‘ಗಂಧಸಾಲೆ’ಯ ಸುಗಂಧ
ಗಂಧಸಾಲೆ ಅಂದರೆ ಅದು ಸುವಾಸನಾಯುಕ್ತವಾದ ಭತ್ತದ ತಳಿ. ಈ ಭತ್ತದ ಬೀಜ ಬಿತ್ತಿ ಪೈರು ಬೆಳೆದು ಕದಿರು ಕಟ್ಟಿದಾಗ ಉಂಟಲ್ಲಾ, ಆಗ ಬೀಸುವ ಗಾಳಿ ವಿಶಿಷ್ಟ ಸುಗಂಧವನ್ನು ಸುತ್ತಮುತ್ತ ಹರಡುತ್ತದೆ.ಈ ಸುವಾಸನೆ ಇನ್ನೂ ಇನ್ನೂ ಹೀರಿಕೊಳ್ಳಬೇಕು ಎನ್ನಿಸುವ ಅಹ್ಲಾದತೆ ಮೂಡಿಸುತ್ತದೆ.ಇದರ ಮೂಲ ತಿಳಿದವರಿಗೆ ಅಕ್ಕಪಕ್ಕದಲ್ಲೇ ಗಂಧಸಾಲೆ ಬೆಳೆ ಬೆಳೆಸುತ್ತಿದ್ದಾರೆ ಎಂದು ತಕ್ಷಣ ತಿಳಿದುಬಿಡುತ್ತದೆ.ಇನ್ನು ,ಬೆಳೆದಾಗ ಪೈರು ಕಟಾವು ಮಾಡಿ ಭತ್ತ ಮಾಡಿ ಪ್ರತ್ಯೇಕಿಸಿದರೆ ಆ ಬೈಹುಲ್ಲು ಕೂಡ ಘಮಗುಡುತ್ತದೆ. ಭತ್ತ ಅಕ್ಕಿಯಾಗಿ ಅನ್ನ,ಪಲಾವ್,ಮೊಸರನ್ನ, ಹೀಗೆ ಅನ್ನದ ವಿವಿಧ ರೂಪಗಳಲ್ಲಿ ಎದುರು ಬಂದಾಗ ಅದರ ಪರಿಮಳ ಇಡಿಯ ಪರಿಸರ ಆವರಿಸಿಕೊಳ್ಳುತ್ತದೆ. ಪ್ರಕೃತಿ ನೀಡಿದ ಅದ್ಭುತ ಕೊಡುಗೆ ಇದು. ಅಕ್ಕಿ ಹಳೆಯದಾದಷ್ಟೂ ಉತ್ತಮ. ನೆನಪಿಡಬೇಕಾದುದು ಏನೆಂದರೆ ಬೀಜ ಬಿತ್ತಿ ಬೆಳೆದು ಅಕ್ಕಿಯಾಗಿ ಊಟದ ಎಲೆಗೆ ಬರುವ ತನಕವೂ ಯಾವುದೇ ಪ್ರಿಸರ್ವೇಟಿವ್ ಗಳ ಬಳಕೆ ಇಲ್ಲ. ಬಾಸುಮತಿ ಅಕ್ಕಿಯೂ ಗಂಧಸಾಲೆ ಅಕ್ಕಿಯೂ ಸುವಾಸನೆಯಲ್ಲಿ ಸ್ಪರ್ಧೆಗಿಳಿದರೆ ಎರಡೂ ಫಸ್ಟ್. ಬೆಳೆಗಾರರಿಂದ ಚೌಕಾಸಿ ಮಾಡಿ ಕಡಿಮೆಗೆ ಖರೀದಿಸುವ ಮಧ್ಯವರ್ತಿ ಮಾರುವುದು ದುಬಾರಿ ಬೆಲೆಗೆ.ಲಾಭ ಆತನ ಜೇಬಿಗೆ.
ನಿತ್ಯ ಗಂಧಸಾಲೆ ಅನ್ನ ಉಣ್ಣಲು ಆಗದೆ ಇದ್ದರೂ ಉಣ್ಣುವ ಅನ್ನಕ್ಕೆ ಗಂಧಸಾಲೆ ಅನ್ನದ ಸುವಾಸನೆ ಯಥೇಚ್ಚವಾಗಿ ತುಂಬಿಕೊಡುವ ಅದ್ಭುತ ಸಸ್ಯವೊಂದನ್ನು ಪ್ರಕೃತಿ ನಮಗೆ ನೀಡಿದೆ.ಸುಮಾರು ಅರ್ಧ ಅಡಿ ಎತ್ತರ ಬೆಳೆದು ಉದ್ದನೆಯ ಎಲೆಗಳನ್ನು ಬಿಡುವ ಈ ಸಸಿಗೆ ಹೆಸರೇ ಗಂಧಸಾಲೆ ಗಿಡ. ಸರಿಸುಮಾರು ಅರ್ಧ ಮೀಟರ್ ಉದ್ದದ ಹಸಿರಾದ ಎಲೆಗಳು ನೀಳವಾಗಿ ಗಿಡದ ತುಂಬ ಬಿಡುತ್ತದೆ. ಬೇರು ಹರಡಿದಲ್ಲೆಲ್ಲ ಚಿಗುರಿ ಹೊಸ ಗಿಡ ಮೂಡುತ್ತದೆ. ಹಾದು ಹೋಗುವಾಗ ನಮ್ಮ ಕೈ ತಗುಲಿದರೂ ಅಹ್ಲಾದಕರ ಘಮಘಮ. ಬೀಸುವ ಗಾಳಿಯ ತುಂಬ ತುಂಬಿಬರುವ ಪರಿಮಳ ಹತ್ತಿರದಲ್ಲೆಲ್ಲೋ ಈ ಗಿಡ ಇದೆ ಎಂಬ ಗುಟ್ಟನ್ನು ಉಸುರುತ್ತದೆ. ಎಲೆ ಕಿತ್ತು ಕಿವಿಚಿದರೆ ಕೈ ತುಂಬುವ ಪರಿಮಳ. ಈ ಘಮಕ್ಕೆ ಆಕರ್ಷಿತವಾಗಿ ಹಾವು ಅತ್ತ ಸುಳಿಯುತ್ತದೆ ಎಂಬ ನಂಬಿಕೆ ಇದೆ. ಆದರೆ ನಮ್ಮಲ್ಲಿ ವರ್ಷಗಳಿಂದಲೂ ಇರುವ, ಹರಡಿ ಬೆಳೆದ ಈ ಸಸ್ಯದ ಬಳಿ ನಾನೆಂದೂ ಹಾವನ್ನು ಕಂಡಿಲ್ಲ.
ಅಕ್ಕಿ ಯಾವುದೇ ಇದ್ದರೂ ತೊಳೆದು ಅನ್ನಕ್ಕೆ ಇಡುವಾಗ ಗಂಧಸಾಲೆ ಗಿಡದಿಂದ ಮೂರು ನಾಲ್ಕು ಎಲೆಕಿತ್ತು ತೊಳೆದು ಅಕ್ಕಿಯ ಜೊತೆಗೆ ಹಾಕಬೇಕು. ಎಲೆಯನ್ನು ಅದೇ ಎಲೆ ಬಳಸಿ ಕಟ್ಟಿ ಅಕ್ಕಿಗೆ ಹಾಕಿ ಅನ್ನ ಮಾಡಬಹುದು.ಕುಕ್ಕರ್ ವ್ಹಿಶಲ್ ಹಾಕುವಾಗಲೇ ಪರಿಮಳ ಹೊತ್ತು ತರುತ್ತದೆ. ಅನ್ನದ ಮುಚ್ಚಳ ತೆಗೆದಾಗ ತಾಜಾ ತಾಜಾ ಗಂಧಸಾಲೆ! ಮನೆ ಪೂರಾ ಅಹ್ಲಾದದ ಸೊಗಡು. ಅಪಾರ ಸುವಾಸನೆ. ಈ ಘಮಕ್ಕೆ ನಿಜ ಹೇಳಬೇಕಾದರೆ ಸರಿಸಾಟಿ ಗಂಧಸಾಲೆ ಅನ್ನವೇ ಹೊರತು ಬೇರೊಂದಿಲ್ಲ. ಊಟವೂ ಅದೇ ರುಚಿ;ಅದೇ ಸವಿ. ಪಲಾವ್. ನೈಚ್ಚೋರ್,(ಘೀರೈಸ್)ಗಳಿಗೆ ಈ ಎಲೆ ಬಳಕೆ ಜಾಸ್ತಿ. ಅಕ್ಕಿಯ ಪಾಯಸಕ್ಕೆ ಅದ್ಭುತ ಪರಿಮಳ, ರುಚಿ ಕೊಡುವ ಎಲೆ ಗಂಧಸಾಲೆ ಎಲೆ. ಪ್ರಕೃತಿ ಕೊಟ್ಟ ಈ ಅಪರೂಪದ ಗಿಡಕ್ಕೂ ಭತ್ತದ ತಳಿಗೂ ಸಂಬಂಧವೇ ಇಲ್ಲ .ಆದರೆ ಪರಸ್ಪರ ಹೊಂದುವ ಈ ಪರಿಮಳ ಯಾವ ಕಾಣದ ಕೈಗಳು ಜೋಡಿಸಿ ಕೊಟ್ಟಿತೋ? ಇದು ವಿಸ್ಮಯ.
ಕೇರಳದಲ್ಲಿ ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಅಕ್ಕಿಯ ಪಾಯಸ ಸ್ಪೆಶಲ್ . ಮನೆಗಳಲ್ಲಿ ಇದೇ ಪಾಯಸ ಮಾಡಿದರೆ ಅದು ಅಂಬಲ(ದೇವಸ್ಥಾನ)ದ ಪಾಯಸವೆಂದೇ ಮಕ್ಕಳು ಗುರುತಿಸುವುದು.ಅಲ್ಲಿ ಈ ಎಲೆಗಳನ್ನು ಚೆನ್ನಾಗಿ ತೊಳೆದು ಅಕ್ಕಿ ಜೊತೆ ಹಾಕಿ ತೆಂಗಿನಹಾಲು, ಬೆಲ್ಲ,ಯಾಲಕ್ಕಿ, ದ್ರಾಕ್ಷಿ, ಗೋಡಂಬಿ ಸೇರಿಸಿ ಪಾಯಸ ತಯಾರಿಸಿ ಬಡಿಸಿದರೆ ಮಕ್ಕಳು ಅನ್ನ ಮುಟ್ಟದೆ ಅದನ್ನೇ ಹೊಟ್ಟೆ ತುಂಬ ಉಣ್ಣುತ್ತಾರೆ.ಅಮ್ಮಂದಿರ ಆಕ್ಷೇಪವೇ ಇಲ್ಲ. ಸಾದಾ ಅಕ್ಕಿ ಆದರೂ ಘಮಕ್ಕೆ ಮಾರು ಹೋಗುವ ದೊಡ್ಡವರೂ ಹಿಂದೆ ಬೀಳುವುದಿಲ್ಲ.
ಪ್ರಕೃತಿ ಉಚಿತವಾಗಿ ನಮಗಿತ್ತ ಸುಮಧುರ ಸುವಾಸನೆ ತುಂಬಿ ತುಳುಕುವ ಗಂಧಸಾಲೆ ಗಿಡದ ಬಗ್ಗೆ ಹಂಚಿಕೊಳ್ಳಲು ಹೋಗಿ ಮುಗಿಸುವಾಗ ತೆರೆದ ಕಿಟಿಕಿಯಿಂದ ಗಾಳಿ , ಗಿಡಗಳನ್ನು ಸವರುತ್ತ ತಂದ ಸೊಗಸಾದ ಗಂಧಸಾಲೆ ಘಮ ಹರಡಿದೆ ಇತ್ತ.
ಈ ಗಿಡದ ಸಸ್ಯಶಾಸ್ತ್ರೀಯ ಹೆಸರು Pandanus amaryllifolius.
p
– ಕೃಷ್ಣವೇಣಿ ಕಿದೂರು
ಗ೦ಧಸಾಲೆಯ ಘಮ ನಿಜಕ್ಕೂ ಅದ್ಭುತ ಪ್ರಕ್ರತಿಯ ಕೊಡುಗೆ ಯೇ ಸರಿ
ಗಂಧಸಾಲೆ ಅಕ್ಕಿ ಸಿಗುತ್ತದೆ contact no 9731778127
ಗಂಧಸಾಲೆ ಅಕ್ಕಿ ಎಲ್ಲಿ ದೊರೆಯುತ್ತದೆ? ಮತ್ತು ಬೆಲೆ ಎಷ್ಟು ದಯವಿಟ್ಟು ತಿಳಿಸಿ.
ಸಾವಯುವ ಗಂಧ ಸಾಲೆ ಅಕ್ಕಿ ಸಿಗುತ್ತೆ. ಸಂಪರ್ಕಿಸಿ – 8971155418