ನವಮ ಸ್ಕಂದ – ಅಧ್ಯಾಯ – 4
ಪರಶುರಾಮ – 2
ರೇಣುಕಾದೇವಿ
ಪರಶುರಾಮ ಮಾತೆ
ಜಮದಗ್ನಿ ಸತಿ
ಗಂಗಾನದಿಯಲಿ
ಜಲ ಸಂಗ್ರಹಿಸುತಿರೆ
ಗಂಧರ್ವರಾಜ ಚಿತ್ರರಥ
ಸ್ತ್ರೀಜನರೊಡನೆ ಜಲಕ್ರೀಡೆಯಾಡುತಿರೆ
ಅವನ ಲೋಕಮೋಹಕ ಸುಂದರ ಕಾಯ
ವಿಚಿತ್ರ ವೇಷಭೂಷಣ
ಪುಷ್ಪಮಾಲಿಕೆಗಳ ಕಂಡು
ಮಂತ್ರಮುಗ್ಧಳಾಗಿ
ಆಶ್ರಮಕಾರ್ಯ, ಹೋಮಕಾಲಗಳನ್ನೆಲ್ಲ
ಮರೆತು ನಿಂತು, ಕೆಲಕಾಲಾನಂತರ
ಆಶ್ರಮದ ನೆನಪಾಗಿ, ವಿಳಂಬಕೆ
ಪತಿದೇವನ ಕೋಪವ ನೆನೆದು ಬೆದರಿ
ಆತುರಾತರದಿಂ ಆಶ್ರಮಕೆ ಹಿಂದಿರುಗಿ
ಜಲಪಾತ್ರೆಯ ಪತಿಯ ಸನ್ನಿದ್ಧಿಯಲ್ಲಿಡೆ
ಜಮದಗ್ನಿ ದಿವ್ಯದೃಷ್ಟಿಯಿಂ, ಸತಿಯ
ಗಂಧರ್ವನೆಡೆಯ ಚಿತ್ತ ಚಾಂಚಲ್ಯವ ಅರಿತು
ಕುಪಿತನಾಗಿ ಸುತರಿಗೆ ಅವಳ
ವಧಿಸಲಾಜ್ಞೆಯ ನೀಡೆ
ಹೆತ್ತ ತಾಯಿಯ ಹತ್ಯೆಗೈಯಲು ಇಚ್ಛಿಸದ
ಸುತರ ನಡೆಗೆ ಕ್ರೋಧದಿಂ ಜಮದಗ್ನಿ
ಪರಶುರಾಮಗೆ ಪಾಪಾತ್ಮಳಾದ ಮಾತೆಯನ್ನೂ
ಅವಿಧೇಯ ಸೋದರರನ್ನೂ ವಧಿಸಲಾಜ್ಞಾಪಿಸೆ
ಪಿತೃಭಕ್ತನೂ, ಅವರ ತಪಃಶಕ್ತಿಯ ಯೋಗಮಹಿಮೆಯನರಿತ
ಪರಶುರಾಮನು ಕ್ಷಣಮಾತ್ರವೂ ಶಂಕಿಸದೆ
ಮಾತೆಯನ್ನೂ, ಸೋದರರನ್ನೂ ವಧಿಸಿದ
ಪಿತನ ಕ್ರೂರಾಜ್ಞೆಯ ವಿಧೇಯತೆಯಿಂ ಪಾಲಿಸಿದ
ಪರಶುರಾಮನ ನಡೆಗೆ ಮೆಚ್ಚಿ
ಅವನಿಚ್ಚೆಯಂ ಪುರಸ್ಕರಿಸಿ
ಮತ್ತೆ
ಪತ್ನಿ ರೇಣುಕಾ, ಮತ್ತವಳ ಮಕ್ಕಳಿಗೆ
ತನ್ನ ಅಪಾರ ತಪಃಶಕ್ತಿಯಿಂ
ಬದುಕಿಸಿದಾ ಜಮದಗ್ನಿ
ಮೃತ ಕಾರ್ತವೀರ್ಯಾರ್ಜುನನ ಸುತರೆಲ್ಲರೂ
ಒಂದೆಡೆ ಕಲೆತು
ಪರಶುರಾಮನಿಲ್ಲದ ಸಮಯದಿ
ಜಲಸಮಾಧಿ ಮಗ್ನ, ಜಮದಗ್ನಿಯ ರುಂಡವ ಕತ್ತರಿಸಿ ಒಯ್ದರು
ಪರಶುರಾಮ ಮೃತ ತಂದೆಯ ಮರಣದ ದುಃಖವ
ಶಮನವಾಗಿಸಿಕೊಂಡು ಮಾಹಿಷ್ಮತಿ ನಗರ ಪ್ರವೇಶಿಸಿ
ಕಾರ್ತವೀರ್ಯಾಜುನೆಲ್ಲ ಕುಟುಂಬವ ವಧಿಸಿ
ರಕ್ತದ ಮಡುವ ನಿರ್ಮಿಸಿದರೂ ಕೋಪ ತಣಿಯದೆ
ದುರುಳ ಕ್ಷತ್ರಿಯ ಕುಲವ ನಾಶಗೊಳಿಸಲು
ಇಪ್ಪತ್ತೊಂದು ಬಾರಿ ಭೂ ಭಾಗವನ್ನೆಲ್ಲ ಸುತ್ತಿ
ಕ್ಷತ್ರಿಯ ಕುಲವ ಕೊಲೆಗೈದು ಅವರ ರಕ್ತದಿಂ
ತಂದೆಯ ಆತ್ಮತೃಪ್ತಿಗೆ ರಕ್ತ ತರ್ಪಣವಿತ್ತ
ಪರಶುರಾಮ
ನಂತರದಿ ಸರ್ಪರ್ಷಿಗಳೊಬ್ಬನಾಗಿ
ಮಹೇಂದ್ರ ಪರ್ವತದಿ ತಪೋನಿರತ ಪರಶುರಾಮ
ಶ್ರೀಹರಿಯ ಪರಶುರಾಮಾವತಾರದ
ರೋಮಾಂಚಕ ಚರಿತ್ರೆಯದಂತ್ಯ
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=43429
-ಎಂ. ಆರ್. ಆನಂದ, ಮೈಸೂರು
ಈ ಸಾರಿ ಯ ಕಾವ್ಯ ಭಾಗವತದಲ್ಲಿ ಪರಶುರಾಮನ ಪಿತೃ ವಾಕ್ಯ ಪರಿಪಾಲನೆಯ ಅನಾವರಣ ತುಂಬಾ ಸೊಗಸಾಗಿ ಬಂದಿದೆ ಸಾರ್
ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಸೊಗಸಾಗಿದೆ
ವಂದನೆಗಳು
ಪರಶುರಾಮನ ದಿಟ್ಟ ನಡೆ, ಕಾರ್ತವೀರ್ಯಾರ್ಜುನನಿಂದ ಜಮದಗ್ನಿ ಮಹರ್ಷಿಗಳ ಹತ್ಯೆ, ಪ್ರತೀಕಾರವಾಗಿ ಕ್ರೂರ ಕ್ಷತ್ರಿಯರ ಹತ್ಯೆ ಇತ್ಯಾದಿ ಸನ್ನಿವೇಶಗಳು ಕಾವ್ಯ ಭಾಗವತದಲ್ಲಿ ಬಹಳ ಚೆನ್ನಾಗಿ ಪ್ರಸ್ತುತಗೊಂಡಿವೆ.
ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಪರಶುರಾಮನ ದಿಟ್ಟ ನಡೆ, ಕಾರ್ತವೀರ್ಯಾರ್ಜುನನಿಂದ ಜಮದಗ್ನಿ ಮಹರ್ಷಿಗಳ ಹತ್ಯೆ, ಪ್ರತೀಕಾರವಾಗಿ ಕ್ರೂರ ಕ್ಷತ್ರಿಯರ ಹತ್ಯೆ ಇತ್ಯಾದಿ ಸನ್ನಿವೇಶಗಳು ಬಹಳ ಚೆನ್ನಾಗಿ ಪ್ರಸ್ತುತಗೊಂಡಿವೆ.
ವಂದನೆಗಳು.
ನಿಜಕ್ಕೂ ರೋಮಾಂಚನಕಾರಿಯಾದ ಪರುಶುರಾಮ ಚರಿತೆಯ ಕಾವ್ಯಭಾಗವತವು ಮನಮುಟ್ಟಿತು.
ನಿರಂತರವಾಗಿ ಪ್ರಕಟಣೆ ಮಾಡುತ್ತಿರುವ “ಸುರಹೊನ್ನೆ” ಗೆ ವಂದನೆಗಳು.