“ನಮ್ಮ ತಾತ ಬಂದ್ರು ಮಿಸ್, ನಾನು ಹೋಗ್ತೀನಿ” ಎನ್ನುತ್ತಾ ಪಕ್ಕನೆ ನನ್ನ ಕೈ ಬಿಡಿಸಿಕೊಂಡ ಪ್ರಶಾಂತ ಪುರ‍್ರನ್ನೆ ಓಡಿಬಿಟ್ಟ. ನಾನು ಮುಂದಕ್ಕೆ ಕಣ್ಣು ಚಾಚಿ ಎದುರಿಗೆ ಬರುತ್ತಿದ್ದ ವ್ಯಕ್ತಿಯನ್ನು ನೋಡಿದೆ. ದಿಗ್ಭ್ರಮೆಯಾಯ್ತು ಅಪ್ರಯತ್ನವಾಗಿ ನನ್ನ ಕೈ ಕೆನ್ನೆಯನ್ನು ಸವರಿಕೊಂಡಿತು. ಈ ರಾಜಾರಾವ್, ಅಂದರೆ ಪ್ರಶಾಂತನ ತಾತ, ಅಂದು ಫಟೀರನೆ ನನ್ನ ಕೆನ್ನೆಗೆ ಬೀಸಿಹೊಡೆದಿದ್ದರು. ಇಪ್ಪತ್ತೈದು ವರ್ಷಗಳೇ ಕಳೆದು ಹೋಗಿದ್ದರೂ, ಆ ಪೆಟ್ಟು, ಆ ಘಟನೆ ನನ್ನ ಮನದಿಂದ ಮರೆಯಾಗಿಲ್ಲ. ನಾನು ಪಕ್ಕದ ರಸ್ತೆಗೆ ತಿರುಗಿ ಮನೆಯ ಕಡೆಗೆ ಹೆಜ್ಜೆ ಹಾಕಿದೆ. ನನ್ನ ಕಾಲುಗಳು ಮುಂದುಮುಂದಕ್ಕೆ ಸಾಗುತ್ತಿದ್ದಂತೆ ಮನಸ್ಸು ಹಿಂದು ಹಿಂದಕ್ಕೆ ಸರಿಯಿತು….
ನಾನಾಗ ಹೊಸದಾಗಿ ಕಾಲೇಜಿಗೆ ಸೇರಿದ್ದೆ. ನನ್ನ ಸುತ್ತಲಿನ ಪ್ರಪಂಚವೆಲ್ಲ ವರ್ಣಮಯವಾಗಿ ಕಾಣುತ್ತಿತ್ತು. ಕಾಣುತ್ತಿದ್ದ ನೋಟ, ಕೇಳುತ್ತಿದ್ದ ಮಾತು, ಎಲ್ಲವೂ ಮಧುರ…. ಆಗಲೇ ನಮ್ಮ ಪಕ್ಕದ ಮನೆಗೆ ರಾಜಾರಾವ್ ಬಾಡಿಗೆಗೆ ಬಂದದ್ದು. ಅವರಿಗೆ ಒಬ್ಬನೇ ಮಗ, ಸುಮಾರು ಹದಿನೈದು ವರ್ಷದವನು. ಒಟ್ಟಿನಲ್ಲಿ ಚಿಕ್ಕ ಚೊಕ್ಕ ಸಂಸಾರ. ರಾಜಾರಾವ್ ನಮ್ಮ ತಂದೆಗೆ ಆತ್ಮೀಯ ಸ್ನೇಹಿತರಾದರೆ ಅವರ ಹೆಂಡತಿ ನಮ್ಮಮ್ಮನಿಗೆ ಒಳ್ಳೆಯ ಸ್ನೇಹಿತೆಯಾದರು.
‘ಸುಸಂಸ್ಕೃತ ಜನ’ ಅಂತ ಅಪ್ಪ ಯಾವಾಗಲೂ ಹೊಗಳುತ್ತಿದ್ದರು. ನಾನಂತೂ ಅವರ ಮನೆಯಲ್ಲೇ ಹೆಚ್ಚಾಗಿ ಕಾಲ ಕಳೆಯುತ್ತಿದ್ದೆ. ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿದ್ದ ರಾಜಾರಾವ್ ಮೇಷ್ಟ್ರು ನನಗೆ ತಿಳಿಯದಿದ್ದ ಎಷ್ಟೋ ವಿಷಯಗಳನ್ನು ಹೇಳಿಕೊಡುತ್ತಿದ್ದರು. ಸಲೀಸಾಗಿ ದಿನಗಳು ಕಳೆಯುತ್ತಿದ್ದವು. ಆ ಸಮಯದಲ್ಲೇ ರಾಜಾರಾವ್ ಅವರ ಚಿಕ್ಕಪ್ಪನ ಮಗ ಚಂದ್ರಶೇಖರ ಓದಿಗೋಸ್ಕರ ಅವರ ಮನೆಗೆ ಬಂದದ್ದು. ಅವನೂ ನಮ್ಮ ಕಾಲೇಜಿಗೆ ಸೇರಿಕೊಂಡ.
ನನಗೂ ಅವನ ಪರಿಚಯವಾಯಿತು. ಪರಿಚಯ ನಿಧಾನವಾಗಿ ಸ್ನೇಹಕ್ಕೆ ತಿರುಗಿ ಅದು ಪ್ರೇಮಕ್ಕೆ ಪರಿವರ್ತಿತವಾಗುವ ಹಂತಕ್ಕೆ ಮುಟ್ಟಿತು. ನಾನು ಚಂದ್ರಶೇಖರನನ್ನು ಆರಾಧಿಸತೊಡಗಿದೆ. ನನ್ನ ಮನೆಯವರಿಗೆ ತಿಳಿಯದಂತೆ ಪಾರ್ಕು, ಹೋಟೆಲ್ ಅಂತ ಅವನ ಜೊತೆ ತಿರುಗಾಡಿದೆ.
ಚಂದ್ರಶೇಖರ ರೂಪವಂತ, ಸರಸಿ. ಅಗಲ ಹಣೆ, ನೀಳ ಮೂಗನ್ನು ಹೊಂದಿದ್ದ ಚಂದ್ರಶೇಖರನ ನಗು ಅತ್ಯಂತ ಸುಂದರವಾಗಿರುತ್ತಿತ್ತು. ‘ಬೆಳಗಿನ ಹಸಿರು ಹುಲ್ಲಿನ ಮೇಲೆ ಮಂಜಿನ ಮುತ್ತು ಹೊಳೆಯುವಷ್ಟೇ ಸುಂದರ ಅವನ ನಗು’ ಅಂತ ನಾನು ನನ್ನ ಡೈರಿಯಲ್ಲಿ ಬರೆದಿಟ್ಟುಕೊಂಡೆ. ಅವನ ಒಲವಿನ ನೋಟ, ತುಂಟ ನಗು, ಮುಕ್ತ ಮಾತು ಎಲ್ಲವೂ ನನಗೆ ತೀರಾ ಇಷ್ಟವಾಯ್ತು. ಆದರೆ…. ಆ ಮುಂಜಾವಿನ ಮಂಜಿನ ಮುತ್ತು ಅದೆಷ್ಟು ಬೇಗ ಕರಗಿಹೋಯ್ತು…!
ಅದೊಂದು ದಿವಸ ರಾಜಾರಾವ್ ಮೇಷ್ಟ್ರು ದಡದಡನೆ ನಮ್ಮ ಮನೆಗೆ ಬಂದರು. ಶಾಂತ ಸ್ವಭಾವದ ರಾಜಾರಾವ್ ಅವರ ಪ್ರಶಾಂತ ಕಣ್ಣುಗಳು ಬೆಂಕಿಯನ್ನು ಹೊರಚೆಲ್ಲುತ್ತಿದ್ದದ್ದನ್ನು ಕಂಡು ನನಗೆ ಗಾಬರಿಯಾಯ್ತು. ನನ್ನೆದುರು ಬಂದು ನಿಂತ ಮೇಷ್ಟ್ರು ಹಿಂದೆ ಮುಂದೆ ನೋಡದೆ ಫಟೀರನೆ ನನ್ನ ಕೆನ್ನೆಗೆ ಬೀಸಿ ಹೊಡೆದರು.
ಕಕ್ಕಾಬಿಕ್ಕಿಯಾದ ನಾನು ಜೋರಾಗಿ ಅಳುತ್ತ ರೂಮಿಗೆ ಓಡಿಹೋಗಿ ಬಾಗಿಲು ಮುಚ್ಚಿಕೊಂಡೆ. ನನಗೆ ಮಂಕು ಬಡಿದಂತಾಗಿತ್ತು.
ರಾಜಾರಾವ್ ಮೇಷ್ಟ್ರು ಆಮೇಲೂ ಎಷ್ಟೋ ಹೊತ್ತಿನವರೆಗೂ ಅಪ್ಪನ ಹತ್ತಿರ ಮಾತನಾಡುತ್ತ ಇದ್ದದ್ದು ನನಗೆ ತಿಳಿಯಿತು. ಬಹಳ ಸಮಯದವರೆಗೆ ನಾನು ಅಳುತ್ತಲೇ ಇದ್ದೆ. ರಾತ್ರಿ ಅಮ್ಮ ಊಟಕ್ಕೆ ಎಷ್ಟು ಬಲವಂತ ಮಾಡಿ ಕರೆದರೂ ನಾನು ಬಾಗಿಲು ತೆರೆಯಲಿಲ್ಲ. ಆ ದಿನ ಎಲ್ಲರಿಗೂ ಉಪವಾಸ.
ಮಾರನೆಯ ದಿವಸ ಸಾಯಂಕಾಲ ಮನೆಗೆ ಬಂದ ಮೇಷ್ಟ್ರು ನನ್ನನ್ನು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ನಿಧಾನವಾಗಿ ವಿವರಿಸಿದರು.
“ಚಂದ್ರಶೇಖರ ಒಳ್ಳೆಯ ಹುಡುಗನಲ್ಲಮ್ಮ. ಅವನ ಊರಿನಲ್ಲಿ ಸಾಕಷ್ಟು ಹೆಸರು ಕೆಡಿಸಿಕೊಂಡಿದ್ದಾನೆ. ಮಗನ ನಡವಳಿಕೆಯಿಂದ ತೀರ ಬೇಸತ್ತ ಅವನ ತಂದೆ ಅವನನ್ನು ಕರೆತಂದು ನಮ್ಮ ಮನೆಯಲ್ಲಿ ಬಿಟ್ಟಿದ್ದಾರೆ. ನನ್ನ ಹತ್ತಿರ ಎಲ್ಲಾ ವಿಷಯಗಳನ್ನೂ ಹೇಳಿದ್ದಾರೆ. ಇಲ್ಲಿ ಬಂದರೂ ಅವನು ಬದಲಾಗಿಲ್ಲ. ನಾನು ಸಾಕಷ್ಟು ಬುದ್ಧಿ ಹೇಳಿದೆ. ಆದರೆ ನಾಯಿಬಾಲ ಯಾವತ್ತಿಗೂ ಡೊಂಕು ತಾನೆ? ಅವನನ್ನು ನಂಬಿ ನೀನು ನಿನ್ನ ಬದುಕನ್ನು ಖಂಡಿತ ಹಾಳು ಮಾಡಿಕೊಳ್ಳಬೇಡ. ನಿನ್ನ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡು. ಅವನು ನಿಜವಾಗ್ಲೂ ಒಳ್ಳೆಯವನಲ್ಲಮ್ಮ. ನಿನ್ನ ಅಣ್ಣನ ಸ್ಥಾನದಲ್ಲಿ ನಿಂತು ಹೇಳುತ್ತಿದ್ದೇನೆ. ನಿನ್ನ ಅಪ್ಪ-ಅಮ್ಮ ನಿನ್ನನ್ನು ಗಿಳಿಯ ಹಾಗೆ ಸಾಕಿದ್ದಾರೆ. ನಿನ್ನನ್ನು ಒಳ್ಳೆಯ ಕಡೆಗೆ ಕೊಟ್ಟರೆ ಅವರಿಗೂ ನೆಮ್ಮದಿ. ನೀನೂ ಸುಖವಾಗರ‍್ತೀಯ. ನೀನು ಚಿಕ್ಕವಳು, ನಿನಗೆ ಕೆಲವು ಸಂಗತಿಗಳು ಅರ್ಥವಾಗುವುದಿಲ್ಲ. ಬೆಳ್ಳಗಿರುವುದೆಲ್ಲ ಹಾಲು ಅಂತ ನಂಬುವವಳು ನೀನು. ನಾನು ಹೇಳಿದಂತೆ ಕೇಳು ತಾಯಿ. ತಾತ್ಕಾಲಿಕ ಪ್ರೀತಿ-ಪ್ರೇಮದ ಬಲೆಗೆ ಬಿದ್ದು ನಿನ್ನ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡ” ಹೇಳಬೇಕಾದದ್ದೆಲ್ಲಾ ಮುಗಿಯಿತೆಂಬಂತೆ ಅವರು ಮೌನವಾಗಿ ಕುಳಿತುಬಿಟ್ಟರು. ತಲೆ ಬಗ್ಗಿಸಿಯೇ ಕುಳಿತಿದ್ದ ನಾನೂ ಮಾತನಾಡಲಿಲ್ಲ. ಮೇಷ್ಟ್ರು ನನ್ನ ಬೆನ್ನು ತಟ್ಟಿ ಹೊರಟುಹೋದರು.
ನಾನು ಅಪ್ಪನ ತೊಡೆಯ ಮೇಲೆ ತಲೆಯಿಟ್ಟು ಗಟ್ಟಿಯಾಗಿ ಅತ್ತೆ. ಅವರು ನನ್ನ ತಲೆ ನೇವರಿಸಿ ಸಮಾಧಾನ ಮಾಡಿದರು.
ಮೇಷ್ಟ್ರು ನನ್ನ ಕೆನ್ನೆಗೆ ಹೊಡೆದಿದ್ದು ನನಗೆ ತೀರಾ ಅವಮಾನವೆನಿಸಿತ್ತು. ಆದರೆ ಅವರ ಮಾತುಗಳು ನನ್ನನ್ನು ಕೊಂಚ ಆಲೋಚಿಸುವಂತೆ ಮಾಡಿತು. ಅನಂತರ ನನಗೆ ಚಂದ್ರಶೇಖರನಲ್ಲಿ ಆಸಕ್ತಿ ಕಡಿಮೆಯಾಯಿತು. ಮೇಷ್ಟ್ರು ಏನು ಹೇಳಿದ್ದರೋ ಏನೋ, ಅವನೂ ಮತ್ತೆ ನನ್ನ ಬಳಿಗೆ ಬರಲು ಆತುರ ತೋರುತ್ತಿರಲಿಲ್ಲ.
ನಾನು ಮತ್ತೆ ಯಾವ ಹುಡುಗನ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ನನ್ನ ಓದಿನಲ್ಲಿ ಮನಸ್ಸು ಕೇಂದ್ರೀಕರಿಸಿದೆ. ಕ್ರಮೇಣ ಮೇಷ್ಟ್ರು ಮೇಲಿನ ಗೌರವ ಮತ್ತಷ್ಟು ಹೆಚ್ಚಾಯಿತು.
ಕೆಲವೇ ದಿನಗಳಲ್ಲಿ ರಾಜಾರಾವ್ ಮೇಷ್ಟ್ರು ಟಾನ್ಸ್ಫರ್ ಆಗಿ ನಮ್ಮ ಊರಿನಿಂದ ಹೊರಟು ಹೋದರು. ಹೋಗುವ ಹಿಂದಿನ ದಿವಸ ನಮ್ಮ ಮನೆಯಲ್ಲಿ ಅವರಿಗೆ ಔತಣವಾಚರಿಸಿ ಪ್ರೀತಿಯ ಉಡುಗೊರೆ ನೀಡಿ ಬೀಳ್ಕೊಟ್ಟೆವು. ಹೊರಟಾಗ ನಾನು ಅವರ ಕಾಲಿಗೆ ನಮಸ್ಕರಿಸಿದೆ. ನನ್ನ ಗಂಟಲುಬ್ಬಿ ಬಂದಿತ್ತು. ಭಾವನೆಗಳ ಒತ್ತಡದಿಂದಾಗಿ ಎಲ್ಲರೂ ಮೌನವಾಗಿ ನಿಂತಿದ್ದರು.
ನಮ್ಮ ಬೀದಿಯ ಕೊನೆಯ ಮನೆಯ ವೈದೇಹಿ ಚಂದ್ರಶೇಖರ ಸಹವಾಸದಿಂದ ಮೋಸ ಹೋದ ವಿಷಯ ನಿಧಾನವಾಗಿ ಹರಡಿತು. ವೈದೇಹಿ ಮಂಕು ಹಿಡಿದಂತವಳಾಗಿ ಕಾಲೇಜು ಬಿಟ್ಟು ಮನೆಯಲ್ಲಿ ಕುಳಿತುಬಿಟ್ಟಳು. ಅವಳ ತಾಯಿ ಚಂದ್ರಶೇಖರನಿಗೆ ಹಿಡಿಶಾಪ ಹಾಕಿದರು.
ರಾಜಾರಾವ್ ಮೇಷ್ಟ್ರ ಬುದ್ಧಿವಾದದಿಂದ ಮಾತ್ರ ನಾನು ಚಂದ್ರಶೇಖರನ ಬಲೆಯಲ್ಲಿ ಬೀಳದೆ ಉಳಿದಿದ್ದೆ. ಆ ವಿಷಯವನ್ನು ನೆನೆಸಿಕೊಂಡರೆ ನನಗೆ ಹೃದಯ ತುಂಬಿ ಬರುತ್ತಿತ್ತು. ‘ಆ ಭಗವಂತನೇ ಮೇಷ್ಟ್ರು ರೂಪದಲ್ಲಿ ಬಂದು ನನ್ನ ಮಗಳನ್ನು ಕಾಪಾಡಿದ’ ಎಂದು ಅಮ್ಮ ಹಲವು ದಿನಗಳವರೆಗೂ ಹೇಳುತ್ತಲೇ ಇದ್ದರು.
ರಾಜಾರಾವ್ ಮೇಷ್ಟ್ರ ಬಗ್ಗೆ ನನ್ನ ಗೌರವ ಇಮ್ಮಡಿಸಿತು. ಗುರುವಿನ ಸ್ಥಾನ ಎಷ್ಟೊಂದು ಹಿರಿಯದು ಎಂಬುದು ನನಗೆ ಚೆನ್ನಾಗಿಯೇ ಅರ್ಥವಾಯ್ತು.
ಆನಂತರ ನಾನು ಇಷ್ಟಪಟ್ಟು ಬಿ.ಎಡ್. ಮುಗಿಸಿ ಶಾಲೆಯಲ್ಲಿ ಉಪಾಧ್ಯಾಯನಿಯಾದೆ. ಬದುಕಿನ ಹಾದಿಯಲ್ಲಿ ಬಹುದೂರ ಬಂದ ಮೇಲೂ ರಾಜಾರಾವ್ ಮೇಷ್ಟ್ರ ಚಿತ್ರ ನನ್ನ ಮನದಂಗಳದಿಂದ ದೂರವಾಗಲಿಲ್ಲ. ಅವರು ನನ್ನ ಆದರ್ಶವಾಗಿದ್ದರು. ಇಂದಿನ ದಿನಗಳಲ್ಲಿ ಶಿಷ್ಯರ ತಪ್ಪನ್ನು ತೋರಿಸಿ ತಿದ್ದಿ ತಿಳಿವಳಿಕೆ ಹೇಳುವ ಮನೋಭಾವ ಎಷ್ಟು ಜನ ಗುರುಗಳಲ್ಲಿರುತ್ತದೆ ಅಥವಾ ಗುರುವಿನ ಮಾತನ್ನು ಗೌರವಿಸುವ ಶಿಷ್ಯರಾದರೂ ಎಷ್ಟು ಜನ ಇದ್ದಾರೆ? ಆದರೆ ನಾನು ಮಾತ್ರ ಮಕ್ಕಳು ತಪ್ಪು ಮಾಡಿದಾಗ ತಿದ್ದುವ ಪ್ರಾಮಾಣಿಕ ಪ್ರಯತ್ನ ಮಾಡುತಿದ್ದೆ. ಅವರ ತಪ್ಪುಗಳನ್ನು ಪಾಲಕರ ಗಮನಕ್ಕೂ ತರುತ್ತಿದ್ದೆ. ಶಾಲೆಯಲ್ಲಿ ನನಗೆ ಒಳ್ಳೆಯ ಹೆಸರಿತ್ತು. ನನ್ನ ವಿದ್ಯಾರ್ಥಿಗಳು ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು.
ಅತ್ಯಂತ ತುಂಟನಾಗಿದ್ದ ಪ್ರಶಾಂತ ವಿಪರೀತ ಹಠಮಾರಿಯೂ ಆಗಿದ್ದ. ಅವನ ಬಾಯಿಗೆ ಬಂದದ್ದೇ ಮಾತು, ಮನಸ್ಸಿಗೆ ತೋರಿದ್ದೇ ಕೆಲಸ. ಅವನ ತಾಯಿಗೆ ಅವನದೇ ಯೋಚನೆಯಾಗಿಬಿಟ್ಟಿತ್ತು. ಯಾರ ಶಿಕ್ಷೆಗೂ ಬಗ್ಗುತ್ತಿರಲಿಲ್ಲ ಅವನು. ಆದರೆ ನಾನು ಅವನನ್ನು ಪ್ರೀತಿಯಿಂದ, ವಾತ್ಸಲ್ಯದಿಂದ ಬದಲಾಯಿಸಲು ಪ್ರಯತ್ನಪಟ್ಟೆ. ಶಿಕ್ಷೆಗೆ ಬಾಗದ ಮಗು ಪ್ರೀತಿಗೆ ಬಾಗಿದ. ನಿಧಾನವಾಗಿ ಸುಧಾರಿಸಿದ. ನನ್ನ ಶ್ರಮ ಸಾರ್ಥಕವಾಯಿತು ಎಂದು ನನಗೂ ಖುಷಿಯಾಯಿತು….
ರಾಜಾರಾವ್ ಮೇಷ್ಟ್ರನ್ನು ನೋಡಿದ ಕೊಡಲೇ ಹಿಂದಿನ ದಿನಗಳ ನೆನಪಿಗೆ ಜಾರಿ ಬಿಟ್ಟಿದ್ದ ನನಗೆ ದಾರಿ ಸವೆದದ್ದೇ ತಿಳಿಯಲಿಲ್ಲ. ಮನೆಯ ಮುಂದೆ ಬಂದಾಗ ಬೆಚ್ಚಿ ವಾಸ್ತವಕ್ಕೆ ಬಂದು ಗೇಟ್ ತೆರೆದೆ.
ಮಾರನೆಯ ದಿವಸ ಪುಸ್ತಕದಂಗಡಿಗೆ ಹೋಗಿ ಒಂದಿಷ್ಟು ಒಳ್ಳೆಯ ಪುಸ್ತಕಗಳನ್ನು ಪ್ಯಾಕ್ ಮಾಡಿಸಿದೆ. ಪ್ರಶಾಂತನ ಮನೆಗೆ ಫೋನ್ ಮಾಡಿ ನಾನು ಅವರ ಮನೆಗೆ ಬರುವ ವಿಷಯ ತಿಳಿಸಿದೆ. ಅವರ ಮನೆಯ ಗೇಟಿನ ಬಳಿಗೆ ಹೋಗುತ್ತಿದ್ದಾಗಲೇ ಪ್ರಶಾಂತ ಓಡಿ ಬಂದು ನನ್ನ ಕೈ ಹಿಡಿದು ಒಳಗೆ ಕರೆದೊಯ್ದ. ಅವನ ತಾಯಿ ತುಂಬ ವಿಶ್ವಾಸದಿಂದ ನನ್ನನ್ನು ಸ್ವಾಗತಿಸಿದರು. “ನಮ್ಮ ಪ್ರಶಾಂತ ನಿಮ್ಮಿಂದಾಗಿಯೇ ಒಳ್ಳೆಯ ಹುಡುಗನಾಗಿ ಬದಲಾಗಿದ್ದಾನೆ” ಎಂದರು.
ಈ ಮಾತನ್ನು ಎಷ್ಟು ಸಾರಿ ಹೇಳಿದರೂ ನಿಮಗೆ ತೃಪ್ತಿಯಿಲ್ಲ” ನಾನು ನಕ್ಕು ಹೇಳಿದೆ.
ಅಷ್ಟರಲ್ಲಿ ರಾಜಾರಾವ್ ಒಳಗಿನಿಂದ ಬಂದರು. ಅದೇ ಶಾಂತ ಮುಖ, ಅವೇ ಪ್ರಶಾಂತ ಕಣ್ಣುಗಳು. ನಾನು ಥಟ್ಟನೆ ಮೇಲೆದ್ದು ಅವರ ಮುಂದೆ ನಿಂತು. “ಸರ್, ನನ್ನ ಗುರುತು ಸಿಗಬಹುದೆ? ಎಂದೆ. ಅವರ ಮುಖದಲ್ಲಿ ಗೊಂದಲ ಮೂಡಿತು.
“ಹಾಸನದಲ್ಲಿ ನಿಮ್ಮ ಮನೆಯ ಪಕ್ಕದಲ್ಲಿದ್ದ ದತ್ತಾತ್ರೇಯ ಅವರ ಮಗಳು ನಾನು” ಅಂದೆ.
ಫಕ್ಕನೆ ಅವರು ನನ್ನನ್ನು ಗುರುತಿಸಿದ್ದರು. ಅವರ ಕಣ್ಣುಗಳಲ್ಲಿ ನೆನಪಿನ ಮಿಂಚು ಹರಿಯಿತು ತಮ್ಮ ಕೆನ್ನೆಯ ಮೇಲೆ ಕೈಯಾಡಿಸಿಕೊಂಡು ಜೋರಾಗಿ ನಕ್ಕುಬಿಟ್ಟರು. ನಾನೂ ನಕ್ಕೆ.
“ಹೇಗಿದ್ದೀಯ?” ನಿನ್ನ ಅಪ್ಪ-ಅಮ್ಮ ಆರೋಗ್ಯವೇ?” ಅವರು ವಿಶ್ವಾಸದಿಂದ ವಿಚಾರಿಸಿದರು.
“ಅಪ್ಪ ಈಗ ಬದುಕಿಲ್ಲ, ಅಮ್ಮ ತಕ್ಕಮಟ್ಟಿಗೆ ಆರೋಗ್ಯವಾಗಿದ್ದಾರೆ. ನಮ್ಮಣ್ಣನ ಮನೆಯಲ್ಲಿದ್ದಾರೆ. ನೀವು ಹೇಗಿದ್ದೀರಾ ಸರ್? ಆರೋಗ್ಯವೇ?”
“ನಾನು ಚೆನ್ನಾಗಿದ್ದೀನಮ್ಮ ನಿನ್ನನ್ನು ನೋಡಿ ತುಂಬಾ ಸಂತೋಷವಾಯಿತು” ಮೃದುವಾಗಿ ನುಡಿದರು.
“ನಿಮ್ಮ ಮೊಮ್ಮಗ ತುಂಬಾ ಜಾಣ” ಪಕ್ಕದಲ್ಲಿ ಬಂದು ನಿಂತ ಪ್ರಶಾಂತನ ಬೆನ್ನುತಟ್ಟಿ ಹೇಳಿದೆ.
“ತುಂಬಾ ಹಠಮಾರಿಯಾಗಿದ್ದ ನನ್ನ ಮೊಮ್ಮಗನನ್ನು ನೀನು ಬದಲಾಯಿಸಿ ಬಿಟ್ಟಿದ್ದೀಯಮ್ಮ. ನಮಗೆಲ್ಲ ಅವನದೇ ಯೋಚನೆಯಾಗಿತ್ತು. ನನ್ನ ಸೊಸೆ ನಿನ್ನನ್ನು ತುಂಬಾ ಹೊಗಳಿದಳು. ಆದರೆ ಅವಳು ಹೇಳಿದ ಟೀಚರ್ ನೀನೇ ಅಂತ ನನಗೆ ಗೊತ್ತಾಗಲಿಲ್ಲ. ಈಗ ನಿಜವಾಗಿಯೂ ತುಂಬಾ ಸಂತೋಷವಾಯಿತು” ಅಂದರು.
“ಸರ್, ಹಾದಿ ತಪ್ಪುತ್ತಿದ್ದ ನನ್ನ ಬದುಕನ್ನು ಸರಿಪಡಿಸಿದವರು ತಾವು. ನಿಮ್ಮ ನಿಃಸ್ವಾರ್ಥ ಮಾರ್ಗದರ್ಶನದಿಂದಾಗಿ ನನ್ನ ಬಾಳಿನಲ್ಲಿ ಕಪ್ಪು ಚುಕ್ಕೆ ಮೂಡಲಿಲ್ಲ. ನಾನಿಂದು ಪರಿಶುದ್ಧಳಾಗಿ ನಿಮ್ಮ ಮುಂದೆ ನಿಂತಿದ್ದೇನೆ. ನಾನು ಯಾವತ್ತೂ ನಿಮಗೆ ಕೃತಜ್ಞಳು. ನಿಮ್ಮ ಋಣವನ್ನು ತೀರಿಸಲು ಸಾಧ್ಯವೆ? ಎಂದೆ. ನನ್ನ ಕಣ್ಣಂಚು ತೇವವಾಯ್ತು.
“ಸರ್…. ಸಣ್ಣ ಕಾಣಿಕೆ….” ಅನ್ನುತ್ತಾ ನಾನು ತಂದಿದ್ದ ಪುಸ್ತಕದ ಪ್ಯಾಕೆಟನ್ನು ಅವರ ಕೈಗಿತ್ತು ಬಾಗಿ ನಮಸ್ಕರಿಸಿದೆ.
ನನ್ನ ಕಣ್ಣು, ಹೃದಯ ಎರಡೂ ತುಂಬಿ ಬಂದಿತ್ತು.
“ನನ್ನ ಪ್ರೀತಿಯ ಮೊಮ್ಮಗನನ್ನು ನಿನ್ನ ತಾಳ್ಮೆಯಿಂದ, ಜಾಣ್ಮೆಯಿಂದ ಒಬ್ಬ ಒಳ್ಳೆ ಹುಡುಗನನ್ನಾಗಿ ಬದಲಾಯಿಸಿ ಮುಂದೆ ಸತ್ಪ್ರಜೆಯಾಗಿ ಬಾಳುವಂತೆ ತಳಪಾಯ ಹಾಕಿದ್ದೀಯಲ್ಲಮ್ಮ ಇದಕ್ಕಿಂತ ನನಗೆ ಬೇರೆ ಕಾಣಿಕೆ ಬೇಕೆ ತಾಯಿ?” ಎನ್ನುತ್ತಾ ಅವರು ನನ್ನ ತಲೆಯ ಮೇಲೆ ಕೈ ಇಟ್ಟರು.
ನಾನು ಮೆಲ್ಲನೆ ನಕ್ಕೆ. ಸೂಕ್ತ ರೀತಿಯಲ್ಲಿ ಗುರುಕಾಣಿಕೆ ಸಲ್ಲಿಸಿದ್ದರಿಂದಾಗಿ ನನ್ನ ಮನಕ್ಕೆ ಸಂತೃಪ್ತಿಯಾಗಿತ್ತು.
–ಸವಿತಾ ಪ್ರಭಾಕರ್, ಮೈಸೂರು
ಒಳ್ಳೆಯ ಮಾರ್ಗದರ್ಶಕರು ಸಿಕ್ಕರೆ ಬದುಕಿನ ದಿಕ್ಕೇ ಬದಲಾಗಬಹುದಾದ ಸಂದೇಶ ಹೊತ್ತ ಕಥೆ ಚೆನ್ನಾಗಿದೆ.
ನೈಸ್
ನೈಸ್ ಚೆನ್ನಾದ ಲೇಖನ ಗೆಳತಿ..
ಬಹಳ ಚೆನ್ನಾಗಿದೆ ಕಥೆ
ಅಸಾಮಾನ್ಯ ಗುರುದಕ್ಷಿಣೆ ನೀಡಿದ ಕಥಾನಾಯಕಿಯ ಪಾತ್ರ ಇಷ್ಟವಾಯ್ತು. ಸಕಾಲಿಕ ಕಥೆ ತುಂಬಾ ಚೆನ್ನಾಗಿದೆ.
ಗುರುದಕ್ಷಿಣೆ ಕಥೆಯನ್ನು ಪ್ರಕಟಿಸಿದ ಹೇಮಮಾಲ ಅವರಿಗೆ ಮತ್ತು ಮೆಚ್ಚಿ ಕೊಂಡ ಸಹೃದಯರಿಗೆ ಧನ್ಯವಾದಗಳು