ಕಾದಂಬರಿ

ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 29

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮರುದಿನ ಬೆಳಿಗ್ಗೆ ಎಲ್ಲರೂ ಬೇಗ ಎದ್ದು ಸಿದ್ಧರಾದರು. ಆರು ಗಂಟೆಗೆ ಬಿಸಿಬಿಸಿ ಕಾಫಿ ಬಂತು. 7 ಗಂಟೆಗೆಲ್ಲಾ ದೇವಸ್ಥಾನದಲ್ಲಿ ಇರಬೇಕಾಗಿತ್ತು.
ವಾರುಣಿ ಕಡುನೀಲಿಯ ಪ್ರಿಂಟೆಡ್ ಜಾರ್ಜೆಟ್ ಸೀರೆಯುಟ್ಟು ಅದಕ್ಕೆ ಒಪ್ಪುವ ಕೃತಕ ಆಭರಣ ಧರಿಸಿದಳು. ತಲೆಗೆ ಸ್ನಾನ ಮಾಡಿದ್ದರಿಂದ ಸಡಿಲವಾಗಿ ಜಡೆ ಹೆಣೆದು ಹೂವು ಮುಡಿದಳು. ನವಿರಾದ ಮೇಕಪ್, ಕೆಂಪು ಬಿಂದಿ ಅವಳ ಅಂದ ಹೆಚ್ಚಿಸಿತ್ತು.
ಶರು ಕೂಡ ತಾಯಿಯ ಕಾಂಜೀವರಂ ಸೀರೆ ಉಟ್ಟು ಸಿದ್ಧವಾದಳು.
ಅಕ್ಕ-ತಂಗಿಯರನ್ನು ಒಟ್ಟಿಗೆ ನೋಡಿದ ಶೋಭಾ ಹೇಳಿದಳು “ಇಬ್ಬರೂ ಸೀರೆಯಲ್ಲಿ ತುಂಬಾ ಮುದ್ದಾಗಿ ಕಾಣ್ತಿದ್ದೀರಿ.”
ವರು ಮುಗುಳ್ನಗೆ ಬೀರಿದಳು.

“ಅಮ್ಮಾವ್ರೆ ಈ ಅಕ್ಕ-ತಂಗಿಯರಲ್ಲಿ ಸಿಂಪಲ್ಲಾಗಿ ಅಲಂಕಾರ ಮಾಡ್ಕೊಂಡಿರುವ ವಾರುಣಿ ಅಕ್ಕಾನೇ ಚೆನ್ನಾಗಿ ಕಾಣ್ತಿದ್ದಾರಲ್ವಾ?”
“ನನಗೂ ಹಾಗೇ ಅನ್ನಿಸ್ತು ಮಲ್ಲಿ. ಆದರೆ ಜೋರಾಗಿ ಹೇಳಿದರೆ ಚೆನ್ನಾಗಿರಲ್ಲಾಂತ ಸುಮ್ಮನಾದೆ.”

ಎಲ್ಲರೂ ಸಿದ್ಧರಾಗುವ ವೇಳೆಗೆ ಆರ್.ಜಿ. ಅಕ್ಕ ಬಂದು ಪರಿಚಯ ಮಾಡಿಕೊಂಡು, ದೇವಸ್ಥಾನಕ್ಕೆ ಕರೆದೊಯ್ದರು. ಅವಳು ಹೆಚ್ಚು ವರುವನ್ನೇ ಮಾತನಾಡಿಸುತ್ತಿರುವುದನ್ನು ಚಂದ್ರಾವತಿ, ಶೋಭಾ ಇಬ್ಬರೂ ಗಮನಿಸಿದರು.
ದೇವಾಲಯದ ಬಾಗಿಲಲ್ಲಿ ನಿಂತಿದ್ದ ಆರ್.ಜಿ. ಅವರನ್ನು ನೋಡಿ ಕೈ ಬೀಸಿದ. ಬಿಳಿ ಪಂಚೆ, ಜುಬ್ಬ ಹೆಗಲ ಮೇಲೊಂದು ಶಲ್ಯ, ಹಣೆಯಲ್ಲಿ ಕುಂಕುಮ, ಕೊರಳಲ್ಲಿ ದಪ್ಪದೊಂದು ಸರ, ಬಲಗೈಯಲ್ಲಿ ಬೆಳ್ಳಿಯ ಕಡಗ, ಹೊಸ ರೂಪದಲ್ಲಿ ಅವನು ಬಹಳ ಬೇರೆ ರೀತಿ ಕಾಣುತ್ತಿದ್ದ.
“ಯಾಕ್ರಿ ಗುರುತು ಸಿಗಲಿಲ್ಲವಾ?”
“ಸಿಗದೆ ಏನು? ಈ ಹೊಸ ವೇಷ ನಿಮಗೆ ಚೆನ್ನಾಗಿ ಒಪ್ಪುತ್ತದೆ.”
“ನಿಜವಾಗಿ?”
“ನಾನ್ಯಾಕೆ ಸುಳ್ಳು ಹೇಳಲಿ? ಬೇಕಾದರೆ ಬೇರೆಯವರನ್ನು ಕೇಳಿ.”
“ನೀವು ಹೇಳಿದರಾಯ್ತು. ಬೇರೆಯವರನ್ಯಾಕೆ ಕೇಳಲಿ. ಬನ್ನಿ ನಮ್ಮ ಅಣ್ಣಂದಿರ ಪರಿಚಯ ಮಾಡಿಸ್ತೀನಿ.”

ಆರ್.ಜಿ. ತನ್ನ ದೊಡ್ಡಪ್ಪನ ಮಕ್ಕಳನ್ನು ಪರಿಚಯಿಸಿದ. ಎಲ್ಲರೂ ತುಂಬಾ ಚೆನ್ನಾಗಿ ಮಾತನಾಡಿಸಿದರು. ದೇವರಿಗೆ ಪಂಚಾಮೃತಾಭಿಷೇಕವಾದ ನಂತರ ಎಲ್ಲರೂ ಮನೆಗೆ ಹಿಂದಿರುಗಿದರು. ಅವರು ಮನೆಗೆ ಬರುವ ವೇಳೆಗೆ ಆರ್.ಜಿ. ತನ್ನ ದೊಡ್ಡಪ್ಪನ ಮಗ-ಸೊಸೆಯ ಜೊತೆ ತಿಂಡಿ ತೆಗೆಸಿಕೊಂಡು ಬಂದಿದ್ದ.
ಹಾಲ್‌ನಲ್ಲಿ ಟೇಬಲ್ ಹಾಕಿ ಚೇರ್‌ಗಳನ್ನು ಹಾಕಲಾಗಿತ್ತು. ಚಂದ್ರಕಾಂತ್-ಗಿರಿಜಾ ಉಪಚಾರ ಮಾಡುತ್ತಾ ನಿಂತರು. ಗೌರಿ ವರು ತೊಡೆ ಏರಿದಳು. ಇಡ್ಲಿ, ಸಾಂಬಾರ್, ಖಾರಾಭಾತ್, ಸಜ್ಜಿಗೆ, ಸಿಹಿಪೊಂಗಲ್, ಖಾರಾಪೊಂಗಲ್…..
“ಯಾರಿಗೆ ಏನು ಬೇಕೋ ಹಾಕಿಸಿಕೊಳ್ಳಿ.”

ಗೌರಿ ವರು ಕೈಲಿ ತಿಂಡಿ ತಿನ್ನಿಸಿಕೊಂಡಳು. ವರು ಅವಳನ್ನು ಕಿಟಕಿಯ ಹತ್ತಿರ ಒಂದು ಟೇಬಲ್‌ಮೇಲೆ ಕೂಡಿಸಿ, ಮಾತನಾಡಿಸುತ್ತಾ ತಿಂಡಿ ತಿನ್ನಿಸಿದಳು.
“ನಮ್ಮ ಗೌರಿ ತಿಂಡಿ ತಿನ್ನಕ್ಕೆ ತುಂಬಾ ಹಠ ಮಾಡ್ತಾಳೆ. ನಿಮ್ಮ ಮಗಳ ಕೈಲಿ ಗಲಾಟೆಯಿಲ್ಲದೆ ತಿನ್ನುತ್ತಿದ್ದಾಳೆ……..”
“ನಮ್ಮ ವರೂಗೆ ಮಕ್ಕಳೆಂದರೆ ತುಂಬಾ ಇಷ್ಟ. ನಮ್ಮ ಅಲೋಕ ನನ್ನ ಓರಗಿತ್ತಿ ಮಗಳು ಶರಣ್ಯ ಇಬ್ಬರಿಗೂ ಇವಳೇ ಕಥೆ ಹೇಳುತ್ತಾ ತಿಂಡಿ ತಿನ್ನಿಸುತ್ತಿದ್ದಳು” ಶೋಭಾ ಹೇಳಿದರು.
“ಹುಡುಗಿ ತುಂಬಾ ನಿಧಾನಸ್ಥೆ ಅನ್ನಿಸತ್ತೆ.”
“ತುಂಬಾ ಚೆನ್ನಾಗಿ ಜಗಳಾನೂ ಆಡ್ತಾರೆ. ಕೊಂಚಾನೂ ಅನ್ಯಾಯ ಸಹಿಸಲ್ಲ” ಆರ್.ಜಿ. ಮಾತಿನಲ್ಲಿ ಮೆಚ್ಚುಗೆ ಇತ್ತು.
ಗೌರಿಗೆ ತಿಂಡಿ ತಿನ್ನಿಸಿ ವರು ತಿಂಡಿ ತಿಂದಳು.

“ನಮ್ಮ ಊರು ತೋರಿಸ್ತೀನಿ ಬನ್ನಿ.”
ದೊಡ್ಡವರು ಮನೆಯಲ್ಲೇ ಉಳಿದರು. ವರು, ಶರು, ಶಂಕರ, ಮಲ್ಲಿ ಹೊರಟರು.
ಹಳ್ಳಿ ನವವಧುವಿನಂತೆ ಸಿಂಗಾರಗೊAಡಿತ್ತು. ಎಲ್ಲರ ಮನೆಯ ಮುಂದೆ ಸಗಣಿಯಲ್ಲಿ ಸಾರಿಸಿ ದೊಡ್ಡ ದೊಡ್ಡ ರಂಗೋಲಿ ಹಾಕಿದ್ದರು. ರಸ್ತೆಯುದ್ದಕ್ಕೂ ಹಸಿರುವಾಣಿ ಚಪ್ಪರ ಹಾಕಲಾಗಿತ್ತು.
“ಯಾಕೆ ಹೀಗೆ ಚಪ್ಪರ ಹಾಕಿದ್ದಾರೆ?”
“ಈ ದಿನವೇ ಊರಿನವರಿಗೆ ಊಟ”
“ಚಪ್ಪರದ ನೆರಳಿನಲ್ಲಿ ಟೇಬಲ್‌ಗಳನ್ನು ಹಾಕಿ ನಮ್ಮ ಹಳ್ಳಿಯವರಿಗೆ ಊಟ ಬಡಿಸ್ತಾರೆ. ನೀವೂ ಬಡಿಸುವುದಕ್ಕೆ ನಿಂತುಕೊಳ್ಳಿ. ನಮ್ಮ ಹಳ್ಳಿಯವರು ಎಷ್ಟು ಖುಷಿಯಿಂದ ಊಟ ಮಾಡ್ತಾರೆ ತಿಳಿಯುತ್ತದೆ.”
“ನೀವೆಲ್ಲಾ ಊಟ ಬಡಿಸ್ತೀರಾ?”
“ದೊಡ್ಡ ಐಟಂಗಳನ್ನು ಅಡಿಗೆಯವರು ಬಡಿಸ್ತಾರೆ. ನಾವು ಚಿಕ್ಕ ಚಿಕ್ಕ ಐಟೆಮ್ಸ್ ಬಡಿಸ್ತೀವಿ.”
“ನೀವು ಬಡಿಸುವಾಗ ಕರೆಯಿರಿ.”
“ಹನ್ನೆರಡು ಗಂಟೆಯಿಂದಲೇ ಊಟ ಹಾಕಲು ಆರಂಭಿಸ್ತಾರೆ. ರೆಡಿಯಾಗಿರಿ.”

