(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮರುದಿನ ಬಾಲಾಜಿಯೇ ಸಾಲಾರ್‌ಜಂಗ್ ಮ್ಯೂಸಿಯಂಗೆ ಕರೆದೊಯ್ದ.
ಸಾಲಾರ್‌ಜಂಗ್ ಮ್ಯೂಸಿಯಂ ಮೂಲತಃ ಸಲಾರ್ ಜಂಗ್ ಕುಟುಂಬದ ಖಾಸಗಿ ಸಂಗ್ರಹಾಲಯವಾಗಿತ್ತು. ಸಲಾರ್ ಜಂಗ್ ಮರಣದ ನಂತರ ರಾಷ್ಟ್ರಕ್ಕೆ ನೀಡಲಾಯಿತು. ಇದು ವಿಶ್ವದ ಅತಿದೊಡ್ಡ ಸಂಗ್ರಹಾಲಯಗಳಲ್ಲಿ ಒಂದಾಗಿದೆ. ಪ್ರಪಂಚದಾದ್ಯಂತದ ಕಲಾಕೃತಿಗಳನ್ನು ಭಾರತೀಯ ಕಂಚು, ಜವಳಿ, ಶಿಲ್ಪಕಲೆ, ದಂತ ಕೆತ್ತನೆಗಳು, ಶಸ್ತ್ರಾಸ್ತ್ರ, ಲೋಹದ ಸಾಮಾನುಗಳನ್ನು ಇಲ್ಲಿ ನೋಡಬಹುದು. ಕೂಲಂಕಷವಾಗಿ ನೋಡಲು ಒಂದು ವಾರವಾದರೂ ಬೇಕು.
ಸಾಲಾರ್‌ಜಂಗ್ ಮ್ಯೂಸಿಯಂ ನೋಡಿಕೊಂಡು ಮನೆಗೆ ಹಿಂದಿರುಗಿದರು. ವಾರುಣಿಗೆ ಕಾಲು ತುಂಬಾ ನೋಯುತ್ತಿತ್ತು. ಅವಳು ಮ್ಯೂಸಿಯಂನಲ್ಲಿ ಓಡಾಡುವಾಗ ಬಿದ್ದು ಮೂಕ ಪೆಟ್ಟಾಗಿತ್ತು.
“ಸಾಯಂಕಾಲ ಎಲ್ಲಿಗೂ ಹೋಗುವುದಿಲ್ಲವಾ?” ರಾಗಿಣಿ ಕೇಳಿದಳು.
“ನಾನಂತೂ ಬರಲ್ಲ” ಎಂದಳು ವರು.
“ಶಾರದಾಗೆ ಜ್ವರ ಬಂದಿದೆ. ನಾನು ಬರಕ್ಕಾಗಲ್ಲ. ನೀನು ಬಾಲಾಜಿ ಜೊತೆ ಹುಸೇನ್ ಸಾಗರಕ್ಕೆ ಹೋಗಿ ಬಾ.”
“ನಾನೊಬ್ಬಳೇ ಹೋಗಲ್ಲ……”
“ಅವನು ಅವರಮ್ಮನ ಪರ‍್ಮಿಷನ್ ತೆಗೆದುಕೊಂಡಿದ್ದಾನೆ. ನೀನು ಹೋಗಿ ಬಾ. ಚಿಂತೆಯಿಲ್ಲ……..”
“ಇಲ್ಲ ಆಂಟಿ……”
“ಅವನು ನಿನನ್ನು ತುಂಬಾ ಇಷ್ಟಪಟ್ಟಿದ್ದಾನೆ. ಬಾಲಾಜಿ ತುಂಬಾ ಒಳ್ಳೆಯ ಹುಡುಗ. ನನ್ನ ಅಕ್ಕ-ಭಾವ ಎಲ್ಲರೂ ತುಂಬಾ ಒಳ್ಳೆಯವರು. ನೀನು ಬಾಲಾಜಿ ಕೈ ಹಿಡಿಯಲು ಪುಣ್ಯ ಮಾಡಿರಬೇಕು……..”
“ಆಂಟಿ ನಮ್ಮನೆ ಪರಿಸ್ಥಿತಿ ಗೊತ್ತಿದ್ದೂ ನೀವು ಹೀಗೆ ಹೇಳ್ತಿದ್ದೀರಾ?”
“ನೆನ್ನೆ ರಾತ್ರೀನೇ ಬಾಲಾಜಿ ಅವರಮ್ಮ ಅಪ್ಪನಿಗೆ ನಿನ್ನ ಬಗ್ಗೆ ಹೇಳಿದ್ದಾನೆ. ಅವರು ರಾತ್ರಿ ನಿನ್ನ ಬಗ್ಗೆ ಕೇಳಿದರು. ನಾನವರಿಗೆ ನಿನ್ನ ಬಗ್ಗೆ ಹೇಳಿದ್ದೇನೆ. ಅವರು ಬಡವರು-ಶ್ರೀಮಂತರು, ಸ್ಟೇಟಸ್, ಜಾತಿ- ಯಾವುದೋ ನೋಡಲ್ಲ. ಒಬ್ಬನೇ ಮಗನ ಮನಸ್ಸು ಗೆದ್ದ ಚೆಲುವೇನ್ನ ಅವರು ಸೊಸೆ ಮಾಡಿಕೊಳ್ಳಲು ಸಿದ್ಧ. ನೀನು ಹೋಗಿ ಬಾ. ನಿಮ್ಮನೆಯವರನ್ನು ಒಪ್ಪಿಸುವ ಜವಾಬ್ಧಾರಿ ನನ್ನದು.”
ರಾಗಿಣಿ ಬಾಲಾಜಿ ಜೊತೆ ಹೊರಟಳು. ಸರಳವಾದ ಕಾಟನ್ ಸೀರೆ ಉಟ್ಟಿದ್ದ ಬೊಗಸೆ ಕಣ್ಣಿನ ಚೆಲುವೆಯನ್ನು ಹೆಮ್ಮೆಯಿಂದ ತನ್ನ ಕಾರ್‌ನಲ್ಲಿ ಬಾಲಾಜಿ ಕರೆದೊಯ್ದ.
“ಹುಸೇನ್ ಸಾಗರದ ವೈಶಿಷ್ಟ್ಯ ಏನು?”
“ಹುಸೇನ್ ಸಾಗರ ಹೃದಯದಾಕಾರದ ಸರೋವರ. ಐತಿಹಾಸಿಕ ಹಿನ್ನಲೆ ಹೊಂದಿದೆ. ಆ ಇತಿಹಾಸ ನಿಮಗೆ ಬೇಡ. ಇದೊಂದು ರೀತಿಯ ಸೌಂದರ್ಯಕ್ಕೆ ಪ್ರಸಿದ್ಧಿ. ಮಧ್ಯದಲ್ಲಿ ನೀವು ಬುದ್ಧನ ಪ್ರತಿಮೆ ನೋಡಬಹುದು. ಬೋಟಿಂಗ್ ಹೋಗೋಣ. ಚೆನ್ನಾಗಿರತ್ತೆ.”
ಅವಳು ಒಪ್ಪಿದಳು. ಬೋಟ್‌ನಲ್ಲಿ ಕುಳಿತಳು. ಅವಳು ಸುತ್ತಲೂ ಕಣ್ಣುಹಾಯಿಸಿದಳು. ಹೈದರಾಬಾದ್ ದೀಪದ ಬೆಳಕಿನಲ್ಲಿ ಝಗಮಗಿಸುತ್ತಿತ್ತು. ಬೀಸುತ್ತಿದ್ದ ತಂಪುಗಾಳಿ, ದೋಣಿ ವಿಹಾರಕ್ಕೆ ಜೋಗುಳ ಹಾಡುವಂತಿತ್ತು.
“ಎಷ್ಟು ಚೆನ್ನಾಗಿದೆ ಅಲ್ವಾ?”
ಅವನು ನಸುನಕ್ಕ. ಬುದ್ಧನ ಭವ್ಯಾಕೃತಿ ನೋಡಿ ಅವಳ ಮನ ಹಿಗ್ಗಿತು. ಭಾರತದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಬುದ್ಧ ಅವಳಿಗಿಷ್ಟ. ವರು ಒಮ್ಮೆ ಅವಳ ಜೊತೆ ವಾದ ಮಾಡಿದ್ದಳು.
“ನಿಮ್ಮ ತಂದೆ ಹೆಂಡತಿ, ಮಕ್ಕಳನ್ನು ಬಿಟ್ಟು ಹೋಗಿದ್ದಕ್ಕೆ ದ್ವೇಷ ಮಾಡ್ತೀಯ. ಬುದ್ಧ ಮಾಡಿದ್ದೇನು?”
“ನಮ್ಮಪ್ಪಂಗೆ ಬುದ್ಧನ್ನ ಹೋಲಿಸಬೇಡ. ನಮ್ಮ ತಂದೆ ಸ್ವಾರ್ಥಿ ಸಂಸಾರದ ಜವಾಬ್ಧಾರಿ ಹೊರಲಾರದೆ ಓಡಿಹೋದರು. ದುಶ್ಚಟಗಳ ದಾಸನಾಗಿ ಸಾಲ ಮಾಡಿ ಪಲಾಯನ ಮಾಡಿದ್ರು. ಆದರೆ ಬುದ್ಧ ರಾಜಯೋಗ ಇದ್ದರು. ಹೊಸಬೆಳಕನ್ನು ಹುಡುಕುತ್ತಾ ಹೊರಟವನು…………”
“ಆದರೆ ಹೆಂಡತಿ, ಮಗು ಬಗ್ಗೆ ಕರ್ತವ್ಯವಿರಲಿಲ್ಲವಾ?”
“ಅದು ಸಾಮಾನ್ಯರಿಗೆ. ಆದರೆ ಅವನ ಗುರಿ ಬೇರೆಯಾಗಿತ್ತು. ತಾನು ಕಂಡ ಹೊಸಬೆಳಕಿನ ಹಣತೆಯಲ್ಲಿ ಉಳಿದವರ ಬಾಳು ಬೆಳಗಿದ. ಮುಕ್ತಿಯ ಮಾರ್ಗ ತೋರಿದ. ಅದಕ್ಕೆ ಅವನ ಹೆಂಡತಿ, ಮಗ ಕೂಡ ಬೌದ್ಧಧರ್ಮ ಅನುಸರಿಸಿದರು.”
“ನಿನ್ನ ಮಾತು ನಿಜ” ಎಂದಿದ್ದಳು ವಾರುಣಿ.
“ರಾಗಿಣಿ ಕನಸು ಕಾಣ್ತಿದ್ದೀರಾ?”
ಅವಳು ಬೆಚ್ಚಿಬಿದ್ದಳು.
“ಏನಾಯ್ತು?”
“ಏನಿಲ್ಲ. ದೋಣಿವಿಹಾರ ತುಂಬಾ… ಚೆನ್ನಾಗಿತ್ತು.”
“ಊಟ ಮಾಡಿಕೊಂಡು ಮನೆಗೆ ಹೋಗೋಣವಾ?”
“ಬೇಡ ಕಾಫಿ ಕುಡಿಯೋಣ.”
ಅವನು ಅವಳನ್ನು ಒಂದು ಹೋಟೆಲ್ ಮುಂದೆ ಇಳಿಸಿದ.
“ಈ ಹೋಟೆಲ್ ಹೆಸರು Rose Garden.”
” I See”
ಅವನು ಅವಳ ಕೈ ಹಿಡಿದು ಒಳಗೆ ಕರೆದೊಯ್ದ. ಒಳಗಡೆ ಕೆಲವು ಟೇಬಲ್‌ಗಳಿದ್ದವು. ಆದರೆ ಟೇಬಲ್‌ಗಳಿಗಿಂತ ಬಣ್ಣಬಣ್ಣದ ಗುಲಾಬಿಗಳಿದ್ದ ಪಾಟ್‌ಗಳೇ ಹೆಚ್ಚಾಗಿದ್ದವು.
ಅವರು ಆ ಕಟ್ಟಡ ದಾಟಿದರು. ಗುಲಾಬಿ ತೋಟ ಅವರನ್ನು ಸ್ವಾಗತಿಸಿತು. ಬಣ್ಣಬಣ್ಣದ ದೀಪಗಳ ಅಲಂಕಾರದಲ್ಲಿ ಗುಲಾಬಿತೋಟ ಕಂಗೊಳಿಸುತ್ತಿತ್ತು. ಮಧ್ಯ ಮಧ್ಯಗಳಲ್ಲಿ ಟೇಬಲ್ ಹಾಕಿ 2 ಕುರ್ಚಿಗಳನ್ನು ಹಾಕಿದ್ದರು.
ಮೂಲೆಯೊಂದರಲ್ಲಿ ಅವರು ಕುಳಿತರು. ಹಿತವಾಗಿ ಬೀಸುತ್ತಿದ್ದ ಗಾಳಿ, ಗುಲಾಬಿಗಳ ಮಧುರವಾದ ವಾಸನೆ, ಮೆಚ್ಚಿದವನ ಸಾನಿಧ್ಯ ಅವಳನ್ನು ಬೇರೆಯ ಲೋಕಕ್ಕೇ ಕರೆದೊಯ್ದವು.
ಅವನು ಕಟ್ಲೆಟ್, ಕಾಫಿಗೆ ಆರ್ಡರ್ ಮಾಡಿದ.
“ಯಾಕೆ ಮೌನವಾಗಿದ್ದೀರಾ?”
“ಏನು ಮಾತಾಡಬೇಕೋ ತಿಳಿಯುತ್ತಿಲ್ಲ…….”
ಅವನು ಪಾಟ್‌ನಲ್ಲಿದ್ದ ಕೆಂಪು ಗುಲಾಬಿ ಕಿತ್ತು ಅವಳ ಮುಂದೆ ಹಿಡಿದು ಕೇಳಿದ. “ರಾಗಿಣಿ…….ಐ ಲವ್ ಯೂ. ನನ್ನ ಮದುವೆಯಾಗ್ತೀರಾ?”
ಅವಳು ಉತ್ತರ ಹೇಳಲಾರದೆ ಚಡಪಡಿಸಿದಳು.
“ನನಗೆ ನಿಮ್ಮ ಬಗ್ಗೆ ಗೊತ್ತು. ಹುಡುಗಿಯರ ಒಡನಾಟ ನನಗೆ ಹೊಸದಲ್ಲ. ನನ್ನ ಶ್ರೀಮಂತಿಕೆ ಬಯಸಿ ಬಹಳ ಜನ ನನ್ನನ್ನು ಮದುವೆಯಾಗುವ ಕನಸು ಕಂಡಿದ್ದರು. ನನ್ನ ಸಹಪಾಠಿಗಳು ತಮ್ಮ ಚೆಲುವಿನಿಂದ ನನ್ನನ್ನು ಆಕರ್ಷಿಸಲು ಪ್ರಯತ್ನಿಸಿದ್ದರು. ಆದರೆ ಅವರು ಯಾರೂ ನನ್ನನ್ನು ಆಕರ್ಷಿಸಲಿಲ್ಲ. ಆದರೆ….ನೀವು……”
ಅವಳು ತಲೆ ಎತ್ತಿ ಅವನತ್ತ ನೋಡಿದಳು.
“ನಿಮ್ಮ ಈ ನೋಟಕ್ಕೆ ನಾನು ಸೋತುಹೋದೆ. ನಿನ್ನನ್ನು ನೋಡುತ್ತಿರುವಂತೆ ನೀನು ನನ್ನವಳು ಅನ್ನಿಸಿತು. ನಿನ್ನ ಜೊತೆ ಜನ್ಮಜನ್ಮದ ಅನುಬಂಧವಿದೆ ಅನ್ನಿಸಿತು. ರಾಗಿಣಿ ನನ್ನ ಮದುವೆಯಾಗ್ತೀಯಾ?”
“ಮದುವೆ ಅನ್ನುವುದು ಹುಡುಗಾಟವಲ್ಲ ನವೀನ್. ಇದು ನಮ್ಮ ಜೀವನದ ಪ್ರಶ್ನೆ. ಯೋಚಿಸಿ ನಿರ್ಧಾರಕ್ಕೆ ಬರಬೇಕು.”
“ನನ್ನ ಹೆಸರು ಯಾರು ಹೇಳಿದರು?”
“ಚಂದ್ರಾ ಆಂಟಿ ಹೇಳಿದರು. ನಿಮ್ಮನೇಲಿ ಯಾವುದೇ ಶುಭಕಾರ್ಯಗಳು ತಿರುಪತಿಯಲ್ಲಿ ನಡೆಯುತ್ತದೆ ಎಂದು ಹೇಳಿದರು. ಆಗ ನಿಮ್ಮ ಹೆಸರಿನ ಪ್ರಸ್ತಾಪ ಬಂತು.”
“ನಾನು ನಿನಗೆ ಮೋಸ ಮಾಡುವ ವ್ಯಕ್ತಿಯ ತರಹ ಕಾಣ್ತೀನಾ?”
“ಇಲ್ಲ. ಆದರೂ ನಮ್ಮ ತಾಯಿಗೆ ಹೇಳದೆ ಹೇಗೆ ಒಪ್ಪಿಗೆಕೊಡಲಿ?”
“ನಾನು ನಿನಗೆ ಒಪ್ಪಿಗೇನಾ?”
“ಹೌದು. ನಾನು ಒಪ್ಪಿದ್ದೇನೆ. ಆದರೆ ಇಬ್ಬರೂ ಆತುರದ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವಾ?” ಅನ್ನುವ ಪ್ರಶ್ನೆ ಕಾಡ್ತಿದೆ. ಒಂದು ತಿಂಗಳ ನಂತರವೂ ನಮ್ಮಲ್ಲಿ ಇದೇ ಭಾವನೆಗಳಿದ್ದರೇ ನಾವು ಒಂದು ನಿರ್ಧಾರಕ್ಕೆ ಬರಬಹುದು.”
“ತೆಲುಗಿನಲ್ಲಿ ಕಮಲಹಾಸನ್‌ದು ಒಂದು ಫಿಲಂ ಬಂದಿತ್ತು.”
“ಮರೋಚರಿತ್ರ…….”
“ಹೌದು. ಒಂದು ವರ್ಷಗಳ ಕಾಲ ಪ್ರೇಮಿಗಳು ಒಬ್ಬರನ್ನೊಬ್ಬರು ಭೇಟಿ ಮಾಡದಿರುವ ಕಥೆ- ದುರಂತ ಕಥೆ.”
“ನಮ್ಮದು ಖಂಡಿತ ದುರಂತಕಥೆ ಅಲ್ಲ. ದಯವಿಟ್ಟು ನನ್ನನ್ನು ಅರ್ಥಮಾಡಿಕೊಳ್ಳಿ.”
ಅವನು ಉತ್ತರಿಸಲಿಲ್ಲ.
ಅಷ್ಟರಲ್ಲಿ ಕಟ್‌ಲೆಟ್, ಕಾಫಿ ಬಂದವು. ಇಬ್ಬರೂ ಏನೂ ಮಾತನಾಡದೆ ತಿಂದರು.
ರಾಗಿಣಿಗೆ ಒಳಗೊಳಗೆ ಅಳಕು. ತನ್ನ ಉತ್ತರದಿಂದ ಅವನಿಗೆ ಬೇಜಾರಾಯಿತೇನೋ ಎನ್ನುವ ಆತಂಕ ಕಾಡಿತು. ವೇಯ್ಟರ್ ಬಿಲ್ಲು ತಂದುಕೊಟ್ಟ. ಬಾಲಾಜಿ ಪೇ ಮಾಡಿ ಎದ್ದು ನಿಂತವನು ಬಾಗಿ ಅವಳ ಮುಂದಲೆಗೆ ತುಟಿ ಒತ್ತಿ ಹೇಳಿದ.
“ಐ ಲವ್ ಯೂ ರಾಗಿಣಿ. ನೀನು ಮದುವೆಗೆ ಒಪ್ಪುತ್ತೀಯೋ ಇಲ್ಲವೋ ನನಗೆ ತಿಳಿಯದು. ಆದರೆ ನಿನ್ನ ಜೊತೆ ಕಳೆದ ಈ ಸಾಯಂಕಾಲ ನನ್ನ ಬಾಳಿನಲ್ಲಿ ಅವಿಸ್ಮರಣೀಯವಾಗಿರುತ್ತದೆ.”
ಅವನ ಮಾತುಗಳು ಕೇಳಿ ಅವಳ ಕಣ್ಣುಗಳು ತುಂಬಿ ಬಂದವು.
ರಾತ್ರಿ ಅವನು ಬರುವುದನ್ನೇ ಕಾಯುತ್ತಿದ್ದ ಚಂದ್ರಾವತಿ, ವಾರುಣಿ ಅವಳು ಆರಾಮವಾಗಿ ಊಟಕ್ಕೆ ಬಂದು ಕುಳಿತಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಮಲಗುವ ಮೊದಲು ಚಂದ್ರಾವತಿ ರೂಮ್‌ನಲ್ಲಿ ತಾನು ಒಂದು ತಿಂಗಳ ಟೈಂ ಕೇಳಿರುವ ವಿಚಾರ ತಿಳಿಸಿದಳು.
“ನಿನ್ನ ನಿರ್ಧಾರ ಸರಿಯಾಗಿದೆ ರಾಗಿಣಿ. ಮದುವೆ ಅನ್ನುವುದಕ್ಕೆ ಜೀವನದಲ್ಲಿ ಮಹತ್ವವಾದ ಸ್ಥಾನವಿದೆ. ಇಂತಹ ವಿಚಾರಗಳಲ್ಲಿ ಯೋಚಿಸಿ ನಿರ್ಧಾರತೆಗೆದುಕೊಳ್ಳುವುದು ಒಳ್ಳೆಯದು.”
ಮರುದಿನ ರಂಜನಿ ಭಟ್ ಅವರನ್ನು ಶಾಪಿಂಗ್‌ಗೆ ಕರೆದೊಯ್ದಳು. ತಾಯಿಗೆ, ಶೋಭಾ ಚಿಕ್ಕಮ್ಮನಿಗೆ 2 ಸೀರೆ ಕೊಂಡಳು. ತಂಗಿಗೆ ಕೃತಕಾಭರಣಗಳು, ಶಾರಣ್ಯಳಿಗೆ, ಅಲೋಕನಿಗೆ ಡ್ರೆಸ್‌ಗಳು, ಶಂಕರನಿಗೆ ಬ್ಯಾಗ್, ತಂದೆಗೊಂದು ಸ್ವೆಟರ್ ಕೊಂಡಳು. ರಾಗಿಣಿ ಶಾಪಿಂಗ್ ಮಾಡುವುದರಲ್ಲಿ ಆಸಕ್ತಿ ತೋರಲಿಲ್ಲ. ಚಂದ್ರಾವತಿ ಚೂಡಿದಾರ್ ಕೊಂಡರು. 4 ಕಾಟನ್ ಸೀರೆ ಕೊಂಡರು. ರಂಜನಿ 2 ಕಾಟನ್ ಸೀರೆ, 5ಸೆಟ್ ಚೂಡಿದಾರ್ ಕೊಂಡಳು.
“ಊಟ ಮಾಡಿ ರೆಸ್ಟ್ ಮಾಡಿ. 5 ಗಂಟೆಗೆ ಹೊರಡಬೇಕಲ್ವಾ?”
“ಅಕ್ಕಾ ಯಾವ ಡ್ರೈವರ್ ಬರ್ತಾರೆ? “
“ಬಾಬೂನ್ನ ಕಳಿಸ್ತೇನೆ. ತುಂಬಾ ನಂಬಿಗಸ್ಥ.”
ಹಿಂದಿನ ದಿನವೇ ಲಗೇಜ್ ಪ್ಯಾಕ್ ಮಾಡಿದ್ದರು. ಊಟದ ನಂತರ 4 ಗಂಟೆಯವರೆಗೂ ಮಲಗಿದರು. ನಂತರ ಎದ್ದು ರೆಡಿಯಾಗಿ ಹಾಲ್‌ಗೆ ಬಂದರು. ಸಂಧ್ಯಾ ಅಕ್ಕನಿಗೆ 2 ಸೀರೆ, ಉಳಿದ ಮೂವರಿಗೂ ಚೂಡಿದಾರ್ ಕೊಟ್ಟರು.
“ಆಂಟಿ ಇದೆಲ್ಲಾ ಯಾಕೆ? ಕುಡಿದ ನೀರು ಅಲ್ಲಾಡದ ಹಾಗೆ ನೋಡಿಕೊಂಡಿದ್ದೀರ. ‘ಉಂಡೂಹೋದ ಕೊಂಡೂ ಹೋದ’ ಅಂತಾರಲ್ಲ ಹಾಗಾಯಿತು” ವಾರುಣಿ ಹೇಳಿದಳು.
“ನೀವೆಲ್ಲಾ ಅಪರೂಪಕ್ಕೆ ಬಂದಿರುವಾಗ ಇಷ್ಟೂ ಮಾಡದಿದ್ದರೆ ಹೇಗೆ?”
ಎಲ್ಲರೂ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡ್ರಾ? ಯಾವುದೂ ಬಿಟ್ಟಿಲ್ಲ ತಾನೆ?” ರಂಜನಿ ಕೇಳಿದರು.
ರಾಗಿಣಿ ಅತ್ತ ಇತ್ತ ನೋಡಿ “ಅಯ್ಯೋ ನನ್ನ ಮೊಬೈಲ್ ಮರೆತಿದ್ದೇನೆ” ಎನ್ನುತ್ತಾ ತಾವಿದ್ದ ರೂಮ್‌ಗೆ ಓಡಿದಳು.
ಕೊಂಚ ಹೊತ್ತಿನಲ್ಲೇ ಹೊರಗೆ ಬಂದ ಅವಳ ಕೈಯಲ್ಲಿ ಮೊಬೈಲ್ ಇತ್ತು. ಅವಳ ಮುಖದಲ್ಲಿ ನಗೆ ಅರಳಿತ್ತು. ಆ ವೇಳೆಗೆ ಎಲ್ಲರೂ ಕಾರ್‌ನಲ್ಲಿ ಕುಳಿತಿದ್ದರು. ಅವರನ್ನು ಬೀಳ್ಕೊಡಲು ಬಾಲಾಜಿ ಹೊರಗೆ ಬಂದ.
“ಚಿಕ್ಕಮ್ಮ ಭಾನುವಾರದವರೆಗೂ ಇರಬಹುದಿತ್ತು……..”
“ಇನ್ನೊಂದು ಸಲ ಬರ‍್ತೀವಿ ಬಿಡು. ನೀನು ಮೈಸೂರಿಗೆ ಬರಲ್ವಾ?”
“ಮೈಸೂರು ನನ್ನ ಪ್ರೀತಿಯ ಊರಲ್ಲವಾ? ಆಗಾಗ್ಗೆ ಬರ‍್ತೀನಿ. ನೀವು ಬರ ಮಾಡಿಕೊಳ್ಳಬೇಕಷ್ಟೆ.”
“ಆ ದಿನ ಬೇಗ ಬರಲೀಂತ ಹಾರೈಸ್ತೇನೆ” ಎಂದರು ಚಂದ್ರಾವತಿ ಕಾರು ಹೊರಟಿತು.
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=43952
(ಮುಂದುವರಿಯುವುದು)

–ಸಿ.ಎನ್. ಮುಕ್ತಾ, ಮೈಸೂರು


ಕನಸೊಂದು ಶುರುವಾಗಿದೆ ಧಾರಾವಾಹಿಯಲ್ಲಿ ಕನಸಿನ ಚಿಗುರು ಪ್ರಾರಂಭ ವಾಗಿದೆ…ಮುಂದೆ…ಕುತೂಹಲ ವಿದೆ.. ನೋಡಬೇಕು…
ಸುರುವಾದ ಕನಸಿಗೆ ಸೊಗಸಾದ ಬಣ್ಣ ಹಚ್ಚುತ್ತಿರುವ ಮುಕ್ತಾ ಮೇಡಂ ಅವರಿಗೆ ಧನ್ಯವಾದಗಳು.
ಪ್ರೀತಿಯ ಹೊಸ ಬಣ್ಣ ಮೂಡಲು ಶುರುವಾಗಿದೆ ಕಾದಂಬರಿಯಲ್ಲಿ.