ಪುಸ್ತಕ-ನೋಟ

ಕಾದಂಬರಿ: ‘ಅಳಿದ ಮೇಲೆ’ , ಲೇಖಕರು: ಡಾ.ಕೆ.ಶಿವರಾಮ ಕಾರಂತ.

Share Button

ಡಾ. ಕೆ.ಶಿವರಾಮ ಕಾರಂತರು ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಇಪ್ಪತ್ತನೆಯ ಶತಮಾನದ ಅಪರೂಪದ ವ್ಯಕ್ತಿಗಳಾಗಿದ್ದಾರೆ. ಮುಖ್ಯವಾಗಿ ಇವರನ್ನು ಕಾದಂಬರಿಕಾರರೆಂದು ನಾವು ಗುರುತಿಸಿಕೊಂಡರೂ ಇವರೊಬ್ಬ ಸವ್ಯಸಾಚಿ. ಇವರಂತೆ ಬಗೆಬಗೆಯ ಆಸಕ್ತಿ ಬೆಳೆಸಿಕೊಂಡವರಾಗಲೀ, ಕುತೂಹಲದ ಕುದುರೆಯನ್ನೇರಿ ಸುಖದುಃಖಗಳ ಕಾಡುಮೇಡುಗಳಲ್ಲಿ ಅಲೆದಾಟ ಮಾಡಿದವರಾಗಲೀ, ಆ ಅನುಭವಗಳನ್ನೆಲ್ಲ ಸಾಹಿತ್ಯದ ಸಾಮಗ್ರಿಗಳಾಗಿ ಬರದು ಓದುಗರಿಗೆ ಉಣಬಡಿಸಿ ಬೆರಗನ್ನು ಉಂಟುಮಾಡಿದವರಾಗಲೀ ಕನ್ನಡ ಸಾಹಿತಿಗಳಲ್ಲಿ ಇನ್ನೊಬ್ಬರಿಲ್ಲ. ಪ್ರಕೃತಿ, ಮನುಷ್ಯರು, ಸಮಾಜ ಇವುಗಳ ಅಂದಚಂದ, ಪರಸ್ಪರ ಸಂಬಂಧಗಳನ್ನು ಅನ್ವೇಷಣೆಮಾಡಿ ಇವರಂತೆ ಚಿತ್ರಿಸಿದವರು ಅಪರೂಪ. ಇವರು ಪ್ರವೇಶಿಸಿದ ಕ್ಷೇತ್ರಗಳೂ ವೈವಿಧ್ಯಮಯ. ಸಾಹಿತ್ಯ, ವಿಜ್ಞಾನ, ಯಕ್ಷಗಾನ, ಸಂಗೀತ, ಚಿತ್ರಕಲೆ, ಛಾಯಾಗ್ರಹಣ, ಚಲನಚಿತ್ರ, ರಾಜಕಾರಣ, ಸಮಾಜಸುಧಾರಣೆ, ಪ್ರವಾಸ ಮುಂತಾದವು. ಅವರು ಹೊಕ್ಕೆಡೆಯಲ್ಲಿ ಏನಾದರೂ ವಿಶೇಷ ಸಾಧನೆ ಮಾಡಿದ್ದೇ ಅವರ ವೈಶಿಷ್ಟ್ಯ. ಅವರು ರಚಿಸಿದ ಕೃತಿಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. 47 ಕಾದಂಬರಿಗಳು, 16 ನಾಟಕಗಳು, 3 ಸಣ್ಣಕಥೆಗಳ ಸಂಕಲನಗಳು, 6 ಪ್ರಬಂಧಗಳು, 9 ಕಲೆಗೆ ಸಂಬಂಧಿಸಿದ ಕೃತಿಗಳು. 12 ವಿಜ್ಞಾನ,ವಿಶ್ವಕೋಶಕ್ಕೆ ಸಂಬಂಧಿಸಿದ ಕೃತಿಗಳು, 5 ಪ್ರವಾಸ ಸಾಹಿತ್ಯದ ಕೃತಿಗಳು, 5 ಆತ್ಮಕಥೆ ಮತ್ತು ಜೀವನಚರಿತ್ರೆಗಳು, ಒಂದು ಕವನ ಸಂಕಲನ, 24 ಮಕ್ಕಳ ಸಾಹಿತ್ಯ ಕೃತಿಗಳು, 8 ಇತರ ಕೃತಿಗಳು, ಕೆಲವು ಅನುವಾದ ಕೃತಿಗಳು ಇತ್ಯಾದಿ.

ಅವರು ವಿಶ್ರಾಂತಿಗಾಗಿ ಎಲ್ಲಾದರೂ ಪ್ರವಾಸ ಹೋಗುತ್ತಿದ್ದುದು ವಾಡಿಕೆ. ಅಲ್ಲಿಂದ ಹಿಂದುರುಗಿದ ನಂತರ ಅಧ್ಯಯನ, ಬರವಣಿಗೆ ಮುಂದುವರೆಸುತ್ತಿದ್ದರು. ಕ್ರಿ.ಶ. 1902ರಲ್ಲಿ ಜನಿಸಿದ ಇವರು ತೊಂಬತ್ನಾಲ್ಕು ವರ್ಷದ ಸುಧೀರ್ಘ ಜೀವನ ನಡೆಸಿದವರು. ಸಾಹಿತ್ಯ ಸಾಧನೆಗಾಗಿ ನಾಡಿನ ಹಲವಾರು ಪುರಸ್ಕಾರ, ಪ್ರಶಸ್ತಿಗಳನ್ನು ಪಡೆದವರು. ಇವರಿಗೆ ಜ್ಞಾನಪೀಠ ಪ್ರಶಸ್ತಿಯೂ ದೊರಕಿತ್ತು. ಆ ಪ್ರಶಸ್ತಿಗೇ ಗೌರವವೊದಗಿಸಿದ ಮಹಾನುಭಾವರಿವರು.

ಹೀಗೇ ಅವರದೊಂದು ಮುಂಬಯಿ ಪ್ರವಾಸ ಕಾಲದಲ್ಲಿ ಕೆಲವು ತಾಸು ರೈಲಿನ ಸಹಪ್ರಯಾಣಿಕರಾಗಿದ್ದ ಯಶವಂತರೆಂಬ ವ್ಯಕ್ತಿ ಇವರಿಗೆ ಪರಿಚಯವಾಗುತ್ತಾರೆ. ಮುಂದೆ ಇವರ ಭೇಟಿ ಹಲವು ಬಾರಿ ಆಗುತ್ತದೆ. ಪತ್ರ ವ್ಯವಹಾರದಮಟ್ಟಿಗೆ ಸ್ನೇಹ ಮುಂದುವರೆಯುತ್ತದೆ. ಇದ್ದಕ್ಕಿದ್ದಂತೆ ಒಂದುದಿನ ಯಶವಂತರು ತೀವ್ರವಾಗಿ ಖಾಯಿಲೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ತಕ್ಷಣ ಹೊರಟು ಬನ್ನಿ ಎಂಬ ತಾರು ಬಂದು ಕಾರಂತರು ಮುಂಬಯಿಗೆ ಧಾವಿಸುತ್ತಾರೆ. ಆದರೆ ಇವರು ಅಲ್ಲಿಗೆ ತಲುಪಿ ಅವರನ್ನು ಕಾಣುವಷ್ಟರಲ್ಲಿ ಯಶವಂತರು ತೀರಿಕೊಂಡಿರುತ್ತಾರೆ. ಅವರಿಗೆ ಸಮೀಪದ ಬಂಧುಗಳು ಯಾರೂ ಇಲ್ಲವೆಂದು ಕಾರಂತರ ಬಳಿ ಬಹಳ ಹಿಂದೆಯೇ ಹೇಳಿಕೊಂಡಿದ್ದುದರಿಂದ ಅವರ ಸಂಸ್ಕಾರವನ್ನು ಮಿತ್ರರೊಬ್ಬರ ನೆರವಿನಿಂದ ಇವರೇ ಮಾಡುತ್ತಾರೆ.

ವ್ಯಕ್ತಿಯೊಬ್ಬ ಬದುಕಿದ್ದಾಗ ಅವನೊಡನೆ ಒಡನಾಟ ಇಟ್ಟುಕೊಂಡವರಿಗೆ ಆತ ಅಳಿದನಂತರ ಮುಂದೇನು? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಹಲವು ವರ್ಷಗಳ ಗೆಳೆತನದ ಕುರುಹಾಗಿ ಯಶವಂತರ ಕೊಠಡಿಯಲ್ಲಿನ ವಸ್ತುಗಳನ್ನು ಕಾರಂತರೇ ಪರಿಶೀಲಿಸಿ ಅಲ್ಲಿದ್ದ ಚಿತ್ರಗಳು, ಪುಸ್ತಕಗಳ ಪೆಟ್ಟಿಗೆ, ಆಗೀಗ ಅವರು ಬರೆದಿಟ್ಟಿದ್ದ ದಿನಚರಿಯನ್ನು ತಮ್ಮೊಡನೆ ಒಯ್ಯುತ್ತಾರೆ. ಅವರು ತಮ್ಮೂರಿಗೆ ಹಿಂದಕ್ಕೆ ಬರುವಷ್ಟರಲ್ಲಿ ಯಶವಂತರೇ ಸಾಯುವ ಮೊದಲು ಇವರಿಗೆ ಬರೆದು ಕಳುಹಿಸಿದ್ದ ರಿಜಿಸ್ಟರ್ಡ್ ಪತ್ರ ಮತ್ತು ಹದಿನೈದು ಸಾವಿರ ರೂಪಾಯಿಗಳ ಬ್ಯಾಂಕ್‌ ಡ್ರಾಫ್ಟ್ ಕಾರಂತರ ವಿಳಾಸಕ್ಕೆ ಬಂದು ತಲುಪುತ್ತದೆ. ಯಶವಂತರ ಅಂತಿಮ ಕೋರಿಕೆಯಂತೆ ಪತ್ರದಲ್ಲಿ ಸೂಚಿಸಿದ್ದ ಹಲವು ವ್ಯಕ್ತಿಗಳಿಗೆ ತಿಂಗಳಿಗೆ ಇಪ್ಪತ್ತೈದು ರೂಪಾಯಿಗಳಂತೆ ಸಹಾಯಧನ ತಲುಪಿಸಲು ಮನವಿಯಿರುತ್ತದೆ. ಕಾರಂತರಿಗೆ ನೆರವು ಪಡೆಯುವ ಆ ವ್ಯಕ್ತಿಗಳಾರು? ಅವರಿಗೂ ಯಶವಂತರಿಗೂ ನಂಟೇನು? ಎಂಬುದನ್ನು ತಿಳಿಯಲು ಕುತೂಹಲವಾಗುತ್ತದೆ. ಅದನ್ನರಿಯುವ ಪ್ರಯತ್ನ ಮಾಡುತ್ತಾರೆ. ಇಲ್ಲಿಂದಲೇ ಅಳಿದಮೇಲೆ ಉಳಿಯುವ ನಿಗೂಢ ವ್ಯಕ್ತಿಗಳ ಅನಾವರಣ ನಮಗಾಗುತ್ತದೆ.

ಕಥಾ ನಿರೂಪಣಾ ವಿಧಾನವೇ ಕುತೂಹಲ ಕೆರಳಿಸುವಂತಹುದು. ಏಕೆಂದರೆ ಬದುಕಿದ್ದಾಗ ತಾನು ಸಂಸಾರ ಬಂಧನದಿಂದ ಮುಕ್ತನಾಗಿ ವಾನಪ್ರಸ್ತಕ್ಕಾಗಿ ಬಂದು ಮುಂಬಯಿಯಲ್ಲಿ ಹತ್ತಾರು ವರ್ಷಗಳಿಂದ ನೆಲೆಸಿದವನೆಂದು ಯಶವಂತರೇ ಇವರಿಗೆ ಹೇಳಿಕೊಂಡಿರುತ್ತಾರೆ. ಹೀಗಾಗಿ ಅವರ ಪೂರ್ವಾಶ್ರಮದ ಪರಿಚಯ ಕಾರಂತರಿಗೆ ಎಳ್ಳಷ್ಟೂ ಇರುವುದಿಲ್ಲ. ಯಶವಂತರ ಕೊಠಡಿಯಲ್ಲಿ ದೊರಕಿದ ಕೆಲವು ಸಾಂಕೇತಿಕ ಚಿತ್ರಗಳು ಮತ್ತು ಅವರು ಬರೆದಿಟ್ಟಿದ್ದ ಡೈರಿಯಲ್ಲಿ ದೊರೆತ ಅಪೂರ್ಣ ವಿವರಗಳು ಮಾತ್ರ ಇವರಲ್ಲಿವೆ. ಇವೇ ಕಾರಂತರ ನೆರವಿಗೆ ಬರುತ್ತವೆ. ಇವುಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದಾಗ ತಿಳಿಯುವ ಮಾಹಿತಿಯ ತುಣುಕುಗಳನ್ನು ಒಟ್ಟುಗೂಡಿಸುತ್ತಾ ಹೋಗುತ್ತಾರೆ. ಅವರೇ ಕಾದಂಬರಿಯ ಮುನ್ನುಡಿಯಲ್ಲಿ ಹೆಳಿಕೊಂಡಿರುವಂತೆ “ನಡೆದು ದಾರಿ ಸಾಗಿದವನು ತನ್ನ ಹೆಜ್ಜೆಯ ಜಾಡನ್ನು ಬಿಟ್ಟುಹೋಗುವಂತೆ, ಕಳೆದ ಬಾಳು ಅನ್ಯರಲ್ಲಿ ಮೂಡಿಸಿದ ಪ್ರಭಾವಗಳಿಂದ ಅಳೆಯಬಹುದಾದ ವಸ್ತು. ಬಾಳಿದವರು ತಮ್ಮ ಸಂಪರ್ಕಕ್ಕೆ ಬಂದ ಕೆಲವರಿಗೆ ಹಿತವರು, ಹಲವರಿಗೆ ತಿಳಿಯದವರು. ಬದುಕಿನ ಸಂಪರ್ಕದಲ್ಲಿ ಉಂಟಾದ ಹಿತಾಹಿತ ಪ್ರಭಾವಗಳನ್ನು ಮೇಳವಿಸಿ ಯಶವಂತರ ಬಾಳು ಎಂಥದಿತ್ತು ಎಂದು ಹುಡುಕಲೆತ್ನಿಸಿದ್ದೇನೆ. ಇಲ್ಲಿನ ಪ್ರಯತ್ನ ಅವರು ಬಿಟ್ಟ ಹೆಜ್ಜೆಯ ಜಾಡನ್ನು ಹಿಂಬಾಲಿಸಿ ಹೋದಂತೆ”. ಇದೊಂದು ದುಸ್ಸಾಹಸವೇ ಸರಿ. ಓದುಗರಿಗೆ ಕಾರಂತರು ಊರಿಂದೂರಿಗೆ ಪ್ರಯಾಣಿಸಿ ಯಶವಂತರ ಬಂಧುಗಳೆನ್ನಿಸಿಕೊಂಡವರನ್ನು ಒಬ್ಬೊಬ್ಬರನ್ನಾಗಿ ಭೇಟಿಮಾಡಿ ಮಾಹಿತಿ ಸಂಗ್ರಹಿಸುವ ಪರಿ, ಅವರ ಅತೀವ ಆಸಕ್ತಿ, ಕೆಲವೇ ವರ್ಷದ ಮಿತ್ರರೊಬ್ಬರ ಬಗ್ಗೆ ತೋರಿದ ಸ್ನೇಹದ ಬದ್ಧತೆಯನ್ನು ಮನಮುಟ್ಟಿಸುತ್ತದೆ. ನಾವೂ ಕಣ್ಣೆದುರಿನಲ್ಲಿ ಆ ವ್ಯಕ್ತಿಗಳನ್ನು ನೋಡುತ್ತಿರುವಷ್ಟು ಆತ್ಮೀಯವಾಗಿ ಪರಿಚಯಿಸುತ್ತಾ ಹೋಗುತ್ತಾರೆ.
ಕಾರಂತರ ಕಾದಂಬರಿಯೇ ಇರಲಿ, ಪ್ರವಾಸ ಕಥನವೇ ಇರಲಿ ಅದರಲ್ಲಿ ಸೂಕ್ಷ್ಮತೆ, ಖಚಿತತೆಗೆ ಮೊದಲ ಸ್ಥಾನ. ಇಲ್ಲಿ ಯಶವಂತರ ಸಾಕುತಾಯಿ ಪಾರ್ವತಿ ಮತ್ತು ಆಕೆಯಂತೆಯೇ ಇರುವ ಒಂಟಿಜೀವ ಮೂಕಾಂಬುವರವರ ಚಿತ್ರಣ ನಮಗೆ ‘ಮರಳಿ ಮಣ್ಣಿಗೆ’ ನೆನಪನ್ನು ತರುತ್ತದೆ. ಚೊಚ್ಚಲು ಮನೆಯವರಲ್ಲಿ ಭಿನ್ನಾಭಿಪ್ರಾಯ ಬಂದು ದಾಯಾದಿ ದ್ವೇಷ ಬಲವಾಗಿ ಎರಡು ಭಾಗವಾಗುತ್ತಾರೆ. ಇಬ್ಬರ ನಡುವೆ ಆಣೆಭಾಷೆಗಳಾಗಿ ಒಬ್ಬರು ಇನ್ನೊಬ್ಬರನ್ನು ನೋಡದಂತಾಗುತ್ತಾರೆ. ದಶಕಗಳೇ ಕಳೆದರೂ ಪಾರ್ವತಿ, ಮೂಕಾಂಬು ಎರಡು ಹಿರಿಯ ಜೀವಗಳು ಇದರಿಂದಾಗಿ ನಲುಗಿಹೋಗುತ್ತಾರೆ. ಅಸಹಾಯಕರಾಗಿ ಉಳಿಯುತ್ತಾರೆ. ಇವರನ್ನು ಒಂದುಮಾಡಿದ ಸಾಹಸ ಕಾರಂತರದ್ದು. ಕಾರಣ ಇಬ್ಬರಿಗೂ ಪ್ರಿಯನಾಗಿದ್ದ ಯಶವಂತರು. ಪಾರ್ವತಿಗಾಗಿ ಅವರ ಸಾಕುಕೂಸು ಕಳುಹಿಸುತ್ತಿದ್ದ ಇಪ್ಪತ್ತೈದು ರೂಪಾಯಿನ ಬಹುಪಾಲು ಹಣವನ್ನು ಲಪಟಾಯಿಸಿ ಆಕೆಗೆ ಐದುರೂಪಾಯಿಗಳನ್ನು ಮಾತ್ರ ನೀಡುತ್ತಿದ್ದ ಶಂಭು ಹೆಗ್ಗಡೆಯನ್ನು ಇವರು ತಿದ್ದುತ್ತಾರೆ. ಅವನ ತಪ್ಪಿಗೆ ಪ್ರಾಯಶ್ಚಿತ್ತವೆಂಬಂತೆ ಅವನಿಂದಲೇ ಗುಡ್ಡೆ ಬೆನಕನ ಗುಡಿಯ ಪುನರ್ನಿರ್ಮಾಣದ ಕೆಲಸವನ್ನು ಮಾಡಿಸುವ ಕಾರಂತರ ಜಾಣ್ಮೆಯನ್ನು ಮೆಚ್ಚಲೇಬೇಕು. ಅಂತೂ ಪಾರ್ವತಿಯ ಅಂತಿಮ ಇಚ್ಛೆಯಾದ ಬೆನಕನಗುಡಿಯನ್ನು ಪುನರ್ನಿರ್ಮಿಸಿ ಆಕೆಗೆ ಸಂತೋಷವುಂಟುಮಾಡುತ್ತಾರೆ. ಅವಳಿಗೊಂದು ನೆಲೆಯೊದಗುವಂತೆ ಮಾಡಿದ ನಂತರ ನೆಮ್ಮದಿಯಿಂದ ಆಕೆ ಕಣ್ಮುಚ್ಚುತ್ತಾಳೆ.

ಹಾಗೇ ಯಶವಂತರ ಮಗಳು ಜಲಜಾಕ್ಷಿ, ಆಕೆಯ ವಾತರೋಗಪೀಡಿತ ಪತಿ ಮಂಜಯ್ಯ, ಅವರ ಮುದ್ದಾದ ಮಕ್ಕಳು ಯಶವಂತ, ಜಯಂತ, ಭಗವಂತರನ್ನು ಕಾಣುತ್ತಾರೆ. ಬಡತನದಲ್ಲೂ ಸುಸಂಸ್ಕೃತರಾಗಿ ಅಳಿದುಹೋದ ಯಶವಂತರ ಪ್ರೀತಿಪಾತ್ರರಾಗಿ ಪರಿಚಿತರಾಗುತ್ತಾರೆ. ಅವರ ಸಂಸಾರದ ಚಿತ್ರಣ ಅತ್ಯಂತ ಆತ್ಮೀಯವಾಗಿ ಮೂಡಿಬಂದಿದೆ. ಅವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಸ್ವಲ್ಪ ನೆರವನ್ನೂ ಕಾರಂತರು ತಮ್ಮಲ್ಲಿದ್ದ ಯಶವಂತರ ಹಣದಿಂದ ನೀಡುವ ವ್ಯವಸ್ಥೆಮಾಡುತ್ತಾರೆ. ಮಂಜಯ್ಯನವರಿಂದಲೇ ಯಶವಂತರ ಇನ್ನೊಂದು ಸಂಬಂಧದ ಧಾರೇಶ್ವರ ಸರಸಿ ಮತ್ತು ಅವಳ ಮಕ್ಕಳ ಬಗ್ಗೆ ಮಾಹಿತಿ ದೊರೆಯುತ್ತದೆ. ಸಂಸಾರದಲ್ಲಿ ಸಮರಸ ಕಾಣದ ಯಶವಂತರು ಸರಸಿಯ ಸಹವಾಸದಲ್ಲಿ ನೆಮ್ಮದಿ ಕಂಡುಕೊಂಡ ವಿಷಯವೂ ತಿಳಿಯುತ್ತದೆ. ಅವರಿಬ್ಬರ ಸಂಬಂಧ ಅನ್ಯರಿಗೆ ಅಕ್ರಮವೆನ್ನಿಸಿದರೂ ವಿವಾಹಿತ ದಂಪತಿಗಳಂತೇ ವ್ಯವಹರಿಸಿದವರು. ಆಕೆಯ ಅನನ್ಯ ನಿಷ್ಠೆಯ ಬಗ್ಗೆ ಯಶವಂತರ ದಿನಚರಿಯ ಕೊನೆಯ ಪುಟದಲ್ಲಿದ್ದ ವಿವರಣೆ ಮಹತ್ವದ್ದಾಗಿದೆ. ಯಶವಂತರ ಸ್ವಂತ ಮಗ ಸೀತಾರಾಮ ಹೆಗ್ಗಡೆ, ಮತ್ತವನ ತಾಯಿ ಕಮಲರನ್ನೂ ಭೇಟಿಯಾಗುತ್ತಾರೆ. ಅವರಿಬ್ಬರಿಗೂ ಯಶವಂತರು ಉಳಿಸಿ ಹೋಗಿರಬಹುದಾಗಿದ್ದ ಹಣದ ಬಗ್ಗೆ ತೋರುವ ಆಸಕ್ತಿ, ಅವರ ಬಗ್ಗೆ ಆಡುವ ಅಗೌರವದ ಮಾತುಗಳು ಅವರ ಸ್ವಾರ್ಥ, ಲಾಲಸೆಗಳನ್ನು ಎತ್ತಿತೋರುತ್ತವೆ. ಇಂತಹವರನ್ನು ಸಮರ್ಥಿಸಿಕೊಂಡು ಮಾತನಾಡುವ ಮುರ್ಡೇಶ್ವರ ವಕೀಲರು ಕಾರಂತರ ತಿರಸ್ಕಾರಕ್ಕೆ ಒಳಗಾಗುತ್ತಾರೆ.

ಧಾರೇಶ್ವರ ಸರಸಿಯ ಮಗಳು ಇಂದುಮತಿ, ಆಕೆಯ ಪತಿ ಕಾರಂತರ ಮನಸ್ಸನ್ನು ಗೆಲ್ಲುತಾರೆ. ಅವರು ಯಶವಂತರ ಬಗ್ಗೆ ಇಟ್ಟುಕೊಂಡಿದ್ದ ಪ್ರೀತಿ ವಿಶ್ವಾಸಗಳು ಇವರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಅಗ್ನಿಯ ಸುತ್ತ ಏಳುಸುತ್ತು ಬಂದು ದಂಪತಿಗಳಾದವರಲ್ಲಿ ಇಲ್ಲದ ನಂಟನ್ನು ಇವರಲ್ಲಿ ಕಾಣುತ್ತಾರೆ. ಆಕೆ ತನ್ನ ತಂದೆಯ ಭಾವಚಿತ್ರ ಪಡೆಯಲು ಉತ್ಸಾಹ ತೋರುತ್ತಾಳೆ. ಇಂದುಮತಿಯ ಈ ಕೋರಿಕೆಯನ್ನು ಈಡೇರಿಸಿದಾಗ ಆಕೆ ಸಂತೋಷಪಟ್ಟಷ್ಟೇ ಯಶವಂತರು ಮತ್ತು ಸರಸಿಯ ಭಾವಚಿತ್ರವನ್ನು ಬರೆಯಿಸಿದಾಗ ಕಾರಂತರೂ ಸಂತೋಷಿಸುತ್ತಾರೆ. ಧಾರ್ಮಿಕ ಗ್ರಂಥವೊದರ ರಚನೆಯಲ್ಲಿ ತೊಡಗಿದ ವಿಷ್ಣುಪಂತ ಘಾಟೆಯವರಿಗೆ ಯಶವಂತರು ಮಾತುಕೊಟ್ಟಂತೆ ಆ ಕೃತಿಯ ಪ್ರಕಟಣೆಗೆ ಕಾರಂತರು ನೆರವು ನೀಡುತ್ತಾರೆ.

ತಮಗೆ ಯಶವಂತರು ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕಾರಂತರು ಧನ್ಯರಾಗುತ್ತಾರೆ. ಇಂತಹ ಸನ್ಮಿತ್ರರನ್ನು ಪಡೆದ ಯಶವಂತರ ಆತ್ಮವೂ ನೆಮ್ಮದಿಯನ್ನು ಅನುಭವಿಸಿರಬಹುದು.
ಕಾದಂಬರಿಯ ಮುಕ್ತಾಯದ ವಾಕ್ಯಗಳಲ್ಲಿ “ಯಶವಂತರು ಎಲ್ಲ ವಿಧಗಳಲ್ಲೂ ತಾವು ಕೊಂಡುದಕ್ಕಿಂತ ಕೊಟ್ಟುದು ಕಡಿಮೆಯಾಗಿಲ್ಲ” ಎಂಬ ತೀರ್ಮಾನಕ್ಕೆ ಕಾರಂತರು ಬರುತ್ತಾರೆ. ಅದು ಅವರೊಬ್ಬರದೇ ಅಭಿಪ್ರಾಯವಲ್ಲ, ಓದುಗರೆಲ್ಲರ ಅಭಿಪ್ರಾಯವೂ ಅದೇ ಆಗಿದೆ ಎಂದು ಧ್ವನಿಗೂಡಿಸುವ ಅನುಭವವಾಗುತ್ತದೆ. ಇದೇ ಕಾದಂಬರಿಯ ಸಾರ್ಥಕತೆಯನ್ನು ಸಾರಿದೆ.

ಬಿ.ಆರ್.ನಾಗರತ್ನ, ಮೈಸೂರು

5 Comments on “ಕಾದಂಬರಿ: ‘ಅಳಿದ ಮೇಲೆ’ , ಲೇಖಕರು: ಡಾ.ಕೆ.ಶಿವರಾಮ ಕಾರಂತ.

  1. ಪ್ರಕಟಣೆಗಾಗಿ ಸುರಹೊನ್ನೆ..ಪತ್ರಿಕೆ ಯ ಸಂಪಾದಕರಿಗೆ ಹೃತ್ಪೂರ್ವಕವಾದ ಧನ್ಯವಾದಗಳು.

    1. ಈ ಕಾದಂಬರಿಯನ್ನು ಹಿಂದೊಮ್ಮೆ ಓದಿದ್ದೆ. ಪುನ: ನೆನೆಪಿಸಿದಿರಿ. ಧನ್ಯವಾದಗಳು

      1. ನಿಮ್ಮ ಪ್ರತಿಕ್ರಿಯೆ ಗೆ ಧನ್ಯವಾದಗಳು ಗೆಳತಿ ಹೇಮಾ

  2. ಅಳಿದ ಮೇಲೆ ಮತ್ತೊಮ್ಮೆ ಓದಿದಂತಾಯಿತು. ಕೃತಿಕಾರರ ಪರಿಚಯಮಾಡಿಸಿ, ಕೃತಿಯ ಪರಿಚಯ ಮಾಡಿಸಿರುವ ರೀತಿ ಇಷ್ಟ ವಾಯಿತು. ಶಿವರಾಮಕಾರಂತರ ಮೈಮನಗಳ ಸುಳಿಯಲ್ಲಿ ಕಾದಂಬರಿ ಪರಿಚಯಿಸಿ. ಹೆಣ್ಣಿನ ಮನಸ್ಸನ್ನು ಪದರಪದರವಾಗಿ ಬಿಚ್ಚಿಟ್ಟಿರುವ ಕಾದಂಬರಿಯದು..

  3. ಕಡಲತೀರದ ಭಾರ್ಗವ, ಸವ್ಯಸಾಚಿ ಕಾರಂತರ ಕಾದಂಬರಿಯ ವಿಮರ್ಶಾತ್ಮಕ ಅವಲೋಕನವು ಬಹಳ ಚೆನ್ನಾಗಿ ಮೂಡಿಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *