ಚಿತ್ರವಿಮರ್ಶೆ : ಗ್ರೌಂಡ್ ಝೀರೋ (ಹಿಂದಿ)
ಪ್ರಕೃತಿ ಹಾಗೂ ಪರಿಸರ ಪ್ರಿಯರಾದ ಭಾರತೀಯ ಹಾಗೂ ವಿದೇಶಿ ಪ್ರವಾಸಿಗಳು ಬಹಳ ಹಿಂದಿನಿಂದ ಆಕರ್ಷಣೆಗೆ ಒಳಪಟ್ಟು ಧಾವಿಸಿ ವೀಕ್ಷಿಸುವ ಪ್ರಖ್ಯಾತ ಪ್ರವಾಸಿ ಸ್ಥಳ ಕಾಶ್ಮೀರ. ಹಿಂದೆಲ್ಲಾ ವಿವಾಹವಾದ ತಕ್ಷಣ ದಂಪತಿಗಳ ಮೊದಲ ಆಯ್ಕೆ ಕಾಶ್ಮೀರವಾಗಿತ್ತು. ಅಲ್ಲಿಯ ಪೆಹಲ್‌ಗಾಂವ್, ಗುಲ್‌ಮಾರ್ಗ್, ಸೋನಾಮಾರ್ಗ್ ಬಹಳ ಜನಪ್ರಿಯ ಸ್ಥಳಗಳು. ಶ್ರೀನಗರದ ದಾಲ್ ಲೇಕ್ ದೋಣಿ ವಿಹಾರ, ದೋಣಿ ಮನೆಗಳು ಹಾಗೂ ದೋಣಿಗಳಲ್ಲಿ ಮಾರುಕಟ್ಟೆಯ ದೃಶ್ಯಗಳನ್ನು ಅಲ್ಲಿ ಹೋದವರು ಖಂಡಿತ ಕಣ್ತುಂಬಿ, ಮನತುಂಬಿ ಬರುತ್ತಾರೆ. ಹಿಂದಿನ ಎಲ್ಲಾ ಭಾಷೆಯ ಚಿತ್ರಗಳಲ್ಲಿ ಪ್ಯಾರಿಸ್, ಸ್ವ್ವಿಟ್ಜರ್‌ಲ್ಯಾಂಡ್ ಬಿಟ್ಟರೆ ಕಾಶ್ಮೀರದ ದೃಶ್ಯಗಳೇ ಹೆಚ್ಚು. ಅದರಲ್ಲೂ ನಾಯಕ -ನಾಯಕಿಯರ ಪ್ರಣಯ ದೃಶ್ಯ ಹಾಗೂ ಪ್ರೇಮಸಲ್ಲಾಪದ ಹಿನ್ನೆಲೆಗೆ ಪ್ರೇಮ ಕಾಶ್ಮೀರವೇ ಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ನಾನೂ ನನ್ನ ಹೆಂಡತಿ 90ರ ದಶಕದಲ್ಲೇ ಈ ಸ್ಥಳಗಳಿಗೆ ಹೋಗಿ ಸುಂದರ ಛಾಯಾ ಚಿತ್ರಗಳನ್ನು ತೆಗೆಸಿಕೊಂಡಿದ್ದ ನೆನಪು ಇನ್ನೂ ಮಾಸಿಲ್ಲ. 80ರ ದಶಕದಿಂದ ಕಾಶ್ಮೀರಕ್ಕೆ ಉಗ್ರವಾದ, ಉಗ್ರವಾದಿಗಳ ನಂಟು, ಗಂಟು ಹೆಚ್ಚಾಯಿತು. ಸದಾ ಭಾರತೀಯ ಸೈನಿಕರು ಹಾಗೂ ಕಾಶ್ಮೀರದ ಪೊಲೀಸರ ಕಣ್ಗಾವಲಿನಲ್ಲೇ, ಅವರ ರಕ್ಷಣೆಯ ಕೊಡೆಯ ಕೆಳಗೆ ಪ್ರವಾಸ ಮಾಡಬೇಕಿತ್ತು. ಹೀಗಾಗಿ ಕಾಶ್ಮೀರ ಪ್ರವಾಸ ಮಾಡಲು ದಿಲ್ ಇದ್ದರಷ್ಟೇ ಸಾಲುತ್ತಿರಲಿಲ್ಲ. ಜೊತೆಗೆ ಧೈರ್ಯ, ಸಾಹಸದ ಮನೋಭಾವ ಬೇಕಿತ್ತು. ಆದರೆ ಪೋನಿಗಳ (ಚಿಕ್ಕ ಕುದುರೆಗಳು) ಸವಾರಿ ಮಾಡುತ್ತಾ, ಜೊತೆಗೆ ಬರುವ ಕುದುರೆ ಸವಾರನ ಬೆಂಬಲದೊಂಗೆ ಹಸಿರು ಹಸಿರಾದ ಪರಿಸರದ ಅನೇಕ ಚಿಕ್ಕ ಗುಡ್ಡಗಳನ್ನು ಹತ್ತಿ, ಚಿಕ್ಕ ಕೊಳ್ಳಗಳಿಗೆ ಇಳಿಯುತ್ತಿದ್ದೆವು. ಕಾಶ್ಮೀರಕ್ಕೆ ಹೋದ ಎಲ್ಲಾ ದಂಪತಿಗಳೂ ಅವರವರೇ ಅವರ ಜೀವನ ಸಿನಿಮಾದ ನಾಯಕ -ನಾಯಕಿರಾಗುತ್ತಿದ್ದರು ಅಲ್ಲಿ.
ಸಂವಿಧಾನದ 370 ವಿಧಿಯ ಹಿಂತೆಗೆಯುವಿಕೆ ನಂತರ ಕಾಶ್ಮೀರಿ ಜನರ ಅಭಿವೃದ್ಧಿ, ಪ್ರವಾಸಿ ಸೌಲಭ್ಯಗಳು, ಪ್ರವಾಸೋದ್ಯಮದ ಹೆಚ್ಚುತ್ತಿರುವ ಗಳಿಕೆ, ಸ್ಥಳೀಯ ಸಾವಿರಾರು ಚಿಲ್ಲರೆ ವ್ಯಾಪಾರಿಗಳಿಗೆ ಪ್ರೋತ್ಸಾಹ ಉಗ್ರರ ಹಾಗೂ ಭಾರತ ವಿರೋಧಿಗಳ ಕಣ್ಣು ಕೆಂಪಗಾಗಿಸಿದೆ. ಹೀಗಾಗಿ ಆಗಾಗ ಉಗ್ರವಾದಿಗಳ ಮುತ್ತಿಗೆ, ಶ್ರೀಸಾಮಾನ್ಯರ ಹಿಂಸೆ ಹಾಗೂ ಕೊಲೆ ಅಲ್ಲಲ್ಲಿ ಮುಂದುವರೆಯುತ್ತಿದೆ. ಬಾರ್ಡರ್ ಸೆಕ್ಯೂರಿಟಿ ಪೋರ್ಸ್ (BSF) ಬಹಳ ಜಾಗರೂತೆಯಿಂದ ಇಲ್ಲಿಯ ರಕ್ಷಣೆ ಮಾಡುತ್ತಿದೆ. ಶ್ರೀನಗರದ, ಕಾಶ್ಮೀರದ ರಕ್ಷಣೆಯಲ್ಲಿ ರಾಜ್ಯ ಸರಕಾರದ ಪೋಲೀಸರ ಪಾತ್ರವೂ ಹಿರಿದು. ಆದರೂ, ಆಗಾಗ ಹೇಗೋ ಸ್ಥಳೀಯ ದೇಶದ್ರೋಹಿಗಳ ಬೆಂಬಲದಿಂದ ಉಗ್ರವಾದಿಗಳ ಕಾಟ ಆಗಾಗ ಮುಂದುವರೆದಿದೆ. ಇದಕ್ಕೆ ನೆರೆಯ ದೇಶದ ರಾಜಕಾರಣವೇ ಆಧಾರ ಎಂಬ ನಂಬಿಕೆ ಜನರಲ್ಲಿದೆ.
ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಾನು ನೋಡಿದ ಚಿತ್ರ ಗ್ರೌಂಡ್ ಝೀರೋ ಹಿಂದಿನಿಂದ ಇಂಗ್ಲೀಷ್ ಭಾಷೆಯಲ್ಲಿ ಬರುತ್ತಿರುವ ನಾನಾ ವಿಧದ ಯುದ್ದಗಳ ಬಗೆಗಿನ ಚಲನಚಿತ್ರಗಳಂತೆ, ಈ ಚಿತ್ರ ಕಾಲ್ಪನಿಕವಲ್ಲ.
ಈ ಚಿತ್ರವು 2003 ರಲ್ಲಿ ಭಯೋತ್ಪಾದಕ ರಾಣಾ ತಾಹಿರ್ ನದೀಮ್, ಘಾಜಿ ಬಾಬಾ ಎಂದು ಪ್ರಸಿದ್ಧರಾಗಿದ್ದಾರೆ , ಅವರನ್ನು ಕೊಲ್ಲಲ್ಪಟ್ಟ ಕಾರ‍್ಯಾಚರಣೆಯ ನೇತೃತ್ವ ವಹಿಸಿದ್ದ ಬಿಎಸ್‌ಎಫ್ ಅಧಿಕಾರಿ ನರೇಂದ್ರ ನಾಥ್ ಧಾರ್ ದುಬೆ ಅವರ ಕಥೆಯ ಸುತ್ತ ಸುತ್ತುತ್ತದೆ. ಇದರಲ್ಲಿ ಇಮ್ರಾನ್ ಹಶ್ಮಿ , ಸಾಯಿ ತಮ್ಹಂಕರ್ ಮತ್ತು ಜೋಯಾ ಹುಸೇನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನರ‍್ದೇಶಿಸಿದವರು ತೇಜಸ್ ಪ್ರಭಾ ವಿಜಯ್ ದೇವಸ್ಕರ್. ರ‍್ರಿತೇಶ್ ಸಿಧ್ವಾನಿ ಮತ್ತು ರ‍್ಹಾನ್ ಅಖ್ತರ್ ನರ‍್ಮಿಸಿದ್ದಾರೆ.
ಈ ಚಿತ್ರದಲ್ಲಿ ಒಂದೆಡೆ ಬೆಟ್ಟದ ಕಣಿವೆಯ ಈ ಪ್ರದೇಶದಲ್ಲಿ ಪ್ರಕೃತಿ ಸೌಂದರ್ಯ ಎದ್ದು ಕಂಡರೂ, ಸದಾ ಉಗ್ರರ ಹಾಗೂ ಭಯೋತ್ಪಾದಕರ ಭಯದ ನೆರಳಿನಲ್ಲಿ ಬದುಕಿದ್ದರೂ, ನಿತ್ಯ ಸಹಜವಾಗಿ ಶ್ರೀಸಾಮಾನ್ಯರ ಓಡಾಡ, ಜೀವನ ನಮಗೆ ಒಂದು ಪಾಠ ಕಲಿಸಿತು. ಭೂಕಂಪ, ಪ್ರವಾಹ, ಭೂಕುಸಿತ, ಚಂಡಮಾರುತ ಇವುಗಳ ಲಯಲೇಶವೂ ಭಯವಿಲ್ಲದ ನಮಗೆ, ಪತ್ರಿಕೆಯಲ್ಲಿ ಓದಿದ ಉಗ್ರಗಾಮಿಗಳ ದಾಳಿ, ಬಲಿಯಾದ ಜನರ ಚಿತ್ರಗಳು ಮನಕಲಕುತ್ತವೆ. ಆದರೆ ಅಲ್ಲಿ ಇವೆಲ್ಲ ಸಹಜ ಎನ್ನುವಂತೆ ಜನಜೀವನ ಸದಾ ಮುಂದುವರೆದಿರುತ್ತದೆ ಎಂಬುದೇ ಜೀವನದ ಇನ್ನೊಂದು ಮುಖದ ಸತ್ಯ ಚಿತ್ರ.
ಸಾಹಸ ಚಿತ್ರಗಳಲ್ಲಿ ಕಾಲ್ಪನಿಕ ಕಥೆಗಳಲ್ಲಿ ನಮ್ಮ ಹೀರೋಗಳು ಹಾಗೂ ಹೀರೋಯಿನ್‌ಗಳು ಸಾಹಸ ನಿರ್ದೇಶಕರುಗಳ ಮಾರ್ಗದರ್ಶನದಲ್ಲಿ, ನಿರ್ದೇಶಕರ ಸಲಹೆಯಂತೆ ನಡೆಸುವಾಗ ಅವುಗಳನ್ನು ತಜ್ಞ ಛಾಯಾಗ್ರಾಹಕರು ಚಿತ್ತೀಸುತ್ತಾರೆ. ಇಡೀ ಚಿತ್ರವನ್ನು ತಜ್ಞ ಸಂಪಾದಕರು ತಮ್ಮ ಸ್ಟುಡಿಯೋಗಳಲ್ಲಿ,ಸಂಗೀತಗಾರರು ಸಂಯೋಜಿಸಿದ ಹಾಡುಗಳೊಂದಿಗೆ, ವಿಶೇಷ ಛಾಯಾಗ್ರಹಣ VFX ತಂತ್ರಜ್ಞಾನದಲ್ಲಿ special effects ಗಳೊಂದಿಗೆ ಸಂಯೋಜಿಸಿ, ನೂರಾರು ಜನರ ಬೆವರಿನಿಂದ, ಶ್ರಮದಿಂದ ಹೊರಬಂದ ಅಂತಿಮ ಪರಿಣಾಮವನ್ನು ನೀವು ತೆರೆಯ ಮೇಲೆ ನೋಡುತ್ತೀರಿ. ಆದರೆ ನಿಜವಾದ ಜೀವನದಲ್ಲಿ ಕಾಶ್ಮೀರದಲ್ಲಿ (BSF) 24 ಗಂಟೆಯೂ ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಬಗೆ ನಿಮಗೆ ಗೊತ್ತಾಗಬೇಕಾದರೆ ದಯವಿಟ್ಟು ಗ್ರೌಂಡ್ ಝೀರೋ ದಂತಹ ಚಿತ್ರಗಳನ್ನು ನೋಡಿ. ಈ ಚಿತ್ರವು 2003ರಲ್ಲಿ ಭಯೋತ್ಪಾದಕ ರಾಣಾ ತಾಹಿರ್ ನದೀಮ್(ಘಾಜಿ ಬಾಬಾ) ನನ್ನು ಕೊಲ್ಲುವ ಕಾರ್ಯಾಚರಣೆಯ ನೈಜ ಕಥೆ ಆಧರಿಸಿದೆ. ನೂರಾರು ದಾಖಲೆಗಳನ್ನ ಸಂಗ್ರಹಿಸಿ, ಕಾಶ್ಮೀರದ BSF , ಕಾಶ್ಮೀರದ ಪೋಲೀಸ್ ಪಡೆ, ಕೇಂದ್ರ ಸರಕಾರದ ಸಂಬಂಧಿಸಿದ ಅನೇಕ ಇಲಾಖೆಗಳ ಸಂಪೂರ್ಣ ಸಹಕಾರ, ಇವೆಲ್ಲವುಗಳಿಂದ ಅಂತಿಮವಾಗಿ ಸೃಷ್ಟಿಯಾಗಿದೆ ಈ ಚಿತ್ರಕ್ಕೆ ಸಾಹಿತ್ಯ ಒದಗಿಸಿದ್ದಾರೆ. ಸಂಚಿತ್ ಗುಪ್ತಾಪ್ರಿಯರ‍್ಶಿ ಶ್ರೀವಾಸ್ತವ ಅದರಲ್ಲೂ ಕಹಿಯಾದ, ವಿಷದಂತಹ, ಕತ್ತಿಯ ಅಲಗಿನ ತುದಿಯ ಮೇಲಿನ ಕಥಾ ಚಿತ್ರ ಅಂತಿಮ ಸಂಪಾದನೆಯ ನಂತರವೂ ಎಷ್ಟು ಸ್ಟ್ರಾಂಗ್ ಆಗಿ ಬಂದಿದೆ ಎಂದರೆ ಅದು ಒಟ್ಟೂ ತಂಡದ ಯಶೋಗಾಥೆ. ಅದರಲ್ಲೂ ಬಯೋಪಿಕ್ ಶೈಲಿಯ (ಹಿಂದೆ ಆಗಿ ಹೋದ ನಿಜವಾದ ವ್ಯಕ್ತಗಳ ಜೀವನ ಕಥೆ) ಚಿತ್ರಗಳನ್ನು ಮಾಡುವುದು ಮಹಾ ಸಾಹಸದ ಕೆಲಸ . ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ ನರೇಂದ್ರ ನಾಥ್ ಧಾರ್ ದುಬೆ, ಜಯಾ ದುಬೆ ಪಾತ್ರದಲ್ಲಿ ಸಾಯಿ ತಮ್ಹಂಕರ್. ಅದಿಲಾ ಪಾತ್ರದಲ್ಲಿ ಜೋಯಾ ಹುಸೇನ್, ಸಂಜೀವ್ ರ‍್ಮಾ ಪಾತ್ರದಲ್ಲಿ ಮುಖೇಶ್ ತಿವಾರಿ, ಬಿನು ರಾಮಚಂದ್ರನಾಗಿ ದೀಪಕ್ ಪರಮೇಶ್, ಪ್ರವೀಣ್ ಪಾತ್ರದಲ್ಲಿ ಲಲಿತ್ ಪ್ರಭಾಕರ್, ಘಾಜಿ ಬಾಬಾ ಪಾತ್ರದಲ್ಲಿ ರಾಕಿ ರೈನಾಧ್ಯಾನ್ ಪಾತ್ರದಲ್ಲಿ ರಾಹುಲ್ ವೋಹ್ರಾ, ಹುಸೇನ್ ಪಾತ್ರದಲ್ಲಿ ಮೀರ್ ಮೆಹ್ರೂಜ್, ಚಾಂದ್ ಖಾನ್ ಆಗಿ ಏಕಲವ್ಯ, ಪ್ರಧಾನಿ ವಾಜಪೇಯಿ ಪಾತ್ರದಲ್ಲಿ ರಾಮನ್ ಅವತಾರ್ ಅಭಿನಯಿಸಿದ್ದಾರೆ.
ಕಾಲ್ಪನಿಕ ಸಾಹಸ ಚಿತ್ರಗಳಲ್ಲಿ ಸಾಹಿತಿಗಳು ಚಿತ್ರಕಥೆಯನ್ನು ಹೇಗಾದರೂ ಬರೆಯಬಹುದು. ನಾಯಕರೂ ಬೇಕಾದ ರೀತಿ ಸ್ಟಂಟ್ ಮಾಡಬಹುದು. ಆದರೆ ಈ ಚಿತ್ರದಲ್ಲಿ ನೈಜ ಘಟನೆಗಳನ್ನು ಆಧರಿಸಿರುವುದರಿಂದ, ಕಥೆಯ ಕೊಂಡಿಗಾಗಿ, ವಿವರಗಳನ್ನು ಸ್ಪಷ್ಟಪಡಿಸಲು ಸ್ಪಲ್ಪ ಕಲ್ಪನೆ ಇದೆ ಎನ್ನುವುದು ನಿಜ.
ಈ ಚಿತ್ರದಲ್ಲಿ ಒಬ್ಬ ಸೈನಿಕನನ್ನು ಕೊಂದರೆ 5000 ರೂಪಾಯಿ ಎಂಬ ಪ್ರಲೋಭನೆಯಿಂದ ಬಡ ಯುವಕ ಹುಸೇನನನ್ನು, ಉಗ್ರವಾದಿಯ ತಂಡದವ ಮನವೊಲಿಸುತ್ತಾನೆ. ಅತ್ಯಂತ ಬಡ ಕುಟುಂಬದ ತಾಯಿ ತಂಗಿಯನ್ನು ಹೊಂದಿರುವ ಈ ಯುವಕ ಆ ಹಣ ಪಡೆಯಲು ಬಿಎಸ್‌ಎಫ್‌ನ ಎರಡನೇ ಕಮಾಂಡರ್ ನರೇಂದ್ರ ನಾಥ್ ಧಾರ್ ದುಬೆಯನ್ನು ಕೊಲೆ ಮಾಡಲು ಮನಸ್ಸು ಮಾಡುತ್ತಾನೆ. ಆದರೆ ದುಬೆ ಈತನನ್ನು ಆ ಅಪರಾಧ ಮಾಡಿ ತನ್ನನ್ನು ಸಾಯಿಸುವ ಮೊದಲು ಬಂಧಿಸಿ, ಆತನ ಮನೆಗೆ ಕರೆದೊಯ್ದು ಬುದ್ಧಿವಾದ ಹೇಳಿ ಅವರ ಕುಟುಂಬಕ್ಕೆ ಧನಸಹಾಯ ಮಾಡಿ ಬರುತ್ತಾನೆ. ತನಗೆ ಗುಂಡು ಬೀಳುತ್ತದೆ ಎಂದು ತಿಳಿದಿದ್ದ ಈ ಯುವಕ ಹುಸೇನ್ ಹಂತ ಹಂತವಾಗಿ ಪರಿವರ್ತನೆಯಾಗಿ ಆತ ಬಿಎಸ್‌ಎಫ್ ಪರವಾಗಿ ಈ ಹೋರಾಟದಲ್ಲಿ, ತಾನು ಉಗ್ರರ ಪರ ಎಂದು ಉಗ್ರರಿಗೆ ತಿಳಿಯುವಂತೆ ಇದ್ದು, ಅವರನ್ನು ಸದೆಬಡಿಯಲು ದುಬೆಗೆ ಸಹಾಯ ಮಾಡುತ್ತಾನೆ. ಆಗ ದುಬೆ ಓಡುತ್ತಿದ್ದ ಖಳನಾಯಕನ ಜೊತೆಗೆ ಸಹಜತೆಗಾಗಿ ಹುಸೇನನ ಕಾಲಿಗೂ ಗುಂಡು ಹೊಡೆಯುತ್ತಾನೆ. ಮುಂದೆ ಉಗ್ರರ ಬಾಂಬಿಗೆ ಈ ಹುಸೇನ್ ತುತ್ತಾಗುತ್ತಾನೆ. ಆತನನ್ನು ತನ್ನ ಸೋದರ ಎಂದು ತಿಳಿದಿದ್ದ ದುಬೆ ದುಃಖಿಸುತ್ತಾನೆ.
ಸರಕಾರದ, ಸೈನಿಕ ಇಲಾಖೆಯ, ಬಿಎಸ್‌ಎಫ್ ನ ಹಿರಿಯ ಅಧಿಕಾರಿಗಳ ಅಸಹಕಾರದಿಂದ ದುಬೆ ಬೇರೆ ಕಡೆ ವರ್ಗಾವಣೆಗೆ ಹೋಗಲು ಸಮ್ಮತಿಸುತ್ತಾನೆ. ಅಂತಿಮವಾಗಿ ಇನ್ನೊಬ್ಬ ಹಿರಿಯ ಅಧಿಕಾರಿಯ ಬೆಂಬಲದಿಂದ ಉಗ್ರನಾಯಕರ ಶೋಧದ ಕಾರ್ಯ ಮುಂದುವರೆಸುತ್ತಾನೆ. ಆದರೆ ಈತ ಹೇಳಿದ ಸ್ಥಳದಲ್ಲಿ ಜನರ ಮಧ್ಯದಲ್ಲಿಯೇ ಆ ಉಗ್ರನಾಯಕ ಇದ್ದಾನೆಂಬ ದುಬೆಯ ಮಾತನ್ನು ಹಿರಿಯ ಅಧಿಕಾರಿಗಳು ಒಪ್ಪುವುದಿಲ್ಲ. ಕೆಲಸ ಕಳೆದುಕೊಂಡರೂ ಪರವಾಗಿಲ್ಲ ಎಂದು ಇತರ ಇಬ್ಬರು ಸೈನಿಕ ಮಿತ್ರರೊಂದಿಗೆ ಉಗ್ರನಾಯಕ ಅಡಗಿದ್ದ ಮನೆಯ ಮೇಲೆ ದಾಳಿ ಮಾಡುತ್ತಾನೆ. ಆದರೆ 2ನೇ ಮಹಡಿ 3ನೇ ಮಹಡಿ ಖಾಲಿ. ಅಲ್ಲಿದ್ದದ್ದು ಒಂದೇ ಕೋಣೆ. ಆದರೆ ಅಂತಿಮವಾಗಿ ಆ ಕೋಣೆಯಲ್ಲಿ ಗಾಜಿನ ಕೃತಕ ಒಳಕೋಣೆ ಇದ್ದದ್ದು ತಿಳಿದು ದುಬೆ ಆಕ್ರಮಣ ಮಾಡುತ್ತಾನೆ. ಅಂತಿಮವಾಗಿ ಉಗ್ರನಾಯಕ ಹಾಗೂ ಅವನ ತಂಡದ ಅಂತ್ಯವಾಗುತ್ತದೆ.
ಈ ಚಿತ್ರಕ್ಕೆ ಸಂಗೀತ ನೀಡಿದವರು ಜಾನ್ ಸ್ಟೀವರ್ಟ್ ಎದುರಿ, ಹಾಡುಗಳನ್ನು ಹಾಡಿದವರು ತನಿಷ್ಕ್ ಬಾಗ್ಚಿ,ರೋಹನ್-ರೋಹನ್ ಹಾಗೂ ಸನ್ನಿ ಇಂದರ್ ಕಾಶ್ಮೀರದ ಅಪರೂಪದ ಸ್ಥಳಗಳನ್ನು ಅದ್ಬುತವಾಗಿ ಸೆರೆಹಿಡಿದಿದ್ದಾರೆ ಕಮಲ್‌ಜಿತ್ ನೇಗಿ. ದೇಶಪ್ರೇಮಿ ಮಿತ್ರರು ಈ ಚಿತ್ರವನ್ನು ನೋಡಲೇಬೇಕು.
–ಎನ್.ವ್ಹಿ.ರಮೇಶ್
ಸೊಗಸಾದ ಚಿತ್ರ ವಿಶ್ಲೇಷಣೆ…ಸಾರ್
Nice
ದೇಶಪ್ರೇಮವನ್ನು ಬಡಿದೆಬ್ಬಿಸುವಂತಹ ಚಲನಚಿತ್ರದ ವಿಮರ್ಶಾತ್ಮಕ ಲೇಖನ ಚೆನ್ನಾಗಿ ಮೂಡಿಬಂದಿದೆ.
ದೃಷ್ಯ ಮಾಧ್ಯಮದಲ್ಲಿ ಮನಕಲಕುವಂತೆ ಕಟ್ಟಿರುವ ಚಲನಚಿತ್ರದ ವಿಮರ್ಶಾತ್ಮಕ ಲೇಖನ ಚೆನ್ನಾಗಿ ಮೂಡಿ ಬಂದಿದೆ.