ಸಂತೋಷ ಬ್ಯಾಂಕಿನಿಂದ ರಿಟೈರ್ ಆಗಿ 12 ವರ್ಷಗಳು ಕಳೆದರೂ ಯಾವುದಾದರೊಂದು ಕೆಲಸದ ಸಲುವಾಗಿ ತಾನು ರಿಟೈರ್ ಆದ ಅಥವಾ ಕಾರ್ಯನಿರ್ವಹಿಸಿದ ಬ್ರಾಂಚುಗಳಿಗೆ ಹೋಗಿ ಬಂದ ಹಲವಾರು ಸಂದರ್ಭಗಳಲ್ಲಿ ಮನೆಗೆ ಬಂದ ಕೂಡಲೇ ಹೆಂಡತಿ ಪ್ರೇಮಳಿಗೆ ಹೇಳುತ್ತಿದ್ದ –
ಇಂದು ಬ್ರಾಂಚಿನಲ್ಲಿ ಕುಳಿತಿದ್ದಾಗ ಯಾರೋ ಮುದುಕರು ಬಂದು ಎಷ್ಟು ಆತ್ಮೀಯವಾಗಿ ಮಾತನಾಡಿಸಿದರು ಗೊತ್ತಾ? ನನಗೆ ಅವರ ಮುಖ ಪರಿಚಯ ಇದ್ದರೂ ಪೂರ್ತಿ ವಿವರಗಳು ಜ್ಞಾಪಕಕ್ಕೆ ಬರಲಿಲ್ಲ. ಅವರ ಮಗಳಿಗೆ ಎಜುಕೇಶನ್ ಲೋನ್ ಕೊಟ್ಟಿದ್ದೆನಂತೆ, ಅವಳು ಓದಿ ಇಂದು ಒಳ್ಳೆಯ ಕೆಲಸದಲ್ಲಿದ್ದಾಳಂತೆ, ಇವರುಗಳನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳಂತೆ, ʼಇದೆಲ್ಲಾ ನಿಮ್ಮಿಂದ ಸಾಧ್ಯವಾಯಿತು, ಚೆನ್ನಾಗಿದ್ದೀರಾ?ʼ –ಎಂದರು.
ಮತ್ತೊಮ್ಮೆ ಇನ್ನೊಬ್ಬರು – ನೀವು ಮನೆ ಸಾಲ ಕೊಟ್ಟಿದ್ದರಿಂದ ನಾವೂ ಒಂದು ಸ್ವಂತ ಮನೆಯ ಕನಸು ನನಸಾಗಿಸಿಕೊಂಡೆವು, ನಿಮ್ಮಿಂದ ಉಪಕಾರವಾಯಿತು, ಚೆನ್ನಾಗಿರಿ ಸಾರ್ – ಎಂದರು.
ನನ್ನ ಮಗ ಹೊಸದಾಗಿ ಕೆಲಸಕ್ಕೆ ಸೇರಿದ್ದ, ಕೆಲಸಕ್ಕೆಂದು ದಿನಾ ಬಸ್ಸಿನಲ್ಲಿ ೧೮ ಕಿ.ಮೀ.ಹೋಗಿ ಬರುವಲ್ಲಿ ಸುಸ್ತಾಗಿ ಬಿಡುತ್ತಿದ್ದ, ನೀವು ವೆಹಿಕಲ್ ಲೋನ್ ಕೊಟ್ಟಿದ್ದರಿಂದ ತುಂಬಾ ಸಹಾಯವಾಯಿತು, ನಿಮಗೆ ಒಳ್ಳೆಯದಾಗಲಿ – ಎಂದ ಮತ್ತೊಬ್ಬರು.
ಹೀಗೆಯೇ ಹಲವಾರು ಬಾರಿ ಹೇಳಿ, ಮುಂದುವರೆದು – ಕೇಳಿದಾಗಲೆಲ್ಲಾ ಎಷ್ಟು ಖುಷಿಯಾಗುತ್ತೆ, ಪ್ರಪಂಚದಲ್ಲಿ ಇನ್ನೂ ಎಷ್ಟೊಂದು ಮಂದಿ ಒಳ್ಳೆಯವರಿದ್ದಾರೆ, ನಾನು ಎಂದೋ ನಿಭಾಯಿಸಿದ ನನ್ನ ಕರ್ತವ್ಯವನ್ನು ಕೃತಜ್ಞತೆಯಿಂದ ಸಹಾಯ ಎನ್ನುತ್ತಾ ಹರಸುತ್ತಾರೆ – ಎನ್ನುತ್ತಾ ಧನ್ಯತಾ ಭಾವವನ್ನು ಅನುಭವಿಸುತ್ತಿದ್ದ.
ಆಗೆಲ್ಲಾ ಪ್ರೇಮಳಿಗೆ ಇಪ್ಪತೈದು ವರ್ಷಗಳ ಹಿಂದಿನ ಘಟನೆ ನೆನಪಿಗೆ ಬರುತಿತ್ತು. ಅಂದು ಬ್ಯಾಂಕಿನಿಂದ ಕೆಲಸ ಮುಗಿಸಿ ಬಂದವ ಸಂತಸದಿಂದ ಹೇಳಿದ – ಅಬ್ಬಾ, ಇಂದು ಗೋಲ್ಡನ್ ಶೇಕ್ ಹ್ಯಾಂಡ್ ಎಂಬ ಹೆಸರಿನ ಸ್ವಯಂ ನಿವೃತ್ತಿ ಬ್ಯಾಂಕ್ ನೌಕರರುಗಳಿಗೆ ಘೋಷಣೆಯಾಯಿತು. ಒಂದು ತಿಂಗಳಲ್ಲಿ ಅಪ್ಲೈ ಮಾಡಬೇಕು, ನಾನಂತೂ ಮಾಡಿ ಬಿಡುತ್ತೇನೆ, ನಾನು ಈಗ ರಿಟೈರ್ ಆದರೆ ಎಷ್ಟು ಹಣ ಬರಬಹುದೋ ಅದಕ್ಕೆ ಇನ್ನೂ ಹತ್ತು ಲಕ್ಷ ಹೆಚ್ಚಿಗೆ ಸೇರಿಸಿ ಕೊಡುತ್ತಾರೆ. ಪಿಂಚಣಿಯೂ ಬರುತ್ತದೆ. ಹಣವನ್ನು ಜೋಪಾನವಾಗಿ ವಿನಿಯೋಗಿಸಿ ಆರಾಮವಾಗಿ ಜೀವನ ನಡೆಸಬಹುದು, ನಾನಂತೂ ಅಪ್ಲೈ ಮಾಡುತ್ತೇನೆ. – ಪ್ರೇಮ ಯಾವ ಭಾವವನ್ನೂ ವ್ಯಕ್ತಪಡಿಸದೆ ಮೌನಕ್ಕೆ ಶರಣಾದಳು. ಸಂತೋಷ ತನ್ನದೇ ಕನಸಿನಲ್ಲಿ ತೇಲುತ್ತಾ ಅದನ್ನು ಗಮನಿಸಲಿಲ್ಲ.
ಎರಡು ದಿನಗಳು ಕಳೆಯಿತು, ಪ್ರೇಮಾ ಹೇಳಿದಳು – ಸಂತೋಷ, ನಿಮ್ಮ ಜೊತೆ ಮಾತನಾಡಬೇಕು.
ಹೇಳು, ಹೇಳು, ವಿಆರೆಸ್ ಬೇಡ ಎಂದು ಮಾತ್ರ ಹೇಳಬೇಡ.
ಯಾಕೆ ಹೇಳಬಾರದು?
ಇಂಥಹ ಗೋಲ್ಟನ್ ಆಪರ್ಚುನಿಟಿಯನ್ನು ಬಿಟ್ಟು ಮೂರ್ಖನಾಗಲು ಇಷ್ಟವಿಲ್ಲ.
ನಿಮಗೆ ಈಗ ಕೆಲಸ ಬಿಡುವ ಅಗತ್ಯ ಏನಿದೆ? ಏನಾದರೂ ತೀರಿಸಲಾಗದಷ್ಟು ಸಾಲ ಮಾಡಿಕೊಂಡಿದ್ದೀರಾ? ಆರೋಗ್ಯ ಸಮಸ್ಯೆ ಇದೆಯಾ? ತಂದೆ, ತಾಯಿ, ಇನ್ಯಾರಾದರೂ ಹಿರಿಯರ ಆರೈಕೆ ಮಾಡಬೇಕಾ? ಕುಟುಂಬದ ಬಿಸೆನೆಸ್ ಏನಾದರೂ ಇದ್ದು ಅದನ್ನು ನಿಭಾಯಿಸಬೇಕಾ? ಅಥವಾ ಯಾವುದಾದರೂ ಕಲೆ ಅಥವಾ ಹವ್ಯಾಸದಲ್ಲಿ ತೊಡಗಬೇಕಾ?
ಇಲ್ಲಾ, ಇಲ್ಲಾ . .
ಮತ್ತೆ ಯಾಕೆ ವಿಆರೆಸ್ ಬೇಕು? ಮನಶಾಸ್ತ್ರಜ್ಞರೆಲ್ಲಾ ಅಧ್ಯಯನ ನಡೆಸಿ ಮನುಷ್ಯ ೬೦ ವರ್ಷಗಳ ತನಕ ಜವಾಬ್ದಾರಿಯನ್ನು ನಿಭಾಯಿಸುವ ಅರ್ಹತೆಯನ್ನು ಹೊಂದಿರುತ್ತಾನೆ, ಎಂದು ನಿರ್ಧರಿಸಿದ್ದಾರೆ. ಮತ್ತೆ ಯಾವುದೇ ಅತ್ಯಗತ್ಯ ಕಾರಣವಿಲ್ಲದೆ ನಿವ್ಯಾಕೆ ನಿವೃತ್ತಿ ಬಯಸುತ್ತೀರಿ?
ನಾನೇನು ಮನೆಯಲ್ಲಿ ಸುಮ್ಮನೆ ಕೂರುವುದಿಲ್ಲ, ಯಾವುದಾದರೂ ಖಾಸಗೀ ಕಂಪನಿಗೆ ಸೇರಿಕೊಳ್ಳುತ್ತೇನೆ, ನಮಗೆಲ್ಲಾ ಕರೆದು ಕೆಲಸ ಕೊಡುತ್ತಾರೆ.
ಕೆಲಸ ಮಾಡುವುದೇ ಆದರೆ ಇಲ್ಲೇ ಮಾಡಿರಿ. ಸರ್ಕಾರೀ ಸಾಮ್ಯದ ಕಛೇರಿಗಳಲ್ಲಿ ಕೆಲಸ ಮಾಡಿದ ನೀವುಗಳು ಇಷ್ಟು ವರ್ಷಗಳ ನಂತರ ಖಾಸಗಿಯವರಲ್ಲಿ ದುಡಿಯುವುದು ಕಷ್ಟವಾಗುತ್ತದೆ. ಕೆಲಸ ಮಾಡುವ ವಾತಾವರಣ ಭಿನ್ನವಾಗಿರುತ್ತದೆ.
ಹತ್ತು ಲಕ್ಷ ಹೆಚ್ಚಿಗೆ ಹಣ ಬರುತ್ತದೆ.
ಕೂತು ತಿಂದರೆ ಕುಡಿಕೆ ಹಣವೂ ಖರ್ಚಾಗುತ್ತಂತೆ. ನಿಮಗೆ ಸಿಕ್ಕಿರುವ ಜನಸೇವೆ ಮಾಡುವ ಅವಕಾಶವನ್ನೇಕೆ ಬಿಡುತ್ತೀರಿ?
ನಾನೇನು ಜನಸೇವೆ ಮಾಡುವ ಬೋರ್ಡ್ ಹಾಕಿಕೊಂಡಿರುವ ರಾಜಕಾರಣಿಯಲ್ಲ.
ಸುಮ್ಮನೆ ವಿತ್ತಂಡ ವಾದ ಮಾಡಬೇಡಿ. ಎಷ್ಟು ಅರ್ಹ ಜನರಿಗೆ ನೀವು ಸಾಲ ನೀಡಬಹುದು, ಅದರಿಂದ ಅವರ ಮನೆಗಳು ಬೆಳಗಬಹುದು?
ಬ್ಯಾಂಕಿನ ತಲೆಬಿಸಿಯ ಕಷ್ಟ ನಿನಗೇನು ಗೊತ್ತು? ಸಾಲ ಕಟ್ಟದಿದ್ದರೆ ಮೇಲಿನವರಿಗೆ ನಾನು ಉತ್ತರ ಕೊಡಬೇಕು.
ಹೌದು ಯಾವುದೂ ಸುಲಭವಾಗಿ ದಕ್ಕುವುದಿಲ್ಲ, ನೀವು ಬ್ಯಾಂಕಿಗೆ ಸೆಲೆಕ್ಟ್ ಆದಾಗ ಇದ್ದ ಇನ್ನೂರು ಪೋಸ್ಟಿಗೆ ಇಪ್ಪತೈದು ಸಾವಿರಕ್ಕೂ ಮೀರಿ ಅರ್ಜಿಗಳು ಬಂದಿದ್ದವಂತೆ ಅಂತ ನೀವೇ ಹೇಳುತ್ತಿದ್ದಿರಿ, ಅಂದರೆ ಸುಮಾರು ನೂರು, ನೂರೈವತ್ತು ಜನರಿಗೆ ಒಬ್ಬರಂತೆ ಸೆಲೆಕ್ಟ್ ಆದವರಲ್ಲಿ ನೀವೂ ಒಬ್ಬರು. ಅಂದರೆ ನಿಮಗೆ ಯೋಗ್ಯತೆ ಇದೆ ಅಂತಾ ತಾನೇ ಕೆಲಸ ಸಿಕ್ಕಿದ್ದು. ಅದರಂತೆಯೇ ಕ್ಯಾಷಿಯರ್ ಆಗಿ ಸೇರಿ, ಕ್ಲರ್ಕ್ ಆಗಿ, ಆಫೀಸರ್ ಆಗಿ ಆಡೀಟರ್ ಆಗಿ, ಈಗ ಮ್ಯಾನೇಜರ್ ಆಗಿದ್ದೀರಿ. ಎಷ್ಟು ಅರ್ಹ ಜನರಿಗೆ ಸಹಾಯ ಮಾಡುವ ಅವಕಾಶ ಇದೆ. ʼಎನ್ ಐಡ್ಲ್ ಮೈಂಡ್ ಈಜ್ ಡೆವಿಲ್ಸ್ ವರ್ಕಶಾಪ್ʼ ಆಗುವುದು ನನಗೆ ಬೇಕಿಲ್ಲ. ನಾನ್ಯಾವತ್ತಾದರೂ ಹೆಚ್ಚು ಹಣ ಬೇಕೆಂದು ಪೀಡಿಸಿದ್ದೀನಾ?
ಇಲ್ಲಾ, ಇಲ್ಲಾ, ಅದಂತೂ ಮದುವೆಯಾದ ಹೊಸದರಲ್ಲಿಯೇ ನಮ್ಮಿಬ್ಬರಲ್ಲಿ ಒಮ್ಮತ ಮೂಡಿತ್ತಲ್ಲ, ನ್ಯಾಯ, ನೀತಿಯಿಂದ ಬದುಕೋಣ, ಅನ್ಯಾಯದ ಹಣಕ್ಕೆ ಆಮಿಷಗಳಿಗೆ ಆಸೆ ಪಡದಿರೋಣ ಅಂತ. ಈಗ ಬರುತ್ತಿರುವುದು ಅನ್ಯಾಯದ ಹಣ ಅಲ್ಲ, ಗೌರವಯುತವಾಗಿ ನಮಗೆ ನೀಡುತ್ತಿರುವ ಗೋಲ್ಡನ್ ಶೇಕ್ ಹ್ಯಾಂಡ್.
ಯಾವ ಶೇಕ್ ಹ್ಯಾಂಡೂ ಬೇಡ, ೬೦ ವರ್ಷಗಳ ತನಕ ದುಡಿಯುತ್ತಿರಿ, ಕ್ರಿಯಾಶೀಲರಾಗಿರಿ, ಮೈಮನಸ್ಸುಗಳು ಆರೋಗ್ಯವಾಗಿರುತ್ತದೆ. ಅಲ್ಲದೆ ನಿಮಗೆ ಸಿಕ್ಕಿರುವ ಪದವಿ, ಅವಕಾಶಗಳಿಂದ ಆದಷ್ಟು ಜನಕ್ಕೆ ಸ್ವಾರ್ಥವಿಲ್ಲದ ಸಹಾಯ ಮಾಡಿರಿ, ಯೋಚಿಸಿರಿ, ಯೋಚಿಸಿ ನಿರ್ಧಾರಕ್ಕೆ ಬನ್ನಿರಿ.
ಗೊಣಗಿಕೊಂಡೇ ಮನಸ್ಸು ಬದಲಾಯಿಸಿದರೂ, ಈಗ ರಿಟೈರ್ ಆದ ನಂತರವೂ ಸಿಗುತ್ತಿರುವ ಜನ ಪ್ರೀತಿಯ ಸಂತೋಷವನ್ನು ಸಂತೋಷ ಸಂಭ್ರಮಿಸುತ್ತಾ ಇದ್ದಾನೆ.

ಪದ್ಮಾ ಆನಂದ್, ಮೈಸೂರು

