ನಿವೃತ್ತಿ

Share Button

ಅಂದು ಕಛೇರಿಯಲ್ಲಿ ಮಧ್ಯಾನ್ಹದ ನಂತರ ಯಾರಿಗೂ ಕೆಲಸ ಮಾಡುವ ಮನಸ್ಥಿತಿಯೇ ಇರಲಿಲ್ಲ.  ಎಲ್ಲರೂ ಒಂದು ಈತಿಯ ವಿಷಾದಪೂರಿತ, ಸಡಗರದಿಂದ. . . .ಆಂ! ವಿಷಾದಪೂರಿತ? ಸಡಗರ? . . ಹಾಗೆಂದರೇನೆಂದಿರಾ? . .  ಹೌದು, ಅಂದು ಕಳೆದ 32 ವರುಷಗಳಿಂದ ತಮ್ಮೊಂದಿಗಿದ್ದ, ತಮ್ಮವರಲ್ಲೇ ಒಬ್ಬರಾಗಿದ್ದ, ಶ್ರೀನಿವಾಸಮೂರ್ತಿಯವರು ನಿವೃತ್ತಿಯಾಗುವವರಿದ್ದರು.  ತಮ್ಮೆಲ್ಲರನ್ನು ತಂದೆಯಂತೆ, ಹಿರಿಯ ಸಹೋದರನಂತೆ, ಆಪತ್ಪಾಂಧವನಂತೆ, ಗುರುವಿನಂತೆ ನೋಡಿಕೊಳ್ಳುತ್ತಿದ್ದ, ಅದು ಕಛೇರಿಯ ವಿಷಯವೇ ಆಗಿರಲಿ, ಯಾರೊಬ್ಬರ ವೈಯುಕ್ತಿಕ ವಿಷಯವೇ ಅಗಿರಲಿ, ತಾಳ್ಮೆಯಿಂದ ಆಲಿಸಿ, ತಮಗೆ ತೋಚಿದ, ನೂರಕ್ಕೆ ತೊಂಭತೊಂಭತ್ತು ಭಾಗ ಸರಿಯೇ ಆಗಿರುತ್ತಿದ್ದ, ಪರಿಹಾರವನ್ನು ಅಕ್ಕರೆಯಿಂದ ಸೂಚಿಸಿ, ತಮ್ಮಗಳ ಮೊಗದಲ್ಲಿ ನಗೆಯರಳುವಂತೆ, ನೆಮ್ಮದಿ ಮೂಡುವಂತೆ ನೋಡಿಕೊಳ್ಳುತ್ತಿದ್ದ ಕಛೇರಿಯ ಹಿರಿಯ ಮನ್ಯಾನೇಜರ್‌ ನಿವೃತ್ತರಾಗುತ್ತಿದ್ದರು.  ಇಂದಿನ ದಿನ ಅವರ ನೆನಪಿನಲ್ಲಿ ಸದಾ ಹಸಿರಾಗಿರುವಂತೆ ಮಾಡುವ ಸಡಗರದಿಂದಲೂ, ನಾಳೆಯಿಂದ ಅವರಿಲ್ಲದ ದಿನಗಳನ್ನು ಊಹಿಸಿದರೆ ಉಂಟಾಗುತ್ತಿದ್ದ ವಿಷಾದ ಭಾವದಿಂದಲೂ ಎಲ್ಲರೂ ತಯಾರಿ ನಡೆಸುತ್ತಿದ್ದರು.

ಸಂಜೆ ಗಂಟೆ ನಾಲ್ಕು ಆಗುತ್ತಿದ್ದಂತೆ ಎಲ್ಲರು ಮೀಟಿಂಗ್‌ ಹಾಲ್‌ನಲ್ಲಿ ಸೇರಿದರು.  ಕೇಂದ್ರೀಯ ಕಛೇರಿಯಿಂದ‌ ಆಗಮಿಸಿದ್ದ ರೀಜಿನಲ್‌ ಮ್ಯಾನೇಜರ್‌ ಶ್ರೀನಿಧಿಯವರು, ಇಂದು ನಿವೃತ್ತರಾಗುತ್ತಿದ್ದ ಶ್ರೀನಿವಾಸಮೂರ್ತಿಯವರು, ನಾಳೆಯಿಂದ ಅವರ ಸ್ಥಾನ ತುಂಬಲಿದ್ದ ರಘುಪತಿಯವರು ವೇದಿಕೆಯ ಮೇಲೆ ಕುಳಿತರು.

ವಾಸಂತಿಯವರ ಸುಶ್ರಾವ್ಯ ಕಂಠದಲ್ಲಿ ಸರಸ್ವತಿಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.  ಎಲ್ಲರೂ ತಮತಮಗೆ ತೋಚಿದಂತೆ, ತಮ್ಮ ತಮ್ಮ ಅನುಭವಕ್ಕೆ ಬಂದಂತಹ ವಿಚಾರಗಳನ್ನು ಹಂಚಿಕೊಳ್ಳುತ್ತಾ ಕೃತಜ್ಞತೆಗಳನ್ನು ಸೂಚಿಸಿದರು.  ರೀಜಿನಲ್‌ ಮ್ಯಾನೇಜರ್‌ ಅವರು, ಶ್ರೀನಿವಾಸಮೂರ್ತಿಯವರ ಕರ್ತವ್ಯ ನಿಷ್ಠೆ, ತೀಕ್ಷ್ಣಬುದ್ಧಿಯನ್ನು ಹೊಗಳುತ್ತಾ ಅವರೊಂದಿಗೆ ಕೆಲಸ ಮಾಡಿದ ಎಲ್ಲರ ಮೇಲೂ ಅವರ ವ್ಯಕ್ತಿತ್ವದ ಪ್ರಭಾವ ಹೇಗೆ ಬೀರುತಿತ್ತು ಎಂಬುದನ್ನು ವಿವರಿಸಿ ಅವರಿಗೆ ಆರೋಗ್ಯಪೂರ್ಣ ಮತ್ತು ನೆಮ್ಮದಿಯ ವಿಶ್ರಾಂತ ಜೀವನವನ್ನು ಕೋರಿದರು.

ರಘುಪತಿಯವರು ಹೇಳಿದರು – ಶ್ರೀನಿವಾಸಮೂರ್ತಿಯವರು ನಡೆದ ದಾರಿಯಲ್ಲೇ ಭಗವಂತನು ನನಗೂ ನಡೆಯುವಂತೆ ಮಾಡಿದರೆ ನನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದೆ ಎನ್ನುವ ಆತ್ಮತೃಪ್ತಿ ಸಿಗುತ್ತದೆ – ಎಂದು ಒಂದೇ ಮಾತಿನಲ್ಲಿ ಮೂರ್ತಿಯವರ ಘನತೆಯನ್ನು ಎತ್ತಿ ಹಿಡಿದರು.

ಮಿಕ್ಕ ಸಹೋದ್ಯೋಗಿಗಳೂ ಸಹ ಒಂದೆರಡು ಸಣ್ಣ ಅನುಭವಗಳನ್ನು ಹಂಚಿಕೊಳ್ಳುತ್ತಾ ಶುಭ ಕೋರಿದರು.

ಅವರ ಪಟ್ಟಶಿಷ್ಯ ಎಂದೇ ಕಛೇರಿಯಲ್ಲಿ ಗುರುತಿಸಿಕೊಂಡಿದ್ದ ಮಾಧವ ಎದ್ದು ನಿಂತು ಹೇಳತೊಡಗಿದ.

ಇಂದು ಶ್ರೀನಿವಾಸಮೂರ್ತಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.  ಒಂದೇ ಒಂದು ಕಪ್ಪು ಚುಕ್ಕಿಯೂ ಇಲ್ಲದಂತೆ ಮೂವತ್ತೆರಡು ವರುಷಗಳು ಸೇವೆಗೈದ ಅವರು ಅಭಿನಂದನಾರ್ಹರು.  ಅವರು ಸೇವೆಯಿಂದ ನಿವೃತ್ತರಾದರೇನಂತೆ, ಅವರಲ್ಲಿ ಹೊರಬರಲು ಸಮಯ ಸಾಲದೇ ಒಳಗೇ ಹುದುಗಿರುವ ಹಲವಾರು ಹವ್ಯಾಸಗಳು ಈಗ ಬೆಳಕಿಗೆ ಬರಲಿ.  ಅವರ ಬಹುಮುಖ ಪ್ರತಿಭೆಯ ಪರಿಚಯ ಸಮಾಜಕ್ಕೆ ಆಗಲಿ ಎಂದು ಹೇಳುತ್ತಾ ಗದ್ಗದಿತನಾಗಿಬಿಟ್ಟ.

ನಂತರ ಶ್ರೀನಿವಾಸಮೂರ್ತಿಯವರಿಗೆ ಗೌರವ ಸಮರ್ಪಣೆ.  ಕಛೇರಿಯ ಕಡೆಯಿಂದ ನೀಡುವ ಹಣ್ಣುಗಳನ್ನು ತುಂಬಿದ್ದ ಬೆಳ್ಳಿ ತಟ್ಟೆ, ಶಾಲು, ಪೇಟ, ಹಾರಗಳಲ್ಲದೇ, ಎಲ್ಲರೂ ತಮಗೆ ತೋಚಿದಂತೆ ತಂದಿದ್ದ ಕಾಣಿಕೆಗಳನ್ನೂ ನೀಡಿ ಗೌರವಿಸಿದರು.  ಹಲವರು, ʼಬೇಡ ಬೇಡʼ ಎಂದರೂ ಕೇಳದೆ ಅವರ ಕಾಲುಮುಟ್ಟಿ ಸಮಸ್ಕಾರ ಮಾಡಿ ಆಶೀರ್ವಾದ ತೆಗೆದುಕೊಂಡರು.

ಈಗ ಶ್ರೀನಿವಾಸಮೂರ್ತಿಯವರು ತಮ್ಮ ನುಡಿಗಳನ್ನು ಆಡಬೇಕೆಂದು ವಿನಂತಿಸಲಾಯಿತು.

ಮಾಧವ ಎದ್ದು ನಿಂತು – ಸಾರ್, ತಾವು ಯಾವಾಗೂ ಸಣ್ಣ ಸಣ್ಣ ವಿಷಯಗಳಿಗೂ ಗಮನ ಹರಿಸುತ್ತಾ ಅತ್ಯಂತ ಕಡಿಮೆ ಸಮಯದಲ್ಲಿ ಯಶಸ್ವಿಯಾಗಿ ಕೆಲಸಗಳನ್ನು ಪೂರೈಸುತ್ತಿದ್ದಿರಿ, ಇದು ನಿಮಗೆ ಹೇಗೆ ಸಾಧ್ಯವಾಯಿತು?‌ ನಿಮ್ಮ ವೃತ್ತಿ ಜೀವನದಲ್ಲಿಯೂ ಏನಾದರೂ ಎಡವಟ್ಟುಗಳಾಗಿದ್ದವೇ? ನಿಮಗೂ ತೊಂದರೆಗಳು ಬಂದಿದ್ದವೇ? ನಿಮ್ಮ ಉತ್ಕೃಷ್ಠ ರೀತಿಯ ಕಾರ್ಯನಿರ್ವಹಣೆಯ ಅನುಭವ ನಮಗೆಲ್ಲಾ ಇದೆ, ಹಾಗಾಗಿ ನೀವು ಎದುರಿಸಿದ, ತೊಂದರೆಗಳು, ಅಥವಾ ಎಡವಟ್ಟುಗಳ ಕುರಿತಾಗು ತಿಳಿಯುವ ಕುತೂಹಲ ನಮಗೆ – ಎಂದನು.

ಎಲ್ಲರೂ – ಹೌದು, ಹೌದು. . .- ಎಂದರು.

ಶ್ರೀನಿವಾಸಮೂರ್ತಿಯವರು ಎದ್ದು ನಿಂತರು.  ಒಂದರೆಕ್ಷಣ ಕಣ್ಣು ಮುಚ್ಚಿ ಸುಮ್ಮನೆ ನಿಂತರು.  ಭಾವೋದ್ವೇಗಕ್ಕೆ ಒಳಗಾದಂತೆನಿಸಿತು.  ಎಲ್ಲರ ಕಣ್ಣುಗಳಲ್ಲೂ ನೀರು ತುಂಬಿಕೊಳ್ಳತೊಡಗಿತು.  ಒಂದೇ ಕ್ಷಣ ಸಾವರಿಸಿಕೊಂಡು ಬಿಟ್ಟರು.  ನಿರರ್ಗಳವಾಗಿ ಹೇಳತೊಡಗಿದರು.

ಎಲ್ಲರಿಗೂ ವಂದನೆಗಳು.  ಮಾಧವ ಹೇಳಿದಂತೆ ನಾನಿಂದು ನಿವೃತ್ತಿ ಭಾಷಣ ಮಾಡುವುದಿಲ್ಲ.  ವೃತ್ತಿಯಿಂದ ಪ್ರವೃತ್ತಿಯೆಡೆಗೆ ಮನ್ವಂತರ ಹೊಂದುತ್ತಿರುವ ಸಂಧಿಕಾಲ ಇದು ಎಂದು ಭಾವಿಸುತ್ತಾ ಇನ್ನು ಮುಂದೆ ನನ್ನ ಮನದಲ್ಲಿ ಮಾಡಬೇಕೆಂದಿದ್ದ, ಆದರೆ ಕಛೇರಿ ಮತ್ತು ಕೌಟುಂಬಿಕ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಸಮಯ ಸಾಲದೆ, ಮಾಡದಿದ್ದ, ಹಲವಾರು ಕೆಲಸಗಳೆಡೆಗೆ ಮನಸ್ಸು ನೆಟ್ಟು ಬರವಣಿಗೆ, ಸಣ್ಣಪುಟ್ಟ ಸಾಮಾಜಿಕ ಕೆಲಸ ಕಾರ್ಯಗಳು, ಬಂಧು ಬಾಂಧವರೊಂದಿಗೆ ಸಂಬಂಧ ವೃದ್ಧಿ, ಯೋಗ, ವಾಯುವಿಹಾರ, ಪ್ರವಾಸ ಮುಂಚಾದ ಚಟುವಟಿಕೆಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಬೇಕೆಂದು ನಿರ್ಧರಿಸಿದ್ದೇನೆ.  ಇದರಿಂದ ನನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯಗಳು ಸುಸ್ಥಿತಿಯಲ್ಲಿ ಇರುತ್ತದೆ ಎಂಬುದು ನನ್ನ ಬಲವಾದ ನಂಬಿಕೆ, ಎಂದರು.

ಎಲ್ಲರೂ ಕರತಾಡನ ಮಾಡಿದರು.

