ತಂಬಾಕು ಮುಕ್ತ ಬದುಕು ನಮ್ಮದಾಗಲಿ
ಪ್ರತೀವರ್ಷ ಮೇ 31 ನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ 1987 ರಿಂದ ಆಚರಿಸಲು ವಿಶ್ವ ಆರೋಗ್ಯ ಸಂಸ್ಥೆ ತನ್ನ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ. ಈ ವಿಶ್ವ ತಂಬಾಕು ರಹಿತ ದಿನದ ಆಚರಣೆಯ ಮೂಲ ಉದ್ದೇಶ ಆರೋಗ್ಯಕ್ಕೆ, ಪರಿಸರಕ್ಕೆ ಮಾರಕವಾಗಿ ಸಾವಿನ ಕೂಪಕ್ಕೆ ದೂಡುವ ತಂಬಾಕಿನ ಕರಾಳ ಮುಖದ ಪರಿಚಯ ಹಾಗೂ ಜನರಲ್ಲಿ ಇದರ ಸೇವನೆಯ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು. ತಂಬಾಕು ರಹಿತ ಜೀವನಕ್ಕೆ ಪ್ರಾಶಸ್ತ್ಯ ನೀಡಲು ಪ್ರೇರೇಪಿಸುವುದು ಆಗಿದೆ.
ತಂಬಾಕು ಇದೊಂದು ಜಾತಿಯ ಸಸ್ಯದ ಎಲೆ ಸುಮಾರು ಎಪ್ಪತ್ತಕ್ಕೂ ಹೆಚ್ಚು ತಂಬಾಕಿನ ಸಸ್ಯ ಜಾತಿಗಳಿವೆ . ಇದರಲ್ಲಿ ನಿಕೋಟಿನ್ ಎಂಬ ನರಗಳ ಉತ್ತೇಜಕಕಾರಿ ರಾಸಾಯನಿಕವಿರುತ್ತದೆ. ಫೋರ್ಚುಗೀಸರ ಕಾಲದಲ್ಲಿ ಹದಿನೇಳನೇ ಶತಮಾನದಲ್ಲಿ ಭಾರತಕ್ಕೆ ಬಂದ ಈ ತಂಬಾಕು ಎಲೆಗಳನ್ನು ಬೆಳೆಯಲು , ಉಪಯೋಗಿಸಲು ಭಾರತದಲ್ಲಿ ತಿರಸ್ಕಾರ ಹಾಗೂ ಬಹಿಷ್ಕಾರವಿತ್ತು. ಆದರೆ ಕಾಲಕ್ರಮೇಣ ಈ ಉತ್ತೇಜಕ ಕಾರಿ ಎಲೆಗಳು ವಿವಿಧ ರೀತಿಯಲ್ಲಿ ಜನರಿಗೆ ಹತ್ತಿರವಾಗುತ್ತ ಅಪಾಯಕಾರಿ ರೋಗಗಳನ್ನು ತಂದು ಪರಿಸರಕ್ಕೆ, ಆರೋಗ್ಯಕ್ಕೆ ವಿಪರೀತ ಹಾನಿ ಮಾಡುತ್ತಾ ಬಂದವು.
ತಂಬಾಕನ್ನು ಬೆಳೆಯಲು ಪ್ರತೀವರ್ಷ 35 ಲಕ್ಷ್ ಹೆಕ್ಟೇರ್ ಭೂಮಿ ನಾಶವಾಗುತ್ತದೆಯಂತೆ, ಹಾಗೂ ಪ್ರತೀವರ್ಷ ಎರಡು ಲಕ್ಷ ಹೆಕ್ಟೇರ್ ಅರಣ್ಯ ನಾಶ ಹಾಗೂಮಣ್ಣಿನ ಸವಕಳಿಗೆ ಕಾರಣವಾಗಿದೆ. ಎಂಭತ್ತು ಕೋಟಿ ಕೇಜಿಯಷ್ಟು ತ್ಯಾಜ್ಯವನ್ನು ಗಾಳಿ ಹಾಗೂ ನೀರಿನಲ್ಲಿ ಬಿಡುವ ಮೂಲಕ
ಪರಿಸರಕ್ಕೆ ಅತ್ಯಂತ ಹಾನಿಕಾರಕ ವಸ್ತುವಾಗಿದೆ. ಈ ತಂಬಾಕನ್ನು ಬೀಡಿ, ಸಿಗರೇಟ್, ಚುಟ್ಟ,ಜರ್ದಾ, ಪುಡಿಗಳ ರೂಪದಲ್ಲಿ ಎಲೆಯಡಿಕೆಯೊಂದಿಗೆ ಹಾಕಿ ಜಗಿಯುವುದು ಹೀಗೆ ಮುಂತಾದ ರೀತಿಯಲ್ಲಿ ಸೇವನೆ ಮಾಡಿ ನರಗಳನ್ನು ಉತ್ತೇಜಕ ಗೊಳಿಸುವ ಕ್ರಿಯೆಯಲ್ಲಿ ಮಾನವ ತೊಡಗಿರುವುದು ವಿಪರ್ಯಾಸ. ಇದು ಮನುಷ್ಯರ ಆರೋಗ್ಯಕ್ಕೆ ಅಪಾಯಕಾರಿ ಎಂಬ ಅಂಶ ಗೊತ್ತಿದ್ದೂ ಇದನ್ನು ಸೇವಿಸುವ, ಹಾಗೂ ಅರಿವಿರದೇ ಸೇವಿಸುವ ಜನರಲ್ಲಿ ಅರಿವು, ಕಾಳಜಿ ಮೂಡಿಸಲು ಮೇ 31 ರ ದಿನವನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ.
ತಂಬಾಕಿನಲ್ಲಿರುವ ನರಗಳನ್ನು ಉತ್ತೇಜಿಸುವ ನಿಕೋಟಿನ್ ನರಗಳಿಗೆ, ಹೃದಯ, ಶ್ವಾಸಕೋಶ, ಯಕೃತ್ತು, ಮೂ ತ್ರಕೋಶಗಳಿಗೆ ಅಪಾಯಕಾರಿ. ಇದರ ಸೇವನೆಯಿಂದ ಬಾಯಿ, ಗಂಟಲು, ಉದರ, ಶ್ವಾಸಕೋಶ ಮುಂತಾದವುಗಳ ಕ್ಯಾನ್ಸರ್ ಬರುತ್ತದೆ. ಇದರಲ್ಲಿ ಅಮಲು ತರುವ ಅಂಶವಿರುವುದರಿಂದ ವ್ಯಸನಿಗೆ ಅರಿವು ಇರದೇ ಅನೇಕ ಅಮಾನುಷ ಕೃತ್ಯಗಳಿಗೂ ಕಾರಣವಾದೀತು.
ಬೇಗನೆ ಹಣವನ್ನು ಶ್ರೀಮಂತಿಕೆಯನ್ನು ತಂದು ಕೊಡುವ ಈ ತಂಬಾಕು ಇದರ ಅಪಾಯಕಾರಿ ಅಂಶಗಳ ನಡುವೆಯೂ ವಾಣಿಜ್ಯ ಬೆಳೆಯಾಗಿ ವ್ಯಾಪಕವಾಗಿ ಬೆಳೆಯುವುದನ್ನು, ಬೀಡಿ, ಸಿಗರೇಟ್ ಗಳನ್ನಾಗಿ ಉತ್ಪಾದನೆಯಾಗುವುದನ್ನು ಕಂಡಾಗ ಮನುಷ್ಯನ ಬುದ್ಧಿಗೆ ಕೇವಲ ಹಣ ಮಾತ್ರ ಮುಖ್ಯ ಆದರೆ ಆರೋಗ್ಯ, ಆಯಸ್ಸು, ನೆಮ್ಮದಿಯ ಜೀವನ, ಇವೆಲ್ಲವೂ ನಗಣ್ಯ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ.
ಮನುಷ್ಯನ ಬದುಕಿಗೆ ಶುದ್ಧ ನೀರು, ಶುದ್ಧ ಗಾಳಿ, ಸತ್ವಯುತ ಆಹಾರ ಬೇಕೇ ವಿನಃ ಆರೋಗ್ಯವನ್ನು ಕೆಡಿಸಿ ನಶೆಯ ಲೋಕದಲ್ಲಿ ಬೀಳಿಸುವ ಇಂಥ ಅಮಲು ಪದಾರ್ಥಗಳಲ್ಲ. ಇದರಿಂದ ಆಗುವ ಹಾನಿಯ ಅರಿವಿದ್ದೂ ಇಂದು ಸುಶಿಕ್ಷಿತರು, ಅಶಿಕ್ಷಿತರು ಎಂಬ ಬೇಧ ವಿಲ್ಲದೇಇದರ ವ್ಯಸನಕ್ಕೆ
ತುತ್ತಾಗುವುದನ್ನು ಕಂಡಾಗ ಇದರ ಸಂಪೂರ್ಣ ನಿರ್ಮೂಲನೆ ಯಾವಾಗ ಎಂಬ ಆತಂಕ ಮೂಡುತ್ತದೆ.
ತಂಬಾಕನ್ನು ಜಗಿಯುವುದರಿಂದ, ಸೇದುವುದರಿಂದ ಮತ್ತು ಬಂದು ಸ್ವಲ್ಪ ಹೊತ್ತು ಜೀವನದಚಿಂತೆ ಕಳೆದಂತೆ ಅನಿಸಬಹುದು ಆದರೆ ಅದೇ ಸುಂದರ ಜೀವನವನ್ನು ಕೈಯ್ಯಾರೆ ಅನಾರೋಗ್ಯ ತರಿಸಿಕೊಂಡು ಸರ್ವನಾಶಮಾಡಿಕೊಂಡರೆ ಚಿಂತೆ ಬೆನ್ನಿಗೇ ಅಂಟಿಕೊಳ್ಳುತ್ತದೆ. ಇದರ ಪ್ರಜ್ಞೆ ಪ್ರತೀ ತಂಬಾಕು ಸೇವಿಸುವ ವ್ಯಕ್ತಿಯಲ್ಲಿ ಮೂಡಬೇಕು. ತಂಬಾಕು ಅಥವಾ ಅದರ ಉತ್ಪನ್ನಗಳಾದ ಬೀಡಿ, ಸಿಗರೇಟು ಕೇವಲ ವ್ಯಸನಿಗಳಿಗೆ ಮಾತ್ರವಲ್ಲ ಅದರಿಂದ ಹೊರಡುವ ಧೂಮ ಕಿಲೋಮೀಟರ್ ದೂರದಲ್ಲಿರುವ ವ್ಯಕ್ತಿಗಳ ಆರೋಗ್ಯದ ಮೇಲೆಯೂ ಕೆಟ್ಡ ಪರಿಣಾಮ ಬೀರುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರತೀವರ್ಷ ತಂಬಾಕು ರಹಿತ ದಿನದ ಆಚರಣೆಯ ಮಾಡಲು ಸದಸ್ಸ್ಯ ರಾಷ್ಟ್ರಗಳಿಗೆ ಆದೇಶಿಸಿದ್ದರೂ ಆಚರಣೆ ..ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿದೆ. ಕಾರಣ ಸೇದುವ ಜಗಿಯುವ ಪ್ರಮಾಣ ಹೆಚ್ಚಾಗುತ್ತಿದ್ದುದರಿಂದ ಇದರಿಂದ ಕ್ರಮೇಣ ರೋಗಿಗಳ ಸಂಖ್ಯೆ
ಗಣನೀಯವಾಗಿ ಹೆಚ್ಚುತ್ತಲೇಇದೆ. ಪ್ರತಿದಿನವೂ ತಂಬಾಕು ರಹಿತ ದಿನವಾಗಿ ಕಾರ್ಯರೂಪಕ್ಕೆ ಬರಬೇಕೆ ವಿನಃ ವರ್ಷದಲ್ಲಿ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ತಂಬಾಕು ಒಂದೆಡೆ ಬೆಳೆಯುವ ಬೆಳೆಗಾರನ ಬದುಕಿಗೆ ಆಧಾರವಾದಂತೆ ಅದೇ ಕ್ಷಣದಲ್ಲಿ ಇನ್ನೆಷ್ಟೋ ಜನರನ್ನು , ಅವರ ಕುಟುಂಬಗಳನ್ನು, ಸಾವಿನ ದವಡೆಗೆ ತಳ್ಳುವ ಕೆಲಸ ಮಾಡುತ್ತಿರುವಾಗ ತಂಬಾಕನ್ನು ಸೇವಿಸದೇ ಆರೋಗ್ಯದಿಂದ ಇರುವೆಡೆ ಜನರು ಗಮನ ಹರಿಸಬೇಕು.
ದೇಶದ ಸರ್ವತೋಮುಖ ಅಭಿವೃದ್ಧಿ ಇಂದಿನ ಯುವ ಶಕ್ತಿಯ ಮೇಲೆ ನಿಂತಿದೆ. ಯುವಕರು ಆರೋಗ್ಯಕರವಾಗಿ, ಸದೃಢರಾಗಿ, ಸದ್ಗುಣಿಗಳು, ಸುಜ್ಞಾನಿಗಳೂ ಆದಾಗ ಮಾತ್ರ ಆ ದೇಶ ಎಲ್ಲರೀತಿಯಲ್ಲೂ ಮುನ್ನಡೆ ಸಾಧಿಸುತ್ತದೆ. ಯುವಜನತೆ ಈ ತಂಬಾಕಿನ ಉತ್ಪನ್ನಗಳ ದಾಸರಾಗುತ್ತಿರುವುದು ಕಳವಳಕಾರಿ ಹಾಗೂ ಖೇದಕರ. ಹಾಗೂ ತಂಬಾಕಿನ ಅತೀ ಜನಪ್ರಿಯ ರೂಪವನ್ನು ಹೊಂದಿದ ಸಿಗರೇಟ್ ನ್ನು ಸೇದುವುದನ್ನು ಒಂದು ಫ್ಯಾಶನ್ ತರ ಭಾವಿಸಿದ ಯುವ ಶಕ್ತಿ ಈ ಧೂಮಪಾನದಿಂದ ತಮ್ಮ ಬದುಕನ್ನೇ ಬೂದಿಯಾಗಿಸಿಕೊಳ್ಳುವ ಹಂತಕ್ಕೆ ತಲುಪುತ್ತಿರುವುದನ್ನು ವಿವೇಚನೆಯಿಂದ ತಪ್ಪಿಸಬೇಕಾದ ಅನಿವಾರ್ಯತೆಯಿದೆ.
ಎಷ್ಟೇ ವಾಣಿಜ್ಯಾತ್ಮಕವಾಗಿದ್ದರೂ ತಕ್ಕಡಿಯಲ್ಲಿ ಹಣ ಹಾಗೂ ಆರೋಗ್ಯಗಳನ್ನು ತೂಕ ಮಾಡಿದಾಗ ಆರೋಗ್ಯದ ಅಗತ್ಯತೆಯ ತೂಕ ಹೆಚ್ಚಿದೆ ಹಾಗಾಗಿ ನಮ್ಮ ಪರಿಸರ, ಹಳ್ಳಿ ಪಟ್ಟಣ, ನಗರ, ತಾಲೂಕು ಜಿಲ್ಲೆ ರಾಜ್ಯ, ದೇಶದಲ್ಲಿತಂಬಾಕನ್ನು ಬೆಳೆಯದೇ, ಬಳಸದೇ ಆರೋಗ್ಯದಾಯಕವಾಗಿ ಬದುಕೋಣ ಅಲ್ಲವೆ?
ವಿಶ್ವ ತಂಬಾಕು ಮುಕ್ತವಾಗಬೇಕಾದರೆ ಅದನ್ನು ತಿನ್ನಬೇಕು , ಸೇದಬೇಕು ಎಂಬ ಮನಸ್ಥಿತಿಯಿಂದ ಹೊರಬರಬೇಕು. ದೃಢಮನಸ್ಕರಾಗಿ ಈಗಾಗಲೇ ಅದರ ಚಟಕ್ಕೆ ಅಂಟಿಕೊಂಡವರು ಅದನ್ನು ತ್ಯಜಿಸಬೇಕು. ಮನುಷ್ಯರಲ್ಲಿ ಈ ಕುರಿತು ಜಾಗ್ರತಿ ಮೂಡಿ ಅನಾಹುತಗಳಬಗ್ಗೆ ತಿಳುವಳಿಕೆ ಬಂದಾಗ, ಜೊತೆಗೆ ಈ ನಶಾಯುಕ್ತ, ಹಾನಿಕಾರಕ ಪದಾರ್ಥಗಳನ್ನು ವಾಣಿಜ್ಯಾತ್ಮಕವಾಗಿ ಹಣಗಳಿಸಲೋಸುಗ ಬೆಳೆಯುವ, ಉತ್ಪಾದಿಸುವುದಕ್ಕೆ ಕಡಿವಾಣ ಬೀಳಬೇಕು. ಅಲ್ಲದೇ ಈ ಪದಾರ್ಥಗಳಿಗೆ ಗ್ರಾಹಕರು ಕಡಿಮೆಯಾದಾಗ, ಗ್ರಾಹಕರೇ ಇಲ್ಲದಾಗ ಹಾಗೂ ಜನರ ಹೃದಯದಲ್ಲಿ ಎಚ್ಚರಿಕೆಯ ಕರೆಗಂಟೆ ಬಾರಿಸಿದಾಗ ಮಾತ್ರ ತಂಬಾಕು ಮುಕ್ತ ದೇಶವನ್ನು ಕಟ್ಟಬಹುದು.
ತಂಬಾಕುರಹಿತ ನಾಡನ್ನುಕಟ್ಟೋಣ!
–-ಶುಭಲಕ್ಷ್ಮಿ ಆರ್ ನಾಯಕ
ತಂಬಾಕಿನ ಬಗ್ಗೆ ಬರೆದಿರುವ ಲೇಖನ ಉಪಯುಕ್ತ ಹಾಗೂ ಸಾಂದರ್ಬಿಕವಾಗಿದೆ ಮೇಡಂ
ಮಾಹಿತಿಪೂರ್ಣ ಲೇಖನ
ಬೆಳೆಯುವವರಿಗೆ ಆರ್ಥಿಕ ಲಾಭ; ಸೇದುವವರಿಗೆ ಮಾನಸಿಕ ಐಬ !
ಏನು ಮಾಡೋದು.
ಈಗ ಪರವಾಗಿಲ್ಲ ಎಂದುಕೊಂಡರೆ ಹೊಸಬರು ಎಂಟ್ರಿ ಆಗುತ್ತಿದ್ದಾರೆ.
ಹೊಗೆ ಬಿಟ್ಟವರು ಹೋಗೇ ಬಿಟ್ಟರು; ಅವರು ಸೇದಿ ಬಿಟ್ಟ ಹೊಗೆಯನು
ಕುಡಿದು ನಾವೂ ಛೆ! ಎಂಥ ದುರ್ವ್ಯಸನ!!
ನಿಮ್ಮ ಬರೆಹವು ಆಮೂಲಾಗ್ರ ಜಾಲಾಡಿದೆ. ಧನ್ಯವಾದಗಳು.
ತಂಬಾಕು ಮತ್ತು ಮದ್ಯ ಅನಾರೋಗ್ಯಕರವೆಂದು ತಿಳಿದರೂ ಸರಕಾರ ಇವೆರಡನ್ನೂ ಪೂರ್ತಿಯಾಗಿ ಯಾಕೆ ನಿರ್ಬಂಧಿಸುತ್ತಿಲ್ಲ ಎಂಬುದು ಇನ್ನೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ!! ಇಂತಹ ಮಾರಕ ವ್ಯಸನದ ವಸ್ತುಗಳೇ ಸರಕಾರದ ಬೊಕ್ಕಸ ತುಂಬಿಸುತ್ತಿರುವುದು ಇನ್ನೊಂದು ವಿಪರ್ಯಾಸ! ಅಂತೂ, ಲೇಖನವು ನಮ್ಮನ್ನು ಚಿಂತನೆಗೆ ಹಚ್ಚುವಂತಿದೆ.
ಸಂದರ್ಭೋಚಿತ ಮಾಹಿತಿಪೂರ್ಣ ಲೇಖನ ಚೆನ್ನಾಗಿ ಮೂಡಿ ಬಂದಿದೆ.