ಅಸಾಧಾರಣ ಪ್ರತಿಭೆಯ ಸಂಶೋಧಕ ಯುವ ವಿಜ್ಞಾನಿ ಡಾ.ಕೆ. ರವಿರಾಂ

Share Button

ದೂರದ ಲಕ್ನೋವಿನಲ್ಲಿ ಕೇಂದ್ರ ಸರ್ಕಾರದ ಒಂದು ದೊಡ್ಡ ಸಂಸ್ಥೆಯಾಗಿ ಸಿಎಸ್ಐಆರ್-ಭಾರತೀಯ ಟಾಕ್ಸಿಕಾಲಜಿ ಸಂಶೋಧನಾ ಸಂಸ್ಥೆ ಇದೆ. ಅರ್ಥಾತ್ ಇಲ್ಲಿ ವಿಷವಿಜ್ಞಾನದ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ಒಬ್ಬ ಯುವ ವಿಜ್ಞಾನಿ ಇಲ್ಲಿ ವೃತ್ತಿಯಲ್ಲಿದ್ದಾರೆ. ಇವರ ಹೆಸರು ಡಾ. ರವಿರಾಂ ಕ್ರಿಸ್ಟಿಪಾಟಿ, ಪ್ರಿನ್ಸಿಪಲ್ (ಮುಖ್ಯ) ವಿಜ್ಞಾನಿ ಮತ್ತು ಸಹಪ್ರಾಧ್ಯಾಪಕರಾಗಿದ್ದಾರೆ.

ಡಾ.ರವಿರಾಂರವರ ವಯಸ್ಸು ನಲವತ್ತೈದು ದಾಟಿದೆ ಅಷ್ಟೇ. ತಂದೆಯವರು ಶ್ರೀ ಕೆ.ಸೀತಾರಾಮ ಶಾಸ್ತಿçಯವರು, ಇವರು ಕೇಂದ್ರ ಸರ್ಕಾರದ ಸೇವೆಯಲ್ಲಿ ಮೈಸೂರಿನಲ್ಲಿದ್ದರು. ತಾಯಿಯವರು ಶ್ರೀಮತಿ ಲಕ್ಷ್ಮೀನರಸಮ್ಮ.

ಡಾ.ರವಿರಾಂರವರ ಬಿ.ಎಸ್ಸಿ. ಪದವಿ ಮೈಸೂರಿನ ಯುವರಾಜಾ ಕಾಲೇಜಿನಲ್ಲಿ ಮತ್ತು ಸ್ನಾತಕೋತ್ತರ ಪದವಿ ಮಾನಸಗಂಗೋತ್ರಿಯ ಪ್ರಾಣಿ ವಿಜ್ಞಾನ ವಿಭಾಗದಲ್ಲಾಯಿತು (1996). ಎರಡನೆಯ ಪಡೆದರು. ಪಿಎಚ್.ಡಿ. ವ್ಯಾಸಂಗ ಪ್ರಾಣಿವಿಜ್ಞಾನ ವಿಭಾಗದ ತಳಿವಿಜ್ಞಾನ ವಿಭಾಗದಲ್ಲಾಯಿತು (2002). ಇವರು ಸಂಶೋಧನೆಯನ್ನು ಹಣ್ಣುನೊಣವಾದ ಡ್ರಸೋಫಿಲದಲ್ಲಿ ಮಾಡಿದ್ದಾರೆ. ಬಾಳೆಹಣ್ಣನ್ನು ಇಟ್ಟರೆ ಅದರಮೇಲೆ ಸಣ್ಣ ನೊಣ ಬರುತ್ತದೆ. ಇದೇ ಡ್ರಸೋಫಿಲ. ಈ ಹಣ್ಣು ನೊಣ ತಳಿ ವಿಜ್ಞಾನಿಗಳ ಕಣ್ಮಣಿ. ಲಕ್ಷಾಂತರ ಸಂಶೋಧನಾ ಲೇಖನಗಳಿಗೆ ಕಾರಣ ಈ ಪುಟ್ಟ ನೊಣ. ಡಾಕ್ಟರೇಟ್ ಪದವಿಯ ನಂತರ ಹೆಚ್ಚಿನ ವ್ಯಾಸಂಗಕ್ಕೆಂದು ಅಮೆರಿಕದ ಪ್ರಸಿದ್ಧ ಕಾರ್ನೆಲ್ ವಿಶ್ವವಿದ್ಯಾಲಯಕ್ಕೆ ರವಿರಾಂ ತೆರಳಿದರು. ಇಲ್ಲಿ 2002ರಿಂದ 2005ರವರೆಗೆ ಡಾಕ್ಟರೇಟ್ ನಂತರದ (ಪೋಸ್ಟ್ ಡಾಕ್ಟೋರಲ್) ಫೆಲೋ ಆಗಿದ್ದರು. ಆಗ ಮಾಡಿದ ಸಂಶೋಧನೆ ಡ್ರಸೋಫಿಲ ಮೆಲನೋಗಾಸ್ಟರ್ನಲ್ಲಿ (Drosophila melanogaster) identification and characterization. ಅನಂತರ ಕಾರ್ನೆಲ್ ವಿಶ್ವವಿದ್ಯಾಲಯದಲ್ಲೇ 2005-2007 ರ ವರೆಗೆ ಸಂಶೋಧಕರಾಗಿದ್ದರು. ಈ ಸಮಯದಲ್ಲಿ ಡಾ.ರವಿರಾಂರವರ ಸಂಶೋಧನೆಯ ವಿಷಯ Mechanistic understanding of SFP actions in Drosophila melanogaster.

ಸಾಧಾರಣವಾಗಿ ಅಮೆರಿಕೆಗೆ ಹೋದ ಯುವಕರು ಭಾರತಕ್ಕೆ ಮರಳುವುದಿಲ್ಲ. ಆದರೆ ಡಾ.ರವಿರಾಂ ಇದಕ್ಕೆ ಅಪವಾದ. ಈ ಯುವಕ ಭಾರತಕ್ಕೆ ಮರಳಿ ಬಂದು ಇಲ್ಲಿಯೇ ತಮ್ಮ ವೃತ್ತಿಯನ್ನು ಮುಂದುವರೆಸುತ್ತಿದ್ದಾರೆ. ತಂದೆ ತಾಯಿಗಳ ಪ್ರೀತಿ ಮತ್ತು ತಾಯ್ನಾಡಿನ ಪ್ರೀತಿ ಇವರನ್ನು ಮತ್ತೆ ಭಾರತಕ್ಕೆ ಕರೆದುಕೊಂಡು ಬಂದಿತು. ಇದು ಕೊಂಡಾಡುವ ವಿಷಯವೇ ಸರಿ.

ಭಾರತಕ್ಕೆ ಮರಳಿದ ನಂತರ ಲಕ್ನೋದಲ್ಲಿರುವ ಭಾರತೀಯ ವಿಷವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಆಯ್ಕೆಯಾದರು. ವಿಜ್ಞಾನಿಯಾಗಿ 2008 ರಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಿರಿಯ ವಿಜ್ಞಾನಿಯಾಗಿ 2012 ರಲ್ಲಿ ಆಯ್ಕೆಯಾದರು. ನಂತರ 2016 ರಿಂದ ಮುಖ್ಯ ವಿಜ್ಞಾನಿಯಾಗಿ (ಪ್ರಿನ್ಸಿಪಲ್ ಸೈಂಟಿಸ್ಟ್) ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಡಾ.ರವಿರಾಂಗೆ ಹಲವು ಪ್ರಶಸ್ತಿಗಳು ಸಂದಿವೆ. ಮೊದಲನೆಯದಾಗಿ ಎಂ.ಎಸ್ಸಿ. ಪದವಿಯಲ್ಲಿ ಎರಡನೆಯ ರ್‍ಯಾಂಕ್ ವಿಜೇತ. ಅಖಿಲಭಾರತ ಜೀವಕೋಶ ವಿಜ್ಞಾನ ಮತ್ತು ತಳಿ ವಿಜ್ಞಾನದ ಸಮಾವೇಶವು ಜನವರಿ 2001 ರಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಇದರಲ್ಲಿ ಇವರ ಸಂಶೋಧನಾ ಲೇಖನದ ಪ್ರಸ್ತುತಿಗೆ ಅತ್ಯುತ್ತಮವೆಂದು ಪ್ರೊ.ಎಂ.ಎಸ್. ಚನ್ನವೀರಯ್ಯ ಪ್ರಶಸ್ತಿಯು ದೊರಕಿದೆ.

ಡಾ.ಕೆ. ರವಿರಾಂ


ಮೈಸೂರಿನಲ್ಲಿ ಮಾರ್ಚ್ 2008 ರಲ್ಲಿ ನಾಲ್ಕನೆಯ ಡ್ರಸೋಫಿಲ ವಿಚಾರಗೋಷ್ಠಿ ಪ್ರಾಣಿ ವಿಜ್ಞಾನ ವಿಭಾಗ ಆಯೋಜಿಸಿತ್ತು. ಇದರ ಸಮಗ್ರ ಸಭೆಯ (Plenary speaker) ಭಾಷಣಕಾರರಾಗಿದ್ದರು. ಇದೇ ರೀತಿ ಸಮಗ್ರ ಸಭೆಯ ಭಾಷಣಕಾರರಾಗಿ ಜೀವಾಜಿ ವಿಶ್ವವಿದ್ಯಾಲಯ ಗ್ವಾಲಿಯರ್ನಲ್ಲಿ ಡಿಸೆಂಬರ್ 2019 ರಲ್ಲಿ ಭಾಗವಹಿಸಿದ್ದಾರೆ. ಈ ಸಭೆಯ ಆಯೋಜಕರು ಭಾರತದ ವಿಷವಿಜ್ಞಾನ ಸಂಘ.ಜನವರಿ 2012 ರಲ್ಲಿ ಸಿಎಸ್ಐಆರ್ನ ಯುವ ವಿಜ್ಞಾನಿಗಳ ಟ್ರಾವೆಲ್ ಪ್ರಶಸ್ತಿ ದೊರಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಸ್ಇಆರ್‍ಬಿ ಟ್ರಾವೆಲ್ ಪ್ರಶಸ್ತಿಯು ಜುಲೈ 2014 ರಲ್ಲಿ ನೀಡಲಾಗಿದೆ.

ಡಾ.ರವಿರಾಂರವರು ಆಹ್ವಾನಿತ ಉಪನ್ಯಾಸಗಳನ್ನು ಹಲವು ದೇಶಗಳಲ್ಲಿ ನೀಡಿದ್ದಾರೆ. ಸಿಇಎಸ್ಇ -2017, ಕುನ್ಮಿಂಗ್ ಚೀನಾ ಐಆರ್ಎಮ್ 2012, ಜೆರುಸೆಲಂ ಇಸ್ರೇಲ್, ಐಆರ್‍ಎಂ 2014 ಇಥಾಕ, ಯುಎಸ್ಎ, ಗ್ರೋನಿಂಜೆನ್, ನೆದರ್ಲ್ಯಾಂಡ್ಸ್ ಇವೇ ಆ ದೇಶಗಳು. ಆಗಸ್ಟ್ 2018 ರಲ್ಲಿ ಎರಡನೆಯ ಬಾರಿಗೆ ಎಸ್ಇಆರ್‍ಬಿ ಅಂತಾರಾಷ್ಟ್ರೀಯ ಟ್ರಾವೆಲ್ ಪ್ರಶಸ್ತಿಯು ದೊರಕಿದೆ. ಈ ಯುವ ವಿಜ್ಞಾನಿ ಎಂಟು ಯೋಜನೆಗಳನ್ನು ಕೈಗೊಂಡು, ಆರು ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ಇವು ಸಿಎಸ್ಟಿಆರ್, ಡಿಎಚ್ಆರ್, ಡಿಎಸ್ಟಿ ಮತ್ತು ಎಸ್ಇಆರ್ಬಿಗಳಿಂದ ಧನಸಹಾಯ ಪಡೆದಿವೆ. ಇವೆಲ್ಲದರ ಹಿಂದೆ ಸುಮಾರು ಇಪ್ಪತ್ತು ವರ್ಷಗಳ ತರಬೇತಿ ಮತ್ತು ಅನುಭವವಿದೆ.

ಡಾ.ರವಿರಾಂರವರ ಒಟ್ಟು ಪ್ರಕಟಿತ ಸಂಶೋಧನಾ ಲೇಖನಗಳು ಐವತ್ತರಷ್ಟು ಇವೆ. ಇತರರು ಉದಾಹರಿಸಿರುವುದು 4181 ಬಾರಿ ಇದೆ. ಹೆಚ್-ಇಂಡೆಕ್ಸ್ನಲ್ಲಿ 22 ಲೇಖನಗಳು ಇವೆ. ಮತ್ತು ಐ 1- ಇಂಡೆಕ್ಸ್ನಲ್ಲಿ 26 ಲೇಖನಗಳಿವೆ. ಸ್ನಾತಕೋತ್ತರ ಪದವಿಯ ನಂತರ ಅವಿರತವಾಗಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವುದರ ಫಲವಿದು.

ವೈಯಕ್ತಿಕವಾಗಿ ನಾನು ಬಲ್ಲ ಡಾ.ರವಿರಾಂ ಸರಳಜೀವಿ. ಛಲ ಹಿಡಿದು ಕೆಲಸ ಪೂರೈಸುವ ವಿಜ್ಞಾನಿ. ನಾವಿಬ್ಬರೂ ಮೈಸೂರಿನಲ್ಲಿ ಒಂದೇ ಪ್ರಯೋಗಾಲಯದಲ್ಲಿ ಸಂಶೋಧನೆ ನಡೆಸುತ್ತಿದ್ದೆವು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯೆನಿಸುತ್ತದೆ. ಕೆಲ ಸಮಯ ಸ್ವತಃ ತಾನೇ ಅಡಿಗೆ ಮಾಡಿ, ಊಟ ಮುಗಿಸಿ ಪ್ರಯೋಗಾಲಯಕ್ಕೆ ಬರುತ್ತಿದ್ದ ಈ ಯುವಕ ಮತ್ತೆ ಮನೆಗೆ ಹೋಗುತ್ತಿದ್ದುದ್ದು ತಡರಾತ್ರಿ. ಅಂದ ಹಾಗೆ ಅಕ್ಕಿರೊಟ್ಟಿ ಪ್ರಿಯ!.

ಡಾ.ರವಿರಾಂ ಪತ್ನಿ ಡಾ. ಅರುಣ ಕೂಡ ಲಕ್ನೋವಿನ ವಿಷವಿಜ್ಞಾನ ಸಂಸ್ಥೆಯಲ್ಲಿ ವಿಜ್ಞಾನಿ. ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ನನ್ನ ವಿದ್ಯಾರ್ಥಿನಿ. ಇವರು ಮಾನಸಗಂಗೋತ್ರಿಯ ಪ್ರಾಣಿವಿಜ್ಞಾನ ವಿಭಾಗದಲ್ಲಿ 1999ರಲ್ಲಿ ಎಂ.ಎಸ್ಸಿ ಪ್ರಥಮ ಸ್ಥಾನ ಗಳಿಸಿ ಎಚ್.ಕೆ.ಶಮಂತರತ್ನ ಚಿನ್ನದ ಪದಕ ಪಡೆದಿದ್ದಾರೆ. ಮತ್ತು ಪಿಎಚ್.ಡಿ. ವ್ಯಾಸಂಗ ಮಾಡಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು. ಇವರ ಸುಖೀ ಸಂಸಾರವನ್ನು ಲಕ್ನೋದಲ್ಲಿ ಭೇಟಿ ಮಾಡಿ ಬಂದಿದ್ದೇನೆ.

ಡಾ.ರವಿರಾಂ ಮತ್ತು ಡಾ.ಅರುಣ ಯುವವಿಜ್ಞಾನಿ ದಂಪತಿಗಳು ಕರ್ನಾಟಕಕ್ಕೇ ವಾಪಸ್ಸಾಗಿ ನಮ್ಮ ರಾಜ್ಯಕ್ಕೆ ಒಳ್ಳೆಯ ಹೆಸರು ತರಲಿ. ಸಂಶೋಧನೆಯಲ್ಲಿ ಉತ್ತುಂಗಕ್ಕೇರಲಿ. ಹಲವಾರು ಪ್ರಶಸ್ತಿಗಳು ಮತ್ತು ಸನ್ಮಾನಗಳನ್ನು ಪಡೆಯಲಿ ಎಂದು ತುಂಬು ಮನಸ್ಸಿನಿಂದ ಹಾರೈಸೋಣ.

ಡಾ.ಎಸ್.ಸುಧಾ

12 Responses

  1. S.sudha says:

    ಪ್ರಕಟಿಸಿದ್ದಕ್ಕೆ ಧನ್ಯವಾದಗಳು ಹೇಮಾಮಾಲಾ. ವಿಜ್ಞಾನಿಗಳ ಪ್ರಾಮುಖ್ಯತೆ ನಮ್ಮ ಅರಿವಿಗೆ ಬರುವುದಿಲ್ಲ. ಚಲನಚಿತ್ರ, ಕ್ರಿಕೆಟ್ , ರಾಜಕೀಯದವರನ್ನು ಬಿಟ್ಟರೆ ಇನ್ಯಾರಿಗೂ ಬೆಲೆಯಿಲ್ಲ.

  2. ವಿಜ್ಞಾನಿ ಗಳ ಪರಿಚಯಾತ್ಮಕ ಲೇಖನದ ಕೈಂಕರ್ಯ ತೆಗೆದುಕೊಂಡು ಮಾಡಿರುವ ನಿಮಗೆ ವಂದನೆಗಳು ಸುಧಾ ಮೇಡಂ

    • S.sudha says:

      ಥ್ಯಾಂಕ್ಸ್ ನಾಗರತ್ನ. ಇವರೆಲ್ಲರ ಬಗ್ಗೆ ಬರೆಯುವುದು ಹೆಮ್ಮೆಯ ವಿಷಯವಲ್ಲವೇ ಗೆಳತಿ. ವಿಜ್ಞಾನ ವಿಲ್ಲದೆ ಬದುಕು ಉಂಟೆ?

  3. ನಯನ ಬಜಕೂಡ್ಲು says:

    Nice

  4. ಪದ್ಮಾ ಆನಂದ್ says:

    ಯುವವಿಜ್ಞಾನಿಯ ಪರಿಚಯಾತ್ಮಕ ಲೇಖನ ಯುವಮನಸ್ಸುಗಳಿಗೆ ಸ್ಪೂರ್ತಿದಾಯಕವಾಗಿ, ಹೆಮ್ಮೆಯುಂಟಾಗುವಂತೆ ಮಾಡಿದೆ.

    • Anonymous says:

      ಪದ್ಮಾ ಧನ್ಯವಾದಗಳು. ಈ ದಿನ ಸಂಜೆ ರವಿರಾಮ್ ನಮ್ಮ ಮನೆಗೆ ಬರುವ ಪ್ರೋಗ್ರಾಮ್ ಇದೆ. ಗಂಡ ಹೆಂಡತಿ ಇಬ್ಬರು work shop ನಡೆಸಲು ಮೈಸೂರ್ ಗೆ ಬಂದಿದ್ದಾರೆ

  5. MANJURAJ H N says:

    ಪರಿಚಯವಾಯಿತು. ಅಭಿಮಾನ ಮೂಡಿತು. ಧನ್ಯವಾದಗಳು.

    ನಮ್ಮ ಗೆಳೆಯರಾದ ದಿನೇಶ್‌ ಉಡಪಿ (ಮಹಾರಾಣಿ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರಜ್ಞರು)
    ಅವರಿಗೆ ಇದರ ಬರೆಹದ ಕೊಂಡಿ (ಲಿಂಕ್)‌ ಕಳಿಸುವೆ.

  6. ಶಂಕರಿ ಶರ್ಮ says:

    ಯುವವಿಜ್ಞಾನಿ ದಂಪತಿ ಯಶೋಗಾಥೆಯು ನಮಗೆಲ್ಲರಿಗೂ ಹೆಮ್ಮೆ ಪಡುವಂತಿದೆ. ಅಪರೂಪದ ವ್ಯಕ್ತಿಪರಿಚಯ ಲೇಖನವು ಸೊಗಸಾಗಿದೆ ಮೇಡಂ.

    • Anonymous says:

      ಧನ್ಯವಾದಗಳು ಶಂಕರಿ ಮೇಡಂ. ನಿಮ್ಮ ಮೆಚ್ಚುಗೆಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: