ಹಚ್ಚಿಕೊಂಡ ಪೌಡರಿನ ಪರಿಮಳ
ಎಷ್ಟು ಕ್ಷಣ ಮಾತ್ರ ಘಮಘಮಿಸಲಿದೆ?
ಗ್ಲಿಸರಿನ್ ಸ್ಪರ್ಶಿಸಿದ ಕಣ್ಣುಪಾಪೆಗಳು
ಯಾವ ನೋವಿನ ಭಾಷೆಯನ್ನು
ವ್ಯಕ್ತಪಡಿಸಬಲ್ಲವು?
ರಕ್ತಸಂಚಾರವಿಲ್ಲದ ಜೀವನ
ಯಾವ ತತ್ವವನ್ನು
ಪ್ರಬೋಧಿಸಬಲ್ಲದು?
ಯಾಕೋ ಮಾನವರು
ಅಸ್ತಿತ್ವವಿಲ್ಲದ ಚಿತ್ರಗಳನ್ನು ಪ್ರಕಟಿಸಿ,
ಅಸಂಬದ್ಧ ವರ್ಣಗಳನ್ನು ಎರಚಿ,
ಇಲ್ಲದುದನ್ನೇ ಇರುವಂತೆ ತೋರಿಸಿ
ಭ್ರಮೆಯ ಲೋಕವನ್ನು ನಿರ್ಮಿಸುತ್ತಾರೆ.
ಹಗಲುಗನಸುಗಳಿಂದ
ಸುಖಗಳು ನಿಜಸ್ವರೂಪ ತಾಳಲಾರವು.
ಮರೀಚಿಕೆಯ ನೀರು
ಯಾವುದೇ ಕಾಲಕ್ಕೂ
ಕಂಠವನ್ನು ತಣಿಸಲಾರದು.
ಮಸಿಯ ಅಲಂಕಾರದಿಂದ
ಮೋಸ ಹುಟ್ಟಿಸುವ ಜಾದೂವಿದ್ಯೆಗಳು
ಸ್ವಲ್ಪ ಕಾಲ ಮಾತ್ರ ಜೀವಂತ.
ಜನಸಮೂಹದ ಮಧ್ಯೆ
ನಿನ್ನ ಕಟೌಟ್
ಶಾಶ್ವತವಾಗಿ ನಿಲ್ಲಲಾರದು.
ಕಪ್ಪು ಕನ್ನಡಕ ಧರಿಸಿ
ಲೋಕವನ್ನು ನೋಡುವುದನ್ನು ತ್ಯಜಿಸು.
ವರ್ಣವರ್ಣದ ಗಾಜುಗಳ ಮೂಲಕ
ಸತ್ಯವನ್ನು ಕಾಣಲು ಯತ್ನಿಸಬೇಡ.
ಅವು ಎತ್ತರ–ತಗ್ಗುಗಳ ದಾರಿಯನ್ನು
ಸ್ಪಷ್ಟಪಡಿಸಲಾರವು.
ಹೆಜ್ಜೆಗಳ ಲಯವನ್ನೇ
ವಿಕೃತಗೊಳಿಸುತ್ತವೆ.
ಹಾದಿಯ ನಿಜರೂಪವನ್ನು
ಚಿತ್ರಿಸಲಾರವು.
ಶ್ರಮಕ್ಕೆ ಮುಸುಕು ಹೊದಿಸಿ
ಕೃತಕ ಅಭಿನಯದಿಂದ
ನಿಜವಾದ ಬೆವರಿನ ಹನಿಯನ್ನು
ಸೃಷ್ಟಿಸಲಾಗದು.
ಕಷ್ಟವನ್ನರಿಯದ ದೇಹ
ಯಾವ ಫಲವನ್ನೂ
ಪೋಷಿಸಲಾರದು.
ನೀನು ವಾಕ್ಚಾತುರ್ಯದ
ಮಲ್ಲನಾಗಿರಬಹುದು,
‘ಅಬ್ರಕದಬ್ರ’ಯಲ್ಲಿ
ವಿಜೇತನಾಗಿರಬಹುದು;
ಮಂತ್ರದಂಡದಿಂದ
ಮತ್ತೊಂದು ಲೋಕವನ್ನೇ
ಸೃಷ್ಟಿಸಿದಂತೆ ತೋರಿಸಬಹುದು.
ಆದರೆ ಮೇಲ್ಮೈ ಮೆರುಗುಗಳೊಂದಿಗೆ
ಎಷ್ಟು ದಿನ ಈ ಕಪಟ ನಾಟಕ?
ಆಚರಣೆಯಿಲ್ಲದ ಹೆಜ್ಜೆಗಳು
ಈ ವೇದಿಕೆಯನ್ನು
ಬೆಳಗಿಸಲಾರವು.
ಸಪ್ತಸ್ವರಗಳೇ ಅಪಸ್ವರಗಳಾಗಿ
ಬಂಡಾಯದ ಪಲ್ಲವಿಗಳನ್ನು
ಹಾಡತೊಡಗುತ್ತವೆ.
ನಿನ್ನ ಜೀವನ
ಮುಂದಿನ ತಲೆಮಾರಿಗೆ
ಒಂದು ಪಾಠವಾಗಬೇಕು.
ಇಟ್ಟ ಪ್ರತಿಹೆಜ್ಜೆಯೂ
ಅಳಿಯದ ಪಾದಚಿಹ್ನೆಯಾಗಬೇಕು.
ಜಾತಿಯ ಗುಂಡಿಗೆಯಲ್ಲಿ
ಶಾಶ್ವತವಾಗಿ ಉಳಿಯುವ
ವಿಗ್ರಹವಾಗಬೇಕು.
ಮಿತ್ರನೇ,
ಯಾರೂ ಶಾಶ್ವತವಲ್ಲ
ಈ ಲೋಕದಲ್ಲಿ.
ಎಷ್ಟು ದೀರ್ಘವಾಗಿ ಬದುಕಿದರೂ
ಕೊನೆಗೆ ಕೈಗೆ ಬರುವುದು
ಒಂದು ಹಿಡಿ ಮಣ್ಣೇ.
ಅದಕ್ಕೇ ಹೇಳುವುದು—
ದೇಹಕ್ಕೆ ಸ್ವಲ್ಪ ಬೆವರು
ಬಿದ್ದಲ್ಲಿ ಮಾತ್ರ
ಅದರಲ್ಲಿದೆ ಆನಂದವೂ, ಐಶ್ವರ್ಯವೂ.
ಸ್ವಲ್ಪ ಶ್ರಮವೇ
ಮನುಷ್ಯನಿಗೆ
ಅಲಂಕರಿಸದ ಆಭರಣ.
ನಿಂತ ನಿನ್ನ ಶ್ವಾಸ
ಮರುಕ್ಷಣವೇ
ನಿನ್ನ ಸಮಾಧಿಯ ಮೇಲೆ
ಅಖಂಡ ದೀಪವಾಗಬೇಕು.
ಹುಟ್ಟುವುದು
ಮಹತ್ವದ ಸಾಧನೆಯಲ್ಲ.
ಹೇಗೋ ಹಾಗೆ ಬದುಕುವುದು
ಅಷ್ಟು ಕಠಿಣವೂ ಅಲ್ಲ.
ಸತ್ತರೂ ಬದುಕುವುದೇ—
ಕೀರ್ತಿಶೇಷನಾಗುವುದೇ—
ಮನುಷ್ಯನಿಗೆ
ನಿಜವಾದ ಅಂತಿಮ ಪರೀಕ್ಷೆ.
ತೆಲುಗು ಮೂಲ: ಡಾ|| ಪೋರೆಡ್ಡಿ ರಂಗಯ್ಯ
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀ ಮೋಹನ್

