ಬದುಕಿನ ಸುಖವಾಗಲೀ ರುಚಿಯಾಗಲೀ ಬಹಳ ದೊಡ್ಡ ದೊಡ್ಡವುಗಳಲ್ಲಿ ಅಡಗಿರುತ್ತವೆಂಬುದು ಸುಳ್ಳು ಎಂಬುದನ್ನು ಸಾಬೀತು ಮಾಡುವುದರಲ್ಲಿ ಪುರಿ ಅಥವಾ ಮಂಡಕ್ಕಿಗೇ ಬಹುಶಃ ಪ್ರಥಮ ಸ್ಥಾನ! ಬರೀ ಬದುಕಿನ ಸುಖ ಮಾತ್ರವಲ್ಲ; ಬಡವರ ಸುಖವೂ!! ಏಕೆಂದರೆ ಕಡಲೇಪುರಿಯನ್ನು ಸವಿದ ಬಾಯಿಗೆ ಮನಸಿಗೆ ಆಗುವ ತತ್‌ಕ್ಷಣದ ಖುಷಿ ಇನ್ನ್ಯಾವ ಪಂಚಭಕ್ಷ್ಯ ಪರಮಾನ್ನದಿಂದಲೂ ದೊರಕದು. ಸುಲಭವೂ ಸರಳವೂ ಮಿತವ್ಯಯವೂ ಆದುದು ಇದು. ಹೆವೀ ಎನಿಸಿಕೊಂಡ ಫುಡ್ಡು ಬೇಡವೆನಿಸಿದಾಗಲೂ ಬೇಕೆಂಬ ಬಯಕೆ ತರುವ ಈ ಪುರಿಗೆ ಮನ ಸೋಲದವರು ಯಾರಿದ್ದಾರೆ? ತನು ಕರಗದವರು ಎಲ್ಲಿದ್ದಾರೆ?
ನಮ್ಮ ಬಾಲ್ಯಕಾಲದ ಕಡಲೇಪುರಿಯು ಇಂದು ಪಡೆದಿರುವ ನಾನಾ ರೂಪ, ನಮೂನೆಗಳೆಲ್ಲ ಹಿಂದೆ ಇರಲಿಲ್ಲ. ಬರೀ ಪುರಿ ಮುಕ್ಕುವುದರಲ್ಲಿ ನಮ್ಮ ಬಹುತೇಕ ಬಾಲ್ಯ ಕಳೆದಿರುವುದು ಸುಳ್ಳಲ್ಲ. ಚುರುಮುರಿ, ಬೇಲ್ ಪುರಿಗಳ ಹಲವು ಅವಸ್ಥಾಂತರಗಳು ನಮ್ಮ ಕಾಲದಲ್ಲಿ ಇರದೇ ಇದ್ದ ಸಂದರ್ಭದಲ್ಲೂ ನಾವುಗಳು ಎಂಟಾಣೆಗೆ ಕೊಡುವ ಕಡಲೇಪುರಿಯನ್ನು ದಂಡಿಯಾಗಿ ತಿಂದು ಸಾಕಷ್ಟು ನೀರು ಕುಡಿದು ದಿನಗಳನ್ನು ಕಳೆದದ್ದು ಇದೆ; ಏನೂ ತೋಚದೇ ಇದ್ದಾಗಲೂ ಪುರಿ ತಿಂದು ಕೈ ತೊಳೆದುಕೊಂಡಿದ್ದೂ ಇದೆ. ಇದು ಎಲ್ಲರ ಅನುಭವವೂ ಆಗಿದೆ. ಇಂದು ಸುಮ್ಮನೆ ಪುರಿ ತಿನ್ನುವುದಕಿಂತಲೂ ಹೆಚ್ಚಾಗಿ, ಅದನ್ನು ಬಳಸಿ ತಯಾರಿಸಿ ಕೊಡುವ ಹಲವು ಪುರಿ ಸಂಬಂಧಿತ ತಿಂಡಿ ತಿನಿಸುಗಳಿಗೇ ಬೇಡಿಕೆ. ಗರಿ ಗರಿ ಪುರಿಯನ್ನು ಹಾಗೇ ಮುಷ್ಟಿಯಳತೆಯಲ್ಲಿ ಸುರುವಿಕೊಳ್ಳುತ್ತಾ ಚಕಚಕನೆ ಉಪ್ಪು, ಎಣ್ಣೆ, ಖಾರದ ಪುಡಿ, ಈರುಳ್ಳಿ, ಟೊಮ್ಯಾಟೊ, ಮಾವಿನಕಾಯಿ ತುರಿ, ಕ್ಯಾರೆಟ್ ತುರಿಗಳನ್ನು ಹಾಕಿ ದೊಡ್ಡದಾದ ಡಬರಿಯಲಿ ಕಲಕಲನೆ ಕಲಸುತ್ತಾ ಚುರುಮುರಿ ತಯಾರು ಮಾಡಿ, ಮಿಂಚುವ ಕಾಗದ (ಗ್ಲೇಜ್ಡ್ ಪೇಪರ್) ವನ್ನು ಸುರುಳಿ ಮಾಡಿ, ಚಕ್ಕನೆ ಅದರಲ್ಲಿ ಸುರುವಿ, ಕೈಗೆ ಕೊಡುವ ಸ್ಪೆಷಲ್ ಚುರುಮುರಿ ಒಂದು ಕಡೆ ಲಕ್ಷುರಿ; ಇನ್ನೊಂದು ಕಡೆ ಸರಳಾತಿ ಸರಳ ಚಾಟ್ಸು. ಮಾಡಿಕೊಟ್ಟ ರೀತಿಯಲ್ಲೇ ಚಕಚಕನೆ ತಿಂದೆವೋ ಮುಗಿಯಿತು; ಇಲ್ಲದಿರ್ದೊಡೆ ಮೆತ್ತಗಾಗಿ ಚುರುಮುರಿಯ ರುಚಿಯೆಲ್ಲಾ ಮಂಗಮಾಯ. ಬೇರೆ ಬೇರೆ ಸ್ನಾಕ್ಸು, ಚಾಟ್ಸುಗಳಿಗಿಂತ ಚುರುಮುರಿ ಎಂಬುದು ಒಂದರ್ಥದಲ್ಲಿ ಸಂನ್ಯಾಸಿಯ ಆಹಾರ. ತಿನ್ನಲು ಕರೆದವರ ಜೊತೆಯಲ್ಲಿ ಬಂದಂತೆಯೂ ಆಯಿತು; ಅವರೊಂದಿಗೆ ʼಸೇಫ್ಟಿ ಫುಡ್ʼ ತಿಂದಂತೆಯೂ ಆಯಿತು. ಅದಕಾಗಿಯೇ ಪುರಿ ಎಂಬುದು ಬಡವಾಧಾರಿ; ಸರಳಾತಿ ಸರಳ ನಿರಾಭರಣ ಸುಂದರಿ!
“ಯಾವುದೋ ಭಟ್ಟಿಯಲ್ಲಿ ಯಾತರದೋ ಪಾತ್ರೆಗಳಲಿ ಹುರಿದು ಕೊಡುತ್ತಾರೆ, ಏನೇನೆಲ್ಲಾ ಮುಟ್ಟಿದ್ದ ಕೈಯಲ್ಲಿ ಮಾರುತ್ತಾರೆ” ಎಂಬ ಕಾರಣಕ್ಕಾಗಿ ನಮ್ಮಜ್ಜಿಯು ಕಡಲೇಪುರಿಯನ್ನು ಮನೆಗೆ ತರಲು ಅಡ್ಡಿ ಮಾಡುತ್ತಿದ್ದರು. ವರುಷಕ್ಕೊಮ್ಮೆ ಬರುವ ಆಯುಧಪೂಜೆಯಲ್ಲಿ ಮೈಸೂರಿನ ಶಿವರಾಮಪೇಟೆಯ ಅಕ್ಕಪಕ್ಕದ ಅಂಗಡಿಗಳವರು ಕೊಡುತ್ತಿದ್ದ ಖಾರಾಬೂಂದಿ ಮಿಶ್ರಿತ ಕಡಲೇಪುರಿಯ ರುಚಿಗೆ ಮೈಯ್ಯೆಲ್ಲಾ ಬಾಯಿ ಆಗುತ್ತಿದ್ದ ನನಗೆ ಅದೇ ಒಂಥರಾ ಅಮೃತ. ಷರಟಿನ ಜೇಬಿಗೆ ಹಾಕಿಕೊಂಡು ಒಂದೊಂದೇ ಪುರಿಕಾಳನ್ನೂ ಒಂದೊಂದೇ ಖಾರಾಬೂಂದಿಯ ಕಾಳನ್ನೂ ತಿನ್ನುತ್ತಾ ಅದರ ರುಚಿಯನ್ನು ಸವಿಯುತ್ತಾ ಇದ್ದರೆ ಅದು ಬಾಲ್ಯಕಾಲದ ಸ್ವರ್ಗ. “ಅದೇನ್ ಹಾಳೂಮೂಳು ತಿಂತಿರೋದು” ಎಂದು ನಮ್ಮಜ್ಜಿ ಕಣ್ಣಲ್ಲೇ ಗದರಿಸುವಾಗ “ಪುರಿ ಕಣಜ್ಜೀ” ಎಂದುಸುರುತ್ತಾ ಹಾರಿ ಜಗುಲಿ ಮೇಲೇರಿ ಅಲ್ಲಿಂದ ರಸ್ತೆಗೆ ಧುಮುಕಿ ಓಡಿ ಹೋಗುತ್ತಿದ್ದೆ. ಅವರ ಇನ್ನುಳಿದ ಬೈಗುಳಗಳು ನನಗೆ ಕೇಳಿಸುತ್ತಲೇ ಇರಲಿಲ್ಲ. “ಹಾಳಾದೋನು, ಎಲ್ಲೆಲ್ಲೋ ಹೋಗ್ತಾನೆ, ಏನೇನೋ ಸುಡುಗಾಡು ಸುಂಠಿ ತಿಂದು ಮೈಲಿಗೆಯಾಗುತ್ತಾನೆ” ಎಂದೇನೋ ಬಡಬಡಿಸುತ್ತಿದ್ದುದು ಈಗ ನೆನಪು. “ಕಡಲೇಪುರಿ ತಿಂದರೆ ಮೈಲಿಗೆಯೇ? ಜಾತಿ ಕೆಡುತ್ತದೆಯೇ?” ಎಂದು ನನ್ನಲ್ಲೇ ಪ್ರಶ್ನಿಸಿಕೊಳ್ಳುತ್ತಿದ್ದೆ. “ಅದೇನ್ ಹಾಳಾದ್ದು ಮಡಿ ಮಡಿ ಎನ್ನುತ್ತಾರೆಯೋ?” ಎಂದು ನಮ್ಮಜ್ಜಿ ಬಗ್ಗೆ ಸಿಟ್ಟೇ ಬರುತ್ತಿತ್ತು. ಪ್ರತಿ ಶುಕ್ರವಾರ ಟೈಲರ್ ಅಂಗಡಿಯವರು ಪೂಜೆ ಮಾಡಿ, ದೊಡ್ಡದಾದ ಪೇಪರ್ ಕವರಿನ ತುಂಬ ಕಡಲೇಪುರಿ, ಕಾಯಿ ಚೂರು ಹಾಕಿ ಟೇಬಲ್ ಮೇಲೆ ಇಟ್ಟಿರುತ್ತಿದ್ದರು. “ಬಾರೋ ಪ್ರಸಾದ ತೊಗೋ” ಎಂದು ಕೂಗುತ್ತಿದ್ದರು. ಅದು ನನ್ನ ಪಾಲಿನ ದಿವಿನಾದ ದೇವಲೋಕದ ಕರೆ! ಓಡಿ ಹೋಗಿ ಪುಟ್ಟ ಕೈಯಲ್ಲಿ ಚೆಲ್ಲುವಷ್ಟು ಎರಡೂ ಬೊಗಸೆ ತುಂಬಿಕೊಂಡು ಬರುತ್ತಿದ್ದೆ. ಒಂದೊಮ್ಮೆ ಅಲ್ಲಿಯೇ ಕುಳಿತು ತಿನ್ನುತ್ತಿದ್ದೆ.
ಒಂದಂತೂ ನಿಜ: ಪುರಿ ತಿನ್ನಲು ಹಸಿವೆಯೇ ಆಗಿರಬೇಕಿಲ್ಲ; ಹೊಟ್ಟೆಯ ಹಸಿವಿಗೂ ಪುರಿಗೂ ಸಂಬಂಧವಿಲ್ಲ. ಪುರಿ ತಿಂದರೂ ಊಟತಿಂಡಿಗೇನೂ ಕತ್ತರಿ ಬೀಳುತ್ತಿರಲಿಲ್ಲ. ಎಂಎ ವ್ಯಾಸಂಗ ಮಾಡುವಾಗ ಹೆಚ್ಚೂ ಕಡಮೆ ಐದಾರು ತಿಂಗಳು, ಮಧ್ಯಾಹ್ನದ ಊಟವಾಗಿ ಕಡಲೇಪುರಿ ತಿನ್ನುವಂಥ ದೌರ್ಭಾಗ್ಯ (ಇದು ಸೌಭಾಗ್ಯವೂ ಹೌದು!) ಎದುರಾದಾಗ ಮಾತ್ರ ಪುರಿಯು ಹಸಿವೆಯನ್ನು ನೀಗಿಸುವಲ್ಲಿ ʼದರಿದ್ರ ನಾರಾಯಣರ ದಿನಚರಿʼ ಎಂಬುದನ್ನು ಕಂಡುಕೊಂಡೆ. ಕಡಮೆ ಬೆಲೆಯಲ್ಲಿ ಮಧ್ಯಾಹ್ನದ ಹಸಿವೆಯನ್ನು ಹೋಗಲಾಡಿಸುವ ಶಕುತಿ ಇದ್ದುದು ಕಡಲೇಪುರಿಗೆ ಮಾತ್ರ. ಅದರಲ್ಲೂ ಸ್ಟಡಿ ಹಾಲಿಡೇಸ್ ಬಂದು ಮೂರ್ನಾಲ್ಕು ತಿಂಗಳು ಸಹಪಾಠಿಯ ಮನೆಯ ಹೊರಕೊಠಡಿಯಲ್ಲಿದ್ದು ಓದಿಕೊಳ್ಳಬೇಕಾಗಿ ಬಂದಾಗ ಕೈ ಹಿಡಿದಿದ್ದು ಈ ಪುರಿಯೇ. ನನ್ನಿಷ್ಟದ ಗರಿಗರಿ ಪುರಿಯನ್ನು ಮನಸಾರೆ ಹತ್ತು ಜನುಮಕಾಗುವಷ್ಟು ತಿಂದಿದ್ದು ಆವಾಗಲೇ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಈಗ ಪ್ರೊಫೆಸರಾಗಿರುವ ಸಹಪಾಠಿ ಸ್ನೇಹಿತ ಡಾ. ಜಿ ಪ್ರಶಾಂತನಾಯಕನು ತನ್ನ ಮೈಸೂರು ಮನೆಯಿಂದ ತಿಂಡಿ ತಿಂದು ಗ್ರೂಪ್ ಸ್ಟಡಿಗಾಗಿ, ತನ್ನ ಯಜ್ಡೀ ಬೈಕಿನಲ್ಲಿ ಬರುತ್ತಿದ್ದನು. ಸಂಜೆಯತನಕ ಜೊತೆಗಿದ್ದು ಓದಿಕೊಳ್ಳುತ್ತಿದ್ದನು. ಆಗ ನಮ್ಮ ಪಾಲಿನ ಮಧ್ಯಾಹ್ನದ ಆಹಾರವೇ ಈ ಕಡಲೇಪುರಿ. ಹತ್ತು ರೂಪಾಯಿಗೆ ಖಾರಾಬೂಂದಿ ಮತ್ತು ಪುರಿ ತಂದು ಮಿಕ್ಸು ಮಾಡಿಕೊಂಡು ಓದಿಗೆ ಬಿಡುವು ನೀಡಿ, ಹರಟೆ ಹೊಡೆಯುತ್ತಾ ಇಬ್ಬರೂ ತಿನ್ನುತ್ತಿದ್ದೆವು. ನಮ್ಮ ಸಖ್ಯವನ್ನು ಗಟ್ಟಿ ಮಾಡಿದ ಕಾಲವೂ ಅದಾಗಿತ್ತು. ಓದಿದ್ದನ್ನು ಮನನ ಮಾಡಿಕೊಂಡು, ಸಾಹಿತ್ಯಕ ಚರ್ಚೆ, ಸಂವಾದಗಳನ್ನು ನಡೆಸುತ್ತಿದ್ದೆವು. ಇದೆಲ್ಲಕ್ಕೂ ಕಡಲೇಪುರಿಯೇ ಸಕಲ ಸಾಕ್ಷಿಯಾಗಿತ್ತು.
ಒಂದು ರೀತಿಯಲ್ಲಿ ಹರಟೆ ಹೊಡೆಯಲು ಕಡಲೇಪುರಿಯು ಬಹಳ ಒಳ್ಳೆಯ ಸಾಥ್. ಅದರಲ್ಲೂ ಸಂಜೆ ಅಥವಾ ರಾತ್ರಿಯ ವೇಳೆ (ಊಟವಾಗಿರಲಿ; ಆಗದೇ ಇರಲಿ) ಐದಾರು ಮಂದಿ ಒಂದೆಡೆ ಕುಳಿತು ಅದೂ ಇದೂ ಮಾತಾಡುತ್ತಾ ನ್ಯೂಸ್ ಪೇಪರನ್ನು ಹಾಸಿಕೊಂಡು, ಪುರಿ ಹರವಿಕೊಂಡು ತಿನ್ನುತ್ತಾ ಇದ್ದರೆ ಬಹಳವೇ ಮಜ. ಖಾರ ಸೇವಿಗೆಯನ್ನೋ ಖಾರಾಬೂಂದಿಯನ್ನೋ ಜೊತೆಗೆ ಸೇರಿಸಿಕೊಂಡು ತಿಂದರಂತೂ ಬಾಯ್ಗೆ ಮೈಗೆ ಹಿತಾನುಭವ. ʼಆಡುವ ಮಾತುಗಳ ಸೊಗಸನ್ನು ಹೆಚ್ಚಿಸುವ ಪ್ರಸಾಧನ ಸಾಮಗ್ರಿʼ ಎಂದರೂ ಸರಿ. ಪುರಿಯು ಗರಿಯಾಗಿಲ್ಲದೇ ಇದ್ದಾಗ ಬಾಣಲೆಯಲ್ಲಿ ಹಾಕಿ ಒಂದೆರಡು ನಿಮಿಷ ಅತ್ತಿಂದಿತ್ತ ಆಡಿಸಿದರೆ ಸಾಕು, ಗರಿಯಾಗುತ್ತದೆ. ಆದರೂ ಭಟ್ಟಿಯಿಂದ ಅದಾಗಲೇ ತಂದು ತಿನ್ನುವ ತಾಜಾತನವೇ ಬೇರೆ. ಪುರಿಯೊಗ್ಗರಣೆಯಂತೂ ಒಂಥರದಲ್ಲಿ ಉಪಾಹಾರವಾಗಿ ಜನಪ್ರಿಯವಾಗಿದೆ. ಕಳೆದ ಬಾರಿ ಶಿವಮೊಗ್ಗೆಗೆ ಹೋದಾಗ, ಹೊಟೆಲೊಂದರಲ್ಲಿ “ಅವಲಕ್ಕಿ ಬಾತ್ ಇಲ್ಲ, ಅದರ ಬದಲಿಗೆ ಮಂಡಕ್ಕಿಯೊಗ್ಗರಣೆಯಿದೆ” ಎಂದಾಗ ಅದನ್ನೇ ತಿಂದು ಸಮಾಧಾನ ಮಾಡಿಕೊಂಡಿದ್ದಿದೆ. ಮನೆಯಲ್ಲೂ ನನ್ನ ತಾಯ್ತಂದೆಯರು ಅವಲಕ್ಕಿಗೆ ಬದಲು ಪುರಿಯೊಗ್ಗರಣೆ ಮಾಡಿ ತಿನ್ನಿಸುತ್ತಿದ್ದರು. ಮಾಡಿದಾಕ್ಷಣ ತಟ್ಟೆಗೆ ಹಾಕಿಕೊಂಡು ತಿಂದರೆ ಸರಿ; ಇಲ್ಲದಿದ್ದರೆ ಅದರಂಥ ನಾರು ಜಗತ್ತಿನಲ್ಲಿ ಇನ್ನಾವುದೂ ಇರುವುದಿಲ್ಲ. ತಿನ್ನುವುದಲ್ಲ; ಜಗಿಯಬೇಕಾಗುತ್ತದೆ; ಸ್ವಾರಸ್ಯವೆಲ್ಲಾ ಸೋರಿ ಹೋಗಿರುತ್ತದೆ. ಧಾರವಾಡದ ಕಡೆ ಈ ಮಂಡಕ್ಕಿಯನ್ನು ಬಳಸಿಕೊಂಡೇ ಗಿರ್‌ಮಿಟ್ ಸಿದ್ಧಪಡಿಸುತ್ತಾರೆ. ಈ ಗಿರ್ಮಿಟ್ ಎಂಬುದು ಮಂಡಕ್ಕಿಯಿಂದ ಮಾಡುವ ಇನ್ನೊಂದು ವಿಧದ ಚಾಟ್ಸು. ಕಡಲೇಪುರಿಯ ಬೋಂಡ ಎಂದು ಒಂದು ರೆಸಿಪಿ ನೋಡಿ ಹೌಹಾರಿದೆ! ಅಯ್ಯೋ, ಇದನ್ನೂ ಬಿಡಲಿಲ್ಲವಲ್ಲ, ಎಣ್ಣೆಗೆ ಹಾಕಿ ಕುಲಗೆಡಿಸುತ್ತಾರಲ್ಲ ಎಂದು ಬೇಸರಿಸಿದೆ ಕೂಡ. ಒಬ್ಬರು ಒಂದು ರೆಸಿಪಿ ಕಳಿಸಿದ್ದರು: ಆರೋಗ್ಯಕಾರಿ ಇಡ್ಲಿಯನ್ನು ಕಡಲೇಹಿಟ್ಟಿಗೆ ಅದ್ದಿ, ಎಣ್ಣೆಗೆ ಹಾಕಿ ಕರಿಯಬೇಕಂತೆ! ಹೆಸರು ಇಡ್ಲಿಬೋಂಡವಂತೆ!! ಅಯ್ಯೋ ಭಗವಂತ, ಈ ಎಣ್ಣೆಪ್ರಿಯರು ಅದೇನನ್ನು ಇನ್ನೂ ಹಾಳುಗೆಡವಲು ಹೊಂಚು ಹಾಕುತ್ತಿದ್ದಾರೋ, ಗೊತ್ತಿಲ್ಲ. ಇಷ್ಟು ದಿನ ಹಬೆಯಲ್ಲಿ ಬೆಂದ ಇಡ್ಲಿಯು ಆರೋಗ್ಯದಾಯಕ ಎಂದು ನಾವು ಅಂದುಕೊಂಡಿದ್ದನ್ನೆಲ್ಲ ಬದಲಿಸುವ ಉಮೇದು ಇಂಥವರಿಗೆ. ಇರಲಿ.
ಮಂಡಕ್ಕಿಯ ವಿಷಯಕ್ಕೆ ಮರಳುವುದಾದರೆ, ಅಕ್ಕಿಯ ಈ ಬೈ ಪ್ರಾಡಕ್ಟು ಇಷ್ಟೊಂದು ರುಚಿಯಾಗಿರಲು ಏನು ಕಾರಣ? ಎಂದು ನಾನು ಯಾವತ್ತೂ ಕೇಳಿಕೊಂಡಿಲ್ಲ. ಬರೀ ಪುರಿಯನ್ನು ತಿನ್ನುವಾಗಲೂ ಒಂಚೂರು ಕಾಯಿ ಬೆಲ್ಲವನ್ನು ನಂಚಿಕೊಳ್ಳುತ್ತಿದ್ದರೆ ರುಚಿಯಲ್ಲಿ ವ್ಯತ್ಯಾಸವಾಗಿ ದೇವರ ಪ್ರಸಾದವಾಗಿ, ಅನುಭವವು ಅನುಭಾವವಾಗಿ ಬಿಡುತ್ತದೆ! ಕೆಲವೊಂದು ಧಾರ್ಮಿಕ ಕ್ಷೇತ್ರಗಳಲ್ಲಿ ಕಡಲೇಪುರಿಯನ್ನು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿಟ್ಟು ಮಾರುತ್ತಿರುತ್ತಾರೆ. ಅದರಲ್ಲೂ ಬೆಟ್ಟಗುಡ್ಡಗಳ ಮೇಲಿರುವ ದೈವಧಾಮಗಳಲ್ಲಿ ಇದು ಸಹಜ. ಜನರು ಇದನ್ನು ಕೊಂಡು, ದಾರಿ ಮಧ್ಯೆ ಆಂಜನೇಯ ಸ್ವಾಮಿಗೆ ಆಹಾರ ಕೊಡುತ್ತಿದ್ದೇವೆಂದು ಬಗೆದು ಚೆಲ್ಲಿ ಹೋಗುತ್ತಾರೆ. ಇದೊಂದು ದುರಭ್ಯಾಸ. ಏಕೆಂದರೆ ಪುರಿಯ ಆಸೆಗೆ ಮಂಗಗಳು ರಸ್ತೆಗೆ ಬರುತ್ತವೆ; ವಾಹನಗಳಿಗೆ ಸಿಕ್ಕಿಕೊಂಡು, ಅಪಘಾತಕ್ಕೀಡಾಗಿ, ಜೀವ ಬಿಡುವ ಅಪಾಯವಿದೆ. ಕಡಲೇಪುರಿಯನ್ನು ಅಲ್ಲೆಲ್ಲಾ ಕಂಡಾಗ ಬೇಸರವಾಗುತ್ತದೆ. ಕೈಕಾಲು ಬಾಲ ಕಳೆದುಕೊಂಡ ಮಂಗಗಳು ನೆನಪಾಗಿ ವಿಷಾದನೀಯ ಎನಿಸುತ್ತದೆ. ನಮ್ಮ ಜನಕ್ಕೆ ಬುದ್ಧಿಯೇ ಬರುವುದಿಲ್ಲ; ಮುಂದಾಲೋಚನೆ ಮಾಡುವುದೇ ಇಲ್ಲ. ರಸ್ತೆಯಲ್ಲಿ ಚೆಲ್ಲಿ ಹೋಗುವರು; ಒಂದೊಂದೇ ಪುರಿಕಾಳನ್ನು ಹೆಕ್ಕಿಕೊಳ್ಳಲು ಮಂಗಗಳ ಮಂದೆಯು ರಸ್ತೆಯ ನಡುಮಧ್ಯೆ ಹಿಂಡು ಹಿಂಡಾಗಿ ಬರುತ್ತವೆ; ವಾಹನ ಸವಾರರಿಗಿದು ದೊಡ್ಡ ರಿಸ್ಕು. ಕಡಲೇಪುರಿಯ ವಿಚಾರದಲ್ಲಿ ಇದೊಂದು ಬೇಜಾರು. ತೀರ್ಥಕ್ಷೇತ್ರಗಳ ಅಂಗಡಿಯವರು ತಮ್ಮ ವ್ಯಾಪಾರವಾಗಲೆಂದು ಪುಸಲಾಯಿಸುವುದೇ ದುರಂತದ ಮೂಲ.
ಆದರೆ ನಾವೆಲ್ಲ ಒಟ್ಟಾಗಿ ಚಾಪೆ ಹಾಸಿಕೊಂಡು ಕುಳಿತು, ಪುರಿರಾಶಿಯಲ್ಲಿ ಕೈಯಾಡಿಸುವಾಗ ಎಲ್ಲಿದ್ದವೋ ಅಷ್ಟು ಹೊತ್ತು, ಒಂದೊಂದೇ ಇರುವೆಗಳು ಕಣ್ಣಿಗೆ ಕಾಣಿಸಿಕೊಂಡು ತಿನ್ನುವಾಗ ಅಲ್ಲಲ್ಲೇ ಬಿದ್ದ ಪುರಿಕಾಳನ್ನು ತಮ್ಮ ಗೂಡಿಗೆ ಎಳೆದುಕೊಂಡು ಹೋಗುವುದನ್ನೇ ನಾನು ತದೇಕ ನೋಡುತ್ತಿರುತ್ತೇನೆ. ಅವುಗಳ ಗೂಡು ಕಂಡು ಹಿಡಿದು, ತಿಂದ ಮೇಲೆ ಉಳಿವ ಅಷ್ಟೋ ಇಷ್ಟೋ ಒಂದು ಹಿಡಿ ಒಟ್ಟುರಾಶಿ ಮಾಡಿ ಅಲ್ಲಿಗಿಟ್ಟು ಬರುತ್ತೇನೆ. ಒಂದೊಂದೇ ಕಾಳನ್ನು ಎಳೆದುಕೊಂಡು ಹೋಗುತ್ತಿದ್ದ ಅವಕ್ಕೆ ಇದರಿಂದ ಪುರಿಮೂಟೆಯ ಲಾರಿಯೇ ಮಗುಚಿ ಬಿದ್ದಿತೇನೋ ಎಂಬಂತೆ ಭಾಸವಾಗಿರಬೇಕು; ಗೂಡಿನ ಒಳಹೊರಗಿದ್ದ ಎಲ್ಲವೂ ಒಂದಾಗುತ್ತವೆ. ಎಷ್ಟು ಸಾಧ್ಯವೋ ಅಷ್ಟೂ ಗೂಡಿನ ಒಳಗಿಳಿಸಿಕೊಳ್ಳಲು ಶತಪ್ರಯತ್ನ ಮಾಡುತ್ತವೆ. ಕೋವಿಡ್ ಸಮಯದಲ್ಲಿ ದಿನಸಿ ಪದಾರ್ಥವನ್ನು ನಾವು ಶೇಖರಿಸಿಟ್ಟುಕೊಳ್ಳಲು ಹೆಣಗಾಡಿದ್ದು ಸ್ಮರಣೆಗೆ ಬರುತ್ತದೆ. ಪಾಪ, ಅವುಗಳು ಕೂಡ ಆಹಾರ ದೊರೆತ ಭರದಲ್ಲಿ ಎಷ್ಟು ಸಾಧ್ಯವೋ ಅಷ್ಟೂ ಸಂಗ್ರಹಿಸಿಟ್ಟುಕೊಳ್ಳಲು ಒದ್ದಾಡುತ್ತವೆ.
ಬೇಸರ, ದುಃಖ, ಸಂತೋಷ ಏನೇ ಆಗಿರಲಿ, ಒಂದು ಹಿಡಿ ಕಡಲೇಪುರಿಯೇ ಮದ್ದು ಮತ್ತು ಒಂಥರಾ ಸಮಾಧಾನ. ಪುರಿ ತಿನ್ನುತ್ತಾ ಕುಳಿತವರನ್ನು ಜನರು ನೋಡುವುದೇ ಬೇರೆ; ಬಹಳ ವಿರಾಮವಾಗಿ ಯಾವುದೇ ಚಿಂತೆ, ಸಮಸ್ಯೆಗಳಿಲ್ಲದೇ ರಿಲ್ಯಾಕ್ಸಾಗಿದ್ದು ತಿನ್ನುತ್ತಾ ಖುಷಿಯಾಗಿದ್ದಾರೆಂದೇ ಭಾವಿಸುತ್ತಾರೆ; ಸಾಧ್ಯವಾದರೆ ತಾವೂ ಜೊತೆಯಾಗುತ್ತಾರೆ. ಒಂದು ಹಿಡಿ ತೆಗೆದುಕೊಂಡು ಮುಕ್ಕಲು ಶುರುಮಾಡುತ್ತಾರೆ. ಅದೂ ಇದೂ ಮಾತಾಡಲು ಹೊರಡುತ್ತಾರೆ. ಹಾಗಾಗಿ ಕಡಲೇಪುರಿಯು ಕೇವಲ ಹಗೂರವಾದ ಸರಳ ಸಾಮಾನ್ಯವಾದ ತಿನಿಸಾದರೂ ಜೀವ ಜೀವನದ ಸಂತಸ ಸಮಾಧಾನಿತ ನೆಲೆಯ ದ್ಯೋತಕ ಎಂದೇ ನಾನು ಬಗೆದಿದ್ದೇನೆ. ಹಾಗಂತ ಮನೆಗೆ ಬಂದ ನೆಂಟರಿಷ್ಟರಿಗೆ ಕಡಲೇಪುರಿ ತಿನ್ನಿಸುವುದು ಸಲ್ಲದು; ಅವರಿಗೇನಿದ್ದರೂ ರುಚಿಕರವಾದ ಪುಷ್ಕಳವಾದ ಬಗೆಬಗೆಯ ತಿಂಡಿಯೋ ಖಾದ್ಯವೋ ಆಗಬೇಕು. ಬೇಕಾದರೆ ಅಂಥ ಆತ್ಮೀಯರೊಂದಿಗೆ ಸಂಜೆಯ ವೇಳೆ ಕುಳಿತು ಹರಟೆ ಹೊಡೆಯುವ ವೇಳೆಯಲ್ಲಿ ಪುರಿಯನ್ನು ತಿನ್ನಬಹುದು. ಆದರೆ ಎಣ್ಣೆ ಪಾರ್ಟಿ ಮಾಡುವಂಥವರಿಗೆ ಇದು ಅಲರ್ಜಿ. ಅವರದೇನಿದ್ದರೂ ಬೇರೆಯದೇ ಬಗೆ. ಪುರಿಯ ಸಾಮ್ರಾಜ್ಯವೇನಿದ್ದರೂ ಅದಕ್ಕೆ ತದ್ವಿರುದ್ಧ. ಒಂಥರಾ ಆರೋಗ್ಯಸೂತ್ರ. ಹೆಚ್ಚೆಂದರೆ ಪುರಿ ತಿಂದು ನೀರು ಕುಡಿದು ಹೊಟ್ಟೆ ಸವರಿಕೊಳ್ಳುತ್ತಾ, ಅದು ಒಳಗಿನಾಳದಲ್ಲಿ ಅರಳುವಾಗ ನಿಡಿದಾದ ಉಸಿರು ಬಿಡುತ್ತಾ ಸಾಕಾಯ್ತು ಎನ್ನಬಹುದು; ಊಟ ಬೇಡ ಎನ್ನಬಹುದು. ಆದರೆ ತಿಂದ ಸ್ವಲ್ಪ ಹೊತ್ತಿನಲ್ಲಿಯೇ ಅದು ಜೀರ್ಣವಾಗಿ ಹಸಿವೆ ಆಗುವುದು ಖಂಡಿತ. ಏಕೆಂದರೆ ಅದರದು ಸರಳತಂತ್ರ ಮತ್ತು ಮಂತ್ರ.
ನಮ್ಮ ಮನೆಯಲ್ಲಿ ಊಟಕ್ಕೆಂದು ಕಡಲೇಬೇಳೆ ಚಟ್ನಿ ಮಾಡಿದ ದಿನಗಳಲ್ಲಿ ಅದು ಉಳಿದಿದ್ದರೆ ಸಂಜೆಯ ವೇಳೆ ಅಂಗಡಿಯಿಂದ ಪುರಿ ತಂದು ಚಟ್ನಿ ಬೆರೆಸಿ, ಒಂದು ಚಮಚೆ ಕಡಲೇಕಾಯಿ ಎಣ್ಣೆಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ ತಿನ್ನುವ ಪರಿಪಾಠವಿತ್ತು. ದಂಟಿನ ಸೊಪ್ಪಿನ ಚಟ್ನಿ ಮಾಡಿದ್ದ ದಿನದಲ್ಲೂ ಇದು ರಿಪೀಟಾಗುತ್ತಿತ್ತು. ನಮ್ಮ ಪಾಲಿನ ಸಂಜೆಯ ಸ್ನಾಕ್ಸು ಇದೇ ಆಗುತ್ತಿತ್ತು. ಆಗೆಲ್ಲಾ ಚಾಟ್ಸು, ಸ್ನಾಕ್ಸು ಸೆಂಟರುಗಳೂ ಇರುತ್ತಿರಲಿಲ್ಲ; ದುಡ್ಡು ಕೊಟ್ಟು ನಮ್ಮನ್ನು ಕಳಿಸುತ್ತಲೂ ಇರಲಿಲ್ಲ, ನಾವು ಹಾಗೆಲ್ಲಾ ಹೋಗಬೇಕೆಂದು ಹಟ ಸಹ ಮಾಡುತ್ತಿರಲಿಲ್ಲ. “ಬಡವಾ ನೀ ಮಡಗಿದ ಹಾಂಗಿರು” ಎಂಬುದೇ ಬದುಕಿನ ಸತ್ವವೂ ತತ್ತ್ವವೂ ಆಗಿತ್ತು. ಆ ಕಾಲದ ಮನುಷ್ಯರೂ ಅವರ ಮನಸುಗಳೂ ಇಂಥ ಕಡಲೇಪುರಿಯ ಹಾಗೆ ಮೆತ್ತಗೆ ಮತ್ತು ಸರಳ ಸಾಮಾನ್ಯವಾದ ಯಾರೂ ಓದಬಹುದಾದ ಹೊತ್ತಗೆಯಂತಿತ್ತು! ಪುರಿ ತಿನ್ನಲು ಕರೆದರೆಂದು ಯಾರೂ ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ. ಪುರಿಪಾರ್ಟಿಯೇ ನಮ್ಮ ಪಾಲಿನ ಬಹು ದೊಡ್ಡ ಈವೆಂಟಾಗಿತ್ತು. ಪುಟ್ಟವರಾಗಿದ್ದಾಗ ಪುರಿಕಾಳನ್ನು ತೆಗೆದುಕೊಂಡು ತುಟಿಗಳ ಮಧ್ಯೆ ಜೋಡಿಸಿಟ್ಟುಕೊಂಡು, ಕೋರೆಹಲ್ಲುಗಳ ರಾಕ್ಷಸ ಎಂದು ಫೋಸು ಕೊಡುತ್ತಾ, ನಮಗಿಂತಲೂ ಪುಟ್ಟವರಾಗಿದ್ದ ಮಕ್ಕಳನ್ನು ನಗಿಸುತ್ತಿದ್ದೆವು. ಅವುಗಳ ತುಟಿಗೂ ಜೋಡಿಸಿ, ಕನ್ನಡಿ ತಂದು ತೋರಿಸಿ, ತಮಾಷೆ ಮಾಡುತ್ತಿದ್ದೆವು. ಒಟ್ಟಿನಲ್ಲಿ ನಮ್ಮ ಬಾಲ್ಯವು ಬಹಳವೇ ಸುಂದರವಾಗಿತ್ತು; ಕಡಲೇಪುರಿಯಂತೆ ಬಹುಬಗೆಯಾಗಿ ಹರಡಿಕೊಂಡಿತ್ತು.
ಒಂದಂತೂ ನಿಜ: ನಮ್ಮ ಅಭ್ಯಾಸಗಳೂ ಹವ್ಯಾಸಗಳೂ ವಿದ್ಯುಚ್ಛಕ್ತಿಯಾವಲಂಬಿಯೋ ಎಲೆಕ್ಟ್ರಾನಿಕ್ ಸರಕು ಸಲಕರಣೆಗಳಲ್ಲಿಯೋ ನೆಲೆಯಾಗದ, ಬಂಧಿಯಾಗದ ದಿನಗಳವು. ಸಾಮಾಜಿಕವೂ ಸಮೂಹನಿಷ್ಠವೂ ಆಗಿದ್ದಂಥವು. ಎಲ್ಲರೊಡನೆ ಬೆರೆತು ಬದುಕಿದಂಥವು. ಈಗೋಯಿಸ್ಟಿಕ್ ಅಲ್ಲದ, ಹರ್ಟ್ ಎಂದರೇನೆಂದೇ ಗೊತ್ತಿಲ್ಲದ ಗುಂಪು. ಎಲ್ಲರೊಳಗೊಂದಾಗಿದ್ದ ದಿನಮಾನ. ಕಡಲೇಪುರಿ ಇದಕ್ಕೆಲ್ಲ ಸರ್ವ ಸಾಕ್ಷಿ. ಅದರಂತೆ ನಾವಿದ್ದೆವೋ ನಮ್ಮಂತೆ ಅದು ಇತ್ತೋ ಈಗ ಹಿಂದಕ್ಕೆ ಚಲಿಸಿ, ನೆನಪಿಸಿಕೊಂಡರೆ ಸಖೇದಾಶ್ಚರ್ಯವಾಗುವುದರಲ್ಲಿ ಸಂಶಯವೇ ಇಲ್ಲ. ಒಮ್ಮೊಮ್ಮೆ ಅಂಗಡಿಯಲ್ಲಿ ಇದ್ದ ಪುರಿಯು ಹಳೆಯದೆಂದೋ ಮೆತ್ತಗಾಗಿದೆಯೆಂದೋ ಅಂದಾಗ ಪುರಿಬಟ್ಟಿಗೇ ನೇರ ಹೋಗಿ ಅಲ್ಲಿಯೇ ಪುರಿಯನ್ನು ಕೊಳ್ಳುತ್ತಿದ್ದೆವು. ಮನೆಗೆ ತರುವಷ್ಟರಲ್ಲೇ ಕಾಲುಭಾಗ ಮುಕ್ಕಿರುತ್ತಿದ್ದೆವು; ರಸ್ತೆಯಲ್ಲಿ ನಡೆದುಕೊಂಡು ಬರುವಲ್ಲಿ ತಿನ್ನುವಾಗ ಬೀಸುವ ಗಾಳಿಗೆ ಅರ್ಧಂಬರ್ಧ ಹಾರಿ ಹೋಗುತ್ತಿದ್ದವು; ಅದಕಾಗಿ ಮನೆಯಲ್ಲಿ ಬಯ್ಯಿಸಿಕೊಳ್ಳುತ್ತಿದ್ದೆವು. ಯಾವ್ಯಾವುದೋ ಕೈಯೀ ಬಾಯೀ, ಎಂಜಲು ಮುಸುರೆ ಪರಿಜ್ಞಾನವಿಲ್ಲ. ಹಾಗೆಲ್ಲ ಬೀದಿಯಲ್ಲಿ ತಿಂದುಕೊಳ್ಳುತ್ತಾ ಬರಬಾರದು, ಸಭ್ಯತೆ ಅಲ್ಲ ಎಂದು ನೀತಿಪಾಠ ಹೇಳುತ್ತಿದ್ದರು. ಹಾಗೆ ಗಾಳಿಯಲ್ಲಿ ಹಾರಿ ಹೋದೀತೆಂಬ ಕಾರಣಕ್ಕಾಗಿ, ಪುರಿಯನ್ನು ಮುಕ್ಕುವ ಭರದಲ್ಲಿ ಇಡೀ ಮುಷ್ಟಿಯನ್ನೇ ಬಾಯಿಗೆ ಹಾಕಿಕೊಳ್ಳುತ್ತಿದ್ದೆವು; ಎಂಜಲು ಮಾಡಿ ತರಬೇಡಿ ಎಂದು ಮನೆಯಲ್ಲಿ ಹಿರಿಯರು ದೂರುತ್ತಿದ್ದುದು ಇದೇ ಕಾರಣಕ್ಕೆ. ನಾವೋ ಹುಡುಗರು, ನಮಗಾವ ಎಥಿಕ್ಸೂ ಫಿಸಿಕ್ಸೂ ಗೊತ್ತಿರಲಿಲ್ಲ. ಸುಮ್ಮನೆ ಹತ್ತೂಮಂದಿಯಂತೆ ಬೆಳೆದುಕೊಂಡು ಬರುತ್ತಿದ್ದೆವು.
ಕೆ ಆರ್ ನಗರದ ಸಾಲಿಗ್ರಾಮದ ಈರುಳ್ಳಿ ಬೆಳ್ಳುಳ್ಳಿ ಒಗ್ಗರಣೆ ಪುರಿ ಬಲು ಫೇಮಸ್ಸು. ಬೆಳ್ಳುಳ್ಳಿ ಬಳಕೆ ನಮ್ಮ ಮನೆಯಲ್ಲಿ ಇರಲಿಲ್ಲವಾದರೂ ತಿನ್ನುವಾಗ ಅದನ್ನು ಹೊರಗೆ ತೆಗೆದು ತಿನ್ನುವ ಅಭ್ಯಾಸ. ಏಕೆಂದರೆ ಅದರದು ಅಷ್ಟು ರುಚಿ. ಕೊಬ್ಬರಿ ತುಣುಕು, ಈರುಳ್ಳಿ ಬೆಳ್ಳುಳ್ಳಿ ಎಸಳು, ಒಣಮೆಣಸಿನಕಾಯಿ, ಕಡಲೇಬೀಜ ಮತ್ತು ಹುರಿಗಡಲೆಗಳ ಮಿಶ್ರಣ, ಸಾಸುವೆಯೊಗ್ಗರಣೆಯಲ್ಲಿ ಕರಿದು ಹಾಕಲಾಗುತ್ತಿತ್ತು. ಜೊತೆಗೆ ಅಡುಗೆ ಅರಿಷಿಣ. ಹಾಗಾಗಿ ಅದರ ಬಣ್ಣ ಕೂಡ ಹಳದಿ. ಸಾಲಿಗ್ರಾಮದಿಂದ ಮೈಸೂರಿನ ನಮ್ಮ ಮನೆಗೆ ಮೀಸೆ ರಾಮಸ್ವಾಮಯ್ಯ ಅನ್ನುವವರು ಬರುತ್ತಿದ್ದರು. ದೊಡ್ಡ ದೊಡ್ಡ ದಫ್ತರುಗಳನ್ನು ಹೊತ್ತು ತರುತ್ತಿದ್ದರು. ಅದೇನೋ ರೈಸ್ ಮಿಲ್ ಲೆಕ್ಕ ಎಂದು ಹೇಳುತ್ತಿದ್ದರು. ಇವರು ಬರುವಾಗ ತಪ್ಪದೇ ಸಾಲಿಗ್ರಾಮದ ಒಗ್ಗರಣೆ ಪುರಿ ತರುತ್ತಿದ್ದರು. ಕಡಲೆಪುರಿಯಲ್ಲಿ ಕಪ್ಪಗೆ ಕಾಣಿಸುತ್ತಿದ್ದ ಕರಿದ ಈರುಳ್ಳಿಯನ್ನು ಹೊರ ತೆಗೆದು ತಿನ್ನುವುದೇ ಆನಂದ. ತಿಂದು ಮುಗಿದ ಮೇಲೆ ತಳದಲ್ಲಿ ಉಳಿದಿರುತ್ತಿದ್ದ ಸಾಸುವೆ ಕಾಳನ್ನು ಸಹ ಬಿಡದೇ ಆರಿಸಿಕೊಂಡು ಬಾಯಿಗೆ ಹಾಕಿಕೊಳ್ಳುತ್ತಿದ್ದೆವು. ಕೆ ಆರ್ ನಗರದಲ್ಲೇ ವಾಸ ಮಾಡುವ ಸಮಯ ಬಂದಾಗ ಸಾಲಿಗ್ರಾಮಕ್ಕೇ ಹೋಗಿ ಅಲ್ಲಿ ಪುರಿಯನ್ನು ಖರೀದಿ ಮಾಡಿ ಬಂದೆನಾದರೂ ಬಾಲ್ಯಕಾಲದ ರುಚಿ ಮತ್ತೆ ಸಿಗಲೇ ಇಲ್ಲ. ಒಂದೆರಡು ಬಾರಿ ಮನೆಯಲ್ಲಿ ಅದೇ ರೀತಿ ಮಾಡಿದರಾದರೂ ಅದೇಕೋ ಆ ಮಾರಿಕೆಯ ರುಚಿ ಬರಲೇ ಇಲ್ಲ! ಈಗಲೂ ನನ್ನ ಜೀವನದ ಪರಮಸುಖಗಳಲ್ಲಿ ಒಂದು: ಮಳೆ ಬೀಳುವ ಒಂದು ಸಂಜೆಯ ವೇಳೆ ತಾಜಾ ಖಾರಾಬೂಂದಿಯೊಂದಿಗೆ ಗರಿ ಗರಿ ಕಡಲೇಪುರಿಯನ್ನು ಬೆರೆಸಿಕೊಂಡು, ಒಂದು ಬೌಲ್ಗೆ ಹಾಕಿಕೊಂಡು ಮಳೆ ನೋಡುತ್ತಾ ತಿನ್ನುವುದು! ಇದು ಕೊಡುವ ಸುಖವು ಇಂದ್ರನ ಅಮರಾವತಿಯಲ್ಲೂ ಬಹುಶಃ ಸಿಗಲಿಕ್ಕಿಲ್ಲ.
ಇನ್ನು ಇಡ್ಲಿ, ದೋಸೆಗಳಿಗಾಗಿ ಅಕ್ಕಿ, ಉದ್ದಿನಬೇಳೆ ನೆನೆ ಹಾಕಿ, ರುಬ್ಬಿ ಹುದುಗು ಬರಿಸುವಾಗ ಒಂದು ಹಿಡಿ ಅವಲಕ್ಕಿ ಹಾಕುತ್ತಿದ್ದರು. ಅವಲಕ್ಕಿ ಇಲ್ಲದಿದ್ದಾಗ ಅಂಗಡಿಯಿಂದ ತಂದು ಮೆತ್ತಗಾಗಿದ್ದ ಕಡಲಪುರಿಯನ್ನೇ ಬಳಸುತ್ತಿದ್ದರು. ದಾವಣಗೆರೆ ಬೆಣ್ಣೆದೋಸೆಯ ಸಂಪಣ ತಯಾರಿಸುವಾಗ ಸ್ವಲ್ಪ ಮಂಡಕ್ಕಿ ಸೇರಿಸುತ್ತಾರಂತೆ. ಹಾಗಾಗಿ, ಪುರಿಯು ಸರ್ವಜ್ಞನೂ ಸರ್ವಶಕ್ತನೂ ಸರ್ವಾಂತರ್ಯಾಮಿಯೂ ಅಹುದು, ನಮ್ಮ ಭಗವಂತನಂತೆ! ಎಂದು ಹೇಳಲು ಹಿಂದೇಟು ಹಾಕಬೇಕಿಲ್ಲ. ಒಮ್ಮೆ ಭೂಲೋಕಕ್ಕೆ ಬಂದ ಶಿವನು ವೇಷ ಮರೆಸಿಕೊಂಡು ತನ್ನ ಭಕ್ತರನ್ನು ಪರೀಕ್ಷೆ ಮಾಡಲೆಂದು ಚರಿಗೆಗೆ ಹೊರಟನಂತೆ. ಮನೆಯ ಹೆಂಗಸರು ವಿಧವಿಧವಾದ ಹಿಟ್ಟುಗಳನ್ನು ತಂದು ಬಟ್ಟೆಯ ಜೋಳಿಗೆಗೆ ಹಾಕುತ್ತಿದ್ದರಂತೆ. ಈ ಸಂನ್ಯಾಸಿಯು ತಿನ್ನಲು ಏನಾದರೂ ಕೊಡಿ ಎಂದು ಕೇಳಲಾಗಿ ಒಂದು ಮನೆಯ ಮುತ್ತೈದೆಯು ಮೆತ್ತಗಾಗಿ ಹೋಗಿದ್ದ ಒಗ್ಗರಣೆಯ ಪುರಿಯನ್ನು ತಂದಾಗ ಅದು ಗರಿಗರಿಯಾಗಿಲ್ಲ ಎಂದು ಶಿವನಿಗೆ ಗೊತ್ತಾಗಿ ಹೋಯಿತಂತೆ. “ಏನಮ್ಮಾ, ತಂಗಳು ಪುರಿಯನ್ನು ತಂದು ಸುರುವುತ್ತಿದ್ದೀರಿ, ಸ್ವಲ್ಪ ಬೆಚ್ಚಗೆ ಮಾಡಿಕೊಡಿ” ಎಂದು ಗೋಗರೆದಾಗ ಆಕೆಗೆ ಸಿಟ್ಟೇ ಬಂದಿತಂತೆ. “ಏನೋ ಸನ್ನೇಸಿ ಅಂತ ತಿರುಗೋ ಭಿಕ್ಷುಕನಿಗೆ ತಿನ್ನಲು ಏನೋ ಕೊಟ್ಟರೆ ಧಿಮಾಕು ಮಾಡುತ್ತೀಯಾ? ನಿನ್ನ ದೈವ ಭಕ್ತಿಯಿಂದ ನೀನೇ ಬಿಸಿ ಮಾಡಿಕೋ” ಎಂದು ರೇಗಿದಳಂತೆ. ಶಿವನು ನಕ್ಕು, ಆಗಲಮ್ಮಾ ಎಂದು ಹೇಳಿ, ಬೊಗಸೆಯೊಡ್ಡಿದನಂತೆ. ಪುರಿಯನ್ನು ಕೈಗೆ ಸುರಿಯುವಾಗಲೇ ಅದು ತನ್ನ ತಾಜಾತನದಿಂದ ಒಂದಕ್ಕೊಂದು ತಾಗಿ ಶಬ್ದ ಮಾಡಿತಂತೆ.
ಇದರಿಂದ ಚಕಿತಗೊಂಡ ಆಕೆಯು ಸಂನ್ಯಾಸಿಯ ಬೊಗಸೆಯಿಂದಲೇ ಒಂಚೂರು ಪುರಿಕಾಳನ್ನು ತೆಗೆದುಕೊಂಡು ಬಾಯಿಗೆ ಹಾಕಿಕೊಂಡರೆ ಪವಾಡವೇ ಸಂಭವಿಸಿತ್ತಂತೆ. ಬಿಸಿಬಿಸಿ ಪುರಿಯು ಖರಮ್ ಖುರಮ್ ಎಂದು ಶಬ್ದ ಮಾಡಿತಂತೆ. ಸಂನ್ಯಾಸಿಯ ಬೊಗಸೆಯ ಬಿಸಿಗೆ ಪುರಿಯು ಗರಿಗರಿಯಾಗಿ ಮಾರ್ಪಟ್ಟಿತ್ತಂತೆ! ಇವನಾರೋ ದಿವ್ಯಪುರುಷನೇ ಸರಿ ಎಂದು ಕೈ ಮುಗಿದು ಪೊಡಮಟ್ಟು ತಪ್ಪಾಯಿತೆಂದು ಗೋಗರೆದಳಂತೆ. ಆಗಲೂ ಶಿವನು ನಸು ನಕ್ಕು, ತನ್ನ ಮೂಲವೇಷವನ್ನು ಬಯಲು ಮಾಡದೇ ಆಶೀರ್ವಾದ ಮಾಡಿ ಹೊರಟು ಬಿಟ್ಟನಂತೆ. ಆಕೆಯು ಮನೆಯ ಒಳಗೆ ಬಂದು ನೋಡಲಾಗಿ ಗರಿಗರಿಯಾದ ಪುರಿಯ ಮೂಟೆಯೇ ಮೂಲೆಯಲ್ಲಿ ಕುಳಿತು ಕೈ ಬೀಸಿ ಕರೆಯಿತಂತೆ. ಆ ಕಡಲೇಪುರಿಯ ದಿವಿನಾದ ರುಚಿಗೆ ಮನಸೋತ ಶಿವನು ಪುರಿಮೂಟೆಯನ್ನೇ ಆಕೆಗೆ ಕಾಣಿಕೆಯಾಗಿ ಕೊಟ್ಟು ಹೋಗಿದ್ದನಂತೆ. ಕೈಲಾಸವಾಸಿಗೂ ಪುರಿಯ ರುಚಿ ಪ್ರಿಯವೆನಿಸಿದ ಈ ಕತೆಯು ಕಡಲೇಪುರಿಯ ಮಹತ್ವವನ್ನೂ ಬಡವರ ಮನೆಯ ಅಭಿರುಚಿಯನ್ನೂ ಒಟ್ಟೊಟ್ಟಿಗೆ ಸಾರುವಂಥದು. ಇಂಥವು ನಮ್ಮ ಜನಪದ ಕಥಾ ಪರಂಪರೆಯಲ್ಲಿ ನೂರಾರಿವೆ. ಅವೆಲ್ಲ ಜನಸಾಮಾನ್ಯರ ಸರಳಾತಿ ಸರಳ ಆಹಾರದ ಬಗೆಗಳನ್ನು ಅನಾವರಣ ಮಾಡಿವೆ. ಆಹಾರದಂತೆ ನಾವೋ, ನಮ್ಮಂತೆ ಆಹಾರವೋ ಒಟ್ಟಿನಲ್ಲಿ ಕಡಲೇಪುರಿಯು ತನ್ನ ಬೆಳ್ಳಗಿನ ಬೆಳಗುವ ಗುಣದಿಂದ ಸರ್ವರಿಗೂ ಪ್ರಿಯವೆನಿಸಿರುವುದು ಸತ್ಯಸ್ಯ ಸತ್ಯ.

–ಡಾ. ಹೆಚ್ ಎನ್ ಮಂಜುರಾಜ್,ಮೈಸೂರು







ಗರಿಗರಿ ಕಡಲೇಪುರಿ ಲೇಖನ ಬಹಳ ಚೆನ್ನಾಗಿ ಅನಾವರಣಗೊಂಡಿದೆ ಜೊತೆಗೆ ನಮ್ಮ ಬಾಲ್ಯದ ನೆನಪುಗಳು ಕಣ್ಣಮುಂದೆ ಬಂದಿತು ನನ್ನಮ್ಮ ನಾವು ಶಾಲೆ ಮುಗಿಸಿಕೊಂಡು ಸಂಜೆ ಮನೆಗೆ ಬಂದಾಗ..ನಮಗೆ ಕೊಡುತ್ತಿದ್ದ ತಿನಿಸುಗಳಲ್ಲಿ ಬಹುತೇಕ ಇದೇ.. ದಂಡಿಗೆ ಒದುಗುತ್ತಿದ್ದುದು ಇದೇ….ಈಗಲೂ ಸಂಜೆ ನನ್ನ ಅನ್ನದಾತರಿಗೆ ಇದೇ ಇಷ್ಟ ವಾದ ತಿನಿಸು ಬೇರೆ ಬೇರೆ ಅವತಾರದಲ್ಲಿ.. ಸಾರ್..
ಪುರಿ ಸರ್ವರಿಗೂ ಪ್ರಿಯವಾದ ತಿನಿಸು. ಅದರಿಂದ ಮಾಡುವ ಬಗೆಬಗೆಯ ತಿಂಡಿಗಳು ಸಾಯಂಕಾಲ ದ ಹಸಿವು ತಣಿಸುತ್ತಿದ್ದವು. ಕಾದಂಬರಿ ಓದುತ್ತಾ ಖಾರಾಪುರಿ ಸವಿಯುತ್ತಿದ್ದ ದಿನಗಳನ್ನು ನೆನಪಿಗೆ ತಂದ ತಮ್ಮ ಲೇಖನ.ಸೊಗಸಾಗಿದೆ ಸರ್
ಶರಣ್ರೀ ಸರ… ಕಡಲೆ ಪುರಿಯಲ್ಲೂ ಅದೆಷ್ಟು ವೆರೈಟಿ ಲೇಖನ ಕೊಟ್ರಿ. Excellent.
ಕಡಲೆ ಪುರಿಯ ಅವಲೋಕನ ಚೆನ್ನಾಗಿ ಮೂಡಿ ಬಂದಿದೆ ಗುರುಗಳೇ.. ಶುಭವಾಗಲಿ
ನಿನ್ನ ಲೇಖನಕ್ಕೊಂದು ಸಲಾಮು. ಲೇಖನ ಚೆನ್ನಾಗಿದೆ. ಓದಿ ಮುಗಿಸುತ್ತಿದ್ದಂತೆಯೇ ಸ್ಪೂರ್ತಿಗೊಂಡ ನಾನು ಅಡುಗೆ ಮನೆಗೆ ಧಾವಿಸಿ, ಒಂದು ವಾರದ ಹಿಂದೆ ತಂದಿದ್ದ ಕಡಲೆ ಪುರಿಯನ್ನು ಹದವಾಗಿ ಬಿಸಿಯಾಗಿಸಿ, ಕಡಲೆಕಾಯಿ, ಹುರಿಗಡಲೆ, ಒಣಕೊಬ್ಬರಿ, ಹುರಿದು ಕೆಂಪು ಮೆಣಸಿನಕಾಯಿ ಹಾಕಿ ಅದರೊಟ್ಟಿಗೆ ಚಿಟಿಕೆ ಉಪ್ಪು ಅಚ್ಚಮೆಣಸಿನಪುಡಿ, ಅರಿಷಿನ, ಸೋಂಪು, ಜೀರಿಗೆ, ಸಕ್ಕರೆ ಹಾಕಿ ಮೊದಲೇ ಬಿಸಿಮಾಡಿದ್ದ ಪುರಿಯನ್ನು ಹಾಕಿ ಎರಡು ಸಲ ಮೊಗಚಿ ಒಗ್ಗರಣೆ ಪುರಿ ಸಿದ್ದಮಾಡಿ, ಒಂದು ಪ್ಲೇಟಿಗೆ ಹಾಕಿ ಮೇಲೊಂಚೂರು ಈರುಳ್ಳಿ ಚೂರುಗಳನ್ನು ಹಾಕಿ ಮಗನಿಗೆ ಕೊಟ್ಟೇಬಿಟ್ಟೆ!
ಪಾಪ ಬೆಳಗಿನಿಂದ ಕತ್ತು ಬಗ್ಗಿಸಿ ಕೆಲಸ ಮಾಡುತ್ತಿದ್ದ ಮಗನಿಗೆ ಈ ತರವೂ ಸ್ನ್ಯಾಕ್ಸು ಸಿಗುತ್ತದೆ ಎಂಬ ಅರಿವಿರಲಿಲ್ಲ.
ಇದಕ್ಕೆಲ್ಲಾ ನಿಮ್ಮ ಮಾವನ ಕಡಲೆಪುರಿ ಲೇಖನವೇ spoorthiiiiiiiiiiii ಎಂದೆ.
ಹಿಂದೆ ಹುಣಸೂರಿನಲ್ಲಿ ನಮ್ಮ ಮನೆಯ ಮುಂದೆ ಪುರಿ ಭಟ್ಟಿಯೇ ಇತ್ತು. ನಮ್ಮಮ್ಮ ಇದೇ ತರಹ ಮಾಡಿಡುತ್ತಿದ್ದರು.
ಒಟ್ಟಾರೆ ಈ ಲೇಖನದೊಂದಿಗೆ ನಾನು ಗರಿಗರಿ ಕಡಲೆ ಪುರಿನೂ ತಿಂದು ಮುಗಿಸಿದ್ದಾಯ್ತು. ಹೊರಗೆ ಜಿಟಿ ಜಿಟಿ ಮಳೆಗೆ ಒಂದೊಳ್ಳೆಯ ಕಾಂಬಿನೇಷನ್ನು.
ನಮ್ಮಣ್ಣನಿಗೊಂದು Thanks.
ಗರಿಗರಿಯಾದ, ಪುರಿಗೆ ಮನಸೋಲದವರಿಲ್ಲ..ಚೆಂದದ ಬರಹ.
ಚುರುಮುರಿಯಷ್ಟೇ ರುಚಿಕಟ್ಟಾದ ಲೇಖನ.
ಧನ್ಯವಾದಗಳು Sir
ನಮ್ಮೂರಲ್ಲಿ ಹುರಿಯಕ್ಕಿ ಎಂಬ ನಾಮ ಪಡೆದ ಪುರಿಯು ನಮ್ಮೂರಲ್ಲಿ ಜಾತ್ರೆಗದ್ದೆಯ ರಾಜ! ಮಾವಿನಕಾಯಿ ತುರಿ, ತೆಂಗಿನೆಣ್ಣೆ, ಟೊಮೆಟೊ, ಈರುಳ್ಳಿ, ನೆಲಗಡಲೆ, ಖಾರಪುಡಿ ಬೆರೆಸಿ ಮಿನಿಟಿನೊಳಗೆ ತಯಾರಿಸಿ ಕೈಗೆ ನೀಡುವ ಚಾಕಚಕ್ಯತೆಯು ನಮ್ಮನ್ನು ಬೆರಗುಗೊಳಿಸುತ್ತದೆ್! ಖಾರ ಕಂಡರೆ ಮಾರು ದೂರ ಓಡುವ ನನಗೆ, ಏನೂ ಸಂಕೋಚವಿಲ್ಲದೆ ಖಾರಪುಡಿ ಹಾಕದೆ ಮಾಡಲು ಹೇಳಿದರೂ, ಅವರು ಕೊಟ್ಟುದನ್ನು, ಖಾರದ ತೀವ್ರತೆಗೆ ಕಣ್ಣು ಬಾಯಿಯಲ್ಲಿ ನೀರು ಸುರಿಸುತ್ತಾ ಸವಿಯುವುದು ರೂಢಿಯಾಗಿಬಿಟ್ಟಿದೆ ಬಿಡಿ…
ಶಿವನಿಗೆ ಪ್ರಿಯವಾದ ಗರಿಗರಿ ಪುರಿ ಕಥೆ ಚೆನ್ನಾಗಿದೆ.