ಪರಾಗ

ಮನದನ್ನೆ

Share Button

ಬೆಳಗಿನ ಕೆಲಸಗಳೆಲ್ಲವನ್ನು ಮುಗಿಸಿ ಮಧ್ಯಾನ್ಹದ ಊಟದ ತಯಾರಿಗೆ ಏನೇನು ಮಾಡಬೇಕೆಂದು ಅಡುಗೆ ವೆಂಕಮ್ಮನವರಿಗೆ ನಿರ್ದೇಶನ ಕೊಟ್ಟು ಹೊರಬಂದರು ಶಾರದಮ್ಮನವರು. ಹಾಲಿನ ಸೋಫಾದ ಮೇಲೆ ಕುಳಿತಿದ್ದ ಪತಿ ಸದಾಶಿವರಾಯರೆಡೆಗೆ ಕಣ್ಣು ಹಾಯಿಸಿದರು. ಅವರು ಯಾವುದೋ ಒಂದು ಕಾಗದವನ್ನು ಕೈಲಿ ಹಿಡಿದು ತದೇಕಚಿತ್ತರಾಗಿ ಓದುತ್ತಿದ್ದರು. ಅದು ಬರಿಯ ಓದಾಗಿರದೆ ಅವರ ಮುಖದಲ್ಲಿ ಹಾವಭಾವಗಳೂ ಬದಲಾಯಿಸುತ್ತಿದ್ದವು. ಅದನ್ನು ಆಶ್ಚರ್ಯದಿಂದ ನೋಡಿ ಅವರ ಕಡೆಗೆ ನಡೆದುಬಂದು ರಾಯರ ಎದುರಿಗಿದ್ದ ಮತ್ತೊಂದು ಸೊಫಾದ ಮೇಲೆ ಕುಳಿತು ಸಣ್ಣಗೆ ಕೆಮ್ಮಿದರು.

ಊಹುಂ..ರಾಯರು ತಾವು ತೊಡಗಿದ್ದ ಓದಿನಿಂದ ವಿಚಲಿತರಾಗಲಿಲ್ಲ. ಆಗ “ರೀ.. ಇದೇನು ಯಾವುದೋ ಕಾಗದ ಹಿಡಿದುಕೊಂಡು ಅಭಿನಯ ಮಾಡುತ್ತಿದ್ದೀರಿ. ಅದೂ ಈಗಿರುವ ಪರಿಸ್ಥಿತಿಯಲ್ಲಿ. ಮೊಬೈಲ್, ವಾಟ್ಸಪ್, ಇನ್ಸ್ಟಾಗ್ರಾಂ, ರೀಲ್ಸ್, ಆಡಿಯೋ, ವೀಡಿಯೋ ಸಕಲವೂ ಅಂಗೈನಲ್ಲಿ ಬಂದಿರುವಾಗ ಒಂದು ಹಾಳೆ ನಿಮ್ಮ ಮುಖಚರ್ಯೆಯನ್ನೇ ಬದಲಾಯಿಸುತ್ತಿದೆಯಲ್ಲಾ. ಅಂತಹ ಗಹನವಾದ ವಿಷಯವೇನಿದೆ ಅದರಲ್ಲಿ?” ಎಮದು ಪ್ರಶ್ನಿಸಿದರು ಶಾರದಮ್ಮ.

“ಹೂ ಇದರಲ್ಲಿ ಬಹಳವಿದೆ, ಅದನ್ನು ಓದುತ್ತಿರುವ ನನಗೇ ಮತ್ತೆಮತ್ತೆ ಓದುವಂತಾಗುತ್ತಿದೆ. ಇದರಿಂದ ಆಗಿರುವ ಸಂತೋಷವನ್ನು ಹತ್ತಿಕ್ಕಲಾಗುತ್ತಿಲ್ಲ ಶಾರೀ..ನಿಜವಾಗಲೂ ಇದು ಬರಿಯ ಒಂದು ಹಾಳೆಯಲ್ಲ. ಇದರಲ್ಲಿರುವ ಸುದ್ಧಿಯೇನಾದರೂ ಸಿದ್ಧಿಸಿಬಿಟ್ಟರೆ ನಮಗಿಂತ ಪುಣ್ಯವಂತರು ಯಾರಿದ್ದಾರೆ” ಎಂದುತ್ತರಿಸಿದರು ಸದಾಶಿವರಾಯರು.
“ಹೌದೇ ! ಅಂತಹ ಮಹತ್ವದ್ದೇನಿದೆ ಹೇಳ್ರೀ” ಎಂದು ಕೆಳಿದರು ಶಾರದಮ್ಮ.
“ಅದನ್ನು ನನ್ನ ಬಾಯಿಂದ ಕೇಳುವ ಬದಲು ತಗೋ..ನೀನೇ ಓದು” ಎಂದು ತಮ್ಮ ಕೈಯಲ್ಲಿದ್ದ ಪತ್ರವನ್ನು ಹೆಂಡತಿಯ ಕೈಗೆ ಕೊಟ್ಟರು.

ಶಾರದಮ್ಮ ಓದಲು ತೊಡಗಿದರು,
ನನ್ನ ಪ್ರೀತಿಯ ಅಪ್ಪ, ಅಮ್ಮನವರಿಗೆ ಸುಹಾಸ್ ಮಾಡುವ ನಮಸ್ಕಾರಗಳು,
ಇದೇನು ! ಈ ಆಧುನಿಕ ಕಾಲದಲ್ಲಿ ಅದೂ ಸೌಲಭ್ಯಗಳು ಕೈಯೊಳಗೆ ಎಟಕುವ ಸ್ಥಿತಿಯಲ್ಲಿ ಹೊಸತನವನ್ನು ಹುಡುಕಾಟ ಮಾಡುತ್ತಿರುವ ಸಾಫ್ಟ್ವೇರ್ ಇಂಜಿನಿಯರ್ ಮಗನಿಂದ ಪತ್ರವನ್ನು ಕಂಡು ನಿಮಗೆ ಆಶ್ಚರ್ಯವಾಗಿರಬಹುದು.

ಹೌದು.. ಏನೇ ಆಧುನಿಕ ಸೌಲಭ್ಯಗಳಿದ್ದರೂ ಅಂತರಂಗದಲ್ಲಿನ ಭಾವನೆಗಳನ್ನು ಅನಾವರಣ ಮಾಡಿಕೊಳ್ಳಲು ಪತ್ರ ಬರೆಯುವುದೇ ಸೂಕ್ತವೆಂದು ನನ್ನ ಭಾವನೆ. ಅದಕ್ಕೆಂದೇ ಈ ಸುದೀರ್ಘ ಪತ್ರ. ನಮ್ಮ ಕುಟುಂಬ ಆಗರ್ಭ ಶ್ರೀಮಂತಿಕೆ ಹೊಂದಿದ್ದರೂ ನೀವು ನನ್ನನ್ನು ಹಾಗೂ ಸೋದರಿ ‘ಸಿರಿ’ಯನ್ನು ಸಾಧಾರಣ ಮಧ್ಯಮ ವರ್ಗದವರಂತೆ ಬೆಳೆಸಿದಿರಿ. ಕಾರಣ ಸಿರಿವಂತಿಕೆಯ ಹಮ್ಮು ತಲೆಗೇರದಿರಲಿ ಎಂದು. ನಮಗೆ ವಿದ್ಯೆಯ ಜೊತೆಗೆ ಸುಸಂಸ್ಕೃತಿಯೂ ಇರಲೆಂದು ಬೋಧನೆ ಮಾಡಿದಿರಿ. ನಿಮ್ಮ ನಿರೀಕ್ಷೆಯಂತೆಯೇ ನಾವಿಬ್ಬರೂ ಬೆಳೆದು ವಿದ್ಯಾವಂತರಾದೆವು. ಅಕ್ಕ ‘ಸಿರಿ’ ಬಿ.ಎಸ್‌ಸಿ. ಹೋಂಸೈನ್ಸ್ ಪದವಿ ಪಡೆದಳು. ನಾನು ಇಂಜಿನಿಯರಿಂಗಿನಲ್ಲಿ ಮಾಸ್ಟರ್ಸ್ ಪದವೀಧರನಾದೆ. ಅಕ್ಕ ಸಿರಿಯನ್ನು ಅವಳ ಹೆಸರಿಗೆ ತಕ್ಕ ಹಾಗೆ ಒಂದು ಸಿರಿವಂತರ ಕುಟುಂಬದ ವರನಿಗೆ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿದಿರಿ. ನಿಮ್ಮದೇ ಸಾಕಷ್ಟು ಕಾರುಬಾರುಗಳಿದ್ದರೂ ನನಗೆ ನನ್ನಿಚ್ಛೆಯಂತೆ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿರಿ. ನನ್ನದೇ ಪುಟ್ಟ ಕಂಪೆನಿಯೊಂದನ್ನು ಪ್ರಾರಂಭಿಸಿ ಕಷ್ಟಪಟ್ಟು ಬೆಳೆಸಿದೆ. ಒಂದು ಉತ್ತಮ ಹಂತ ಮುಟ್ಟಿ ಹತ್ತಾರು ಕೈಗಳಿಗೆ ಕೆಲಸವೊದಗಿಸಿದ್ದೇನೆ. ಹೆಸರು ಗಳಿಸಿದ್ದೇನೆ. ತಪ್ಪು ತಿಳಿಯಬೇಡಿ ಇದು ಅಹಂಮ್ಮಿನ ಮಾತಲ್ಲ.

ಇನ್ನು ಅಕ್ಕನ ಬದುಕು ಪ್ರಾರಂಭದಲ್ಲಿ ಸುಖವಾಗಿಯೇ ಪ್ರಾರಂಭವಾಯಿತು. ಶ್ರೀಮಂತ ಮನೆತನದವರ ಬೇಕುಬೇಡಗಳನ್ನು ಪೂರೈಸಿ ಮಗಳು ರಾಣಿಯಂತೆ ಇರಬೇಕೆಂದು ಬಯಸಿದಿರಿ. ಆದರೆ ಎರಡೇ ವರ್ಷದೊಳಗೆ ಬೀಗರ ನಿಜರೂಪ ಬಯಲಾಯಿತು. ಅವರ ಮಿತಿಯಿಲ್ಲದ ಧನದಾಸೆಯಿಂದ ಅಕ್ಕ ಬೇಸತ್ತು ತನ್ನ ಐದು ತಿಂಗಳ ಹಸುಗೂಸನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಳು. ಅದು ನಿಜವಾಗಿಯೂ ಹತ್ಯೆಯೋ ಆತ್ಮಹತ್ಯೆಯೋ ಆ ಭಗವಂತನೇ ಬಲ್ಲ. ಅವರ ಮೇಲೆ ಮೊಕದ್ದಮೆ ಹೂಡಲು ಹೋಗದೆ ನೀವು ಆ ಪುಟ್ಟ ಕಂದನನ್ನು ಮನೆಗೆ ಕರೆದುತಂದಿರಿ. ಆ ಮುದ್ದು “ಭೂಮಿಕಾ” ನಮ್ಮ ಮನೆಯಲ್ಲಿ ಬೆಳೆಯುತ್ತಾ ನಮ್ಮೆಲ್ಲರ ಕಣ್ಮಣಿಯಾಗಿ ಅಕ್ಕ ಸಿರಿಯ ನೆನಪಾಗಿ ಉಳಿದಿದೆ. ಅದರ ಆಟಪಾಟ, ಮುದ್ದುಮಾತುಗಳು, ಅದರ ಒಡನಾಟ ಎಲ್ಲವು ನಿಮ್ಮ ದುಃಖವನ್ನು ಸ್ವಲ್ಪ ಮಟ್ಟಿಗಾದರೂ ತಗ್ಗಿಸಿವೆ.
ಅದರೆ ನನಗೆ ನನ್ನಕ್ಕನ ದಾರುಣ ಸಾವಿನ ನೋವನ್ನು ಮರೆಯಲಾಗದೆ ಮತ್ತು ಅಕ್ಕನ ಪ್ರತಿರೂಪದಂತಿರುವ ಭೂಮಿಕಾಳನ್ನು ತಾಯಿಯಂತೆ ನೋಡಿಕೊಳ್ಳುವ ಮನಸ್ಸಿನ ಹೆಣ್ಣು ನನ್ನ ಕೈಹಿಡಿಯಬೇಕು ಎನ್ನುವ ಆಶಯ ಹೊಂದಿರುವ ನನಗೆ ಮದುವೆಯಾಗಲು ನೀವು ಹಲವಾರು ರೀತಿಯಲ್ಲಿ ಒತ್ತಡ ತಂದರೂ ಮನಸ್ಸಿಲ್ಲ. ಅದಕ್ಕಾಗಿ ಏನಾದರೂ ಕುಂಟು ನೆಪವೊಡ್ಡಿ ಮದುವೆಯ ಪ್ರಸ್ತಾಪವನ್ನು ಮುಂದೂಡುತ್ತಲೇ ಬಂದೆ.

ಹೀಗೇ ಸುಮಾರು ಮೂರು ವರ್ಷಗಳು ಉರುಳಿಹೋದವು. ಮದುವೆಯನ್ನೇ ಮಾಡಿಕೊಳ್ಳಬಾರದೆನ್ನುವ ಮನಸ್ಥಿತಿಗೆ ತಲುಪಿದ್ದ ನನ್ನನ್ನು ತನ್ನ ಸರಳ ಸಜ್ಜನಿಕೆಯ ಸ್ವಭಾವಗಳಿರುವ ಹುಡುಗಿಯೊಬ್ಬಳು ಗೆದ್ದಿದ್ದಾಳೆ. ಆ ಹುಡುಗಿಯ ಹೆಸರು “ಸುಮಾ” ಎಂದು, ನನ್ನ ಕಂಪನಿಯಲ್ಲಿಯೆ ಪ್ರಾರಂಭದಿಂದಲೂ ಇಂಜಿನಿಯರಾಗಿ ಕೆಲಸ ಮಾಡುತ್ತಿದ್ದಾಳೆ. ಯಾರನ್ನೂ ಎದುರು ಹಾಕಿಕೊಳ್ಳದೆ, ಆದರೆ ಯಾರೊಂದಿಗೂ ಹೆಚ್ಚಾದ ಒಡನಾಟವಿಟ್ಟುಕೊಳ್ಳದೆ ತನಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುತ್ತಾಳೆ. ಆಕೆಯು ಯಾವುದೇ ಊರಿಗೆ ಹೋಗಿದ್ದಾಗಲೀ, ಅಥವಾ ಅವಳನ್ನು ನೋಡಲು ಯಾರಾದರೂ ಬಂದದ್ದಾಗಲೀ ನಾನು ಕಂಡೇ ಇಲ್ಲ. ನಮ್ಮ ಮನೆಯಲ್ಲಿ ನಡೆದ ಹಿಂದಿನ ವಿದ್ಯಮಾನಗಳ ಸಮಯದಲ್ಲಿ ನನಗೆ ಸಾಂತ್ವನ ಹೇಳುವಲ್ಲಿ ಆಕೆಯ ಪಾತ್ರ ಹಿರಿದು. ಇದರಿಂದಾಗಿ ನಮ್ಮ ಪರಿಚಯ ಹೆಚ್ಚಿತು. ಇದರಿಂದ ಆಕೆಯು ಜೀವನದಲ್ಲಿ ನೊಂದ ಹೆಣ್ಣುಮಗಳು ಎಂದು ತಿಳಿದುಬಂತು. ಆದರೆ ಅದಕ್ಕೆ ಕಾರಣಗಳಾಗಲೀ, ಅವಳ ಪೂರ್ವಾಪರವಾಗಲೀ, ಜಾತಿಮತವಾಗಲೀ ನನಗೆ ತಿಳಿದಿಲ್ಲ. ಆಕೆ ತನ್ನ ದುಡಿಮೆಯಲ್ಲಿ ಒಂದುಸ್ವಲ್ಪ ಮೊತ್ತವನ್ನು ಯಾರಿಗೋ ಕಳುಹಿಸುತ್ತಾಳೆಂದು ತಿಳಿದುಬಂತು. ಅವರ‍್ಯಾರು ಎಂಬುದನ್ನು ನನಗೆ ಬೇಡವಾದ ಸಂಗತಿಯೆಂದು ವಿಚಾರಿಸಲು ಹೋಗಿಲ್ಲ.

ಬೆಂಗಳೂರಿನ ವಿಜಯನಗರ ಬಡಾವಣೆಯಲ್ಲಿ ಒಂದು ದೊಡ್ಡಮನೆಯ ಔಟ್‌ಹೌಸಿನಲ್ಲಿ ವಾಸವಾಗಿದ್ದಾಳೆ. ದಿನಗಳೆದಂತೆ ಆಕೆಯ ಬಗ್ಗೆ ನನಗೆ ಕುತೂಹಲ ಹೆಚ್ಚಾಯಿತು. ಪರಸ್ಪರ ಒಡನಾಟ ಪ್ರಾರಂಭವಾಗಿ ಆತ್ಮೀಯ ವ್ಯಕ್ತಿಯಾದಳು. ನನಗರಿವಿಲ್ಲದಂತೆ ಅವಳಲ್ಲಿ ನನಗೆ ಪ್ರೀತಿ ಮೊಳೆಯಲು ಪ್ರಾರಂಭವಾಯಿತು. ಒಂದು ದಿನ ಧೈರ್ಯವಹಿಸಿ ಹೇಳಿಕೊಂಡಾಗ ಅವಳಿಂದಲೂ ಸಕಾರಾತ್ಮಕವಾದ ಉತ್ತರ ಸಿಕ್ಕಿತು. ಅವಳು ತನಗೆ ಯಾವ ಬಂಧುಬಳಗವೂ ಇಲ್ಲ. ತನ್ನ ತವರಿಗೆ ತನ್ನ ದುಡಿಮೆಯ ಸ್ವಲ್ಪ ಭಾಗವನ್ನು ಕಳುಹಿಸುವುದು ಬಿಟ್ಟರೆ ಯಾರೊಡನೆಯೂ ನಂಟಿಲ್ಲ. ಇದಕ್ಕಿಂತ ಹೆಚ್ಚಿಗೇನೂ ಹೇಳಲಾರೆ. ಮುಂದೆ ನನ್ನನ್ನು ನೀವು ದೂರಬಾರದು. ಅದಕ್ಕೇ ಯೋಚಿಸಿ ತೀರ್ಮಾನಕ್ಕೆ ಬನ್ನಿ ಎಂದಳು.

ಅವಳ ಮಾತುಗಳನ್ನು ಕೇಳಿದಾಗ ಅಸಹಾಯಕ ಹೆಣ್ಣಿನ ಆರ್ತಧ್ವನಿಯಂತಿತ್ತು. ಬಹಳಷ್ಟು ಆಲೋಚಿಸಿದೆ. ಕೊನೆಗೆ ಇವಳೇ ನನ್ನ ಬಾಳಸಂಗಾತಿಯಾಗಲು ಅರ್ಹಳೆಂದು ನಿರ್ಧರಿಸಿಬಿಟ್ಟೆ. ಮತ್ಯಾವ ತನಿಖೆಯೂ ನನಗೆ ಆವಶ್ಯಕವೆಂದೆನಿಸಲಿಲ್ಲ. ನನ್ನ ಒಪ್ಪಿಗೆಯನ್ನು ಸೂಚಿಸಿದಾಗ ಆಕೆಯು ತನ್ನ ಸಮ್ಮತಿಯನ್ನು ಸೂಚಿಸಿದ್ದಾಳೆ.

ಈಗ ನಿಮ್ಮ ಸರದಿ. ನಾನು ಇಷ್ಟೆಲ್ಲ ವಿವರಣೆಗಳನ್ನು ನಿಮ್ಮ ಮುಂದೆ ಹೇಳಲು ಸಾಧ್ಯವಾಗದೆ ಈ ಪತ್ರದ ಮೊರೆಹೋದೆ. ನಿಮಗೆ ನಾನು ಹೇಳಿರುವುದೆಲ್ಲಾ ಸಮಂಜಸವೆನಿಸಿದರೆ ನಾನು ವಿವಾಹವಾಗಿ ನಿಮ್ಮಾಸೆಯನ್ನು ಪೂರೈಸುತ್ತೇನೆ. ಅವಸರವೇನಿಲ್ಲ, ನಿಧಾನವಾಗಿ ಆಲೋಚಿಸಿ ನಿರ್ಧಾರ ತಿಳಿಸಿ. ಪತ್ರದ ಜೊತೆ ಸುಮಾಳ ಭಾವಚಿತ್ರವೊಂದನ್ನು ಕಳುಹಿಸಿದ್ದೇನೆ. ನೋಡಿ ನೀವು ಒಪ್ಪಿದರೆ ಮನೆಗೆ ಕರೆತರುತ್ತೇನೆ.

ಇಂತೀ ನಮಸ್ಕಾರಗಳು
ನಿಮ್ಮ ಮಗ ಸುಹಾಸ.

ಪತ್ರ ಓದಿ ಮುಗಿಸಿದ ಶಾರದಮ್ಮ ತಮ್ಮ ವಯಸ್ಸನ್ನೂ ಮರೆತು ಕುಣಿದಾಡಿಬಿಟ್ಟರು. . “ಎಲ್ಲಿ ಆ ಫೋಟೋ ಕೊಡಿ” ಎಂದು ಗಂಡನಿಂದ ಕೇಳಿ ಪಡೆದುಕೊಂಡು ನೋಡುತ್ತಲೇ ಇದ್ದರು. ಒಮ್ಮೆಯಲ್ಲ ಹತ್ತಾರು ಬಾರಿ .. “ ಈ ಹುಡುಗಿ ನಮ್ಮ ಮಗಳು ಸಿರಿ ಇದ್ದಹಾಗೆ ಇಲ್ಲವೇ? ಅದೇ ಕಣ್ಣು, ಮೂಗು, ನಿಲುವು” ಎಂದು ಉದ್ಗಾರವೆತ್ತಿದರು.
ಶಾರೀ, ನಿನಗೆ ಭ್ರಮೆ. ಯಾವ ಹೆಣ್ಣುಮಕ್ಕಳನ್ನು ನೋಡಿದರೂ ‘ಸಿರಿ’ ಯಂತೆಯೇ ಕಾಣುತ್ತಾರೆ. ಸರಿ, ಅವನ್ನೆಲ್ಲ ಪಕ್ಕಕ್ಕಿಡು. ಈಗ ನಿನ್ನ ಮಗನಿಗೆ ಸಾರಿ ಸಾರಿ ನಮ್ಮ ಮಗನಿಗೆ ಏನಂತ ಉತ್ತರ ಬರೆಯಲಿ ಹೇಳುತ್ತೀಯಾ?” ಎಂದು ಕೇಳಿದರು ರಾಯರು.
“ಏನೆಂದಿರಿ ! ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರೂಂತ, ಸುಮಾರು ವರ್ಷಗಳಿಂದ ಮದುವೆಯಾಗೂ ಮಗನೇ ಅಂತ ಜಪ ಮಾಡುತ್ತಿದ್ದ ನಾನು ಈಗ ತಡಮಾಡಿದರೆ ಹೇಗೆ, ಛೇ ಛೇ..ಅದಾಗದು. ಇರಲಿ ನಿಮ್ಮ ಉತ್ತರವೇನು?” ಎಂದು ಮರು ಪ್ರಶ್ನೆ ಕೇಳಿದರು ಶಾರದಮ್ಮ.

“ನನ್ನದೇನು ಬೇರ ಇರುತ್ತದೆಯೇ, ಡಿಟೋ ಡಿಟೋ..ಮಗನೇ ಹೇಳಿರುವಂತೆ ಇದೆಲ್ಲ ಬಹಳ ದಿನಗಳಿಂದ ನಡೆದಿರುವ ಬೆಳವಣಿಗೆ. ತುಂಬ ಯೋಚಿಸಿ ತೀರ್ಮಾನಕ್ಕೆ ಬಂದಿದ್ದಾನೆ. ನಾವೂ ಅಷ್ಟೇ ಆ ಹುಡುಗಿಯ ಪೂರ್ವಾಪರ, ಜಾತಿಪ್ರವರ ಇವುಗಳನ್ನು ಪ್ರಶ್ನಿಸದೆ ಆದಷ್ಟು ಬೇಗ ನಮ್ಮ ಅಭಿಪ್ರಾಯ ತಿಳಿಸಿ ಬಿಡೋಣ. ಹೋಗು ಅವನೀಗ ಭೂಮಿಕಾಳನ್ನು ಲಾಲ್‌ ಭಾಗಿನಿಂದ ಕರೆದುಕೊಂಡು ಬರುವಷ್ಟರಲ್ಲಿ ನೀನು ಅಡುಗೆ ವೆಂಕಮ್ಮನವರಿಗೆ ಹೇಳಿ ಏನಾದರೂ ಸಿಹಿ ಮಾಡಿಸು. ಅದನ್ನು ಕಂಡು ಮಗ ಕೇಳಿದರೆ ಆಗ ನಮ್ಮ ಉತ್ತರ ಇದೇ ಎಂದು ಹೇಳೋಣ. ಆ ಹುಡುಗಿ ಮನೆಗೆ ಬಂದಾಗ ಅಪ್ಪಿತಪ್ಪಿಯೂ ಏನನ್ನೂ ಕೇಳಬೇಡ. ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋದೀತು. ಇಷ್ಟು ವರ್ಷ ಮದುವೆ ಬಗ್ಗೆ ಉತ್ಸಾಹ ತೋರದೆ ಏನೇನೋ ಕಾರಣಗಳನ್ನು ಮುಂದೊಡ್ಡುತ್ತಿದ್ದ ಸುಹಾಸನ ಮನಸ್ಸು ಈಗ ಪಕ್ವವಾಗಿದೆ. ಅಕ್ಕನ ನೆನಪಿನ ನೋವಿನಲ್ಲೇ ಒದ್ದಾಡುತ್ತಿದ್ದ ಅವನನ್ನು ಈ ಹುಡುಗಿ ಗೆದ್ದಿದ್ದಾಳೆ ಅಂದರೆ ಇನ್ನೇನು ಬೇಕು. ಅವರ ಮುಂದಿನ ಬದುಕಿಗೊಂದು ನೆಲೆ ಕಾಣಿಸಿ ನಮ್ಮ ಕರ್ತವ್ಯ ಮುಗಿಸಿಕೊಳ್ಳೋಣ. ಇದರ ಮೇಲೆ ದೈವೇಚ್ಛೆ” ಎಂದು ಮಾತು ಮುಗಿಸಿ ಪತ್ರ, ಭಾವಚಿತ್ರವನ್ನು ತೆಗೆದಿರಿಸಿಕೊಂಡರು.

ಸ್ವಲ್ಪ ಹೊತ್ತಿನಲ್ಲೇ ಮಾವನ ಜೊತೆಯಲ್ಲಿ ಬಂದ ಮೊಮ್ಮಗಳು ಭೂಮಿಕಾಳನ್ನು ನೋಡಿದರು ಶಾರದಮ್ಮ. ಆಕೆಯನ್ನು ಎತ್ತಿಕೊಂಡು ಅಪ್ಪಿ ಮುದ್ದಾಡತೊಡಗಿದರು. ಆಗ ಸುಹಾಸ “ಅಮ್ಮಾ ಪುಟ್ಟಿಯನ್ನು ಕೆಳಗೆಬಿಡಿ, ಅವಳ ಫ್ರಾಕೆಲ್ಲ ಧೂಳಾಗಿದೆ. ಮೈಕೈಯೆಲ್ಲ ಬೆವರು ಮುದ್ದೆಯಾಗಿದೆ. ಸ್ವಲ್ಪ ಫ್ರೆಷ್ಷಾಗಲಿ” ಎಂದು ಹೇಳಿದ.
ಮಗನ ಮಾತಿಗೆ “ ನನಗಾದ ಸಂತೋಷಕ್ಕೆ ನಿನ್ನನ್ನು ಎತ್ತಿ ಮುತ್ತಾಡಬೇಕೆನ್ನಿಸುತ್ತಿದೆ. ಆದರೆ ಅದಾಗದಲ್ಲ ಅಂತ ಅವಳನ್ನು ಮುದ್ದಿಸಿದೆ” ಎನ್ನುತ್ತ ಭೂಮಿಕಾಳ ಕೆನ್ನೆಗೆ, ಗಲ್ಲಕ್ಕೆ ಮುತ್ತಿಟ್ಟು ಕೆಳಕ್ಕಿಳಿಸಿದರು.
ತಾಯಿಯ ಅಪರಿಮಿತ ಸಂತಸ ಕಂಡ ಸುಹಾಸ, ಓ..ನನ್ನ ಪತ್ರವನ್ನು ಇವರು ಓದಿದ್ದಾರೆಂದು ತಿಳಿದು, ಇರಲಿ ಆತುರಬೇಡ ಎಂದುಕೊಂಡು “ಪುಟ್ಟೀ ಬಾ ನಾವಿಬ್ಬರೂ ಫ್ರೆಷ್ಷಾಗಿ ಬರೋಣ” ಎಂದು ಭೂಮಿಕಾಳನ್ನು ಕರೆದುಕೊಂಡು ಬಾತ್‌ರೂಮಿನತ್ತ ನಡೆದ.

ಅವರಿಬ್ಬರೂ ಸ್ನಾನ ಮುಗಿಸಿ ಬೇರೆ ಉಡುಪು ಧರಿಸಿ ಬರುವಷ್ಟರಲ್ಲಿ ಊಟಕ್ಕೆ ಸಿದ್ಧಪಡಿಸಿದ್ದರು ವೆಂಕಮ್ಮ. ಅವರೆಲ್ಲರು ಬಂದು ಕುಳಿತಾಗ ಬಡಿಸಲು ನಿಂತ ಶಾರದಮ್ಮನವರು “ವೆಂಕಮ್ಮ, ನೀವು ಪುಟ್ಟಿಗೆ ಊಟ ಮಾಡಿಸಿ. ನಾವುಗಳೇ ಬಡಿಸಿಕೊಳ್ಳುತ್ತೇವೆ” ಎಂದರು.
ವೆಂಕಮ್ಮ ಅವರ ಮಾತಿನಂತೆ ಮಾಡಿದರೂ ಮನೆಯ ಹಿರಿಮಗಳು ಮರೆಯಾದ ಮೇಲೆ ಈ ಮನೆಯಲ್ಲಿ ‘ಸಿಹಿ’ ಎಂಬ ಪದಾರ್ಥ ನೇಪಥ್ಯಕ್ಕೆ ಸರಿದಿತ್ತು. ಯಾರಾದರೂ ಅತಿಥಿಗಳು ಬಂದಾಗ ಅಥವಾ ಮಗು ಕೇಳಿದಾಗ ಮಾತ್ರ ಅದಕ್ಕೆ ವಿನಾಯಿತಿ. ಈಗ ಮತ್ತೇನಾದರೂ ಮಂಗಳಕಾರ್ಯಕ್ಕೆ ನಾಂದಿ ಹಾಡುತ್ತಿದ್ದಾರಾ? “ಪಾಪ ಶ್ರೀಮಂತಿಕೆಯಿದ್ದರೂ ನಿಗರ್ವಿಗಳು, ಚಿಕ್ಕಂದಿನಿಂದಲೂ ನನಗೆ ಇವರ ಮನೆಯ ಉಪ್ಪಿನ ಋಣ ನಮ್ಮ ಕುಟುಂಬಕ್ಕಿದೆ. ಭಗವಂತಾ ನನ್ನ ಊಹೆ ನಿಜವಾಗಲಿ” ಎಂದು ಮನದಲ್ಲೇ ಹಾರೈಸುತ್ತ ಭೂಮಿಕಾಳಿಗೆ ಊಟ ಮಾಡಿಸಲು ಅವಳ ಕೈಹಿಡಿದು ಒಳನಡೆದರು.

ಊಟದಲ್ಲಿ ಒಂದು ಪಲ್ಯ, ಕೋಸಂಬರಿ, ಚಿತ್ರಾನ್ನ, ಗ್ಲಾಸಿನಲ್ಲಿ ಗಸಗಸೆ ಪಾಯಸ, ಸಣ್ಣ ಬಟ್ಟಲಲ್ಲಿ ಈರುಳ್ಳಿ ಪಕೋಡ ನೋಡಿ ಸುಹಾಸ “ಏನಮ್ಮಾ ಹಬ್ಬದಡಿಗೆಯನ್ನೇ ಮಾಡಿಸಿಬಿಟ್ಟಿದ್ದೀರಿ” ಎಂದ.
“ನಿನ್ನ ಪತ್ರವನ್ನು ಓದಿದ ನಾವು ಇದರ ಮುಖೇಣ ನಮ್ಮಿಬ್ಬರ ಉತ್ತರವನ್ನು ಕೊಟ್ಟಿದ್ದೇವೆ ಸರೀನಾ ಮಗನೇ?” ಎಂದರು ಸದಾಶಿವರಾಯರು.

ಅವರು ಒಪ್ಪಿಕೊಳ್ಳುತ್ತಾರೆಂಬ ಭರವಸೆಯಿದ್ದರೂ ಇಷ್ಟು ಬೇಗ ಒಮ್ಮತದ ತೀರ್ಮಾನಕ್ಕೆ ಬರುತ್ತಾರೆಂಬ ನಿರೀಕ್ಷೆ ಇಟ್ಟುಕೊಂಡಿರದ ಸುಹಾಸನಿಗೆ ಅಮಿತಾನಂದವಾಯಿತು. ಹೊರಗೇನೂ ತೋರ್ಪಡಿಸಿಕೊಳ್ಳದೆ ಥ್ಯಾಂಕ್ಸ್ ಎಂದಷ್ಟೇ ನುಡಿದು ಊಟ ಮುಂದುವರೆಸಿದ. ರಾಯರು “ಮಗೂ ಸುಹಾಸ ಪುರೋಹಿತರನ್ನು ಕೇಳಿ ಒಂದು ತಾರೀಖು ಗೊತ್ತುಮಾಡಲೇ. ಏಕೆಂದರೆ ಛತ್ರಗಳು ಸಿಗುವುದು ಕಷ್ಟ ಕಣೋ” ಎಂದು ಕೇಳಿದರು.

ತಂದೆಯ ಮಾತಿಗೆ ಸುಹಾಸ “ಅಪ್ಪಾ, ಅಮ್ಮಾ ಮದುವೆಗೆ ಒಪ್ಪಿದ್ದೇನೆ. ಅಂದ ಮಾತ್ರಕ್ಕೆ ಅಕ್ಕನನ್ನು ಮರೆತಿದ್ದೇನೆಂದಲ್ಲ. ಅವಳಿಲ್ಲದೆ ಮನೆಯಲ್ಲಿ ಸಂಭ್ರಮ, ವೈಭವದ ಪ್ರದರ್ಶನ ನನಗೆ ಬೇಡಮ್ಮ. ಅಲ್ಲದೆ ನಾನು ಕೈ ಹಿಡಿಯಲಿರುವ ಹುಡುಗಿಗೆ ಬಂಧುಬಳಗದವರ ಸಂಪರ್ಕವಿಲ್ಲ. ಸುಮ್ಮನೆ ಜನಸೇರಿ ಅವನ್ನೆಲ್ಲ ಕೆದಕುವುದು ನನಗಿಷ್ಟವಿಲ್ಲ..ಅದರಿಂದ ಅವಮಾನ, ದುಃಖ. ಆದ್ದರಿಂದ ರಿಜಿಸ್ಟ್ರಾರ್ ಕಛೇರಿಯಲ್ಲಿ ವಿವಾಹದ ನೋಂದಣಿ ಮಾಡಿಸಿ ದೇವರ ಸನ್ನಿಧಿಯಲ್ಲಿ ಮಾಂಗಲ್ಯಧಾರಣೆ, ಆಪ್ತೇಷ್ಟರೊಡನೆ ಒಂದು ಔತಣ. ಇಷ್ಟಕ್ಕೆ ಮಾತ್ರ ಸೀಮಿತವಾಗಿರಲಿ ಪ್ಲೀಸ್” ಎಂದು ಮುಂದೆ ಮಾತುಗಳನ್ನು ಮುಂದುವರೆಸಲು ಆಸ್ಪದ ಕೊಡದಂತೆ ಊಟ ಮುಗಿಸಿ ಎದ್ದು ಹೋದ ಮಗನನ್ನು ನೋಡಿ ದಂಪತಿಗಳಿಬ್ಬರೂ ನಿಡಿದಾದ ಉಸಿರು ಬಿಟ್ಟರು.

ರಾಯರು “ಶಾರೀ, ಇಲ್ಲದ ಕನಸು ಕಾಣುವುದನ್ನು ಬಿಡು. ಸದ್ಯಕ್ಕೆ ಮದುವೆಗೆ ಒಪ್ಪಿದ್ದಾನಲ್ಲ ಅಷ್ಟು ಸಾಕು. ಅವನೇನು ಹೇಳುತ್ತಾನೋ ಹಾಗೆ ಕೇಳಿಬಿಡೋಣ. ಅದರಂತೆ ನಡೆದುಕೊಳ್ಳೋಣ” ಎಂದು ಹೆಂಡತಿಗೆ ಸಾಂತ್ವನ ಹೇಳಿದರು.
ಗಂಡನ ಮಾತಿನಲ್ಲಿದ್ದ ಸತ್ಯತೆ ಅರಿತ ಶಾರದಮ್ಮ ತಮಗೆತಾವೇ ಮನಸ್ಸನ್ನು ನಿಯಂತ್ರಿಸಿಕೊಂಡರು. ಮುಂದೆ ಊಟ ಮಾಡಲಾದೆ ತಟ್ಟೆಯಲ್ಲಿ ಕೈತೊಳೆದು ಮೌನವಾಗಿ ಹೊರನಡೆದರು.

ಇತ್ತ ಸುಹಾಸ ಮತ್ತು ಮಗು ಭೂಮಿಕಾಳೊಡನೆ ಲಾಲ್‌ಬಾಗಿಗೆ ಹೋಗಿ ತನ್ನ ಮನೆಗೆ ಹಿಂತಿರುಗಿದ ಸುಮಾ ತಾನು ತೆಗೆದುಕೊಂಡ ನಿರ್ಧಾರ ಸರಿಯಾಗಿದೆಯೇ ಎಂದು ಯೋಚಿಸಿದಳು. ಉಹುಂ ಯಾವ ಕೋನದಿಂದ ಆಲೋಚಿಸಿದರೂ ತಪ್ಪೆನಿಸಲಿಲ್ಲ ಎಂದು ಸಮಾಧಾನವಾಯಿತು. ಸುಹಾಸ ತಾನು ಕೆಲಸ ಮಾಡುತ್ತಿರುವ ಕಂಪೆನಿಯ ಬಾಸ್, ಅವಿವಾಹಿತರು. ರೂಪು, ಗುಣ, ಅಂತಸ್ತನ್ನು ನೋಡಿ ಅವರನ್ನು ತಮ್ಮತ್ತ ಸೆಳೆದುಕೊಳ್ಳುವ ಹುಡುಗಿಯರ ಸಂಖ್ಯೆಗೇನೂ ಕಡಿಮೆ ಇರಲಿಲ್ಲ. ಅಲ್ಲಿ ಕೆಲಸಕ್ಕೆ ಸೇರಿದಾಗಿನಿಂದಲೂ ನೋಡುತ್ತಿದ್ದೇನೆ. ನನ್ನ ಪರಿಸ್ಥಿತಿಯನ್ನು ಜಾಗೃತವಾಗಿಟ್ಟುಕೊಂಡು ‘ಬಡವಾ ನೀನು ಮಡಗಿದಂತಿರು’ ಎನ್ನುವಂತೆ ನನ್ನ ಪಾಡಿಗೆ ನಾನಿದ್ದೇನೆ. ಆದರೆ ಸುಹಾಸನ ಮನೆಯಲ್ಲಿ ನಡೆದ ಅವರಕ್ಕನ ಸಾವಿನ ದುರಂತದ ಸಮಯದಲ್ಲಿ ಎಲ್ಲರಂತೆ ನಾನೂ ಅವರಿಗೆ ಸಾಂತ್ವನದ ಮಾತುಗಳನ್ನಾಡಿದ್ದೆ. ನಂತರ ನಮ್ಮ ನಡುವೆ ಆಗಿಂದಾಗ್ಗೆ ಕಷ್ಟಸುಖಗಳ ಮಾತಿನ ವಿನಿಮಯ ನಡೆದಿತ್ತು. ಅವರಕ್ಕನ ಮಗಳ ಜವಾಬ್ದಾರಿಯನ್ನು ಎಳೆಎಳೆಯಾಗಿ ಬಿಡಿಸಿ ಹೇಳುವಷ್ಟು ಆತ್ಮೀಯತೆ ಹೀಗೇ ಬೆಳೆಯಿತು. ಅದು ಮುಂದುವರೆಯುತ್ತಾ ಈ ಹಂತವನ್ನು ಮುಟ್ಟಿದೆ. ಇಂದೇ ನಾನು ಅವರೊಟ್ಟಿಗೆ ಹೊರಗೆ ಹೋದದ್ದು. ಅಂದುಕೊಳ್ಳುತ್ತಲೇ ತನ್ನ ಮೊಬೈಲ್ ಓಪನ್ ಮಾಡಿದಳು. “ನಾಳೆ ಬೆಳಗ್ಗೆ ಹತ್ತು ಗಂಟೆಗೆ ಸಿದ್ಧವಾಗಿರಿ ನಿಮ್ಮ ಏರಿಯಾದ ಬಸ್‌ಸ್ಟಾಪ್ ಬಳಿ ಕಾಯುತ್ತಿರಿ. ನಾನಲ್ಲಿಗೆ ಬಂದು ನಿಮ್ಮನ್ನು ನಮ್ಮ ಮನೆಗೆ ಕರೆದುಕೊಂಡು ಹೋಗುತ್ತೇನೆ” ಎಂಬ ಸುಹಾಸನ ಮೆಸೇಜ್ ಕಾಣಿಸಿತು. ಓದಿದವಳೇ “ನೀವೇನೂ ಬರುವುದು ಬೇಡ, ನಿಮ್ಮ ಮನೆಯೆಲ್ಲಿದೆ ಎಂದು ನೋಡಿದ್ದೇನೆ. ನಾನೇ ಬರುತ್ತೇನೆ.” ಎಂದು ಮರು ಮೆಸೇಜ್ ಮಾಡಿದಳು. ಅದಕ್ಕುತ್ತರ “ಓ.ಕೆ.” ಎಂದು ಬಂದಾಗ ಮನದಲ್ಲೇ ನಕ್ಕಳು.

ಮಾರನೆಯ ದಿನ ಸುಮಾ ಬೆಳಗ್ಗೆಯೇ ತಯಾರಾಗಿ ತನ್ನ ಸ್ಕೂಟಿ ಏರಿ ಸಮಯಕ್ಕೆ ಸರಿಯಾಗಿ ಸುಹಾಸನ ಮನೆಯನ್ನು ತಲುಪಿದಳು. ಅವರು ಬಾಗಿಲಲ್ಲೇ ಇರಬಹುದೆಂದುಕೊಂಡಿದ್ದವಳಿಗೆ ವಾಚ್‌ಮನ್ ಬಿಟ್ಟು ಬೇರೆ ಯಾರೂ ಕಾಣಿಸಲಿಲ್ಲ. ಸ್ವಲ್ಪ ಆತಂಕವಾಯಿತು. ಫೋನ್ ಮಾಡೋಣವೆಂದು ಹುಡುಕಿದಾಗ ಮೊಬೈಲನ್ನು ಮನೆಯಲ್ಲೇ ಬಿಟ್ಟುಬಂದಿದ್ದು ತಿಳಿಯಿತು. ಏನು ಮಾಡುವುದೆಂದು ತಿಳಿಯದೆ ನೋಡುತ್ತಿರುವಾಗಲೇ ಮನೆಯ ಮುಂಬಾಗಿಲಿನಿಂದ ಒಬ್ಬ ಹಿರಿಯರು ಹೊರಬಂದರು. ಅವರನ್ನು ಕಂಡಕೂಡಲೇ ಸುಮಾಳಿಗೆ ಹೋದಜೀವ ಬಂದಂತಾಯಿತು. ತಡಮಾಡದೆ ಅವರಿಗೆ “ನಮಸ್ತೆ” ಎಂದಳು.
ತಿರುಗಿದ ವ್ಯಕ್ತಿ ಸದಾಶಿವರಾಯರು. ಅವರಿಗೆ ಸುಮಾಳ ಗುರುತು ಹತ್ತಿತು. “ಓ..!ಸುಮಾ, ಬಾರಮ್ಮಾ, ಸುಹಾಸನಿಗೆ ಯಾವುದೋ ಅರ್ಜೆಂಟ್ ಕಾಲ್ ಬಂತು. ಹೋಗಿದ್ದಾನೆ. ಈಗ ಬಂದುಬಿಡುತ್ತಾನೆ.” ಎಂದು ಆತ್ಮೀಯವಾಗಿ ಅವಳನ್ನು ಮನೆಯೊಳಕ್ಕೆ ಆಹ್ವಾನಿಸಿದರು. ಅವರ ಹಿಂದೆಯೇ ನಡೆದಳು.

ಮನೆಯ ಬಾಗಿಲನ್ನು ಅಗಲವಾಗಿ ತೆರೆಯುತ್ತಾ “ಶಾರೀ, ಎಲ್ಲಿದ್ದೀಯೆ? ಬೇಗ ಬಾ ಯಾರು ಬಂದಿದ್ದಾರೆ ನೋಡು “ ಎಂದು ಉತ್ಸಾಹದಿಂದ ಪತ್ನಿಯನ್ನು ಕರೆದರು.
ಹೊರಬಂದು ಸುಮಾಳನ್ನು ನೋಡಿದ ಶಾರದಮ್ಮನವರು ಅವಾಕ್ಕಾಗಿ ನಿಂತುಬಿಟ್ಟರು. ಹುಡುಗಿ ದಂತದ ಬೊಂಬೆಯಂತಿದ್ದಾಳೆ. ಎತ್ತರ, ನಿಲುವು, ಕೇದಗೆಯ ಮೈಬಣ್ಣ, ಲಕ್ಷಣವಾದ ಮುಖ, ಕ್ರಮಬದ್ಧವಾದ ಅಂಗಸೌಷ್ಠವ, ಆರೋಗ್ಯ ಸೂಸುವ ಕಣ್ಗಳು, ತುಸುವೇ ಬಿರಿದಂತಿದ್ದ ಪುಟ್ಟಬಾಯಿ, ಅಳ್ಳಕವಾಗಿ ಹೆಣೆದಿದ್ದ ಜಡೆ, ಅದಕ್ಕೆ ಸಿಕ್ಕಿಸಿದ್ದ ಸಣ್ಣ ಗುಲಾಬಿ ಹೂ, ಉಟ್ಟಿದ್ದ ತೆಳುನೀಲಿಬಣ್ಣದ ಸೀರೆ, ಅದಕ್ಕೊಪ್ಪುವ ಬ್ಲೌಸ್, ಕತ್ತಿನಲ್ಲಿ, ಕಿವಿಯಲ್ಲಿ, ಕೈಯಲ್ಲಿ ತೊಟ್ಟಿದ್ದ ಹೊಂದಿಕೆಯಾಗುವಂತಹ ಆಭರಣಗಳು. ಶಿಲಾಬಾಲಿಕೆ ಎದ್ದು ಬಂದಂತೆ ಭಾಸವಾಯಿತು. ಅವರ ನೆಟ್ಟ ನೋಟದಿಂದ ಗಲಿಬಿಲಿಗೊಂಡ ಸುಮಾ ಸಾವರಿಸಿಗೊಂಡು ಅವರಿಗೆ ಕೈಜೋಡಿಸಿ “ನಮಸ್ತೆ” ಎಂದಳು.

ತಮ್ಮ ನಡವಳಿಕೆಯಿಂದ ತಾವೇ ನಾಚಿಕೊಂಡು ಅವಳನ್ನು ಕರೆದು ಸೋಫಾದ ಮೇಲೆ ಕುಳ್ಳಿರಿಸಿದರು. ತಾವೂ ಪಕ್ಕದಲ್ಲೇ ಕುಳಿತರು. ಅವರಿಗೆದುರಾಗಿ ಕುಳಿತಿದ್ದ ಸದಾಶಿವರಾಯರು ಸುರಸುಂದರಾಂಗನಾದ ನನ್ನ ಮಗನಿಗೆ ಈಕೆ ಹೇಳಿಮಾಡಿಸಿದ ಜೋಡಿ. ನಾವೇ ಹುಡುಕಿದ್ದರೂ ಇಂತಹ ಚೆಲುವೆ ಸಿಗುತ್ತಿರಲಿಲ್ಲ. ಹಾಗೇ ನನ್ನ ಮಗ ಹೇಳಿದಂತೆ ಗುಣ ಕೂಡ ಅಪರಂಜಿಯಂತಾದರೆ ಸಾಕಪ್ಪಾ ಭಗವಂತ ಎಂದು ಮನಸ್ಸಿನಲ್ಲಿಯೇ ಪ್ರಾರ್ಥಿಸಿದರು.

ಸುಹಾಸ ಹೊರಗಿನಿಂದ ಬರುವಷ್ಟರಲ್ಲಿ ಮೂರು ಜನರೂ ಬಹುದಿನಗಳ ಪರಿಚಯಸ್ಥರಂತೆ ಮಾತುಕತೆಗಳಲ್ಲಿ ಮಗ್ನರಾಗಿದ್ದರು. ಅದನ್ನು ಕಂಡು ಆತ ನೆಮ್ಮದಿಯ ನಿಟ್ಟುಸಿರು ಬಿಟ್ಟ.
ಉಟೋಪಚಾರಗಳನ್ನು ಮುಗಿಸಿಕೊಂಡು ಸಂಜೆಯವರೆಗೆ ಅಲ್ಲಿದ್ದು ತನ್ನ ಮನೆಗೆ ಹೊರಟಳು. ಅವಳನ್ನು ಬಿಟ್ಟುಬರಲು ಸುಹಾಸನೂ ಸಿದ್ಧನಾದ. ಅದನ್ನು ನೋಡಿ ಸುಮಾ “ಬೇಡಿ, ನಾನು ನನ್ನ ಸ್ಕೂಟಿಯಲ್ಲಿ ಬಂದಿದ್ದೇನೆ” ಎಂದು ಹೇಳಿ ಎಲ್ಲರಿಗೂ ವಂದಿಸಿ ತನ್ನ ಮನೆಗೆ ಹಿಂದಿರುಗಿದಳು.

ನಂತರ ನಡೆದದ್ದೆಲ್ಲ ಕನಸಿನಂತೆ ನಡೆದುಹೋಯಿತು. ಸರಳ ವಿವಾಹವಾದರೂ ಶಾರದಮ್ಮ ತಮ್ಮ ಸೊಸೆಗೆ ಏನೇನು ಕೊಡಬೇಕೋ ಎಲ್ಲವನ್ನೂ ಕೊಟ್ಟು ಸಾಲಂಕೃತಳಾಗಿ ಅವಳನ್ನು ಮನೆ ತುಂಬಿಸಿಕೊಂಡರು. ದಿಢೀರನೆ ಆದ ಈ ಪರಿಣಯ ಬಂಧುಬಾಂಧವರಲ್ಲಿ, ಕಂಪೆನಿಯ ಸಿಬ್ಬಂದಿವರ್ಗದವರಲ್ಲಿ, ವರ್ತಕರ ಗುಂಪಿನಲ್ಲಿ ಹೊಸ ಸಂಚಲನವನ್ನೇ ಉಂಟುಮಾಡಿತು. ತಂತಮಗೆ ತೋಚಿದ ರೀತಿಯಲ್ಲಿ ಆಕ್ಷೇಪಗಳ ಅಕ್ಷತೆಗಳನ್ನು ಉದುರಿಸಿದರು.

ಇದ್ಯಾವುದರ ಕಡೆಗೂ ಗಮನಹರಿಸದೆ, ಸಮಝಾಯಿಷಿ ಕೊಡುವ ಸಾಹಸ ಮಾಡದೆ ರಾಯರು ಮೌನಕ್ಕೆ ಶರಣಾದರು. ಸ್ವಲ್ಪ ಕಾಲ ಕಳೆಯುವಷ್ಟರಲ್ಲೇ ಸುಮಾ ಮನೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚಾದಳು. ಪುಟ್ಟಿ ಭೂಮಿಕಾಳಿಗಂತೂ ಅತ್ಯಂತ ಪ್ರಿಯಳಾಗಿ ತಾಯಿ ದೊರೆದಂತಾಯಿತು. ಇದರಿಂದ ಹಿರಿಯರ ಚಿಂತೆ ದೂರವಾಗಿ ನೆಮ್ಮದಿ ಕಾಣುವಂತಾಯಿತು.

ಮಗ ಸುಹಾಸನ ಬಾಯಿಂದ ಸೊಸೆ ಕಂಪನಿಯಲ್ಲಿ ನಿರ್ವಹಿಸುತ್ತಿದ್ದ ಕೆಲಸವನ್ನು ತಿಳಿದಿದ್ದ ಹಿರಿಯರಿಬ್ಬರೂ “ಸುಮಾ, ನೀನು ಮತ್ತೆ ಕಂಪೆನಿಯಲ್ಲಿ ಕೆಲಸಕ್ಕೆ ಹೋಗುವುದಕ್ಕಿಂತ ನಮ್ಮ ಮನೆಯಲ್ಲೇ ನಿನ್ನದೇ ಒಂದು ಕಂಪ್ಯೂಟರ್ ಸೆಂಟರ್ ತೆಗೆಯಬಹುದು. ಇಲ್ಲೇ ಪಕ್ಕದ ಮಹಡಿಯಮೇಲೆ ದೊಡ್ಡದಾದ ಹಾಲ್, ಅದಕ್ಕೆ ಹಂದಿಕೊಂಡಂತೆ ಎರಡು ರೂಮುಗಳಿವೆ. ಹೊರಗಿನಿಂದ ಬಂದುಹೋಗಲು ಮೆಟ್ಟಿಲುಗಳಿವೆ. ನಮಗೇನೂ ತೊಂದರೆಯಾಗದು. ಇದನ್ನು ಮೊದಲು ಸುಹಾಸನೇ ಪ್ರಾರಂಭಿಸಬೇಕೆಂದು ಆಲೋಚಿಸಿದ್ದ. ತನ್ನ ಅಕ್ಕನ ಪ್ರಸಂಗದಿಂದ ವಿಮುಖನಾಗಿ ಕೈಬಿಟ್ಟ. ಅದನ್ನು ಈಗ ನೀನೇ ಚಾಲನೆ ಮಾಡು” ಎಂದು ಸಲಹೆ ನೀಡಿದರು. ಸುಹಾಸನೂ ಅದಕ್ಕೆ ದನಿಗೂಡಿಸಿದ. ಒಂದು ಶುಭದಿನದಲ್ಲಿ ಸುಮಾ ಅದನ್ನು ಪ್ರಾರಂಭಿಸಿಯೇಬಿಟ್ಟಳು.

ಹೀಗೇ ಸುಮಾರು ನಾಲ್ಕಾರು ತಿಂಗಳುಗಳು ಕಳೆದಿರಬೇಕು. ಒಂದುದಿನ ಶಾರದಮ್ಮ ಸದಾಶಿವರಾಯರಿಗೆ ಬಹಳ ವರ್ಷಗಳಿಂದ ಪರಿಚಿತರಾದ ಮ್ಯಾರೇಜ್ ಬ್ರೋಕರ್ ಎಂದೇ ಹೆಸರು ಪಡೆದಿದ್ದ ಪುಟ್ಟಣ್ಣನವರ ಆಗಮನವಾಯಿತು. ಯೋಗಕ್ಷೇಮದ ಮಾತುಗಳಾದ ಮೇಲೆ ಪುಟ್ಟಣ್ಣನವರು “ನೋಡಿ ರಾಯರೇ ನಿಮ್ಮ ಮಗನಿಗೆ ದಿವ್ಯವಾದ ಒಂದು ಸಂಬಂಧ ಅದೂ ನಿಮ್ಮ ಅಂತಸ್ಥಿಗೆ ತಕ್ಕಂತಹ ಮನೆಯವರಿಂದ ಹೆಣ್ಣಿನ ಫೋಟೋ, ಜಾತಕ ತಂದಿದ್ದೇನೆ” ಎಂದು ತಮ್ಮ ಬ್ಯಾಗಿನಿಂದ ಕಾಗದಗಳನ್ನು ಹೊರತೆಗೆದರು.

ಅವರ ಮಾತನ್ನು ಕೇಳಿದ ದಂಪತಿಗಳು ನಗುತ್ತಾ “ ಪುಟ್ಟಣ್ಣನವರೇ, ಇನ್ನು ನಿಮಗೆ ಆ ಶ್ರಮವೇ ಬೇಡ. ನಮ್ಮ ಹುಡುಗನ ಮದುವೆಯನ್ನು ಸರಳವಾಗಿ ಮಾಡಿ ಮುಗಿಸಿದೆವು. ಎಂದು ಹೇಳಿ ಒಳಗಿದ್ದ ತಮ್ಮ ಸೊಸೆ ಸುಮಾಳನ್ನು ಕರೆದು ಪುಟ್ಟಣ್ಣನವರಿಗೆ ಪರಿಚಯ ಮಾಡಿಸಿದರು.
ಸುಮಾ ಅವರಿಗೆ ನಮಸ್ಕರಿಸಿ “ಕ್ಷಮಿಸಿ ನನಗೀಗ ತರಗತಿಗಳನ್ನು ತೆಗೆದುಕೊಳ್ಳಬೇಕಾಗಿದೆ. ಬರುತ್ತೇನೆ” ಎಂದು ಉತ್ತರಕ್ಕೆ ಕಾಯದೇ ಹೊರನಡೆದಳು.

ಸುಮಾಳನ್ನು ಕಂಡ ತಕ್ಷಣ ಪುಟ್ಟಣ್ಣನವರಿಗೆ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಹೌದು ಅವಳೇ ಇವಳು ! ನನ್ನ ಪರಿಚಯವೇ ಇಲ್ಲದವಳಂತೆ ಭರ‍್ರನೇ ನಡೆದು ಹೋದಳಲ್ಲ. ಅಥವಾ ಅವಳಂತೆಯೇ ಕಾಣುವ ಇನ್ನೊಬ್ಬಳೋ ! ಇಲ್ಲ ನನ್ನ ಕಣ್ಣು ಮೋಸ ಹೋಗಲಾರದು, ಏನೋ ಯೋಚಿಸಿದಂತೆ ಮಾಡಿ “ಸರಿ ರಾಯರೇ ನಾನಿನ್ನು ಬರುತ್ತೇನೆ” ಎಂದು ಮನೆಯಿಂದ ಹೊರಬಂದರು. ಮನೆಯ ಹೊರಗಡೆಯಿದ್ದ ಮಾಲಿ ಗೋಪಾಲನನ್ನು “ಈಗ ಮನೆಯಿಂದ ಹೊರಬಂದಳಲ್ಲ ಆ ಹುಡುಗಿ ಎಲ್ಲಿಗೆ ಹೋದಳು?” ಎಂದು ಕೇಳಿದರು.

“ರೀ ಸ್ವಾಮಿ ನಿಮಗೆ ಬುದ್ಧಿಬೇಡವಾ, ಅವರು ಈ ಮನೆಯ ಚಿಕ್ಕೆಜಮಾನಿ. ಗೌರವವಿರಲಿ. ಪರಿಚಯಸ್ಥರ ಮನೆಯವರ ಬಗ್ಗೆ ಹೀಗೇನೇ ಮಾತನಾಡುವುದು. ಅದೋ ಪಕ್ಕದ ಮಹಡಿಯ ಮೇಲೆ ಕಂಪ್ಯೂಟರ್ ಟ್ರೈನಿಂಗ್ ಕೊಡುತ್ತಾರೆ, ಕ್ಲಾಸುಗಳನ್ನು ನಡೆಸುತ್ತಾರೆ” ಎಂದು ಹೇಳಿ ತನ್ನ ಕೆಲಸದಲ್ಲಿ ಮಗ್ನನಾದನು.
ಹೂಂ..ಚಿಕ್ಕೆಜಮಾನಿ..ಎಂದು ಹಲ್ಲು ಮಸೆಯುತ್ತಾ ತಡಮಾಡದೇ ಸರಸರನೆ ಮೆಟ್ಟಿಲುಗಳನ್ನು ಹತ್ತಿ ಮಹಡಿ ಮೇಲಕ್ಕೆ ಹೋದರು. ವಿಶಾಲವಾದ ಕೊಠಡಿ. ಅಚ್ಚುಕಟ್ಟಾಗಿ ಸಾಲುಸಾಲು ಟೇಬಲ್ಲುಗಳನ್ನು ಜೋಡಿಸಲಾಗಿತ್ತು. ಪ್ರತಿಯೊಂದು ಟೇಬಲ್ಲಿನ ಮೇಲೆ ಕಂಪ್ಯೂರ‍್ಗಳಿದ್ದವು. ಕುಳಿತುಕೊಳ್ಳಲು ಎದುರಿಗೆ ಖುರ್ಚಿಗಳು. ಒಳಗಿನ ರೂಮಿನಲ್ಲಿ ಸಿಸ್ಟಂ ಮುಂದೆ ಕುಳಿತಿದ್ದ ಸುಮಾ ಕಾಣಿಸಿದಳು. ಬೇರೆ ಯಾರೂ ಇರಲಿಲ್ಲ. ಧೈರ್ಯ ಬಂದಂತಾಯಿತು. ತನ್ನ ಇರುವಿಕೆಯನ್ನು ತಿಳಿಸಲೆಂಬಂತೆ ಮೆಲ್ಲಗೆ ಕೆಮ್ಮಿದರು.

ಯಾರೋ ವಿದ್ಯಾರ್ಥಿಗಳು ಬಂದರೆಂದು ತಿಳಿದು ಒಳಗಿನಿಂದ ಬಂದ ಸುಮಾ ಪುಟ್ಟಣ್ಣನವರನ್ನು ಕಂಡಾಕ್ಷಣ ಅಧೀರಳಾದಳು. ಆದರೂ ಅದನ್ನು ತೋರ್ಪಡಿಸಿಕೊಳ್ಳದೆ ಕುಳಿತುಕೊಳ್ಳಲು ಹೇಳಿದಳು.
“ಏನೂ ಕುಳಿತುಕೊಳ್ಳಬೇಕಂತೇ, ನಾನೇನು ಹರಿಕಥೆ ಹೇಳಲು ಬಂದೆನೇ. ನಾನು ನಿನಗೆ ಅಪರಿಚಿತನೇ? ಏನು ಮೋಡಿ ಮಾಡಿ ಇಲ್ಲಿಗೆ ಸೇರಿಕೊಂಡು ಬಿಟ್ಟಿದ್ದೀಯೆ. ನಿನ್ನ ಹಿಂದಿನ ವಿವರಗಳನ್ನು ಬಿಚ್ಚಿಡುತ್ತೇನೆ” ಎಂದು ಗುಟುರು ಹಾಕಿದರು.
ಸುಮಾಳಿಗೆ ಹೃದಯವೇ ಬಾಯಿಗೆ ಬಂದಂತಾಯಿತು. “ಪುಟ್ಟಣ್ಣನವರೇ ನಿಮ್ಮ ದಮ್ಮಯ್ಯಾ ಅಂತೀನಿ, ಇಲ್ಲೇನೂ ಮಾತನಾಡಬೇಡಿ. ವಿದ್ಯಾರ್ಥಿಗಳು ಬರುವ ಹೊತ್ತು. ಪ್ಲೀಸ್ ಇಲ್ಲಿಂದ ಹೋಗಿ” ಎಂದು ಕೈಮುಗಿದಳು.
“ಆಯಿತು ಈಗ ಹೋಗುತ್ತೇನೆ, ಆದರೆ ಒಂದು ನೆನಪಿಟ್ಟುಕೋ, ಇವನ್ನೆಲ್ಲ ಬಿಚ್ಚಿಡಬಾರದೆಂದರೆ ನನ್ನ ಬಾಯಿ ಮುಚ್ಚಿಸಲು ಒಂದಿಷ್ಟು ಹಣ ತಳ್ಳಬೇಕಾಗುತ್ತದೆ. ನಾನು ಮತ್ತೆ ಭೇಟಿಯಾಗುತ್ತೇನೆ” ಎಂದು ಗುಟುರು ಹಾಕಿಕೊಂಡೇ ಹೊರನಡೆದರು.

ಆ ನಂತರ ಬಂದ ವಿದ್ಯಾರ್ಥಿಗಳಿಗೆ ಸುಮಾ ಅನ್ಯಮನಸ್ಕಳಾಗಿ ಹೇಗೆ ಪಾಠ ಮಾಡಿದಳೋ ದೇವರೇ ಬಲ್ಲ. ಎಲ್ಲವೂ ಸರಿಹೋಯಿತೆನ್ನುವಷ್ಟರಲ್ಲಿ ಧೂಮಕೇತುವನಂತೆ ಈ ಮನುಷ್ಯ ವಕ್ಕರಿಸಿದನಲ್ಲಾ. ನಾನೇ ಸುಹಾಸನಿಗೆ ಹಿಂದಿನದೆಲ್ಲವನ್ನೂ ಹೇಳಿಬಿಡಲೇ, ಅದರಿಂದ ವ್ಯತಿರಿಕ್ತವಾದ ಪರಿಣಾಮವಾದರೆ ನನ್ನ ಕಾಲಮೇಲೆ ನಾನೇ ಚಪ್ಪಡಿ ಎಳೆದುಕೊಂಡಂತೆ. ಹೋಗಲಿ ನನ್ನ ತವರಿನವರಿಗೆ ಪ್ರತಿ ತಿಂಗಳು ಕಳುಹಿಸುವ ಹಣದಂತೆ ಈತನಿಗೂ ಸ್ವಲ್ಪ ಕೊಟ್ಟುಬಿಡೋಣವೇ. ಹಾಗೇನಾದರೂ ಮಾಡಿದರೆ ಈ ಸಮಸ್ಯೆ ನಿರಂತರವಾಗಿ ಮುಂದುವರೆಯುತ್ತದೆ. ದೇವರೇ ಸಂಕಟವನ್ನೂ, ನೆಮ್ಮದಿಯನ್ನು ನೀನೇ ಕೊಡುವವನು. ನೀನೇ ಇದಕ್ಕೊಂದು ಪರಿಹಾರ ಕಾಣಿಸಪ್ಪಾ ಭಗವಂತಾ ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿದಳು. ಅದಷ್ಟೇ ಅವಳ ಪಾಲಿಗುಳಿದದ್ದು.

ದಿನೇ ದಿನೇ ಈ ಮಾನಸಿಕ ತೊಳಲಾಟ ಸುಮಾಳಿಗೆ ಹೆಚ್ಚುತ್ತಲೇ ಹೋಯಿತು. ತರಗತಿ ನಡೆಸುವಾಗ, ಅಥವಾ ಮುಗಿದ ಮೇಲೆ ಮೆಟ್ಟಿಲುಗಳನ್ನು ಹತ್ತುವ ಸದ್ದಾದರೆ ಸಾಕು ಎದೆ ಗುಂಡಿಗೆ ಹೊಡೆದುಕೊಳ್ಳುತ್ತಿತ್ತು. ನಿದ್ರೆ, ಊಟ, ತಿಂಡಿಗಳ ಬಗ್ಗೆ ಗಮನವೇ ಇಲ್ಲದಂತಾಯಿತು. ಹೊರಗಡೆ ಹೋಗುವಾಗ ಎಲ್ಲಿಯಾದರೂ ಆ ಮನುಷ್ಯ ಸಿಕ್ಕಿಬಿಟ್ಟರೆ ಏನು ಗತಿ, ಅದನ್ಯಾರಾದರೂ ಕಂಡುಬಿಟ್ಟರೆ ಏನಾಗಬಹುದು ಎಂಬುದೇ ಅಳುಕು ಕಾಡುತ್ತಿತ್ತು. ಸುಹಾಸ ಸುಮಾಳ ಅನ್ಯಮನಸ್ಕ ಸ್ಥಿತಿಯನ್ನು ಗಮನಿಸುತ್ತಾ “ಸುಮಾ ವರ್ಕ್ಲೋಡ್ ಜಾಸ್ತಿಯಾದಂತೆನ್ನಿಸುತ್ತದೆ. ಸಹಾಯಕ್ಕೆ ಒಂದಿಬ್ಬರು ಫ್ಯಾಕಲ್ಟಿಗಳನ್ನು ಸೇರಿಸಿಕೊಳ್ಳೋಣವೇ? ಹೇಳು, ನಾನು ವ್ಯವಸ್ಥೆ ಮಾಡುತ್ತೇನೆ. ಈ ರೀತಿ ಒದ್ದಾಡುವುದನ್ನು ನೋಡಲಾರೆ” ಎಂದು ಹೇಳಿದನು.

“ಹೊಸದಾದ ಕೆಲಸ ನೋಡಿ ಮಾಡುವುದಕ್ಕೂ, ಹೇಳಿಕೊಡುವುದಕ್ಕೂ ಅಂತರವಿದೆ. ಹೊಂದಿಕೊಳ್ಳಲು ಸ್ವಲ್ಪಸಮಯ ಕೊಡಿ. ತೀರಾ ಆಗದಿದ್ದರೆ ನೀವೇಳಿದಂತೆ ಮಾಡೋಣ” ಎಂದು ಅವನಿಗೆ ಸಮಜಾಯಿಷಿ ನೀಡಿದಳು. ಆದರೆ ಪುಟ್ಟಣ್ಣನ ಎಚ್ಚರಿಕೆಯ ಮಾತು ಮನೆಯಲ್ಲಿರಲಿ, ತರಗತಿಯನ್ನು ನಡೆಸುತ್ತಿರಲಿ, ಹೊರಗಡೆ ಹೋಗಲಿ ನೆರಳಿನಂತೆ ಹಿಂಬಾಲಿಸುತ್ತಿತ್ತು.
ಸುಮಾಳ ಊಹೆಯಂತೆ ಒಮ್ಮೆ ಅವಳೊಬ್ಬಳೇ ಪೇಟೆಗೆ ಹೋಗಿದ್ದಾಗ ಧುತ್ತೆಂದು ದಾರಿಯಲ್ಲಿ ಪುಟ್ಟಣ್ಣ ಎದುರಾದರು. ಮತ್ತೆ ಆತನದು ಅದೇ ಹಾಡು, ಅದೇ ರಾಗ. ‘ಇಷ್ಟು ದಿನ ನಿನ್ನ ತಂಟೆಗೆ ಬಾರದೆ ಇದ್ದುದಕ್ಕೆ ಹೆಚ್ಚಿ ಮೊತ್ತ ಸೇರಿಸಿ ಕೊಡಬೇಕು” ಎಂದು ಬೇಡಿಕೆಯಿಟ್ಟರು. ಸುತ್ತಮುತ್ತ ಕಣ್ಣು ಹಾಯಿಸಿದ ಸುಮಾ “ಆಯಿತು ಹಾದಿಬೀದಿಯಲ್ಲಿ ಇವೆಲ್ಲ ಮಾತುಬೇಡ. ಯಾವುದಾದರೂ ರೆಸ್ಟೋರೆಂಟಿಗೆ ಹೋಗಿ ಕುಳಿತು ಮಾತನಾಡೋಣ” ಎಂದು ಸಮೀಪದ ಹೋಟೆಲೊಂದರ ಕಡೆ ನಡೆದಳು. ಇದರಿಂದ ಪುಟ್ಟಣ್ಣ ಮನಸ್ಸಿನಲ್ಲಿ ‘ಮಿಕ ಬಲೆಗೆ ಬಿತ್ತು, ಸಾಕಷ್ಟು ಪೀಕಿಸಿಕೊಳ್ಳಬೇಕು’ ಎಂದುಕೊಂಡು ಅವಳನ್ನು ಹಿಂಬಾಲಿಸಿದರು.

ಹೋಟೆಲಿನಲ್ಲಿ ಕುಳಿತುಕೊಂಡ ನಂತರ ಪುಟ್ಟಣ್ಣ ಬೆಳಗಿನಿಂದ ಏನೂ ತಿಂದಿಲ್ಲವೆಂಬ ನೆಪಹೂಡಿ ತನಗೆ ಬೇಕುಬೇಕಾದ್ದನ್ನೆಲ್ಲ ನಾಚಿಕೆಯಿಲ್ಲದಂತೆ ತರಿಸಿಕೊಂಡು ಮೆದ್ದರು. ಸಾವಧಾನವಾಗಿ ಆಲೋಚಿಸಿ ಸುಮಾ “ಹೌದು ಪುಟ್ಟಣ್ಣನವರೇ ನೀವು ಹೇಳಿದಂತೆ ನಾನೂ ಒಂದು ನಿರ್ದಾರಕ್ಕೆ ಬಂದಿದ್ದೀನಿ. ಹೇಳಿ ನೀವು ನನ್ನಿಂದ ಎಷ್ಟು ಹಣ ನಿರೀಕ್ಷೆ ಮಾಡುತ್ತಿದ್ದೀರಿ?” ಎಂದು ಕೇಳಿದಳು.
ಆಕೆಯ ಮಾತುಗಳನ್ನು ಕೇಳಿದ ಪುಟ್ಟಣ್ಣನಿಗೆ ಪಾಯಸ ಉಂಡಷ್ಟು ಸಂತೋಷವಾಯಿತು. ಇವಳನ್ನು ಚಿನ್ನದ ಮೊಟ್ಟೆ ಇಡುವ ಕೋಳಿಯನ್ನಾಗಿ ಮಾಡಿಕೊಳ್ಳಬೇಕು. ಒಂದೇ ಸಾರಿ ಕಕ್ಕುವಂತೆ ಮಾಡಿಕೊಳ್ಳಬಾರದು ಎಂದು ನಿಶ್ಚಯಿಸಿ. “ಈಗ ಸದ್ಯಕ್ಕೆ ಒಂದು ಲಕ್ಷ ಕೊಡು, ಒಳ್ಳೆಯ ಶ್ರೀಮಂತರ ಮನೆಗೆ ಸೇರಿದ್ದೀಯೆ. ಅದು ನಿನಗ್ಯಾವ ಲೆಕ್ಕ. ನಂತರ ನೋಡೋಣ” ಎಂದು ಬೇಡಿಕಯಿಟ್ಟರು.
“ಓ..ಹೌದೇ..ಅಷ್ಟೇನೇ, ಸರಿ ಈಗ ನಾನು ಹೇಳುವುದನ್ನು ಕೇಳಿ. ಸ್ವಲ್ಪ ಹತ್ತಿರ ಕಿವಿಕೊಡಿ”ಎಂದು ಅವರ ಕಿವಿಯ ಬಳಿ”ನೋಡಿ ಪುಟ್ಟಣ್ಣನವರೇ, ನೀವೇನು ಹೇಳಬೇಕೆಂದುಕೊಂಡಿದ್ದೀರೋ ಅದೆಲ್ಲವನ್ನೂ ಹೇಳಿಬಿಡಿ. ಅದರ ಪರಿಣಾವೇನೇ ಆದರೂ ನಾನು ಎದುರಿಸುತ್ತೇನೆ. ನಿಮಗೆ ಒಂದು ದಮ್ಮಡಿಯನ್ನು ಕೊಡುವುದಿಲ್ಲ” ಎಂದು ಪಿಸುದನಿಯಲ್ಲಿ ಹೇಳಿ ಆತನು ಅವಾಕ್ಕಾಗಿ ನೋಡುತ್ತಿದ್ದಂತೆಯೇ ಬಿಲ್ಲು ಚುಕ್ತಾ ಮಾಡಿ ಎದ್ದು ಹೊರಗೆ ಬಂದು ತಿರುಗಿ ನೋಡದಂತೆ ಮನೆಯತ್ತ ನಡೆದಳು.

ಸುಮಾಳ ಈ ಉತ್ತರದಿಂದ ಪುಟ್ಟಣ್ಣನವರಿಗೆ ನಖಶಿಖಾಂತ ಉರಿಯಹತ್ತಿತು. “ಚೋಟುದ್ದದ ಹುಡುಗಿ ನನ್ನನ್ನೇ ಮೇಯಿಸಲು ಹೊರಟಿದ್ದಾಳೆ. ನಾನೂ ಗಟ್ಟಿಪಿಂಡ, ಎಲ್ಲವನ್ನೂ ಅವರ ಅತ್ತೆಮಾವನವರಲ್ಲಿ ಹೇಳಿ ಅವಳನ್ನು ಬೀದಿಗೆ ಬೀಳಿಸದಿದ್ದರೆ ನನ್ಹೆಸರು ಪುಟ್ಟಣ್ಣನೇ ಅಲ್ಲ” ಎಂದು ಕಾಲನ್ನು ಬೀಸುತ್ತ ಬೀದಿಗೆ ಬಂದರು.
ಇದಾಗಿ ಸುಮಾರು ತಿಂಗಳುಗಳೇ ಕಳೆದವು. ಆ ವ್ಯಕ್ತಿಯ ಆಗಮನವಿಲ್ಲದ್ದು ಕಂಡು ಸದ್ಯ ಪೀಡೆ ತೊಲಗಿತು ಎಂದುಕೊಂಡು ನಿರಾಳವಾದಳು ಸುಮಾ. ಆದರೆ ಆಕೆಯ ಊಹೆ ಸುಳ್ಳಾಗುವಂತೆ ಒಂದುದಿನ ಪುಟ್ಟಣ್ಣನವರ ಆಗಮನವಾಯಿತು. ಸುಮಾಳಿಗೆ ಕೈಕಾಲುಗಳಲ್ಲಿ ಶಕ್ತಿಯೇ ಉಡುಗಿದ ಅನುಭವ.

ಆ ದಿನ ಅಡುಗೆ ಕೆಲಸದ ವೆಂಕಮ್ಮನವರು ರಜೆ ಹಾಕಿದ್ದರು. ಮಾಲಿ ಗೊಪಾಲ ಬೆಳಗ್ಗೆಯೇ ತನ್ನ ಕೆಲಸ ಮುಗಿಸಿ ಮನೆಗೆ ಹೋಗಿದ್ದ. ಪುಟ್ಟಿ ಭೂಮಿಕಾ ಶಾಲೆಗೆ ಹೋಗಿದ್ದಳು. ಸುಮಾಳ ಕಂಪ್ಯೂಟರ್ ಸೆಂಟರಿನ ವಿದ್ಯಾರ್ಥಿಗಳೇ ಬೇರೆಬೇರೆ ಕಾರಣಗಳಿಂದ ಬಿಡುವು ಕೊಟ್ಟುಬಿಟ್ಟಿದ್ದರು. ಸುಹಾಸ ಎಂದಿನಂತೆ ಆಫೀಸಿಗೆ ಹೋಗಿದ್ದ. ಸುಮಳ ಅತ್ತೆ ಮಾವ ಹೊರಗೆ ಹಾಲಿನಲ್ಲಿ ಟಿ.ವಿ. ವೀಕ್ಷಿಸುತ್ತಿದ್ದರು. ಇಂತಹ ವಾತಾವರಣದಲ್ಲಿ ಆತ ಅದೇನು ಹೇಳುತ್ತಾನೋ ನೋಡೋಣವೆಂದು ನಿರ್ಧಾರ ಮಾಡಿದಳು ಸುಮಾ. ಏನೇ ಬಂದರೂ ಎದುರಿಸಲು ಸಿದ್ಧಳಾದಳು. ಹಾಲಿನಲ್ಲಿನ ರೂಮಿನಲ್ಲಿ ಸದ್ದಾಗದಂತೆ ನಿಂತು ಬಾಗಿಲ ಮರೆಯಲ್ಲಿ ಕಿವಿಯಿಟ್ಟು ಕೇಳಿಸಿಕೊಳ್ಳಲು ಸಜ್ಜಾಗಿ ನಿಂತಳು.

“ರಾಯರೇ” ಎಂಬ ಕರೆ ಸದಾಶಿವರಾಯರಿಗೆ ಕೇಳಿಸಿತು. ಧ್ವನಿಯಿಂದಲೇ ಗುರುತು ಹಿಡಿದು “ಬಾಗಿಲು ತೆರೆದಿದೆ ಒಳಗೆ ಬನ್ನಿ.” ಎಂದು ಆಹ್ವಾನಿಸಿದರು.
“ಏನು ಬಂದದ್ದು? ಎಲ್ಲ ಆರಾಮವೇ? ಹೇಗೆ ನಡೆದಿದೆ ನಿಮ್ಮ ವ್ಯವಹಾರ?” ಎಂದು ಕೇಳಿದರು ರಾಯರು.
“ಅದೆಲ್ಲಾ ಬಿಡಿ ಯಥಾರೀತಿಯಲ್ಲಿ ನಡೆದಿದೆ. ನಿಮ್ಮ ಬಳಿ ತುಂಬ ದಿನಗಳಿಂದ ಒಂದು ವಿಷಯ ಮಾತನಾಡಬೇಕೆಂದು ಮನಸ್ಸು ತುಡಿಯುತ್ತಿದೆ. ಆದಿನ ನಾನು ಬಂದಾಗ ನಿಮ್ಮಮಗನ ಮದುವೆಯಾದದ್ದು ಹೇಳಿ ನಿಮ್ಮ ಸೊಸೆಯನ್ನು ಪರಿಚಯಿಸಿದ್ದಾಗಿನಿಂದ ಇದನ್ನು ಹೇಗೆ ಹೇಳುವುದು ಎಂದು ತಿಳಿಯುತ್ತಿಲ್ಲ. ಅದರೆ ತಮ್ಮ ಪರಿಚಯ, ವಿಶ್ವಾಸ ಎಷ್ಟೋ ವರ್ಷಗಳಿಂದ ಇದೆ. ಆದ್ದರಿಂದ ಹೇಳದೇ ಇರಲಾಗುವುದಿಲ್ಲ. ನಿಮಗಾದ ಅನ್ಯಾಯವನ್ನು ನೋಡಿಯೂ ಸುಮ್ಮನಿರಲಾಗದೆ ಈದಿನ ಮಾತನಾಡಲೆಂದೇ ಬಂದಿದ್ದೇನೆ.” ಎಂದು ಪೀಠಿಕೆ ಹಾಕಿದರು ಪುಟ್ಟಣ್ಣ.

“ಅದೇನೋ ನಿಮ್ಮ ಮಾತಿನ ವರಸೆ ಎಂದಿನಂತಿಲ್ಲವಲ್ಲ. ನಮಗಾದ ಅನ್ಯಾಯದ ಬಗ್ಗೆ ಹೇಳುತ್ತಿದ್ದೀರಿ. ಯಾರಿಂದ? ಹೇಗೆ? ಎಂಬುದನ್ನು ವಿವರವಾಗಿ ಹೇಳಿದರೆ ಗೊತ್ತಾಗುತ್ತಪ್ಪ. ಇಲ್ಲದಿದ್ದರೆ ನಮಗೆ ಅದರ ತಲೆಬುಡವೇ ಅರ್ಥವಾಗದು. ಬಿಡಿಸಿ ಹೇಳಿ ಪುಟ್ಟಣ್ಣನವರೇ” ಎಂದು ಕೇಳಿದರು ಸದಾಶಿವರಾಯರು.
“ಏನಿಲ್ಲ ನಿಮ್ಮ ಮಗನಿಗೆ ಸೊಸೆ ತಂದುಕೊಂಡಿದ್ದೀರಲ್ಲ, ಆಹುಡುಗಿ ನಮ್ಮೂರಿನವಳೇ. ನಿಮ್ಮ ಜಾತಿಯೂ ಅಲ್ಲ. ಅವಳಿಗೆ ಇದಕ್ಕೆ ಮೊದಲೇ ವಿವಾಹವಾಗಿತ್ತು. ಅದೇನೋ ಗಂಡಹೆಂಡಿರಿಗೆ ಹೊಂದಿಕೆಯಾಗದೇ ಬಿಟ್ಟು ಬಂದಿದ್ದಳು. ಅವರ ತಾಯಿ ಬುದ್ಧಿ ಹೇಳಿ ಮತ್ತೆ ಬಿಟ್ಟುಬಂದಿದ್ದರು. ಆದರೆ ಆ ಹುಡುಗಿ ಮತ್ತೆ ಗಂಡನ ಮನೆಯಿಂದ ಹೊರಬಂದುಬಿಟ್ಟಳು. ಅವರ ಚಿಕ್ಕಮ್ಮ ನಾನು ನಿನ್ನ ಮದುವೆಗೆ ಸಾಕಷ್ಟು ಖರ್ಚು ಮಾಡಿದ್ದೇನೆ ಅದೆಲ್ಲವನ್ನೂ ನನಗೆ ಹಿಂದಿರುಗಿಸು ಎಂದು ಪೀಡಿಸುತ್ತಿದ್ದಳು. ಆ ನಂತರ ಡೈವೋರ್ಸ್ ತೆಗೆದುಕೊಂಡು ಕಣ್ಣುತಪ್ಪಿಸಿ ಈ ಊರಿಗೆ ಬಂದಿದ್ದಾಳೆ. ನಿಮ್ಮ ಮಗನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಳೆಂಬ ಸಂಗತಿ ಇತ್ತೀಚೆಗೆ ತಿಳಿಯಿತು. ನಿಮ್ಮ ಮಗನಿಗೆ ಮೋಡಿ ಮಾಡಿ ಈಗ ನಿಮ್ಮ ಮನೆಗೆ ಸೊಸೆಯಾಗಿ ಸೇರಿದ್ದಾಳೆ. ಇಷ್ಟೆಲ್ಲ ಹಿನ್ನೆಲೆ ತಿಳಿದೂ ಸುಮ್ಮನಿರುವುದು ಹೇಗೆ. ಬೇಗನೇ ಎಚ್ಚೆತ್ತುಕೊಂಡು ಪೂರ್ವಾಪರ ವಿಚಾರಿಸಿ ಆಕೆಯನ್ನು ಹೊರಗೆ ಕಳುಹಿಸಿದರೆ ನಿಮಗೂ ಒಳ್ಳೆಯದೆಂದು ನಿಮ್ಮ ಹಿತೈಷಿಯಾಗಿ ನನ್ನ ಸಲಹೆ. ನಿಮ್ಮ ಮಗನ ಬದುಕು ಚೆನ್ನಾಗಿರಬೇಕೆನ್ನುವುದು ಮುಖ್ಯವಲ್ಲವೇ?” ಎಂದು ಬಾಣ ಬಿಟ್ಟರು ಪುಟ್ಟಣ್ಣ.
ಮುಂದೇನಾಗುತ್ತದೆಯೋ ಎಂಬ ಭೀತಿಯಿಂದ ನಿಂತ ಕಡೆಯಿಂದ ಮೈಯೆಲ್ಲ ಹಿಡಿಯಂತೆ ಕುಗ್ಗಿಸಿಕೊಂಡು ಕೇಳಿಸಿಕೊಳ್ಳುತ್ತಿದ್ದಳು ಸುಮಾ.

“ ಓ ಪುಟ್ಟಣ್ಣನವರೇ, ನೀವೇ ತೋರಿಸಿ ಶಿಫಾರಸ್ಸು ಮಾಡಿಸಿದ ಮನೆಗೆ ನನ್ನ ಮಗಳನ್ನು ಮದುವೆ ಮಾಡಿಕೊಟ್ಟೆವು. ಅವರ ಬೇಡಿಕೆಗಳನ್ನೆಲ್ಲ ನಮ್ಮ ಶಕ್ತಿಮೀರಿ ಪೂರೈಸಿದ್ದೆವು. ಆದರೂ ನನ್ನ ಮಗಳ ಗತಿ ಏನಾಯಿತೆಂದು ನಿಮಗೂ ಗೊತ್ತು. ಆದರೆ ನನ್ನ ಅಳಿಯನಾಗಿದ್ದವನು ಮರು ಮದುವೆ ಆಗಲಿಲ್ಲವೇ. ಅದಕ್ಕೂ ನೀವೇ ಸಂಬಂಧ ಕುದುರಿಸಿದ್ದೂ ಗೊತ್ತು. ಅದು ಬಿಡಿ ಈ ಹುಡುಗಿ ನನ್ನ ಸೊಸೆಯಾಗಿದ್ದಾಳೆ. ಇವಳನ್ನು ಮದುವೆಯಾಗಿ ಬಿಟ್ಟವನೀಗ ಮತ್ತೆ ಮದುವೆಯಾಗಿಲ್ಲವೇ?” ಎಂದರು ರಾಯರು.
“ಅಗದೇನು ರಾಯರೇ, ನಾನೇ ಅವನಿಗೆ ಹೆಣ್ಣು ಹುಡುಕಿದವನು” ಎಂದರು ಪುಟ್ಟಣ್ಣ.

“ಹಾಗಿರುವಾಗ ಹೆಣ್ಣಿಗೊಂದು, ಗಂಡಿಗೊಂದು ನ್ಯಾಯವೇ? ಇನ್ನೊಂದು ವಿಷಯ ಸ್ಪಷ್ಟೀಕರಿಸುತ್ತೇವೆ. ಗಮನವಿಟ್ಟು ಕೇಳಿಸಿಕೊಳ್ಳಿ. ನನ್ನ ಸೊಸೆಯಾಗುವ ಹುಡುಗಿ ಮದುವೆಗೆ ಮುಂಚೆಯೇ ಎಲ್ಲ ವಿಷಯಗಳನ್ನೂ ನಮ್ಮ ಮುಂದೆ ಹೇಳಿದ್ದಳು. ಎಲ್ಲವೂ ನಮಗೆ ಗೊತ್ತಿದ್ದೂ ಜಾತಿಯ ಬಗ್ಗೆ ತಲೆಕೆಡಿಸಿಕೊಳ್ಳದೆ ನಾವು ಮದುವೆ ಮಾಡಿದ್ದೇವೆ. ನನ್ನ ಮಗ ತನ್ನ ಅಕ್ಕನ ದುರಂತ ಸಾವಿನಿಂದ ಕಂಗೆಟ್ಟು ಮದುವೆಯೇ ಬೇಡವೆನ್ನುತ್ತಿದ್ದ. ತಾಯಿಯಿಲ್ಲದ ತಬ್ಬಲಿ ನನ್ನ ಮೊಮ್ಮಗಳು ಭೂಮಿಕಾಳನ್ನು ತಾಯಿಯಂತೆ ನೋಡಿಕೊಳ್ಳುವಂತಹ ಹೆಣ್ಣು ಸಿಕ್ಕರೆ ನೋಡೋಣ ಎಂದಿದ್ದ. ಈ ಹುಡುಗಿ ಸುಮಾ ಎಲ್ಲರೀತಿಯಿಂದ ಅವನ ಮನಸ್ಸನ್ನು ಗೆದ್ದು ಮೆಚ್ಚಿದ “ಮನದನ್ನೆ”ಯಾಗಿ ಆಯ್ಕೆಯಾದಳು. ನಮಗೂ ಇಷ್ಟವಾದಳು. ಮನೆಗೆ ಸೊಸೆಯಾಗಿ, ಮೊಮ್ಮಗಳಿಗೆ ತಾಯಿಯಾಗಿ, ಮಗನಿಗೆ ಒಳ್ಳೆಯ ಸಂಗಾತಿಯಾಗಿ, ಮುಂದೇನಪ್ಪಾ ಗತಿಯೆಂದು ಚಿಂತಿಸುತ್ತಿದ್ದ ನಮಗೆ ನೆಮ್ಮದಿ ತಂದಿದ್ದಾಳೆ. ಅವಳೀಗ ನಮ್ಮ ಮನೆಯ ಬೆಳಕಾಗಿದ್ದಾಳೆ. ಇನ್ನು ಇದೇ ಸಂಗತಿಯ ಬಗ್ಗೆ ಮಾತನಾಡಲು ಬರುವುದಾದರೆ ನಿಮಗೆ ನಮ್ಮ ಮನೆಯ ಬಾಗಿಲು ಮುಚ್ಚಿದೆಯೆಂದು ತಿಳಿಯಿರಿ. ಹಾಗೇ ಒಂದು ಎಚ್ಚರಿಕೆ. ನೀವು ಹತ್ತಾರು ಮನೆಗಳಿಗೆ ಎಡತಾಕುವವರು. ನಮ್ಮ ಮನೆಯ ಬಗ್ಗೆ ಇಲ್ಲದ್ದು ಸಲ್ಲದ್ದು ಯಾರ ಬಳಿಯಲ್ಲಾದರೂ ಸುದ್ದಿಯನ್ನೇನಾದರೂ ಹರಡಿದರೆ ನಾವು ಯಾರು, ಏನು ಎಂಬುದು ನಿಮಗೆ ಗೊತ್ತಿಲ್ಲ. ಮುಂದೆ ತಿನ್ನುವ ಅನ್ನಕ್ಕೂ ಕಲ್ಲು ಹಾಕಿಕೊಂಡೀರ. ನೀವಿನ್ನು ಹೊರಡಬಹುದು” ಎಂದು ಹೇಳಿದರು.
ಏನನ್ನೋ ನಿರೀಕ್ಷಿಸಿಕೊಂಡು ಬಂದಿದ್ದ ಪುಟ್ಟಣ್ಣನಿಗೆ ಮರ್ಮಾಘಾತವಾಯಿತು. ಉಸಿರೆತ್ತದೆ ತಮ್ಮ ಚೀಲ ಬಗಿಲಿಗೇರಿಸಿ ಹೊರನಡೆದರು.

ಎಲ್ಲ ಮಾತುಕತೆಯನ್ನು ಮರೆಯಲ್ಲಿ ಆಲಿಸಿದ ಸುಮಾಳಿಗೆ ಇದು ಕನಸೋ. ನನಸೋ ತಿಳಿಯದಂತಾಯಿತು. ತಲೆಯ ಮೇಲೆ ಬಿದ್ದ ಬಂಡೆಗಲ್ಲು ಇಷ್ಟೊಂದು ಸುಲಭವಾಗಿ ಜಾರಿಹೋದೀತೆಂದು ನಿರೀಕ್ಷಿರಲಿಲ್ಲ. ತಮ್ಮ ಮಗ ಒಪ್ಪಿ ಮಾಡಿಕೊಂಡಿರುವ ಸೊಸೆಯ ಬಗ್ಗೆ ಯಾವ ಪೂರ್ವೇತಿಹಾಸ ತಿಳಿಯದಿದ್ದರೂ ಅದನ್ನು ಕೆದಕುವ ಆವಶ್ಯಕತೆ ಇಲ್ಲದೆ ಮನೆ ತುಂಬಿಸಿಕೊಂಡ ಅತ್ತೆ ಮಾವನವರು ತನ್ನ ಪಾಲಿಗೆ ದೇವರ ಸಮಾನರಾಗಿ ಕಂಡುಬಂದರು. ಇದಕ್ಕೆ ಕಾರಣಕರ್ತನಾದ ಸುಹಾಸ ತನ್ನ ಬಾಳಸಂಗಾತಿ ಆಗಿ ನನ್ನನ್ನು ಪ್ರೀತಿಯ “ಮನದನ್ನೆ” ಎಂದು ಸ್ವೀಕರಿಸಿದ್ದು ನನ್ನ ಪೂರ್ವಜನ್ಮದ ಪುಣ್ಯವೆಂದು ನಿರಾಳವಾದಳು ಸುಮಾ.

ಬಿ.ಆರ್.ನಾಗರತ್ನ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *