ಪೌರಾಣಿಕ ಕತೆ

ಕಾವ್ಯ ಭಾಗವತ 69 : ಶ್ರೀ ಕೃಷ್ಣ ಕಥೆ-6

Share Button

ದಶಮ ಸ್ಕಂದ – ಅಧ್ಯಾಯ -1
ಶ್ರೀ ಕೃಷ್ಣ ಕಥೆ -6 ವಸುದೇವ – ದೇವಕಿ-3

ದೇವಕಿ ಗರ್ಭಕೆ ದಶಮಾಸ ತುಂಬಿ
ಭಗವಂತನವತಾರ ಕಾಲ ಸನ್ನಿಹಿತವಾಗಿ
ಪ್ರಕೃತಿಯೆಲ್ಲಡೆ ಸಂಭ್ರಮ

ಎಲ್ಲೆಲ್ಲೂ ಪಕ್ಷಿಗಳ ಕಿಲಕಿಲ ನಿನಾದ
ದುಂಬಿಗಳ ಝೇಂಕಾರ ಕರ್ಣಾನಂದಕರ
ನದಿಗಳ ಶುಭಜಲದಿ ಕೊಳಗಳಲಿ ಕಮಲ ಕಲ್ಹಾರ ಪುಷ್ಪಗಳ
ನೇತ್ರಾನಂದಕ ವಿಹಾರ
ದೇವತೆಗಳಿಂದ ಪುಷ್ಪವೃಷ್ಠಿ

ಈ ಶುಭತಮ ಸನ್ನಿವೇಶದಿ ಪೂರ್ವದಿಕ್ಕಲಿ
ಉದಿಪ ಚಂದ್ರಮನಂತೆ
ಮಹಾವಿಷ್ಣು ದೇವಕಿಯ ಗರ್ಭಾಂಬುದಿಯಲಿ
ಪೂರ್ಣಾವತಾರದಿ ಅವಿರ್ಭವಿಸಿದ ಪೂರ್ಣಚಂದ್ರ ಮಂಡಲದಂತಿರ್ಪ
ಪ್ರಸನ್ನ ಮುಖಪದ್ಮ ಕಮಲದಂತಹ ವಿಶಾಲ ನೇತ್ರಗಳು
ಕಂಠದಲಿ ದಿವ್ಯ ಕೌಸ್ತುಭ ಮಣಿ
ದಿವ್ಯ ಪೀತಾಂಬರಧಾರಿಯ ದಿವ್ಯರೂಪಿಯ ಕಂಡ
ವಸುದೇವ ದೇವಕಿಯರು ಮೂಕವಿಸ್ಮಿತರಾಗಿ
ಅಪಾರ ಭಕ್ತಿಯಿಂದ
ಮಾನಸಿಕ ಪೂಜೆ ಸಂಕಲ್ಪಗಳ ಮಾಡಿ
ದೇವನಿಗೆ ಶಿಶು ಸಹಜ ರೂಪದಿ ಗೋಚರಿಸಿ
ಮುಂದಿನ ಪಥವ ತೋರಬೇಕೆಂದು ಅರುಹೆ
ಪರಮಾತ್ಮ ನಸುನಕ್ಕು ದೇವಕಿಯು ಪೂರ್ವಜನ್ಮದಲಿ
ಬಹುಕಠಿಣ ವ್ರತ ನಿಯಮವನಾಚರಿಸಿ ನನ್ನಿಂದ
ಪಡೆದ ವರದ ಫಲವೇ ನನ್ನ ನಿಜರೂಪ ದರ್ಶನ
ಕಂಸನ ಸಂಹಾರ ಸೂಕ್ತ ಕಾಲದಲಿ ಆಗುವುದು ನಿಶ್ಚಿತ
ಎಂದರುಹಿ ಭಗವಂತ ಅದ್ಭುತ ರೂಪವ ಉಪಸಂಹರಿಸಿ
ಚಿಕ್ಕ ಶಿಶುವಿನ ರೂಪದಿ ಅವತರಿಸಿದ

ನಂತರದಿ ವಸುದೇವ ಭಗವತ್ಪ್ರೇರಣೆಯಿಂದ
ಶಿಶುವನ್ನೆತ್ತಿಕೊಂಡು ಹೊರಟರೆ
ಕಾವಲು ಭಟರು ನಿಶ್ಚೇಷ್ಚಿತರಾಗಿ ಬಿದ್ದಿರೆ
ಸೆರೆಮನೆಯ ಮಹಾದ್ವಾರಗಳು
ತಂತಾನೇ ತೆರೆದು ವಸುದೇವ ನಿರಾತಂಕದಿ
ದ್ವರಕಾಪುರಿಯ ಬೀದಿಯಲಿ ಸಾಗುತ
ಯಮುನಾ ನದಿಯ ದಡ ಸೇರಲು
ನದಿಯ ಮಧ್ಯಭಾಗದಿ ಮಾರ್ಗ ಕಾಣಿಸಿ
ಸುರಿಯುತ್ತಿದ್ದ ಮಳೆಯಲಿ ಶಿಶುವಿಗೆ ಮಳೆ ತಾಗದಂತೆ
ಆದಿ ಶೇಷನು ಹೆಡೆಬಿಚ್ಚಿ ಕೊಡೆಯ ಹಿಡಿದಂತೆ ಮರೆಯ ಮಾಡೆ
ವಸುದೇವ ದಂಡೆಯಲ್ಲಿರ್ಪ ಗೋಕುಲಕ್ಕಾಗಮಿಸೆ
ನಂದಗೋಪನ ಪತ್ನಿ ಯಶೋದೆ ಒಂದು ಸ್ತ್ರೀ ಶಿಶುವಿಗೆ
ಜನ್ಮ ನೀಡಿ ಗಾಢನಿದ್ರೆಯಲಿ ಮಲಗಿರೆ
ಪ್ರಸವ ಗೃಹ ಪ್ರವೇಶಿಸಿದ ವಸುದೇವ
ತಾ ತಂದ ಪುರುಷ ಶಿಶುವ ಯಶೋದೆಯ ಮಗ್ಗುಲಲಿ
ಮಲಗಿಸಿ ಸ್ತ್ರೀ ಶಿಶುವನೆತ್ತಿಕೊಂಡು
ದ್ವಾರಕೆಯ ತಲುಪಿ ಶಿಶುವ ದೇವಕಿಯ ಮಗ್ಗುಲಲಿ
ಮಲಗಿಸಿದೊಡನೆ ವಸುದೇವನ ಕೈಕಾಲುಗಳು ಸಂಕೋಲೆಯಲಿ ಸೇರಿ
ಜಾಗೃತ ಪ್ರಪಂಚಕೆ ಲೇಶಮಾತ್ರವೂ ಗೋಚರವಾಗದಂತೆ
ಲೀಲಾವಿನೋದ ಭಗವತ್‌ ಸಂಕಲ್ಪ ಸಿದ್ಧಿಯಾಯಿತು

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44024

-ಎಂ. ಆರ್.‌ ಆನಂದ, ಮೈಸೂರು

3 Comments on “ಕಾವ್ಯ ಭಾಗವತ 69 : ಶ್ರೀ ಕೃಷ್ಣ ಕಥೆ-6

  1. ಕಾವ್ಯ ಭಾಗವತ..ಓದಿಸಿಕೊಂಡುಹೋಯಿತು… ಸಾರ್

  2. ಶ್ರೀಕೃಷ್ಣನ ಜನನ, ಯಶೋದೆಯ ಮಗ್ಗುಲಲ್ಲಿ ಮಲಗಿದ ಮುದ್ದು ಕಂದ…
    ಸುಂದರ ಸೂಕ್ತ ಚಿತ್ರದೊಂದಿಗೆ ರಂಜಿಸಿದೆ…ಕಾವ್ಯ ಭಾಗವತ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *