ದಿನ 4
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಯಥಾ ಪ್ರಕಾರ ಬೆಳಗಿನ ಕಾರ್ಯಕ್ರಮ, ಬೆಳಗಿನ ಉಪಹಾರ ಮುಗಿಸಿ, ಲಗೇಜ್ ಅನ್ನು ಬಸ್ಸಿಗೆ ತುಂಬಿಸಿ, ಡೋವರ್ ಪೋರ್ಟ್ ಕಡೆಗೆ ನಮ್ಮ ಹೊರಟೆವು. . ಲಂಡನ್ ನಗರದಿಂದ ದಕ್ಷಿಣ ದಿಕ್ಕಿಗಿರುವ ಡೋವರ್ ಪೋರ್ಟ್ 100 ಕಿ ಮಿ, ದಾರಿ. ಉದ್ಧಕ್ಕೂ ಏನೂ ವಿಶೇಷತೆ ಇರಲಿಲ್ಲ. ನಮ್ಮ ದೇಶದಲ್ಲಿ ಇದ್ದಂತೆ ಅಲ್ಲಿಯೂ ಗಿಡ ಮರ. ಸುಮಾರು ಎರಡು ಗಂಟೆಗಳ ಪ್ರಯಾಣದ ನಂತರ ನಮ್ಮ ಬಸ್ಸು ಒಂದು ಗ್ಯಾಸ್ ಸ್ಟೇಷನ್ ಹತ್ತಿರ ನಿಂತಿತು. ನಮ್ಮ ಗೈಡ್ ಪ್ರಕಾರ, ನಾವು ಡೋವರ್ ಪೋರ್ಟನ್ನು ನಿಗದಿತ ಸಮಯಕ್ಕಿಂತ ಮೊದಲೇ ಮುಟ್ಟುವ ಸಾಧ್ಯತೆ ಇದ್ದುದರಿಂದ, ಒಂದು ಗಂಟೆ ಟೈಂ ಪಾಸಿಗೆ ಅಂತ ಈ ಗ್ಯಾಸ್ ಸ್ಟೇಷನ್ ಬಳಿ ನಿಲ್ಲಿಸಿದರು. ಕಾಫೀ, ಟೀ, ಸ್ನ್ಯಾಕ್ಸ, ವಿ೦ಡೋ ಶಾಪಿ೦ಗ್, ವಾಷ್ರೂ೦ ಕಾರ್ಯಕ್ರಮ ಗಳ ನಂತರ ನಮ್ಮ ಪ್ರಯಾಣ ಮುಂದುವರೆದು, ಪೋರ್ಟ್ ಏರಿಯಾ ತಲುಪಿದೆವು. ಅಲ್ಲಿ ನಮ್ಮ ಗೈಡ್ ನಮಗೆಲ್ಲ ಸೂಚನೆ ಕೊಡುತ್ತಾ ಮೊದಲು ಸರತಿ ಸಾಲಿನಲ್ಲಿ, ನಿಶಬ್ದವಾಗಿ ತಮ್ಮ ತಮ್ಮ ಪಾಸ್ಪೋರ್ಟ್ ಗಳನ್ನು ಕೈಯಲ್ಲಿ ಹಿಡಿದು ಬರಬೇಕೆಂದೂ, ಅದು ಇಮಿಗ್ರೇಶನ್ ಆಫೀಸ್ ಎಂದೂ, ಅಲ್ಲಿ ಸೆಕ್ಯುರಿಟಿ ಚೆಕ್ ಇರುವುದಾಗಿ ತಿಳಿಸಿದರು. ನಾವು ಇಂಗ್ಲೆಂಡ್ ದೇಶದಿಂದ ಹೊರ ನಡೆಯುತ್ತಿರುವ ಕುರುಹಾಗಿ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟು ನಮ್ಮ ಪಾಸ್ಪೋರ್ಟ್/ವೀಸಾ ಗಳಲ್ಲಿ ಇಮ್ಮಿಗ್ರೇಶನ್ಆಫೀಸ್ನವರ ಸೀಲ್ಹೊಡೆಸಿಕೊಂಡು, ಮತ್ತೆ ಬಸ್ಸಲ್ಲಿ ಬಂದು ಕುಳಿತೆವು.
ನಂತರ ನಮ್ಮ ಬಸ್ಸು ನಿಗದಿತ ಸ್ಥಳದಲ್ಲಿ ನಮ್ಮ ಸರದಿಗಾಗಿ ಕಾಯುತ್ತಾ ನಿಂತಿತು. ಆ ಸಮಯದಲ್ಲಿ ನಮ್ಮ ಗೈಡ್ ನಮಗೆ ಪ್ಯಾಕ್ಡ್ ಫುಡ್ ಪೊಟ್ಟಣಗಳನ್ನು ಕೊಟ್ಟು, ಅಲ್ಲೇ ಪಕ್ಕದಲ್ಲಿ ಕಾಣುತ್ತಿರುವ ಕಟ್ಟಡದ ಹತ್ತಿರ ಕುಳಿತುಕೊಳ್ಳಲು ಜಾಗವೂ ಇದ್ದು, ವಾಷ್ರೂ೦ ವ್ಯವಸ್ಥೆಯೂ ಇರುವುದರಿಂದ, ಅಲ್ಲಿ ಹೋಗಿ ತಮ್ಮ ವಾಷ್ರೂಮ್ ಕೆಲಸ ಮುಗಿಸಿ, ಅಲ್ಲೇ ಊಟವನ್ನೂ ಮುಗಿಸಿಕೊಂಡು ಬರಬೇಕೆಂದು ತಿಳಿಸಿದರು. ಎಲ್ಲಾ ಕಾರ್ಯಕ್ರಮ ಮುಗಿಸಿಕೊಂಡು ಬಸ್ಸಿನ ಬಳಿ ಬಂದ ನಂತರ ನಮ್ಮ ಗೈಡ್,ಬಸ್ ಪೂರ್ತಿ ಹಡಗಿನಲ್ಲಿ ಹೋಗುವುದಾಗಿಯೂ, ಆ ಹಡಗಿನಲ್ಲಿ ಬಸ್ ನಿಲ್ಲುವ ಜಾಗವನ್ನು ನೆನಪಿಟ್ಟುಕೊಳ್ಳಬೇಕೆಂದೂ, ನಂತರ ಹಡಗಿನ ಮೇಲ್ಭಾಗಕ್ಕೆ ಹೋಗಿ ಪ್ರಯಾಣ ಮುಗಿಯುವವರೆಗೂ ಎಲ್ಲಿ ಬೇಕೋ ಅಲ್ಲಿ ಕಾಲ ಕಳೆದು, ಪ್ರಯಾಣ ಮುಗಿದಾಗ ಬಸ್ಸಿನ ಬಳಿ ಬರಬೇಕೆಂದು ತಿಳಿಸಿದರು. ನಾವೆಲ್ಲರೂ ಬಸ್ಸಿನಿಂದ ಇಳಿದು ನಮ್ಮ ಗೈಡನ್ನು ಹಿಂಬಾಲಿಸಿಕೊಂಡು ಹೋದೆವು. ಹಡಗಿನ ಮೇಲ್ಭಾಗಕ್ಕೆ ಹೋದಾಗ ಅಲ್ಲಿ ರೆಸ್ಟೋರೆಂಟ್ ಇದ್ದು ಕುಳಿತುಕೊಳ್ಳಲು ಬೇಕಾದಷ್ಟು ಸ್ಥಳದ ಜೊತೆಗೆ, ಕಾಫಿ ಟೀ ಸ್ನಾಕ್ಸ್, ಕೂಲ್ ಡ್ರಿಂಕ್ಸ್ ಗಳು ಸಹ ಲಭ್ಯವಿದ್ದವು. ಯಾರ್ಯಾರಿಗೆ ಹಣ ಖರ್ಚು ಮಾಡುವ ಉತ್ಸಾಹ ಇತ್ತೋ ಅವರೆಲ್ಲ ಏನೇನು ಬೇಕೋ ಅದನ್ನು ಕೊಂಡರು. ನಾವು 5 ಯೂರೋ ( ಸುಮಾರು 500 ರೂ) ಕೊಟ್ಟು ಒಂದು ಕಾಫಿ ತೆಗೆದುಕೊಂಡು ಇಬ್ಬರು (ನಾನು ಮತ್ತು ನನ್ನ ತ೦ಗಿ) ಕುಡಿದೆವು. ನಮ್ಮ ಭಾವನವರು ಮತ್ತು ನಮ್ಮ ಶ್ರೀಮತಿ ಯವರು ಏನೂ ಕುಡಿಯಲಿಲ್ಲವಾದ್ದರಿಂದ, 500 ರೂಪಾಯಿ ಉಳಿಯಿತು ಎಂದು ಮನಸ್ಸಿನಲ್ಲಿ ಅಂದುಕೊಂಡು, ಹೊರಗಡೆ ಸಮುದ್ರ ನೋಡುತ್ತಾ ಕುಳಿತು ಕೊ೦ಡೆವು.
ನಮ್ಮ ಹಡಗು ದಕ್ಷಿಣದ ಕಡೆಗೆ ಸಾಗುತ್ತಲಿತ್ತು. ಒಂದು ಕಡೆ ಕಡಿಯಲ್ಪಟ್ಟ ದೊಡ್ಡ ಬಂಡೆ ಬಿಸಿಲಿಗೆ ಕನ್ನಡಿಯಂತೆ ಹೊಳೆಯುತ್ತಿತ್ತು. ಬೆಳ್ಳಿಯ ಹೊದಿಕೆ ಹೊದಿಸಿದಂತೆ ಕಾಣುತ್ತಿತ್ತು. ನಾವು ದಾಟುತ್ತಿದ್ದುದು ಇಂಗ್ಲಿಷ್ ಕಾಲುವೆ ಎಂದು ನಂತರ ತಿಳಿಯಿತು. ಇದು ಇಂಗ್ಲೆಂಡ್ ಹಾಗೂ ಫ್ರಾನ್ಸ್ ದೇಶಗಳ ಭೂ ಭಾಗಗಳನ್ನು ಸೇರಿಸಿದೆ. ನಮಗೆ ಚಿಕ್ಕವರಾಗಿದ್ದಾಗಿನಿಂದಲೂ ಕೇಳಿದ ಒಂದು ವಿಷಯ ಜ್ಞಾಪಕಕ್ಕೆ ಬಂತು. ಅದೇನೆ೦ದರೆ ರಾಷ್ಟ್ರೀಯ, ಅಂತರಾಷ್ಟ್ರೀಯ ಈಜು ಪಟುಗಳ ಒಂದು ಆಸೆ ಇಂಗ್ಲಿಷ್ ಕಾಲುವೆ ದಾಟುವುದು. ಅಂಗವಿಕಲ, ವಿಶೇಷ ಚೇತನ, ಈಜು ಪಟು ಗಳು ಸಹ ಈ ಕಾಲುವೆಯನ್ನು ಈಜಿ ದಾಟಿದ್ದರು. 60 km ಅಂದರೆ 33 ನಾಟಿಕಲ್ ಮೈಲಿ. ನಮಗೆ ನಡೆಯಲೇ ಆಗದ ದೂರವನ್ನು ಅಂಗವಿಕಲರು, ವಿಕಲಾ೦ಗರು ಅದೂ ಸಮುದ್ರದಂತಹ ನೀರಿನಲ್ಲಿ ಈಜಿದ್ದನ್ನು ಕೇಳಿ ಆನಂದ, ಸಂತೋಷ, ಹೆಮ್ಮೆ, ಜೊತೆಗೆ ನಮ್ಮ ಮೇಲೆ ನಮಗೇ ನಾಚಿಕೆಯಾಯಿತು. ಸುಮಾರು ನಾಲ್ಕು ಗಂಟೆಗಳ ಸಮುದ್ರ ಪ್ರಯಾಣದ ನಂತರ ನಮ್ಮ ಹಡಗು ಫ್ರಾನ್ಸ್ ದೇಶದ ಕ್ಯಾಲೈಸ್ ಪೋರ್ಟ್ ನಲ್ಲಿ ಬಂದು ನಿಂತಿದ್ದು, ಹೊರಗೆ ನಾವು ನೋಡುತ್ತಿರುವುದು ಫ್ರಾನ್ಸ್ ದೇಶ ಎಂದು ತಿಳಿದು ಖುಶಿಯಾಯಿತು. ಮೊದಲೇ ನಮ್ಮ ಗೈಡ್ ತಿಳಿಸಿದಂತೆ ನಿಗದಿತ ಸ್ಥಳದಲ್ಲಿ ನಿಂತ ನಮ್ಮ ಬಸ್ ನಲ್ಲಿ ಕುಳಿತೆವು. ಯೂರೋಪ್ ದೇಶಗಳನ್ನು ಪ್ರವೇಶಿಸಲು ಇಮಿಗ್ರೇಶನ್ ಪ್ರಕ್ರಿಯೆ ಮುಗಿಸಿದ ಮೇಲೆ, ನಮ್ಮ ಬಸ್ ಸುಮಾರು 15- 20 km ದೂರ ಕ್ರಮಿಸಿ ಪೋರ್ಟ್ ನಿಂದ ಹೊರಗೆ ಬಂದು ಒಂದು ಕಟ್ಟಡದ ಬಳಿ ನಿಂತಿತು. ಅಲ್ಲಿ ಇನ್ನೊಂದು ಬಸ್ ನಿಂತಿತ್ತು. ಆಗ ನಮ್ಮ ಗೈಡ್ ಪಕ್ಕದಲ್ಲಿ ಕಾಣುವ ಕಟ್ಟಡದಲ್ಲಿ ವಾಷ್ರೂ೦ ಇರುವುದಾಗಿಯೂ ಅಗತ್ಯ ಇದ್ದವರು ಅದರ ಉಪಯೋಗ ಪಡೆದು ಕೊಳ್ಳಬಹುದು, ಅಷ್ಟರಲ್ಲಿ ಲಗೇಜನ್ನು ಹಳೆ ಬಸ್ನಿ೦ದ ಹೊಸ ಬಸ್ಗೆ ವರ್ಗಾಯಿಸಲಾಗುವುದು ಎ೦ದು ತಿಳಿಸಿದರು. ಇನ್ನು ಉಳಿದ 12 ದಿನಗಳ ನಮ್ಮ ಪ್ರವಾಸ ಈ ಹೊಸ ಬಸ್ನಲ್ಲೇ ಎ೦ದು ಹೇಳಿದರು. ಒಂದು ಗಂಟೆಯ ವಿಶ್ರಾಂತಿಯಾದ ಮೇಲೆ ನಮ್ಮ ಬಸ್ ಮತ್ತೆ ದಕ್ಷಿಣದ ಕಡೆಗಿರುವ ಪ್ಯಾರಿಸ್ ನಗರದ ಕಡೆಗೆ ಹೊರಟಿತು.
ನಮ್ಮ ಗೈಡ್ ನಿಶಾದ್ತಿಳಿಸಿದ ಪ್ರಕಾರ ಅಲ್ಲಿಯ ಕಾನೂನಿನ ರೀತ್ಯಾ ಪ್ರತಿ ಆರು ಗಂಟೆಯ ವಾಹನ ಚಾಲನೆಯಲ್ಲಿ 45 ನಿಮಿಷ ವಿರಾಮ ಕಡ್ಡಾಯ. ಇದನ್ನು ಒಟ್ಟಿಗೆ ತೆಗೆದುಕೊಳ್ಳಬಹುದು ಅಥವಾ 15 ನಿಮಿಷಗಳ ಅವಧಿಗೆ ಮೂರು ಸಲ ತೆಗೆದುಕೊಳ್ಳಬಹುದು. ಅದು ವಾಹನ ಚಾಲಕನ ಹಕ್ಕು ಮತ್ತು ವಿವೇಚನೆಗೆ ಬಿಟ್ಟಿದ್ದು. ಈ ರೀತಿಯ ವಿರಾಮ ಮಾರ್ಗ ಮಧ್ಯದಲ್ಲಿ ಗ್ಯಾಸ್ ಸ್ಟೇಷನ್ ಬಳಿ ತೆಗೆದು ಕೊಳ್ಳುತ್ತಿದ್ದೆವು. ನಮ್ಮಲ್ಲೂ ಈ ರೀತಿಯ ವಿರಾಮ ತೆಗೆದುಕೊ೦ಡರೂ ಅದಕ್ಕೆ ಕಾನೂನಿನ ಚೌಕಟ್ಟಿಲ್ಲ. (ನಮ್ಮಲ್ಲಿ ಪೆಟ್ರೋಲ್ ಪಂಪ್. ಅಲ್ಲಿಯೂ ಪೆಟ್ರೋಲ್ ಡೀಸೆಲ್ ಇದ್ದರೂ ಅದನ್ನು ಗ್ಯಾಸ್ ಸ್ಟೇಷನ್ ಎನ್ನುತ್ತಾರೆ. ಪೆಟ್ರೋಲ್ ಮತ್ತು ಡೀಸೆಲ್ ಜೊತೆಗೆ ಒಂದು ಚಿಕ್ಕ ಸೂಪರ್ ಮಾರ್ಕೆಟ್ ಮತ್ತು ವಾಷ್ರೂ೦ ಗಳಿರುತ್ತವೆ).
ಸ್ವಲ್ಪ ಸಮಯದಲ್ಲೇ ಬಸ್ನ ಗುಣಮಟ್ಟದ ಬಗ್ಗೆ ಎಲ್ಲಾ ಸಹ ಪ್ರಯಾಣಿಕರು ಅತೃಪ್ತಿ ವ್ಯಕ್ತಪಡಿಸಿದರು. ಆಗ ಗೈಡ್ ತನ್ನ ಅಸಹಾಯಕತೆಯನ್ನು ತೋರಿಸಿ, ಇದರಲ್ಲಿ ತನ್ನ ಪಾತ್ರ ಏನೂ ಇಲ್ಲ. ಇದೆಲ್ಲ ಸೆಂಟ್ರಲ್ ಆಫೀಸ್ ಮಾಡಿರುವ ವ್ಯವಸ್ಥೆ ಎಂದು ತಿಳಿಸಿದರು. ನಮ್ಮ ಅನಿಸಿಕೆಯನ್ನು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ತಿಳಿಸಿ, ಒಳ್ಳೆಯ ಬಸ್ ವ್ಯವಸ್ಥೆ ಮಾಡಲು ಕೋರುವಂತೆ ತಿಳಿಸಿದಾಗ, ಅವರು ಆಗಲಿ ಎಂದು ಒಪ್ಪಿದರು. ಆದರೆ ಅದೇನೂ ಆಗುವುದಿಲ್ಲವೆಂದು ನಮಗಾಗಲೇ ಖಾತ್ರಿ ಯಾಗಿತ್ತು. ನಮ್ಮ ಪ್ರಯಾಣ ಪ್ಯಾರಿಸ್ ನಗರದ ಕಡೆಗೆ ಸಾಗುತ್ತಿತ್ತು. ದೂರ ಸುಮಾರು 300 ಕಿ.ಮೀ 4 – 5 ಗಂಟೆಗಳ ಪ್ರಯಾಣ. ರಸ್ತೆ ತುಂಬಾ ಚೆನ್ನಾಗಿತ್ತು. ಮಧ್ಯದಲ್ಲಿ ಗ್ಯಾಸ್ ಸ್ಟೇಷನ್ ನಲ್ಲಿ 15 ನಿಮಿಷ ವಿಶ್ರಾ೦ತಿ. ದಾರಿ ಉದ್ದಕ್ಕೂ ಅಂತಹ ವಿಶೇಷವೇನೂ ಇರಲಿಲ್ಲ. ನಮ್ಮ ದೇಶದಲ್ಲೇ ಪ್ರಯಾಣಿಸುತ್ತಿರುವ ಹಾಗೆ ಅನಿಸುತ್ತಿತ್ತು. ಕಣ್ಣಿಗೆ ಕಾಣುವಷ್ಟು ದೂರ ಸಮತಟ್ಟಾದ ಭೂಮಿಯಲ್ಲಿ ಹಳದಿ ಹೂ ಬಿಟ್ಟ ಬೆಳೆ ಕಾಣುತ್ತಿತ್ತು. ಸಾಸಿವೆಯಂತೆ ಕಾಣುತ್ತಿತ್ತು. ಅದು ಯಾವ ಬೆಳೆ ಎ೦ದು ನಿಖರವಾಗಿ ನಮಗೆ ಗೊತ್ತಾಗಲಿಲ್ಲ. ಸಂಜೆ ಏಳು ಗಂಟೆಗೆ ಪ್ಯಾರಿಸ್ ನಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರದಲ್ಲಿ ಆದರೆ ಪ್ಯಾರಿಸ್ ನ ಚಾರ್ಲ್ಸ್ ಡಿ ಗಾಲೆ ಅ೦ತರಾಷ್ಟ್ರಿಯ ವಿಮಾನ ನಿಲ್ದಾಣದ ಸಮೀಪದಲ್ಲಿದ್ದ, ಜಂಗಲ್ ಎನ್ನುವ 4 ಸ್ಟಾರ್ ಹೋಟೆಲ್ ತಲುಪಿದೆವು. ಅಲ್ಲಿ ನಮ್ಮ ವಾಸ್ತವ್ಯ. ರಾತ್ರಿಯ ಊಟಕ್ಕೆ ಪ್ಯಾಕೆಟ್ ಫುಡ್ ತರಿಸಿಕೊಟ್ಟರು. ಅದನ್ನು ತೆಗೆದುಕೊಂಡು ನಮ್ಮ ನಮ್ಮ ರೂಮ್ ಗಳಿಗೆ ಹೋಗಿ ಕೈಕಾಲು ಮುಖ ತೊಳೆದು ಪ್ರಯಾಣದ ದಣಿವಾರಿಸಿಕೊಂಡು, ಪ್ಯಾಕೆಟ್ ನಲ್ಲಿ ಕೊಟ್ಟ ಊಟವನ್ನು ಮಾಡಿ ಮಲಗಿದೆವು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44440

–ಟಿ.ವಿ.ಬಿ.ರಾಜನ್ , ಬೆಂಗಳೂರು

