ರಂಗೇಗೌಡರ ಮನೆಯ ಕೆಲಸದ ಆಳು ಮುನಿಯ ಶತಪಥ ತಿರುಗುತ್ತಾ ಘಳಿಗೆಗೊಮ್ಮೆ ಬಾಗಿಲೆಡೆಗೆ ನೋಡುತ್ತಿದ್ದ. ಅವನ ಚಡಪಡಿಕೆಯನ್ನು ಗಮನಿಸಿದ ಅಡುಗೆ ಮಾಡುವ ಗೌರಮ್ಮ “ಇದೇನಾ ಮುನಿಯಪ್ಪ ಎಂದೂ ಇಲ್ಲದ್ದು ಇವತ್ತು ಹೊಸ ವರಸೆ? ಮನೆಗೆ ಯಾರಾದರೂ ಬಂದಿದ್ದಾರಂತೇನು? ಕೆಂಚಿ ಏನಾದ್ರೂ ಫೋನ್ ಹಚ್ಚಿದ್ದಳೇನು?” ಎಂದು ಕೇಳಿದಳು.
“ಹ್ಹೆ..ಹ್ಹೆ ಫೋನ್ ಹಚ್ಚಲಿಕ್ಕೇ ಇವತ್ತು ನಾನದನ್ನು ತಂದೇಯಿಲ್ಲ. ಮನೇಲೆ ಬಿಟ್ಟುಬಂದಿವ್ನಿ. ತಿರುಗಿ ಹೊಳ್ಳಿ ಹೋಗೋರು ಯಾರು ಅಂತ ಬಂದೆ. ಅದಲ್ಲ ನನ್ನ ಸಮಸ್ಯೆ, ನಿಂಗೆ ಗೊತ್ತಿಲ್ಲದ್ದೇನಲ್ಲಾ. ಒಂದೆರಡು ದಿವಸಗಳಿಂದೆ ಮನೆಗೆ ಸುಣ್ಣಬಣ್ಣ ಮಾಡಿದ್ದು, ಸಾಮಾನು ಸರಂಜಾಮುಗಳನ್ನು ಆಯಾಯ ಜಾಗದಾಗೆ ಜೋಡಿಸಬೇಕು. ಎಲ್ಲ ಕೆಂಚಿ ಒಬ್ಬಳ ಮೇಲೇ ಬಿದ್ದೈತೆ. ಒಸಿ ಬೇಗ ಹೋಗಾನ ಅಂತ ಬಂದ್ರೆ ಇಲ್ಲಿ ಅವ್ವಾವರು ಎಲ್ಲೋ ಹೊರಗೆ ಹೋಗಿ ಬರ‍್ತೀನಿ, ಮನೇಲಿ ಗೌರಮ್ಮ ಒಬ್ಬಳೇ ಆಗ್ತಾಳೆ, ನಾನು ಬರೋಗಂಟ ನೀನಿಲ್ಲೆ ಇರು ಅಂದ್ರು ಗೌಡ್ರು ಬೇರೆ ಊರಲಿಲ್ಲ ಎಂದು ಹೊಂಟೇ ಹೋದ್ರು. ಅದಕ್ಕೇ ಕಾಯ್ತಾ ಇದ್ದೀನಿ” ಎಂದು ಉತ್ತರಿಸುತ್ತ ಬಾಗಿಲೆಡೆಗೆ ಮತ್ತೊಮ್ಮೆ ಕಣ್ಣು ಹಾಯಿಸಿದ.
ಮುನಿಯ ಹೇಳಿದ್ದನ್ನು ಕೇಳಿದ ಗೌರಮ್ಮ ಹೂಂ..ಸುಮಾರು ವರ್ಷಗಳಿಂದ ಒಲೆಮುಂದೆ ಬೆಂಕೀಲಿ ಬೇಯುತ್ತ ಎಲ್ಲರಿಗೂ ಟೇಮಿಗೆ ಸರಿಯಾಗಿ ಕೂಳು ಬೇಯಿಸಿಕೊಂಡಿದ್ದೀನಿ. ಹೋಗೋರು ಬರೋರು ಲೆಕ್ಕಾನೇ ಇಲ್ಲ. ಇತ್ತೀಚೆಗಂತೂ ಕೂಲಿನಾಲಿ ಮಾಡೋರ ಮನೆಗೂ ಗ್ಯಾಸ್ ಬಂದದೆ. ಆದರೆ ಈಪಾಟಿ ಕಾರೊಬಾರು ಮಾಡೋ ಇವರ ಮನೆಗೆ ತಂದಿಲ್ಲ ಅಂತೇನಿಲ್ಲ. ಹೆಸರಿಗೊಂದಿದೆ. ತೀರಾ ಅಪರೂಪಕ್ಕೆ ಮನೆಯವರು ಬಳಸ್ತಾರೆ. ನಾನು ಅದಕ್ಕೆ ಒಂದು ಕಿತಾನೂ ಕೈ ಹಚ್ಚಿಲ್ಲ. ಸೌದೆ ಒಲೆ. ಇದ್ದಿಲು ಒಲೇನೇ ಗತಿ. ವರ್ಷದ ಮೂನ್ನೂರೈವತ್ತು ದಿನಾನೂ ಸೌದೇನೇ. ಇನ್ನೂ ಇದ್ದಂಗೆ ತಂದು ಅಚೆಮನೇಲಿ ಒಟ್ಟುತ್ತಾರೆ. ಇದರಲ್ಲಿ ಮಾಡಿದ ಅಡುಗೇನೇ ರುಚಿಯಂತೆ. ಪುಣ್ಯಕ್ಕೆ ನನಗೆ ಸಹಾಯ ಮಾಡಕ್ಕೆ ನಂಜಿ ಅವಳೇ. ಗೌಡ್ತೀನೂ ಒಮ್ಮೊಮ್ಮೆ ಕೈಹಾಕ್ತಾರೆ. ಎಲ್ಲ ಸರಿ ಈ ಅವ್ವಂಗೆ ನನ್ನ ಮೇಲೆ ನಂಬಿಕೇನೇ ಇಲ್ಲ. ಎಲ್ಲಿಗಾದ್ರೂ ಹೊರಗೆ ಹೋದ್ರೆ ಬರೋವರ್ಗೂ ಈ ನಿಯತ್ತಿನ ನಾಯೀನ ಬಿಟ್ಟುಹೋಗ್ತಾರೆ. ನಾನೇನು ಈ ಮನೇದೇನಾದ್ರೂ ಹೊತ್ತುಕೊಂಡೋಗಿಬಿಡ್ತೀನಾ? ಹುಂ.. ಹಾಗೇನಾದರೂ ಮಾಡಿದ್ರೆ ನನ್ನ ಹಳ್ಳ ನಾನೇ ತೋಡಿಕೊಂಡಂತೆ. ಎರಡು ಮಕ್ಕಳನ್ನು ಕೈಗಿತ್ತು ನನ್ನ ಗಂಡ ಕಣ್ಣುಮುಚ್ಚಿಕೊಂಡ. ತಾಟಗಿತ್ತಿಯಂತ ಅತ್ತೆಯೊಂದಿಗೆ ಬಾಳಕ್ಕಾಗದೆ ತಾಯಿ ಮನೆಗೆ ಬಂದೆ. ಪಾಪ ತುಟಿಬಿಚ್ಚದೆ ಮಡಿಲಲ್ಲಿ ಹಾಕ್ಕೊಂಡ್ಲು ಹೆತ್ತವ್ವ. ಅವಳೂ ಕೂಲಿನಾಲಿ ಮಡೋಳೇ. ಅಪ್ಪ.. ಅವನೂ ಕೂತು ಉಣ್ಣೋನಲ್ಲ. ಆದರೆ ಆರುಕಾಸು ದುಡುದ್ರೆ ಒಂಬತ್ತುಕಾಸು ಕರ್ಚುಮಾಡೋ ಬುದ್ದಿ ಅವಂದು. ಬಾಟ್ಲಿ ನ್ಯಾಸ್ತ ಬೇರೆ, ಕತೆ ನಡೀಬೇಕಲ್ಲ, ಕೂಲಿ ಕೆಲಸಕ್ಕೆ ನಾನು ಲಾಯಕ್ಕಿಲ್ಲ ಅಂತ ನನ್ನನ್ನು ಗೌಡರ ಮನೆಗೆ ಸೇರಿಸಿದ್ಲು. ಈ ಪುಣ್ಯಾತ್ಮರು ನಂಗೂ ನನ್ನ ಹೈಕಳಿಗೂ ಇರೋಕೆ ಒಂದು ಜಾಗ ಕೊಟ್ಟವ್ರೆ. ಮಕ್ಕಳು ನಾಲ್ಕು ಅಕ್ಷರ ಕಲ್ತು ಎಲ್ಲಾದರೂ ನೌಕರಿ ಹಿಡೀಲೀಂತ ಜೀವ ಹಿಡಕೊಂಡು ಜೀತ ಮಾಡ್ತಿದ್ದೀನಿ. ಅಂತಾದ್ರಲ್ಲಿ ನನಗ್ಯಾಕೆ ಇಲ್ಲದ ಉಸಾಬರಿ. ದೊಡ್ಡೋರ ಸಮಾಚಾರ ಏನಾರಾ ಮಾಡಿಕೊಳ್ಳಲಿ ಅಂತ ತನ್ನಷ್ಟಕ್ಕೆ ತಾನೆ ನಿರ್ಧಾರ ಮಾಡಿಕೊಂಡಳು. ಬೆಳಗ್ಗೆ ಒಗೆದು ಹರವಿದ್ದ ಬಟ್ಟೆಗಳನ್ನು ಎತ್ತಿಕೊಂಡು ಬಂದು ಅವುಗಳನ್ನು ಮಡಿಸಿಡುವ ಕೆಲಸದಲ್ಲಿ ತೊಡಗಿಕೊಂಡಳು.
ಈ ಅವ್ವ ಎತ್ತಲಾಗಿ ಹೋದ್ರೋ ಕಾಣೆನಲ್ಲವ್ವೀ ಮನೆಯ ಯಜಮಾನಿ ಹೊರಗೆ ಕಾಲು ತೆಗೆಯೋದೇ ಕಾಯುತ್ತಿರುತ್ತಾರೆ ಆ ಮನೆಯ ಗೌಡ್ರ ತಮ್ಮನ ಹೆಂಡ್ತಿ. ಹಿರೀಕರ ಮುಂದೇನೇ ಪಾಲುಮಾಡಿ ಕೊಟ್ಟಿದ್ದರೂ ಅವಮ್ಮಂಗೆ ಏನೋ ಗುಮಾನಿ. ಗೌರಮ್ಮನ ನ್ಯಾಸ್ತ ಮಾಡವ್ರೆ. ಅವಳನ್ನು ಮತಾಡಿಸೋ ನೆಪದಲ್ಲಿ ಮೆಲ್ಲಗೆ ಮನೆಹೊಕ್ಕು ಒಂದು ಕಡೆಯಿಂದ ಜಾಲಾಡಿಬಿಡ್ತಾರೆ. ಎಷ್ಟಿದ್ರೂ ಆಸೆ ಈ ದೊಡ್ಡೋರಿಗೆ. ಅಮಾಯಕ ಹೆಣ್ಣುಮಗಳು ಗೌರಮ್ಮ ಏನೇನೂ ತಿಳಿಯಾಕಿಲ್ಲ. ಅದನ್ನು ಕಂಡೇ ಅವ್ವಾವ್ರು ನನ್ನ ಕಾವಲಿಗೆ ಬಿಟ್ಟು ಹೋಗ್ತಾರೆ. ನಾನಿತ್ತೂ ಅಂದ್ರೆ ಆವಮ್ಮ ಈ ಕಡೆ ತಲೆಹಾಕಂಗಿಲ್ಲ. ಎಲ್ಲ ಸರಿಯೇ ಆದರಿವತ್ತು ನಾನು ಬೇಗನೇ ಮನೆಗೋಗ್ಬೇಕಾಗಿತ್ತು. ಸುಣ್ಣ ತುಂಬಿಸೋ ಕೆಲಸಕ್ಕಾಗಿ ಮನೆ ಸಾಮಾನೆಲ್ಲ ಹರಡಿ ಗುಡ್ಡೆ ಹಾಕಿದ್ದೆ. ಕೆಂಚಿ ಒಬ್ಬಳೇ. ನಾನೂ ಕೈಹಾಕಿ ಮುಗಿಸೋಣಾಂದ್ರೆ ಇಲ್ಲಿ ಸಿಕ್ಕುಬಿದ್ದಿದ್ದಿನಿ. ಹೀಗೇ ಆಲೋಚನೆಯಲ್ಲಿ ಇದ್ದ ಮುನಿಯ.
ಅಷ್ಟೊತ್ತಿಗೆ “ಮುನಿಯಾ ತಡವಾಯ್ತೇನೋ?” ಎಂಬ ಮಾತಿನಿಂದ ಎಚ್ಚೆತ್ತ. “ತಮಗೇ ಗೊತ್ತಲ್ಲ ನಮ್ಮ ಮನೆಕಡೆ ಕೆಲಸ, ಅದಕ್ಕೆ ಒಸಿ ಚಡಪಡಿಕೆ ಅಷ್ಟೇ. ಗೌರಮ್ಮಾ.. ಅವ್ವಾವ್ರು ಬಂದಾಯ್ತು ನಾನಿನ್ನು ಬರ‍್ಲಾ” ಎಂದವನೇ ಅವಳ ಉತ್ತರಕ್ಕೂ ಕಾಯದೆ ದಾಪಗಲಾಕುತ್ತ ಮನೆಯ ಕಡೆ ಹೊರಟ.
ದಾರಿಯುದ್ದಕ್ಕೂ ಅವನ ಬದುಕಿನದ್ದೇ ಲಹರಿ. ಬೆಂಗಳೂರಿನ ಸಮೀಪದ ಕಡಬಗೆರೆಯಲ್ಲಿನ ಹಿರಿಯ ಕುಳ ಚಂದಪ್ಪಗೌಡರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬರಮಜ್ಜನಿಗೆ ಸಿಕ್ಕ ಮಗುವೇ ಮುನಿಯ. ಅವನನ್ನು ಯಾರು ಎಲ್ಲಿಂದ ಕರೆದುಕೊಂಡು ಬಂದು ಬರಮನ ಮನೆ ಮುಂದೆ ಬಿಟ್ಟು ಹೋದರು ಎಂಬುದು ನಿಗೂಢವೇ. ಏಕೆಂದರೆ ಅವನಿಗೆ ಹಿಂದೆಮುಂದೆ ಅವನವರೆಂಬುವರು ಯಾರೂ ಇರಲಿಲ್ಲ. ಅವನು ಎಲ್ಲಿದ್ದ ಹೇಗೆ ಅಲ್ಲಿಗೆ ಬಂದ ಅದೂ ನಿಗೂಢವೇ. ಆದರೆ ಆ ಮಗುವನ್ನು ಮಾತ್ರ ತಂದೆ, ತಾಯಿ ಎರಡೂ ಆಗಿ ಸಾಕಿ ಪೋಷಿಸಿದ. ಅ ಊರಿನಲ್ಲೇ ಇದ್ದ ಶಾಲೆಗೂ ಸೇರಿಸಿ ನಾಲ್ಕಕ್ಷರ ಕಲಿಸಿದ. ಬರಮನ ತರುವಾಯ ಗೌಡರ ಮನೆ ಸೇರಿದ್ದ ಮುನಿಯ ಬರಮಜ್ಜನಿದ್ದ ಮನೆಯನ್ನೆ ಆಗಾಗ ದುರಸ್ತಿ ಮಾಡಿಕೊಂಡು ಅದರಲ್ಲೆ ಬದುಕು ನಡೆಸುತ್ತಿದ್ದ. ಅಕ್ಷರ ಬಲ್ಲವನಾಗಿದ್ದ ಮುನಿಯನನ್ನು ಗೌಡರು ತಮ್ಮ ವ್ಯವಹಾರದ ಲೆಕ್ಕಾಚಾರ ನೋಡಿಕೊಳ್ಳಲು ಬಳಸಿಕೊಂಡಿದ್ದರು. ತೋಟದ ಕೆಲಸಕ್ಕೆಂದು ಸಂಬಂಧಿಗಳೊಂದಿಗೆ ಬರುತ್ತಿದ್ದ ಕೆಂಚಿ ಎಂಬ ಹುಡುಗಿಯನ್ನು ಕೊಟ್ಟು ಗೌಡರೇ ಅವನಿಗೆ ಮದುವೆ ಮಾಡಿಸಿ ಸಂಸಾರವಂದಿಗನಾಗಿ ಮಾಡಿದ್ದರು. ದಂಪತಿಗಳಿಬ್ಬರೂ ಅವರ ಮನೆಯ ಕೆಲಸ ಮಾಡಿಕೊಂಡು ನೆಮ್ಮದಿಯಿಂದಿದ್ದರು. ಅವರಿಬ್ಬರ ಮಗಳೇ ಬಂಗಾರಿ.
ಬಂಗಾರಿ ಹೆಸರಿಗೆ ತಕ್ಕಂತೆ ಚಂದವಿದ್ದಳು. ತಕ್ಕಮಟ್ಟಿಗೆ ಓದುಬರಹವನ್ನು ಕಲಿತಳು. ಮನೆಗೆಲಸದಲ್ಲೂ ಸೈ ಎನ್ನಿಸಿಕೊಂಡಳು. ಬೆಂಗಳೂರಿನ ಕಂಟ್ರಾಕ್ಟರ್ ಕೈಕೆಳಗೆ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಬಸವನ ಮಡದಿಯಾಗಿ ಸಂಸಾರದ ನೊಗ ಹೊತ್ತಳು. ಮೂರುವರ್ಷದ ನಂತರ ಆಕೆ ತಾಯಿಯಾಗುವ ಲಕ್ಷಣ ಕಂಡುಬಂದಿತು. ಅವಳನ್ನು ಬಾಣಂತನಕ್ಕೆಂದು ತಾಯಿ ಮನೆಗೆ ಕರೆದುಕೊಂಡು ಬರುವ ಸಲುವಾಗಿ ಮುನಿಯ, ಕೆಂಚಿ ದಂಪತಿಗಳಿಬ್ಬರೂ ತಾವಿದ್ದ ಮನೆಯ ದೂಳು ದುಂಬು ತೆಗೆದು ಸುಣ್ಣಬಣ್ಣ ಬಳಿಯುವ ಕೆಲಸಕ್ಕೆ ಕೈಹಾಕಿದ್ದರು. ತಾವಿಬ್ಬರೂ ತಾತ, ಅಜ್ಜಿಯಾಗುವ ಕನಸುಕಾಣುತ್ತ ಆದಷ್ಟು ಬೇಗ ಕೆಲಸಗಳನ್ನು ಮುಗಿಸಬೇಕೆಂದು ತನ್ನ ಮನೆಯ ತಿರುವಿಗೆ ಬಂದ. ಅಲ್ಲಿ ಅವನಿಗೆ ಅಚ್ಚರಿಯೊಂದು ಕಾದಿತ್ತು. ಮನೆಯ ಮುಂಬಾಗಿಲಲ್ಲೇ ನಿಂತಿದ್ದಳು ಕೆಂಚಿ. ಇದೇನು ! ಎಂದೂ ಹೀಗೆ ಬಾಗಿಲು ತೆರೆದು ನಿಂತವಳಲ್ಲ ಎಂದುಕೊಂಡ. ಮರುಕ್ಷಣವೇ ಥೂ..ನನ್ನ ಮರೆವಿಗಿಷ್ಟು. ದಿನವೂ ಗೌಡರ ಮನೆಯ ಕೆಲಸ ಮುಗಿಸಿ ಇಬ್ಬರೂ ಒಟ್ಟಿಗೆ ಬರುತ್ತಿದ್ದೆವಲ್ಲವೇ, ಇವತ್ತು ಮನೆಕೆಲಸಕ್ಕಾಗಿ ಕೆಂಚಿ ರಜಾ ತೊಗೊಂಡವ್ಲೇ. ನಾನೂ ಕೇಳಿದ್ದೆ ಆದರೆ ಗೌಡರು ಊರಿನಲ್ಲಿಲ್ಲ ಎಂದು ನೆಪ ಹೆಳಿ ಅವ್ವ ಬಂದುಹೋಗು ಅಂದುಬಿಟ್ಟರು. ಆದರೆ ಈಟೊತ್ತು ಮಾಡಿಬಿಟ್ಟರು. ಕಾದುಕಾದು ಸಾಕಾಯ್ತು ಎಂದು ಬೀಸುಕಾಲಾಕುತ್ತ ಮನೆಯ ಬಾಗಿಲಿಗೆ ತಲುಪಿದ.
ಮುನಿಯನನ್ನು ಕಂಡವಳೇ ಕೆಂಚಿ ಅವನ ಕೈಹಿಡಿದು ಒಳಗೆಳೆದುಕೊಂಡು ಬಾಗಿಲು ಚಿಲಕ ಹಾಕಿದಳು. ಗಾಭರಿಯಿಂದ ಮುನಿಯ “ಇದೇನಾ ಕೆಂಚಿ ಎನಾಯಿತು? ಏಕಿಷ್ಟು ಗಾಭರಿಯಾಗಿದ್ದೀ? ಬಂಗಾರಿಯಿಂದ ಫೋನೇನಾದರು ಬಂದಿತ್ತಾ? ಹುಷಾರಾಗಿದ್ದಾಳೆ ತಾನೇ?” ಎಂದು ಪ್ರಶ್ನಿಸಿದ.
“ಅಂತದ್ದೇನೂ ಇಲ್ಲ” ಎಂದಳು ಕೆಂಚಿ.
ಏನೂ ಅರ್ಥವಾಗದ ಮುನಿಯ ಸುತ್ತಲು ಕಣ್ಣಾಡಿಸಿದ. ಬೆಳಗ್ಗೆ ತಾನು ಮನೆ ಬಿಟ್ಟಾಗ ಅವ್ಯವಸ್ಥೆಯ ಆಗರವಾಗಿದ್ದ ಮನೆ ಈಗ ಸಂಪೂರ್ಣವಾಗಿ ಬದಲಾಗಿದೆ. ಒಪ್ಪ ಒರಣನೋಡಿ “ಅಲ್ಲಾ ಕೆಂಚಿ, ಸ್ವಲ್ಪ ನಾನು ಬರೋವರೆಗೆ ತಡೀಬಾರದಾಗಿತ್ತಾ, ಎಲ್ಲ ಒಬ್ಬಳೇ ಮೈಮೇಲೆ ಬಂದವಳಂತೆ ಮಾಡಿದ್ದೀ.” ಎಂದ ಮುನಿಯ.
“ಏ..ಅದಕ್ಕಲ್ಲಾ..ನಾನೇಳಿದ್ದೇನು, ನೀ ಮಾಡಿರೋದೇನು?” ಎಂದು ಕೇಳಿದಳು ಕೆಂಚಿ.
“ಏನು ಮಾಡಿದೆ ಕೆಂಚಿ? ಅವ್ವಾವರು ಎಲ್ಲೋ ಹೊರಗೋಗಿದ್ರು. ಅವರು ಬರೋತನಕ ಇರು ಅಂದ್ರು. ಅದಕ್ಕೆ ಕೊಂಚ ತಡವಾಯ್ತು. ಅದಕ್ಕೆ ದಯ್ಯ ಮೆಟ್ಟುಕೊಂಡವಳಂತೆ ಮಾಡಿದ್ದೀ. ಹೀಗೆ ಕೇಳಿದ್ರೆ ನಾನೇನು ಮಾಡಲಿ” ಎಂದು ವಿವರಣೆ ನೀಡಿದ ಮುನಿಯ.
“ಅಯ್ಯೊ ಶಿವನೇ, ನಾನು ಕೇಳಿದ್ದು ಅದಲ್ಲ ತಡಿ ವಸಿ ಬಂದೆ” ಎನ್ನುತ್ತ ಒಳಗಡೆಗೆ ಹೋಗಿ ಒಂದು ಬಟ್ಟೆಗಂಟು ತಂದು ಮುನಿಯನ ಮುಂದಿಟ್ಟಳು. ಕಿಟಕಿಬಾಗಿಲುಗಳನ್ನು ಮುಚ್ಚಿ ಆ ಬಟ್ಟೆ ಗಂಟನ್ನು ಬಿಚ್ಚಿ ಅದರೊಳಗಿದ್ದ ನೋಟುಗಳ ಕಡೆ ತೋರಿಸುತ್ತ “ಇದರ ಬಗ್ಗೆ ನಾನು ಕೇಳಿದ್ದು. ಮಗಳ ಬಾಣಂತನಕ್ಕೆ ಅಂತ ಅವ್ವನ ಹತ್ತಿರ ಸ್ವಲ್ಪ ಮುಂಗಡ ಕೇಳು ಅಂದರೆ ನೀನು ಈ ಪಾಟಿ ದುಡ್ಡು ಕೇಳಿದ್ದೀಯಲ್ಲ. ಇದನ್ನು ನಾವೆಂಗೆ ತೀರಿಸೋದು?” ಎಂದು ಪ್ರಶ್ನಿಸಿದಳು. “ನಿನಗೆ ಮೈಮೇಲೆ ಗ್ಯಾನ ಐತಾಂತ ಕೇಳಿದೆ. ಅವ್ವಾವ್ರೇ ಮನೆಗೆ ಬಂದು ಮುದ್ದಾಂ ಇದನ್ನು ನನ್ನ ಕೈಗೆ ಕೊಟ್ಟೋದ್ರು. ಎಲ್ಲೋ ಹೋಗಿದ್ದೆ ಕೆಂಚಿ ಹಂಗೇ ಇಲ್ಲಿಗೆ ಬಂದೆ. ದುಡ್ಡನ್ನು ಒಳಗಿಡು ಜೋಪಾನ ಅಂತ ಹೇಳಿ ಮಗಳ ಬಾಣಂತನ ಚೆನ್ನಾಗಿ ಮಾಡು ಒಳ್ಳೆಯದಾಗಲಿ” ಅಂದು ಹೋದರು ಅಂದಳು ಕೆಂಚಿ.
ಹೆಂಡತಿಯ ಮಾತುಗಳನ್ನು ಮತ್ತು ಹಣದ ಕಟ್ಟನ್ನು ನೋಡಿ ಮುನಿಯನಿಗೆ ಗೌಡರ ಮನೆಯಲ್ಲಿ ಒಂದೆರಡು ತಿಂಗಳ ಹಿಂದೆ ನಡೆದ ಘಟನೆ ಕಣ್ಮುಂದೆ ಬಂದು ನಿಂತಿತು.
ದೊಡ್ಡಗೌಡರು ತೀರಿಹೋದಮೇಲೆ ಒಟ್ಟಿಗಿದ್ದ ಅಣ್ಣತಮ್ಮಂದಿರು ಮಕ್ಕಳ ಮದುವೆಯಾದ ಮೇಲೆ ಬೇರೆ ಬೇರೆಯಾದರು. ಆ ನಂತರ ಮನೆಯನ್ನು ಸ್ವಚ್ಚ ಮಾಡುತ್ತಿರುವಾಗ ಅಟ್ಟದಮೇಲೆ ಹಳೆಯ ಬಟ್ಟೆಯ ಗಂಟೊಂದು ಮುನಿಯನ ಕೈಗೆ ಸಿಕ್ಕಿತು. ಸ್ವಲ್ಪ ಭಾರವೆನಿಸಿತು. ತುಸುವೇ ಬಿಚ್ಚಿ ನೋಡಿದವನಿಗೆ ಅವು ಹಳೆಯ ಒಡವೆಗಳೆಂದು ತಿಳಿಯಿತು. ಅದನ್ನು ಇಲ್ಲಿ ಯಾರಿಟ್ಟಿದ್ದಾರು? ಅದರ ಅವಸ್ಥೆ ನೋಡಿದರೆ ಅದನ್ನು ಇತ್ತೀಚೆಗೆ ಇಟ್ಟಿರುವುದಲ್ಲವೆಂದು ತಿಳಿಯಿತು. ಅಲ್ಲಿಯೇ ಕೆಳಗೆ ಇದ್ದ ಗೌಡತಿಯನ್ನು ಹತ್ತಿರ ಕರೆದು “ಅವ್ವಾ ಇದು ಇಲ್ಲಿ ಸಿಕ್ಕಿತು” ಎಂದು ಅದನ್ನು ಅವರ ಕೈಗಿತ್ತ. ಅದನ್ನು ನೋಡಿದ ಕೂಡಲೇ ಅವರು ಹಿಂದು ಮುಂದಿನ ಬಾಗಿಲುಗಳನ್ನು ಮುಚ್ಚಿ “ಮುನಿಯಾ ಇದು ಬಹಳ ಹಳೆಯ ಒಡವೆಗಳು. ನಮ್ಮತ್ತೆ ಇದ್ದಾಗ ಮನೆಯಲ್ಲಿ ಕಳ್ಳತನವಾಗಿತ್ತಂತೆ. ನಮ್ಮತ್ತೆಗೂ ನನಗೆ ಸಿಕ್ಕಿರುವಂಥ ವಾರಗಿತ್ತಿಯೇ ಇದ್ದರಂತೆ. ಅವರ ಕೈ ಸರಿಯಿರಲಿಲ್ಲವಂತೆ. ಒಡವೆ ಕಾಣೆಯಾದ ಸುದ್ಧಿ ಕೇಳಿಸಿಕೊಂಡ ದೊಡ್ಡ ಗೌಡರು ಇದನ್ನು ಕಂಡಿರೋರೇ ಮಾಡಿರಬಹುದು. ಪೋಲೀಸ್ ಗೀಲೀಸ್ ಅಂತ ಹೋದ್ರೆ ಮನೆಯ ಮರ್ವಾದೆ ಹೋಗ್ತದೆ ಅಂತ ಕಂಪ್ಲೇಂಟ್ ಕೊಡಲಿಲ್ಲವಂತೆ. ಅವರ ಬಾಯಲ್ಲೇ ಹಲವು ಸಾರಿ ಕೇಳಿದ್ದೆ. ಅದೆಲ್ಲ ಸರಿ ಇದುವರೆಗೆ ಮನೆಗೆ ಎಷ್ಟು ಸಾರಿ ಸುಣ್ಣಬಣ್ಣ ಬಳಿಸಿದ್ದೇವೆ. ಒಂದು ಮೂಲೇನೂ ಬಿಡದಂಗೆ ಕ್ಲೀನ್ ಮಾಡಿಸ್ತಿದ್ವಿ. ಅದು ಒಬ್ಬರ ಕೈಗೂ ಸಿಕ್ಕಿಲ್ಲಾಂದ್ರೆ ಎಷ್ಟು ಮಟ್ಟಿಗೆ ಕ್ಲೀನ್ ಮಾಡವ್ರೆ ಅಂತ ಗೊತ್ತಾಯ್ತದೆ. ಅದು ಹೋಗಲಿ ಅಂದ್ರೆ ಅಣ್ಣತಮ್ಮರು ಭಾಗವಾದಾಗ ನನ್ನ ಮೈದುನ ತಾನೇ ಅಟ್ಟ ಹತ್ತಿ ಇದ್ದಬದ್ದದ್ದನ್ನೆಲ್ಲ ತೆಗೆದು ಕೆಳಗೆ ಹಾಕಿದ್ರು. ಹಂಗೂ ಅವರ ಕಣ್ಣಿಗೆ ಬಿದ್ದಿಲ್ಲಾಂದ್ರೆ ಅದು ನಮಗೆ ದಕ್ಕಬೇಕಾಗಿತ್ತು ಅಂತ ಕಾಣುತ್ತೆ. ಬಿಡು ಪುಣ್ಯಕ್ಕೆ ಮನೇಲಿ ಯಾರೂ ಇಲ್ಲ. ಮುನಿಯಾ ಈ ವಿಷಯ ಯಾರ ಹತ್ತಿರಾನೂ ಬಾಯಿಬಿಟ್ಟೀಯೆ ಜೋಕೆ. ಅದರಲ್ಲೂ ನಿನ್ನ ಹೆಂಡತಿಗಂತೂ ಹೇಳಲೇಬೇಡ. ಅವಳು ಕೆಟ್ಟವಳೆನಲ್ಲ ಬೋಳೇ ಸ್ವಭಾವದವಳು. ಅವಳ ಹತ್ತಿರ ನನ್ನ ವಾರಗಿತ್ತಿಗೆ ಬಾಳಾ ನ್ಯಾಸ್ತಾ. ಬಾಯಿಬಿಟ್ಟಾಳು. ಕೈಗೆ ಬಂದತುತ್ತು ಬಾಯಿಗೆ ಬರದಂತೆ ಆದೀತು” ಎಂದು ತಾಕೀತು ಮಾಡಿದ್ದರು.
ಅದೆಲ್ಲವನ್ನೂ ಕೇಳಿದ ಮುನಿಯ ಈ ದೊಡ್ಡವರಿಗೆ ಎಷ್ಟಿದ್ದರೂ ಸಾಲದೆಂದುಕೊಂಡು ತೆಪ್ಪಗಾಗಿದ್ದ. ಬೆಂಗಳೂರಿನಲ್ಲಿದ್ದ ಅವರ ಮಗಳು ಬಂದಾಗಲೆಲ್ಲ ಅವ್ವಾವರು ಮಗಳು ಏನೊ ಗುಸುಗುಸು ಪಿಸುಪಿಸು ನಡೆಸುತ್ತಿದ್ದರು. ಗೌಡ್ರು ಬೇರೆ ಊರಿನಲ್ಲಿಲ್ಲ. ಅವ್ವಾವ್ರು ಏನೋ ಕಾರಭಾರ ಹಾಕ್ಕೊಂಡು ಹೊರಗಡೆ ಹೋಗಿದ್ದವರು ಹಂಗೇ ನಮ್ಮ ಮನೆಗೂ ಬಂದವರೆ. ನಾನು ಮನೆ ತಲುಪುವ ಮೊದಲೆ ಇಲ್ಲಿಗೆ ಬಂದವ್ರೆ. ಗುಟ್ಟು ರಟ್ಟು ಮಾಡದೆ ಇರ್ಲಿ ಅಂತ ನನಗೊಂದಿಷ್ಟು ಹೆಚ್ಚಿಗೆ ಕೊಟ್ಟವ್ರೆ. ಈಗಲು ಆ ಗುಟ್ಟನ್ನು ಹೊರಗೆ ಹೇಳಬಾರದೆಂದು ನಿಶ್ಚಯಿಸಿಕೊಂಡು ಸ್ವಲ್ಪ ಯೋಚಿಸಿದಂತೆ ಮಾಡಿ “ಕೆಂಚೀ ಸ್ವಲ್ಪ ನಿನ್ನ ವಟವಟ ನಿಲ್ಲಿಸಿ ನಾನು ಹೇಳಿದ್ದನ್ನು ಕೇಳು. ನಮ್ಮ ಬಂಗಾರಿ ಮದುವೇಲಿ ಮಾಡಿದ ಸಾಲ ತೀರಿದ ಮೇಲೆ ಪ್ರತಿ ತಿಂಗಳ ನನ್ನ ಸಂಬಳದಲ್ಲಿ ವಸಿ ತೆಗೆದು ಅವ್ವಾರ ಹತ್ತಿರವೆ ಇರಿಸುತ್ತಿದ್ದೆ. ನೆಪ್ಪು ಮಾಡಿಕೊ ಮುಂದಕ್ಕೆ ಬೇಕಾಗ್ತದೆ ಅಂತ. ಮೊನ್ನೆ ನೀನೇಳಿದಂಗೆ ಮಗಳ ಬಾಣಂತನದ ಕರ್ಚಿಗೇಂತ ಅವ್ವಾರ ಹತ್ತಿರ ಅಡ್ವಾನ್ಸ್ ಕೇಳಿದೆ. ಅದಕ್ಕೆ ಸ್ವಲ್ಪ ಸೇರಿಸಿ ಕೊಟ್ಟಿರೀಂತಾನೂ ಕೇಳಿದ್ದೆ. ಅದಕ್ಕೆ ಅವರೂ ಅವರ ಮಗಳು, ಅದೇ ಚಿಕ್ಕಮ್ಮಾವ್ರು ನನ್ನ ಮದುವೇಲಿ ಬಹಳಾ ಓಡಾಡಿ ಕೆಲಸ ಮಾಡಿದ್ದೀ. ಆಗ ಹೆಚ್ಚೇನೂ ಕೊಡಲಿಲ್ಲ. ನಮ್ಮ ಮನೇಗೇನಾದ್ರು ಹೆಚ್ಚಿಗೆ ಕೆಲಸ ಬಿದ್ರೂ ಬಂದು ಮಾಡಿಕೊಡ್ತೀಯಾ ಸಂಕೋಚ ಪಡಬೇಡ ನಾನೂ ಸ್ವಲ್ಪ ಕೊಡ್ತೀ್ನಿ ಅಂದಿದ್ದರು. ಈಗ ಅವರು ಊರಿಗೆ ಬಂದವ್ರಲ್ಲಾ ಇಬ್ಬರೂ ಸೇರಿಸಿ ನಾನು ಕೂಡಿಸಿದ್ದ ದುಡಿಮೆ ಹಣದ ಜೊತೆಗೆ ತಾವೂ ಕೈ ಸಡಿಲ ಬಿಟ್ಟು ಸೇರಿಸಿ ಕೊಟ್ಟಿರಬಹುದು ಅಷ್ಟೇ. ಜೋಪಾನವಾಗಿ ಎತ್ತಿಡು. ಒಂದು ವಿಷಯ ಅ ನಿಮ್ಮ ಸಂಘದೋರ ಕಿವಿಗೆ ಹಾಕಬೇಡ. ಪೋಸ್ಟಾಫೀಸು ಅಂತ ಬೆನ್ನು ಹತ್ತಬೇಡ. ತಿಳೀತಿಲ್ಲೋ, ಇನ್ನೇನು ಮುಂದಲ ವಾರ ಬಂಗಾರಿ ಬರ್ತಾಳೆ. ಹೆರಿಗೆಗೆ ಎರಡು ವಾರ ಇರ‍್ಬೊದು. ನಮ್ಮ ಖಜಾನೇಲಿ ದೇವರಪಟದ ಹಿಂದೆ ಎತ್ತಿಡು. ಯಾರತ್ರಾದ್ರೂ ಬಾಯಿಬಿಟ್ಟೀಯಾ ನಮ್ಮ ಮನೆದೇವರ ಮೇಲಾಣೆ” ಎಂದು ಹೆಂಡತಿಗೆ ತಾಕೀತು ಮಾಡಿ ಕೈಕಾಲು ಮುಖ ತೊಳೆಯಲು ಬಚ್ಚಲ ಮನೆಯ ಕಡೆ ನಡೆದ ಮುನಿಯ.

–ಬಿ.ಆರ್.ನಾಗರತ್ನ, ಮೈಸೂರು


ಕುತೂಹಲಕಾರಿ ತಿರುಳನ್ನು ಹೊಂದಿದ ಚೆಂದದ ಕತೆ.
ಪ್ರತಿಕ್ರಿಯೆಗೆ ಧನ್ಯವಾದಗಳು ಗೆಳತಿ ಹಾಗೇ ಪ್ರಕಟಿಸಿದಕ್ಕೂ ಧನ್ಯವಾದಗಳು….
ಅನಿರೀಕ್ಷಿತ ಮುಕ್ತಾಯ ಹೊಂದಿದ್ದು ಕುತೂಹಲ ಹುಟ್ಟಿಸುವಂತಿದೆ.
ನಿಮ್ಮ ಪ್ರತಿಕ್ರಿಯೆ ಗೆ ಧನ್ಯವಾದಗಳು ಮೇಡಂ
ಕಥೆಯಲ್ಲಿರುವ ಹಳ್ಳಿ ಭಾಷೆಯ ಸೊಗಡು, ಮುನಿಯನ ಪ್ರಾಮಾಣಿಕತೆಗೆ ದೊರೆತ ಉಡುಗೊರೆ… ಎಲ್ಲಾವೂ ಚೆನ್ನ!
ಕುತೂಹಲಕಾರಿಯಾದ ಸಣ್ಣ ಕಥೆಗಳ ರಚನೆಯಲ್ಲಿ ಎತ್ತಿದ ಕೈ ನಿಮ್ಮದು, ನಾಗರತ್ನ ಮೇಡಂ.
ನಿಮ್ಮ ಸಹೃದಯ ಸ್ಪಂದನೆಗೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು ಶಂಕರಿ ಮೇಡಂ.
ಪೂರ್ತ ಓದಿದೆ ಮೇಡಂ, ಚೆನ್ನಾಗಿದೆ.
ಸಂದಾಯ ಸೂಕ್ತ ಶೀರ್ಷಿಕೆ; ನಿರ್ಲಿಪ್ತತೆ ಇದರ ಧಾಟಿ
ನಿಮ್ಮ ಶೈಲಿಯೂ!
ಇದೇ ನನಗಿಷ್ಟ.
ನಿಮ್ಮ ಓದಿನ ಪ್ರತಿಕ್ರಿಯೆಗೆ ಸಹೃದಯ ತೆಗೆ ಹೃತ್ಪೂರ್ವಕವಾದ ಧನ್ಯವಾದಗಳು ನಂಜು ಸರ್
ಬಹಳ ಚೆನ್ನಾಗಿದೆ ಕಥೆ
ನಿಮ್ಮ ಓದು ಹಾಗೂ ಸ್ಪಂದನೆಗೆ ಧನ್ಯವಾದಗಳು ನಯನಮೇಡಂ