ನಮ್ಮ ಕನ್ನಡ ಭಾಷೆಯಲ್ಲಿ ಅವೆಷ್ಟೋ ಭಾಷೆಯ ಪದಗಳು ಮಿಳಿತವಾಗಿವೆ ಹಾಗೂ ಆ ಪದಗಳನ್ನು ನಾವು ಸಹಜವಾಗಿ ಬಳಸುತ್ತೇವೆ. ಮಾಮೂಲಿಯಾಗಿ ಬಳಕೆಯಲ್ಲಿರುವ ಅವೆಷ್ಟೋ ಆಂಗ್ಲ ಪದಗಳಿಗೆ ಸೂಕ್ತ ಕನ್ನಡ ಪದವನ್ನು ಹುಡುಕಲು ತಿಣುಕಾಡುತ್ತೇವೆ. ಅಂದರೆ ಅಷ್ಟರ ಮಟ್ಟಿಗೆ ನಾವು ಆ ಪದಗಳಿಗೆ ಒಗ್ಗಿ ಹೋಗಿದ್ದೇವೆ. ಕನ್ನಡ ಭಾಷೆ ಮಾತ್ರವಲ್ಲ ನಮ್ಮ ಮಾತೃಭಾಷೆಯಲ್ಲಿಯೂ ಹಾಸುಹೊಕ್ಕಾಗಿರುವ ಕೆಲವು ಶಬ್ದಗಳಲ್ಲಿ ಪೇಪರ್ ಅನ್ನುವ ಪದವೂ ಒಂದು. ಪೇಪರ್ ಅನ್ನುವ ಪದಬಳಕೆಯನ್ನು ನಮ್ಮ ದೈನಂದಿನ ಬದುಕಿನಲ್ಲಿ ಹೇಗೆಲ್ಲಾ ಮಾಡುತ್ತೇವೆ ಅಲ್ಲದೆ ಎಷ್ಟೆಲ್ಲಾ ತರದ ಪೇಪರ್ ಸಂಬಂಧೀ ವಿಷಯಗಳು/ವಸ್ತುಗಳಿವೆ ಅನ್ನುವುದರ ಬಗ್ಗೆ ತುಸು ಬೆಳಕು ಚೆಲ್ಲುವ ಕಿರು ಪ್ರಯತ್ನ. ನಾವು ಸಾಮಾನ್ಯವಾಗಿ ಬಳಸುವಂತಹ ಪದಪ್ರಯೋಗಗಳನ್ನೇ ಹೇಳಬೇಕಿರುವುದರಿಂದ ಈ ಲೇಖನದಲ್ಲಿ ಆಂಗ್ಲಪದ ಬಳಕೆಯನ್ನೇ ಮಾಡಿದ್ದೇನೆಂದು ಹೇಳುತ್ತಾ ಈ ಲೇಖನ ನಿಮ್ಮ ಮುಂದೆ!
ಪೇಪರ್ ಅಂದರೆ ಪತ್ರಿಕೆ, ಪೇಪರ್ ಅಂದರೆ ಕಾಗದ.. ಪೇಪರ್ ಅಂದ ಕೂಡಲೇ ಸಂದರ್ಭಕ್ಕನುಗುಣವಾಗಿ ಬೇರೆ ಬೇರೆ ಅರ್ಥ ಬರುತ್ತದೆ ಅನ್ನುವುದನ್ನು ಎಲ್ಲರೂ ಒಪ್ಪುತ್ತೀರಿ ತಾನೇ? ಮಾಮೂಲಿಯಾಗಿ ಪೇಪರ್ ಅಂದ ಕೂಡಲೇ ಕಣ್ಣ ಮುಂದೆ ಬರುವುದು ವರ್ತಮಾನ ಪತ್ರಿಕೆ. “ರೀ, ಪೇಪರ್ ನೋಡಿದ್ರಾ?”, “ಇವತ್ತಿನ ಪೇಪರಿನಲ್ಲಿ ನಿಮ್ಮ ಫೋಟೋ ನೋಡಿದೆ”, “ಪೇಪರಿನಲ್ಲಿ ಒಂದು ವಿಷಯ ಓದಿದೆ”, “ಪೇಪರಿಗೆ ಒಂದು ಫೋಟೋ ಕಳಿಸಬೇಕು”, “ಪೇಪರಿನಲ್ಲಿ ಬಂದ ಸುದ್ದಿ ಓದಿದ್ರಾ?” ಇವೆಲ್ಲಾ ಕೆಲವು ಉದಾಹರಣೆಗಳು. ಇಲ್ಲಿ ಪೇಪರ್ ಅಂದರೆ ವರ್ತಮಾನ ಪತ್ರಿಕೆ ಅದರಲ್ಲೂ ದಿನಪತ್ರಿಕೆ. ಪತ್ರಿಕೆ ಅಂದ ಕೂಡಲೇ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ/ಮಾಸಪತ್ರಿಕೆ, ಆಹ್ವಾನಪತ್ರಿಕೆ ಎಲ್ಲವೂ ಕಣ್ಣ ಮುಂದೆ ಬರುತ್ತದೆ. ಕಾಗದ ಬಂದಿದೆ ಅಂದರೆ ಅಂಚೆಯ ಮೂಲಕ ಬಂದ ಪತ್ರ (ಕ್ಷೇಮಸಮಾಚಾರ ವಿಚಾರಿಸಿ ಬರೆದದ್ದು) ಎಂದರ್ಥ. ನಮ್ಮ ಕಡೆ ಆಹ್ವಾನ ಪತ್ರಿಕೆಯನ್ನು ಕೂಡಾ ಕಾಗದ ಅನ್ನುತ್ತೇವೆ. ಆದರೆ ಪೇಪರ್ ಅಂದಾಗ ದಿನಪತ್ರಿಕೆ, ಕಾಗದ ಅನ್ನುವಾಗ ಪತ್ರ ಅನ್ನುವಷ್ಟು ತಾದಾತ್ಮ್ಯ ಬೆಳೆದಿದೆ.
ಮೊದಲೇ ಹೇಳಿದಂತೆ ಸಮಯ, ಸಂದರ್ಭಕ್ಕೆ ಅನುಗುಣವಾಗಿ ಪೇಪರ್ ಪದದ ಅರ್ಥ ಬದಲಾಗುತ್ತಾ ಹೋಗುತ್ತದೆ. ಉದಾಹರಣೆಗೆ ಪರೀಕ್ಷೆ ಮುಗಿದ ಕೆಲದಿನಗಳ ಬಳಿಕ ವಿದ್ಯಾರ್ಥಿಗಳು ಉಪನ್ಯಾಸಕರ ಬಳಿ “ಸರ್, ಪೇಪರ್ ತಿದ್ದಿ ಆಯ್ತಾ? ಯಾವಾಗ ಪೇಪರ್ ಕೊಡ್ತೀರಿ?” ಅಂತ ಕೇಳುವಾಗ ಪೇಪರ್ ಅಂದರೆ ಉತ್ತರಪತ್ರಿಕೆ. ಹೀಗೆ ಕೇಳುವ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆಯೇ. ಆ ವಿಷಯವಂತಿರಲಿ. ಒಂದು ಸಂಶೋಧನಾ ವಿದ್ಯಾರ್ಥಿಗಳ ಗುಂಪಿನವರು “ನಿನ್ನದು ಪೇಪರ್ ಕಮ್ಯುನಿಕೇಟ್ ಆಯ್ತಾ? ನಿಂದು ಪೇಪರ್ ಆಯ್ತಂತೆ ಅಲ್ವಾ?” ಅಂತ ಕೇಳಿದರೆ ಇಲ್ಲಿ ಅದು ಸಂಶೋಧನಾ ಬರಹ ಎಂದು ಅರ್ಥವಾಗುತ್ತದೆ. ವಕೀಲರು ಹೂಡುವ ದಾವೆಗಳಿಗೆ ಸಂಬಂಧಿಸಿದ ವಿಲ್ ಪೇಪರ್, ಡೈವೋರ್ಸ್ ಪೇಪರ್, ಆಸ್ತಿಯ ಪರಭಾರೆ, ಕ್ರಯ, ವಿಕ್ರಯಕ್ಕೆ ಸಂಬಂಧಿಸಿದ ಪೇಪರುಗಳು ಕೂಡಾ ಪೇಪರುಗಳೆನ್ನಿಸಿಕೊಳ್ಳುತ್ತವೆ. “ಪ್ರಿಂಟರಿನಲ್ಲಿ ಪೇಪರ್ ಖಾಲಿ ಆಗಿದೆ. ಪೇಪರ್ ಹಾಕ್ತೀರಾ?” ಅಂತ ಕೇಳಿದ್ರೆ ಇಲ್ಲಿ A4 ಪೇಪರ್ ಅಂತ ಅರ್ಥ. ಪ್ರಿಂಟರ್ ಯಾವುದೆಂಬುದರ ಮೇಲೆ ಪೇಪರಿನ ಗಾತ್ರ ನಿರ್ಧಾರವಾಗುತ್ತದೆ. ಕೆಲವು ಪ್ರಿಂಟರುಗಳಲ್ಲಿ A4 ಅಥವಾ ಲೀಗಲ್ ಪೇಪರ್ ಹಾಕಬಹುದು. ಅವಶ್ಯಕತೆಗಳಿಗೆ ತಕ್ಕುದಾಗಿ ವಿವಿಧ ವಿನ್ಯಾಸಗಳಲ್ಲಿ, ಆಯ್ಕೆಯ ಬಣ್ಣಗಳಲ್ಲಿ A0 ಯಿಂದ (ದೊಡ್ಡ ಗಾತ್ರದ್ದು) ಆರಂಭಿಸಿ A10 ರ ತನಕದ ಪೇಪರುಗಳನ್ನು ಮುದ್ರಣದಲ್ಲಿ ಬಳಸುತ್ತಾರೆ.
ಪೇಪರಿನ ವರ್ಗೀಕರಣವನ್ನು ಬೇರೆ ಬೇರೆ ರೀತಿಯಲ್ಲಿ ಮಾಡಬಹುದು. ಪೇಪರ್ ಯಾವ ಬಣ್ಣದಲ್ಲಿದೆ, ನೋಡಲಿಕ್ಕೆ ಹೇಗೆ ಕಾಣುತ್ತದೆ, ಎಷ್ಟು ದಪ್ಪ ಇದೆ, ಯಾವುದಕ್ಕೆ ಬಳಕೆಯಾಗುತ್ತದೆ ಅನ್ನುವುದನ್ನು ಅವಲಂಬಿಸಿ ವರ್ಗೀಕರಣ ಮಾಡಬಹುದು. ಅಚ್ಚ ಬಿಳಿ,ಕಪ್ಪು ಬಣ್ಣ, ಕೆನೆ ಬಣ್ಣ, ಬೂದು ಬಣ್ಣ, ಹಳದಿ ಬಣ್ಣ, ಕೆಂಪು ಬಣ್ಣ ಅಥವಾ ಇನ್ನಾವುದೇ ಬಣ್ಣದಲ್ಲಿ ಪೇಪರ್ ಬರಬಹುದು. ಚಿತ್ರ ಬಿಡಿಸಲು ಬಿಳಿ, ಹಳದಿ, ಕಪ್ಪು, ನೀಲಿ ಚಾರ್ಟ್ ಪೇಪರುಗಳನ್ನು ಬಳಸುವರು. ನೀರು ಹೀರಿಕೊಳ್ಳಲು ಬ್ಲೋಟಿಂಗ್ ಪೇಪರ್, ಕೈ ಒರೆಸಲು, ಮುಖ ಒರೆಸಲು/ವಿದೇಶಗಳಲ್ಲಿ ಶೌಚಕ್ರಿಯೆಯ ಬಳಿಕ ಒರೆಸಿಕೊಳ್ಳಲು ಟಿಶ್ಯೂ ಪೇಪರ್, ಟಿಶ್ಯೂ ಪೇಪರಿನಲ್ಲಿಯೂ ಅವೆಷ್ಟು ವಿಧಗಳು- ನಯ, ದಪ್ಪ, ಒದ್ದೆ,..! ಕ್ವೆಶ್ಚನ್ ಪೇಪರ್, ಆನ್ಸರ್ ಪೇಪರ್, ನ್ಯೂಸ್ ಪೇಪರ್, ರಸಾಯನಶಾಸ್ತ್ರ/ಜೀವಶಾಸ್ತ್ರ ಪ್ರಯೋಗಶಾಲೆಯಲ್ಲಿ ಫಿಲ್ಟರ್ ಪೇಪರ್, ಲಿಟ್ಮಸ್ ಪೇಪರ್, ರಾಸಾಯನಿಕ ದ್ರಾವಣದ ಆಮ್ಲತೆ ಅಥವಾ ಕ್ಷಾರೀಯತೆ ಎಷ್ಟಿದೆ ನೋಡಲು ಪಿ ಎಚ್ ಪೇಪರ್, ಕೇಕ್ ತಯಾರಿಯಲ್ಲಿ ಬೇಕಿಂಗ್ ಪೇಪರ್, ಸಿಹಿತಿಂಡಿ ಕಟ್ಟಲು ಅಥವಾ ಸುತ್ತಲು ಬಟ್ಟರ್ ಪೇಪರ್, ಪ್ಯಾಕಿಂಗ್ ಪೇಪರ್, ಬೈಂಡಿಂಗ್ ಪೇಪರ್, ಬಣ್ಣ ಬಣ್ಣದ ಬಂಟಿಂಗ್ ಪೇಪರ್, ಗ್ಲಾಸ್ ಪೇಪರ್, ಸ್ಯಾಂಡ್ ಪೇಪರ್, ಪೋಲಿಶ್ಡ್ ಪೇಪರ್, ಗ್ಲಿಟ್ಟರಿಂಗ್ ಪೇಪರ್, ಮಾರ್ಕರ್ ಪೇಪರ್, ಬೆಳಕು ಪ್ರತಿಫಲಿಸುವ ಸ್ಟಿಕ್ಕರ್ ಪೇಪರ್, ಬರೆಯಲು ರೈಟಿಂಗ್ ಪೇಪರ್- ಗೆರೆ ಇಲ್ಲದ್ದು/ಗೆರೆ ಇರುವುದು, ಠಸೆ ಪೇಪರ್, ಹೊಸ ಸೀರೆಯ ಮಧ್ಯೆ ಇಡುವ ಪೇಪರ್, ಸೀರೆ ಮಡಚಿ ಇಡಲು ಪೇಪರ್, ಸಮಾರಂಭಗಳಲ್ಲಿ ಊಟದ ಮೇಜಿನ ಮೇಲೆ ಹರಡುವ ಡೈನಿಂಗ್ ಪೇಪರ್ ರೋಲ್, ಇನ್ನು ಮುದ್ರಣಕ್ಕಾಗಿ ಬಳಸುವ ವಿಶೇಷ ಪೇಪರುಗಳು,… ಇತ್ಯಾದಿ.
ಮುದ್ರಣ ಎನ್ನುವಾಗ ಪಠ್ಯ ಪುಸ್ತಕ, ನೋಟ್ಸ್ ಪುಸ್ತಕ, ರಫ್ ಪುಸ್ತಕ, ವರ್ತಮಾನ ಪತ್ರಿಕೆ, ವಾರ/ಮಾಸಪತ್ರಿಕೆ, ಆಹ್ವಾನ ಪತ್ರಿಕೆ, ದಿನದರ್ಶಿಕೆ, ಪುಸ್ತಕಗಳು, ದಿನಚರಿ ಪುಸ್ತಕ, ಫೋಟೋ, ನೋಟು, ಜಾಹೀರಾತು Fliers/posters/ cards, ಪ್ರಶಸ್ತಿಪತ್ರ, ರಶೀದಿ (ದೊಡ್ಡ ದೊಡ್ಡ ಮಾಲುಗಳಲ್ಲಿ/ಅಂಗಡಿಗಳಲ್ಲಿ/ ದೇವಸ್ಥಾನಗಳಲ್ಲಿ), ಟಿಕೆಟ್ (ಬಸ್, ರೈಲು, ವಿಮಾನ, ಪ್ರೇಕ್ಷಣೀಯ ಸ್ಥಳಗಳ ಪ್ರವೇಶ/ನಾಟಕ/ಚಲನಚಿತ್ರ/ಸಾಂಸ್ಕೃತಿಕ ಕಾರ್ಯಕ್ರಮಗಳು) ಇತ್ಯಾದಿ ಕಣ್ಣ ಮುಂದೆ ಬರುತ್ತದೆ. ಅನುಕೂಲತೆ, ಅಗತ್ಯತೆಗಳಿಗೆ ತಕ್ಕಂತೆ ಕೆಲವೊಂದು ಮಿತ ದರದ, ಕೆಲವೊಂದು ದುಬಾರಿಯಾಗಿರುವ ನುಣುಪು/ ಒರಟು ಪೇಪರುಗಳು ಲಭ್ಯವಿವೆ. ಕೆಲವೊಂದು ಹೊಳೆಯುತ್ತವೆ. ಕೆಲವೊಂದು ಹೊಳೆಯುವುದಿಲ್ಲ. ಪೇಪರಿನ ತೂಕ ಹಾಗೂ ದಪ್ಪವನ್ನು ಅವಲಂಬಿಸಿ GSM(Grams per Square Meter) ಅನ್ನುವ ಮಾನದಂಡದ ಪ್ರಕಾರ ಅವೆಷ್ಟೋ ಬಗೆಯ ಪೇಪರುಗಳು ಲಭ್ಯವಿವೆ. ಪೇಪರುಗಳ ಆಯ್ಕೆ ಅವರವರ ಅಭಿರುಚಿ ಹಾಗೂ ಅವರವರ ಕಿಸೆಯ ಕಿಮ್ಮತ್ತಿಗೆ ಬಿಟ್ಟದ್ದು.
ಬಳಸಿ ಎಸೆಯುವಂತಹ ಪರಿಸರ ಸ್ನೇಹಿ ಪೇಪರ್ ಲೋಟಗಳು, ತಟ್ಟೆಗಳು, ಕಪ್ಪುಗಳು, ಸ್ಟ್ರಾ (ಹಣ್ಣಿನ ರಸ/ಪಾನೀಯ ಹೀರಲು), ಚೀಲಗಳು (ಎಲ್ಲಾ ಹೈ-ಫೈ ಅಂಗಡಿಗಳಲ್ಲಿ, ಮನೆ ಬಾಗಿಲಿಗೆ ತಲುಪಿಸುವ ಆನ್-ಲೈನ್ ಡೆಲಿವರಿಗಳಲ್ಲಿ) ಈಗಂತೂ ಸಿಕ್ಕಾಪಟ್ಟೆ ಜನಪ್ರಿಯವಾಗಿವೆ. ಪೇಪರಿನಷ್ಟೇ ತೆಳುವಾಗಿ ತಯಾರಿಸುವ ದೋಸೆ ಪೇಪರ್ ದೋಸೆ ಎನಿಸಿಕೊಳ್ಳುತ್ತದೆ. ಪೇಪರಿನಂತೆ ನಿಲ್ಲುವ ಸೀರೆ- ಪೇಪರ್ ಸಿಲ್ಕ್ ಸೀರೆಯೂ ಸಾಕಷ್ಟು ಹೆಂಗಳೆಯರ ಮನ ಗೆದ್ದಿದೆ. ಇತ್ತೀಚೆಗೆ ನಾನು ನೋಡಿದ ರೀಲ್ ಒಂದರಲ್ಲಿ, ಈರ್ವರು ಹೆಂಗಳೆಯರು ವರ್ತಮಾನ ಪತ್ರಿಕೆಯನ್ನು ಸೀರೆಯ ತರಹ ಉಟ್ಟು ಸಂಭ್ರಮಿಸುತ್ತಿದ್ದರು!
ಹಳೆಯ ವರ್ತಮಾನ ಪತ್ರಿಕೆಗಳಂತೂ ಬಹೂಪಯೋಗಿ. ಹೂಗಿಡಗಳನ್ನು ಕೊಂಡೊಯ್ಯುವಾಗ ಪೇಪರಿನಲ್ಲಿ ಸುತ್ತಿ ಕೊಂಡುಹೋಗುವರು. ತಂಗಳುಪೆಟ್ಟಿಗೆಯ ಒಳಗೆ ಕೊತ್ತಂಬರಿ ಸೊಪ್ಪಿನ ತಾಜಾತನ ಕಾಪಾಡಲು ಪೇಪರಿನಲ್ಲಿ ಸುತ್ತಿ ಇಡುವರು. ಮಾರಾಟಕ್ಕಿಟ್ಟಿರುವ ಜಂಬದ ಚೀಲದ ಹೊಟ್ಟೆ ಉಬ್ಬಿರುವಂತೆ ಕಾಣಲು ಪೇಪರ್ ಮುದ್ದೆ ಮಾಡಿ ಇಡುತ್ತಾರೆ. ಇವು ಕೆಲವು ಉದಾಹರಣೆಗಳು. ಒಟ್ಟಾರೆಯಾಗಿ ಹೇಳಬೇಕೆಂದರೆ ಸರ್ವಂ ಪೇಪರ್ ಮಯಂ. ಪೇಪರ್ ಉತ್ಪಾದನೆಗೆ ಮರಗಳನ್ನು ಕಡಿಯುವುದರಿಂದ ಅರಣ್ಯನಾಶ ಆಗುತ್ತದೆ. ಅದಕ್ಕೋಸ್ಕರ ಪೇಪರ್ ಬಳಕೆ ಕಡಿಮೆ ಮಾಡಬೇಕೆಂಬ ಪರಿಸರವಾದಿಗಳ ಧ್ವನಿಗೆ ಓಗೊಟ್ಟು ಹಲವಾರು ಕಛೇರಿಗಳು ಕಾಗದರಹಿತ (ಪೇಪರ್ ಲೆಸ್) ವ್ಯವಹಾರ ಮಾಡುತ್ತಿವೆ. ಡಿಜಿಟಲ್ ಖರೀದಿಯ ಕಾರಣದಿಂದಾಗಿ, ನೋಟುರಹಿತ ಧನ ವರ್ಗಾವಣೆ ಈಗ ಪ್ರಚಲಿತವಾಗಿದೆ.
ಬೋಗನ್ ವಿಲ್ಲಾ ಗಿಡದ ಹೂವುಗಳನ್ನು ಕಾಗದ ಹೂವು ಅಂತ ಹೇಳುತ್ತಿದ್ದ ನೆನಪು, ಸಭೆ ಸಮಾರಂಭ ನಡೆಯುವ ಸ್ಥಳಗಳನ್ನು ಶೃಂಗರಿಸಲು ಬಳಸುತ್ತಿದ್ದ ಬಣ್ಣದ ಕಾಗದಗಳನ್ನು ನೀರು ಅಥವಾ ಎಂಜಲು ಹಚ್ಚಿ ಒದ್ದೆ ಮಾಡಿ ಕೈಬೆರಳಿನ ತುದಿಗಳಿಗೆ ಬಣ್ಣ ಮೆತ್ತಿಸಿಕೊಂಡ ನೆನಪು, ದಿನಸಿ ಅಂಗಡಿಯವರು ದಿನಸಿ ಸಾಮಾನುಗಳನ್ನು ಕಟ್ಟಿಕೊಟ್ಟ ಪೇಪರ್ ತುಂಡಿನ ಪ್ರತಿ ಶಬ್ದವನ್ನೂ ಬಿಡದೆ ಓದಿದ ನೆನಪು,.. ಒಂದೇ ಎರಡೇ… ಇನ್ನು ಹಲವಿವೆ.
ಈಗಷ್ಟೇ ಮುಖಹೊತ್ತಗೆಯಲ್ಲಿ ಓದಿದ ವಿಷಯ- “ಆಭರಣದ ಅಂಗಡಿಯವರು ಸಣ್ಣ ಪುಟ್ಟ ಚಿನ್ನದ ಅಥವಾ ಬೆಳ್ಳಿಯ ಆಭರಣಗಳನ್ನು ಗುಲಾಬಿ ಬಣ್ಣದ ಕಾಗದದಲ್ಲಿಯೇ ಕಟ್ಟಿ ಕೊಡುವುದಕ್ಕೆ ಕಾರಣವೇನಿರಬಹುದೆಂದು”. ” ಓಹ್! ಹೌದಲ್ಲಾ ಅನ್ನಿಸಿತು”. ಕಾರಣ ಗೊತ್ತಿರುವವರು ಪ್ರತಿಕ್ರಿಯಿಸುತ್ತೀರಲ್ವಾ?
ಈ ಲೇಖನದ ಕೊನೆಗೊಂದು ಕಿವಿಮಾತು- ಯಾವುದೇ ಆಹಾರವಸ್ತುವನ್ನು ಕಟ್ಟಲು(ಸಿಹಿತಿಂಡಿ/ಕರಿದತಿಂಡಿ) ಹಳೆಯ ನ್ಯೂಸ್ ಪೇಪರ್ ಬಳಸದಿರೋಣ ಆಗದೇ?

ಡಾ. ಕೃಷ್ಣಪ್ರಭ ಎಂ, ಮಂಗಳೂರು


