ಪ್ರವಾಸ

ಚೆಲುವಿನ ತಾಣ ನ್ಯೂಝಿಲ್ಯಾಂಡ್ – ಪುಟ 11

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಫಾಕ್ಸ್ ಗ್ಲೇಸಿಯರ್ ಎಂಬ ಕಿನ್ನರಲೋಕ

ಸದಾ ಚಲನಶೀಲಳಾದ ಗಂಗೆ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಸ್ತಬ್ಧಳಾಗಿಬಿಡುತ್ತಾಳೆ. ಈ ಬಿಳಿಯ ಮೋಡಗಳ ನಾಡಿಗೆ ಮರುಳಾದವಳು ತಾನೂ ಶ್ವೇತವರ್ಣ ಧರಿಸಿ ಹಿಮನದಿಯಾಗಿ ನಿಂತಲ್ಲಿಯೇ ನಿಂತು ಬಿಡುವಳು. ಇದು ಪ್ರಕೃತಿ ಪ್ರಿಯರಿಗೆ ಸ್ವರ್ಗ ಸಮಾನ. ಕ್ವೀನ್ಸ್ ಟೌನ್‌ನಿಂದ ಹೊರಟವರು ನೇರವಾಗಿ ಆಲ್ಪ್ಸ್ ಪರ್ವತದ ಮಡಿಲಲ್ಲಿ ವಿಶ್ರಮಿಸುತ್ತಿರುವ ಫಾಕ್ಸ್ ಟೌನ್‌ಗೆ ಬಂದು ತಲುಪಿದೆವು. ಹಾದಿಯುದ್ದಕ್ಕೂ ರಮ್ಯವಾದ ನಿಸರ್ಗದ ಸವಿಯನ್ನುಣ್ಣುತ್ತಾ ಈ ಪುಟ್ಟ ಗ್ರಾಮವನ್ನು ತಲುಪಿದ್ದೇ ತಿಳಿಯಲಿಲ್ಲ. ಬೆಟ್ಟ ಹತ್ತಬೇಕೆ, ಕಾಡುಮೇಡುಗಳಲ್ಲಿ ಅಲೆದಾಡಬೇಕೆ, ಸರೋವರಗಳಲ್ಲಿ ದೋಣಿ ವಿಹಾರ ನಡೆಸಬೇಕೆ ಇಲ್ಲಿಗೆ ಬನ್ನಿ. ಈ ಹಿಮನದಿಯ ಮೂಲ ನಾಮಧೇಯವಾದರೂ ಏನು? ಮಾವೊರಿಗಳ ಭಾಷೆಯಲ್ಲಿ ‘ತೊ-ಮೊಯೆಕಾ-ಓ-ತಾವೆ’ ಎಂದು ಕರೆಯಲ್ಪಡುತ್ತಿದ್ದ ಈ ಹಿಮನದಿಗೆ 1869-1872 ರ ಅವಧಿಯಲ್ಲಿ ನ್ಯೂಝೀಲ್ಯಾಂಡಿನ ಅಧ್ಯಕ್ಷರಾದ ವಿಲಿಯಮ್ ಫಾಕ್ಸ್ ಅವರ ಹೆಸರನ್ನು ಇಡಲಾಯಿತು. ಸಮುದ್ರ ಮಟ್ಟದಿಂದ ಸುಮಾರು ಮುನ್ನೂರು ಮೀಟರ್ ಎತ್ತರದಲ್ಲಿರುವ ಇವಳ ಅವಳಿ ಸೋದರನ ಹೆಸರು ‘ಫ್ರಾನ್ಸ್ ಜೋಸೆಫ್’. ಈ ಹಿಮನದಿಯು ಹದಿಮೂರು ಕಿ.ಮೀ ಉದ್ದವಿದ್ದು, ಬೇಸಿಗೆಯಲ್ಲಿ ಕರಗಿ ನೀರಾಗಿ ಸುಮಾರು 2,600 ಮೀಟರ್ ಎತ್ತರದಲ್ಲಿರುವ ಬೆಟ್ಟದ ನೆತ್ತಿಯ ಮೇಲಿನಿಂದ ಧುಮ್ಮಿಕ್ಕಿ ಹರಿದು ಟಾಸ್‌ಮಾನ್ ಸಮುದ್ರವನ್ನು ಸೇರುವಳು. ಈ ಗ್ಲೇಸಿಯರ್‌ನ ಮತ್ತೊಂದು ಆಕರ್ಷಣೆ ಎಂದರೆ ಬೇರೆ ಗ್ಲೇಸಿಯರ್‌ಗಳಂತೆ ಇದು ಅತ್ಯಂತ ಎತ್ತರವಾದ ಗಿರಿಶಿಖರಗಳ ಮೇಲಿರದೆ, ಸ್ವಲ್ಪ ಕೆಳಮಟ್ಟದಲ್ಲಿರುವ ಬೆಟ್ಟಗಳ ನೆತ್ತಿಯ ಮೇಲಿರುವುದರಿಂದ ಪ್ರವಾಸಿಗರ ಕೈಗೆಟುಕುವಂತಿರುವುದು. ಫಾಕ್ಸ್ ಗ್ಲೇಸಿಯರ್‌ಗೆ ನಾಲ್ಕು ಉಪ ಹಿಮನದಿಗಳು ಹಿಮವನ್ನು ತಂದು ಸುರಿಯುತ್ತವೆ. ಈ ಪ್ರದೇಶದಲ್ಲಿ ಪ್ರತಿವರ್ಷ ಸರಾಸರಿ ಮೂವತ್ತು ಮೀಟರಿನಷ್ಟು ಹಿಮಪಾತವಾಗುವುದು. ಹೀಗಾಗಿ ಫಾಕ್ಸ್ ಗ್ಲೇಸಿಯರ್ ವರ್ಷವಿಡೀ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಲೇ ಇರುವುದು.

‘ಗ್ಲೇಸಿಯರ್ ಕಂಟ್ರಿ’ ಎಂದೇ ಹೆಸರಾಗಿರುವ ಈ ನಾಡಿನಲ್ಲಿರುವ ಫಾಕ್ಸ್ ಗ್ಲೇಸಿಯರ್ ಎಂಬ ಕಿನ್ನರಲೋಕದ ಹಿಂದಿನ ದಂತಕಥೆಯನ್ನು ಕೇಳೋಣ ಬನ್ನಿ. ಒಂದಾನೊಂದು ಕಾಲದಲ್ಲಿ ಆರೋಹ ಮತ್ತು ಹಿನೆಹುಕಟೇರೆ ಎಂಬ ಪ್ರೇಮಿಗಳಿದ್ದರು. ಒಮ್ಮೆ ಹಿನೆಹುಕಟೇರೆ ತನ್ನ ಪ್ರೇಮಿ ಆರೋಹನೊಂದಿಗೆ ಗುಡ್ಡ ಗಾಡಿನಲ್ಲಿ ಸಂಚರಿಸುವಾಗ, ಫಾಕ್ಸ್ ಗ್ಲೇಸಿಯರ್ ಹತ್ತೋಣ ಎಂದು ಕರೆ ಕೊಡುತ್ತಾಳೆ. ಹಿನೆಹುಕಟೇರೆ ಈ ಕಡಿದಾದ ಪರ್ವತವನ್ನು ಲೀಲಾಜಾಲವಾಗಿ ಹತ್ತುವಳು, ಆದರೆ ಬೆಟ್ಟ ಹತ್ತುವ ಅಭ್ಯಾಸವಿಲ್ಲದ ಅವಳ ಪ್ರೇಮಿ ಆರೋಹನು ಈ ಪರ್ವತ ಹತ್ತುವಾಗ ಕಾಲು ಜಾರಿ ಬಿದ್ದು ಮರಣ ಹೊಂದುವನು. ಈ ದುರಂತವನ್ನು ಕಣ್ಣಾರೆ ಕಂಡ ಹಿನೆಹುಕಟೇರೆ ಕಣ್ಣೀರು ಹಾಕುತ್ತಾ ತನ್ನ ಪ್ರಾಣವನ್ನು ತ್ಯಜಿಸುವಳು. ಅವಳ ಕಣ್ಣೀರು ಹೆಪ್ಪುಗಟ್ಟಿ ಇಂದು ಫಾಕ್ಸ್ ಗ್ಲೇಸಿಯರ್ ಆಗಿ ನಮ್ಮ ಮುಂದೆ ನಿಂತಿದೆ ಎಂಬ ಜಾನಪದ ಕಥೆ ಇವರ ಕಲ್ಪನಾ ವಿಹಾರಕ್ಕೆ ಹಿಡಿದ ಕನ್ನಡಿ.

ಮಾಥೀಸನ್ ಸರೋವರದ ಚೆಲುವನ್ನು ಕಣ್ತುಂಬಿಕೊಂಡವರು ಕುಕ್‌ಫ್ಲಾಟ್ ರಸ್ತೆಯ ಮೂಲಕ ಪಾಕ್ಸ್ ಗ್ಲೇಸಿಯರ್ ನೋಡಲು ಹೊರಟೆವು. ಸುಮಾರು ಅರ್ಧ ಗಂಟೆ ಸಾಗಿದ ಮೇಲೆ ‘ಫಾಕ್ಸ್ ಗ್ಲೇಸಿಯರ್ ವ್ಯೂ ಪಾಯಿಂಟ್’ಎಂದು ಬರೆಯಲಾಗಿತ್ತು. ಅಬ್ಬಾ ಎಷ್ಟೊಂದು ಸುಂದರವಾದ ದೃಶ್ಯ, ಪದಗಳಲ್ಲಿ ಬಣ್ಣಿಸಲು ಸಾಧ್ಯವೇ? ಎರಡೂ ಬದಿಯಲ್ಲಿ ಆಲ್ಪ್ಸ್ ಪರ್ವಶ್ರೇಣಿ ಅದರ ಕಣಿವೆಯಲ್ಲಿ ಹಾಯಾಗಿ ಮಲಗಿರುವ ಹಿಮನದಿ. ಅದರ ಒಂದು ಬದಿಯಲ್ಲಿ ಗ್ಲೇಸಿಯರ್ ಕರಗಿ ನೀರಾಗಿ ಹರಿಯುತ್ತಿತ್ತು. ಅಲ್ಲಿಂದ ಮುಂದೆ ಹೋಗುವ ಹಾಗಿರಲಿಲ್ಲ, ಏಕೆಂದರೆ ‘ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ’ ಎಂಬ ಫಲಕವನ್ನು ತೂಗು ಹಾಕಿದ್ದರು. ಮುಂದೇನಿರಬಹುದು ಎಂಬ ಕುತೂಹಲದಿಂದ ನಮ್ಮ ಗೂಗಲ್ ಮಹಾಶಯನ ಮೊರೆಹೊಕ್ಕಾಗ ಕಂಡಿದ್ದು ನೀಲವರ್ಣದ ಹಿಮನದಿ, ಅಬ್ಬಾ ಈ ಹಿಮನದಿಯ ಮೇಲೆ ಅಲೆಗಳು ಹಾಗೆಯೇ ಹೆಪ್ಪುಗಟ್ಟಿ ಒಂದು ಸುಂದರವಾದ ವರ್ಣಚಿತ್ರದಂತೆ ಕಾಣುತ್ತಿದ್ದವು. ನಮ್ಮ ಗುಂಪಿನ ಕೆಲವು ಸಾಹಸೀ ತರುಣರು ಹೆಲಿಕಾಪ್ಟರ್ ಸವಾರಿಗೆ ತೆರಳಿದ್ದರು. ಅವರು ತಾವು ಕಂಡ ನೀಲವರ್ಣದ ಹಿಮನದಿಗಳನ್ನು ಉತ್ಸಾಹದಿಂದ ಬಣ್ಣಿಸುವಾಗ ನನಗೆ ಅಸೂಯೆಯಾಗಿತ್ತು. ಕೇವಲ ಇಪ್ಪತ್ತು ನಿಮಿಷದ ಈ ಹೆಲಿಕಾಪ್ಟರ್ ರೈಡ್‌ಗೆ 250 ಡಾಲರ್ ಕೊಡಬೇಕಿತ್ತು. ನನ್ನ ಬಳಿ ಅಷ್ಟೊಂದು ಹಣವೂ ಇರಲಿಲ್ಲ. ಫಾಕ್ಸ್ ಗ್ಲೇಸಿಯರ್ ನೋಡಲು ಹೆಲಿಕಾಪ್ಟರ್‌ನಲ್ಲಿ ಹೋದವರ ಕಣ್ಣಿಗೆ ಕಂಡದ್ದು ಇಷ್ಟು, ಆದರೆ ನಮ್ಮ ಕಲ್ಪನೆಯ ಕಣ್ಣುಗಳಿಗೆ ಕಂಡದ್ದು ಬೆಟ್ಟದಷ್ಟು. ಜಾನ್ ಕೀಟ್ಸ್ ಕವಿಯ ಸಾಲುಗಳು ಮನದಲ್ಲಿ ರಿಂಗಣಿಸಿದವು, “Heard melodies are sweet but those unheard are sweeter”.

ಈ ರಮ್ಯವಾದ ತಾಣವನ್ನು ಸೆರೆ ಹಿಡಿಯಲು ಎಲ್ಲರ ಮೊಬೈಲುಗಳೂ ಸ್ಪರ್ಧೆ ಹೂಡಿದಂತಿದ್ದವು. ಆಲ್ಪ್ಸ್ ಪರ್ವತ ಶ್ರೇಣಿಯ ಕಣಿವೆಗಳಲೆಲ್ಲಾ ಈ ಹಿಮನದಿಗಳದೇ ದರ್ಬಾರು, ಎಲ್ಲಿ ನೋಡಿದರೂ ಅಂಕು ಡೊಂಕಾಗಿ ಹಾವಿನಂತೆ ಮಲಗಿದ್ದ ಹಿಮನದಿಗಳು, ಅವು ಕರಗುತ್ತಿದ್ದ ಹಾಗೆ ಧುಮ್ಮಿಕ್ಕುವ ಜಲಧಾರೆಗಳು, ಹೀಗೆ ಹರಿದು ಬಂದ ನೀರು ಸಮುದ್ರವನ್ನು ಸೇರಲೇಬೇಕಲ್ಲ. ಚಾರಣ ಮಾರ್ಗಗಳು ಹತ್ತು ಹಲವು, ಬೆಟ್ಟ ಏರುವ ಮಂದಿಯೂ ಸಾಕಷ್ಟು ಇದ್ದರು. ಈ ಅರಣ್ಯದಲ್ಲಿ ಚಾರಣ ಮಾಡುವುದೇ ಒಂದು ಸುಂದರ ಅನುಭವ. ಒಮ್ಮೊಮ್ಮೆ ಈ ಕಾಡುಗಳಲ್ಲಿ ಕಿವಿ ಪಕ್ಷಿಗಳೂ ಕಣ್ಣಿಗೆ ಬೀಳುವುದುಂಟು ಎಂದು ನಮ್ಮ ಗೈಡ್ ಹೇಳುತ್ತಿದ್ದ ಹಾಗೆ ಅಲ್ಲಿದ್ದ ಪೊದೆಯಲ್ಲಿ ಸರಸರನೆ ಕಿವಿ ಪಕ್ಷಿಯೊಂದು ತನ್ನ ಪುಟ್ಟ ಮರಿಗಳೊಂದಿಗೆ ಹಾದು ಹೋಯಿತು. ಈ ಪಕ್ಷಿಗಳಿಗೆ ಹಾರಲು ಬರುವುದಿಲ್ಲ, ಆದರೂ ರೆಕ್ಕೆಗಳುಂಟು. ಪ್ರಕೃತಿಯ ವಿಸ್ಮಯವನ್ನು ಬಣ್ಣಿಸುವರಾರು? ಈ ಹಚ್ಚ ಹಸಿರಾದ ಅರಣ್ಯಗಳು, ಎತ್ತರವಾದ ಪರ್ವತ ಶ್ರೇಣಿಗಳು, ಹಿಮನದಿಗಳು, ಜಲಪಾತಗಳು, ಹರಿಯುವ ನದಿಗಳು ಒಂದಕ್ಕಿಂತ ಒಂದು ಸೊಗಸು. ಈ ನಾಡಿನ ಗ್ಲೇಸಿಯರ್ಸ್ ಗೆ ಮುಕುಟ ಪ್ರಾಯವಾಗಿರುವುದು ಫಾಕ್ಸ್ ಗ್ಲೇಸಿಯರ್.

ಇಡೀ ವಿಶ್ವದಲ್ಲಿಯೇ ಪ್ರವಾಸಿಗರಿಗೆ ಕೈಗೆ ನಿಲುಕುವಂತಹ ಫಾಕ್ಸ್ ಗ್ಲೇಸಿಯರ್‌ನ ಸುಂದರವಾದ ದೃಶ್ಯಗಳನ್ನು ಮೆಲುಕು ಹಾಕುತ್ತಾ ಆರ್ಥರ್ ಪಾಸ್ ಮೂಲಕ ನಮ್ಮ ಪಯಣ ಕ್ರೆಸ್ಟ್ ಚರ್ಚ್ ನತ್ತ ಸಾಗಿತ್ತು. ಆರ್ಥರ್ ಪಾಸ್‌ನಲ್ಲಿ ನಮಗೊಂದು ಅಚ್ಚರಿ ಕಾದಿತ್ತು. ನಮ್ಮ ಮುಂದಿನ ಪಯಣ ಟ್ರಾನ್ಸ್ ಅಲ್ಪೈನ್ ರೈಲಿನಲ್ಲಿ. ಅರ್ಧ ಗಂಟೆ ಆ ರೈಲ್ವೆ ನಿಲ್ದಾಣದಲ್ಲಿ ಕಾಯಬೇಕಿತ್ತು. ನಮ್ಮ ಜೊತೆ ಬಂದಿದ್ದ ಮರಾಠಿ ಪ್ರವಾಸಿಗರು ಒಂದು ಜಾನಪದ ಮರಾಠಿ ಹಾಡುತ್ತಾ ನರ್ತಿಸಲು ಆರಂಭಿಸಿದರು. ಅವರ ನಗು ಖುಷಿ ಸಾಂಕ್ರಾಮಿಕವಾಗಿತ್ತು. ನಾವೂ ಅವರ ಜೊತೆ ಸೇರಿ ಡ್ಯಾನ್ಸ್ ಮಾಡುತ್ತಾ ನಕ್ಕು ನಲಿದೆವು. ಅಷ್ಟರಲ್ಲಿ ರೈಲು ಬಂತು, ಎಲ್ಲರೂ ರೈಲು ಹತ್ತಿ ಕುಳಿತೆವು. ಅಬ್ಬಾ, ಎಂತಹ ದೃಶ್ಯಗಳು, ಅಷ್ಟು ಹೊತ್ತೂ ಹಕ್ಕಿಗಳ ಹಾಗೆ ಕಲರವ ಮಾಡುತ್ತಿದ್ದ ಸಹ ಪ್ರಯಾಣಿಕರು, ಈಗ ಪ್ರಕೃತಿಯ ಸೌಂದರ್ಯವನ್ನು ನೋಡುತ್ತಾ ಮೈ ಮರೆತು ಮೌನವಾಗಿ ಕುಳಿತರು. ಈ ರೈಲ್ವೆ ಹಳಿಯನ್ನು ಬೆಟ್ಟಗುಡ್ಡಗಳ ಮಧ್ಯೆ ಹಾಸಲು ಎಂತಹ ತಂತ್ರಜ್ಞಾನದ ಬಳಕೆ ಮಾಡಿರಬಹುದು ಎಂದು ಕೌತುಕದಿಂದ ಗಮನಿಸಿದೆ. ಈ ಸ್ಥಳ ಸುಮಾರು 2,953 ಅಡಿ ಎತ್ತರದಲ್ಲಿದೆ, ದಕ್ಷಿಣದ ಆಲ್ಪ್ಸ್ ಪರ್ವತ ಶ್ರೇಣಿಯ ಅತ್ಯಂತ ಎತ್ತರವಾದ ರೈಲು ಮಾರ್ಗ ಎಂದು ಹೆಸರಾಗಿದೆ. ಈ ರೈಲು ಮಾರ್ಗವನ್ನು ನಿರ್ಮಿಸಲು, ಎತ್ತರ ಪ್ರದೇಶದಲ್ಲಿ ಹಲವು ಸೇತುವೆಗಳನ್ನು ನಿರ್ಮಿಸಲಾಗಿದೆ, ನದಿಗಳ ಪಾತ್ರವನ್ನೇ ಬದಲಿಸಲಾಗಿದೆ, ಜಲಪಾತಗಳ ದಿಕ್ಕನ್ನೇ ತಿರುಗಿಸಲಾಗಿದೆ, ಬೆಟ್ಟವನ್ನು ಕೊರೆದು ಸುರಂಗ ಮಾರ್ಗ ನಿರ್ಮಿಸಲಾಗಿದೆ. ಎಂಟೂವರೆ ಕಿ.ಮೀ ಉದ್ದವಿರುವ ಈ ಸುರಂಗವೂ ಒಂದು ತಂತ್ರಜ್ಞಾನದ ಅದ್ಭುತವೇ ಸರಿ.

Arthur Pass , New Zealand PC: Internet

ಆರ್ಥರ್ ಪಾಸ್‌ನ ಹಿನ್ನೆಲೆ ಏನೆಂದು ನೋಡೋಣ ಬನ್ನಿ – ಮಾವೊರಿಗಳು ಬೇಸಿಗೆಯಲ್ಲಿ ಈ ಪರ್ವತಶ್ರೇಣಿಗಳನ್ನು ದಾಟಿ ಪೌನಾಮಿ ಎಂಬ ಪಚ್ಚೆಕಲ್ಲುಗಳನ್ನು ಕೊಂಡೊಯ್ಯಲು ಬರುತ್ತಿದ್ದರು. ಲೋಹದಷ್ಟು ಗಟ್ಟಿಯಾದ ಈ ಕಲ್ಲುಗಳನ್ನು ಆಯುಧಗಳನ್ನು ಮಾಡಲು ಹಾಗೂ ಆಭರಣಗಳನ್ನು ತಯಾರಿಸಲು ಬಳಸುತ್ತಿದ್ದರು. ಈ ಬೆಟ್ಟಗಳ ಸನಿಹದಲ್ಲಿ 1864 ರಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಯಿತು. ಈ ದುರ್ಗಮವಾದ ಪರ್ವತಗಳನ್ನು ದಾಟಲು ಮಾರ್ಗಗಳನ್ನು ಹುಡುಕುತ್ತಿರುವಾಗ ತಾರಾಪುಹಿ ಎಂಬ ಮಾವೊರಿ ನಾಯಕ ಆರ್ಥರ್ ಪಾಸ್ ಬಳಿ ಇರುವ ಕಣಿವೆಗಳನ್ನು ತೋರಿಸಿದ. ಆದರೆ ಈ ಪ್ರದೇಶವೂ ಅಬೇಧ್ಯವಾಗಿದ್ದುದರಿಂದ ಬ್ರಿಟಿಷರು ಹಲವು ಕಡೆ ರಸ್ತೆ ನಿರ್ಮಿಸಲು ಯತ್ನಿಸಿ ವಿಫಲವಾದರು. ಕೊನೆಗೆ ಆರ್ಥರ್ ಪಾಸ್ ಸೂಕ್ತವಾದ ಸ್ಥಳವೆಂದು ನಿರ್ಧರಿಸಿ, 1908 ರಿಂದ 1923 ರವರೆಗೆ ಈ ಮಾರ್ಗವನ್ನು ಹಲವು ಅಡೆತಡೆಗಳ ಮಧ್ಯೆಯೂ ನಿರ್ಮಿಸಲಾಯಿತು. ಆರ್ಥರ್ ಡಡ್ಲಿ ಡಾಬ್‌ಸನ್ ಎಂಬ ಬ್ರಿಟಿಷ್ ಅಧಿಕಾರಿ ಈ ಕಾರ್ಯದ ಮುಂಚೂಣಿಯಲ್ಲಿದ್ದ ಕಾರಣ ಇದಕ್ಕೆ ‘ಆರ್ಥರ್ ಪಾಸ್’ ಎಂದು ನಾಮಕರಣ ಮಾಡಲಾಯಿತು. ನಾವು ಸುಮಾರು ಎರಡೂವರೆ ಗಂಟೆಗಳ ಕಾಲ ರೈಲಿನಲ್ಲಿ ಪಯಣಿಸಿ ನಮ್ಮ ಮುಂದಿನ ಪ್ರವಾಸತಾಣವಾದ ಕ್ರೆಸ್ಟ್ ಚರ್ಚ್ ನಗರವನ್ನು ತಲುಪಿದೆವು. ಯಾರಿಗೂ ಆ ರೈಲನ್ನು ಇಳಿಯಲು ಮನಸ್ಸಿರಲಿಲ್ಲ. ಅಷ್ಟೊಂದು ಚೆಂದದ ಮರೆಯಲಾಗದ ಪಯಣ.

(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನಪುಟ ಇಲ್ಲಿದೆ: https://surahonne.com/?p=43397
ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *