ಕಾವ್ಯ ಭಾಗವತ 46: ಬಲಿ-ವಾಮನ- 2

ಅಷ್ಟಮ ಸ್ಕಂದ – ಅಧ್ಯಾಯ – 3:-
ಬಲಿ – ವಾಮನ – 2:-
ಜನನ ಮರಣಗಳ ಕೋಟಲೆಗೆ ಒಳಪಡದ
ನಾರಾಯಣ
ದೇವಕಾರ್ಯ ನಿರ್ವಹಿಸಲು
ಅದಿತಿಯ ಉದರದಿಂ
ವಾಮನನಾಗಿ ಜನಿಸಿದ ಪರಿ
ನೋಡು ನೋಡುತ್ತಿದ್ದಂತೆಯೇ
ಪಂಚವರ್ಷಗಳ ವಟುವಾಗಿ
ಸಕಲ ಉಪನಯನ ಸಂಸ್ಕಾರವನು ಪಡೆದು
ತನ್ನ ಅವತಾರದುದ್ಧೇಶ ಪೂರೈಸಲು
ಯಜ್ಞಾದೀಕ್ಷಿತನಾದ ಬಲಿಚಕ್ರವರ್ತಿಯ
ಯಜ್ಞಶಾಲೆಯ ಪ್ರವೇಶಿಸೆ
ಸಭೆಯಲ್ಲಿದ್ದ
ಬಲಿ ಚಕ್ರವರ್ತಿಯೂ ಬ್ರಾಹ್ಮಣೋತ್ತಮರೂ
ಚಕಿತರಾಗಿ
ಸೂರ್ಯಾಗ್ನಿಯನು ಮೀರುವ ತೇಜಸ್ಸಿನ
ವಟುವನ್ನು ನೋಡಿ
ಮೂಕವಿಸ್ಮಿತರಾಗೆ
ಬಲಿಯು ವಟುವಿಗೆ ನಮಸ್ಕರಿಸಿ
ಹಸ್ತಲಾಘವನಿತ್ತು
ಪೀಠವಂ ಸಮರ್ಪಿಸಿ
ಪಾದತೊಳೆದ ತೀರ್ಥವಂ
ಸಕಲರಿಗೂ ಪ್ರೋಕ್ಷಣೆಮಾಡಿ
ವಟುವಿನಾಗಮನದ ಉದ್ದೇಶವ
ತಿಳಿಸಲು ಬೇಡಿ
ತನ್ನೆಲ್ಲ ಭೂಮಿ, ಗೋವು, ಸಕಲೈಶ್ವರ್ಯಗಳ
ದಾನ ಮಾಡಿ ಧನ್ಯನಾಗುವ
ಇಚ್ಛೆ ಪ್ರಕಟಿಸೆ
ವಾಮನ ಸಂತುಷ್ಟನಾಗಿ
ಪ್ರಹ್ಲಾದರಾಜನ ವಂಶಸ್ಥನಾಗಿ ಬಲಿ
ಯೋಗ್ಯವಾಗಿಯೇ ನುಡಿದನೆಂದು ತಿಳಿಸಿ
ತನ್ನ ಪಾದದಳತೆಯ ಮೂರು ಹೆಜ್ಜೆ
ಭೂ ಪ್ರದೇಶವ ದಾನವಾಗಿ ನೀಡಬೇಕೆಂಬ
ಕೋರಿಕೆಯನಿಟ್ಟಾಗ
ಬಲಿ ತುಸು ಚಕಿತನಾದರೂ
ವಟುವಿಚ್ಛೆಗೆ ಸಮ್ಮತಿಸೆ
ದೈತ್ಯ ಗುರು ಶುಕ್ರಾಚಾರ್ಯ
ಬಲಿಯ ಬಳಿಗೈದು
ವಟುವಿನ ಈ ರೂಪ
ಮಹಾವಿಷ್ಣುವಿನ ಮತ್ತೊಂದವತಾರ,
ದೇವೇಂದ್ರಗೆ ಮತ್ತೆ
ಸ್ವಾರ್ಗಾಧಿಪತ್ಯವನೊಪ್ಪಿಸುವ ತಂತ್ರ
ಬಲೀಂದ್ರ, ನೀನಿದಕೆ ಬಲಿಯಾಗಬೇಡ
ಎಂಬ ಗುರು ವಾಕ್ಯವನೊಪ್ಪಿದರೂ
ಕೊಟ್ಟ ಮಾತಿಗೆ
ತಪ್ಪಿಲಿಚ್ಛಿಸದ ಬಲೀಂದ್ರ
ಕೈ ಕೆಳಗೆ ಮಾಡಿ ದೇಹಿಯಾಗಿ ಬಂದಿಹ
ಲಕ್ಮೀಪತಿಗೆ ಮೇಲ್ಗೈಯಾಗಿ ದಾನ ನೀಡುವ
ಸುಯೋಗವ ಬಿಡಲಿಚ್ಛಿಸದೆ
ಪತ್ನಿ ಸ್ವರ್ಣಕಳಶೋದಕದಿಂ
ದಾನಜಲವ ಬಿಡುತ್ತಿರೆ
ವಟುವಿಗೆ ದಾನ ಸ್ವೀಕರಿಸಲು
ವಿನಂತಿಸಿ
ಜಲವ ಸಮರ್ಪಿಸಿದ ಬಲಿ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=42715
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಪ್ರಕಟಿಸಿದ “ಸುರಹೊನ್ನೆ”ಗೆ ಧನ್ಯವಾದಗಳು.
ಕಾವ್ಯ ಭಾಗವತ ಓದಿಸಿಕೊಂಡುಹೋಯಿತು.. ಬಹಳ ಸುಂದರವಾಗಿ ಬರುತ್ತಿದೆ ಸಾರ್..
Nice
ಲಕ್ಷ್ಮೀಪತಿಗೆ ದಾನವ ನೀಡಿ ಬಲಿದಾನವೇ ಆದ ಬಲಿಯ ಕಥೆಯ ಕಾವ್ಯ ರೂಪ ಸುಂದರವಾಗಿ ಮೂಡಿ ಬಂದಿದೆ.
ವಾಮನಾವತಾರದ ಕಥೆಯು ಕಾವ್ಯ ಭಾಗವತದಲ್ಲಿ ರಸವತ್ತಾಗಿ ಮೂಡಿಬಂದಿದೆ. ಧನ್ಯವಾದಗಳು ಸರ್ ಅವರಿಗೆ.