ಕಾವ್ಯ ಭಾಗವತ 47: ಬಲಿ-ವಾಮನ- 3

ಅಷ್ಟಮ ಸ್ಕಂದ – ಅಧ್ಯಾಯ -3
-: ಬಲಿ – ವಾಮನ -3:-
ಬಲೀಂದ್ರ ಹಸ್ತದಿಂ ದಾನಜಲ
ಪಡೆದ ವಾಮನನ ದೇಹ ಕ್ಷಣ ಕ್ಷಣದಿಂ
ವೃದ್ಧಿಸುತ್ತ ಭೂಮ್ಯಾಕಾಶ ಸ್ವರ್ಗ, ಸಮಸ್ತ ಲೋಕಗಳ
ಸಮುದ್ರಗಳ ವ್ಯಾಪಿಸಿ
ತನ್ನೊಂದು ಪಾದದಿಂ ಭೂಮಂಡಲವನ್ನೆಲ್ಲ ವ್ಯಾಪಿಸಿ
ಎರಡನೆಯ ಪಾದದಿಂ ಅಂತರಿಕ್ಷ ತಪೋಲೋಕವ ದಾಟಿ
ಸತ್ಯಲೋಕವ ಮುಟ್ಟಲು ಪಾದದ ನಖವು ತಗಲಿ
ಬ್ರಹ್ಮಾಂಡ ಕಟಾಹವು ಬೇಧಿಸಿ
ಅಪಾರ ಜಲರಾಶಿಯು ನುಗ್ಗಲು
ಚತುರ್ಮುಖ ಬ್ರಹ್ಮನು
ಕಮಂಡಲದಿ ಜಲವ ಸಂಗ್ರಹಿಸಿ
ಸಮಸ್ತ ಋಷಿ ಮುನಿಗಳೊಡನೆ
ಸಾಷ್ಟಾಂಗ ಪ್ರಣಾಮವಂಗೈದು
ತ್ರಿವಿಕ್ರಮ ಮೂರ್ತಿಯ ಪಾದಗಳ ತೊಳೆದು
ಪಾದೋದಕವ ಪ್ರೋಕ್ಷಿಸಿದಾಗ
ದೇವ ಮಂಡಲದಾದಿ ಲೋಕಗಳ ದಾಟಿ
ಭೂಲೋಕದಲಿ ಗಂಗಾ ಜೀವನದಿಯಾಗಿ
ಹರಿದು ಸಕಲ ಮನುಕುಲವ ಉದ್ಧರಿಸಿದ
ನಾರಾಯಣ ತನ್ನೆರಡು ಹೆಜ್ಜೆಗಳಿಂದ
ಭುಮ್ಯಾಕಾಶಗಳಳೆದು
ಮೂರನೆಯ ಹೆಜ್ಜೆಗಾಗಿ
ಸ್ಥಳವ ಬೇಡಿದಾಗ
ಬಲಿರಾಜ ಲೇಶಮಾತ್ರವೂ ಚಿಂತಿಸದೆ
ತನ್ನ ಶಿರವನ್ನೇ ಬಾಗಿಸಿ
ತಲೆಯೊಡ್ಡಿದಾಗ ವಾಮನನು ಸಂತುಷ್ಟನಾಗಿ
ಅವನಿಗೊಡ್ಡಿದ ವರುಣಪಾಶದಿಂ ಮುಕ್ತಮಾಡಿ
ದೈತ್ಯಪರಿವಾರದೊಡಗೂಡಿ ಬಲಿ
ಸ್ವರ್ಗಲೋಕಕ್ಕೆ ಸಮನಾದ
ಸುತಲಲೋಕಕ್ಕೆ ಪಯಣಿಸುವಂತೆ ಮಾಡಿ
ದೇವೇಂದ್ರಗೆ ಸ್ವರ್ಗಲೋಕ
ಬಲೀಂದ್ರಗೆ ಸುತಲಲೋಕವನಿತ್ತು
ಅನುಗ್ರಹಿಸಿದ ನಾರಾಯಣ
ತನ್ನವತಾರದ ಕಾರ್ಯ ಮುಗಿಸಿ
ವೈಕುಂಠಕೆ ಮರಳಿದ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=42777
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಪ್ರಕಟಿಸಿದ *ಸುರಹೊನ್ನೆ* ಗೆ ಧನ್ಯವಾದಗಳು.
ಬಲಿವಾಮನ ಪ್ರಸಂಗ.. ಕಾವ್ಯಭಾಗವತದಲ್ಲಿ ಬಹಳ ಸುಂದರ ವಾಗಿ ಮೂಡಿಬಂದಿದೆ.. ಸಾರ್..
Beautiful
ವಾಮನಾವತಾರದ ಕಥೆಯು ಬಹಳ ಚೆನ್ನಾಗಿ ಮೂಡಿಬಂದಿದೆ.
ಪುರಾಣ ಪ್ರಸಿದ್ಧ ಬಲಿ ಚಕ್ರವರ್ತಿಯ ಭಾಗವತದ ಕಥೆ ಸರಳ, ಸುಂದರ ರೂಪದಲ್ಲಿ ಮೂಡಿ ಬಂದಿದೆ.