ಕೆಲಸ ಮುಗಿಸಿ ಮನೆಯ ಹಾದಿ ಹಿಡಿದ ಕಾನಸ್ಟೇಬಲ್ ದಯಾನಂದ ಮನೆ ಸಮೀಪಿಸುತ್ತಿದ್ದಂತೆಯೇ ಮಗನ ಅಳು ಜೊತೆಗೆ ಹೆಂಡತಿ ಸುಧಾಳ ಕಿರುಚಾಟ ಕೇಳಿಸಿತು. ಕೈಯಲ್ಲಿದ್ದ ವಾಚಿನ ಕಡೆ ನೋಡಿದ ಎಂಟೂವರೆ. ಇಷ್ಟು ಹೊತ್ತಿನಲ್ಲಿ ಸ್ಕೂಲಿನಲ್ಲಿ ಕೊಟ್ಟ ಹೋಂವರ್ಕ್ ಮುಗಿಸಿ ಪಾಠ ಓದಿಕೊಂಡು ಅಜ್ಜಿಯ ಜೊತೆ ಊಟವನ್ನೂ ಮುಗಿಸಿ ಇಬ್ಬರೂ ಮನೆಯ ಹೊರ ಅಂಗಳದಲ್ಲಿ ಕುಳಿತು ಹರಟೆ ಹೊಡೆಯುವ ಹೊತ್ತು. ಅಂಥಹುದರಲ್ಲಿ? ಎಂದು ಯೋಚಿಸುತ್ತಾ ಗೇಟು ತೆಗೆದ.
ಕಿವಿಗೆ ಮಗನ ಮಾತು “ಇಲ್ಲಮ್ಮಾ..ಇನ್ನೊಂದು ಸಾರಿ ಹೀಗೆ ಮಾಡಲ್ಲ. ಹೊಡೀಬೇಡ. ನಿಮ್ಮ ದಮ್ಮಯ್ಯಾ ಅಂತೀನಿ ಪ್ಲೀಸ್,” ಎಂದು ಬೇಡುತ್ತಿದ್ದುದು ಕೇಳಿಸಿತು.
“ಸ್ಕೂಲಿನಿಂದ ಬರುವಾಗ ನಿನ್ನ ಪಾಡಿಗೆ ನೀನು ಬರದೇ ಇಲ್ಲದ ಉಸಾಬರಿಗೆ ಹೋಗ್ತೀಯಾ?”
ಮಧ್ಯೆ ಬಾಯಿ ಹಾಕಿದ ದಯಾನಂದನ ತಾಯಿ “ಹೋಗಲಿ ಬಿಡು ಸುಧಾ, ಪಾಪ ಮಗು ಗೊತ್ತಾಗಿಲ್ಲ. ಎಲ್ಲಾದರೂ ಅಪಾಯದ ಜಾಗಕ್ಕೆ ಏಟು ಬಿದ್ದೀತು. ಈಗಾಗಲೇ ಒಂದನ್ನು ಕಳೆದುಕೊಂಡಾಗಿದೆ. ಇರೋ ಒಂದನ್ನು..ಹೀಗೆ..ಬಿಡು”
ಮಗನ ಮೇಲೆ ಎಂದು ಕೈಮಾಡದ ಹೆಂಡತಿ ಸುಧಾ ಇವತ್ತು ಹೀಗೇಕೆ? ಎಂದುಕೊಳ್ಳುತ್ತಾ ಗಾಡಿಯನ್ನು ನಿಲ್ಲಿಸಿ ದಡಬಡ ಮನೆಯೊಳಕ್ಕೆ ಅಡಿಯಿಟ್ಟ. “ಸುಧಾ, ಏನಾಗಿದೆ ನಿನಗೆ? ನಿನ್ನ ಕೂಗಾಟ ಬೀದಿಯ ಕೊನೆವರೆಗೂ ಕೇಳಿಸುತ್ತಿದೆ. ಮೈಮೇಲೆ ಬಂದವಳಂತೆ ಆಡುತ್ತಿದ್ದೀಯಾ.” ಎಂದು ಮಗ ಚಿನ್ಮಯನನ್ನು ಅವಳ ಹೊಡೆತದಿಂದ ತಪ್ಪಿಸಿ ತನ್ನೆಡೆಗೆ ಎಳೆದುಕೊಂಡ ದಯಾನಂದ.
“ಬಿಡಿ, ಇವತ್ತು ಅವನ್ನ ಹುಟ್ಟಲಿಲ್ಲಾಂತ ಅನ್ನಿಸಿಬಿಡ್ತೀನಿ” ಎಂದಳು ಸಿಟ್ಟಿನಿಂದ ಕುದಿಯುತ್ತಿದ್ದ ಸುಧಾ.
“ಅಂಥದ್ದೇನು ಮಾಡಿದ ಸ್ಕೂಲಿನಲ್ಲಿ? ಯಾರಿಗಾದರೂ.”
“ಊಹುಂ, ಈಗ ತಾನೇ ಬರುತ್ತಿದ್ದಾನೆ ನಿಮ್ಮ ಕುಮಾರ ಕಂಠೀರವ.” ಎಂದಳು.
“ಯಾಕಪ್ಪಾ ಇಷ್ಟು ಹೊತ್ತು? ಏನಾದರೂ ಫಂಕ್ಷನ್ ಇತ್ತಾ? ನನಗೆ ಹೇಳಲೇ ಇಲ್ಲ. ಅಲ್ಲೇನಾದರೂ..”
“ಮಗಾ..ಅದೆಲ್ಲಾ ಏನೂ ಇಲ್ಲ. ಸ್ಕೂಲಿನಿಂದ ಬರುವಾಗ ಯಾರಿಗೋ ಆಕ್ಸಿಡೆಂಟಾಗಿ ರಸ್ತೇಲೇ ಬಿದ್ದು ಒದ್ದಾಡುತ್ತಿದ್ದರಂತೆ. ಅವರನ್ನು ಇವನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿ ಬಂದಿದ್ದಾನೆ. ಅವನ ಪುಸ್ತಕದ ಚೀಲ, ಊಟದ ಡಬ್ಬಿಯನ್ನು ಅವನ ಜೊತೆಗಾರ ಶಿವು ತಂದುಕೊಟ್ಟು ಹೋದ. ಅವನೇ ವಿಷಯ ತಿಳಿಸಿದ್ದು. ಆಗಿನಿಂದ ಇವಳು ಭದ್ರಕಾಳಿಯಾಗಿ ಏನೂ ವಿಚಾರಿಸದೆಯೇ ಅವನನ್ನು ಹಿಗ್ಗಾಮುಗ್ಗಾ ಚಚ್ಚಿ ಹಾಕ್ತಾ ಇದ್ದಾಳೆ. ಮಗಾ ಅವಳದ್ದೂ ತಪ್ಪಿಲ್ಲ ಕಣೋ. ನಿನ್ನ ಜೀವನದಲ್ಲಾದ ಆ ಪ್ರಸಂಗವನ್ನು ಅವಳಿನ್ನೂ ಮರೆತಿಲ್ಲ. ಕಳೆದುಕೊಂಡ ಮಗನನ್ನು ಕೂಡ. ಅವಳಿಗೆ ಇವನಿಗೇನಾದರೂ ಆದರೆ ಅನ್ನೋ ಆತಂಕ. ಹೋಗು ಒಳಗೆ ಹೋಗಿ ಅವಳಿಗೆ ಸಮಾಧಾನ ಮಾಡು” ಎಂದರು ದಯಾನಂದನ ತಾಯಿ ಶಾಂತಮ್ಮ. ಮೊಮ್ಮಗನನ್ನು ಕರೆದು “ಬಾರೋ ಕಂದಾ, ಹಿತ್ತಲಲ್ಲಿ ಈಗ ತಾನೇ ಆ ಹಸುಗಳಿಗೆ ಸ್ನಾನ ಮಾಡಿಸಿ, ನಾನೂ ಸ್ನಾನ ಮಾಡೋಣವೆಂದು ಒಲೆಗೆ ಉರಿ ಹಾಕಿದ್ದೆ. ಹಂಡೇಲಿ ಬಿಸಿ ನೀರಿದೆ. ನೀನೂ ಸ್ನಾನ ಮಾಡಿ ಬಟ್ಟೆ ಬದಲಾಯಿಸಿಕೋ. ‘ಬಡವಾ ನೀ ಮಡಗಿದಂಗೆ ಇರು’ ಅಂದಂಗೆ ಇರೋದು ಬಿಟ್ಟು ಏಕಪ್ಪಾ ಇಂಥದ್ದಕ್ಕೆಲ್ಲಾ ಕೈ ಹಾಕುತ್ತೀಯಾ? ಚಿಕ್ಕ ತಲೇಲಿ ದೊಡ್ಡ ವಿಚಾರ ಬೇಡ. ಬಾ” ಎನ್ನುತ್ತಾ ಅಳುತ್ತಿದ್ದ ಮೊಮ್ಮಗನನ್ನು ತಬ್ಬಿಹಿಡಿದು ಹಿತ್ತಲಕಡೆ ನಡೆದರು ಶಾಂತಮ್ಮ.
ಕಾರಣ ತಿಳಿದ ದಯಾನಂದ ಅಲ್ಲೇ ಕುಸಿದು ಕುಳಿತು ಅಳುತ್ತಿದ್ದ ಸುಧಾಳನ್ನು ನೋಡಿದ. ಏನೂ ಮಾತನಾಡದೆ ತನ್ನ ರೂಮಿಗೆ ಹೋಗಿ ಟವೆಲ್, ಲುಂಗಿ ಎತ್ತಿಕೊಂಡು ಪ್ರತಿದಿನದಂತೆ ಸ್ನಾನ ಮುಗಿಸಿ ಹೊರಬಂದ. ದೇವರಿಗೊಂದು ನಮಸ್ಕಾರ ಹಾಕಿ ಊಟದ ಮನೆಯ ಕಡೆ ಬಗ್ಗಿ ನೋಡಿದ. ಅಲ್ಲಿ ಕಂಡ ದೃಶ್ಯ ಕರುಳು ಚುರ‍್ರೆನ್ನಿಸಿತು. ಸುಧಾ ತನ್ನ ಮಗನ ಮೈದಡವುತ್ತಾ ರಮಿಸುತ್ತಾ ತಾನೇ ಕೈಯಾರೆ ತುತ್ತುಮಾಡಿ ಅವನಿಗೆ ತಿನ್ನಿಸುತ್ತಿದ್ದಳು. ಸದ್ದುಮಾಡದೆ ಹಾಲಿಗೆ ಬಂದ. ಅಲ್ಲಿಯೇ ಸೋಫಾದ ಮೇಲೆ ಕುಳಿತಿದ್ದ ತಾಯಿಯ ಪಕ್ಕದಲ್ಲಿ ಕುಳಿತುಕೊಂಡ.
ಸ್ವಲ್ಪ ಹೊತ್ತಾದ ಮೇಲೆ “ಅತ್ತೇ, ರೀ, ಬನ್ನಿ ಊಟಕ್ಕೆ,” ಎಂಬ ಕರೆ ಬಂತು. ಬೆಳಗಿನಿಂದ ವಿಪರೀತ ಕೆಲಸದಿಂದ ಆಯಾಸಗೊಂಡಿದ್ದ ದಯಾನಂದ ಹೆಚ್ಚು ಉಪಚಾರ ಹೇಳಿಸಿಕೊಳ್ಳದೆ ಊಟ ಮುಗಿಸಿ ಸ್ವಲ್ಪ ಹೊತ್ತು ಹೊರಗಿನ ಅಂಗಳದಲ್ಲಿ ಅಡ್ಡಾಡಿ ಮಲಗಿಕೊಂಡ.
ಎಲ್ಲ ಕೆಲಸ ಮುಗಿಸಿ ಬಾಗಿಲುಗಳನ್ನು ಭದ್ರಪಡಿಸಿಕೊಂಡು ರೂಮಿನೊಳಕ್ಕೆ ಬಂದಳು ಸುಧಾ. ಪಶ್ಚಾತ್ತಾಪದಿಂದ “ಪಾಪುವನ್ನು ನಾನು ಹೊಡೆಯಬಾರದಿತ್ತು ಕಣ್ರೀ. ಆದರೆ ಏನು ಮಾಡಲಿ,” ಎಂದೇನೋ ಹೇಳುವುದರಲ್ಲಿ ಪತಿಯಿಂದ ಯಾವ ಪ್ರತಿಕ್ರಿಯೆಯೂ ಬರದಿದ್ದುದರಿಂದ “ಆಗಲೇ ನಿದ್ರೆ ಮಾಡಿಬಿಟ್ಟಿದ್ದಾರೆ. ಪಾಪ ಮಲಗಲಿ, ಬೆಳಗ್ಗೆ ಬೇಗ ಡ್ಯೂಟಿಗೆ ಹೋಗಿದ್ರು. ಅಡುಗೆಯೂ ಬೇಗ ಆಗಿರಲಿಲ್ಲ. ಬುತ್ತೀನೂ ಒಯ್ದಿರಲಿಲ್ಲ. ಮನೆಗೆ ಬರುವಷ್ಟರಲ್ಲಿ ಈ ರಾಮಾಯಣ. ಛೇ !” ಎಂದು ಲೈಟಾರಿಸಿ ಗಂಡನ ಪಕ್ಕದಲ್ಲಿ ಉರುಳಿಕೊಂಡಳು. ಹತ್ತು ನಿಮಿಷದೊಳಗೇ ನಿದ್ರಾದೇವಿಯ ವಶಳಾದಳು.
ದಯಾನಂದನಿಗೆ ಆಯಾಸವಾಗಿದ್ದರೂ ನಿದ್ರೆ ಅವನ ಬಳಿ ಸುಳಿದಿರಲಿಲ್ಲ. ಬೇಡವೆಂದರೂ ಸಂಜೆಯ ಪ್ರಸಂಗ ಅವನ ಕಣ್ಮುಂದೆ ಬಂದುನಿಂತು ಅವನನ್ನು ತಿವಿದು ಘಾಸಿಮಾಡುತ್ತಿತ್ತು. ಹೆಂಡತಿ ರೂಮಿಗೆ ಬಂದು ಮಾತನಾಡಿದ್ದೆಲ್ಲ ಕೇಳಿಸಿದರೂ ಉತ್ತರ ಕೊಡದೆ ನಿದ್ದೆ ಬಂದಂತೆ ಸೋಗು ಹಾಕಿಕೊಂಡಿದ್ದ. ಆದರೀಗ ಅವನಿಗೂ ಇಂಥದ್ದೇ ಪ್ರಸಂಗದ ಹಳೆಯ ನೆನಪುಗಳು ಆಲೋಚನೆಗೆ ದೂಡಿದವು.
ಬೆಂಗಳೂರು ಸಮೀಪದ ತಾವರೇಕೆರೆಯ ನಿವಾಸಿ ಧರ್ಮಪ್ಪ ಒಬ್ಬ ಸಣ್ಣ ವ್ಯಾಪಾರಿ. ಪಿತ್ರಾರ್ಜಿತವಾಗಿ ಬಂದಿದ್ದ ಮನೆ, ಸುಗುಣೆ, ಸುಶೀಲೆಯಾದ ಹೆಂಡತಿಯೊಡನೆ ಸಂಸಾರ ಹೂಡಿದ್ದ. ವಿವಾಹಾನಂತರ ಸಾಲಾಗಿ ಮೂರು ಹೆಣ್ಣುಮಕ್ಕಳಿಗೆ ಜನ್ಮ ಕೊಟ್ಟರೂ ಅವುಗಳಲ್ಲಿ ಒಂದೂ ಉಳಿಯದೆ ತುಂಬ ನಿರಾಶರಾಗಿದ್ದರು ದಂಪತಿಗಳು. ಸುಮಾರು ಐದಾರು ವರ್ಷಗಳ ನಂತರ ಶಾಂತಮ್ಮ ಮತ್ತೆ ಗರ್ಭ ಧರಿಸಿದಳು. ನಾಲ್ಕನೆಯ ಸಂತಾನ ಉಳಿಯುತ್ತೋ ಇಲ್ಲವೋ ಎಂಬ ಹೆದರಿಕೆಯಿಂದಲೇ ಜೀವ ಹಿಡಿದು ದಿನಗಳನ್ನು ದೂಡಿದ್ದರು. ಅಂತೂ ಶಾಂತಮ್ಮ ದಿನತುಂಬಿ ಗಂಡುಮಗುವೊಂದಕ್ಕೆ ಜನ್ಮ ನೀಡಿದ್ದಳು. ದಿನದಿನಕ್ಕೆ ಮೈಕೈ ತುಂಬಿಕೊಂಡು ಬೆಳೆಯುತ್ತಿದ್ದ ಮಗು ಅವರಿಗೆ ಸಂತೋಷವನ್ನು ನೀಡಿತ್ತು. ‘ದಯಾನಂದ’ನೆಂದು ಹೆಸರಿಟ್ಟು ಹಿರಿಯ ಬಂಧು ಬಳಗದವರಿಂದ ನಾಮಕರಣದಂದು ಅಶೀರ್ವಾದ ಮಾಡಿಸಿದರು. ಗ್ರಾಮದಲ್ಲಿ ಧರ್ಮಪ್ಪನಿಗೆ ಒಳ್ಳೆಯವನೆಂದು ಹೆಸರಿತ್ತು. ಹೆಸರಿಗೆ ತಕ್ಕಂತೆ ಸ್ವಭಾವವೂ ಇತ್ತು. ಅತಿಯಾದ ಧರ್ಮಭೀರು, ಜೊತೆಗೆ ಭೋಳೇ ಸ್ವಭಾವದವನು. ಇದನ್ನೆಲ್ಲ ಅನೇಕರು ಚೆನ್ನಾಗಿಯೇ ತಮಗೆ ಬೇಕಾದ ಹಾಗೆ ಉಪಯೋಗಮಾಡಿಕೊಂಡು ಪ್ರಯೋಜನ ಪಡೆಯುತ್ತಿದ್ದರು.
ಆ ಊರಿಗೆ ಎಲ್ಲಿಂದಲೋ ಒಬ್ಬ ಬಂದ. ಹಣಕಾಸು ಸಂಸ್ಥೆಯೊಂದನ್ನು ಪ್ರಾರಂಭಿಸಿದ. ಅ ಸಂಸ್ಥೆಯ ಮಾಲೀಕನಿಗೆ ಸಿಕ್ಕ ಮೊದಲನೆಯ ಬಕರಾನೇ ಧರ್ಮಪ್ಪ. ಅವನನ್ನು ಚೆನ್ನಾಗಿ ಪುಸಲಾಯಿಸಿ ತಮ್ಮಲ್ಲಿ ಹಣ ಹೂಡಿಸಿಕೊಳ್ಳುವುದರಲ್ಲಿ ಸಫಲನಾದ. ಅದಕ್ಕೆ ಹೆಚ್ಚಿನ ಬಡ್ಡಿ ನೀಡುವುದಾಗಿ ಆಸೆ ಹುಟ್ಟಿಸಿದ. ಧರ್ಮಪ್ಪನ ಮೂಲಕವೇ ಅವನ ಪರಿಚಯಸ್ಥರನೇಕರನ್ನು ತನ್ನ ಬುಟ್ಟಿಗೆ ಹಾಕಿಕೊಂಡ. ಅವರುಗಳೂ ಅವನಲ್ಲಿ ಹಣ ಹೂಡಿದರು. ಅವರ ನಿರೀಕ್ಷೆಗಳನ್ನು ನಿರಾಸೆಗೊಳಿಸದಂತೆ ಅವರಿಗೆಲ್ಲ ಅವಧಿಯ ನಂತರ ಹೆಚ್ಚಿನ ಬಡ್ಡಿ ಸಮೇತ ಹಣ ಹಿಂದಿರುಗಿಸಿದ. ಅದೇ ಸಮಯದಲ್ಲಿ ಧರ್ಮಪ್ಪ ತನ್ನ ಹೆಂಡತಿಯ ತವರು ಮನೆಯವರು ಶಾಂತಮ್ಮನಿಗೆ ಅರಿಶಿನ ಕುಂಕುಮಕ್ಕೆಂದು ಕೊಟ್ಟಿದ್ದ ಖಾಲಿ ನಿವೇಶನದಲ್ಲಿದ್ದ ಚಿಕ್ಕಮನೆಯನ್ನು ಕೆಡವಿ ಆಧುನಿಕವಾಗಿ ವಿಶಾಲವಾದ ಮನೆಯೊಂದನ್ನು ಕಟ್ಟಿಸಿದ. ಇದೆಲ್ಲ ತನ್ನ ಮಗ ಹುಟ್ಟಿದ ದೆಸೆಯೆಂದು ಹೇಳಿಕೊಂಡು ಹಿಗ್ಗಿದ.
ಸುತ್ತಮುತ್ತಲಿನ ಹಳ್ಳಿಯ ಜನರಲ್ಲಿ ಅನೇಕರು ಧರ್ಮಪ್ಪನ ಮೂಲಕ ಹಣಕಾಸು ಸಂಸ್ಥೆಯಲ್ಲಿ ಹೆಚ್ಚು ಬಡ್ಡಿಯ ಆಸೆಯಿಂದ ಹಣ ಹೂಡಿದರು. ಚೆನ್ನಾಗಿ ಪ್ರವರ್ಧಮಾನಕ್ಕೆ ಬಂದು ಹೆಸರುವಾಸಿಯಾಗಿದ್ದ ಹಣಕಾಸು ಸಂಸ್ಥೆಯ ಮಾಲೀಕರು ಒಂದುದಿನ ರಾತ್ರೋರಾತ್ರಿ ಅಂಗಡಿ ಬಾಗಿಲು ಹಾಕಿಕೊಂಡು ಮಂಗಮಾಯವಾಗಿ ಬಿಟ್ಟರು. ಆ ಸಂಗತಿ ಕೇಳಿದ ತಕ್ಷಣ ಹಣ ಹೂಡಿದವರ ಗುಂಡಿಗೆ ಧಸಕ್ಕೆಂದಿತು. ಆದರೆ ತಾನೇ ಮಧ್ಯವರ್ತಿಯಾಗಿದ್ದ ಧರ್ಮಪ್ಪನ ಗುಂಡಿಗೆ ಖಾಯಂಮ್ಮಾಗಿ ನಿಂತೇ ಹೋಯಿತು. ಆಗ ಮಗ ದಯಾನಂದನಿಗೆ ಕೇವಲ ಐದುವರ್ಷ ಮಾತ್ರ. ಧರ್ಮಪ್ಪ ಜಾಮೀನಾಗಿದ್ದವರ ಹಣಕಾಸು ಹಿಂದಿರುಗಿಸುವಷ್ಟರಲ್ಲಿ ಪತಿ ಸಂಪಾದಿಸಿದ್ದ ಹಣ. ಅಂಗಡಿ, ಪತ್ನಿಯ ಮೈಮೇಲಿನ ಒಂದೆರಡು ಒಡವೆಗಳು ಕರಗಿಹೋದವು. ಶಾಂತಮ್ಮ ದಯಾನಂದ ಅನಾಥರಾದರು. ಬಹು ದಿನಗಳ ಬಯಕೆಯಂತೆ ಪಡೆದ ಮಗನನ್ನು ಮಡಿಲಲ್ಲಿ ಕಟ್ಟಿಕೊಂಡು ಶಾಂತಮ್ಮ ತನ್ನ ತವರಿನವರು ಕೊಟ್ಟ ಜಾಗದಲ್ಲಿ ಕಟ್ಟಿಸಿದ್ದ ಮನೆಗೆ ಬಂದಳು. ಆಕೆಯ ಅಣ್ಣ ಬಂದು ಕರೆದರೂ ಅವನಲ್ಲಿಗೆ ಹೋಗಲಿಲ್ಲ. ಬಹಳ ಸ್ವಾಭಿಮಾನಿ ಶಾಂತಮ್ಮ. ತಕ್ಕಮಟ್ಟಿಗೆ ಓದು ಬರಹ ಕಲಿತಿದ್ದಳು. ಊರಿನ ಮಹಿಳಾ ಸ್ವಸಹಾಯಕ ಸಂಘದಿಂದ ಸಾಲ ಪಡೆದುಕೊಂಡು ಎರಡು ಹಸುಗಳನ್ನು ಖರೀದಿಸಿದಳು. ಅವಳಿಗೆ ರೈತಾಪಿ ಕುಟುಂಬದ ಅನುಭವ ಇತ್ತು. ಹಾಗಾಗಿ ಹಸು ಸಾಕಾಣಿಕೆ ಬಗ್ಗೆ ಹೆಚ್ಚಿನ ಅರಿವಿತ್ತು. ಡೈರಿಗೆ ಹಾಲು ಹಾಕಿದಳು. ಹಾಗೂ ಮನೆಯ ಹಿಂದೆ ಇದ್ದ ಖಾಲಿಜಾಗದಲ್ಲಿ ತರಕಾರಿ ಬೆಳೆದಳು, ಎರೆಹುಳು ಗೊಬ್ಬರ ತಯಾರಿಸಿ ಮಾರಿದಳು.
ದಯಾನಂದ ತನ್ನಪ್ಪನು ಇತರರಿಗೆ ಅತಿಯಾಗಿ ಸಹಾಯ ಮಾಡಲು ಹೋಗಿ ಸಂಕಟದಲ್ಲಿ ಸಿಲುಕಿಕೊಂಡ ಕತೆಯನ್ನು ಅಮ್ಮನ ಬಾಯಿಂದ ಅನೇಕ ಬಾರಿ ಕೇಳುತ್ತಲೇ ಬೆಳೆದ. ಪ್ರೌಢಶಾಲೆಯ ವಿದ್ಯಾಭ್ಯಾಸ ಮುಗಿಸಿದ ನಂತರ ಮುಂದೆ ಓದಲು ಆಸಕ್ತಿಯಿಲ್ಲದ ದಯಾನಂದ ಪೋಲೀಸ್ ಇಲಾಖೆಯಲ್ಲಿ ತರಬೇತಿಗಾಗಿ ಅರ್ಜಿಹಾಕಿದ. ಆಯ್ಕೆಯಾದ ಅವನನ್ನು ರಾಯಚೂರಿನ ಪೋಲೀಸ್ ತರಬೇತಿ ಕೇಂದ್ರಕ್ಕೆ ಕಳುಹಿಸಿದರು. ತರಬೇತಿ ಮುಗಿಸಿದ ನಂತರ ಕಾನ್‌ಸ್ಟೇಬಲ್ ಆಗಿ ನೇಮಕಗೊಂಡ. ಬೆಂಗಳೂರಿನ ಸಮೀಪದ ಸುಂಕದಕಟ್ಟೆ ಸ್ಟೇಷನ್ನಿನಲ್ಲಿ ಕೆಲಸ. ಒಂದೆರಡು ವರ್ಷಗಳ ನಂತರ ತನ್ನಣ್ಣನ ಮಗಳನ್ನು ಅವನಿಗೆ ಮದುವೆ ಮಾಡಿಸಿ ಸುಧಾಳನ್ನು ಸೊಸೆಯಾಗಿ ಮನೆ ತುಂಬಿಸಿಕೊಂಡಳು ಶಾಂತಮ್ಮ. ಒಂದು ನೆಮ್ಮದಿಯ ಘಟ್ಟ ಮುಟ್ಟಿದಂತಾಯ್ತು.
ಕೆಲವು ವರ್ಷಗಳಾದರೂ ಸುಧಾ ತನ್ನ ಗಂಡ ಕೆಲಸ ಮಾಡುತ್ತಿದ್ದ ಊರಿಗೆ ಅತ್ತೆಯನ್ನು ಬಿಟ್ಟು ಹೋಗಲೇ ಇಲ್ಲ. ದಯಾನಂದ ದಂಪತಿಗಳಿಗೆ ಇಬ್ಬರು ಮಕ್ಕಳೂ ಆದರು. ಸುಧಾಳ ಹೆತ್ತವರು ಅದೇ ಊರಿನಲ್ಲಿದ್ದುದರಿಂಲೂ, ಅತ್ತೆಗೆ ಸಹಾಯಕಳಾಗಿ ಇರಲೂ ಕಾರಣ ಮಾಡಿಕೊಂಡು ತಾವರೇಕೆರೆಯಲ್ಲಿಯೇ ಇದ್ದಳು. ದಯಾನಂದನೇ ಸುಂಕದಕಟ್ಟೆಯಿಂದ ಓಡಾಡಿಕೊಂಡಿದ್ದನು. ಕೆಲವು ಕಾಲ ಹೀಗೇ ಕಳೆದು ಅವನಿಗೆ ತಾವರೇಕೆರೆ ಪೋಲೀಸ್ ಸ್ಟೇಷನ್ನಿಗೇ ವರ್ಗವಾಯಿತು. ಸುದ್ಧಿ ತಿಳಿದ ಅವನಿಗೆ ಕುಣಿದಾಡುವಷ್ಟು ಸಂತಸವಾಗಿತ್ತು. ಬೆಂಗಳೂರಿನ ಸುತ್ತಮುತ್ತಲಿನ ಸ್ಥಳಗಳಲ್ಲಿಯೇ ಏಳೆಂಟು ವರ್ಷ ಕೆಲಸ ಮಾಡುತ್ತಿದ್ದ ಅವನಿಗೆ ತಾನೊಂದು ಕಡೆ, ಸಂಸಾರವೊಂದು ಕಡೆ ಎಂದು ಹಲವು ಬಾರಿ ಅನ್ನಿಸುತ್ತಿತ್ತು. ಅಬ್ಬಾ ! ದೇವರಿಗೆ ಈಗಲಾದರೂ ನನ್ನ ಮೇಲೆ ಕರುಣೆ ಬಂತು ಎಂದುಕೊಂಡು ಗಂಟುಕೂಟೆ ಸಮೇತ ತನ್ನೂರಿಗೆ ಬಂದು ಕುಟುಂಬದವರನ್ನು ಸೇರಿಕೊಂಡ. ಅಮ್ಮ, ಹೆಂಡತಿ, ಮಕ್ಕಳೊಡನೆ ಆನಂದದಿಂದ ಕಾಲ ಕಳೆದುಹೋಗುತ್ತಿತ್ತು.
ಒಂದು ದಿನ ಎಂದಿನಂತೆ ಡ್ಯೂಟಿಗೆ ಹೋಗಿದ್ದಾಗ ಒಂದು ಕೊಲೆ ಕೇಸಿನ ಬಗ್ಗೆ ಕೊಲೆಯಾದವನ ಹೆಂಡತಿ ಕೊಟ್ಟ ದೂರನ್ನು ದಾಖಲಿಸಿಕೊಂಡು ಅದರ ಬಗ್ಗೆ ಸಂಬಂಧಪಟ್ಟ ಕೆಲವು ದಾಖಲಾತಿಗಳನ್ನು, ಪತ್ರಗಳನ್ನು ಜರೂರಾಗಿ ಬೆಂಗಳೂರು ಕೋರ್ಟಿನ ಮ್ಯಾಜಿಸ್ಟ್ರೇಟ್ ರವರ ಕಛೇರಿಗೆ ತಲುಪಿಸಬೇಕಾಗಿತ್ತು. ದಯಾನಂದನ ಮೇಲಧಿಕಾರಿಗಳಾದ ಇನ್‌ಸ್ಪೆಕ್ಟರ್ ಶ್ರೀಧರ್ ರವರು ಇವನನ್ನು ಕರೆದು “ನೋಡಿ ದಯಾನಂದ್, ಇವೆಲ್ಲ ಅರ್ಜೆಂಟಾಗಿ ಆಗಬೇಕಾದ ಕೆಲಸ. ಇದು ಸಕಾಲದಲ್ಲಿ ತಲುಪದಿದ್ದಲ್ಲಿ ಪ್ರತಿವಾದಿಗಳು ಸಾಕ್ಷಿ ನಾಶಪಡಿಸುವ ಎಲ್ಲ ಸಾಧ್ಯತೆಗಳೂ ಇವೆ. ನೀವು ನಾನು ಕಂಡಂತೆ ನಿಷ್ಠೆ, ಸಮಯ ಪ್ರಜ್ಞೆಯಿರುವ ಪ್ರಾಮಾಣಿಕ ಪೋಲೀಸ್. ಆದ್ದರಿಂದ ಈ ಕೆಲಸಕ್ಕೆ ನಿಮ್ಮನ್ನೇ ನೆಮಿಸುತ್ತಿದ್ದೇನೆ. ನನ್ನ ನಿರೀಕ್ಷೆಯಂತೆ ನಡೆದುಕೊಳ್ಳುತ್ತೀರೆಂಬ ನಂಬಿಕೆಯಿದೆ” ಎಂದು ಒಂದು ಸೀಲ್ ಮಾಡಿದ ಲಕೋಟೆಯನ್ನು ಅವನಿಗೆ ಕೊಟ್ಟರು. “ಆದಷ್ಟೂ ಬೇಗ ಇದನ್ನು ಮ್ಯಾಜಿಸ್ಟರೇಟರ ಕಛೇರಿಗೆ ತಲುಪಿಸಿ” ಎಂದು ಮತ್ತೊಮ್ಮೆ ಎಚ್ಚರಿಸಿದರು.
ದಯಾನಂದ ಮನೆಗೊಂದು ಫೋನ್ ಮಾಡಿ ವಿಷಯ ತಿಳಿಸಿ ವಾಪಸ್ಸು ಬರಲು ತಡವಾಗುತ್ತದೆಂದು ಹೇಳಿದನು. ತಕ್ಷಣವೇ ಬೆಂಗಳೂರಿಗೆ ತನ್ನ ಮೋಟಾರುಬೈಕಿನಲ್ಲಿ ಹೊರಟ. ಬೆಂಗಳೂರನ್ನು ಸಕಾಲದಲ್ಲಿ ತಲುಪಿದ. ಇನ್ನು ಮ್ಯಾಜಿಸ್ಟ್ರೇಟರ ಕಛೇರಿಯ ಹಾದಿ ಹಿಡಿದು ಹೋಗುತ್ತಿರುವಾಗ ರಸ್ತೆಯಲ್ಲಿ ಇವನ ಹಿಂದಿನಿಂದ ಬಂದ ಮೋಟಾರ್‌ಬೈಕ್ ಕರ್ಕಶ ಶಬ್ಧ ಮಾಡಿಕೊಂಡು ಅತಿವೇಗದಲ್ಲಿ ಇವನನ್ನು ಸವರಿಕೊಂಡಂತೆಯೇ ಮುಂದೆ ಸಾಗಿತು. “ ಅವ್ವಯ್ಯಾ ! ಇವನಿಗೆ ಏನು ಬಂದಿದೆಯೋ. ಮೈಮೇಲೆ ಪ್ರಜ್ಞೆಯಿಲ್ಲದಂತೆ ಗಾಡಿ ಓಡಿಸುತ್ತಿದ್ದಾನೆ. ಸೈಲೆನ್ಸರ್ ಬೇರೆ ಕಿತ್ತು ಹಾಕಿಕೊಂಡು ಭಯಂಕರ ಶಬ್ಧ ಮಾಡುತ್ತಿದ್ದಾನೆ” ಎಂದು ಶಾಪ ಹಾಕಿಕೊಂಡು ಮುಂದೆ ಸಾಗಿದ. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ರಸ್ತೆಯಲ್ಲಿ ಜನರೆಲ್ಲ ಗುಂಪುಗೂಡಿ ಯಾರೋ ಕೆಳಗೆ ಬಿದ್ದವರನ್ನು ನೋಡುತ್ತಿದ್ದುದು ಕಾಣಿಸಿತು. ಅದರಿಂದಾಗಿ ರಸ್ತೆಯಲ್ಲಿ ವಾಹನಗಳ ಓಡಾಟವೇ ನಿಂತಿತ್ತು. ಏನಾಗಿದೆಯೆಂದು ಹತ್ತಿರಕ್ಕೆ ಹೋದಾಗ ತನ್ನ ಹಿಂದಿನಿಂದ ಬಂದಿದ್ದ ಅದೇ ವ್ಯಕ್ತಿ ‘ಸ್ಕಿಡ್’ಆಗಿ ರಸ್ತೆಯಲ್ಲಿ ಬಿದ್ದಿದ್ದ. ತಲೆಗೆ ಪೆಟ್ಟಾಗಿ ಸ್ವಲ್ಪ ರಕ್ತ ಹರಿದಿತ್ತು. ಮೈಕೈಯಿಗೂ ಪೆಟ್ಟಾಗಿತ್ತು ಆತನಿಗೆ ಪ್ರಜ್ಞೆಯಿರಲಿಲ್ಲ. ತಕ್ಷಣ ತನ್ನ ಬೈಕನ್ನು ಅಂಗಡಿಯೊಂದರ ಮುಂದೆ ನಿಲ್ಲಿಸಿ ಅಂಗಡಿಯವನಿಗೆ ಹೇಳಿ ಮುಂದೆ ಹೋದ. ಅಂಗಡಿಯವನು ಇವನ ಪೋಲೀಸ್ ಡ್ರೆಸ್ ನೋಡಿ “ಆಯ್ತು ಸರ್” ಎಂದ. ಕೆಳಗೆ ಬಿದ್ದಿದ್ದವನು ದಾರಿಯಲ್ಲಿ ಓವರ್‌ಟೇಕ್ ಮಾಡಿದ್ದ ಹಲವರು “ಇವನು ನಮಗೆಲ್ಲಾ ಯಾವ ಸೀಮೆ ಬೈಕ್ ಓಡಿಸ್ತಿರ‍್ರೀ ಎಂದು ದುರಹಂಕಾರದಿಂದ ಮುಂದುವರಿದ. ಅವನಿಗೆ ಸರಿಯಾದ ಶಾಸ್ತಿಯಾಯಿತು” ಎಂದು ಹೇಳುತ್ತಿದ್ದರು. ಯಾರೂ ದಯಾನಂದನಿಗೆ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಲಿಲ್ಲ. ಆದರೆ ದಯಾನಂದನಿಗೆ ಕೆಳಗೆ ಬಿದ್ದಿದ್ದವನ ಪ್ರಾಣದ ಬಗ್ಗೆ ಮನುಷ್ಯತ್ವ ತೋರಬೇಕೆನ್ನಿಸಿತು. ತಾನೇ ಆಟೋ ಒಂದನ್ನು ಕರೆದು ಬಿದ್ದಿದ್ದ ವ್ಯಕ್ತಿಯನ್ನು ಎತ್ತಿಕೊಂಡು ಅದರಲ್ಲಿ ಕೂರಿಸಿ ಕರೆದುಕೊಂಡು ಹೊರಟನು. ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಡೆಂಟ್ ಕೇಸನ್ನು ನೋಡುವುದಿಲ್ಲವೆಂದು ನಿರಾಕರಿಸಿದರು. ಸರ್ಕಾರಿ ಆಸ್ಪತ್ರೆಯು ದೂರವಿದ್ದುದರಿಂದ ಅಲ್ಲಿಗೇ ಹೋಗಬೇಕಾಯ್ತು. ಅವನನ್ನು ಪರೀಕ್ಷಿಸಿದ ಎಮರ್ಜೆನ್ಸಿ ಡ್ಯೂಟಿ ಡಾಕ್ಟರ್ “ಸಮಯಕ್ಕೆ ಸರಿಯಾಗಿ ತಂದಿದ್ದೀರಿ ಸದ್ಯಕ್ಕೆ ಏನೂ ದೊಡ್ಡ ಪೆಟ್ಟಾಗಿಲ್ಲ. ನಂತರ ಪ್ರಜ್ಞೆ ಬರುತ್ತದೆ. ಅಲ್ಲಿಯವರೆಗೆ ಇಲ್ಲಿಯೇ ಇರಲಿ. ನಿಮ್ಮ ಅಡ್ರೆಸ್, ಫೋನ್ ನಂಬರ್ ಕೊಟ್ಟು ಹೋಗಿ” ಎಂದರು. ಅವನನ್ನು ಆಸ್ಪತ್ರೆಯಲ್ಲಿ ಸೇರಿಸಿ ಹೊರಬರುವಷ್ಟರಲ್ಲಿ ಕಚೇರಿಯ ಸಮಯ ಮುಗಿದಿತ್ತು.
ತಕ್ಷಣ ತನ್ನ ಕರ್ತವ್ಯ ಪ್ರಜ್ಞೆ ಜಾಗೃತವಾಗಿ ಹೇಗಾದರೂ ಕಾಗದ ಪತ್ರವನ್ನು ಮ್ಯಾಜಿಸ್ಟೇಟರಿಗೆ ತಲುಪಿಸಲೇ ಬೇಕೆಂದು ಅವರ ಮನೆಯ ವಿಳಾಸ ಪಡೆದು ಅಲ್ಲಿಗೇ ನಡೆದ. ಅಷ್ಟು ಹೊತ್ತಿಗೆ ತುಂಬಾ ತಡವಾಗಿ ರಾತ್ರಿಯಾಗಿಬಿಟ್ಟಿತು. ಅಂತೂ ಎಂಟುಗಂಟೆಗೆ ಅವರ ಮನೆಗೆ ತಲುಪಿದ. ಅಲ್ಲಿದ್ದ ಸೆಕ್ಯೂರಿಟಿಯವನು ಇವನ ಪೋಲೀಸ್ ಯೂನಿಫಾರಂ ನೋಡಿ ಒಳಕ್ಕೆ ಬಿಟ್ಟ. ಬಾಗಿಲು ತೆರೆದವರು ಸ್ವತಃ ಮ್ಯಾಜಿಸ್ಟ್ರೇಟರೇ. ಅವರಿಗೆ ಹೀಗೆ ಕೆದರಿದ ತಲೆ ಅಸ್ತವ್ಯಸ್ತವಾಗಿದ್ದ ಸಮವಸ್ತ್ರವನ್ನು ತೊಟ್ಟಿದ್ದ ದಯಾನಂದನನ್ನು ಕಂಡು ನಖಶಿಖಾಂತ ಕೋಪ ಬಂದಿತು. ತಾನು ಅತಿ ಜರೂರಾದ ಕಾಗದ ಪತ್ರವೊಂದನ್ನು ಅವರಿಗೆ ತಲುಪಿಸಲೋಸುಗ ಬಂದೆನೆಂದು ಹೇಳಿದ. ಅವರು “ನಿನ್ನ ಕೈಯಿಗೆ ಪತ್ರಗಳನ್ನು ಕೊಟ್ಟಾದ ಎಷ್ಟು ಗಂಟೆಯಾಗಿತ್ತು?” ಎಂದು ಕೇಳಿದರು. ಮಧ್ಯಾನ್ಹ ಒಂದು ಗಂಟೆಯಾಗಿತ್ತೆಂದು ಹೇಳಿ ತಾನು ಬರುವಾಗ ದಾರಿಯಲ್ಲಾದ ತೊಂದರೆಗಳ ಬಗ್ಗೆ ವಿವರಿಸಲು ತೊಡಗಿದ. ಮುಂದಿನ ಮಾತುಗಳನ್ನು ಅವರು ಕೇಳಿಸಿಕೊಳ್ಳಲೇ ಇಲ್ಲ. “ಅಷ್ಟು ಬೇಗ ಹೊರಟು ಈಗ ಬರುತ್ತಿದ್ದೀಯಾ? ಎಂದರೆ ನಿನಗೆ ಕರ್ತವ್ಯದ ಬಗ್ಗೆ ಎಳ್ಳಷ್ಟೂ ಗೌರವವಿಲ್ಲ. ಯು ಆರ್ ಸೊ ಕರ‍್ಲೆಸ್.” ಎನ್ನುತ್ತಾ ಬಾಯಿಗೆ ಬಂದಂತೆ ದಯಾನಂದನನ್ನು ಬೈದು. “ನಿನಗೆ ಸರಿಯಾದ ಪಾಠ ಕಲಿಸುತ್ತೇನೆ” ಎಂದು ಕಾಗದದ ಕವರ್ ಪಡೆದು ದಪ್ ಎಂದು ಬಾಗಿಲು ಮುಚ್ಚಿದರು. ದಯಾನಂದನಿಗೆ ಭೂಮಿಯೇ ಬಾಯ್ಬಿರಿದಂತೆ ಆಯಿತು. ಇನ್ನು ಇಸ್ನ್ ಪೆಕ್ಟರ್ ಏನು ಮಾಡುತ್ತಾರೋ ಎನ್ನುವ ಆತಂಕದಲ್ಲೇ ಊರಿನತ್ತ ನಡೆದ. ತುಂಬ ತಡವಾಗಿ ಸಪ್ಪೆ ಮುಖಹೊತ್ತು ಬಂದ ಗಂಡನನ್ನು ನೋಡಿ ಸುಧಾ ಗಾಬರಿಯಾದಳು. ಏನನ್ನೂ ಕೇಳದೇ ಮೈತೊಳೆದುಕೊಂಡು ಬಂದ ಗಂಡನಿಗೆ ಊಟಕ್ಕಿಟ್ಟಳು. ಮೌನವಾಗಿಯೇ ಉಂಡು ಮಲಗುವ ಕೋಣೆಗೆ ಹೋಗಿ ಬಿದ್ದುಕೊಂಡ.
ಮಾರನೆಯ ದಿನ ಡ್ಯೂಟಿಗೆ ಹೋಗುತ್ತಿದ್ದಂತೆಯೇ ಇನ್‌ಸ್ಪೆಕ್ಟರ್ ಶ್ರೀಧರ್ ದಯಾನಂದನ ಮೇಲೆ ಕಿಡಿಕಾರಿದರು. “ಏನಯ್ಯಾ, ನೀನು ಬಹಳ ಜವಾಬ್ದಾರಿಯ ಮನುಷ್ಯ ಅಂತ ನಿನ್ನನ್ನೇ ಬೆಂಗಳೂರಿಗೆ ಕಳುಹಿಸಿದರೆ ನೀನು ಅವರ ಆಫೀಸಿಗೆ ಸಂಜೆಯವರೆಗೂ ಕವರನ್ನು ತಲುಪಿಸಿಲ್ಲವಂತೆ. ನನಗೆ ಮೇಲಿನಿಂದ ಬೈಗಳು ಕೇಳುವಂತಾಯಿತು. ಸಾಲದ್ದಕ್ಕೆ ಮ್ಯಾಜಿಸ್ಟ್ರೇಟರು ನಿನ್ನ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲು ಮೆಸ್ಸೇಜ್ ಕಳುಹಿಸಿದ್ದಾರೆ. ನಿನ್ನನ್ನು ಕರ್ತವ್ಯದ ನಿರ್ಲಕ್ಷ್ಯದ ಕಾರಣಕ್ಕಾಗಿ ಈಗಿಂದೀಗಲೇ ಅಮಾನತ್ತು ಮಾಡಿದ್ದೇನೆ. ಇಲಾಖಾ ವಿಚಾರಣೆ ಮುಗಿದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು” ಎಂದು ಅವನಿಗೆ ಅಮಾನತ್ತು ಆದೇಶದ ಪತ್ರ ನೀಡಿದರು. ದಿಕ್ಕುತೋಚದ ದಯಾನಂದ ಬೆಂಗಳೂರಿನಲ್ಲಿ ಮ್ಯಾಜಿಸ್ಟ್ರೇಟ್ ಮನೆಗೆ ಹೋಗುವ ದಾರಿಯಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಕ್ಕೆ. “ನಿಮ್ಮಲ್ಲಿ ಇಂತಹ ಕಟ್ಟುಕತೆಗಳಿಗೇನೂ ಕಡಿಮೆಯಿಲ್ಲ. ವಿಚಾರಣೆ ಎದುರಿಸು ಅಲ್ಲಿ ಹೇಳು ಇವನ್ನೆಲ್ಲಾ” ಎಂದು ಅವನನ್ನು ಹೊರಕ್ಕೆ ಹೋಗಲು ಹೇಳಿದರು.
ದಯಾನಂದನಿಗೆ ಆಕಾಶವೇ ತಲೆಯಮೇಲೆ ಬಿದ್ದಂತಾಗಿ ಮನೆಗೆ ಹೋದ. ಮನೆಯಲ್ಲಿ ನಡೆದದ್ದೆಲ್ಲವನ್ನೂ ತಾಯಿಗೆ, ಹೆಂಡತಿಗೆ ಹೇಳಿದ. ಅವರಿಬ್ಬರೂ “ನಿಮ್ಮ ಪಾಡಿಗೆ ನೀವು ಹೋಗೋದು ಬಿಟ್ಟು ಯಾವೋನನ್ನೋ ಕಾಪಾಡಲು ಹೋಗಿ ನಿಮ್ಮ ತಲೆಯಮೇಲೆ ಕಲ್ಲು ಹಾಕಿಕೊಂಡಿರಿ.” ಎಂದು ಅತಂಕ ವ್ಯಕ್ತಪಡಿಸಿದರು. ನಾಲ್ಕು ತಿಂಗಳಾದರೂ ಇಲಾಖಾ ವಿಚಾರಣೆ ಪ್ರಾರಂಭವಾಗದೇ ಸಂಬಳವೂ ಇಲ್ಲ, ನೌಕರಿಯೂ ಇಲ್ಲದ ಸ್ಥಿತಿಯಲ್ಲಿರಬೇಕಾಯಿತು.
ದುರಾದೃಷ್ಟವೆಂಬಂತೆ ಅದೇ ಸಮಯದಲ್ಲಿ ದಯಾನಂದನ ದೊಡ್ಡ ಮಗನಿಗೆ ಮೆದುಳು ಜ್ವರ ವಕ್ರಿಸಿಕೊಂಡಿತು. ಆಸ್ಪತ್ರೆಯಲ್ಲಿ ಕೆಲವು ದಿನ ಚಿಕಿತ್ಸೆ ಕೊಟ್ಟ ನಂತರ. ಬೆಂಗಳೂರಿನಲ್ಲಿ ಯಾವುದಾದರೂ ದೊಡ್ಡ ಆಸ್ಪತ್ರೆಗೆ ಸೇರಿಸುವಂತೆ ಸಲಹೆ ನೀಡಿದರು. ಒಂದು ವಾರ ಆಸ್ಪತ್ರೆಗಾಗಿ ಅಲೆದದ್ದಾಯಿತು. ಅಪಾರವಾದ ದುಡ್ಡೂ ಖರ್ಚಾಯಿತು. ಸ್ನೇಹಿತರಿಂದ ಸಾಲಪಡೆದರೂ ಸಾಕಾಗಲಿಲ್ಲ. ಮಗ ಮಾತ್ರ ಗುಣವಾಗದೇ ಕೊನೆಯುಸಿರೆಳೆದ. ಮನೆಯೆಲ್ಲಾ ದುಃಖಸಾಗರದಲ್ಲಿ ಮುಳುಗಿತು. ಅಕ್ಕಪಕ್ಕದವರು “ನಿಮ್ಮಪ್ಪ ಊರಿನವರಿಗೆ ಉಪಕಾರ ಮಾಡಲು ಜಾಮೀನು ನೀಡಿ ಇದ್ದಬದ್ದುದನ್ನೆಲ್ಲಾ ಕಳೆದುಕೊಂಡ ಈಗ ನೀನು ಅವರ ಮಗ ಬೀದೀಲಿ ಹೋಗೋ ಮಾರೀನ ಮೈಮೇಲೆ ಹಾಕ್ಕೊಂಡು ಕೆಲಸಕ್ಕೂ ಸಂಚಕಾರ ತಂದುಕೊಂಡು, ಇದ್ದ ಮಗನನ್ನೂ ಕಳೆದುಕೊಂಡೆ.” ಎಂದು ತರಹೇವಾರಿ ವ್ಯಂಗ್ಯದ ಮಾತುಗಳನ್ನಾಡಿದರು.
ಸುಧಾಳ ಅಣ್ಣಂದಿರು ಮತ್ತು ತಾಯಿಯೂ “ಇವನಪ್ಪನ ಬುದ್ಧಿ ಗೊತ್ತಿದ್ದೂ ಬಾಂಧವ್ಯ ಉಳಿಯಲಿ ಅಂತ ಈ ಮನೆಗೆ ಹೆಣ್ಣು ಕೊಟ್ಟೆವು. ಈಗ ಅಳಿಯನ ನೌಕರಿ ಹೋದರೆ ನಮ್ಮ ಮಗಳಿಗೂ ಅವರ ಅತ್ತೆಯಂತೆ ಹಸು ಸಾಕಿ, ಬೆರಣಿ ತಟ್ಟುವುದೇ ಬರೆದಿದೆಯೋ ಏನೋ” ಎಂಬ ಮಾತುಗಳನ್ನಾಡಿದರು. ಅಲ್ಲದೆ ಆಗಿಂದಾಗ್ಗೆ ಫೋನ್ ಮಾಡಿ ತಲೆತಿನ್ನುತ್ತಿದ್ದರು. ಕಾಲಕ್ರಮೇಣ ಅದೇ ಅಭ್ಯಾಸವಾಗಿ ಮೌನಕ್ಕೆ ಶರಣಾದ ದಯಾನಂದ. ಅಂತೂ ಇಂತೂ ಅವನ ವಿರುದ್ಧದ ಇಲಾಖಾ ವಿಚಾರಣೆ ನಡೆಯಿತು. ಇವನು ಹೇಳಿದ ವಿವರಗಳನ್ನು ಅಧಿಕಾರಿಗಳು ಮತ್ತು ಸರ್ಕಾರದ ವಕೀಲರು ನಂಬಲಿಕ್ಕೆ ತಯಾರಾಗಲಿಲ್ಲ. ಇವನು ಕರ್ತವ್ಯಚ್ಯುತಿ ಎಸಗಿದ್ದಾನೆ ಎಂಬ ತೀರ್ಮಾನ ಗಟ್ಟಿಯಾಗತೊಡಗಿತು ಅದೇ ಯೋಚನೆಯಲ್ಲಿ ನಿರಾಶನಾಗಿ ಕೋರ್ಟಿನಿಂದ ಹಿಂದಿರುಗುತ್ತಿದ್ದಾಗ ದಾರಿಯಲ್ಲಿ ದಯಾನಂದ ಆ ದಿನ ಆಸ್ಪತ್ರೆಗೆ ಸೇರಿಸಿ ಬದುಕಿಸಿದ ಆ ಹುಡುಗನ ಭೇಟಿ ಅಕಸ್ಮತ್ತಾಗಿ ಆಯಿತು. ಅವನೇ ಮಾತನಾಡಿಸಿ ದಯಾನಂದನಿಗೆ ಅಪಾರ ಕೃತಜ್ಞತೆ ಅರ್ಪಿಸಿದ. “ನಿಮ್ಮಿಂದಾಗಿ ನಾನು ಬದುಕಿದ್ದೇನೆ, ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು” ಎಂದ. ಆಗ ದಯಾನಂದ ಆ ಘಟನೆಯಿಂದ ಅವನಿಗೆ ಉಂಟಾದ ಸಂಕಷ್ಟವನ್ನು ಹೇಳಿಕೊಂಡು ಇಲಾಖಾ ವಿಚಾರಣೆಯಲ್ಲಿ ತನ್ನ ಪರವಾಗಿ ಬಲವಾದ ಸಾಕ್ಷಿಯಿಲ್ಲದೆ ತಾನು ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಗೊಳಾಡಿದ. ಅದನ್ನು ಕೇಳಿದ ಆ ಹುಡುಗ ತಾನೇ ಅವನ ವಕೀಲರ ಬಳಿ ಬಂದು ತಾನು ಸಾಕ್ಷಿ ಹೇಳುವುದಾಗಿ ಮುಂದಾದ. ಅವನನ್ನು ಆದಿನ ಆಸ್ಪತ್ರೆಗೆ ಸೇರಿಸಿದವರು ಯಾರೆಂಬುದರ ದಾಖಲೆಯನ್ನು ಆಸ್ಪತ್ರೆಯಿಂದ ಒದಗಿಸಿದ. ಮಾರನೆಯ ದಿನ ಕೋರ್ಟಿಗೆ ಖುದ್ದಾಗಿ ಹಾಜರಾಗಿ “ದಯಾನಂದ ಬರಿಯ ಪೋಲೀಸರಾಗಿ ಅಲ್ಲ ಒಳ್ಳೆಯ ಮನುಷ್ಯರಾಗಿ ತಮ್ಮ ಕರ್ತವ್ಯ ಮೆರೆದಿದ್ದಾರೆ. ಅವರು ತಕ್ಷಣ ನನ್ನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸದೇ ಹೋಗಿದ್ದರೆ ನಾನಿಂದು ಬದುಕಿರುತ್ತಿರಲಿಲ್ಲ. ಅವರು ನನ್ನ ಪ್ರಾಣ ಕಾಪಾಡಿದ ಆಪದ್ಬಾಂಧವರು. ನನ್ನ ದೆಸೆಯಿಂದಾಗಿ ಅವರು ಮುಖ್ಯವಾದ ಇಲಾಖಾ ಪತ್ರಗಳನ್ನು ತಲುಪಿಸಲು ವಿಳಂಬವಾಗಿದೆ. ಅವರು ಕರ್ತವ್ಯಚ್ಯುತಿ ಎಸಗಿಲ್ಲ” ಎಂದು ಸಾಕ್ಷಿ ನುಡಿದ.
ಅವನ ವಕೀಲರು, ವಿವರಗಳನ್ನು ಕೇಳಿಸಿಕೊಂಡು ವಾಸ್ತವಾಂಶಗಳನ್ನು ಅರಿಯುವ ಪ್ರಯತ್ನವನ್ನು ದಯಾನಂದನ ಮೇಲಧಿಕಾರಿಗಳು ಮಾಡಲೇ ಇಲ್ಲ. ಇಲ್ಲಿ ಕರ್ತವ್ಯ ಲೋಪ ಆಗಿರುವುದು ಅಧಿಕಾರಿಗಳಿಂದಲೇ ಹೊರತು ಕಾನ್‌ಸ್ಟೇಬಲ್ ದಯಾನಂದರಿಂದ ಅಲ್ಲ. ಅನ್ಯಾಯವಾಗಿ ಒಬ್ಬ ನಿರಪರಾಧಿಗೆ ಕ್ರೂರ ಶಿಕ್ಷೆ ಕೊಟ್ಟು ಅವರನ್ನು ಅಮಾನತ್ತಿನಲ್ಲಿಟ್ಟು ತೊಂದರೆಕೊಟ್ಟ ಅಧಿಕಾರಿಗಳಿಗೆ ಸೂಕ್ತವಾದ ಎಚ್ಚರಿಕೆ ಕೊಟ್ಟು ದಯಾನಂದರವರ ಅಮಾನತ್ತನ್ನು ಕೂಡಲೇ ವಜಾಗೊಳಿಸಿ ಈ ನಾಲ್ಕು ತಿಂಗಳು ಅವರು ಕರ್ತವ್ಯದಲ್ಲಿದ್ದಾಗ ಲಭಿಸುತ್ತಿದ್ದ ಸಂಬಳ, ಸವಲತ್ತುಗಳನ್ನು ಕೊಡಿಸುವಂತೆ ಆದೇಶ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ಘನ ನ್ಯಾಯಾಲಯವು ಅದನ್ನು ಪುರಸ್ಕರಿಸಿತು. ಕೂಡಲೇ ದಯಾನಂದರ ಅಮಾನತ್ತನ್ನು ರದ್ದುಗೊಳಿಸಿ ಅವರಿಗೆ ಆ ಸಮಯದಲ್ಲಿ ಲಭಿಸಬೇಕಾಗಿದ್ದ ಸಂಬಳ, ಸವಲತ್ತನ್ನು ನೀಡಬೇಕೆಂದೂ, ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಸ್ತು ಆದೇಶಗಳನ್ನು ನೀಡುವ ಮೊದಲು ಕೂಲಂಕುಷ ವಿವರಗಳನ್ನು ಪರಿಶೀಲಿಸಬೇಕಾಗಿತ್ತೆಂಬ ಎಚ್ಚರಿಕೆಯ ಆದೇಶ ನೀಡಿತು. ಅದರಂತೆ ದಯಾನಂದ ಮತ್ತೆ ಕೆಲಸಕ್ಕೆ ಹೋಗಲಾರಂಭಿಸಿದ. ಆದರೆ ಮಗನನ್ನು ಕಳೆದುಕೊಂಡ ದು:ಖ ಮಾತ್ರ ಮಾಯದ ಗಾಯವಾಗಿ ಮನೆಯವರೆಲ್ಲರ ಮನಸ್ಸಿನಲ್ಲಿ ಉಳಿದೇ ಬಿಟ್ಟಿತು.
ಅಷ್ಟರಲ್ಲಿ ರೂಮಿನ ಬಾಗಿಲು ತಟ್ಟಿದಂತಾಯಿತು. ಆಲೋಚನೆಯ ಸುಳಿಯಿಂದ ದಯಾನಂದ ವಾಸ್ತವಕ್ಕೆ ಬಂದ. ಯಾರೆಂದು ನೋಡಿದರೆ ಮಗ ಚಿನ್ಮಯ. “ಪಪ್ಪಾ ನಾನು” ಎಂದ. “ಏಕೆ ಮರಿ ನಿದ್ರೆ ಬರಲಿಲ್ವೇ?”
“ಇಲ್ಲಾ ಪಪ್ಪಾ, ಐ ಯಾಮ್ ಸಾರೀ, ಇನ್ನೆಂದೂ ಹೀಗೆ ಮಾಡಲ್ಲ” ಎಂದು ತಂದೆಯನ್ನು ತಬ್ಬಿದ. ಆಗ ದಯಾನಂದ “ಇಲ್ಲಾ ಮಗೂ ನೀನು ಮಾಡಿದ್ದು ತಪ್ಪಲ್ಲ, ಆದರೆ ಸಮಯ, ಸಂದರ್ಭ ನೋಡಿಕೊಂಡು ಮುಂದುವರೆಯಬೇಕು. ಬಾ ಇವತ್ತು ನನ್ನ ಜೊತೆಯಲ್ಲೇ ಮಲಗಿಕೋ” ಎಂದು ಮಗನನ್ನು ಕರೆದುಕೊಂಡು ಹೋದ. ಮೊಮ್ಮಗನನ್ನು ಹಿಂಬಾಲಿಸಿಕೊಂಡು ಬಂದು ಬಾಗಿಲ ಬಳಿ ನಿಂತಿದ್ದ ಶಾಂತಮ್ಮ ಅಪ್ಪ ಮಕ್ಕಳ ಅನ್ಯೋನ್ಯತೆಯನ್ನು ಕಂಡು “ದೇವರೇ ತಲೆಮಾರನ್ನು ಕಾಯುವವನು ನೀನೇ ಕಣಪ್ಪಾ. ಸದಾ ನಮ್ಮನ್ನು ರಕ್ಷಿಸು” ಕೈ ಮೇಲೆತ್ತಿ ಮುಗಿದು ತನ್ನ ಸ್ವಸ್ಥಾನಕ್ಕೆ ಹಿಂತಿರುಗಿದಳು.
–ಬಿ.ಆರ್.ನಾಗರತ್ನ, ಮೈಸೂರು
ಪ್ರಕಟಣೆಗಾಗಿ ಗೆಳತಿ ಹೇಮಾರವರಿಗೆ ಧನ್ಯವಾದಗಳು..
ಬಹಳ ಸುಂದರ ಕಥೆ. ನಾಗರತ್ನ ಮೇಡಂ, ನಿಮ್ಮ ಕಥೆಗಳು ವಾಸ್ತವಕ್ಕೆ ಬಹಳ ಹತ್ತಿರವಿರುತ್ತವೆ ಹಾಗಾಗಿ ಓದುಗರನ್ನು ಸೆಳೆಯುತ್ತವೆ.
ನಿಮ್ಮ ಪ್ರೀತಿಯ ಪ್ರತಿ ಕ್ರಿಯೆಗೆ ಹೃದಯ ಧನ್ಯವಾದಗಳು ನಯನಮೇಡಂ
ದೈನಂದಿನ ಘಟನೆಗಳ ಸುತ್ತಮುತ್ತ ನೀವು ಹೆಣೆಯುವ ಸರಳ ಕಥೆಗಳು ಮನಕ್ಕಿಳಿಯುತ್ತವೆ… ಧನ್ಯವಾದಗಳು, ನಾಗರತ್ನ ಮೇಡಂ.
ಓದಿ ಪ್ರತಿ ಕ್ರಿಯಿಸಿದ ಸಹೃದಯರೇ ಧನ್ಯವಾದಗಳು
ಬಹಳ ಚೆನ್ನಾಗಿ ಬರೆದಿದ್ದೀರಿ ನಾಗರತ್ನ ಮೇಡಂ
ಧನ್ಯವಾದಗಳು ಓದುಗ ಸಹೃದಯರಿಗೆ
ಬಹಳ ಚೆನ್ನಾಗಿ ಬರೆದಿದ್ದೀರಿ ನಾಗರತ್ನ ಮೇಡಂ
ಧನ್ಯವಾದಗಳು ವನಿತಾ ಮೇಡಂ
ಬಹಳ ಸುಂದರವಾಗಿ ಬರೆದಿದ್ದೀರಿ ನಾಗರತ್ನ ಮೇಡಂ
ಸುಂದರವಾದ ಕಥಾಹಂದರದಲ್ಲಿ ಜೀವನದ ಪಾಠವೊಂದನ್ನು ಸರಳವಾಗಿ ಹೇಳಿಬಿಟ್ಟ ಕಥೆ ಸೊಗಸಾಗಿದೆ.
ನಿಮ್ಮ ಓದಿನ ಪ್ರತಿಕ್ರಿಯೆ ಗೆ ಧನ್ಯವಾದಗಳು ಪದ್ಮಾ ಮೇಡಂ