‘ಅಯ್ಯೋ, ಅಮ್ಮಾ, ಅಪ್ಪಾ ಬಿಡಿ ನನ್ನ, ನಾನು ಹೋಗ್ತೀನಿ, ಇವಳನ್ನು ಬಿಟ್ಟು ಹೋಗ್ತೀನಿ’ ಎನ್ನುವ ಕೂಗು ಒಂದೆಡೆ, ಇನ್ನೊಂದೆಡೆ ಜೋರದ ಕೇಕೆ, ನಗು, ‘ನಾನು ಯಾರೂ ಅಂತ ಗೊತ್ತೆ, ನಿನ್ನ ತಿಂದು ಬಿಡ್ತೀನಿ. ನಾನು ಹೋಗಲ್ಲ’, ಮತ್ತೊಂದೆಡೆ ಚಿತ್ತ ವಿಚಿತ್ರವಾದ ಕುಣಿತ, ವಿಕಾರವಾದ ಕೂಗು, ತಲೆಯ ಕೂದಲನ್ನು ಹರಡಿಕೊಂಡು ಗರ‍್ರನೆ ತಲೆಯನ್ನು ತಿರುಗಿಸುವ ದೃಶ್ಯ. ಸುತ್ತಲೂ ಹರಡಿದ್ದ ರಾಶಿ ರಾಶಿ ನಿಂಬೆಹಣ್ಣುಗಳು. ಈ ದೃಶ್ಯಗಳು ಎಂತಹವರ ಎದೆಯನ್ನೂ ಝಲ್ಲೆನ್ನಿಸುವಂತಿದ್ದವು. ಹೀಗೆ ದೆವ್ವ, ಭೂತ, ಪಿಶಾಚಿ ಹಿಡಿದವರನ್ನೆಲ್ಲಾ ಅವರವರ ಕುಟುಂಬಸ್ಥರು ಬಲವಂತವಾಗಿ ಹಿಡಿದು ತಂದು ನದಿಯಲ್ಲಿ ಮುಳುಗಿಸಿ, ದೆವ್ವ ಬಿಡಿಸಲೆಂದೇ ಹಾಕಿದ್ದ ಚಪ್ಪಡಿ ಕಲ್ಲುಗಳ ಮೇಲೆ ಕೂರಿಸಿ, ಹಗ್ಗದಿಂದ ಕಟ್ಟಿ, ಅದಕ್ಕೆ ಸಿಕ್ಕಿಸಿದ್ದ ಬೀಗ ಜಡಿದು, ತಲೆಯ ಮೇಲೊಂದು ಕಲ್ಲು ಚಪ್ಪಡಿ ಹೊರಿಸುತ್ತಿದ್ದರು. ಗಂಟೆಗಳ ಕಾಲ ಕಾದು ಕೂರುತ್ತಿದ್ದರು. ಕೆಲವರು ದಿನಗಟ್ಟಲೇ ಕೂರುತ್ತಿದ್ದರು. ಕೆಲವರಿಗೆ ಬೇವಿನ ಕಡ್ಡಿಯ ಬರಲು ತೆಗೆದುಕೊಂಡು ಚೆನ್ನಾಗಿ ಬಾರಿಸುತ್ತಾ, ‘ಇವಳನ್ನು ಬಿಟ್ಟು ಹೋಗು’ ಎಂದು ಆರ್ಭಟಿಸುತ್ತಿದ್ದರು. ನಿಂಬೆ ಹಣ್ಣುಗಳನ್ನು ಅವರಿಗೆ ಒತ್ತಾಯಪೂರ್ವಕವಾಗಿ ತಿನ್ನಿಸುತ್ತಿದ್ದರು. ಆಗ ಒಂದು ಕೂಗು ಕೇಳಿ ಬರುತ್ತಿತ್ತು.. ‘ನಾನು ಹೋಗ್ತೀನಿ, ನನ್ನನ್ನು ಬಿಡಿ’ ಎನ್ನುವ ಕೂಗು ಕೇಳಿ ಬಂದ ತಕ್ಷಣ ಅವರ ಬಂಧು ಬಾಂಧವರಲ್ಲಿ ಸಂತೋಷ ಮೂಡುತ್ತಿತ್ತು. ಈ ಚಮತ್ಕಾರವನ್ನು ಕಂಡವರು ಅಜ್ಜಯ್ಯನಿಗೆ ಭಕ್ತಿಭಾವದಿಂದ ವಂದಿಸುತ್ತಿದ್ದರು.
ಇದು ನಾನು ಐವತ್ತು ವರ್ಷಗಳ ಹಿಂದೆ ಕಂಡ ದೃಶ್ಯ. ಆಗ ತಾನೆ ನನ್ನ ಮದುವೆಯಾಗಿ, ಅತ್ತೆಯ ಮನೆಗೆ ಹೆಜ್ಜೆ ಇಟ್ಟಿದ್ದೆ. ಅತ್ತೆಯವರು, ‘ಇಂದು ಸೋಮವಾರ, ಅಮವಾಸ್ಯೆ ಬೇರೆ ಇದೆ., ಉಕ್ಕಡಗಾತ್ರಿಗೆ ಹೋಗಿ ಬನ್ನಿ, ನಾನು ಹರಸಿಕೊಂಡಿದ್ದೆ’ ಎಂದು ಹೇಳಿದಾಗ, ಮರು ಮಾತಾಡದೆ ನಾವು ಅಜ್ಜಯ್ಯನ ದರ್ಶನಕ್ಕೆ ಹೋಗಿದ್ದೆವು. ದೇಗುಲದ ಮುಂಭಾಗದಲ್ಲಿ ಹಲವು ಮಹಿಳೆಯರು ಕುಣಿದಾಡುತ್ತಿದ್ದರು, ಕೇಕೆ ಹಾಕುತ್ತಿದ್ದರು, ಕಿರುಚಾಡುತ್ತಿದ್ದರು. ಅವರನ್ನು ಹಿಡಿಯಲು ನಾಲ್ಕಾರು ಜನರು ಹೆಣಗಾಡುತ್ತಿದ್ದರು. ನದೀ ತೀರದಲ್ಲಿ ಅವರು ಸ್ನಾನ ಮಾಡಿ ಬಿಟ್ಟು ಹೋದ ಬಟ್ಟೆಗಳ ರಾಶಿ, ದೇಗುಲದ ತುಂಬೆಲ್ಲಾ ನಿಂಬೆಹಣ್ಣಿನ ಚೂರುಗಳು, ಕುಂಕುಮ ಅರಿಶಿಣದ ಪೊಟ್ಟಣಗಳು, ಬಾಳೆಹಣ್ಣಿನ ಸಿಪ್ಪೆ, ತೆಂಗಿನಕಾಯಿ ಸಿಪ್ಪೆ ಎಸೆದಾಡಿದ್ದರು. ಅಲ್ಲಿನ ವಾತಾವರಣ ಕಂಡು ಮನಸ್ಸಿಗೆ ತುಸು ಬೇಸರವಾಗಿತ್ತು. ಶಾಂತಿ, ನೆಮ್ಮದಿ ಅರಸುತ್ತಾ ಅಜ್ಜಯ್ಯನ ಕೃಪೆಗೆ ಪಾತ್ರರಾಗಲು ಬರುವ ಭಕ್ತರಿಗೆ ಇದೆಂತಹಾ ಪರೀಕ್ಷೆ ಎನಿಸಿತ್ತು. ದಾವಣಗೆರೆಯಲ್ಲಿ ಹುಟ್ಟಿ ಬೆಳೆದ ನನ್ನ ಯಜಮಾನರು ಸದಾ ಹೇಳುತ್ತಿದ್ದ ಮಾತು ನನ್ನ ಕಿವಿಯಲ್ಲಿ ಗುಯ್‌ಗುಡುತ್ತಿದ್ದವು, ‘ಇವರೆಲ್ಲಾ ಮಾನಸಿಕ ರೋಗಿಗಳು, ಇವರನ್ನು ಮನೋವೈದ್ಯರ ಬಳಿ ಕರೆದೊಯ್ಯದೆ ಇಲ್ಲಿಗೆ ಕರೆದುಕೊಂಡು ಬರುತ್ತಾರೆ. ಇವರ ಮೌಢ್ಯ, ಕುರುಡು ನಂಬಿಕೆಗಳಿಗೆ ಪರಿಹಾರ ಎಂದು?’ ಈ ಘಟನೆಗಳು ಉಕ್ಕಡಗಾತ್ರಿಯ ಶ್ರೀ ಕ್ಷೇತ್ರ ಕರಿಬಸವೇಶ್ವರನ ಗುಡಿಯಲ್ಲಿ ಅಮವಾಸ್ಯೆಯಂದು ಕಂಡು ಬರುವ ಸರ್ವೇ ಸಾಮಾನ್ಯ ದೃಶ್ಯಗಳು. ಭಕ್ತರ ಪಾಲಿಗೆ ‘ಅಜ್ಜಯ್ಯ’ನಾದ ಕರಿಬಸವೇಶ್ವರರು ಸಜೀವ ಸಮಾಧಿಯಾದ ಪವಿತ್ರ ಕ್ಷೇತ್ರ ಇದು.
ನಮಗೆ ಮತ್ತೆ ಅಜ್ಜಯ್ಯನ ದರ್ಶನ ಮಾಡುವ ಘಳಿಗೆ ಕೂಡಿ ಬಂದಿತ್ತು. ಶಿವಮೊಗ್ಗಾದಲ್ಲಿ ನೆಲಸಿದ್ದ ನಾವು 2025 ನವೆಂಬರ್ ತಿಂಗಳ ಒಂದು ಬಾನುವಾರದಂದು ಉಕ್ಕಡಗಾತ್ರಿಗೆ ಹೊರಟೆವು. ಆಗ ತಾನೆ ಮಳೆಗಾಲ ಕಳೆದಿತ್ತು, ಎಲ್ಲೆಲ್ಲೂ ಹಸಿರು ಕಂಗೊಳಿಸುತ್ತತ್ತು, ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿದ್ದವು. ಬೀಸುವ ತಂಗಾಳಿಗೆ ಕಂಗು ತೆಂಗಿನ ಮರಗಳು ತಲೆದೂಗುತ್ತಿದ್ದವು. ಭತ್ತದ ಗದ್ದೆಗಳು ಹೊಂಬಣ್ಣಕ್ಕೆ ತಿರುಗಿದ್ದವು. ಪಕ್ಕದಲ್ಲಿ ತುಂಗಭದ್ರಾ ನದಿ ಹರಿಯುತ್ತಿತ್ತು. ಉಕ್ಕಡಗಾತ್ರಿಯ ಸಮೀಪ ಬರುತ್ತಿದ್ದಂತೆ ರಸ್ತೆಯ ಅಕ್ಕಪಕ್ಕದಲ್ಲಿ ಬಟ್ಟೆಗಳ ರಾಶಿ ಬಿದ್ದಿತ್ತು, ಬಹುಶಃ ಭಕ್ತರು ನದಿಯಲ್ಲಿ ಮಿಂದು ಬಿಟ್ಟ ಬಟ್ಟೆಗಳನ್ನು ಜೆ.ಸಿ.ಬಿ.ಗಳಲ್ಲಿ ಹೊತ್ತು ತಂದು ಊರ ಹೊರಗೆ ಹಾಕಿರಬಹುದು. ಮೂಢ ನಂಬಿಕೆಗಳಿಗೆ ಶರಣಾದ ನಮ್ಮ ಜನರು ಮಾಡುವ ಕೊಳಕು, ಗಲೀಜುಗಳನ್ನು ಕಂಡು ಬೇಸರವಾದರೂ ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕ್ಷೇತ್ರಗಳಲ್ಲಿ ಸ್ವಚ್ಛತೆಗೆ ನೀಡುತ್ತಿರುವ ಆದ್ಯತೆಯನ್ನು ಕಂಡು ಮನಸ್ಸಿಗೆ ಹಾಯೆನಿಸಿತ್ತು. ದೇಗುಲದ ಸುತ್ತಲೂ ವಸತಿ ಗೃಹಗಳು, ವಸತಿಶಾಲೆಗಳೂ, ಪ್ರಸಾದ ನಿಲಯಗಳ ಕಟ್ಟಡಗಳು ಎದ್ದು ನಿಂತಿದ್ದವು. ದೇಗುಲದ ಪ್ರಾಂಗಣದಲ್ಲಿ ಅಜ್ಜಯ್ಯನ ಶಿಷ್ಯರಾದ ನಾಗಪ್ಪಜ್ಜ ಹಾಗೂ ತುಕ್ಕಪ್ಪಜ್ಜನ ಗದ್ದುಗೆಗಳೂ ಇದ್ದವು. ದೇಗುಲದ ಮುಂದೆ ಗಣಪತಿಗುಡಿ, ವೀರಭದ್ರನ ಗುಡಿ ಹಾಗೂ ಶಿವ ಪಾರ್ವತಿಯರ ಗುಡಿಗಳೂ ಇದ್ದವು. ಸ್ನಾನಘಟ್ಟದಲ್ಲಿ ಮೀಯುವ ಭಕ್ತರ ಸುರಕ್ಷತೆಗಾಗಿ ನದಿಗೆ ಅಡ್ಡಲಾಗಿ ಕಂಬಿಗಳನ್ನು ಹಾಕಲಾಗಿತ್ತು. ಸ್ನಾನದ ನಂತರ ಬಟ್ಟೆ ಬದಲಿಸಲು ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಕೊಠಡಿಗಳನ್ನು ನಿರ್ಮಿಸಲಾಗಿತ್ತು. ‘ಬಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ’ ಎಂಬ ಫಲಕಗಳನ್ನೂ ತೂಗು ಹಾಕಿದ್ದರು. ‘ಅಜ್ಜಯ್ಯ ಯಾರ ಮೈಮೇಲೆಯೂ ಬರುವುದಿಲ್ಲ, ಹಾಗೆ ನಟನೆ ಮಾಡುವವರನ್ನು ನಂಬಿ ಮೋಸ ಹೋಗಬೇಡಿ’ ಎಂಬ ಫಲಕಗಳೂ ಎಲ್ಲೆಡೆ ಕಂಡುಬರುತ್ತಿದ್ದವು. ಸರತಿ ಸಾಲಿನಲ್ಲಿ ನಿಂತು ನಾವೂ ಅಜ್ಜಯ್ಯನ ಗದ್ದುಗೆ ದರ್ಶನ ಮಾಡಿ ಮಂಗಳಾರತಿ ತೆಗೆದುಕೊಂಡು ಬಂದಾಗ ಧನ್ಯತಾಭಾವ ಮೂಡಿ ಬಂದಿತ್ತು. ಭಕ್ತಿ, ಶ್ರದ್ಧೆಯ ಜೊತೆ ಶಿಸ್ತು, ಸ್ವಚ್ಛತೆಯೂ ಸೇರಿದಾಗ ಭಗವಂತನ ಅನುಗ್ರಹವಾಗುವುದು ಖಂಡಿತ ಅಲ್ಲವೇ?
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ತುಂಗಭದ್ರಾ ನದಿಯ ತಟದಲ್ಲಿರುವ ಉಕ್ಕಡಗಾತ್ರಿಯೆಂಬ ಪುಟ್ಟ ಗ್ರಾಮದಲ್ಲಿ ಇರುವ ಪುಣ್ಯ ಕ್ಷೇತ್ರ ಇದು. ಈ ಪವಾಡಪುರುಷನ ಹಿನ್ನೆಲೆ ತಿಳಿಯೋಣ ಬನ್ನಿ–ಸುಮಾರು ನಾನ್ನೂರು ವರ್ಷಗಳ ಹಿಂದೆ ವೃಷಭಾಪುರಿಯ ಸೂರ್ಯ ಸಿಂಹಾಸನಾಧೀಶ್ವರ ಶಿವಯೋಗಿಗಳಾದ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನವರ ಗದ್ದುಗೆ ಇದ್ದು, ಇಲ್ಲಿ ಇವರು ಸಜೀವ ಸಮಾಧಿ ಹೊಂದಿದ್ದರಿಂದ ಇವರ ಚೈತನ್ಯ, ಆಧ್ಯಾತ್ಮಿಕ ಶಕ್ತಿ ಈ ಶ್ರೀಕ್ಷೇತ್ರದಲ್ಲಿ ಪಸರಿಸಿದ್ದು, ತನ್ನ ಭಕ್ತರನ್ನೆಲ್ಲಾ ಪೊರೆಯುತ್ತಿರುವುದು. ಅಜ್ಜಯ್ಯನ ಸೇವೆ ಮಾಡಿದರೆ ಮಾನಸಿಕ ರೋಗಗಳು, ದುಷ್ಟಶಕ್ತಿಗಳ ಬಾಧೆ, ಕೌಟುಂಬಿಕ ಸಮಸ್ಯೆಗಳು ಪರಿಹಾರವಾಗುವುದೆಂಬ ಗಾಢ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ. ಭಕ್ತರು ಶ್ರೀಕ್ಷೇತ್ರದಲ್ಲಿ ತೆಂಗಿನಕಾಯಿ ಕಟ್ಟಿ ತಮ್ಮ ಹರಕೆಯನ್ನು ಸಲ್ಲಿಸುವುದು ವಾಡಿಕೆ. ಉಕ್ಕಡಗಾತ್ರಿಯು ಜನರ ಸಂಕಷ್ಠಗಳನ್ನು ಪರಿಹರಿಸುವ ಕ್ಷೇತ್ರವಾಗಿದ್ದು ಆಧ್ಯಾತ್ಮಿಕ ಸಾಧನೆಯ ಕೇಂದ್ರವೂ ಆಗಿದೆ. ಈ ಗ್ರಾಮಕ್ಕೆ ಉಕ್ಕಡಗಾತ್ರಿಯೆಂಬ ಹೆಸರು ಬಂದಿದ್ದಾದರೂ ಹೇಗೆ? ಉಕ್ಕಡ ಎಂದರೆ ‘ಗಡಿ’, ಈ ನದಿಯ ಒಂದು ತೀರ ಮೈಸೂರು ಪ್ರಾಂತ್ಯಕ್ಕೆ ಸೇರಿತ್ತೆಂದೂ ಮತ್ತೊಂದು ತೀರ ಬಾಂಬೆ ಪ್ರಾಂತ್ಯಕ್ಕೆ ಸೇರಿತ್ತೆಂದೂ ಹೇಳಲಾಗುತ್ತದೆ. ಹಾಗಾಗಿ ಈ ಗಡಿಗಳು ಸೇರುವ ಸ್ಥಳ ಕತ್ತರಿಯಾಕಾರದಲ್ಲಿ ಇದ್ದುದರಿಂದ ‘ಉಕ್ಕಡ ಕತ್ತರಿ’ ಇರಬಹುದು. ನಂತರದಲ್ಲಿ ಈ ಹೆಸರು ಉಕ್ಕಡಗಾತ್ರಿಯಾಗಿರಬಹುದು ಎಂದೂ ಕೆಲವರು ಹೇಳುವರು. ಈ ಪ್ರದೇಶದಲ್ಲಿ ವಿಳೇದೆಲೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದುದರಿಂದ ದೋಣಿಗಳ ಮೂಲಕ ರಫ್ತು ಮಾಡಲಾಗುತ್ತಿತ್ತೆಂದೂ ದಾಖಲಿಸಲಾಗಿದೆ. ಕರಿಬಸವೇಶ್ವರರು ಸಂಚಾರ ಮಾಡುತ್ತಾ, ಜಪ ತಪಗಳನ್ನು ಮಾಡುತ್ತಾ ಬರುವಾಗ ತುಂಗಭದ್ರಾ ನದಿಯ ತಟದಲ್ಲಿದ್ದ ಈ ಗ್ರಾಮ ಅವರ ಮನಸ್ಸಿಗೆ ಮುದ ನೀಡಿತ್ತು. ಹಾಗಾಗಿ ಜನರ ಕಷ್ಟ ಸುಖಗಳನ್ನು ಆಲಿಸುತ್ತಾ, ಸೂಕ್ತವಾದ ಪರಿಹಾರಗಳನ್ನು ಸೂಚಿಸುತ್ತಾ ಇಲ್ಲಿಯೇ ನೆಲೆಯಾದರು ಎಂಬುದು ಐತಿಹ್ಯ.
ಶ್ರೀಕ್ಷೇತ್ರದ ಪೌರಾಣಿಕ ಹಿನ್ನೆಲೆಯನ್ನು ಕೇಳೋಣ ಬನ್ನಿ – ಭೂಲೋಕದಲ್ಲಿ ಅಸುರ ಶಕ್ತಿಗಳು ತಾಂಡವವಾಡುತ್ತಿರುವಾಗ ಅವುಗಳನ್ನು ಶಿಕ್ಷಿಸಿ ಜನರಿಗೆ ಶಾಂತಿ ನೆಮ್ಮದಿ ನೀಡಲು ಶಿವನು ತನ್ನ ಸಹಚರನಾದ ನಂದಿಯನ್ನು ‘ಕರಿಬಸವ’ ಎಂಬ ಹೆಸರಿನಲ್ಲಿ ಕಳುಹಿಸುವನು. ‘ಕರಿ’ ಎಂದರೆ ‘ದೇಹ’ ಎಂದೂ ‘ಬಸವ’ ಎಂದರೆ ನಂದಿಯ ಅವತಾರ ಎಂದೂ ನಂಬಲಾಗುತ್ತದೆ. ಈ ಕ್ಷೇತ್ರದಲ್ಲಿ ದೆವ್ವ, ಪಿಶಾಚಿ, ಬ್ರಹ್ಮರಾಕ್ಷಸರ ಕಾಟದಿಂದ ಜನರು ಬೇಸತ್ತು ಹೋಗಿದ್ದರು. ಆಗ ಅಲ್ಲಿಗೆ ಬಂದ ಕರಿಬಸವ ಸ್ವಾಮಿಗಳಿಗೆ ಶರಣಾಗಿ ಜನರು ತಮ್ಮನ್ನು ದುಷ್ಟಶಕ್ತಿಗಳಿಂದ ರಕ್ಷಿಸಬೇಕೆಂದು ಬೇಡುವರು. ದೆವ್ವ, ಪಿಶಾಚಿಗಳ ಕಾಟದಿಂದ ಬಳಲುತ್ತಿದ್ದ ಮಾನಸಿಕ ರೋಗಿಗಳನ್ನು ಕಂಡ ಸ್ವಾಮಿಗಳು ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬಿದರು. ದುರ್ಬಲವಾಗಿದ್ದ ರೋಗಿಗಳ ಮನಸ್ಸಿನಲ್ಲಿ ಧೈರ್ಯ ತುಂಬಿದರು. ತಮ್ಮ ಶತ್ರುಗಳು ತಮಗೆ ವಾಮಾಚಾರ, ಮಾಟಮಂತ್ರ ಮಾಡಿಸಿದ್ದಾರೆ ಎನ್ನುವವರಿಗೆ ಶಿವಾಚಾರದ ಮಹಿಮೆಯನ್ನು ತಿಳಿಸಿದರು. ಶಾರೀರಿಕ ರೋಗಗಳಿಂದ ಬಳಲುತ್ತಿದ್ದವರಿಗೆ ಗಿಡಮೂಲಿಕೆಗಳ ಕಷಾಯವನ್ನು ಕುಡಿಸಿದರು. ಅವರಲ್ಲಿ ಸ್ವಾಮಿಗಳ ಬಗ್ಗೆ ಅಪಾರವಾದ ನಂಬಿಕೆ ಶ್ರದ್ಧೆ ಮೂಡಿದಾಗ, ತಮ್ಮ ನೆರವಿಗೆ ಬಂದ ಸ್ವಾಮಿಗಳನ್ನು ಅಜ್ಜಯ್ಯನೆಂದೇ ಕರೆದರು. ಜನರು ಅಜ್ಜಯ್ಯನಿಂದ ಲಿಂಗದೀಕ್ಷೆಯನ್ನು ಪಡೆದು ಸತ್ಯ ಧರ್ಮದ ಹಾದಿಯಲ್ಲಿ ನಡೆದರು. ಅಜ್ಜಯ್ಯನ ಮಹಿಮೆ ಮನೆ ಮಾತಾಯತು. ಸುತ್ತಮುತ್ತಲಿನ ಗ್ರಾಮಗಳಿಂದಲೂ ಜನರು ಎತ್ತಿನ ಗಾಡಿಗಳನ್ನು ಕಟ್ಟಿಕೊಂಡು ಬಂದು ತಮ್ಮ ಸಂಕಷ್ಠಗಳನ್ನು ಪರಿಹರಿಸಿಕೊಂಡರು.
ಪ್ರತಿವರ್ಷ ಶಿವರಾತ್ರಿಯಂದು ಇಲ್ಲಿ ಒಂದು ವಾರ ಜಾತ್ರೆ ನಡೆಯುವುದು. ಆಗ ಇಲ್ಲಿಗೆ ಲಕ್ಷಾಂತರ ಭಕ್ತರು ಬೇರೆ ರಾಜ್ಯಗಳಿಂದಲೂ ಆಗಮಿಸುವರು. ಜಾತ್ರೆಯ ಸಮಯದಲ್ಲಿ ಅಜ್ಜಯ್ಯನಿಗೆ ಪ್ರಿಯವಾದ ‘ಫಲಾರ’ ಎಂದು ಕರೆಯಲ್ಪಡುವ ಮಂಡಕ್ಕಿ ಕಾರದ ರಾಶಿಯನ್ನು ಹಾಕುವರು. ನಂತರ ಅದನ್ನು ಎಲ್ಲಾ ಭಕ್ತರಿಗೆ ಹಂಚಲಾಗುವುದು. ದೇಗುಲದ ಮುಂದೆ ಸಾಲು ಸಾಲು ಅಂಗಡಿಗಳಲ್ಲಿ ಮಂಡಕ್ಕಿ ಕಾರದ ಪ್ಯಾಕೆಟ್‌ಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಭಕ್ತರು ಅಜ್ಜಯ್ಯನನ್ನು ಭವರೋಗ ಹರವೈದ್ಯನೆಂದೂ ಹಾಗೂ ಪವಾಡಪುರುಷನೆಂದೂ ಕರೆಯುವರು. ಈಗಲೂ ಇಲ್ಲಿಗೆ ಪ್ರತಿ ಅಮವಾಸ್ಯೆ ಹಾಗೂ ಸೋಮವಾರಗಳಂದು ಜನರು ದಂಡು ದಂಡಾಗಿ ಬಂದು ತಮ್ಮ ಸಂಕಷ್ಟಗಳನ್ನು ಅಜ್ಜಯ್ಯನ ಮುಂದೆ ತೋಡಿಕೊಂಡು ಹಗುರಾಗುವರು. ಕಷ್ಟಗಳನ್ನು ಎದುರಿಸುವ ಶಕ್ತಿ ಹಾಗೂ ಆತ್ಮವಿಶ್ವಾಸವನ್ನು ಪಡೆಯುವರು.
ಅಜ್ಜಯ್ಯನ ದರ್ಶನ ಮಾಡಿ ಮನೆಗೆ ಹಿಂದಿರುಗುವಾಗ ಮನದಲ್ಲಿ ಹಲವು ವಿಚಾರಗಳು ಮೂಡುತ್ತಿದ್ದವು. ನಮ್ಮ ನಾಡಿನಲ್ಲಿ ಮಾನಸಿಕ ರೋಗಿಗಳಿಗೆ ಇಂತಹ ಮಹಿಮರೂ, ದೇಗುಲಗಳೂ ಮಾನಸಿಕ ಅಸ್ಪತ್ರೆಗಳಂತೆ ಅಲ್ಲವೇ? ಬಡ ಬಗ್ಗರಿಗೆ, ದೀನ ದಲಿತರಿಗೆ, ಹಿಂದುಳಿದ ವರ್ಗದವರಿಗೆ ಈ ದೇಗುಲಗಳು ಆಶಾ ಕಿರಣಗಳಾಗಿ ನಿಂತಿವೆ. ಆಸ್ಪತ್ರೆಯ ಖರ್ಚುಗಳನ್ನು ಭರಿಸಲಾಗದವರು ಹಾಗೂ ಹುಚ್ಚಾಸ್ಪತ್ರೆ ಎಂದೇ ಕರೆಯಲ್ಪಡುವ ಆಸ್ಪತ್ರೆಗಳಿಗೆ ಹೋಗಲು ಹಿಂದೇಟು ಹಾಕುವವರಿಗೆ ಅಜ್ಜಯ್ಯ ಕಾಮಧೇನುವೇ ಸರಿ. ತುಂಗಭದ್ರೆಯ ದಡದಲ್ಲಿರುವ ಈ ದೇಗುಲ ಮಾನಸಿಕ ರೋಗಿಗಳ ಪಾಲಿಗೆ ವರದಾನವೇ ಸರಿ. ಅಜ್ಜಯ್ಯನಲ್ಲಿ ಅವರು ಇಟ್ಟಿರುವ ನಂಬಿಕೆ, ಶ್ರದ್ಧೆಗಳೇ ಅವರನ್ನು ಕಾಯುವುದರಲ್ಲಿ ಸಂದೇಹವೇ ಇಲ್ಲ. ಸಜೀವ ಸಮಾಧಿಯಾಗಿರುವ ಅಜ್ಜಯ್ಯನ ಗದ್ದುಗೆಯಲ್ಲಿ ಸೂಸುವ ಶಿವಚೈತನ್ಯ ಭಕ್ತರನ್ನು ಕಾಯುವುದು.

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ

