(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮದ್ಯಪಾನದ ಸುತ್ತ ; ಬಂಧನಗಳ ಹುತ್ತ
ಒಟ್ಟಿನಲ್ಲಿ ಧರ್ಮ, ದೇವರು ಎಂಬವು ಅಫೀಮಿನಂತೆ ಎಂದ ಕಾರ್ಲ್‌ಮಾರ್ಕ್ಸ್‌ನು ನಶೆಯೇರುವ ಪದಾರ್ಥಕ್ಕೆ ಹೋಲಿಸಿ, ಧರ್ಮವನ್ನು ಕೆಳಗಿಳಿಸಿದನೋ, ನಶಾ ಪದಾರ್ಥವನ್ನು ಮೇಲೇರಿಸಿದನೋ? ಅಂತೂ ಎಡಪಂಥೀಯರಿಗೆ ಮಾರ್ಕ್ಸ್ ಸಹ ನಶೆಯೇರಿಸುವವನೇ. ವಿಚಾರವಾದದ ಅಮಲಿನಲ್ಲಿ ಹೊರಳಾಡುವ ಅಕಡೆಮಿಶಿಯನ್ನುಗಳು ಹೋದಲ್ಲಿ ಬಂದಲ್ಲಿ ದೂರುವುದು, ಟೀಕಿಸುವುದು, ಬಯ್ಯುವುದು, ಬಹುಸಂಖ್ಯಾತರ ಆಚಾರ ನಂಬಿಕೆಗಳನ್ನು ಹೀಯಾಳಿಸುವುದು ಇವೆಲ್ಲಕೂ ಅವರು ಸಂಜೆ ವೇಳೆ ನಡೆಸುವ ಗುಂಡುಪಾರ್ಟಿಗಳ ಕರಾಮತ್ತು ಸಹ ಕಾರಣ ಎಂಬುದು ನನ್ನ ಬಲವಾದ ಅಭಿಮತ. ಅದರಲ್ಲೂ ಸಾರ್ವಜನಿಕ ಜೀವನದಲ್ಲಿ ಇರುವ ಹಲವರು ವಾರಕ್ಕೊಮ್ಮೆಯಾದರೂ ಇಂಥ ಪಾರ್ಟಿಗಳನ್ನು ನಡೆಸಬೇಕಾದ ಅಗತ್ಯವನ್ನು ಮನಗಂಡಿರುವವರೇ. ಏನಾದರೂ ಗುಪ್ತ ಸಭೆಗಳನ್ನು ನಡೆಸುವಾಗ, ಅನ್ಯಪಕ್ಷದಲ್ಲಿರುವವರನ್ನು ಸ್ವಪಕ್ಷಕ್ಕೆ ಸೆಳೆಯುವಾಗ, ಭಿನ್ನಮತೀಯ ಚಟುವಟಿಕೆಗಳಿಗೆ ನೀರೆರೆಯಬೇಕಾದಾಗ ‘ಗುಂಡುಮೇಜಿನ ಪರಿಷತ್ತು’ ಮಹತ್ವದ ಪಾತ್ರ ವಹಿಸುತ್ತದೆ. ಇಂಥ ರಹಸ್ಯ ಸಭೆಯಲ್ಲಿ ಭಾಗಿಯಾಗಿ ಗುಂಡೇರಿಸುವ ಗುಂಡೂರಾಯರುಗಳು ಅಭಯ ನೀಡಿ, ವಚನ ಕೊಟ್ಟು, ಖೆಡ್ಡಾಕ್ಕೆ ಬೀಳುತ್ತಾರೆ. ಅವರವರ ಯೋಗ್ಯತೆ, ಅರ್ಹತೆ ಮತ್ತು ಹಣಕಾಸಿನ ಅಂತಸ್ತುಗಳಿಗೆ ಅನುಗುಣವಾಗಿ ಕುಡಿಯುವವರನ್ನೂ ಕುಡಿಯುವುದನ್ನೂ ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಭ್ರಷ್ಟರೂ ಲಂಚಕೋರರೂ ಆದವರು ನಿರಾಯಾಸವಾಗಿ ಇಂಥ ಮದ್ಯಸೇವನೆಗೆ ನೀರಿನಂತೆ ಖರ್ಚು ಮಾಡುವುದನ್ನು ಎಲ್ಲರೂ ಬಲ್ಲರು. ಕಷ್ಟಪಟ್ಟು ಸಂಪಾದಿಸಿದ್ದಲ್ಲವಾದ್ದರಿಂದ ‘ಹಾಲಿನ ದುಡ್ಡು ಹಾಲಿಗೆ; ನೀರಿನ ದುಡ್ಡು ನೀರಿಗೆ’ ಎಂಬ ಮಾತಿನಂತೆ, ವಾಮಮಾರ್ಗದಿಂದ ಕಸಿದುಕೊಂಡಿದ್ದನ್ನು ಹೀಗೆ ಹೆಂಡದ ಪಡಖಾನೆಗೆ ಸುರಿಯುವರು.
ಮೈ ಕೈ ಮುರಿದು, ಬೆವರು ಹರಿಸಿ, ಬಿಸಿಲು ಮಳೆ ಎನ್ನದೇ ಕಷ್ಟಪಟ್ಟು ದುಡಿದು ಸಂಪಾದಿಸಿದ ಶ್ರಮಪೂರ್ವಕ ಸಂಪಾದನೆಯನ್ನೂ ಈ ಆಲ್ಕೋಹಾಲಿಗೆ ಸುರಿಯುವ ಮಂದಿ ಒಂದೆಡೆ. ಅಕ್ರಮ, ಅನೀತಿ, ಭ್ರಷ್ಟಾಚಾರಗಳಿಂದ ಅನಾಯಾಸ ಬಂದ ಹಣವನ್ನು ಆಲ್ಕೋಹಾಲಿಗಾಗಿಯೇ ವ್ಯಯಿಸುವ ಮಂದಿ ಇನ್ನೊಂದೆಡೆ; ಇದು ನನಗೆ ನುಂಗಲಾರದ ತುತ್ತು. ಬಡತನ-ಸಿರಿತನ, ಅಧಿಕಾರಿ-ನೌಕರ, ಹೆಣ್ಣು-ಗಂಡು, ಮೇಲ್ಜಾತಿ-ಕೆಳಜಾತಿ ಎಂಬಂಥ ಯಾವ ತರತಮಗಳಿಲ್ಲದೇ ಸರ್ವವ್ಯಾಪಕವೂ ಸರ್ವಾಂತರ್ಯಾಮಿಯೂ ಆದುದು ಈ ಆಲ್ಕೋಹಾಲು! ಇದು ಬೆಸೆಯುವ ಮಿತ್ರಸಮ್ಮಿತವು ಅಗಾಧ, ಅನೂಹ್ಯ ಮತ್ತು ಅಪಾರ! ಕುಡಿಯುವವರದೇ ಒಂದು ಸ್ನೇಹತಂತು. ಜೊತೆಯಲ್ಲಿ ಕುಳಿತು ಕುಡಿಯವವರದೇ ಒಂದು ಆಪ್ಯಾಯಮಾನ ಸಖ್ಯವರ್ತುಲ! ಇವರ ಪ್ರಕಾರ ‘ಕುಡಿಯದೇ ಇರುವವರು ವೇಸ್ಟ್‌ಬಾಡಿ ಅರಸಿಕರು ಮತ್ತು ಜೀವನವನ್ನು ಎಂಜಾಯ್ ಮಾಡಲು ಬರದೇ ಇರುವ ಮೂರ್ಖರು!’ ಅವರನ್ನು ಇವರೂ ಇವರನ್ನು ಅವರೂ ಹೀಯಾಳಿಸಿಕೊಂಡು ಬಯ್ದುಕೊಂಡು ಓಡಾಡುತ್ತಿರುತ್ತಾರೆ. ಬಾರ್ ಅಂಡ್ ರೆಸ್ಟೋರೆಂಟುಗಳನ್ನು ಕಂಡರೆ ಅಂಡು ಸುಟ್ಟ ಬೆಕ್ಕಿನಂತೆ ಅತ್ತಿಂದಿತ್ತ ಕಣ್ಣಾಡಿಸುತ್ತಾ ಏನನ್ನೋ ಕಳೆದುಕೊಂಡಂತೆ ಇನ್ನೇನನ್ನೋ ಜ್ಞಾಪಿಸಿಕೊಂಡಂತೆ ಒದ್ದಾಡುವ ಪಾನಪ್ರಿಯ ಮಂದಿ ಒಂದು ಕಡೆ. ಇಂಥ ಹೆಂಡದAಗಡಿ ಮತ್ತು ಹೆಂಡದ ಹೊಟೆಲುಗಳನ್ನು ಕಂಡರೆ ಅಸಹ್ಯಿಸಿಕೊಂಡು ಅದರ ವಿರುದ್ಧ ದಿಕ್ಕಿಗೆ ಮುಖ ಮಾಡಿಕೊಂಡು, ಜುಗುಪ್ಸಿತರಾಗುವ ಮಂದಿ ಇನ್ನೊಂದು ಕಡೆ. ಸತ್ಯ ಎರಡೂ ಕಡೆಯಲ್ಲೂ ಇದೆ ಎಂಬುದು ನನ್ನ ಅನಿಸಿಕೆ. ಏಕೆಂದರೆ ಕುಡಿದರೆ ಆರೋಗ್ಯ ಹಾಳು; ಕುಡಿಯದಿದ್ದರೆ ದೇಶದ ಅರ್ಥವ್ಯವಸ್ಥೆ ಹಾಳು! ಅರ್ಥನೀತಿಗೂ ಅಬಕಾರಿಗೂ ಇರುವ ಸಹಸಂಬಂಧವನ್ನು ಎಕನಾಮಿಕ್ಸು ಓದಿಯೇ ತಿಳಿಯಬೇಕಿಲ್ಲ! ಒಂಚೂರು ಕಾಮನ್‌ಸೆನ್ಸ್ ಇರುವ ಯಾರಿಗೂ ಅರ್ಥವಾಗುವ ಸಂಗತಿ. ಪೆಟ್ರೋಲು ಎಷ್ಟೇ ರೇಟಾದರೂ ವಾಹನಕ್ಕೆ ಬೇಕು. ಅದರಂತೆ ಅಬಕಾರಿ ತೆರಿಗೆ ಎಷ್ಟಾದರೂ ಕೊಟ್ಟು ಕುಡಿಯಬೇಕು. ‘ಕುಡುಕರೇ ದೇಶದ ಆಸ್ತಿ; ಕುಡಿಯುವವರು ದಿನದಿಂದ ದಿನಕೆ ಜಾಸ್ತಿ’ ಎಂಬ ಹೊಸ ಗಾದೆಯನ್ನು ಮಾಡಬಹುದು. ಆ ಮಟ್ಟಿಗೆ ಅಭಿವೃದ್ಧಿ ಎಂಬುದು ಆಲ್ಕೋಹಾಲನ್ನು ಅವಲಂಬಿಸಿದೆ. ಪ್ರಪಂಚದಲ್ಲಿ ಮದ್ಯಪಾನಕ್ಕೆ ದಾಸರಾದ ಸೇವಕರೇ ಹೆಚ್ಚು; ಕುಡಿಯದವರನ್ನು ಹುಡುಕಬೇಕು; ಹುಡುಕಿದರೂ ಸಿಗುವುದಿಲ್ಲ, ನಿಮಗೆ ನಿರಾಶೆ ಕಟ್ಟಿಟ್ಟದ್ದು ಎಂದೇ ಬಹುಶಃ ಹೇಳಬಹುದು. ಅದರಲ್ಲೂ ದಿನದಿಂದ ದಿನಕ್ಕೆ ಆಲ್ಕೋಹಾಲ್ ಸೇವಿಗರು ಹೆಚ್ಚಾಗುತ್ತಿದ್ದಾರೆ. ಪಾರ್ಟಿ, ಸಂತೋಷಕೂಟ, ದುಃಖದುಮ್ಮಾನಕೆ ಮದ್ದು ಎಂದೆಲ್ಲಾ ಈವೆಂಟುಗಳನ್ನು ಹಾಕಿಕೊಂಡು ಕುಡಿಯುವ ಹಕೀಕತ್ತು ಜಾಸ್ತಿಯಾಗಿದೆ. ಚಿಕ್ಕ ಪುಟ್ಟ ವಯೋಮಾನದವರು ಕೂಡ ಇದನ್ನು ಸಂಭ್ರಮಿಸುವ ಕಾಲ ಇದಾಗಿದೆ. ಮೊದಲೆಲ್ಲ ವಯಸ್ಕರು ತಾವು ದುಡಿದು ಸಂಪಾದಿಸಿದ್ದರಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು. ಈಗ ಹಾಗಲ್ಲ. ತಾಯ್ತಂದೆಯರ ದುಡ್ಡಿನಲ್ಲಿ ಶೋಕಿ ಮಾಡುವುದು, ಗೆಳೆಯ ಗೆಳತಿಯರನ್ನು ಒಟ್ಟು ಮಾಡಿಕೊಂಡು ಪಿಕ್‌ನಿಕ್, ಟ್ರಕ್ಕಿಂಗ್, ಕ್ಯಾಂಪು ಎಂದೆಲ್ಲಾ ನೆಪ ಹಾಕಿಕೊಂಡು ಕುಡಿಯಲು ಹೋಗುವುದು ಅಧಿಕವಾಗುತ್ತಿದೆ. ಇಷ್ಟಕ್ಕೂ ‘ಅವರ ದುಡ್ಡು, ಅವರು ಮಾಡುತ್ತಿರುವ ಮೋಜು, ನಮಗೇನು?’ ಎಂದೇ ಅಂದುಕೊಂಡರೂ ಒಟ್ಟಾರೆ ಸಾಮಾಜಿಕ ಆರೋಗ್ಯ ನಶಿಸುತ್ತಾ, ನೀತಿಭ್ರಷ್ಟವಾಗುತ್ತಿರುವುದನ್ನು ಕಂಡು ‘ಇನ್ನಾರಿಗೆ ದೂರುವೆನಯ್ಯ’ ಎಂಬಂತಾಗಿದೆ. ‘ನಿನಗೆ ತಾಕತ್ತಿದ್ದರೆ ಕುಡಿದು ತೂರಾಡು; ಇಲ್ಲದಿದ್ದರೆ ಸುಮ್ಮನಿರು’ ಎಂದೇ ಒಳಮನಸ್ಸು ನಮಗೇ ಬುದ್ಧಿವಾದ ಹೇಳುತ್ತದೆ. ಅವರವರು ಪಡೆದು ಬಂದದ್ದು ಎಂದು ಎಷ್ಟು ಅಂದುಕೊಂಡರೂ ಎಲ್ಲೋ ಒಂದು ಕಡೆ ಯುವಜನತೆಯ ಭವಿಷ್ಯವನ್ನು ಊಹಿಸಿಕೊಂಡರೆ ವಿಷಾದವಾಗದೇ ಇರುವುದಿಲ್ಲ.
ಬಹುತೇಕ ಸಿರಿವಂತರ ಮಕ್ಕಳು ಪೋಷಕರ ಮುದ್ದಿನಿಂದ ಹಾಳಾಗುತ್ತಾ, ತಮ್ಮ ಸಂಬಂಧಿಕರನ್ನು ಅನುಕರಿಸುತ್ತಾ, ಕುಡಿದು ತೂರಾಡುವುದೇ (ಬರೀ ಮದ್ಯಪಾನವೊಂದೇ ಅಲ್ಲ!) ಬದುಕಿನ ಗುರಿ ಎಂಬಲ್ಲಿಗೆ ಬಂದು ನಿಂತಿದ್ದಾರೆ. ಇದು ಬದುಕಿನ ಶೈಲಿ; ಮಿತ್ರಮಿತ್ರೆಯರೊಂದಿಗೆ ಹಣದ ಥೈಲಿ ಎಂದಾಗಿದೆ. ‘ಬಡವರಲ್ಲಿ ದುಡ್ಡಿಲ್ಲ; ಹಾಗಾಗಿ ಅವರು ಇಂಥ ಭೋಗದ ಬದುಕನ್ನು ಹೊಂದಿಲ್ಲ’ ಎಂಬುದೇ ಅವರ ಅಂಬೋಣ. ಇನ್ನೂ ಮುಂದುವರೆದು ‘ನಮ್ಮ ತಾತ ಬಡವ, ಹಾಗಾಗಿ ನಮ್ಮಪ್ಪ ಚಿಕ್ಕಂದಿನಲ್ಲಿ ಈ ಅಭ್ಯಾಸವಿಲ್ಲದ ಹೆಬಗ. ಆದರೀಗ ನಮ್ಮಪ್ಪ ಶ್ರೀಮಂತ. ನಾವೂ ಹೆಬಗರಂತೇಕಿರಬೇಕು?’ ಎಂಬುದವರ ಮಿಲಿಯನ್ ಡಾಲರ್ ಪ್ರಶ್ನೆ. ‘ಇದು ಅಂತಸ್ತಿನ ಮ್ಯಾಟರು. ನಮ್ಮ ಅಂತಸ್ತಿಗೆ ತಕ್ಕ ಹಾಗೆ ಜೀವಿಸಬೇಕು; ಇಲ್ಲದಿದ್ದರೆ ನಮ್ಮ ಸರ್ಕಲಿನಲ್ಲಿ ವಿಡಂಬನೆಗೆ ಗುರಿಯಾಗಬೇಕಾಗುತ್ತದೆಂದು ನಮ್ಮ ಸಂಬಂಧಿಕರ ಇಬ್ಬರು ಹೆಣ್ಣುಮಕ್ಕಳು ತಮ್ಮ ಮನದಾಳದ ಮಿಥ್‌ಗಳನ್ನು ಮುಂದಿಟ್ಟು, ಈಗ ಅರ್ಧ ಮುಕ್ಕಾಲು ದಾರಿ ಸವೆಸಿಯಾಗಿದೆ; ಇದರಲ್ಲೇ ಮುಂದುವರಿಯಬೇಕು. ವಾಪಸ್ ಬರಲಾಗದು’ ಎಂದು ಗೋಳಾಡಿದರು. ಈ ದುಶ್ಚಟಗಳನ್ನು ಬಿಡಲು ಅವರಿಗೆ ಆಗುವುದಿಲ್ಲ; ಏಕೆಂದರೆ ಅವರದು ದುರ್ಬಲ ಮನಸ್ಥಿತಿ. ಇಂಥ ವೈ-ಭೋಗಕ್ಕೆ ಅವರು ತಮ್ಮನ್ನು ತೆತ್ತುಕೊಂಡಾಗಿದೆ. ಸುಖದ ಬೆನ್ನು ಹತ್ತಿ ಅಗ್ನಿಗೆ ತುಪ್ಪ ಸುರಿದಂತೆ, ಚರ್ಮಾನಂದಕ್ಕಾಗಿ ಅವರನ್ನು ಬಿಟ್ಟು ಇವರು; ಇವರನ್ನು ಬಿಟ್ಟು ಅವರು ಎಂದು ಗೂಗಲಿನಲ್ಲಿ ಸರ್ಚಿಸುವಂತೆ, ಬದುಕಿನಲ್ಲೂ ಹುಡುಕುತ್ತಾ ಅಲೆಮಾರಿಯಾಗಿದ್ದರೂ ದೇಹ ಮತ್ತು ಮನಸ್ಸು ತೃಪ್ತಗೊಂಡಿಲ್ಲ. ಇದರಿಂದ ದೈನಂದಿನ ಜೀವನದಲ್ಲಿ ಯಾವ ಮೆರುಗೂ ಬೆರಗೂ ಇಟ್ಟುಕೊಳ್ಳದೇ ಪುಟ್ಟ ವಯಸ್ಸಿನಲ್ಲೇ ಕಳಾಹೀನರಾಗಿ, ಶರೀರದಲ್ಲಿ ಹಲವು ರೋಗಗಳು ಮನೆ ಮಾಡಿ, ಖಿನ್ನತೆಯಲ್ಲೇ ಕೈ ಕೈ ಹೊಸಕಿಕೊಳ್ಳುವಂತಾಗಿದೆ. ಕ್ರಮೇಣ ಇಂಥವರೇ ಮನೋರೋಗಿಗಳಾಗಿ, ಕುಟುಂಬಕ್ಕೂ ಸಮಾಜಕ್ಕೂ ಹೊರೆಯಾಗುತ್ತಾರೆ. ತಾವು ಹೋದಲ್ಲೆಲ್ಲಾ ಜೀವನದ ನೈರಾಶ್ಯವನ್ನು ಹರಡುತ್ತಾ, ಸಕಾರಾತ್ಮಕ ಮನೋಧರ್ಮಕ್ಕೆ ಎರವಾಗುತ್ತಾರೆ. ಇಂಥವರು ಬರೀ ಆಲ್ಕೋಹಾಲಿಗಷ್ಟೇ ಸೀಮಿತವಾಗದೇ, ಹಲವು ವಿಧದ ಡ್ರಗ್ಸುಗಳ ದಾಸರಾಗುತ್ತಾರೆ.
ಮಾದಕ ಪದಾರ್ಥಗಳ ಸೇವನೆಯಿಂದ ಎದುರಾಗುವ ದೈಹಿಕ ಮತ್ತು ಮಾನಸಿಕ ವಿಭ್ರಮೆಗಳನ್ನೇ ನಿಜವೆಂದುಕೊಳ್ಳುತ್ತಾರೆ. ಕ್ರಮೇಣ ಸಮಾಜಘಾತುಕರಾಗಿ ಬಿಡುತ್ತಾರೆ. ಅಂದರೆ ಮದ್ಯಪಾನದ ದುಶ್ಚಟವು ಅಲ್ಲಿಗೇ ನಿಲ್ಲುವುದಿಲ್ಲ ಎಂಬುದಕ್ಕೆ ಇಷ್ಟೆಲ್ಲಾ ಪುರಾಣ ಊದಿದೆ. ಒಂದಂತೂ ಸತ್ಯ: ಪಾಶ್ಚಿಮಾತ್ಯೀಕರಣಕ್ಕೆ ಒಳಗಾದ ನಮ್ಮ ದೇಶದ ಸಂಸ್ಕೃತಿಯು ಅವನತಿಯ ಹಾದಿ ಹಿಡಿದಿರುವುದಕ್ಕೆ ಸ್ಪಷ್ಟ ಉದಾಹರಣೆಯೇ ಇದು. ‘ಹಿಂದೆಲ್ಲಾ ರಾಮರಸ, ಸೋಮರಸ ಎಂಬುದೆಲ್ಲಾ ಇತ್ತು. ರಾಜ ಮಹಾರಾಜರು ಕುಡಿಯುತ್ತಿದ್ದರು. ದೇವತೆಗಳೇ ಸುರಾಪಾನ ಮಾಡುತ್ತಿದ್ದರು’ ಎಂದು ಆಕ್ಷೇಪಣೆ ಸಲ್ಲಿಸಬಹುದು. ಭೈರಾಗಿಗಳು ಭಂಗಿಸೊಪ್ಪು ಸೇದುತ್ತಿದ್ದರು. ಅದರ ಜೊತೆಗೆ ನಶೆಯೇರಲು ಇಂಥ ನಶಾ ಪದಾರ್ಥ ಸೇವಿಸುತ್ತಿದ್ದರು. ಅಮಲು ಬರಲು ಹಣ್ಣುಗಳನ್ನು ಕೊಳೆಸಿ, ಅವುಗಳ ರಾಸಾಯನಿಕ ಪರಿಣಾಮದಿಂದಾಗಿ ಹುಳಿ, ಒಗರು ಸೇರಿ ಅದು ಮದ್ಯಪಾನವಾಗಿ, ಅವನ್ನು ಕುಡಿಯುತ್ತಿದ್ದರು ಎಂದೆಲ್ಲಾ ಕ್ಲೇಮು ಮಾಡಬಹುದು. ಕಗ್ಗದ ಕವಿ ಡಿವಿಜಿಯವರು ತಮ್ಮ ‘ಸಂಸ್ಕೃತಿ’ ಎಂಬ ಪುಸ್ತಕದಲ್ಲಿ ‘ಹಣ್ಣುಗಳನ್ನು ಹಾಗೆಯೇ ತಿಂದರೆ ಪ್ರಕೃತಿ; ಅವುಗಳ ರಸ ಹಿಂಡಿ ಕುಡಿದರೆ ಸಂಸ್ಕೃತಿ; ಅವನ್ನು ಕೊಳೆಸಿ ಮದ್ಯಪಾನ ಮಾಡಿದರೆ ವಿಕೃತಿ’ ಎಂದಿದ್ದಾರೆ. ಗಾಂಜಾ ಸೇವನೆಯೂ ಇಂಥದೇ ಉಪಕ್ರಮ. ಲಾಭದಾಯಕ ಕೃಷಿಯಾಗಿರುವುದರಿಂದ ಕೆಲವೊಮ್ಮೆ ದುರಾಸೆಗೆ ಬಿದ್ದ ಕೆಲವರು ತಮ್ಮ ಹೊಲ ಗದ್ದೆಗಳ ನಡುವೆ ಯಾರಿಗೂ ಕಾಣದಂತೆ ಗಾಂಜಾ ಗಿಡಗಳನ್ನು ಬೆಳೆಸಿ, ಪೊಲೀಸರ ಕೈಗೆ ಸಿಕ್ಕಿಕೊಂಡ ಘಟನೆಗಳು ಆಗಾಗ ಪತ್ರಿಕೆಯಲ್ಲಿ ವರದಿಯಾಗುತ್ತಿರುತ್ತವೆ.
ಹಸಿಯ ಗಸಗಸೆಗೆ ಹೀಗೆ ಕಿಕ್ ನೀಡುವ ಗುಣವಿದೆಯೆಂದೂ ಅದರ ಪಾಯಸ ಕುಡಿದರೆ ದಿನವೆಲ್ಲಾ ಮಂಕುತನ ಕವಿದು ನಿದ್ದೆ ಚೆನ್ನಾಗಿ ಬರುತ್ತದೆಂದು ನಮ್ಮ ಹಿರಿಯರು ಹೇಳುತ್ತಿದ್ದರು. ದ್ರಾಕ್ಷಾರಸವನ್ನು ವೈನ್ ಎಂದು ಕರೆದು ಕುಡಿಯುವ ಪದ್ಧತಿಯೂ ಹಲವರ ಮನೆಗಳಲ್ಲಿವೆ. ಬರೀ ದ್ರಾಕ್ಷಿಯೊಂದೇ ಅಲ್ಲ, ಬೇರೆ ಬೇರೆ ಹಣ್ಣು, ತರಕಾರಿಗಳ ವೈನ್ ತಯಾರಿಸುವ ವಿಧಾನಗಳನ್ನು ಸಹ ಆಗಿಂದಾಗ್ಗೆ ಕೇಳುತ್ತಿರುತ್ತೇವೆ. ಅಷ್ಟೇಕೆ, ನಾವು ತಿನ್ನುವ ಇಡ್ಲಿ, ದೋಸೆಗಳ ಹಿಟ್ಟು ಹುಳಿ ಬಂದಾಗಲೂ ಇಂಥದೊಂದು ರಾಸಾಯನಿಕ ಪ್ರಕ್ರಿಯೆ ನಡೆದಿರುತ್ತದೆ. ಇವೆಲ್ಲಾ ಬ್ಯಾಕ್ಟೀರಿಯಾಗಳ ಆಟ. ತುಂಬಾ ಆಳಕ್ಕಿಳಿದು ಮಾತಾಡುವುದಾದರೆ, ಹಾಲು ಮೊಸರಾಗುವುದು ಸಹ ರಾಸಾಯನಿಕ ಪ್ರಕ್ರಿಯೆಯೇ. ಅದಕ್ಕೇ ಏನೋ ಹುಳಿಮೊಸರನ್ನು ಹೆಂಡವೆಂದೇ ಕರೆದು, ಹಲವರು ದೂರವಿಡುತ್ತಾರೆ. ‘ಈಚಲು ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದಂತೆ’ ಎಂಬ ಗಾದೆಯೇ ಇದೆ! ಅಂದರೆ ಮನುಷ್ಯ ಚರಿತ್ರೆಯಲ್ಲಿ ಅಮಲಿನ ಭಾಗ ಬಹು ದೊಡ್ಡದಿದೆ.
ಸಹಜತೆಯಿಂದ ಅಸಹಜತೆಯ ಕಡೆಗೆ ಸಾಗಲು ಅವನು ಏನೇನೆಲ್ಲಾ ಮಾಡಲು ಸಿದ್ಧಪ್ರಸಿದ್ಧ. ‘ಮಾನವನ ವಿಕಾಸದ ಪಥದಲ್ಲಿ ಅಮಲು ನಡೆದು ಬಂದ ದಾರಿ’ಯನ್ನು ಕುರಿತು ಒಂದಲ್ಲ, ಹತ್ತಾರು ಪಿಹೆಚ್‌ಡಿ ಸಂಶೋಧನೆಗಳನ್ನೇ ಮಾಡಬಹುದು! ಒಂದೆರಡು ವರುಷಗಳ ಹಿಂದೆ ಸಾರ್ವಜನಿಕ ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಪರಾಮರ್ಶಿಸುತ್ತಿರುವಾಗ ‘ಭಾರತದಲ್ಲಿ ಮದ್ಯಪಾನ ಪರಂಪರೆ’ ಎಂಬ ಸಂಶೋಧನಾ ಕೃತಿಯೊಂದು ಕಣ್ಣಿಗೆ ಬಿದ್ದಿತ್ತು. ಇದನ್ನು ಬರೆದವರು ಅಬಕಾರಿ ಇಲಾಖೆಯಲ್ಲಿ ಕರ್ತವ್ಯದಲ್ಲಿರುವ ರಾಜೀವ್ ಬಾಬು. ಇಲಾಖೆಯಲ್ಲಿನ ಕಾಯ್ದೆಕಟ್ಟಳೆಗಳು, ಬ್ರಟಿಷರ ಕಾಲಕಿಂತ ಪೂರ್ವದಲ್ಲಿದ್ದ ಮದ್ಯ ವಹಿವಾಟು, ಸೋಮರಸದ ಹಿನ್ನೆಲೆ, ಪ್ರಾಚೀನ ಮದ್ಯ ಉತ್ಪಾದಕ ತಂತ್ರಗಳು, ಪ್ರಾಚೀನ ಸಾಹಿತ್ಯದಲ್ಲಿ ಬಂದಿರುವ ಮದ್ಯಸಂಬಂಧಿತ ಸಂಗತಿಗಳು, ಪಾನ ಮತ್ತು ಪಾನನೀತಿ ಕುರಿತಂತೆ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಧೋರಣೆಗಳು ಮೊದಲಾಗಿ ಒಟ್ಟು ಹನ್ನೊಂದು ಅಧ್ಯಾಯಗಳಿದ್ದು, ಚಿತ್ರಸಹಿತ ಓದಿಸಿಕೊಂಡು ಹೋಗುತ್ತದೆ. ಇರಲಿ.
ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=43728
(ಮುಂದುವರಿಯುವುದು)

–ಡಾ. ಹೆಚ್ ಎನ್ ಮಂಜುರಾಜ್ , ಹೊಳೆನರಸೀಪುರ
ಎತ್ತಣಿಂದೆತ್ತ ಸಂಬಂಧ ವಯ್ಯಾ..ಲೇಖನ ವಿಸ್ತೃತ ವಾಗಿ ಮೂಡಿಬರುತ್ತಿದೆ..ಕುತೂಹಲ ವಂತೂ ಇದೆ..ಯಾವುದೇ ವಿಷಯ ಕೊಟ್ಟರೂ..ಹೇಗೆ ಬರೆಯಬಹುದೆಂಬುದಕ್ಕೆ ಉದಾಹರಣೆ ಯಾಗಿದೆ ಸಾರ್..
Nice