲ್ಲು ಪ್ರಸಂಗ. ಪಾದ್ರಿ ಜೀವರತ್ನಯ್ಯನು ಕ್ರೈಸ್ತಮತ ಪ್ರಚಾರಕ್ಕೆ ಮತ್ತು ಮತಾಂತರಕ್ಕೆ ಹಲವು ಆಮಿಷಗಳನ್ನೊಡ್ಡಿ ವಿಫಲನಾದವನು ಕೊನೆಯ ಪ್ರಯತ್ನವೆಂಬಂತೆ ಕಗ್ಗಾಡಿನ ಮಲೆನಾಡಿಗೆ ಆಧುನಿಕತೆಯ ಸಂಕೇತವಾದ ಬೈಸಿಕಲ್ಲನ್ನು ತರುತ್ತಾನೆ. ಕೇವಲ ಎರಡು ಚಕ್ರದ ಆ ವಾಹನದ ಮೇಲೆ ಕುಳಿತು ಬ್ಯಾಲೆನ್ಸ್ ಮಾಡುತ್ತಾ ಸವಾರಿ ಮಾಡುವ ಜೀವರತ್ನಯ್ಯನನ್ನು ನೆರೆದ ಜನರೆಲ್ಲಾ ಭಯಮಿಶ್ರಿತ ಬೆರಗಿನಿಂದ ನೋಡುತ್ತಾರೆ. ‘ದೇವಪುರುಷನೇ ಈತನಲ್ಲಿ ಆವಾಹನೆಯಾಗಿದೆಯೇನೋ?’ ಎಂಬ ಗುಮಾನಿ ಅವರಿಗೆ ಬರುತ್ತದೆ. ಮತಾಂತರಕ್ಕೆ ಅರೆಬರೆ ಮನಸು ಮಾಡಿದ್ದ ದೇವಯ್ಯ ಹೆಗ್ಗಡೆಗೆ ಒಂದು ಚಿಂತೆಯಾದರೆ ಈ ‘ಬೀಸೆಕಲ್ಲಿನ ಸವಾರಿ’ ನೋಡಲು ಬಂದಿದ್ದ ನಾಯಿಗುತ್ತಿಗೆ ಬೇರೊಂದು ಚಿಂತೆ. ಮದುವೆಯಾಗಿ ಆದರ್ಶ ದಾಂಪತ್ಯ ನಡೆಸುತ್ತಿದ್ದ ಯಕ್ಷ ಯಕ್ಷಿಯರ ಅಪರಾವತಾರವೇ ಆಗಿ ಹೋಗಿದ್ದ ಐತ ಪೀಂಚಲುವಿಗೆ ಈ ಬೀಸೆಕಲ್ಲು ಸವಾರಿ ಕಂಡಿದ್ದೇ ಬೇರೊಂದು ಬಗೆಯಾಗಿ. ಸೈಕಲ್ಲಿನ ಟೈರು, ಟ್ಯೂಬುಗಳು ಸಹ ಈ ಸಂದರ್ಭದಲ್ಲಿ ಸಂಕೇತವಾಗಿ ಬಳಕೆಯಾಗಿವೆ. ಬೈಸಿಕಲ್ ಎಂದು ಹೇಳಲು ಬರದ ಅಂಥ ಮಂದಿಯು ತಮಗೆ ಈಗಾಗಲೇ ಪರಿಚಿತವಿದ್ದ ‘ಬೀಸೆಕಲ್ಲು’ ಎಂಬ ಪದವನ್ನೇ ಉಚ್ಚರಿಸಿ, ಸಮಾಧಾನ ಪಟ್ಟುಕೊಳ್ಳುತ್ತಾರೆ. ಈ ಸ್ವಾರಸ್ಯವನ್ನೆಲ್ಲ ಕಾದಂಬರಿಯನ್ನು ಓದಿಯೇ ಸವಿಯಬೇಕು.
ಇನ್ನು ಪೂರ್ಣಚಂದ್ರ ತೇಜಸ್ವಿಯವರ ‘ಕಿರಗೂರಿನ ಗಯ್ಯಾಳಿಗಳು’ ಕಥಾ ಸಂಕಲನದ ಕೊನೆಯ ಕತೆ ‘ರಹಸ್ಯ ವಿಶ್ವ’ದಲ್ಲೂ ಸೈಕಲ್ಲು ಒಮ್ಮೆ ಹೀರೊ ಆಗಿ ಇನ್ನೊಮ್ಮೆ ವಿಲನಾಗಿ ಚಿತ್ರಿತವಾಗಿದೆ. ಸಂಕಲನದ ಮೊದಲನೆಯ ನೀಳ್ಗತೆಯಾದ ಶೀರ್ಷಿಕೆಯ ಸ್ಟೋರಿಯೇ ಅಪಾರ ಜನಮನ್ನಣೆ ಗಳಿಸಿ, ಚಲನಚಿತ್ರವೂ ಆಯಿತು. ತೇಜಸ್ವಿಯವರು ಪುಟ್ಟ ಹುಡುಗನಾಗಿದ್ದಾಗ ರಜೆಗೆ ಅಜ್ಜಿ ಮನೆಗೆ ಬಂದಾಗ ಒಂದಿಬ್ಬರು ದೊಡ್ಡ ಹುಡುಗರು ಸೈಕಲ್ ಕಲಿಸಲು ಹರಸಾಹಸ ಪಟ್ಟ ಕತೆಯಿದು. ಇಳಿಜಾರು ರಸ್ತೆಯಲ್ಲಿ ಪೆಡಲ್ ತುಳಿಯಲು ಬರದೇ ಇದ್ದ ಬಾಲಕ ತೇಜಸ್ವಿಯವರು ಬೃಹತ್ಕಾಯದ ಹೆಂಗಸು ರಂಗಮ್ಮನಿಗೆ ಸೀದಾ ನುಗ್ಗಿಸಿ ಬಿಡುತ್ತಾರೆ. ರಂಗಮ್ಮನ ನಖಶಿಖಾಂತ ಕೋಪ, ಅವಳ ಬೈಗುಳಗಳು, ಹರಿಯಿತೆನ್ನಲಾದ ಸೀರೆಗೆ ಬದಲಿ ಕೇಳಲು ಯಾರ ಮನೆಯ ಹುಡುಗನೆಂದು ಹುಡುಕುತ್ತಾ ಬರಲು ತೇಜಸ್ವಿಯ ಅಜ್ಜಿಯ ಮನೆಯನ್ನು ನೋಡಿದೊಡನೇ ತನ್ನ ಸಿಟ್ಟಿನ ವರಸೆಯನ್ನು ಬದಲಿಸಿ ಬಿಡುತ್ತಾಳೆ. ಬಾಲಕ ತೇಜಸ್ವಿಗಾದ ಅಂಜಿಕೆ, ಅಳುಕು, ಅವಮಾನಗಳೆಲ್ಲಾ ಒಳಗೇ ಉಳಿದು ಬಿಡುತ್ತದೆ. ಪುಟ್ಟ ಹುಡುಗನನ್ನು ಸೈಕಲ್ ಮೇಲೆ ಕೂರಿಸಿ ಇಳಿಜಾರಿನಲ್ಲಿ ಬಿಟ್ಟು ಓಡಿ ಹೋದ ದೊಡ್ಡ ಹುಡುಗರು ವಿಲನುಗಳಾಗುತ್ತಾರೆ. ಈ ಕತೆಯ ಕೊನೆಯ ಸಾಲು ಬದುಕಿನ ಭಾಷ್ಯದಂತಿದೆ: ‘ನಾನು ಸುಮ್ಮನೆ ನಿಂತೇ ಇದ್ದೆ. ಯಾರಿಗೂ ಹೇಳಲಾರದ, ನನಗೆ ನಾನೇ ಹೇಳಿಕೊಳ್ಳಬಹುದಾದ ರಹಸ್ಯ ವಿಶ್ವವೊಂದು ಅಂದಿನಿಂದ ನನ್ನೊಳಗೇ ರೂಪುಗೊಳ್ಳತೊಡಗಿತು.’ ಈ ಕತೆಯನ್ನು ಸಹ ಓದಿಯೇ ಸವಿಯಬೇಕು. ವಿವರಿಸಿದರೆ ಮಹತ್ವವು ಮಸುಕಾಗುವುದು. ನಮ್ಮ ಹಳೆಯ ಕಾಲದ ಚಲನಚಿತ್ರಗಳಲ್ಲೂ ಸೈಕಲ್ಲು ಕಥಾನಾಯಕ ನಾಯಕಿಯರ ಅಚ್ಚುಮೆಚ್ಚಿನ ವಾಹನವಾಗಿ ಕಂಗೊಳಿಸಿತ್ತು. ಅದು ಯಾವಾಗ ಮೋಟಾರು ಬೈಕು ಬಂತೋ ಸೈಕಲ್ಲು ಮಾತ್ರ ಎಲ್ಲ ರಂಗದಲ್ಲೂ ಮೂಲೆಗುಂಪಾಗಿ ಹೋಯಿತು. 1980 ರಲ್ಲಿ ತೆರೆ ಕಂಡ ಕನ್ನಡ ಚಲನಚಿತ್ರ ‘ನಾರದ ವಿಜಯ’ದಲ್ಲಿ ನಾರದ ಪಾತ್ರಧಾರಿ ಅನಂತನಾಗ್ ಭೂಲೋಕಕ್ಕೆ ಇಳಿದು ಸೈಕಲ್ ತುಳಿಯುತ್ತ ‘ಇದು ಎಂಥಾ ಲೋಕವಯ್ಯಾ?’ ಎಂದು ಹಾಡುವ ದೃಶ್ಯವು ಈಗಲೂ ಕಣ್ಣಿಗೆ ಕಟ್ಟಿದಂತಿದೆ.
ಈಗಿನವು ದುಬಾರಿ ಸೈಕಲ್ಲುಗಳು. ಹತ್ತಾರು ಸಾವಿರ ರೂಪಾಯಿಗಳ ಬೆಲೆ. ತೀರಾ ಸಾಮಾನ್ಯರು ತಮ್ಮ ಮಕ್ಕಳಿಗೆ ಕೊಡಿಸದಷ್ಟು. ಚಿತ್ರ ವಿಚಿತ್ರ ಆಕಾರದ, ಬಣ್ಣದ, ದಪ್ಪಟೈರಿನ ಎಂತೆಂಥವೋ ಮಾರುಕಟ್ಟೆಗೆ ಬಂದಿವೆ. ಅನುಕೂಲ ಮತ್ತು ಬಾಳಿಕೆಗಳಿಗಿಂತ ಅಂದಚೆಂದಕ್ಕೆ ಸ್ಟೈಲಿಗೆ ಮನ್ನಣೆ. ನಮ್ಮ ಕಾಲದ ಸೈಕಲ್ಲುಗಳಿಗೆ ಗಟ್ಟಿಮುಟ್ಟಾದ ಲಾಕ್ ಇರುತ್ತಿತ್ತು. ಇಂದಿನ ಪೀಳಿಗೆಯ ಸೈಕಲ್ಲುಗಳು ಬೋಳು ಬಯಲು. ಯಾರೂ ಬೇಕಾದರೂ ಎತ್ತಿಕೊಂಡು ಹೋಗುವಂತೆ ವಿನ್ಯಾಸಗೊಳಿಸಿರುವಂಥವು. ದಿನನಿತ್ಯದ ಬಳಕೆಗೆ, ವಸ್ತು ಪದಾರ್ಥಗಳನ್ನು ಒಯ್ಯಲು ಅನುಕೂಲವಾಗುವಂತೆ ಇವು ತಯಾರಾಗಿಲ್ಲ. ಕೇವಲ ಫ್ಯಾಷನ್ನಿಗೆ, ಕ್ರೇಜಿಗೆ ಸೈಕಲ್ ತುಳಿಯುವ ಮಕ್ಕಳಿಗೆ ಆಕರ್ಷಕವಾಗಿ ಕಾಣುವಂತೆ ವಿನ್ಯಾಸಗೊಂಡಿರುವಂಥವು. ಒಂದು ರೀತಿಯಲ್ಲಿ ಈಗಿನವು ಸೈಕಲ್ಲುಗಳೇ ಅಲ್ಲ, ಅದಕ್ಕೆ ತಕ್ಕನಾಗಿ ಕೆಲವರು ಅದಕ್ಕೆ ಬ್ಯಾಟರಿ ಅಳವಡಿಸಿ, ವಿದ್ಯುದೀಕರಣಗೊಳಿಸಿ ಚಲಾಯಿಸಿದ್ದೂ ದಾಖಲಾಗಿದೆ. ಎಲೆಕ್ಟ್ರಿಕ್ ಸೈಕಲ್ಲುಗಳನ್ನು ಉತ್ಪಾದನೆ ಮಾಡುತ್ತಿರುವ ಕಂಪೆನಿಗಳೂ ಇವೆ. ಏಷ್ಯಾದಲ್ಲೇ ಮೊದಲ ಬಾರಿಗೆ ಹೆರಿಟೇಜ್ ಸಿಟಿ ಎಂದೇ ಖ್ಯಾತವಾದ ನಮ್ಮ ಮೈಸೂರಿನಲ್ಲಿ ಟ್ರಿಣ್ ಟ್ರಿಣ್ ಎಂಬ ಆಧುನಿಕ ತಂತ್ರಜ್ಞಾನ ಅಳವಡಿಕೆ ಮಾಡಲಾದ ಬಾಡಿಗೆ ಸೈಕಲ್ಲುಗಳು ಜನಪ್ರಿಯವಾಗಿದ್ದವು. ಮೋಟಾರು ಬೈಕು ಮತ್ತು ಕಾರುಗಳು ಸಹ ಬಾಡಿಗೆಗೆ (ಸ್ವಯಂ ಚಾಲನೆ-ಸೆಲ್ಫ್ ಡ್ರೈವ್) ದೊರಕುವಂತಾದಾಗ ಇದು ಸಹ ಮೂಲೆಗುಂಪಾಗಿದೆ. ಒಟ್ಟಿನಲ್ಲಿ ಒಂದು ಕಾಲದ ಪಳೆಯುಳಿಕೆಯಾಗಿ ನಾವೀಗ ಸೈಕಲ್ಲುಗಳನ್ನು ನೋಡುವಂತಾಗಿದೆ. ಹಿಂದಿದ್ದ ಅದರ ವೈಭವ ಮಸುಕಾಗಿದೆ ಎಂಬುದಂತೂ ಸುಳ್ಳಲ್ಲ. ತಮ್ಮ ಆರೋಗ್ಯವರ್ಧನೆಗೆ ಮತ್ತು ಬೆಳಗಿನ ಅಂಗಸಾಧನೆಗಾಗಿ ಸಿರಿವಂತರು ಸಹ ಸೈಕಲ್ಲುಗಳನ್ನು ತುಳಿಯುವ ಅಪರೂಪದ ಅಭ್ಯಾಸವನ್ನು ಹೊಂದಿದ್ದಾರೆ. ಇಂಥವರದು ಪರಿಸರಸ್ನೇಹೀ ಮನೋಭಾವ. ಈಗಿನವು ದುಬಾರಿ ಬೆಲೆಯ ಸೈಕಲ್ಲುಗಳು. ಹಾಗಾಗಿ ಇವನ್ನು ಜೋಪಾನ ಮಾಡುವುದು ಸಹ ಅಷ್ಟೇ ತಲೆನೋವು. ಕಳ್ಳತನವಾಗುವ ಅಪಾಯ ಸದಾ ಇದ್ದದ್ದೇ. ಈ ಕಾರಣವಾಗಿಯೂ ಕೆಲವರು ಸೈಕಲ್ಲುಗಳನ್ನು ಹೊಂದುವ ಮತ್ತು ಸವಾರಿ ಮಾಡುವ ಇಚ್ಛೆ ಇರುವವರು ಖರೀದಿ ಮಾಡದೇ ಮೀನಾ ಮೇಷ ಎಣಿಸುವರು. ಸೈಕಲ್ ಕಳ್ಳತನ ತುಂಬ ಸುಲಭ; ಹಾಗಾಗಿ ಜನಸಾಮಾನ್ಯರು ಇದರ ಸಹವಾಸವೇ ಬೇಡವೆಂದೂ ದೂರವಿರಬಹುದು. ಒಟ್ಟಾರೆ ಸೈಕಲ್ಲುಗಳ ಜಮಾನವು ಒಬ್ಬೊಬ್ಬರಿಗೆ ಒಂದೊಂದು ತೆರನಾದ ಜೀವನಾನುಭವವನ್ನು ಉಣಿಸಿದೆಯೆಂದರೆ ಅತ್ಯುಕ್ತಿಯಾಗಲಾರದು.

– ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ



