ಪ್ರವಾಸ

ದೇವರ ದ್ವೀಪ ಬಾಲಿ : ಪುಟ-6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಪುರಾ ಪುಸೆಹ್ ಬಟುವಾನ್ ದೇವಾಲಯ
05/09/2025 ರಂದು ಸಂಜೆ ನಮ್ಮ ಮಾರ್ಗದರ್ಶಿ ಮುದ್ದಣ ನಮ್ಮನ್ನು ಬಟುವಾನ್ ಗ್ರಾಮದ ಪುರಾ ಪುಸೆಹ್ ಎಂಬ ದೇವಾಲಯಕ್ಕೆ ಕರೆದೊಯ್ದರು. ಇಲ್ಲಿಯೂ ನಮಗೆ ಸೊಂಟಕ್ಕೆ ಸುತ್ತಿಕೊಳ್ಳಲು “ಸಾರೊಂಗ್” ಎಂಬ ಲುಂಗಿ ಮತ್ತು “ಸಾಶೆ” ಎಂಬ ಸ್ಕಾರ್ಫ್ ತರದ ಬಟ್ಟೆಯನ್ನು ಕೊಟ್ಟರು. ‘ಪುರಾ ಪುಸೆಹ್’ ದೇವಾಲಯವು , ಭಾರತೀಯ ಹಿಂದೂ ಸಂಸ್ಕೃತಿ ಹಾಗೂ ಶಿಲ್ಪಕಲೆಯಿಂದ ಪ್ರೇರೇಪಿತವಾಗಿದೆ. ಕ್ರಿಶ. 1022 ರಲ್ಲಿ ನಿರ್ಮಿಸಲಾದ ಈ ದೇಗುಲವನ್ನು 1992 ರಲ್ಲಿ ನವೀಕರಣಗೊಳಿಸಲಾಗಿದೆಯಂತೆ. ಈ ದೇವಾಲಯವನ್ನು ಬಟುವಾನ್ ಗ್ರಾಮಸ್ಥರು ನಿರ್ವಹಿಸುತ್ತಾರೆ. ದೇವಾಲಯ ಸಂಕೀರ್ಣದಲ್ಲಿ ಸುಂದರವಾದ ಬಾಲಿನೀಸ್ ವಾಸ್ತುಶಿಲ್ಪ, ಅರ್ಧವಾಗಿ ವಿಭಜಿಸಿದಂತೆ ಕಟ್ಟಲಾದ ಮುಖ್ಯದ್ವಾರಗಳು, ಕಲ್ಲಿನ ವಿಗ್ರಹಗಳಿವೆ. ಈ ದೇವಾಲಯದಲ್ಲಿ ಹಿಂದೂ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಶಿವ ದೇವರನ್ನು ಪೂಜಿಸಲಾಗುತ್ತದೆ. ಇಲ್ಲಿ ಕೆಂಪು ಇಟ್ಟಿಗೆಯ ಕಟ್ಟಡದ ಜೊತೆಗೆ ಕಪ್ಪು ಕಲ್ಲಿನ ಶಿಲ್ಪಗಳಿವೆ. ಕಲ್ಲಿನ ಛಾವಣಿ, ಗೋಪುರದಂತಹ ರಚೆನೆಗಳಿವೆ. ಈಚಲು ಮರದ ತಿರುಳನ್ನು ಹೊದಿಸಿ ಕಟ್ಟಲಾದ ಬಹು ಅಂತಸ್ತಿನ ಚಿಕ್ಕ ಗುಡಿಗಳೂ ಇವೆ. ಆಗ ಅಲ್ಲಿ ನಮ್ಮನ್ನು ಬಿಟ್ಟು ಬೇರೆ ಜನರಿರಲಿಲ್ಲ. ಆವರಣ ಸ್ವಚ್ಚವಾಗಿತ್ತು.

ಶಂಖ, ಗಂಟೆ , ಜಾಗಟೆಗಳ ದನಿಯಿಲ್ಲದ, ಧೂಪ-ಅಗರಬತ್ತಿಯ ಗಂಧವಿಲ್ಲದ, ಸರಭರ ಅತ್ತಿತ್ತ ಓಡಾಡುವ ಅಥವಾ ಸರದಿ ಸಾಲಿನಲ್ಲಿ ಕಾಯುತ್ತಾ ನಿಂತಿರುವ ಜನರಿಂದ ತುಂಬಿರುವ ನಮ್ಮ ದೇವಾಲಯಗಳನ್ನು ನೋಡಿದ್ದ ನಮಗೆ, ದೇವಾಲಯದ ಪರಿಸರ ‘ಹೀಗೂ ಇರಲು ಸಾಧ್ಯವೇ’ ಅನಿಸಿತ್ತು. ಯಾಕೆಂದರೆ ಆ ‘ಬಯಲು ಆಲಯ’ದಲ್ಲಿ ಆಗ ನಮ್ಮ ತಂಡ ಮಾತ್ರ ಇತ್ತು. ಆವರಣದಲ್ಲಿ ನಿಶ್ಶಬ್ದವಾದ ದೈವಿಕತೆ ಇತ್ತು. ಸುಮಾರು 20 ಅಡಿ ಇದ್ದಿರಬಹುದಾದ ಕೆಲವು ಗುಡಿಗಳಿದ್ದುವು. ಆ ಗುಡಿಗಳಿಗೆ ಬೀಗ ಹಾಕಲಾಗಿತ್ತು. ಗರ್ಭಗುಡಿಗೆ, ವಿಶೇಷ ದಿನಗಳಲ್ಲಿ, ಸ್ಥಳೀಯ ಅರ್ಚಕರಿಗೆ ಮಾತ್ರ ಪ್ರವೇಶವಂತೆ.

ಪುರಾ ಪುಸೆಹ್ ಬಟುವಾನ್ ದೇವಾಲಯ

ದೇವಾಲಯದ ಆವರಣದಲ್ಲಿ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಪ್ರಧಾನ ಗುರು ಅಥವಾ ಅರ್ಚಕರು ಕುಳಿತುಕೊಳ್ಳಲೆಂದು ಒಂದು ಮಂಟಪವನ್ನು ಮೀಸಲಾಗಿರಿಸಿದ್ದರು. ಇಲ್ಲಿ ಅರ್ಚಕರ ಆಯ್ಕೆ ಹೇಗೆ, ಪೂಜಾ ಕೈಂಕರ್ಯಗಳು ಮನೆತನದಲ್ಲಿ ಮುಂದುವರಿಯುತ್ತದೆಯೇ ಅಥವಾ ಇತರರಿಗೂ ಅರ್ಚಕ ಹುದ್ದೆ ಲಭಿಸುವ ಸಾಧ್ಯತೆ ಇದೆಯೇ ಎಂದು ಮಾರ್ಗದರ್ಶಿಗೆ ಕೇಳಿದಾಗ ಸಿಕ್ಕಿದ ಉತ್ತರ ಬಲು ಸ್ವಾರಸ್ಯಕರವಾಗಿತ್ತು. ಮುಖ್ಯ ಗುರು ಹುದ್ದೆಯು ಸಾಮಾನ್ಯವಾಗಿ ವಂಶ ಪಾರಂಪರಿಕವಾಗಿ ಸಾಗುತ್ತದೆ. ಇವರು ಬ್ರಾಹ್ಮಣ ಸಮುದಾಯದವರಾಗಿರುತ್ತಾರೆ. ‘ಪೆಡಂಡ’ (Pedanda) ಎಂದು ಕರೆಯಲ್ಪಡುವ ಇವರು ಉನ್ನತ ಸ್ತರದ ಧಾರ್ಮಿಕ ವಿದ್ಯಾಭ್ಯಾಸ ಹೊಂದಿದ್ದು, ಸಮುದಾಯವನ್ನು ಮುನ್ನಡೆಸುವ ಜವಾಬ್ದಾರಿ ಹೊಂದಿರುತ್ತಾರೆ. ಪ್ರತಿ ದೇಗುಲದಲ್ಲಿಯೂ ‘ಪೆಮಾಂಗ್ಕ್ ‘ (Pemangku) ಎಂದು ಕರೆಲ್ಪಡುವ ಸ್ಥಳೀಯ ಅರ್ಚಕರು ನೇಮಿಸಲ್ಪಡುತ್ತಾರೆ. ಇವರು ಯಾವುದೇ ಸಮುದಾಯದವರಾಗಿರಬಹುದು.

ಪುರಾ ಪುಸೆಹ್ ಬಟುವಾನ್ ದೇವಾಲಯದಲ್ಲಿ ನಮ್ಮ ತಂಡ

ಸ್ಥಳೀಯ ದೇಗುಲದ ಹಾಲಿ ಅರ್ಚಕರು ಮರಣ ಹೊಂದಿದಾಗ ಸಾರ್ವಜನಿಕರ ಸಮ್ಮುಖದಲ್ಲಿಅರ್ಚಕರ ಆಯ್ಕೆ ಪ್ರಕ್ರಿಯೆ ನೆರವೇರುತ್ತದೆ. ಸಾರ್ವಜನಿಕರ ಸಮ್ಮುಖದಲ್ಲಿ ಹಲವಾರು ಧಾರ್ಮಿಕ ಪರೀಕ್ಷೆಗಳಿಗೆ ಒಳಪಡುವ ಸಂದರ್ಭದಲ್ಲಿ, ಯಾರ ಮೇಲಾದರೂ ದೇವರ(Spirit) ಆವಾಹನೆಯಾದರೆ , ಅದು ನಿಜವೇ ಎಂದು ಪರೀಕ್ಷಿಸಲು ಆತನ ಶರೀರಕ್ಕೆ ಬೆಂಕಿಯನ್ನು ಸ್ಪರ್ಶಿಸಲಾಗುವುದಂತೆ. ಆತ ಬೆಂಕಿಯ ಉರಿಗೆ ಸ್ಪಂದಿಸದೆ, ಇನ್ನೂ ದೈವಾವೇಶದ ಉನ್ಮಾದ ಸ್ಥಿತಿಯಲ್ಲಿದ್ದದ್ದರೆ ದೇವರ ಆವಾಹನೆಯನ್ನು ನಿಜವೆಂದು ಪರಿಗಣಿಸಲಾಗುವುದಂತೆ. ಮುಂದೆ ಆತನಿಗೆ ಮುಖ್ಯಗುರುವಿನ ಮಾರ್ಗದರ್ಶನದಲ್ಲಿ ಶುದ್ಧೀಕರಣ , ಧಾರ್ಮಿಕ ವಿದ್ಯಾಭ್ಯಾಸ ಇತ್ಯಾದಿ ನಡೆದು ದೇವಾಲಯದ ‘ಪೆಮಾಂಗ್ಕ್’ ಎಂದು ನೇಮಕ ಮಾಡುತ್ತಾರಂತೆ.

ಅರ್ಚಕರು ಯಾವುದೇ ಸಮುದಾಯದವಾದರೂ ತಮ್ಮ ಮಾಂಸಾಹಾರ ಸೇವಿಸುವುದು, ಸಿಗರೇಟು ಸೇದುವುದು ಇಲ್ಲಿ ಸಾಮಾಜೈಕವಾಗಿ ಅಂಗೀಕರಿಸಲ್ಪಟ್ಟ ವಿಚಾರ. ಬಾಲಿಯ ದೇವಾಲಯಗಳ ಆವರಣದಲ್ಲಿ ಚಪ್ಪಲಿ ಹಾಕಲು ಅನುಮತಿ ಇರುವುದು ನಮಗೆ ಸೋಜಿಗವೆನಿಸುತ್ತಿತ್ತು.

ಹೇಮಮಾಲಾ.ಬಿ. ಮೈಸೂರು

(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=43914

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *