ತಾಯಂದಿರ ದಿನ?

ಕಾಶ್ಮೀರದೊಡಲಿನಲಿ
ಸ್ವರ್ಗಕ್ಕೆ ಲಗ್ಗೆ ಹಾಕಿದೆವೆಂದು
ಕುಣಿಯುತ್ತ ನಲಿಯುತಿರಲು
ನಿಮಿಷಾರ್ಧದಲಿ ಆಹುತಿಯಾದರು
ಶತ್ರುಗಳ ಮಾರಣ ಹೋಮಕೆ
ತಾಯಂದಿರ ಒಲವಿನ ಪುತ್ರರು
ಹಿಮದ ಮಡಿಲಲಿ ರಕ್ತದೋಕಳಿ
ಅಮಾಯಕರ ಪ್ರಾಣಾರ್ಪಣೆ
ಭಯೋತ್ಪಾದಕರ ಅಟ್ಟಹಾಸ
ಮೊಳಗಿತು ಗಡಿಗಳ ದಾಟಿ
ಬೆಚ್ಚಿತು ಇಡೀ ವಿಶ್ವ ನಂಬಲಾಗದೆ ಕಟು ಸತ್ಯ
ಮತ್ತೀಗ ದಿಟ್ಟ ಮಾತೆಯರು
ಕಳಿಸಿಹರು ತಮ್ಮ ಕುಲಪುತ್ರರನು
ಕುತಂತ್ರಿ ನೀಚರನು ಸದೆಬಡೆಯಲೆಂದು
ಮಳೆ ಬಿಸಿಲು ಮಂಜು ಲೆಕ್ಕಿಸದೆ ಕಾದಲೆಂದು
ತಪ್ಪಿತಸ್ಥರಿಗೆ ಪಾಠ ಕಲಿಸಲೆಂದು
ಈ ಬವಣೆಗೆ ಕೊನೆ ಎಂದು?
ಬಸಿರ ಕೊರಗಿಗೆ ಅಂತ್ಯವಿದೆಯೇ?
ಹೆತ್ತ ಮಗನೆದುರೇ ಪ್ರಾಣಾರ್ಪಣೆ ಗೈದ
ಅಮಾಯಕರಿಗೆ ನ್ಯಾಯ ದೊರೆಯುವುದೇ?
ಇವೆಲ್ಲ ಕನಸಾಗಬಾರದೇ? ಹುಸಿಯಾಗಬಾರದೇ?
ಮಮ್ಮಲ ಮರುಗಿದೆ ತಾಯಿ ಜೀವ
ಎಂದೆಂದೂ ಮರೆಯಲಾಗದ ದೃಶ್ಯ
ಕಣ್ಮುಂದೆ ಕುಣಿದು ಅಣಕಿಸಿದೆ
ಹಚ್ಚಹಸಿರು ನೆನಪನ್ನು ಮರೆವುದೆಂತು?
ಮಾತೆಯರಿಗೆ ಶುಭ ಕೋರುವುದೆಂತು?
ಧೈರ್ಯವೇ ಸರ್ವತ್ರ ಸಾಧನವೆನ್ನೋಣವೇ?
ಸಮಯವೇ ಉಪಶಮನವೆನ್ನೋಣವೇ?
ಜನ್ಮಭೂಮಿಗೆ ಅಸು ನೀಗಿದವರಿಗೆ
ಸಂತಾಪದ ನೆರೆ ಹರಿಸೋಣವೇ?
ಎಂದೆಂದಿಗೂ ಬಾರದಿರಲಿ ಮತ್ತೊಮ್ಮೆ
ಹೃದಯವಿದ್ರಾವಕ ಭೀಕರ ವಿಷ ಘಳಿಗೆ
ಜೈ ಹುತಾತ್ಮ ಜೈ ಜವಾನ್ ಎಂದುಸುರಿ
ಅರ್ಪಿಸುವೆ ನಿಮಗೆಲ್ಲರ ಕಣ್ಣೀರ ತರ್ಪಣ
–-ಜಿ.ವಿ.ನಿರ್ಮಲ
ಒಡಲಾಳದಿಂದ ಹುಟ್ಟಿ ಬಂದ ಕವಿತೆ ಮನಕಲಕುವಂತಿದೆ, ಓದಿ ಮೌನವಾಗಿ ರೋಧಿಸೋಣವೆನಿಸಿತು.
ಕವಿತೆ ಓದಿ ಮನಸ್ಸು ಆರ್ಧವಾಯತು ಮೇಡಂ
ಅರ್ಥಪೂರ್ಣ ಕವಿತೆ ಮೇಡಮ್
ತುಂಬಾ ನೋವಿನಿಂದ ಕೂಡಿವೆ ಸಾಲುಗಳು.
ನನ್ನ ಕವಿತೆಗೆ ಸ್ಪಂದಿಸಿದವರಿಗೆ ಮನದಾಳದ ವಂದನೆಗಳು.
ತುಂಬಾ ಮನಮುಟ್ಟುವಂತಿದೆ
ನಿಜಾರ್ಥದಲ್ಲಿ ಹುತಾತ್ಮರಿಗೆ ಕಣ್ಣೀರ ತರ್ಪಣವನ್ನಿತ್ತ ಅರ್ಥಪೂರ್ಣ ಕವನ.