ಮುಂದುವರೆಸಿ – ದಿನಾ ಕಛೇರಿಗೆ ಬರುವುದು, ಕಛೇರಿಯ ಕೆಲಸ ಕಾರ್ಯಗಳು, ಮುಂತಾದ ವೇಳಾಪಟ್ಟಿಗಳು ಬದಲಾಗಬಹುದು, ಅಷ್ಟೇ ಹೊರತು, ಚಟುವಟಿಕೆಯ ಜೀವನದಲ್ಲಿ ಯಾವ ವ್ಯತ್ಯಾಸವೂ ಇರಬಾರದೆಂದು ನಿರ್ಧರಿಸಿದ್ದೇನೆ.  ಹಾಗಾಗಿ ನಿವ್ಯಾರೂ ಭಾವುಕರಾಗಬೇಕಿಲ್ಲ.  ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲರೂ ಸಂಪರ್ಕದಲ್ಲಿರೋಣ. ಒಟ್ಟಾಗಿಯೇ ಮುಂದುವರೆಯೋಣ.  ಹಾಗಾಗಿ ಇಂದಿನ ಕಾರ್ಯಕ್ರಮವನ್ನು ಒಂದು ಸಡಗರ, ಸಂಭ್ರಮದ ದಿನವನ್ನಾಗಿ   ಆಚರಿಸೋಣ.  ನನ್ನ ಮೇಲೆ ನಿಮಗೆಲ್ಲಾ ಇರುವ ಪ್ರೀತಿಗೆ ಪ್ರತಿಫಲವಾಗಿ, ನಿಮ್ಮಿಂದ ಕರ್ತವ್ಯ ನಿಷ್ಠೆ ಮತ್ತು ಬದ್ಧತೆಯನ್ನು ನಾನು ನಿರೀಕ್ಷಿಸುತ್ತೇನೆ.  ಹಾಗೆ ಕಾರ್ಯ ನಿರ್ವಹಿಸಿದಾಗ ನಮ್ಮ ಮುಂದಿನ ಜೀವನ ಸಂತೃಪ್ತಿಯಿಂದ ಕೂಡಿರುತ್ತದೆ.  ಹಾಗೆ ಮಾಡಬೇಕಿತ್ತು, … ಹೀಗೆ ಮಾಡಬೇಕಿತ್ತು ….. ಎಂಬ ಪಾಪಪ್ರಜ್ಙೆಯ ನೋವಿನಿಂದ ಕೂಡಿರುವುದಿಲ್ಲ, ಇದೇ ನಾನು ನಿಮಗೆ ಹೇಳುವ ಕಿವಿಮಾತು.

ಇನ್ನು ಮಾಧವ ಕೇಳಿದ ಪ್ರಶ್ನೆಗೆ ಉತ್ತರ – ನಾನೂ ಏನು ಹುಟ್ಟುವಾಗಲೇ ಅತೀ ಬುದ್ಧಿವಂತ, ಜಾಣ, ಪರಿಪೂರ್ಣ ಎಂಬ ಯಾವ ಗುಣಗಳನ್ನೂ ಹೊತ್ತು ತರಲಿಲ್ಲ.  ತಮ್ಮ ತಂದೆ ಹೇಳುತ್ತಿದ್ದ – ಯಾವಾಗಲೂ ಪ್ರಪಂಚಕ್ಕೆ ನಿನ್ನ ಕಣ್ಣು, ಕಿವಿಗಳನ್ನು ತೆರೆದಿಟ್ಟು ಬದುಕು, ಕಲಿಯಲು ಸದಾ ವಿಷಯಗಳು ಸಿಗುತ್ತಿರುತ್ತವೆ – ಎಂದಿದ್ದರು.  ಅದನ್ನೇ ನಾನು ನನ್ನ ಜೀವನದ ಮೂಲಮಂತ್ರವನ್ನಾಗಿಸಿಕೊಂಡೆ.

ಇರಲಿ, ಬರಿಯ ಗಂಭೀರ ವಿಷಯಗಳೇ ಆಯಿತು.  ನನ್ನ ಜೀವನದಲ್ಲಿ ನಡೆದ ಒಂದು ಎಡವಟ್ಟಿನ ಮತ್ತು ಅದೃಷ್ಟದ ಪ್ರಸಂಗಗಳನ್ನು ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ನಾನಾಗ ಗುಜರಾತಿನ ವಡೋದರಾ ಪಟ್ಟಣದಲ್ಲಿ ನನ್ನಣ್ಣನ ಕುಟುಂಬದೊಂದಿಗೆ ವಾಸವಾಗಿದ್ದೆ.  ಆಗತಾನೇ ಗಣಕಯಂತ್ರಗಳ ಯುಗ ಪ್ರಾರಂಭವಾಗಿತ್ತು.  ನಾನು ಒಂದು ಸಣ್ಣ ಕಂಪನಿಯಲ್ಲಿ ಸಣ್ಣ ಸಂಬಳಕ್ಕೆ ಕೆಲಸಕ್ಕೆ ಸೇರಿದ್ದೆ.  ಮೂರೇ ತಿಂಗಳಲ್ಲಿ ʼಗೋದ್ರಾʼ ನಗರದಲ್ಲಿದ್ದ ಒಂದು ಉಲ್ಲನ್‌ ಕಾರ್ಖಾನೆಯಲ್ಲಿ ಹೊಸದಾಗಿ ಪ್ರಾರಂಭಗೊಂಡ ಕಂಪ್ಯೂಟರ್‌ ವಿಭಾಗಕ್ಕೆ ಮುಖ್ಯಸ್ಥನಾಗಿ ಸೇರುವ ಅವಕಾಶ ದೊರೆಯಿತು.  ಪ್ರತಿದಿನ ವಡೋದರಾದಿಂದ ಗೋದ್ರಾ ನಗರಕ್ಕೆ ಅಪ್‌ ಅಂಡ್‌ ಡೌನ್‌ ಮಾಡುತ್ತಿದ್ದೆ, ಒಂದು ಗಂಟೆಯ ಪ್ರಯಾಣ.  ಮುಂದೆ ಒಂದೇ ವರ್ಷದಲ್ಲಿ ಪ್ರಖ್ಯಾತ ಕಂಪ್ಯೂಟರ್ ಸಂಸ್ಥೆಯೊಂದು ಬೆಂಗಳೂರಿನಲ್ಲಿ ಪ್ರಾರಂಬಿಸಬೇಕೆಂದಿದ್ದ ತನ್ನ ಶಾಖೆಗೆ ಮುಖ್ಯಸ್ಥನನ್ನಾಗಿ ನನ್ನನ್ನು ಆಯ್ಕೆ ಮಾಡಿತು.

ಸೋಮವಾರ ಬೆಂಗಳೂರಿನಲ್ಲಿ ರಿಪೋರ್ಟ್‌ ಮಾಡಿಕೊಳ್ಳಬೇಕಿತ್ತು.  ಶುಕ್ರವಾರದ ತನಕ ಗೋದ್ರಾ ಕಂಪನಿಯಲ್ಲಿ ಕೆಲಸ ಮಾಡಬೇಕಾಗಿ ಬಂತು.  ಅಲ್ಲಿ ನನ್ನ ಸ್ಥಾನಕ್ಕೆ ಬೆಂಗಳೂರಿನಿಂದ ಬಂದಿದ್ದ ನನ್ನ ಸ್ನೇಹಿತನೊಬ್ಬನನ್ನೇ ಶಿಫಾರಸು ಮಾಡಿ ಸೇರಿಸಿ ಅವನಿಗೆ ಎಲ್ಲ ಕೆಲಸಗಳನ್ನು ಕಲಿಸಿ ಬಂದಿದ್ದಾಯಿತು.  ಶನಿವಾರ ಹನ್ನೆರಡು ಗಂಟೆಗೆ ವಡೋದರಾದಿಂದ ಮುಂಬಯಿಗೆ ಒಂದು ರೈಲು, ಅಲ್ಲಿಂದ ಬೆಂಗಳೂರಿಗೆ ಮತ್ತೊಂದು ರೈಲು, ಸೀಟನ್ನು ಕಾದಿರಿಸಿದ್ದಾಯಿತು.

ಅಣ್ಣ, ಗ್ರಾಮಾಂತರ ಸೇವೆಗಾಗಿ, ಎರಡು ವರುಷ ʼಆನಂದ್‌ʼ ನಗರದ ಹತ್ತಿರವಿದ್ದ ʼಜ಼ರೋಲಾʼ ಎಂಬ ಹಳ್ಳಿಗೆ ದಿನಾ ಹೋಗಿ ಬಂದು ಮಾಡುತ್ತಿದ್ದ.  ಅತ್ತಿಗೆ ವಡೋದರಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.  ಅತ್ತಿಗೆ ರಜ ಹಾಕಿದ್ದರು.  ಅಣ್ಣ ಹೋಗಲೇ ಬೇಕಿತ್ತು, ಬೆಳಗ್ಗೆಯೇ ಶುಭಕೋರಿ, – ʼನೀನೀಗ ಬೆಂಗಳೂರಿಗೆ ಹೋಗಿ ಸೆಟಲ್‌ ಆಗು, ಇನ್ನು ಕೆಲವು ತಿಂಗಳುಗಳಲ್ಲೇ ನಾವೂ ಬಂದು ಬಿಡುತ್ತೇವೆ ಒಟ್ಟಿಗೆ ಇರೋಣʼ – ಎಂದು ಹೇಳಿ ತನ್ನ ಕೆಲಸಕ್ಕೆ ಹೊರಟ.

ಹನ್ನೊಂದು ಗಂಟೆಯ ವೇಳೆಗೆ ನಾನು, ಅತ್ತಿಗೆ, ನನ್ನ ಸ್ನೇಹಿತ ರೈಲ್ವೆ ನಿಲ್ದಾಣಕ್ಕೆ ಬಂದೆವು.  ಪ್ಲಾಟ್‌ ಫಾರಂ 4ಕ್ಕೆ ಬಂದು ನನ್ನ ಕೋಚ್‌ ಎಸ್‌-3 ನಿಲ್ಲುವ ಸ್ಥಳಕ್ಕೆ ಬಂದು ನಿಂತದ್ದಾಯಿತು.  ಇನ್ನೂ ಸುಮಾರು ಕಾಲಾವಕಾಶ ಇರುವುದರಿಂದ ಸುತ್ತಾಡಿಕೊಂಡು ಬರುತ್ತಿದ್ದೆವು.  ಅಹಮದಾಬಾದಿನಿಂದ ಬರಬೇಕಿದ್ದ ರೈಲು ಹದಿನೈದು ನಿಮಿಷಗಳು ತಡವಾಗಿ ಬರುತ್ತದೆ ಎಂದು ಅನೌನ್ಸ್‌ ಮಾಡುತ್ತಿದ್ದರು.  ಆದರೂ 11.50 ಕ್ಕೆ ಪ್ಲಾಟ್ ಫಾರಂ ಹತ್ತಿರ ಬಂದು ನಿಂತದ್ದಾಯಿತು.  ಮೂವರೂ ಹಿಂದಿನ, ಮುಂದಿನ ವಿಚಾರಗಳ ಹರಟೆ ಹೊಡೆಯುತ್ತಾ ನಿಂತಿದ್ದೆವು.  12.15 ಆಯಿತು, ರೈಲು ಬರಲೇ ಇಲ್ಲ, ಸಮಯ ನೋಡಿಕೊಳ್ಳುತ್ತಲೇ ಮಾತನಾಡುತ್ತಿದ್ದವು.   12.35 ಆಯಿತು, ಊಂ, ಹುಂ, ರೈಲಿನ ಸುದ್ದಿಯೇ ಇಲ್ಲ, ತಡೆಯಲಾರದೆ ಅಲ್ಲೇ ಹೋಗುತ್ತಿದ್ದ ಚಾಯ್‌ ಮಾರುವವನನ್ನು ಕೇಳಿದರೆ, ಹಿಂದಿನ ಪ್ಲಾಟ್‌ ಫಾರಂನಿಂದ ಹೋಗುತ್ತಿರುವ ರೈಲನ್ನು ತೋರಿಸಿ, – ಉದರ್‌ ಜಾ ರಹಾ ಹೈ ನಾ (ಅಲ್ಲಿ ಹೋಗುತ್ತಿದೆಯಲ್ಲಾ) – ಎಂದಾಗ, ನಮ್ಮ ಪರಿಸ್ಥಿತಿ ಹೇಗಾಗಿರಬೇಡ.  ನಮ್ಮ ಕಣ್ಣ ಮುಂದೆಯೇ ಹಿಂದಿನ ಪ್ಲಾಟ್‌ ಫಾರಂನಿಂದ ರೈಲು ಚುಕು ಬುಕು ಎನ್ನುತ್ತಾ ವೇಗವೇರಿಸಿಕೊಳ್ಳುತ್ತಾ ಹೋಗುತಿತ್ತು.  ʼಇದೇ ಪ್ಲಾಟ್ ಫಾರಂಗೆ ಬರಬೇಕಿತ್ತಲ್ಲವಾ?ʼ ಎನ್ನಲು, – ʼಅನೌನ್ಸ್‌ ಕಿಯಾನಾ ದೂಸರಾ ಪ್ಲಾಟ್‌ ಫಾರಂ ನಂಬರ್‌ʼ . . . ಎನ್ನುತ್ತಾ ಹೊರಟುಹೋದ.  ನಾವು ಮೂವರೂ ತಲೆಯ ಮೇಲೆ ಕೈಹೊತ್ತು ಕುಳಿತುಬಿಟ್ಟೆವು.

ನಂತರ ತಿಳಿದದ್ದು, ಹಿಂದಿನ ಅನೌನ್ಸಮೆಂಟುಗಳು ನಾವುಗಳು ಸುತ್ತಾಡುತ್ತಿದುದರಿಂದ ಕೇಳಿಸಿತ್ತು, ಈಗಿನದು ನಮಗೆ ಕೇಳಿಸಿರಲಿಲ್ಲ, ಕಾರಣ ನಮ್ಮ ಪ್ಲಾಟ್ ಫಾರಂ ಹತ್ತಿರವಿದ್ದ ಸ್ಪೀಕರ್‌ ಕೆಟ್ಟು ಹೋಗಿತ್ತು!

ಮುಂದಿನದೆಲ್ಲಾ ಭಯಂಕರ ಸರ್ಕಸ್‌, ನಾಲ್ಕು ಗಂಟೆಗೆ ಮನೆಗೆ ಬಂದ ಅಣ್ಣ, ವಿಚಾರಿಸಿ, ಮೂರು ಮೂರು ಜನ ಸುಶಿಕ್ಷಿತರು ಇದ್ದು ಮಾಡುವ ಕೆಲವೇ ಇದು? ಎಂದು ಚೆನ್ನಾಗಿ ಬೈದು, ರಾತ್ರಿ ಏಳು ಗಂಟೆಗೇ ಬಸ್‌ ನಿಲ್ದಾಣಕ್ಕೆ ಕರೆದೊಯ್ದು, ಬೇರೆ ಯಾವುದೋ ಊರಿನಿಂದ ಬಂದ ಬಸ್‌ ಒಂದರಲ್ಲಿ ಜಾಗವಿಲ್ಲದಿದ್ದರೂ ಕಂಡಕ್ಟರ್ ಜೊತೆ ಇರುವ ವಿಷಯ ಮಾತನಾಡಿ‌, ಡ್ರೈವರ್‌ ಪಕ್ಕದ ಸೀಟಿನಲ್ಲೊಂದು ಜಾಗ ಮಾಡಿ ಕಳುಹಿಸಿಕೊಟ್ಟ.  ಮುಂಬಯಿಗೆ ಬಂದರೆ ಅಲ್ಲಿಂದಲೂ ಟ್ರೈನ್‌ ಹೊರಟು  ಹೋಗಿತ್ತು.  ಸಿಕ್ಕ, ಸಿಕ್ಕ ಬಸ್ಸುಗಳನ್ನು ಹಿಡಿದು ಬದಲಾಯಿಸಿಕೊಂಡು ಬೆಂಗಳೂರಿಗೆ ಬಂದು ಬಸ್‌ ನಿಲ್ದಾಣದಿಂದ ಸೀದಾ ಕಛೇರಿಗೆ ಹೋಗಿ ರಿಪೋರ್ಟ್ ಮಾಡಿಕೊಂಡಾಗ ಮಧ್ಯಾನ್ಹ ಮೂರು ಗಂಟೆ!

ಇದೊಂದು ಘಟನೆ ನನ್ನ ಜೀವನದಲ್ಲಿ ತುಂಬಾ ಬದಲಾವಣೆ ಮತ್ತು ಜವಾಬ್ದಾರಿಯನ್ನು ತಂದಿತು.  ಆಗ ನನಗೆ ಇಪ್ಪತ್ತೆರಡು ವರುಷ.  ನಾಲ್ಕಾರು ವರುಷ ಅಲ್ಲಿ ಕೆಲಸ ಮಾಡಿ ಅಗಾಧ ಅನುಭವ ಮತ್ತು ತಂತ್ರಜ್ಞಾನವನ್ನು ಕಲಿತಿದ್ದಾಯಿತು.  ನನಗೆ ಇಪ್ಪತ್ತೇಳು ವರ್ಷಗಳಾದವು.  ಅಷ್ಟರ ವೇಳೆಗೆ ಅಧಿಕಾರಿ ಹುದ್ದೆಗೆ ಈ ಕಛೇರಿಯಿಂದ ಜಾಹಿರಾತು ಪ್ರಕಟವಾಗಿತ್ತು.  ನಾನು ಅರ್ಜಿ ಹಾಕಿದ್ದೆ, ಸರ್ಕಾರೀ ಕೆಲಸಕ್ಕೆ ಸೇರಲು ಇದ್ದ ಕಡೆಯ ಅವಕಾಶ.  ಲಿಖಿತ ಪರೀಕ್ಷೆ ಬರೆದಾಗ ಇದ್ದ ವಿಳಾಸ ನಂತರ ಬದಲಾಯಿಸಿದ್ದೆ.  ಈ ಕಛೇರಿಗೆ ತಿಳಿಸಬೇಕೆಂಬುದೂ ತಿಳಿದಿರಲಿಲ್ಲ.  ನನ್ನ ಸ್ನೇಹಿತನೊಬ್ಬನಿಗೆ ಸಂದರ್ಶನಕ್ಕೆ ಕರೆ ಬಂದಿತ್ತು.  ದೆಹಲಿಗೆ ಹೋಗಬೇಕಿತ್ತು, ಅವನ ಹೆಸರು ಆನಂದ.  ಅವನ ಸಂದರ್ಶನ ೫ನೇ ತಾರೀಖಿನಂದು ಇತ್ತು.  ಅಲ್ಲಿ ಹೋದಾಗ ಪಟ್ಟಿಯನ್ನು ನೋಡಿದನಂತೆ.  ಅದರಲ್ಲಿ ನನ್ನ ಹೆಸರಿತ್ತಂತೆ, ನನ್ನ ಹೆಸರು ಶ್ರೀನಿವಾಸ, ಎಸ್‌, ಆದ್ದರಿಂದ ೮ನೇ ತಾರೀಖು ಇತ್ತಂತೆ, ನಮ್ಮ ಭಾವ ಬಿಎಸೆನ್ನಲ್ಲಿ ಇದುದ್ದರಿಂದ, ಅವರ ಫೋನ್‌ ನಂಬರ್‌ ಅವನ ಹತ್ತಿರ ಇತ್ತಂತೆ, ಅವರಿಗೆ ಫೋನ್‌ ಮಾಡಿ, – ಶೀನಿ ಯಾಕೆ ಬಂದಿಲ್ಲ, ಪಟ್ಟಿಯಲ್ಲಿ ಅವನ ಹೆಸರು ಇದೆ – ಎಂದನಂತೆ.  ತಕ್ಷಣ ವಿಷಯ ತಿಳಿದು ಅಲ್ಲಿ ಇಲ್ಲಿ ಸಾಲ, ಸೋಲ ಮಾಡಿ ಮೊದಲ ಬಾರಿಗೆ ವಿಮಾನದಲ್ಲಿ ದೆಹಲಿ ಸೇರಿ, ಸಂದರ್ಶನ ನೀಡಿ, ಆಯ್ಕೆಯಾಗಿ, ಕಾರ್ಯ ನಿರ್ವಹಿಸಿ, ಇಂದು ನಿವೃತ್ತನಾಗಿ, ಪ್ರವೃತ್ತಿಯೆಡೆಗೆ ಹೊರಳುತ್ತಿದ್ದೇನೆ.

ಹಾಗಾಗಿ ಯಾರೂ ಹುಟ್ಟುವಾಗಲೇ ಪರಿಪೂರ್ಣ, ಪರಿಪಕ್ವವಾಗಿ ಹುಟ್ಟುವುದಿಲ್ಲ.  ಎಲ್ಲರೂ ಸಾಮಾನ್ಯರಾಗಿಯೇ ಹುಟ್ಟಿ, ಅದೃಷ್ಟ, ದುರಾದೃಷ್ಟ, ತೀಕ್ಷ್ಮಬುದ್ಧಿ, ಬದ್ಧತೆ, ಕರ್ತವ್ಯಪರತೆ, ಕಷ್ಟದಿಂದ, ಇಷ್ಟದಿಂದ, ಜಾಣತನದಿಂದ ಕೆಲಸ ಕಲಿಯುತ್ತಾ, ಕೆಲಸ ಮಾಡುತ್ತಾ ಮುಂದುವರೆದರೆ ಜೀವನ ಸಫಲ ಎನ್ನಿಸುವುದು.

ನನ್ನ ಅನುಭವಕ್ಕೆ ಬಂದ ಒಂದೆರಡು ಘಟನೆಗಳ ಸ್ಯಾಂಪಲ್‌ ಇದು ಅಷ್ಟೆ. ಸುಗ್ರಾಸ ಭೋಜನ ತಯಾರಿದೆ, ನಡೆಯಿರಿ ಎಲ್ಲರೂ ಹೊರಡೋಣ – ಎನ್ನುತ್ತಾ ಶ್ರೀನಿವಾಸಮೂರ್ತಿಯವರು ವಾತಾವರಣವನ್ನು ತಿಳಿಗೊಳಿಸಿದರು. ಮಂತ್ರಮುಗ್ಧರಂತೆ ಅವರ ಮಾತುಗಳನ್ನು ಆಲಿಸುತ್ತಾ ಕುಳಿತಿದ್ದ ಎಲ್ಲರೂ ಕಲ್ಪನಾ ಲೋಕದಿಂದ ವಾಸ್ತವಕ್ಕೆ ಮರಳಿದರು.

  –ಪದ್ಮಾಆನಂದ್, ಮೈಸೂರು

10 Responses

  1. ಪದ್ಮಾ ಆನಂದ್ says:

    ಪ್ರಕಟಿಸಿದ “ಸುರಹೊನ್ನೆ” ಗೆ ಧನ್ಯವಾದಗಳು.

  2. ನಿವೃತ್ತಿ ಸರಳ ಸುಂದರ ಕಥೆ..ಬದುಕಿನ ಮಜಲುಗಳಲ್ಲಿನ ಅನಭವದ ರಸಪಾಕ ಉತ್ತಮ ಸಂದೇಶ..

    • ಪದ್ಮಾ ಆನಂದ್ says:

      ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು

  3. ನಿವೃತ್ತಿ ಸರಳ ಸುಂದರ ಕಥೆ..ಬದುಕಿನ ಮಜಲುಗಳಲ್ಲಿನ ಅನಭವದ ರಸಪಾಕ ಉತ್ತಮ ಸಂದೇಶ..ಪದ್ಮಾ ಮೇಡಂ ವಂದನೆಗಳು

  4. ನಯನ ಬಜಕೂಡ್ಲು says:

    ಬಹಳ ಸುಂದರವಾಗಿದೆ

  5. ಶಂಕರಿ ಶರ್ಮ says:

    ಕಚೇರಿಯಲ್ಲಿ ಎಲ್ಲರಿಗೂ ಆತ್ಮೀಯರಾಗಿದ್ದ ಶ್ರೀನಿವಾಸ ಮೂರ್ತಿಗಳ ನಿವೃತ್ತಿಯು; ಒಳ್ಳೆಯ ಪ್ರವೃತ್ತಿಯನ್ನು ಬೆಳೆಸಿಕೊಂಡು ಗೆಲುವಿನಿಂದ ಬಾಳುವ ಮುಂದಿನ ಹೊಸಜೀವನಕ್ಕೆ ನಾಂದಿ ಎನ್ನುವ ಸ್ಫೂರ್ತಿದಾಯಕ ನಡೆಯು ಬಹಳ ಮೌಲ್ಯಯುತವಾದುದಾಗಿದೆ. ಒಳ್ಳೆಯ ಲೇಖನ… ಧನ್ಯವಾದಗಳು ಮೇಡಂ.

    • ಪದ್ಮಾ ಆನಂದ್ says:

      ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು

  6. Hema Mala says:

    ಕುತೂಹಲಕಾರಿ ತಿರುವನ್ನು ಹೊಂದಿದ ಕಥೆ, ಚೆಂದದ ನಿರೂಪಣೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: