ಸಾಗುವ ಹಾದಿಯಲಿ ದೂರದ ಬೇಲಿಯ ಮೇಲಿನ ಹೂ ನಗುತಿದೆ
ಎನ್ನಯ ಬತ್ತದ ತರೇ ತರೇವಾರಿ ಚಿಂತೆಯ ನೋಡಿ
ಮನಸ್ಸಿಟ್ಟು ಎಲ್ಲಾ ಮರೆತು ನಂಬಿ ಪ್ರಾಮಾಣಿಕವಾಗಿ ದುಡಿದೆವು
ಯೌವನ ಶಕ್ತಿ ವೈಯಕ್ತಿಕ ಸಂತೋಷಗಳ ಅವಕಾಶಗಳ ಬಲಿ ಕೊಟ್ಟೆವು
ಸಮಯ ಸಮಯವೆಂದು ಲೆಕ್ಕ ಹಾಕಲಿಲ್ಲ ಲಾಭ ಬಯಸಿಲಿಲ್ಲ
ನಮ್ಮದು ಇದು ಬೇರೆಯದು ಎಂಬ ಭೇದವ ಮಾಡಲಿಲ್ಲ
ಬದಲಾದ ದಿನಮಾನದ ಸ್ಪರ್ಧೆಯಲ್ಲಿ ಹಿಂಜರಿಕೆ ಕಾಣುತ್ತದೆ
ಈಗ ಅದಕೆ ನಾವೇ ಹೊಣೆಗಾರರೆಂಬ ಹಣೆಪಟ್ಟಿ ದೊರೆಯುತ್ತಿದೆ
ಪ್ರಾರಂಭದಲ್ಲಿ ಕೀರ್ತಿಯ ಉತ್ತುಂಗಕ್ಕೆರಲು ನಮ್ಮ ಶ್ರಮವೇ ಕಾರಣ ಎಂಬ ಸುದ್ದಿ ಹರಡಿತ್ತು
ಈಗ ಅದೆಲ್ಲಾ ಮರೆತು ಹೋಗಿ ಇವರೆಲ್ಲಾ ನಿರರ್ಥಕ ಎನ್ನುವ ಮನೋಭಾವ ರೂಪುಗೊಂಡಿತ್ತು
ಸಮರ್ಥನೆ ಯಾರ ಬಳಿ ನೀಡಲಿ ಪೈಸೆ ಪೈಸೆ ಲೆಕ್ಕ ಹಾಕುವರ ಬಳಿಯೇ ? !
ಸಮಜಾಯಿಷಿ ಯಾರಿಗೆ ಕೊಡಲಿ ಮೊದಲೇ ಅಪರಾಧಿ ಎಂದು ತೀರ್ಪು ನೀಡಿದವರಿಗೆಯೇ ? !
ಗಾಳಿ ಸುದ್ದಿಗಳು ಮನವ ಘಾಸಿಗೊಳಿಸಿ ನೋವ ತರುತ್ತಿವೆ
ಸರ್ವಸ್ವವೇ ಅಂದುಕೊಂಡಿದ್ದು ಈಗ ಯಾಕೋ ದೂರವಾಗತೊಡಗಿದೆ
ಅನುಭವಕೆ ಬೆಲೆ ಇಲ್ಲದಂತಾಗಿ ಅಪ್ರಬುದ್ಧತೆಯೇ ವಿಜೃಂಭಿಸುವಂತಾಗಿದೆ
ವಿಶ್ವಾಸ ನಿಷ್ಠೆ ನಂಬಿಕೆಗೆ ಕವಡೆ ಕಿಮ್ಮತ್ತೂ ಕಳೆದು ಹೋಗಿ ಕಪಟತನಕೆ ಮನ್ನಣೆ
ದೊರೆಯುತ್ತಿದೆ
ಯಾರ ಶಾಪದ ಫಲವೂ ಇಲ್ಲ ಅತಿಯಾದ ಒಳ್ಳೆಯತನಕೆ ಸಿಕ್ಕ ಶಿಕ್ಷೆಯೋ
ಕೊನೆಯಲ್ಲಿ ಆದರ ಸಮ್ಮಾನಗಳು ದೊರೆಯದೆ ಪರಿತಪಿಸಿದೆ
ಗಳಿಸಿದ ವಿದ್ಯೆ ಬಳಿಸಿದ ಬುದ್ದಿ ಕೈ ಬಿಡದೆಂಬ ನಂಬಿಕೆ ಆಸರೆಯಾಗಿದೆ
ನಮ್ಮನ್ನು ಉಪಯೋಗಿಸಿಕೊಂಡು ಸಾಮ್ರಾಜ್ಯ ಕಟ್ಟಿದವರು ಕಣ್ಮುಚ್ಚಿ ಕುಳಿತಿರುವುದು ಕಂಡು ದುಃಖ
ಉಮ್ಮಳಿಸಿದೆ
ಏಕಪಕ್ಷೀಯವಾಗಿ ವಿಷಯ ಸಂಗ್ರಹಿಸಿ ತಮ್ಮ ಸುತ್ತ ತಾವೇ ಅಭಿಪ್ರಾಯಗಳ ಕೋಟೆ ಕಟ್ಟಿಕೊಂಡು
ಕಡೆಗಣ್ಣಿನಿಂದ ನೋಡುವವರ ಮನಸ್ಥಿತಿ ಕಂಡು ಮನ ಮಮ್ಮಲ ಮರುಗುತ್ತಿದೆ
ಕೈ ಹಿಡಿದು ನಡೆಸಿದ ಆ ದೇವನೇ ದಾರಿ ತೋರುವುನು
ಮೈದಡವಿ ಧೈರ್ಯ ತುಂಬಿ ಬಿಡದೆ ಕಾಪಾಡುವುನು
ಕರ್ಮದ ಪೊರೆ ಕರಗಿ ಸತ್ಯ ಗೋಚರಿಸುವ ಕಾಲ ಬರುವುದು
ಧೂಳಿನಲಿ ಬಿದ್ದ ವಜ್ರ ಮತ್ತೆ ಪ್ರಜ್ವಲಿಸಿ ಕಂಗೊಳಿಸುವುದು
– ಶರಣಬಸವೇಶ ಕೆ. ಎಂ


ಕವನ ಚೆನ್ನಾಗಿದೆ.. ಸಾರ್ ಸಕಾರಾತ್ಮಕ ಚಿಂತನೆ ಯತ್ತ ನೋಟ..
ಚೆನ್ನಾಗಿದೆ
ನೊಂದ ಮನಕ್ಕೆ ಸಾಂತ್ವನ ನೀಡುತ್ತಾ ಧೈರ್ಯ ತುಂಬುವ
ಸಾಲುಗಳು.