ಅವರು ಹಳ್ಳಿ ಸುತ್ತಾಡಿಕೊಂಡು ಮನೆಗೆ ಬರುವ ವೇಳೆಗೆ 11 ಗಂಟೆಯಾಗಿತ್ತು. ಅವರು ಬರುವ ವೇಳೆಗೆ ತಣ್ಣನೆಯ ಮಜ್ಜಿಗೆ ಅವರಿಗಾಗಿ ಕಾಯುತ್ತಿತ್ತು.
“ಅಪ್ಪಾ, ನಾನು ಬಡಿಸಲು ಹೋಗಲಾ?” ವರು ಕೇಳಿದಳು.
“ಯಾರಿಗೆ ಬಡಿಸ್ತೀಯಮ್ಮ?”
“ನಮ್ಮ ಹಳ್ಳಿಯವರಿಗೆ ಅಂಕಲ್….”
“ಧಾರಾಳವಾಗಿ ಹೋಗು.”
“ನಾನೂ ಬರ‍್ತೀನಿ” ಎಂದರು ಶೋಭಾ.
“ನಾನು ಬಡಿಸಬಹುದಾ?” ಮಲ್ಲಿ ಕೇಳಿದಳು.
“ಬನ್ನಿ ಇಲ್ಲಿ ಯಾರೂ ಆಕ್ಷೇಪಣೆ ಮಾಡಲ್ಲ. ಕೈಯಿಂದ ಬಡಿಸಬಾರದು. ಚಮಚ, ಸೌಟು ಬಳಸಬೇಕು.”
“ಲಾಡು, ಚಿರೋಟಿ, ಪಕೋಡ, ಬೋಂಡ ಸೌಟಲ್ಲಿ ಎಂಗೆ ಆಕೋದು?” ಮಲ್ಲಿ ಕೇಳಿದಾಗ ಎಲ್ಲರೂ ಜೋರಾಗಿ ನಕ್ಕರು.

ಹನ್ನೆರಡು ಗಂಟೆಯ ಹೊತ್ತಿಗೆ ಊಟ ಹಾಕಲಾರಂಭಿಸಿದರು. ಮಲ್ಲಿ, ಶೋಭಾ, ವರು ಸೆರಗು ಸೊಂಟಕ್ಕೆ ಸಿಕ್ಕಿಸಿ ಬಡಿಸಲು ನಿಂತರು. ಅಡಿಗೆಯವರು ಹೇಳಿಬಿಟ್ಟರು.
“ನಿಮಗೆ ಅನ್ನ, ಸಾರು, ಹುಳಿಯನ್ನು ಬಡಿಸಕ್ಕೆ ಕೊಡಲ್ಲ. ಹಪ್ಪಳ, ಉಪ್ಪಿನಕಾಯಿ, ತುಪ್ಪ, ಪಾಯಸ ಲೋಟಕ್ಕೆ ಹಾಕೋದು, ಮೈಸೂರುಪಾಕು, ಚಿರೋಟಿ ಬಡಿಸೋದು – ಇಷ್ಟು ಮಾತ್ರ ಬಡಿಸಕ್ಕೆ ಕೊಡ್ತೀವಿ. ಕೈ ಚುರುಕಾಗಿರಬೇಕಷ್ಟೆ.
ಎಲ್ಲರೂ ಖುಷಿಯಿಂದ ಬಡಿಸಿದರು. ಗ್ರಾಮಸ್ಥರು ಅಡಿಗೆ ಹೊಗಳುತ್ತಾ ಊಟ ಮಾಡಿದರು. ಊಟದ ಕಾರ್ಯಕ್ರಮ ಮುಗಿದಾಗ 4-30 ಗಂಟೆ. ಕೊನೆಯ ಪಂಕ್ತಿಯಲ್ಲಿ ಬಡಿಸಿದವರು ಕುಳಿತರು. ಆರ್.ಜಿ. ದೊಡ್ಡಪ್ಪ, ದೊಡ್ಡಮ್ಮ ನಿಂತು ಉಪಚಾರ ಮಾಡಿ ಬಡಿಸಿದರು.

ಮನೆಗೆ ಬಂದು ಸೀರೆ ಬದಲಾಯಿಸಿ ಸರಳವಾಗಿದ್ದ ಚೂಡಿದಾರ್ ಧರಿಸಿ ಎಲ್ಲರೂ ಮಲಗಿದರು. ವರು, ಚಂದ್ರಕಾಂತ ಆಂಟಿ, ಮಲ್ಲಿ ಎದ್ದಾಗ ಗಂಟೆ 6-30 ದಾಟಿತ್ತು. ಅವರು ಮುಖ ತೊಳೆದು ಬಂದು ಬಿಸಿಬಿಸಿ ಕಾಫಿ ಕುಡಿದರು. ಮನಸ್ಸಿಗೆ ಹಾಯೆನ್ನಿಸಿತು. ಎಂಟುಗಂಟೆಯ ಹೊತ್ತಿಗೆ ಬಿಸಿಬಿಸಿ ಉಪ್ಪಿಟ್ಟು ಬಂತು. ತರಕಾರಿಗಳನ್ನು ಹಾಕಿದ್ದ ಅಕ್ಕಿತರಿ ಉಪ್ಪಿಟ್ಟು ತಿಂದು ವರು ತಂದೆ, ತಾಯಿ, ಮಕ್ಕಳು, ಮಲ್ಲಿ, ಶಾರದ, ಶೋಭಾ, ಶಿವಶಂಕರ ಸಿದ್ಧರಾದರು.

“ಇವರೆಲ್ಲಾ ಯಾಕೆ ರೆಡಿಯಾಗ್ತಿದ್ದಾರೆ?”
“ರಾತ್ರಿ ನಾಟಕವಿದೆಯಂತೆ. ರಾಮಾಯಣ ನಾಟಕ. ಮುಗಿಯುವುದು ಬೆಳಿಗ್ಗೆಗೇನೆ. ಬರ‍್ತೀಯಾ ಹೋಗೋಣ” ಚಂದ್ರಾ ಆಂಟಿ ಕೇಳಿದರು.
“ಇಲ್ಲ ಆಂಟಿ ಯಾಕೋ ತುಂಬಾ….. ಮೈ ಕೈ ನೋವು. ಒಂದು ಟ್ಯಾಬ್ಲೆಟ್ ತೆಗೆದುಕೊಂಡು ಮಲಗ್ತೀನಿ.”
“ಜ್ವರ ಇದೆಯಾ?”
“ಇಲ್ಲಾಂತ ಕಾಣತ್ತೆ.”
“ನಾವೂ ಬೇಗ ವಾಪಸ್ಸು ಬರ‍್ತೇವೆ. ನಾಟಕ ಮುಗಿಯುವವರೆಗೂ ಇರಕ್ಕಾಗಲ್ಲ.”
“ಹಾಗೇ ಮಾಡಿ” ಎನ್ನುತ್ತಾ ಹಾಲ್‌ನಲ್ಲಿದ್ದ ಸೋಫಾ ಮೇಲೆ ಮಲಗಿದಳು ವರು. ರಾವ್ ಬಂದು ಒಂದು ಟ್ಯಾಬ್ಲೆಟ್ ಕೊಟ್ಟರು.
“ಅಪ್ಪಾ ನೀವು ಪೂರ್ತಿ ನಾಟಕ ನೋಡ್ತೀರಾ?”
“ಇಲ್ಲಮ್ಮ 10-30ಗೆ ವಾಪಸ್ಸು ಬರ‍್ತೀನಿ.”
“ಬೆಳಿಗ್ಗೆ ಶಾಲೆಗೆ ಕೊಂಡಿರುವ ಭೂಮಿ ನೋಡಲು ಹೋಗಬೇಕಂತೆ.”
“ರಘುಪತಿಗಳು ಹೇಳಿದ್ದಾರೆ” ಎಂದರು ರಾವ್.

ತನ್ನ ಹಣೆಯ ಮೇಲೆ ತಣ್ಣನೆಯ ಕೈ ಓಡಾಡಿದಂತಾದಾಗ ಅವಳು ಕಣ್ಣು ಬಿಟ್ಟಳು. ರಮಾ ಅವಳ ಹಣೆ ಮುಟ್ಟಿ ನೋಡುತ್ತಿದ್ದರು. ಪಕ್ಕದಲ್ಲಿ ಆರ್.ಜಿ. ನಿಂತಿದ್ದ.
“ಜ್ವರ ಇರುವಂತಿಲ್ಲ……..”
“ಜ್ವರ ಇಲ್ಲ. ತುಂಬಾ ಮೈ ಕೈ ನೋವು ಅಂತ ಅಪ್ಪನಿಗೆ ಹೇಳಿದೆ. ಅವರು ಟ್ಯಾಬ್ಲೆಟ್ ಕೊಟ್ರು.”
“ಬಡಿಸಿದ್ರಿಂದ ತುಂಬಾ ಆಯಾಸವಾಯ್ತೇನೋ?”
“ಇಲ್ಲಮ್ಮ. ಎರಡು ದಿನಗಳ ಹಿಂದೇನೇ ಜ್ವರವಿತ್ತು. ಮೆಡಿಸನ್ಸ್ ತೆಗೆದುಕೊಂಡಿದ್ದೆ. ಇಲ್ಲಿಗೆ ಬರುವಾಗ ಮೆಡಿಸನ್ಸ್ ತರೋದು ಮರೆತುಬಿಟ್ಟೆ. ಅದಕ್ಕೆ ಆಯಾಸವಾಗಿರಬಹುದು.”
“ಗಂಜಿ ಕಳಿಸ್ತೀನಿ. ಕುಡಿದು ಮಲಗು.”
“ಆಗಲೀಮ್ಮ.”

ಆರ್.ಜಿ. ಅಲ್ಲೇ ಇದ್ದ ಚೇರ್‌ನಲ್ಲಿ ಕುಳಿತು ಹೇಳಿದ. “ಐ ಯಾಮ್ ಸಾರಿ.”
“ಸಾರಿ ಯಾಕೆ ಕೇಳ್ತಿದ್ದೀರಾ? ನೀವೇನು ಮಾಡಿದ್ರಿ?”
“ಜ್ವರ ಇದ್ದರೂ ನನ್ನ ಹಠಕ್ಕೆ ಮಣಿದು ಬಂದ್ರಿ. ನೀವು ಮೈಸೂರಿನಲ್ಲೇ ಇದ್ದಿದ್ರೆ ಹೀಗಾಗ್ತಿರಲಿಲ್ಲ.”
“ನನಗೇನಾಗಿದೆ? ಜ್ವರ ಬಂದಿಲ್ಲ ಕೊಂಚ ಆಯಾಸವಾಗಿರಬಹುದು. ನಾನು ಬರದೇ ಇದ್ದಿದ್ರೆ ತುಂಬಾ ಒಳ್ಳೆಯ ಕ್ಷಣಗಳನ್ನು ಮಿಸ್ ಮಾಡಿಕೊಳ್ತಿದ್ದೆ ಅನ್ನಿಸತ್ತೆ. ನಿಮ್ಮ ಊರು, ನಿಮ್ಮ ಜನ, ನಿಮ್ಮ ಮನೆಯವರೆಲ್ಲಾ ನನಗೆ ತುಂಬಾ ಇಷ್ಟವಾದರು. ಅಬ್ಬಾ! ಎಂಥಹ ಒಗ್ಗಟ್ಟು…..”
“ಹೌದೂರಿ. ಹಳ್ಳಿಯಲ್ಲಿ ಮಾತ್ರ ನಾವು ಇಂತಹ ವಾತಾವರಣ ಕಾಣಲು ಸಾಧ್ಯ.”
“ಥ್ಯಾಂಕ್ಸ್ ಫಾರ್ ಎವ್ವರಿಥಿಂಗ್.”
“ನಾಳೆ ಶಾಲೆಯ ಜಾಗ ನೋಡಲು ಹೋಗೋಣ.”
“ಖಂಡಿತಾ ಬರ‍್ತೀನಿ. ನಾನು, ಅಪ್ಪ, ಚಂದ್ರಾವತಿ ಆಂಟಿ ಬರ‍್ತೀವಿ.”
ಅಷ್ಟರಲ್ಲಿ ಅಡಿಗೆಯವರು ಗಂಜಿ ತಂದರು. ವರು ಗಂಜಿ ಕುಡಿದು ಮಲಗಿದಳು.

ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44659
(ಮುಂದುವರಿಯುವುದು)

ಸಿ.ಎನ್. ಮುಕ್ತಾಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *