(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಶಿವಶಂಕರ ದೇವಕಿಗೆ ಹೇಳಿದ. “ದೇವಕಿ ಅಣ್ಣ-ಅತ್ತಿಗೆ ಬರುವವರೆಗೂ ನಾನು ನನ್ನ ಫ್ರೆಂಡ್ ರೂಂನಲ್ಲಿರ‍್ತೇನೆ. ಈ ಟ್ರಾಫಿಕ್‌ನಲ್ಲಿ ಓಡಾಡುವುದು ತಪ್ಪುತ್ತದೆ.
ಜಾನಕಿ ಮಗುವಿಗೋಸ್ಕರ ರಜ ಹಾಕಬೇಕಾಯ್ತು.
ಅವಳು ದೇವಕಿಗೆ ಹೇಳಿದಳು. “ನೀನು ನಿಮ್ಮ ಪಾರು ಅಕ್ಕನಿಗೆ ಮಗಳ ಜೊತೆ ಬರಕ್ಕೆ ಹೇಳು. ಅಡಿಗೆ ಮಾಡುವುದಾದರೂ ತಪ್ಪುತ್ತದೆ. ಸುಮ ಮಗೂನ್ನ ನೋಡಿಕೊಳ್ಳಲಿ. ಇವತ್ತು ಸಾಯಂಕಾಲ ಒಳಗೆ ಇಲ್ಲಿರಬೇಕೂಂತ ಹೇಳು.”
“ಅಕ್ಕ ಕಾರು ಬುಕ್ ಮಾಡು ಅಂತಾಳೆ. ಅವರಿಬ್ಬರೂ ಬಂದ್ರೆ ನಾವು ಕೈ ಬಿಚ್ಚಿ ಖರ್ಚು ಮಾಡಬೇಕಾಗುತ್ತದೆ.”
“ಮಾಡೋಣ ಸಧ್ಯ. ಅಡಿಗೆ ಮಾಡೋದು ತಪ್ಪಿದರೆ ಸಾಕು” ದೇವಕಿ ಫೋನ್ ಮಾಡಿದಳು.
“ಆಗಲಿ ಕಣೆ. ಒಂದು ಗಂಟೆಗೆ ಹೊರಡ್ತೀನಿ. ಕಾರು ಬುಕ್ ಮಾಡಿದ್ದಾಯಿತಾ? ನಾನೇ ರಾತ್ರಿಗೆ ಅಡಿಗೆ ಮಾಡ್ತೀನಿ.”
“ಸರಿ ಅಕ್ಕ. ನೀನು ಬಂದರೆ ನಮಗೂ ಸಮಾಧಾನ.”
ನಾಲ್ಕೂವರೆಯ ಹೊತ್ತಿಗೆ ಪಾರ್ವತಿ ಮಗಳ ಜೊತೆ ಕಾರ್‌ನಲ್ಲಿ ಬಂದರು. ದೇವಕಿ ಇರಲಿಲ್ಲ. ಜಾನಕಿಯೇ ಅವರಿಗೆ ಕಾಫಿ ಮಾಡಿಕೊಟ್ಟಳು. ಏಳು ಗಂಟೆಯವರೆಗೂ ವಿಶ್ರಾಂತಿ ತೆಗೆದುಕೊಂಡು ಪಾರ್ವತಿ ಅನ್ನ, ಸಾರು, ಸೌತೆಕಾಯಿ ಹೆಚ್ಚಿ ರಾಯತ ಮಾಡಿದರು.
“ಮನೇಲಿ ಯಾವ ಸಾಮಾನೂ ಇಲ್ಲ. ಲಿಸ್ಟ್ ಮಾಡಿಕೊಡ್ತೇನೆ ತರಿಸು.”
“ಸಾಮಾನಿಲ್ಲವಾ?”
“ತಿಂಗಳಾದ ಮೇಲೆ ತಾನೆ ಅಣ್ಣ ಸಾಮಾನು ತರ‍್ತಾ ಇದ್ದಿದ್ದು. ಈಗ ತಿಂಗಳ ಕೊನೆ. ಸಾಮಾನು ಎಲ್ಲಿರತ್ತೆ? ನಾನು ಆನ್‌ಲೈನ್‌ನಲ್ಲಿ ತರಿಸ್ತೀನಿ. ಇವತ್ತು ಹತ್ತು ಗಂಟೆಯ ಒಳಗೆ ಸಾಮಾನು ತಂದುಕೊಡ್ತಾರೆ.”
“ತರಕಾರಿ ತಂದಿಡು. ಬೆಳಿಗ್ಗೆ ನೀವು ಹೋಗುವಷ್ಟರಲ್ಲಿ ಅಡಿಗೆ ತಿಂಡಿ ಆಗಬೇಕಲ್ವಾ?”
ದೇವಕಿ ಹೋಗಿ ತರಕಾರಿ, ಟೊಮ್ಯಾಟೋ, ಶುಂಠಿ, ನಿಂಬೆಹಣ್ಣು ತಂದಳು.
ಮರುದಿನ ಬೆಳಿಗ್ಗೆ ಸೊಗಸಾದ ಉಪ್ಪಿಟ್ಟು, ಡಬ್ಬಿಗೆ ಕಲಸನ್ನ ಮಾಡಿದರು.
ಜಾನಕಿ ಮಗಳನ್ನು ಸುಮಾಗೆ ವಹಿಸಿ ಹೇಳಿದಳು-
“ನಿಮ್ಮಮ್ಮನಿಗೆ ಕೆಲಸವಿರತ್ತೆ. ನೀನೇ ಮಗೂನ್ನ ನೋಡಿಕೊಳ್ಳಬೇಕು.”
“ಆಗಲಿ ಅತ್ತೆ” ಎಂದಳು ಸುಮ. ಆದರೆ ಶರಣ್ಯ ಅವಳ ಹತ್ತಿರ ಹೋಗಲಿಲ್ಲ. ಜಾನಕಿ ರೆಡಿಯಾಗಬೇಕಿತ್ತು. ಅಷ್ಟು ಹೊತ್ತಿಗೆ ಕೆಲಸದ ಮುತ್ತಮ್ಮ ಬಂದಳು. ಮಗು ಅವಳ ಹತ್ತಿರ ಓಡಿತು.
ಮಗುವನ್ನು ರಮಿಸುತ್ತಲೇ ಅವಳು ಬಾಗಿಲಿಗೆ ನೀರು ಹಾಕಿದಳು. ನಂತರ ಪಾತ್ರೆ ತೊಳೆಯಲು ಬಂದವಳು “ಪಾರ್ವತಮ್ಮ ನಿನ್ನೆ ರಾತ್ರಿ ಊಟ ಮಾಡಿದ ತಟ್ಟೆಗಳು ಸಿಂಕ್‌ನಲ್ಲಿ ಹಾಕಿದ್ದೀರ. ನಾನು ತೊಳೆಯಲ್ಲ. ನಾನೂ ಹತ್ತು ದಿನ ರಜ ತೊಗೊಂಡು ಹೋಗ್ತೀನಿ.”
“ಬೇಡ ಮುತ್ತಮ್ಮ. ನೀನು ರಜ ಹಾಕಿದ್ರೆ ನನ್ನ ಗತಿಯೇನು? ಸುಮ ತಟ್ಟೆ ತೊಳೆಯುತ್ತಾಳೆ. ನೀನು ಮಗೂನ್ನ ಸುಧಾರಿಸು..”
ಅವಳು ಮಗು ಜೊತೆ ಆಟವಾಡಿಕೊಂಡೇ ಕೆಲಸ ಮುಗಿಸಿದಳು.
“ನಿಮ್ಮಗಳಿಗೆ ಮಗೂನ್ನ ಸುಧಾರಿಸೋದು ಹೇಳಿಕೊಡಿ. ಮಕ್ಕಳನ್ನು ಸುತ್ತಾಡಿಸಬೇಕು, ಮಾತಾಡಿಸಬೇಕು, ಕಲ್ಲು ಕೂತಂಗೆ ಕುಂತಿದ್ರೆ ಯಾವ ಮಗು ಹತ್ರ ಹೋಗ್ತದೆ?”
ಪಾರ್ವತಿ ಮಗಳನ್ನು ಕರೆದೂ ಕರೆದೂ ಬುದ್ಧಿ ಹೇಳಿ ಮಗುವನ್ನು ನೋಡಿಕೊಳ್ಳುವಂತೆ ಮಾಡಿದರು. ಮುತ್ತಮ್ಮನಿಗೆ ಹೇಳಿ ಬಟ್ಟೆಗಳನ್ನು ವಾಷಿಂಗ್ ಮಿಷನ್‌ಗೆ ಹಾಕಿಸಿದರು. ಸಾಯಂಕಾಲ ತಮ್ಮ, ತಂಗಿ ಬರುವ ಹೊತ್ತಿಗೆ ಪಕೋಡ ಮಾಡಿದರು. ಜಾನಕಿ ದೇವಕಿಯರಿಗೆ ಖುಷಿಯಾಯಿತು.
“ಮನೆಯಲ್ಲಿ ಯಾವ ಪುಡಿಗಳೂ ಇಲ್ಲ. ಸಾಮಾನು ತರಿಸಿ ಪುಡಿಗಳನ್ನು ಮಾಡ್ತೀನಿ.”
ಜಾನಕಿ ಆನ್‌ಲೈನ್‌ನಲ್ಲಿ ಸಾಮಾನಿಗೆ ಆರ್ಡರ್ ಮಾಡಿದಳು.
“ದೇವಕಿ ರಾತ್ರಿಗೆ ಗೊಜ್ಜು ಮಾಡಿಟ್ಟಿದ್ದೀನಿ. ನೀವಿಬ್ಬರೂ ಸೇರಿ ಚಪಾತಿ ಮಾಡಿಬಿಡಿ. ನಾನು ಧಾರಾವಾಹಿಗಳನ್ನು ನೋಡಬೇಕು. ಸುಮಿ ಮಗೂನ್ನ ಅವರಪ್ಪನ ಕೈಗೆ ಕೊಟ್ಟು ಬಾ ತಲೆಗೆ ಎಣ್ಣೆ ಹಚ್ಚುತ್ತೀನಿ. ನಾಳೆ ಸೀಗೆಪುಡಿ ಹಾಕ್ಕೊಂಡು ಸ್ನಾನಮಾಡು.”
ಹತ್ತು ದಿನ ಕಳೆಯುವಷ್ಟರಲ್ಲಿ ದೇವಕಿ, ಜಾನಕಿ ಸೋತು ಹೋದರು. ಪ್ರತಿದಿನ ಸಾಮಾನು ತರಿಸಬೇಕಿತ್ತು. ರಾತ್ರಿ ಚಪಾತಿ ಇವರಿಬ್ಬರೇ ಮಾಡಬೇಕಿತ್ತು.
ಶ್ರೀನಿವಾಸ್‌ರಾವ್ ಫ್ಯಾಮಿಲಿ ಮದುವೆ ಮುಗಿಸಿಕೊಂಡು ಹಿಂದಿರುಗಿತು. ಅದೇ ದಿನ ಶಿವಶಂಕರ್ ಕುಟುಂಬವೂ ವಾಪಸ್ಸಾಯಿತು.
“ಮದುವೆ ಹೇಗಾಯ್ತು ಶಕ್ಕು?”
“ತುಂಬಾ ಚೆನ್ನಾಗಿ ಆಯ್ತು. ಶ್ರೀಮಂತರ ಮದುವೆ ಕೇಳಬೇಕಾ? ನೋಡಕ್ಕೆ ಎರಡು ಕಣ್ಣು ಸಾಲದು ಅನ್ನುವಂತಿತ್ತು ಅತ್ತಿಗೆ.”
“ಹೌದಕ್ಕ ನಮ್ಮನ್ನಂತೂ ತುಂಬಾ ಚೆನ್ನಾಗಿ ನೋಡಿಕೊಂಡರು.”
“ಮದುವೆ ತಿಂಡಿ ಕಳಿಸಿದ್ದಾರೇನು?”
“ತಿಂಡಿ ತರಕ್ಕೆ ನಮಗೇ ಇಷ್ಟವಾಗಲಿಲ್ಲ. ನಮ್ಮ ಲಗೇಜ್ ಜಾಸ್ತಿಯಾಗಿತ್ತು. ಏನೂ ಬೇಡ ಅನ್ನಿಸಿತು.”
“ಏನು ಉಡುಗೊರೆ ಕೊಟ್ಟರು ಶಕ್ಕು?”
“ನಿಧಾನವಾಗಿ ಎಲ್ಲಾ ತೋರಿಸ್ತೀನಿ ಅತ್ತಿಗೆ. ವಿಮಾನದಲ್ಲಿ ನಿದ್ರೆ ಸರಿಯಾಗಿ ಆಗಲಿಲ್ಲ. ಸ್ನಾನಮಾಡಿ ನಿದ್ರೆ ಮಾಡಿದರೆ ಸಾಕು ಅನ್ನಿಸಿದೆ.”
ಆ ದಿನವೆಲ್ಲಾ ಶಕುಂತಲ, ರಾವ್ ವಿಶ್ರಾಂತಿ ತೆಗೆದುಕೊಂಡರು. ಪಾರ್ವತಿ ಮಕ್ಕಳಿಂದ ಅಷ್ಟು ಇಷ್ಟು ವಿಷಯ ಸಂಗ್ರಹಿಸಿಕೊಂಡರು. ಮರುದಿನ ಬೆಳಿಗ್ಗೆ ಪಾರ್ವತಿಯೇ ಶೋಭಾಳ ಸಹಾಯದಿಂದ ಅಡಿಗೆ-ತಿಂಡಿ ಮಾಡಿದರು. ಶರು, ಶಂಕರ ಹೋದಮೇಲೆ ಹತ್ತು ಗಂಟೆಯ ಹೊತ್ತಿಗೆ ರಾವ್ ನೀಲಾ ಕೊಟ್ಟಿದ್ದ ದೊಡ್ಡ ಪೆಟ್ಟಿಗೆ ಎಳೆದುಕೊಂಡು “ಅತ್ತಿಗೆ ಈ ಐದು ಸೀರೆಗಳು ನೀಲಾ ನನಗೆ ಕೊಟ್ಟಿರುವುದು. ಅಂಜಲಿ ಮೊದಲು ನಾಲ್ಕು ಸೀರೆ ಕೊಡಿಸಿದ್ದಳು. ಆದರೆ ನೀಲಾ ಮದುವೆ ಉಡುಗೊರೇಂತ ಈ ಸೀರೆ ಕೊಟ್ಟಳು. ಮಕ್ಕಳಿಗೂ ಡ್ರೆಸ್‌ಗಳು, ನಿಮ್ಮ ತಮ್ಮನಿಗೆ ಪಂಚೆ, ಷರಟು, ಪ್ಯಾಂಟ್‌ಗಳು, ರಿಸೆಪ್ಷನ್‌ಗೆ ಹಾಕಿಕೊಳ್ಳಕ್ಕೆ ಅದೆಂತಹದೋ ಕೋಟು ಎಲ್ಲಾ ಕೊಟ್ಟಳು.”
“ನಿಜ ಹೇಳ್ತಿದ್ದಿಯೇನೇ?”
“ಈ ವಿಚಾರದಲ್ಲಿ ನಾನ್ಯಾಕೆ ಸುಳ್ಳು ಹೇಳಲಿ? ಸಿನಿಮಾಗಳಲ್ಲಿ ಧಾರಾವಾಹಿಗಳಲ್ಲಿ ಈ ತರಹ ಉಡುಗೊರೆ ಕೊಡೋದು ನೋಡಿದ್ದೆ. ನೀಲಾ ಹೀಗೆ ಕೊಡ್ತಾಳೇಂತ ಅಂದ್ಕೊಂಡೇ ಇರಲಿಲ್ಲ. ಅವಳಿಗೆ ನಮ್ಮ ಬಗ್ಗೆ ಹುಚ್ಚು ಅಭಿಮಾನ.”
“ಇರಬೇಕಾಗಿದ್ದೇ. ನೀವು ಅವರಿಗೆ ಕಡಿಮೆ ಮಾಡಿದ್ದೀರಾ? ನೀಲಾ ಗಂಡು ಮಕ್ಕಳನ್ನು ಬಿಟ್ಟು ದುಬೈಗೆ ಹೋದಾಗ 2 ವರ್ಷ ನೀವು ಅವಳನ್ನು ನೋಡಿಕೊಳ್ಳಲಿಲ್ವಾ?” ಎಂದಳು ಶೋಭಾ.
“ಅಷ್ಟೇ ಅಲ್ಲ ಅಕ್ಕ. ಶಕ್ಕೂಗೆ ಓಲೆ, ಎರಡೆಳೆಸರ, ನನಗೆ ಉಂಗುರ, ಶಂಕರುಗೆ ವಾಚ್, ಶರೂಗೆ ಓಲೆಯನ್ನೂ ಕೊಟ್ಟಿದ್ದಾರೆ.”
“ಚಿನ್ನದ್ದಾ?”
“ಹುಂ ದುಬೈನಲ್ಲಿ ಚಿನ್ನ ಕಡಿಮೆ ಬೆಲೆಗೆ ಸಿಗತ್ತಂತೆ. ಒಂದು ಹೊರೆ ಒಡವೆಗಳಿವೆ ನೀಲಾ ಹತ್ತಿರ. ದೊಡ್ಡ ಮನೆ, ನಾಲ್ಕು ಜನ ಅಡಿಗೆಯವರು, ಆಳುಕಾಳುಗಳು ಇದ್ದಾರೆ. ಮದುವೇನೂ ದೊಡ್ಡ ರೆಸಾರ್ಟ್ನಲ್ಲಿ ಮಾಡಿದರು.”
“ವರೂಗೆ ಏನೂ ಕಳಿಸಲಿಲ್ಲವಾ?”
“ಅವಳೇ ಬೆಂಗಳೂರಿಗೆ ಬಂದಾಗ ವರೂನ್ನ ಕರೆದುಕೊಂಡು ಹೋಗಿ ಕೊಡಿಸ್ತಾರಂತೆ.”
“ನೀವೆಲ್ಲಾ ಪುಣ್ಯ ಮಾಡಿದ್ರಿ ಬಿಡು. ಐದು ಸೀರೆಗಳಲ್ಲಿ ನನಗೊಂದು ಕೊಡು.”
“ಸಾರಿ ಅತ್ತಿಗೆ. ನಾನು ರೇಷ್ಮೆ ಸೀರೆ ತೊಗೊಂಡು 20 ವರ್ಷಗಳಾಗಿವೆ. ನಿಮ್ಮ ತಮ್ಮಂದಿರ ಮದುವೆಗಳಲ್ಲೂ ನೀವು ನನಗೆ ಸೀರೆ ತೆಗೆಯಲಿಲ್ಲ. ನೀಲಾ ಪ್ರೀತಿಯಿಂದ ಕೊಟ್ಟಿರುವ ಸೀರೆಗಳನ್ನು ನಾನು ಯಾರಿಗೂ ಕೊಡಲ್ಲ.”
ಅವಳಿಂದ ಆ ರೀತಿಯ ಉತ್ತರ ನಿರೀಕ್ಷಿಸದಿದ್ದ ಪಾರ್ವತಿಗೆ ಒಂದು ತರಹವಾಯಿತು.
“ನೀವು ಈ ಮನೆ ಬಿಡಬೇಕಂತೆ ನಿಜಾನಾ?”
“ಹೌದು ಅತ್ತಿಗೆ. ನೀಲಾಳ ಮಗ ಸೂರತ್ಕಲ್‌ನಲ್ಲಿ ಎಂ.ಟೆಕ್ ಮಾಡ್ತಿದ್ದಾನೆ. ಇನ್ನಾರು ತಿಂಗಳಿಗೆ ಅವನ ಓದು ಮುಗಿಯುತ್ತಂತೆ. ಆಮೇಲೆ ಕೊಂಚ ದಿನ ದುಬೈಗೆ ಹೋಗಿ ಬಂದು ಮನೆ ರಿನೋವೇಟ್ ಮಾಡಿಸ್ತಾನಂತೆ.”
“ನಿಮ್ಮ ನೀಲಾ ಮನೆಯವರು ಶ್ರೀಮಂತರು. ಮನಸ್ಸು ಮಾಡಿದರೆ ಬೇರೆ ಕಡೆ ಮನೆ ತೆಗೆದುಕೊಳ್ಳಬಹುದಲ್ವಾ?”
“ಅವರ ಸಂಪಾದನೆಯಲ್ಲಿ ತೆಗೆದುಕೊಂಡಿರುವ ಮೊದಲನೆ ಮನೆ ಇದು. ಈ ಮನೆ ಬಗ್ಗೆ ಅವರಿಗೆ ತುಂಬಾ ಪ್ರೀತಿ.”
“ಸೀನು ಒಂದು ಪ್ರಶ್ನೆ ಕೇಳಲಾ?”
“ಕೇಳಕ್ಕ……”
“ನೀವೂಂದ್ರೆ ನೀಲಾಗೆ ತುಂಬಾ ಪ್ರೀತಿ, ಅಭಿಮಾನ. ನೀನು ಈ ಮನೆ ಕೊಂಡುಕೊಳ್ತೀನೀಂದ್ರೆ ಅವರು ಕೊಡಲ್ಲಾಂತಾರಾ?”
“ಈ ಮನೆ ನಾನು ಕೊಂಡುಕೊಳ್ಳುವುದಾ? ನನ್ನ ಹತ್ತಿರ 3-31/2 ಕೋಟಿ ಇದೇನಕ್ಕ?”
“ನೀವೆಲ್ಲಾ ಸೇರಿ ಕೊಳ್ಳಬಹುದಲ್ವಾ?”
“ಅಕ್ಕ ನನಗೆ ಜವಾಬ್ದಾರಿಗಳಿವೆ. ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಬೇಕು. ಮಗನನ್ನು ಓದಿಸಬೇಕು. ಈ ವಯಸ್ಸಿನಲ್ಲಿ ಸಾಲ ಮಾಡಲಾ……. ನೆವರ್.”
“ನಿನ್ನ ಒಡಹುಟ್ಟಿದವರ ಬಗ್ಗೆ ಯೋಚಿಸೋ ಸೀನು……..”
“ಇದುವರೆಗೂ ಅವರ ಬಗ್ಗೆ ಯೋಚಿಸಿ ಆಗಿದೆ. ಎಲ್ಲರೂ ಸ್ವತಂತ್ರವಾಗಿ ಸೆಟ್ಲ್ ಆಗುವ ಶಕ್ತಿ ಹೊಂದಿದ್ದಾರೆ. ನಾನೀಗ ಯೋಚಿಸಬೇಕಿರುವುದು ನನ್ನ ಮಕ್ಕಳ ಬಗ್ಗೆ. ಈ ವಿಚಾರದಲ್ಲಿ ಇನ್ನು ಚರ್ಚೆ ಬೇಡ ಅಕ್ಕ.”
“ಶಕ್ಕು ನೀನಾದರೂ ಹೇಳಮ್ಮ………..”
“ಅಪರೂಪಕ್ಕೆ ನನ್ನ ಗಂಡ ಜವಾಬ್ದಾರಿಯಿಂದ ಮಾತಾಡ್ತಿದ್ದಾರೆ. ನನಗೆ ತುಂಬಾ ಖುಷಿಯಾಗ್ತಿದೆ. ನಾನು ಏನೂ ಹೇಳಲ್ಲ…”
ಪಾರ್ವತಿಗೆ ರೇಗಿ ಹೋಯಿತು. ಸಾಯಂಕಾಲ ಜಾನಕಿಗೆ, ದೇವಕಿಗೆ ಈ ವಿಷಯ ಹೇಳಿದರು. ಅವರಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ.
ಮರುದಿನ ಪಾರ್ವತಿ, ಮಗಳ ಜೊತೆ ಮುಖ ಊದಿಸಿಕೊಂಡೇ ಊರಿಗೆ ಹೊರಟರು.
ಸಾಯಂಕಾಲ ದೇವಕಿ, ಜಾನಕಿ ಬರುವ ವೇಳೆಗೆ ಶ್ರೀನಿವಾಸರಾವ್ ಸಾಮಾನು ತಂದಿದ್ದರು. ಶೋಭಾ ಮೆಣಸಿನಕಾಯಿ ಮುರಿಯುತ್ತಿದ್ದಳು. ಮುತ್ತಮ್ಮ ಒಣಕೊಬ್ಬರಿ ತುರಿಯುತ್ತಿದ್ದಳು.
“ಅತ್ತಿಗೆ ಏನು ಮಾಡ್ತಾ ಇದ್ದೀರಿ?”
“ಪುಡಿಗಳು ಮಾಡ್ತಿದ್ದೀನಿ. ಯಾವ ಪುಡಿಗಳೂ ಇಲ್ಲ…..”
“ಅಕ್ಕ ಪುಡಿಗಳು ಮಾಡಿದ್ರು. ನಾವೇ ಸಾಮಾನು ತರಿಸಿಕೊಟ್ಟಿದ್ದೆವು” ದೇವಕಿ ಹೇಳಿದಳು.
“ನೀನೇ ಒಳಗೆ ಹೋಗಿ ನೋಡು. ಅಕ್ಕಿ 2 ಕೆ.ಜಿ. ಇರಬಹುದು. ಬೇಳೆ, ಸಕ್ಕರೆ, ಕಾಫಿಪುಡಿ ಸ್ವಲ್ಪ ಸ್ವಲ್ಪ ಇದೆ. ಇನ್ನೆಲ್ಲಾ ಡಬ್ಬಿಗಳೂ ಖಾಲಿಯಾಗಿವೆ.”
“ಅದು ಹೇಗೆ ಸಾಧ್ಯ?”
“ಪಾರ್ವತಮ್ಮ ಕಾರಲ್ಲಿ ಓದರಲ್ವಾ?”
“ಹೌದು…… ನಾನೇ ಕಾರ್ ಬುಕ್ ಮಾಡಿದ್ದೆ.”
“ಅವರು ಮಾಡಿದ್ದ ಪುಡಿ-ಗಿಡಿ, ಉಳಿದಿದ್ದ ಸಾಮಾನುಗಳು ತೊಗೊಂಡೋಗವ್ರೆ. ಅದರಲ್ಲೇನು ಆಶ್ಚರ್ಯ ಅಮ್ಮ?” ಎಂದಳು ಮುತ್ತಮ್ಮ.
“ಅಕ್ಕ ಹೀಗೆ ಮಾಡಬಾರದಿತ್ತು.”
“ತಪ್ಪು ನಿಮ್ಮದೇ. ಹತ್ತು ದಿನ ನಿಮ್ಮಿಬ್ಬರಿಗೂ ಮನೆ ಮ್ಯಾನೇಜ್ ಮಾಡಕ್ಕಾಗಲಿಲ್ಲವಾ? ಅದಕ್ಕೆ ಅತ್ತಿಗೇನ್ನ ಕರೆಸಬೇಕಾಗಿತ್ತಾ? ಇಬ್ಬರೂ ನಾಲ್ಕು ದಿನ ರಜಹಾಕಿದ್ರೆ ಆಗ್ತಿತ್ತು…….”
“ರಜ ಬೇಕಾಗತ್ತಲ್ವಾ ಅಕ್ಕಾ………….?”
“ಯಾಕೆ ರಜ ಬೇಕು ನಿನಗೆ? ಗಂಡನ ಜೊತೆ ಸುತ್ತಾಡುವುದಕ್ಕೆ ಅಲ್ವಾ? ಮಗೂಗೆ ಹುಷಾರಿಲ್ಲದಿರುವಾಗಲೂ ನೀನೇನು ರಜಾ ಹಾಕಿ ನೋಡಿಕೊಳ್ಳಲ್ಲ. ಪಾಪ ಅದು ಗಲಾಟೆ ಮಾಡದೆ ನಮ್ಮ ಹತ್ತಿರಾನೇ ಇರತ್ತೆ. ದೇವಕಿ ನೀನಾದ್ರೂ ನಾಲ್ಕು ದಿನ ರಜ ಹಾಕಬೇಕಾಗಿತ್ತು….” ಶೋಭಾ ಸಿಕ್ಕಿದ್ದೇ ಸಮಯವೆಂದು ಝಾಡಿಸಿದಳು.
ಇಬ್ಬರೂ ಮಾತಾಡಲಿಲ್ಲ.
****
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ: ಕನಸೊಂದು ಶುರುವಾಗಿದೆ: ಪುಟ 5
(ಮುಂದುವರಿಯುವುದು)

–ಸಿ.ಎನ್. ಮುಕ್ತಾ