ಮುಸ್ಸಂಜೆ

Share Button

ಗಾಢನಿದ್ರೆಯಲ್ಲಿದ್ದ ಪಾರ್ವತಿಯನ್ನು ಯಾರೋ ಬಡಿದೆಬ್ಬಿಸಿದಂತಾಯಿತು. ಗಾಭರಿಯಿಂದ ಕಣ್ಣುಬಿಟ್ಟು ಸುತ್ತಲೂ ವೀಕ್ಷಿಸಿದಳು. ರೂಮಿನಲ್ಲಿ ಅವಳನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಹೊರಗಡೆ ಹಾಲಿನಲ್ಲಿ ಅವಳ ಬಲಗೈ ಬಂಟಿ ಶೇಷಮ್ಮನ ಗೊರಕೆಯ ಶಬ್ಧ ಅವ್ಯಾಹತವಾಗಿ ಸಾಗಿತ್ತು. ಮನೆಯ ಹೊರಗೆ ಜೋ ಎಂದು ಸುರಿಯುತ್ತಿದ್ದ ಮಳೆ, ಮಧ್ಯೆ ಮಧ್ಯೆ ಕೋಲ್ಮಿಂಚು ಮತ್ತು ಗುಡುಗಿನ ಸದ್ದು. ಅದರ ಪರಿಣಾಮವಾಗಿ ವಿದ್ಯುತ್ ಸೌಲಭ್ಯ ಕಡಿದುಹೋಗಿ ಕಗ್ಗತ್ತಲು ಆವರಿಸಿತ್ತು. ಮನೆಯಲ್ಲಿ ಯು.ಪಿ.ಎಸ್. ಹಾಕಿಸಿದ್ದರಿಂದ ರೂಮಿನ ಬೆಡ್‌ಲೈಟಿಗೇನೂ ಬಾಧಕವಾಗಿರಲಿಲ್ಲ. ಮಂಚದಿಂದೆದ್ದು ಅಲ್ಲಿಯೇ ಇರಿಸಿದ್ದ ಜಗ್ಗಿನಿಂದ ನೀರು ಬಗ್ಗಿಸಿಕೊಂಡು ಕುಡಿದು ಅದನ್ನು ಯಥಾಸ್ಥಾನದಲ್ಲಿಟ್ಟು ಮತ್ತೆ ಮಲಗಿದಳು. ಊಹುಂ..ಕಣ್ಣಿಗೆ ನಿದ್ರೆ ಹತ್ತಲಿಲ್ಲ.

ಅಯಾಚಿತವಾಗಿ ಅವಳ ಬಲಗೈ ಬಗಲಲ್ಲಿನ ಹಾಸಿಗೆಯತ್ತ ಚಾಚಿತು. ಅಲ್ಲಿನ ಜಾಗ ಖಾಲಿಯಾಗಿತ್ತು. ಅಲ್ಲಿ ಮಲಗಿರುತ್ತಿದ್ದ ಅವಳ ಪತಿ ಈಗ ಅದೆಲ್ಲೋ ಪರದೇಶಕ್ಕೆ ಹಾರಿಹೋಗಿದ್ದಾರೆ. ಮಕ್ಕಳೊಡನೆ ಇರುತ್ತೇನೆಂದು ಹೋದರು. ಎಷ್ಟು ಹೇಳಿದರೂ ಕೇಳಲಿಲ್ಲ. ಪಾರ್ವತಿ ಅಂಗಲಾಚಿದರೂ ಅವರ ಮನಸ್ಸು ಕರಗಲಿಲ್ಲ. ಐವತ್ತು ವರ್ಷಗಳು ಅವರೊಡನೆ ದಾಂಪತ್ಯ ಗೀತೆ ಹಾಡಿದವಳು ಕೇಳಿಕೊಂಡರೂ ನಿರ್ಧಾರ ಬದಲಾಗಲಿಲ್ಲ. ಅವರೊಡನೆ ಕಷ್ಟಸುಖದಲ್ಲಿ ಜೊತೆಜೊತೆಯಾಗಿ ಹೆಜ್ಜೆ ಹಾಕಿದವಳು ಪಾರ್ವತಿ. ಅವಳ ಮಾತಿಗೆ ಕವಡೆ ಕಿಮ್ಮತ್ತು ಕೊಡದೆ ವಿದೇಶದ ಸುಖಜೀವನದ ಕನಸು ಹೊತ್ತು ನಡೆದೇಬಿಟ್ಟರು. ಅಲ್ಲಿ ಹೇಗಿದ್ದಾರೋ, ಎಲ್ಲಿದ್ದಾರೊ? ಮಗ ಶ್ರೀಹರ್ಷನ ಮನೆಯಲ್ಲಿಯೋ, ಇಲ್ಲ ಮಗಳು ಶ್ಯಾಮಲಳ ಮನೆಯಲ್ಲಿಯೋ? ಲಂಡನ್ನಿಗೆ ಹೋದ ಹೊಸತರಲ್ಲಿ ಅವರಿಂದ ಫೋನ್‌ಗಳ ಭರಾಟೆ ಬಹಳವಾಗಿತ್ತು. “ಏ ಪಾರೂ ನೀನೊಂದು ಗೊಡ್ಡು ಸಂಪ್ರದಾಯದವಳು, ಕೆಲಸಕ್ಕೆ ಬಾರದ ತತ್ವಗಳಿಗೆ ಜೋತುಬಿದ್ದಿದ್ದೀಯೆ. ಸುಖ ಪಡುವುದು ನಿನ್ನ ಹಣೆಯಲ್ಲಿ ಬರೆದಿಲ್ಲ. ಮಕ್ಕಳು ಹೇಳಿದಂತೆ ಕೇಳಿದ್ದರೆ ನೀನೂ ನನ್ನ ಜೊತೆಯಲ್ಲಿ ಅಧುನಿಕ ಜೀವನವನ್ನು ಅನುಭವಿಸುತ್ತಿದ್ದೆ. ಅಲ್ಲಿ ಒಂಟಿಯಾಗಿ ಪಿಶಾಚಿಯಂತೆ ದೊಡ್ಡ ಮನೆಯಲ್ಲಿರುವುದು ತಪ್ಪುತ್ತಿತ್ತು. ಇಲ್ಲಿ ನಾನು ಹೇಗೆ ಜುಂ ಅಂತಾ ಇದ್ದೇನೆ ಗೊತ್ತಾ ! ಹುಂ ನಿನಗೆ ಹೇಳಿ ಏನು ಪ್ರಯೋಜನ. ಆ ತೋಟ, ಅಲ್ಲಿನ ಆಳುಗಳ ಜೊತೆಯಲ್ಲಿ ಹೆಣಗಾಟ, ದೆವ್ವದಂತಾ ದೊಡ್ಡಮನೆಯಲ್ಲಿ ಒಂಟಿತನ, ಈಗಲೂ ಕಾಲ ಮಿಂಚಿಲ್ಲ, ಮಗನಿಗೋ ಮಗಳಿಗೋ ಒಂದು ಫೋನ್‌ಕಾಲ್ ಮಾಡು. ನೀನು ತೆಗೆದುಕೊಂಡ ತೀರ್ಮಾನ ತಪ್ಪಾಗಿದೆ, ಈಗ ನೀವು ಕೊಟ್ಟ ಸಲಹೆ ಸರಿಯಾದುದೆಂದು ಅರ್ಥವಾಗಿದೆ. ಯಾರಾದರೂ ಬಿಡುವು ಮಾಡಿಕೊಂಡು ಬನ್ನಿ, ಈ ತೋಟ, ಮನೆಯನ್ನು ಯಾರಿಗಾದರೂ ಕೊಟ್ಟು ನಿಮ್ಮೊಡನೆ ಬಂದುಬಿಡುತ್ತೇನೆ. ಇದನ್ನು ಕೊಳ್ಳುವವರು ಸಮೀಪದಲ್ಲೆ ಇದ್ದಾರೆ ಎಂದು ಒಂದು ಮಾತು ಹೇಳು. ಮಕ್ಕಳು ಹಕ್ಕಿಯಂತೆ ಹಾರಿಬಂದು ಅಲ್ಲಿನ ವ್ಯವಹಾರವನ್ನು ಮುಗಿಸಿ ನಿನ್ನನ್ನು ಕರೆದುಕೊಂಡು ಬರುತ್ತಾರೆ. ಇಲ್ಲಿ ನಾವಿಬ್ಬರೂ ಜಾಲಿಯಗಿ ಇರಬಹುದು. ಮಕ್ಕಳೂ ಇದನ್ನು ಒಪ್ಪುತ್ತಾರೆ. ನಿಧಾನವಾಗಿ ಯೋಚಿಸು” ಎಂದು ಪತಿ ಹೇಳುತ್ತಿದ್ದದ್ದು ಪಾರ್ವತಿಗೆ ನೆನಪಾಯಿತು.

ಎಲ್ಲವನ್ನೂ ನೆನಪು ಮಾಡಿಕೊಂಡ ಪಾರ್ವತಿ “ಹೂಂ ನನ್ನ ಬಾಳಸಂಗಾತಿಗೆ ಏನಾಗಿ ಹೋಯಿತು? ಅವರು ಹೇಳಿದ್ದಕ್ಕೆಲ್ಲ ಇವರು ತಲೆಯಾಡಿಸಿ ಒಪ್ಪದೇ ಇದ್ದ ನಾನು ಮಾತ್ರ ಮಕ್ಕಳ ದೃಷ್ಟಿಯಲ್ಲಿ ಖಳನಾಯಕಿಯಾದೆನಲ್ಲ. ನಾನು ಹೇಳಿದ್ದರಲ್ಲಿ ಏನು ತಪ್ಪಿದೆ. ತೋಟ, ಮನೆ ಎಲ್ಲವೂ ನಮ್ಮ ನಂತರ ಮಕ್ಕಳಿಗೇ ಸಲ್ಲುವುದಲ್ಲವೆ? ಆತುರವೇತಕ್ಕೆ? ಕೊನೆಗಾಲದಲ್ಲಿ ಎಲ್ಲವನ್ನೂ ಮಾರಿಕೊಂಡು ಕೈ ಬರಿದು ಮಾಡಿಕೊಂಡು ಬವಣೆ ಪಟ್ಟವರೆಷ್ಟು ಜನರನ್ನು ನಾವು ನೋಡಿಲ್ಲ. ಇದು ನನ್ನ ಗಂಡನ ತಲೆಗೆ ಬರಲೇ ಇಲ್ಲವಲ್ಲ. ಕೊನೆಗೆ ಆಸ್ತಿಯನ್ನು ನಾಲ್ಕು ಪಾಲು ಮಾಡಿ ನೀವಿಬ್ಬರೂ ನಿಮ್ಮ ಪಾಲನ್ನು ತೆಗೆದುಕೊಳ್ಳಿ ಉಳಿದುದನ್ನು ನಾವಿಬ್ಬರು ಬದುಕಿರುವವರೆಗೆ ನಮ್ಮಲ್ಲೇ ಇರಲಿ ನಂತರ ಅದು ಹೇಗೂ ನಿಮಗೇ ತಾನೇ ಎಂದು ನಾನು ಸಲಹೆ ನೀಡಿದ್ದು ತಪ್ಪೆ? ಈಗಲೇ ಎಲ್ಲವನ್ನೂ ಮಾರಿ ಮಕ್ಕಳಿಗೆ ಕೊಟ್ಟು ಅವರು ಹೇಳಿದಂತೆ ಕೇಳಿಕೊಂಡು ನಮ್ಮ ಶೇಷ ಜೀವನಕ್ಕೆ ಅವರ ಬಳಿ ಅಡಿಯಾಳುಗಳಂತೆ ಕೈ ಚಾಚಬೇಕೇ? ಅವರುಗಳಿಗೆ ನಾವೇನು ಕಡಿಮೆ ಮಾಡಿದ್ದೇವೆ? ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಒಳ್ಳೆಯ ಜೊತೆಗಾತಿಯರನ್ನು ತಂದು ಮದುವೆ ಮಾಡಿಸಿ ನಿಮ್ಮ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ ಎಂದು ಮಾರ್ಗ ತೋರಿದ್ದೇವೆ. ಅವರುಗಳಿಗೆ ಒಳ್ಳೆಯ ನೌಕರಿಗಳಿವೆ. ವಿದೇಶದಲ್ಲಿ ತಮಗಿಷ್ಟ ಬಂದಂತೆ ಇದ್ದಾರೆ. ನಮ್ಮ ಕಡೆಯಿಂದ ಯಾವುದೇ ಬೇಡಿಕೆಗಳಿಲ್ಲ. ಅವರ ಪಾಡಿಗೆ ಅವರು ಇರುವುದು ಬಿಟ್ಟು ನಮ್ಮ ಬಾಳಿಗೂ ಕೈ ಹಾಕಿದ್ದು ಸರಿಯಲ್ಲ. ಹೀಗೆ ಆಲೋಚಿಸುತ್ತಲೇ ಪಾರ್ವತಿಗೆ ತಮ್ಮ ಬಾಳಿನ ಹೆಜ್ಜೆಗುರುತುಗಳು ನೆನಪಾಗತೊಡಗಿದವು.

ಪಾರ್ವತಿ ಮೈಸೂರಿನ ಸಮೀಪದಲ್ಲಿರುವ ನಂಜನಗೂಡಿನ ವಿರೂಪಾಕ್ಷಪ್ಪ, ಇಂದಿರಮ್ಮ ದಂಪತಿಗಳ ಏಕೈಕ ಪುತ್ರಿ. ಮಗಳು ಹುಟ್ಟವುದಕ್ಕಿಂತ ಮೊದಲು ಹುಟ್ಟಿದ ನಾಲ್ಕು ಮಕ್ಕಳನ್ನು ಕಳೆದುಕೊಂಡಿದ್ದರಿಂದ ಮಗಳೆಂದರೆ ಅವರಿಗೆ ಪಂಚಪ್ರಾಣ. ಮಗಳೆಂದರೆ ಅವರ ಸರ್ವಸ್ವವಾಗಿದ್ದಳು. ಪಾರ್ವತಿಯ ತಂದೆ ವೃತ್ತಿಯಲ್ಲಿ ವ್ಯಾಪಾರಿಗಳು. ಹಿರಿಯರಿಂದ ಅವರಿಗೆ ಬಂದಿದ್ದ ಮನೆ, ಪೇಟೆಯಲ್ಲಿ ನಾಲ್ಕಾರು ಅಂಗಡಿಮಳಿಗೆಗಳು ಅವರಿಗಿದ್ದವು. ಅಲ್ಲದೆ ಅವರ ಕೈಹಿಡಿದ ಹೆಂಡತಿಯ ಕಡೆಯಿಂದಲೂ ಆರು ಎಕರೆ ಜಮೀನು, ಅದರೊಳಗೊಂದು ತೋಟದ ಮನೆಯೂ ಅರಿಶಿನ ಕುಂಕುಮದ ರೂಪದಲ್ಲಿ ಅವರ ಪೋಷಕರಿಂದ ಬಂದಿತ್ತು. ಅದನ್ನೂ ರೂಢಿಸಿಕೊಂಡಿದ್ದರು. ಇದರಿಂದ ಅವರು ಧನಿಕರ ಸಾಲಿಗೆ ಸೇರುತ್ತಿದ್ದರು.

ಪಾರ್ವತಿ ನೋಡಲಿಕ್ಕೆ ಸುಂದರಿ. ಒಮ್ಮೆ ನೋಡಿದವರು ಮತ್ತೊಮ್ಮೆ ತಿರುಗಿ ನೋಡುವಂತಿದ್ದಳು. ಎತ್ತರದ ನಿಲುವು, ತಿದ್ದಿ ತೀಡಿದಂತ ಮುಖಲಕ್ಷಣ, ಸರಳ ಸೌಮ್ಯ ಸ್ವಭಾವ, ಸುಸಂಸ್ಕೃತ ನಡವಳಿಕೆ ಇದರಿಂದಾಗಿ ಹೆತ್ತವರಷ್ಟೇ ಅಲ್ಲ ಬಂಧು ಬಾಂಧವರೆಲ್ಲರಿಗೂ ಅಚ್ಚುಮೆಚ್ಚಿನವಳಾಗಿದ್ದಳು.

ಹೆಣ್ಣುಮಕ್ಕಳು ಎಷ್ಟು ಕಲಿತರೇನು ಪ್ರಯೋಜನ ಎಂಬ ಸಾಮಾನ್ಯ ಧೋರಣೆಗೆ ಪಕ್ಕಾಗದೆ ವಿರೂಪಾಕ್ಷಪ್ಪನವರು ಕಾಲಕ್ಕೆ ತಕ್ಕಂತೆ ಮಗಳಿಗೆ ವಿದ್ಯಾಭ್ಯಾಸ ಕೊಡಿಸಿದ್ದರು. ಪಾರ್ವತಿ ನಂಜನಗೂಡಿನಲ್ಲಿ ಪಿ.ಯು.ಸಿ. ಮುಗಿಸಿ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಬಿ.ಎಸ್ಸಿ. ಪಾಸುಮಾಡಿ ಪದವೀಧರಳಾಗಿದ್ದಳು. ಸ್ವಭಾವತಃ ಚಟುವಟಿಕೆಯ ಚಿಲುಮೆಯಂತಿದ್ದ ಅವಳು ಮನೆ, ಜಮೀನು ಕೆಲಸಗಳೆರಡರಲ್ಲೂ ಸೈ ಎನ್ನುವಂತಿದ್ದಳು.

ವಂಶದ ಏಕೈಕ ಕುಡಿಯಾದ ಪಾರ್ವತಿಯನ್ನು ದೂರದೂರಿಗೆ ಕಳುಹಿಸುವ ಬದಲು ತಮ್ಮ ಕಣ್ಮುಂದೆಯೇ ಇರಿಸಿಕೊಳ್ಳುವ ಇರಾದೆಯಿಂದ ಅದೇ ಊರಿನ ಮತ್ತೊಂದು ವ್ಯಾಪಾರಸ್ಥರ ಮನೆಯ ಮಗನಾದ ಸದಾನಂದ ಎಂಬ ವರನಿಗೆ ಕೊಟ್ಟು ಮದುವೆ ಮಾಡಿದರು. ಆತನೂ ತಂದೆತಾಯಿಗೆ ಒಬ್ಬನೇ ಮಗ. ವ್ಯಾಪಾರದಲ್ಲಿ ತಂದೆಯ ಗರಡಿಯಲ್ಲಿ ಪಳಗಿದ್ದ ಬುದ್ಧಿವಂತನೆಂದು ಮೊದಲೇ ಗೊತ್ತಿತ್ತು. ಹೀಗಾಗಿ ಪಾರ್ವತಿಯು ತವರುಮನೆ, ಅತ್ತೆಯಮನೆ ಎರಡೂ ಕಡೆಗೆ ಓಡಾಡಿಕೊಂಡೆ ಸಂಸಾರ ನಡೆಸುತ್ತಿದ್ದಳು. ಎರಡು ಮಕ್ಕಳ ತಾಯಿಯಾದಳು. ಮಕ್ಕಳು ಶ್ರೀಹರ್ಷ ಮತ್ತು ಶ್ಯಾಮಲಾ. ಮಕ್ಕಳು ಮೈಸೂರಿಗೆ ನಂಜನಗೂಡಿನಿಂದ ಓಡಾಡಿಕೊಂಡೇ ಇಂಜಿನಿಯರಿಂಗ್ ಪದವೀಧರರಾದರು. ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಒಬ್ಬರ ನಂತರ ಒಬ್ಬರು ವಿದೇಶಕ್ಕೆ ಹಾರಿಹೋದರು. ಅವರ ಭವಿಷ್ಯ ದೃಷ್ಟಿಯಿಂದ ಮಾತಾಪಿತೃಗಳೂ ಅಡ್ಡಿಪಡಿಸಲಿಲ್ಲ.

ಓದಲೆಂದು ವಿದೇಶಕ್ಕೆ ಹೋದವರು ಅಲ್ಲಿಯೇ ಉತ್ತಮ ಕೆಲಸಗಳನ್ನೂ ಗಳಿಸಿಕೊಂಡರು. ಅವರು ಅಲ್ಲಿದ್ದರಿಂದ ಎರಡು ಕುಟುಂಬದ ಹಿರಿಯರೂ ಒಮ್ಮೆ ವಿದೇಶ ಯಾತ್ರೆ ಮಾಡಿ ಮಕ್ಕಳ ಸುಖ ಸೌಲಭ್ಯಗಳನ್ನು ಕಣ್ತುಂಬ ನೋಡಿಬಂದರು. ಮಕ್ಕಳು ಹಿಂದಕ್ಕೆ ಬರುವ ಯಾವುದೇ ಲಕ್ಷಣಗಳು ಕಾಣದಿದ್ದಾಗ ತಮ್ಮ ಕರ್ತವ್ಯದ ಭಾಗವೆಂದು ಅವರಿಬ್ಬರಿಗೂ ಸೂಕ್ತ ಸಂಗಾತಿಗಳನ್ನು ಆಯ್ಕೆಮಾಡಿ ಮಕ್ಕಳನ್ನು ಒಪ್ಪಿಸಿದರು. ನಂತರವೇ ಅವರ ವಿವಾಹಗಳನ್ನು ನೆರವೇರಿಸಿ ತಮ್ಮ ಪಾಲಿನ ಜವಾಬ್ದಾರಿಯನ್ನು ಪೂರ್ತಿಮಾಡಿದರು.

ಸಂಸಾರವಂದಿಗರಾದ ಮೇಲೆ ಮಕ್ಕಳು ವರ್ಷಕ್ಕೋ, ಎರಡು ವರ್ಷಕ್ಕೋ ಒಮ್ಮೆ ತಮ್ಮ ಮಕ್ಕಳು ಮರಿಗಳೊಂದಿಗೆ ಕೆಲವು ದಿನಗಳ ಮಟ್ಟಿಗೆ ಬಂದು ಹೋಗುತ್ತಿದ್ದರು. ಅವರು ಇಲ್ಲಿಗೆ ಹಿಂದಿರುಗುವ ಉತ್ಸಾಹ ತೋರದಿದ್ದಾಗ ಹಣೆಬರಹದಲ್ಲಿದ್ದಷ್ಟೇ ಲಭ್ಯವೆಂದು ಎಲ್ಲಿಯೋ ಚೆನ್ನಾಗಿದ್ದರೆ ಸಾಕೆನ್ನುವ ಮನೋಭಾವನೆ ಬೆಳೆಸಿಕೊಂಡು ಸುಮ್ಮನಾದರು.

ಕಾಲ ಸರಿದಂತೆ ಮನೆತನದ ಹಿರಿಯರೆಲ್ಲರೂ ಲೋಕದಿಂದ ಸರಿದು ಹೋಗಿ ಪಾರ್ವತಿ, ಸದಾನಂದರೇ ಮನೆಯ ಯಜಮಾನರಾಗಿ ಉಳಿದರು. ಮೊದಲಿನಿಂದಲೂ ಸ್ವತಂತ್ರ ಮನೋಭಾವ ಹೊಂದಿದ್ದ ಪಾರ್ವತಿ ಜೀವನದಲ್ಲಿ ತನ್ನದೇ ದೃಷ್ಟಿಕೋನವಿಟ್ಟುಕೊಂಡು ಕೆಲವು ತರಬೇತಿಗಳನ್ನು ಪಡೆದುಕೊಂಡಿದ್ದಳು. ಆಸಕ್ತ ಮಹಿಳೆಯರು ಕೆಲವರನ್ನು ಕಲೆಹಾಕಿ ತೋಟದಲ್ಲಿ ಬೆಳೆಯುತ್ತಿದ್ದ ಸೊಪ್ಪುಗಳು, ಹಣ್ಣು ತರಕಾರಿಗಳನ್ನು ಸಂಸ್ಕರಿಸಿ ಅರೋಗ್ಯಕರ ಪಾನೀಯಗಳ ತಯಾರಿಕೆ, ನಿಂಬೆ, ಹೆರಳೆ, ಮಾವು, ಅಮಟೆ, ನೆಲ್ಲಿ ಕಾಯಿಗಳಿಂದ ಉಪ್ಪಿನಕಾಯಿ ತಯಾರಿಸಿ ಸಹಾಯಕ ಸಂಘ ಸಂಸ್ಥೆಗಳ ಮುಖಾಂತರ ಮಾರಾಟ ಮಾಡಿಸುತ್ತಿದ್ದಳು. ತೋಟದ ಮನೆಯಲ್ಲಿದ್ದ ವಿಶಾಲವಾದ ಷೆಡ್ ಅವಳ ಕಾರ್ಯಾಗಾರವಾಗಿತ್ತು. ಮುಂದಿನ ಬಯಲಿನಲ್ಲಿ ಗ್ರಾಮೀಣ ಮಹಿಳೆಯರಿಂದ ತೆಂಗಿನ ಗರಿಗಳಿಂದ ತೆಗೆದ ಕಡ್ಡಿಗಳಿಂದ ಪೊರಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಳು. ಇದರಿಂದ ಕೆಲಸ ಮಾಡುವ ಮಹಿಳೆಯರುಗಳಿಗೂ ಆರ್ಥಿಕ ಲಾಭವಾಗುತ್ತಿತ್ತು ಹಾಗೆಯೇ ಪಾರ್ವತಿಗೂ ಕೂಡ ಮಹಿಳಾ ಉದ್ಯಮಿಯೆಂಬ ಹೆಸರೂ ಬಂದಿತು.

ತಾನು ಗಳಿಸುತ್ತಿದ್ದ ಹಣಕಾಸಿನ ಬಗ್ಗೆ ಎಂದೂ ಪಾರ್ವತಿ ತಾತ್ಸಾರ ಮಾಡಿದವಳಲ್ಲ. ತೋಟ, ಅಂಗಡಿ, ತನ್ನ ಕಾರ್ಯಾಗಾರದಲ್ಲಿ ದುಡಿಯುತ್ತಿದ್ದವರನ್ನು ಅತ್ಮಿಯವಾಗಿ ಮನೆಯವರಂತೆ ಗೌರವಿಸುತ್ತಿದ್ದಳು. ಅವರಿಗೆ ಸಮಯದಲ್ಲಿ ಆಸರಿಕೆ, ಬೇಸರಿಕೆಗೆ ಅವಕಾಶವಿಲ್ಲದಂತೆ ಸಾಕಷ್ಟು ನೆರವೂ ಅವಳಿಂದ ಸಲ್ಲುತ್ತಿತ್ತು. ಇದರಿಂದಾಗಿ ಎಲ್ಲರೂ ಬಹಳ ಆಸಕ್ತಿಯಿಂದ ದುಡಿಯುತ್ತಿದ್ದರು.

ಹೀಗೇ ಕೆಲವು ವರ್ಷಗಳು ಕಳೆದುಹೋದವು. ಮಕ್ಕಳು,ಮೊಮ್ಮಕ್ಕಳು ಊರಿಗೆ ಬಂದಾಗಲೆಲ್ಲ ವಿದೇಶದಲ್ಲಿನ ತಮ್ಮ ಜೀವನದ ಸುಖ ಸೌಲಭ್ಯಗಳ ಬಗ್ಗೆ ಬಾಯಿತುಂಬಾ ಹೊಗಳುತ್ತಿದ್ದರು. ಅವರು ಮಾಡಿದ ವರ್ಣನೆಗಳಿಂದ ಸದಾನಂದರು ಬಹಳ ಪ್ರಭಾವಿತರಾಗಿಬಿಟ್ಟರು. ತಾವೂ ಏಕೆ ಅಲ್ಲಿಗೇ ಹೋಗಿ ಇದ್ದುಬಿಡಬಾರದು ಎಂಬ ಹಂಬಲ ಅವರ ಮನಸ್ಸಿನಲ್ಲಿ ಭದ್ರವಾಗಿ ಮನೆಮಾಡಿತು. ಅ ವಿಷಯದಲ್ಲಿ ಗಂಡ ಹೆಂಡಿರ ಮಧ್ಯದಲ್ಲಿ ಅನೇಕ ಬಾರಿ ಚರ್ಚೆ ಪ್ರಾರಂಭವಾಗಿ ವಾಗ್ಯುದ್ದವೇ ನಡೆದುಹೋಗುತ್ತಿತ್ತು. ಅನುನಯದಿಂದ ಪಾರ್ವತಿಯನ್ನು ಒಪ್ಪಿಸಲು ಸದಾನಂದ ಪ್ರಯತ್ನಿಸಿದರು. “ಪಾರೂ ಮಕ್ಕಳು ವಿದೇಶ ಬಿಟ್ಟು ಬರುವುದಿಲ್ಲ ಎಂಬುದು ಖಾತ್ರಿ. ಅವರೆಲ್ಲೋ ನಾವೆಲ್ಲೋ ಇದೇನು ಚಂದ ಹೇಳು. ನಮಗಿನ್ನೇನು ಬೇಕು. ದುಡಿಯುವ ಕಾಲ ಮುಗಿದಿದೆ. ಮಕ್ಕಳು ಒಂದು ಹಂತ ಮುಟ್ಟಿದ್ದಾರೆ, ನೆಮ್ಮದಿಯಾಗಿದ್ದಾರೆ. ಅವರಿಗೆ ಅಲ್ಲಿ ಪೋಷಕರನ್ನೂ ತಮ್ಮೊಡನೆ ಇರಿಸಿಕೊಳ್ಳುವ ವಿಶೇಷ ಅವಕಾಶವಿದೆಯಂತೆ. ಮಕ್ಕಳಿಬ್ಬರೂ ಲಂಡನ್ನಿನಲ್ಲಿ ಸಮೀಪದ ಊರುಗಳಲ್ಲಿದ್ದಾರಂತೆ. ನಾವು ಅಲ್ಲಿಗೆ ಹೋದರೆ ಒಂದಾರು ತಿಂಗಳು ಮಗನ ಮನೆಯಲ್ಲಿ, ಇನ್ನಾರು ತಿಂಗಳು ಮಗಳ ಮನೆಯಲ್ಲಿ ಸುಖವಾಗಿ ಕಾಲಹಾಕಬಹುದು. ನಾವು ಇನ್ನೆಷ್ಟು ವರ್ಷಕಾಲ ಇದ್ದೇವು? ಜೊತೆಗೆ ನನಗೀಗಾಗಲೇ ಡಯಾಬಿಟಿಸ್, ಬಿ.ಪಿ., ಅಂಟಿಕೊಂಡಿವೆ. ನಿನಗೇನೋ ಸದ್ಯಕ್ಕೆ ಇಲ್ಲ. ಆದರೆ ಮೊದಲಿನ ಶಕ್ತಿ ನಮಗಿದೆಯೆ? ಆದ್ದರಿಂದ ಇಲ್ಲಿನ ಆಸ್ತಿಯನ್ನೆಲ್ಲ ಮಾರಾಟಮಾಡಿ ಅಲ್ಲಿಯೇ ಅವರುಗಳಿಗೆ ಹತ್ತಿರದಲ್ಲಿದ್ದುಬಿಡೋಣ.” ಎಂದು ನಾನಾ ವಿಧವಾಗಿ ತಿಳಿಸಿ ಪ್ರಯತ್ನಿಸಿದರು.
ಅದನ್ನೆಲ್ಲ ಕೇಳುತ್ತಿದ್ದ ಪಾರ್ವತಿ “ನೋಡಿ ವಿದೇಶವೇನಿದ್ದರೂ ಹೋಗಿ ನೋಡಿ ಬರಲು ಚೆನ್ನ. ಅಲ್ಲಿಯೇ ನೆಲೆಸುವುದಕ್ಕಲ್ಲ. ಮಕ್ಕಳು ತಮ್ಮ ತಮ್ಮ ಉದ್ಯೋಗದಲ್ಲಿ ಬ್ಯುಸಿಯಾಗಿರುತ್ತಾರೆ. ಅಲ್ಲಿನ ಸಾಮಾಜಿಕ ರೀತಿನೀತಿಗಳು, ಚಟುವಟಿಕೆಗಳ ಬಗ್ಗೆ ನನಗೆ ಎಳ್ಳಷ್ಟೂ ಆಸಕ್ತಿಯಿಲ್ಲ. ಇಲ್ಲಿದ್ದರೆ ಹೇಗೋ ನಮಗೆ ಬೇಕಾದಂತೆ ಕಾಲ ಕಳೆಯಬಹುದು. ಅಲ್ಲಿ ಎಲ್ಲಕ್ಕೂ ಮಕ್ಕಳನ್ನು ಆಶ್ರಯಿಸುವ ಅಗತ್ಯವಿದೆ. ಇದರಿಂದಾಗಿ ಅವರೊಡನೆ ಸಣ್ಣಪುಟ್ಟ ವಿಷಯಗಳಿಗೂ ಜಟಾಪಟಿ ನಡೆಯುವುದು ಬೇಡ. ನಿಮ್ಮ ದಮ್ಮಯ್ಯಾ ಅಂತೀನಿ, ಅವರುಗಳು ಹೇಳಿದ್ದನ್ನೆಲ್ಲ ಕೇಳಬೇಡಿ. ನಿಮ್ಮನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದು. ನಮ್ಮ ಬೇರುಗಳು ಇಲ್ಲಿವೆ. ನಾವು ಹುಟ್ಟಿದ ನೆಲದಲ್ಲಿಯೇ ಅಂತ್ಯ ಕಾಣಬೇಕೆನ್ನುವುದು ನನ್ನಾಸೆ. ನೀವೂ ಅಲ್ಲಿಗೆ ಹೊಗುವುದು ತರವಲ್ಲ ಎಂಬುದು ನನ್ನ ಸ್ಪಷ್ಟ ಅಬಿಪ್ರಾಯ” ಎಂದು ಸದಾನಂದರ ಮಾತುಗಳತ್ತ ಒಲವು ತೋರಲಿಲ್ಲ.

ದಿನೇ ದಿನೇ ಮಕ್ಕಳ ಕಡೆಗೆ ಹೆಚ್ಚು ಹೆಚ್ಚು ವಾಲಿದ ಸದಾನಂದ ಹೆಂಡತಿಗೂ ಹೇಳದೆ ತಾವೇ ಒಂದು ತೀರ್ಮಾನಕ್ಕೆ ಬಂದುಬಿಟ್ಟರು. ಅದನ್ನು ತಮ್ಮ ಮಕ್ಕಳಿಗೂ ತಿಳಿಸಿದ್ದೇ ಅಲ್ಲದೆ ಹೇಗಾದರೂ ನಿಮ್ಮ ತಾಯಿಯನ್ನು ಒಪ್ಪಿಸಬೇಕೆಂದು ಕೋರಿದರು. ತಮ್ಮ ಆಸ್ತಿಯನ್ನು ವಿಲೇವಾರಿ ಮಾಡುವ ಕಡೆಗೆ ಗಮನ ಹರಿಸಿದರು.

ಇವೆಲ್ಲ ಮಾತುಕತೆಗಳು ಎಷ್ಟೇ ಗುಟ್ಟಾಗಿ ನಡೆದರೂ ಪಾರ್ವತಿಗೆ ಅರಿವಾಗದಿರಲಿಲ್ಲ. ಆದರೂ ಆಕೆ ತನಗೇನೂ ಇದರ ಬಗ್ಗೆ ತಿಳಿದಿಲ್ಲವೆಂಬಂತೆ ಇದ್ದುಬಿಟ್ಟಳು. ಹಾಗೇನಾದರೂ ಸನ್ನಿವೇಶ ಒದಗಿದರೆ ತಾನೇನು ಮಾಡಬೇಕೆಂಬುದರ ಬಗ್ಗೆ ಖಚಿತವಾದ ನಿಲುವು ಹೊಂದಿದ್ದಳು. ಯಾವುದೇ ಕಾರಣಕ್ಕೂ ತನ್ನ ಸ್ವಂತಿಕೆಯನ್ನು ಬಲಿಗೊಡಲು ಅವಳು ಸಿದ್ದಳಿರಲಿಲ್ಲ.

ಅವಳ ನಿರೀಕ್ಷೆಯಂತೆ ಅಂತಹ ಸನ್ನಿವೇಶ ಬಂದೇಬಿಟ್ಟಿತು. ಮಕ್ಕಳಿಬ್ಬರ ಆಗಮನವಾಯಿತು. ಮೊಮ್ಮಕ್ಕಳಿಗೆ ಪರೀಕ್ಷೆಯಿರುವುದರಿಂದ ಅವರು ಬರಲಿಲ್ಲ. ಶಿಕ್ಷಣ ಬಹುಮುಖ್ಯವೆಂಬುದು ಅವಳಿಗೂ ಗೊತ್ತು. ವಿದೇಶದಿಂದ ಬಂದ ಮಕ್ಕಳನ್ನು ಆದರದಿಂದ ಸ್ವಾಗತಿಸಿ ಊಟೋಪಚಾರಗಳು ಎಂದಿನಂತೆ ನಡೆದವು. ಒಂದು ವಾರ ಕಳೆದಮೇಲೆ ಮಕ್ಕಳಿಬ್ಬರೂ ತಾಯಿಯ ಬಳಿ ಒಂದು ವಿಚಾರ ಚರ್ಚಿಸಬೇಕು ಎಂದು ಅವಕಾಶ ಕೋರಿದರು. ತಾನು ಎದುರಿಸಬೆಕಾದ ಘಳಿಗೆ ಬಂತೆಂದು ಪಾರ್ವತಿ ಸಿದ್ಧಳಾದಳು.

“ಹ್ಹೆ.ಹ್ಹೆ ನಿಮ್ಮಮ್ಮನ ಹತ್ತಿರ ಮಾತನಾಡಲು ಸಂಕೋಚವೇಕೆ. ಮಕ್ಕಳೇ ಅಗತ್ಯವಾಗಿ ಹೇಳಿ” ಎಂದು ಮಾತುಕತೆಗೆ ಆಹ್ವಾನಿಸಿದಳು.
ಇದಕ್ಕೆ ಮೊದಲು ತನ್ನ ಗಂಡನ ಬಾಯಿಂದ ಕೇಳಿದ್ದ ಮಾತುಗಳನ್ನೇ ಮಕ್ಕಳೂ ಹೇಳಿದರು. ಇನ್ನು ಸುತ್ತಿಬಳಸಿ ಮಾತನಾಡುವುದರಲ್ಲಿ ಯಾವ ಪ್ರಯೋಜನವೂ ಇಲ್ಲವೆಂದು “ಆಯಿತು ಮಕ್ಕಳೇ ನಿಮ್ಮ ನಿರ್ಧಾರಕ್ಕೆ ನನ್ನದೇನೂ ತಕರಾರಿಲ್ಲ. ಆದರೆ ನನ್ನದೊಂದು ನಿಬಂಧನೆಯಿದೆ. ಅದಕ್ಕೆ ಒಪ್ಪುವುದಾದರೆ ಮಾತ್ರ ನನ್ನ ಸಮ್ಮತಿ. ನನಗೆ ಮಾತುಕೊಡಿ” ಎಂದಳು ಪಾರ್ವತಿ.

ಅಚ್ಚರಿಯಿಂದ ಮಕ್ಕಳು ತಂದೆಯ ಕಡೆಗೆ ನೋಡಿದರು. ಅಸ್ತು ಎನ್ನುವ ತರಹದ ಸೂಚನೆ ಬಂದಾಗ “ಆಯಿತಮ್ಮಾ, ನಿಮ್ಮ ಶರತ್ತಿಗೆ ನಾವು ಒಪ್ಪುತ್ತೇವೆ. ಅದೇನೆಂದು ಹೇಳಿ” ಎಂದರು ಮಕ್ಕಳು.
“ಹಾಗಾದರೆ ಕೇಳಿ, ನನಗೆ ನನ್ನಮ್ಮನಿಂದ ಬಂದಂತಹ ಆರು ಎಕರೆ ಜಮೀನು(ತೋಟ) ಮತ್ತು ಅದರಲ್ಲಿರುವ ಮನೆಯನ್ನು ಬಿಟ್ಟು ಉಳಿದೆಲ್ಲ ಆಸ್ತಿಗಳನ್ನು ವಿಲೇವಾರಿ ಮಾಡಿ. ಬಂದದ್ದನ್ನು ಮೂರುಭಾಗ ಮಾಡಬೇಕು.” ಎಂದಳು.

“ಏನೆಂದಿರಿ, ತೋಟ ಪಿತ್ರಾರ್ಜಿತ, ಅದರಲ್ಲಿ ನಮಗೂ ಹಕ್ಕಿದೆ. ಮನೆ ಮಳಿಗೆಗಳಲ್ಲಿ ಇನ್ನೆಷ್ಟು ಬಂದೀತು?” ಎಂದು ಕೇಳಿದರು ಮಕ್ಕಳು.

“ಹೋಲ್ಡಾನ್, ಮಕ್ಕಳೇ ಈ ಮನೆ ಮಳಿಗೆಗಳೂ ನನ್ನವೇ. ಆದರೆ ನೀವೇ ಹೇಳಿದಂತೆ ಇವುಗಳ ಮೇಲೆ ನಿಮ್ಮ ಹಕ್ಕಿದೆ. ಆದರೆ ತೋಟ ಪೂರ್ತಿ ನನ್ನದೇ ನೋಡಿ ಇಲ್ಲಿ, ನೀವು ಓದಿದವರಲ್ಲವಾ? ಚೆನ್ನಾಗಿ ನೋಡಿ. ನೀವು ಮರೆತಿರಬಹುದು, ನಿಮ್ಮ ಅಪ್ಪನೂ ಸಹ. ನಿಮ್ಮ ತಾತನವರು ಯಾರಿಗೋ ಸಾಲಕ್ಕೆ ಜಾಮೀನಾಗಿ ಹಣ ಕಟ್ಟದೆ ಮಾನ ಹೋಗುವ ಪ್ರಸಂಗ ಬಂದಿದ್ದಾಗ ನಾನು ನನ್ನ ಗಳಿಕೆಯ ಹಣ, ಒಡವೆಗಳನ್ನು ಮಾರಿದ ಹಣ, ಸಾಲದ್ದಕ್ಕೆ ಬ್ಯಾಂಕಿನಿಂದ ಸಾಲ ತೆಗೆದು ಆ ಸಾಲಕ್ಕಿತ್ತು ತೋಟ, ಮನೆಯನ್ನು ನನ್ನ ಸುಪರ್ದಿಗೆ ಬರೆಸಿಕೊಂಡಿದ್ದೆ. ಮುಂದೇನಾದರೂ ಮಕ್ಕಳಿಂದ ನಮಗೆ ತೊಂದರೆ ಬಂದರೆ ನಮ್ಮನ್ನು ರಕ್ಷಿಸಿಕೊಳ್ಳಲು..ಹುಂ ಬರೀ ನನ್ನನ್ನೇನು ನಿಮ್ಮ ಅಪ್ಪನನ್ನೂ ಸೇರಿ. ಈಗ ನಿಮ್ಮಪ್ಪ ನಿಮ್ಮಕಡೆಗೆ ವಾಲಿದ್ದಾರೆ. ಅದರೂ ಅವರ ರಕ್ಷಣೆಯು ನನಗೆ ಮುಖ್ಯ. ಅದಕ್ಕೇ ಮೂರುಪಾಲು ಮಾಡಿರೆಂದು ಹೇಳುತ್ತಿರುವುದು. ಈಗ ಅರ್ಥವಾಗಿರಬೇಕಲ್ಲ?” ಎಂದಳು ಪಾರ್ವತಿ.

ತೋಟ ಮಾರಿದರೆ ದೊಡ್ಡ ಮೊತ್ತ ಸಿಗುತ್ತದೆಂದು ನಿರೀಕ್ಷಿಸಿದ್ದ ಮಕ್ಕಳಿಬ್ಬರಿಗೂ ತಾಯಿಯ ನೀಡಿದ ವಿವರಣೆ, ಅದಕ್ಕೆ ಪೂರಕವಾಗಿ ತೋರಿದ ದಾಖಲೆಗಳು ನಿರಾಸೆಯ ಕೂಪಕ್ಕೆ ತಳ್ಳಿದವು. ಎರಡು ಮನೆಗಳು, ಮಳಿಗೆಗಳಿಂದ ಬರುವ ಹಣಕ್ಕೇನು ಮೋಸವಿಲ್ಲ. ಆದರೆ ಅದರಲ್ಲಿ ಮೂರು ಪಾಲಂತೆ. ಅಪ್ಪನ ಯೋಗಕ್ಷೇಮವನ್ನು ನಾವೇ ಇನ್ನುಮುಂದೆ ನೋಡಿಕೊಳ್ಳುವುದರಿಂದ ಅವರಿಗೇಕೆ ಪಾಲು ಕೊಡಬೇಕು? ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಂಡವರೇ “ಸರಿ ನೀವು ಹೇಳಿದಂತೆಯೇ ನಿಮ್ಮ ಸ್ವಂತದ್ದು ನಮಗೇನೂ ಬೇಡ. ಆದರೆ ಅಪ್ಪನ ಯೋಚನೆ ನಿಮಗೇಕೆ? ಅವರನ್ನು ನಾವು ಹೇಗೆ ನೋಡಿಕೊಳ್ಳಬೇಕೆಂದು ಇದ್ದೇವೆ ನಿಮಗೆ ಗೊತ್ತಾ? ಅವರ ಪೂರ್ಣ ಜವಾಬ್ದಾರಿ ನಮ್ಮದು. ಆದ್ದರಿಂದ ಎರಡೇ ಪಾಲು ಮಾಡುವುದು” ಎಂದರು.

“ಹುಂ ಮಕ್ಕಳೇ ನಿಮ್ಮ ಅಪ್ಪನಿಗೆ ಅಸ್ಥಿತ್ವವೇ ಬೇಡವೇ? ನಿಮ್ಮೊಡನೆ ಇರಬಯಸಿದರೂ ಅವರದ್ದೆಂದು ಒಂದು ಚೂರೂ ಬೇಡವೇ? ಪ್ರತಿಯೊಂದಕ್ಕೂ ನಿಮ್ಮ ಮುಂದೆ ಕೈ ಒಡ್ಡಬೇಕೇ?” ಎಂದು ಹೇಳುತ್ತಾ ತಮ್ಮ ಪತಿದೇವ ಸದಾನಂದನತ್ತ ತಿರುಗಿ “ನೀವೇನು ಹೇಳುತ್ತೀರಾ?” ಎಂದು ಕೇಳಿದಳು ಪಾರ್ವತಿ.

“ಪಾರೂ ನನ್ನ ಮಕ್ಕಳ ಮೇಲೆ ನನಗೆ ಭರವಸೆಯಿದೆ. ನೀನಂತೂ ತುಂಬ ಸ್ವಾರ್ಥಿಯಾಗಿಬಿಟ್ಟಿದ್ದೀ. ತೋಟದ ತಂಟೆಗೆ ಬರಬೇಡಿ ಎಂದುಬಿಟ್ಟೆ. ಈಗ ಇದರಲ್ಲಿ ಪಾಲು ಇಬ್ಬರಿಗೇ. ಅವರು ಅದರಲ್ಲಿ ಅಲ್ಲಿ ಏನಾದರೂ ಆಸ್ತಿ ಮಾಡಿಕೊಳ್ಳಲಿ. ನಾನಂತೂ ನಿಶ್ಚಿಂತೆಯಿಂದ ಇದ್ದುಬಿಡುತ್ತೇನೆ. ಈಗಲೂ ನೀನು ಮತ್ತೊಮ್ಮೆ ಯೋಚಿಸು” ಎಂದರು ಸದಾನಂದ.

ಮಕ್ಕಳಿಬ್ಬರೂ ತಂದೆಯ ಮಾತನ್ನು ಅನುಮೋದಿಸುತ್ತಾ “ಹಾ, ಹಾಗೆ ಹೇಳಿ ಅಪ್ಪಾ. ಅಮ್ಮಾ ತೋಟದ ಮನೆಯಿಟ್ಟುಕೊಂಡು ನೀವೇನು ಮಾಡುತ್ತೀರಾ? ಈ ವಯಸ್ಸಿನಲ್ಲಿ ಇಲ್ಲದ ಪಂಚಾಯಿತಿ ಏಕೆ. ಒಬ್ಬರೇ ಇರುತ್ತೀರಿ. ಅದನ್ನು ಮಾರಿ ನಮ್ಮೊಡನೆ ಸುಖವಾಗಿ ಬನ್ನಿ. ಇಲ್ಲೇ ಉಳಿದರೆ ನಿಮ್ಮನ್ನು ಯಾರೂ ತಿರುಗಿಯೂ ನೋಡಲ್ಲ. ನೆನಪಿಟ್ಟುಕೊಳ್ಳಿ” ಎಂದೆಲ್ಲ ಕೂಗಾಡಿದರು.
ಇದ್ಯಾವುದಕ್ಕೂ ಜಗ್ಗದೆ ಪಾರ್ವತಿ ಮೌನಕ್ಕೆ ಶರಣಾದಳು.

ಅನಂತರದ ವ್ಯವಹಾರಗಳು ಮೊದಲೇ ಹೇಳಿದಂತೆ ಬೇಗನೇ ಮುಗಿದವು. ಮಕ್ಕಳೊಂದಿಗೆ ನವನವೀನ ಉಡುಪು ಧರಿಸಿ ವಿದೇಶಕ್ಕೆ ಹೊರಟು ನಿಂತ ಪತಿಯನ್ನು ಪಾರ್ವತಿಗೆ ತಡೆದು ನಿಲ್ಲಿಸಲಾಗಲಿಲ್ಲ.

ಅವರೆಲ್ಲರ ದೃಷ್ಟಿಯಲ್ಲಿ ಪಾರ್ವತಿ ಖಳನಾಯಕಿಯಂತಾದಳು. ಇಲ್ಲಿ ಆಸ್ತಿ ಮಾರಿಬಂದ ಹಣದ ಜೊತೆಗೆ ಮತ್ತಷ್ಟು ಹಾಕಿ ಹೊಸ ಮನೆಯೊಂದನ್ನು ಕೊಂಡ ಬಗ್ಗೆ ಮಾಹಿತಿಯನ್ನು, ಅದರ ಅಂದಚಂದ, ಮಕ್ಕಳ ಬುದ್ಧವಂತಿಕೆಯನ್ನು ಗಂಡನ ಬಾಯಿಂದ ದೂರವಾಣಿಯ ಮೂಲಕ ಕೇಳಿ ಮಾರುತ್ತರಿಸದೆ ಶುಭ ಹಾರೈಕೆಯನ್ನಷ್ಟೇ ತಿಳಿಸಿ ಸುಮ್ಮನಾಗಿದ್ದಳು ಪಾರ್ವತಿ.

ಅವರೆಲ್ಲರೂ ವಿದೇಶಕ್ಕೆ ತೆರಳಿದ ಮೇಲೆ ಇಲ್ಲಿದ್ದ ಸುತ್ತಮುತ್ತಲಿನ ಜನರು, ಬಂಧುಬಳಗದವರ ಬಾಯಿಂದ ಆಕ್ಷೇಪಣೆಗಳ ಅಕ್ಷತೆಯ ಮಹಾಪೂರವೇ ಹರಿದು ಬಂದವು. ಇದ್ಯಾವುದಕ್ಕೂ ಸೊಪ್ಪುಹಾಕದ ಪಾರ್ವತಿ ತಾನು ಉದ್ದೇಶಿಸಿದ ಕೆಲಸದ ಜೊತೆಗೆ ತೋಟದ ಉಸ್ತುವಾರಿಯನ್ನು ನಿರ್ವಹಿಸುತ್ತಾ ದಿನಗಳನ್ನು ಸಾಗಿಸುತ್ತಿದ್ದರು.

ಹೂಂ ಹೇಗಿದ್ದವಳು ತಾನು ಹೇಗಾದೆ ! ಹುಟ್ಟಿದ, ಮೆಟ್ಟಿದ ಮನೆಗಳಲ್ಲಿ ಯಾವುದೇ ತೊಂದರೆ ತಾಪತ್ರಯವಿಲ್ಲದೆ ಬೆಳೆದೆ, ಕೊನೆಯಕಾಲದಲ್ಲಿ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಂಡನೂ ತನ್ನನ್ನು ಅರ್ಥ ಮಾಡಿಕೊಳ್ಳದೇ ಹೋದರಲ್ಲಾ ಎಂಬ ಕೊರಗು ಅವಳನ್ನು ಆಗಾಗ ಕಾಡುತ್ತಲೇ ಇತ್ತು. ವಿದೇಶದಿಂದ ಅವಳಿಗೆ ಬರುತ್ತದ್ದ ಫೋನ್‌ಕಾಲ್‌ಗಳು ಇತ್ತೀಚೆಗೆ ಅಪರೂಪವಾಗಿದ್ದು ಅವಳನ್ನು ಮತ್ತಷ್ಟು ವ್ಯಾಕುಲಳನ್ನಾಗಿ ಮಾಡಿತ್ತು. ‘ಯಾರೇನ ಮಾಡುವರು, ಯಾರಿಂದಲೇನಹುದು, ಪೂರ್ವಜನ್ಮದ ಕರ್ಮ ಬೆನ್ನ ಬಿಡದು’ ಎಂಬ ಮಾತನ್ನು ತನ್ನಪ್ಪನ ಬಾಯಲ್ಲಿ ಅನೇಕ ಸಾರಿ ಕೇಳಿಸಿಕೊಂಡಿದ್ದಳು. ಅದನ್ನೀಗ ನೆನೆಸಿಕೊಂಡು ಅದೇ ಗುಂಗಿನಲ್ಲಿದ್ದವಳಿಗೆ ಬೆಳಗಿನ ಜಾವದ ಕಾಗೆಗಳ ಕಾಕಾಶಬ್ಧ ವಾಸ್ತವಕ್ಕೆ ಮರಳಿಸಿದವು.

ಯಥಾಪ್ರಕಾರ ನಿತ್ಯದಂತೆ ತೋಟದ ಆಳುಗಳಿಗೆ ಕೆಲಸಗಳ ಬಗ್ಗೆ ನಿರ್ದೇಶನ ನೀಡಿ, ಮನೆಯಲ್ಲಿ ನಡೆಸುತ್ತಿದ್ದ ಕಾರ್ಯಾಗಾರದಲ್ಲಿ ಭಾಗಿಯಾಗುತ್ತಿದ್ದ ಮಹಿಳೆಯರಿಗೆ ಕೆಲಸಗಳನ್ನು ಹಂಚಿಕೊಟ್ಟು ಪಾರ್ವತಿ ಸ್ನಾನ ಪೂಜಾದಿಗಳನ್ನು ಪೂರೈಸಿ ಶೇಷಮ್ಮನ ಒತ್ತಾಯಕ್ಕೆ ಮಣಿದು ಅವಳು ಮಾಡಿಕೊಟ್ಟ ರೊಟ್ಟಿ ಚಟ್ಣಿ ತಿಂದು ಮುಗಿಸುವಷ್ಟರಲ್ಲಿ ಗಡಿಯಾರ ಹನ್ನೆರಡು ತೋರಿಸಿತ್ತು.

ರಾತ್ರಿಯ ಆಯಾಸವನ್ನು ಸ್ವಲ್ಪ ಕಳೆದುಕೊಳ್ಳೋಣವೆಂದು ರೂಮಿಗೆ ಬಂದಾಗ ಅವಳ ಕೈಯಲ್ಲಿದ್ದ ಮೊಬೈಲ್ ರಿಂಗಣಿಸಿತು. ಹಾಗೇ ಕಣ್ಣಾಡಿಸಿದಳು. ಅದೊಂದು ವೀಡಿಯೋ ಕಾಲ್. ಆ ಸಮಯದಲ್ಲಿ ಲಂಡನ್ನಿನಲ್ಲಿ ಇನ್ನೂ ರಾತ್ರಿ ಹತ್ತರ ಸಮಯ. ಅಚ್ಚರಿಯಿಂದಲೇ ಕನೆಕ್ಟ್ ಮಾಡಿದಳು. ಕಾಣಿಸಿದ ವ್ಯಕ್ತಿ ಗಂಡ ಸದಾನಂದ. ಮತ್ತೆ ಮತ್ತೆ ನೋಡಿದಳು. ವಿದೇಶಕ್ಕೆ ಹೋಗುವ ಮೊದಲು ವಯಸ್ಸಾಗಿದ್ದರೂ ಹರೆಯದವರನ್ನು ನಾಚಿಸುವಂತಿದ್ದ ಮೈಕಟ್ಟು ಹೊಂದಿ ಆರೋಗ್ಯದಿಂದಿದ್ದ ಬಾಳಸಂಗಾತಿ ಈಗ ಎಲುಬಿನ ಹಂದರವಾಗಿದ್ದರು. ಇದೇನು ! ಎಂಟು ಹತ್ತು ತಿಂಗಳೊಳಗೆ ಇಷ್ಟೊಂದು ಮಾರ್ಪಾಡು. ದೇಹಾಲಸ್ಯವೇನಾದರೂ ಆಗಿರಬಹುದೇ? ಎಂದು ಆಲೋಚಿಸಿ “ಇದೇನು ನಿಮ್ಮ ಅವಸ್ಥೆ? ಏನಾಗಿದೆ ಹೀಗಾಗಿದ್ದೀರಿ?” ಎಂದಳು ಪಾರ್ವತಿ ವೇದನೆಯಿಂದ.

“ಹೂಂ ಮಕ್ಕಳ ಮೇಲಿನ ವ್ಯಾಮೋಹ ಮತ್ತು ಅತಿಯಾದ ಭರವಸೆಯಿಂದ ನನಗೆ ನಾನೇ ತಂದುಕೊಂಡ ದುರವಸ್ಥೆಯಿದು. ಪಾರೂ ದೂರದ ಬೆಟ್ಟ ನುಣ್ಣಗೆ ಎನ್ನುವಂತೆ ನಾನು ಮೋಸಹೋದೆ , ಪೂರ್ತಿಯಾಗಿ ಮುಳುಗಿಹೋದೆ. ಎಲ್ಲವನ್ನೂ ಕಳೆದುಕೊಂಡ ಭಿಕಾರಿ. ಬದುಕುವ ಹಕ್ಕನ್ನೂ ಕಳೆದುಕೊಂಡಿದ್ದೇನೆ. ಇಲ್ಲಿಗೆ ಬಂದ ಹೊಸತರಲ್ಲಿ ಎಲ್ಲವೂ ಚಂದವಿತ್ತು ಪಾರೂ. ಕ್ರಮೇಣ ನನ್ನ ಪರಿಸ್ಥಿತಿ ಯಾವ ಶತೃವಿಗೂ ಬೇಡ. ಊಟ, ತಿಂಡಿ, ಕೊನೆಗೆ ನನ್ನ ಔಷಧಿಗಳಿಗೂ ಪರದಾಟವಾಗಿ ಹೋಯಿತು. ಅದು ಹೇಗೆಂಬುದನ್ನು ಮೆಲುದನಿಯಲ್ಲಿ ವಿವರಿಸಿದರು. ನನ್ನ ವೈಯಕ್ತಿಕ ಫೋನೂ ಇಲ್ಲದಂತೆ ಕಿತ್ತುಕೊಂಡಿದ್ದಾರೆ. ನಾನೇನಾದರೂ ಬೇರೆಯವರಿಗೆ ವಿಷಯ ತಿಳಿಸಿಬಿಡುತ್ತೀನೇನೋ ಎಂಬ ಶಂಕೆ ಅವರಿಗೆ. ಹಾಗೂ ಹೀಗೂ ಮಾಡಿ ಫೋನ್ ಕದ್ದು ಮಾತನಾಡುತ್ತಿದ್ದೇನೆ. ಇದವರಿಗೆ ಗೊತ್ತಾಗಿಬಿಟ್ಟರೆ ಬಹುಶಃ ಇದೇ ನನ್ನ ಕೊನೆಯ ಮಾತಾಗಬಹುದು. ನಿನ್ನ ಮಾತನ್ನು ಅರ್ಥಮಾಡಿಕೊಳ್ಳದೆ ತಪ್ಪು ಮಾಡಿಬಿಟ್ಟೆ. ನಿನ್ನ ನಿರ್ಧಾರದ ಹಿಂದೆ ನಿನಗೆ ನನ್ನ ಮೇಲಿರುವ ಕಾಳಜಿಯನ್ನು ನಾನು ತಿಳಿದುಕೊಳ್ಳಲಿಲ್ಲ. ನಾನು ಸೋತು ಹೋದೆ ಪಾರೂ.” ಎಂದು ಬಿಕ್ಕಳಿಸಿದರು ಸದಾನಂದ.

“ಛೀ ಬಿಡ್ತೂ ಅನ್ನಿ, ಗಂಡಸರಾಗಿ ಅಳ್ತಿದ್ದೀರಾ? ಏನೆಂದಿರಿ ನೀವು ಭಿಕಾರಿಯೇ? ನಿಮಗೆ ಬದುಕುವ ಹಕ್ಕಿಲ್ಲವೇ? ಯಾರು ಹಾಗಂತ ಹೇಳಿದವರು. ನನ್ನ ಬಳಿಯಿರುವುದೆಲ್ಲವೂ ನಿಮ್ಮದೇ ಅಲ್ಲವೇ. ಮರೆತರೇನು ಮದುವೆಯಲ್ಲಿ ಸಪ್ತಪದಿ ತುಳಿಯುವಾಗ ಮಾಡಿಸಿದ ಪ್ರತಿಜ್ಞೆ. ಸುಖ, ದುಃಖ ಎರಡರಲ್ಲಿಯೂ ಪರಸ್ಪರರು ಕೈಹಿಡಿದು ಜೊತೆಗೇ ನಡೆಯುವವರು ನಾವು. ನಿಮ್ಮನ್ನಿಲ್ಲಿಗೆ ಕರೆಸಿಕೊಳ್ಳುವುದು ಹೇಗೆಂಬುದು ನನಗೆ ಗೊತ್ತು. ಮೊದಲು ನೀವು ಆ ಮಾನಸಿಕ ಸ್ಥಿತಿಯಿಂದ ಹೊರಬನ್ನಿ. ಯಾವುದನ್ನೂ ಬಹಿರಂಗಪಡಿಸಬೇಡಿ” ಎಂದು ಕಾಲ್ ಕಟ್ ಮಾಡಿದಳು.

ಪಾರ್ವತಿ ತಕ್ಷಣವೇ ಕಾರ್ಯಪ್ರವೃತ್ತಳಾದಳು. ಇಂಗ್ಲೆಂಡಿನಲ್ಲೇ ನೆಲೆಸಿದ್ದ ತನ್ನ ಆಪ್ತ ಗೆಳತಿ ರೇವತಿಗೆ ಫೋನ್ ಮಾಡಿ ವಿಷಯ ತಿಳಿಸಿದಳು. ಮೊದಲೇ ಪಾರ್ವತಿಯ ಬಗ್ಗೆ ತಿಳಿದಿದ್ದ ಅವಳು “ನೀನೇನೂ ಗಾಭರಿಯಾಗಬೇಡ. ನಾಜೂಕಾಗಿ ವ್ಯವಹರಿಸಿ ನಿನ್ನ ಗಂಡನನ್ನು ಊರಿಗೆ ತಲುಪುವಂತೆ ಏರ್ಪಾಡು ಮಾಡುತ್ತೇನೆ” ಎಂದು ಭರವಸೆ ನೀಡಿದಳು.

ಆನಂತರ ಎಲ್ಲವನ್ನೂ ಕಾರ್ಯರೂಪಕ್ಕೆ ತಂದಳು. ಅವಳ ತೀರ್ಮಾನದ ಹಿಂದೆ ಇದ್ದ ತೀವ್ರತೆಯನ್ನರಿತು ಪ್ರತಿಭಟಿಸಿದರೆ ಪರಿಣಾಮ ಬೇರೆಯಾಗಬಹುದೆಂದು ಭಾವಿಸಿ ಪಾರ್ವತಿಯ ಮಕ್ಕಳು ಮೌನಕ್ಕೆ ಶರಣಾದರು. ಸದಾನಂದರು ತಮ್ಮೂರಿಗೆ ಹಿಂದಿರುಗುವಂತಾಯಿತು. ಕಂಗೆಟ್ಟು ಹೋಗಿದ್ದರೂ ಜೀವಂತರಾಗಿ ಹಿಂತಿರುಗಿದ ಪತಿಯನ್ನು ತನ್ನ ಪ್ರೀತಿಯ ಆರೈಕೆಯಿಂದ ಮೊದಲಿನ ಸ್ಥಿತಿಗೆ ತಂದಳು ಪಾರ್ವತಿ.

ನಂತರ ತೋಟದ ಮನೆಯನ್ನು ಮಾರಾಟಮಾಡಿ ತನ್ನೂರಿನಿಂದ ಅನತಿದೂರದಲ್ಲಿರುವ ಸ್ಥಳವೊಂದರಲ್ಲಿ ವೃದ್ಧಾಶ್ರಮವೊಂದನ್ನು ಪ್ರಾರಂಭಿಸಿದಳು. ಅದಕ್ಕೆ “ಸಂಧ್ಯಾಸದನವೆಂದು” ನಾಮಕರಣವನ್ನು ಮಾಡಿದಳು. ತಮ್ಮಂತೆ ಮಕ್ಕಳಿಂದ ದೂರವಿರುವ ಅನೇಕ ವೃದ್ಧರಿಗೆ ಅದರಲ್ಲಿ ಆಶ್ರಯ ನೀಡಲಾಯಿತು. ಸಾಮಾನ್ಯರಿಗೂ ಎಟುಕುವಂತೆ ಶುಲ್ಕವನ್ನು ನಿಗದಿಪಡಿಸಿ ತಮ್ಮನಂತರವೂ ಅಶ್ರಮ ನಿರಂತರವಾಗಿ ನಡೆಯುವುದಕ್ಕೆ ಬೇಕಾದ ಪುದುವಟ್ಟು ಮುಂತಾದ ವ್ಯವಸ್ಥೆ ಮಾಡಿದಳು. ಮೊದಲಿಗೆ ಅದರ ಮೇಲ್ವಿಚಾರಣೆಯನ್ನು ಪಾರ್ವತಿ ಮತ್ತು ಸದಾನಂದರೇ ನೋಡಿಕೊಳ್ಳುತ್ತಿದ್ದರು. ಮೊದಲಿನಂತೆ ಮಹಿಳೆಯರಿಗೆ ತರಬೇತಿ, ಗೃಹ ಉದ್ಯೋಗದ ಸೌಲಭ್ಯವೂ ಮುಂದುವರೆಯಿತು.

ಮಕ್ಕಳೇ ಇರದಂತಿರುವ ದಂಪತಿಗಳಂತೆ ಇರುವಷ್ಟು ದಿನ ಬಾಳಿದರು. ಆದರೆ ವರ್ಷದಲ್ಲಿ ಎರಡು ದಿನ ದೇವರ ಕಾರ್ಯ ಕೈಗೊಂಡು ಪ್ರಾರ್ಥಿಸುತ್ತಾ ಶುಭ ಹಾರೈಸುವುದನ್ನು ಮಾತ್ರ ಬಿಡುತ್ತಿರಲಿಲ್ಲ. ಪಾರ್ವತಿ ಮತ್ತು ಸದಾನಂದರನ್ನು ಮೊದಲಿನಿಂದಲೂ ಬಲ್ಲ ಕೆಲವರಿಗೆ ಮಾತ್ರ ಸತ್ಯಸಂಗತಿ ತಿಳಿದಿತ್ತು. ಅದು ಅವರು ತಮ್ಮ ಮಕ್ಕಳಿಗಾಗಿ ಮಾಡುತ್ತಿದ್ದ ಪ್ರಾರ್ಥನೆ ಅದೆಂಬುದು.

ಬಿ.ಆರ್.ನಾಗರತ್ನ, ಮೈಸೂರು

10 Responses

  1. ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ

  2. ನಯನ ಬಜಕೂಡ್ಲು says:

    ಬಹಳ ಸುಂದರವಾಗಿದೆ

  3. ನಿಮ್ಮಪ್ರೋತ್ಸಾಹದ ಪ್ರತಿಕ್ರಿಯೆಯಾಗಿ ಹೃತ್ಪೂರ್ವಕವಾದ ಧನ್ಯವಾದಗಳು ನಯನಮೇಡಂ

  4. ಪದ್ಮಾ ಆನಂದ್ says:

    ಮನಕಲಕುವ ಕಥೆ, ಸಮಕಾಲೀನ ಸಾಮಾಜಿಕ ಬದುಕಿಗೆ ಹಿಡಿದ ಕೈಗನ್ನಡಿಯಾಗಿ ಮೂಡಿ ಬಂದಿದೆ.

  5. MANJURAJ H N says:

    ನನ್ನಜ್ಜಿ ಆಗಾಗ ಹೇಳುತ್ತಿದ್ದರು: ಅರಗಿನಂಥ ತಾಯಿ; ಮರದಂಥ ಮಕ್ಕಳು!

    ನೆನಪಾಯಿತು. ನಾಗರತ್ನ ಮೇಡಂ, ನಿಮ್ಮ ಮನ ಕಲಕುವ ಕತೆಯೊಳಗೆ ವಿಷಾದವಿದ್ದರೂ ಕತೆಯ ಕೊನೆ ವಿವೇಕವಾಯಿತು.
    ಬದುಕು ಇಷ್ಟೇ ; ಪಾಲಿಗೆ ಬಂದದ್ದಷ್ಟೇ ! ಧನ್ಯವಾದ

  6. ಧನ್ಯವಾದಗಳು ಪದ್ಮಾ ಮೇಡಂ..

  7. ಶಂಕರಿ ಶರ್ಮ says:

    ನಿಜ… ಪರದೇಶವೇನಿದ್ದರೂ ಹೋಗಿ ನೋಡಿ ಬರುವಂತಹುದು..‌..ದೀರ್ಘಕಾಲ ಇರುವಂತಹುದಲ್ಲ. ಪಾರ್ವತಿಯ ನಿರ್ಧಾರ ಮೆಚ್ಚುವಂತಹುದು. ಕೊನೆಗೂ, ಸದಾನಂದರ ಬಾಳನ್ನು ನೇರಗೊಳಿಸುವ ತನ್ನ ಕರ್ತವ್ಯದಲ್ಲಿ ಗೆದ್ದಳು. ಸಾಂದರ್ಭಿಕ ಕಥೆ ಸಕಾಲಿಕವೂ ಹೌದು…ಧನ್ಯವಾದಗಳು ನಾಗರತ್ನ ಮೇಡಂ.

  8. ಧನ್ಯವಾದಗಳು ಶಂಕರಿ ‌ಮೇಡಂ

  9. Anonymous says:

    ಎಂಥ situation ಊಹಿಸಿ ಬರೆದಿದ್ದೀರಿ, ನಿಜ್ವಾಗ್ಲೂ ಇದು ನಡೆಯಬಹುದು. ಸುಖಾಂತ. ಕಣ್ ತೆರೆಸುವ ಕಥೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: