ಬರೆದು ಪ್ರಕಟಿಸಿದ ಮೇಲೆ !

Share Button

ಬರೆಯುವುದು ಏಕೆ? ಅಭಿವ್ಯಕ್ತಿಸುವುದಕೆ ! ಭಾವನೆ, ಸಂವೇದನೆ, ಚಿಂತನಾಲೋಚನೆಗಳನು ಹೊರ ಹಾಕುವುದಕೆ!! ಒಟ್ಟಿನಲಿ ಪ್ರತಿಕ್ರಿಯಿಸಲು ಮತ್ತು ಪ್ರತಿಸ್ಪಂದಿಸಲು. ಇದು ಬರೆವಣಿಗೆಯೊಂದಕ್ಕೇ ಅಲ್ಲ; ಎಲ್ಲ ಲಲಿತಕಲೆಗಳ ಲಕ್ಷಣ; ಅದರ ಹುಟ್ಟು ಮತ್ತು ವಿಕಸನ. ಮಾತು ಹೇಗೇ ಸಂವಹನವೋ ಬರೆಹವೂ. ‘ಬರೆಹವೆಂಬುದು ಮನಸಿನ ನಾಲಗೆ ; ಸುಮ್ಮನೆ ತನ್ನಷ್ಟಕೆ ಬದುಕಿದವರ ಪಾಲಿಗೆ’ ಎಂದೇ ನಾನು ಒಂದೆಡೆ ಬರೆದುಕೊಂಡಿದ್ದೆ. ಒಂದು ಕಾಲದಲ್ಲಿ ಮಾತಿಗಿಂತ ಬರೆಹಕ್ಕೆ ಶ್ರೇಷ್ಠತೆಯ ವ್ಯಸನವಿತ್ತು. ಅಕ್ಷರ ಕಲಿತು, ವಿದ್ಯಾವಂತರಾಗಿ, ಬರೆದವರು ದೊಡ್ಡವರಾಗುತ್ತಿದ್ದರು. ನಾವು ನೋಡ ನೋಡುತ್ತಲೇ ಬರೆಹವು ಹಿನ್ನೆಲೆಗೆ ಸಂದಿತು; ಮಾತು ಮಹತ್ವ ಪಡೆಯಿತು. ಓದುವ, ಬರೆಯುವ ಮತ್ತು ಓದಿ ಬರೆಯುವ ಕೌಶಲ್ಯವು ತಾಳುಮೆ ಮತ್ತು ಜಾಣುಮೆಗಳೆಂಬ ಕೆಲವೊಂದು ಗುಣಗಳನ್ನು ಬೇಡುತ್ತದೆ. ಮಾತು ಹಾಗಲ್ಲ; ಹೆಚ್ಚು ಸಿದ್ಧತೆ ಬೇಕಿಲ್ಲ. ವಾಕ್ಯ ಪ್ರಾರಂಭಿಸಿದ ಮೇಲೆ ಅದಕೊಂದು ಅರ್ಥಪೂರ್ಣ ಮುಕ್ತಾಯವನ್ನೂ ಅಂಥ ವಾಕ್ಯಗಳ ವೃಂದ ರಚಿಸಿ, ಅದಕೊಂದು ಪ್ರಬಂಧ ಧ್ವನಿಯನ್ನೂ ಕೊಡಬೇಕಾದ ಉಮೇದು ಬರೆಹಕ್ಕಿದೆ. ಮಾತು ಹಾಗಲ್ಲ. ಅಪೂರ್ಣ ವಾಕ್ಯವನ್ನೂ ರಚಿಸಬಹುದು. ನಂನಮ್ಮ ಆಂಗಿಕ ಹಾವಭಾವ, ಅಭಿನಯಗಳ ಮೂಲಕ ಪ್ರತಿಕ್ರಿಯಿಸಬಹುದು. ಈಗ ಮಾತಿನ ಯುಗ. ಎಲ್ಲ ಕಡೆಯೂ ಮಾತು; ಎಲ್ಲರೂ ಮಾತಾಡುವವರೇ. ಬಾಯಿಗೆ ಬಂದದ್ದನೆಲ್ಲಾ ಒದರುವವರೂ ಇದ್ದಾರೆ; ಆಲೋಚಿಸಿ ಅರ್ಥಬದ್ಧವಾಗಿ ಮಾತಾಡುವವರೂ ಇದ್ದಾರೆ. ನಮ್ಮ ಈ ಕಾಲದ ಮಾತಿನಲ್ಲಿ ಶಾಂತಿಯೂ ಇದೆ; ವಾಂತಿಯೂ ಇದೆ. ಕಂಡಕಂಡಲ್ಲೆಲ್ಲಾ ಕಾರಿಕೊಳ್ಳುವವರೂ ಇದ್ದಾರೆ. ಬದುಕು ಕಟ್ಟಿಕೊಳ್ಳಲು ಬೇಕಾದ ಗಹನ ವಿಚಾರಧಾರೆ ಹರಿಸುತ್ತಾ ದಾರಿಯಾದವರೂ ಇದ್ದಾರೆ. ಒಟ್ಟಿನಲ್ಲಿ ಮಾತು ಈಗ ನಮ್ಮ ಜೀವನಯಾನದ ದೋಣಿಯೂ ಹೌದು; ಹಲವು ತೂತುಗಳಿರುವ ಗೋಣಿಯೂ ಹೌದು!

ಸಾಹಿತ್ಯ, ಸಂಗೀತ, ಚಿತ್ರಕಲೆ, ಶಿಲ್ಪಕಲೆ ಮತ್ತು ನೃತ್ಯಕಲೆ ಈ ಐದನ್ನು ಲಲಿತಕಲೆ (ಫೈನ್ ಆರ್ಟ್ಸ್) ಎಂದು ಕರೆಯುತ್ತೇವೆ. ಅವರವರ ಇಷ್ಟಾನಿಷ್ಟ ಮತ್ತು ಅಭಿರುಚಿಗಳಿಗೆ ಅನುಗುಣವಾಗಿ ಇದು ಮುನ್ನೆಲೆ ಕಂಡುಕೊಳ್ಳುತ್ತದೆ. ಬರೆವಣಿಗೆ ತಿಳಿದವರು ಸಾಹಿತ್ಯ ರಚಿಸುತ್ತಾರೆ. ಇದರಲ್ಲಿ ಹಲವು ಪ್ರಕಾರಗಳು. ಅವರ ಭಾವ ಸ್ವಭಾವ ಮತ್ತು ಬರೆಯುವ ಕ್ರಿಯೆಟಿವಿಟಿಯನ್ನು ಆಧರಿಸಿ, ಸಾಹಿತ್ಯ ಪ್ರಕಾರಗಳನ್ನು ಆದರಿಸುತ್ತಾರೆ. ಕತೆ, ಕವಿತೆ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಮೀಮಾಂಸೆ, ಶಾಸ್ತ್ರೀಯ, ಅಂಕಣ, ಲೇಖನ ಹೀಗೆ. ತಮ್ಮ ಯಾವ ಅಭಿವ್ಯಕ್ತಿ ಮತ್ತು ಅನುಭವಗಳನ್ನು ಯಾವ ಪ್ರಕಾರದಲ್ಲಿ ಬರೆಯಬೇಕೆಂಬುದು ಬರೆಯುವವರ ಸ್ವಾತಂತ್ರ್ಯ; ಅದು ಅವರ ವಿವೇಚನೆ. ಇನ್ನು ಸಂಗೀತವು ಶಾಸ್ತ್ರೋಕ್ತವೂ ಹೌದು; ಹವ್ಯಾಸ ಮತ್ತು ಅಭ್ಯಾಸವೂ ಹೌದು. ಇದು ಸಹ ಅಭಿವ್ಯಕ್ತಿಯೇ. ಚಿತ್ರಕಲೆ, ಶಿಲ್ಪಕಲೆ ಮತ್ತು ನೃತ್ಯಕಲೆಗಳು ಸಹ ಸಾಹಿತ್ಯದಂತೆಯೇ ಸಂಸ್ಕೃತಿ ಮತ್ತು ಪರಂಪರೆಗಳನ್ನು ಆಧರಿಸಿ ನಿರ್ಮಾಣವಾದವು. ಮನುಷ್ಯ ನಾಗರಿಕತೆ ವಿಕಾಸದ ದ್ಯೋತಕ; ಆತನ ಸೃಷ್ಟಿಶೀಲ ಪ್ರತಿಭಾವಂತಿಕೆಯ ಪ್ರತೀಕ. ಬುದ್ಧಿ ಭಾವಗಳ ವಿದ್ಯುದಾಲಿಂಗನ; ತನ್ನೊಳಗಿನ ಭ್ರಮ, ವಿಭ್ರಮ ಮತ್ತು ಸಂಭ್ರಮಗಳ ಸಂವೇದನ. ಹತ್ತು ಪುಟಗಳಲ್ಲಿ ಹೇಳುವುದನ್ನು ಒಂದು ಚಿತ್ರ ಧ್ವನಿಸಬಹುದು. ಓದು ಬರೆಹ ಬರದೇ ಇರುವವರನ್ನೂ ಸಾಹಿತ್ಯೇತರ ಲಲಿತಕಲೆಗಳು ಆಕರ್ಷಿಸುತ್ತವೆ ಮತ್ತು ಆವರಿಸಿಕೊಳ್ಳುತ್ತವೆ. ನೃತ್ಯಕಲೆಯೇ ವಿಕಾಸಗೊಂಡು, ಉಳಿದ ಲಲಿತಕಲೆಗಳನ್ನು ಒಳಗೊಂಡು ನಾಟಕವಾಯಿತು. ಇದೀಗ ತಂತ್ರಜ್ಞಾನದ ಸ್ಪರ್ಶದಿಂದ ಸಿನಿಮಾ ಆಗಿ ಬಹುಕೋಟಿ ಉದ್ಯಮವಾಗಿದೆ. ಸಿನಿಮಾಗಳು ನಾಟಕದ ಆಧುನಿಕ ರೂಪ. ಪ್ರಪಂಚದ ಮೊತ್ತ ಮೊದಲ ಲಲಿತಕಲೆಯೆಂದರೆ ಅದು ನಾಟಕವೇ. ನಾಟ್ಯಶಾಸ್ತ್ರವನ್ನು ಬರೆದ ಭರತಮುನಿಯು ‘ಕಾವ್ಯೇಷು ನಾಟಕಂ ರಮ್ಯಂ’ ಎಂದಿದ್ದಾನೆ. ಹಿಂದೆ ಸಾಹಿತ್ಯವನ್ನು ಕಾವ್ಯ ಎಂದೇ ಕರೆಯುತ್ತಿದ್ದರು. ಪದ್ಯಕಾವ್ಯ ಮತ್ತು ಗದ್ಯಕಾವ್ಯ ಎಂದು ಎರಡು ವಿಧ. ಹಾಗಾಗಿ ಕಾವ್ಯಗಳಲ್ಲೆಲ್ಲಾ ಅಂದರೆ ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ನಾಟಕವೇ ರಮಣೀಯವಾದುದು ಎಂದರ್ಥ. ವೇದೋಪನಿಷತ್ತುಗಳೇ ನಮ್ಮ ಪ್ರಾಚೀನ ಸಾಹಿತ್ಯ. ಆನಂತರ ಶ್ರುತಿಗಳು, ಸ್ಮೃತಿಗಳು, ವೇದಾಂಗಗಳು, ರಾಮಾಯಣ ಮಹಾಭಾರತ ಮಹಾಕಾವ್ಯಗಳು ಲಿಪಿರೂಪಗೊಂಡು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಭದ್ರಬುನಾದಿಗೆ ಕಾರಣವಾದವು. ವಾಲ್ಮೀಕಿ ಮಹರ್ಷಿಯನ್ನು ಆದಿಕವಿಯೆಂದೇ ಗೌರವಿಸುತ್ತೇವೆ. ಹಾಗೆ ನೋಡಿದರೆ ಎಲ್ಲ ಲಲಿತಕಲೆಗಳೂ ಒಂದಲ್ಲ ಒಂದು ಬಗೆಯಲ್ಲಿ ಬರೆಯಲ್ಪಟ್ಟವೇ! ಕಾಗದದ ಮೇಲೆ ಶಾಯಿಯಲ್ಲೇ ಬರೆಯಬೇಕೆಂದೇನಿಲ್ಲ. ನಮ್ಮವರು ಕಲ್ಲುಗಳಲ್ಲಿ ಕೆತ್ತಿದರು. ಲೋಹದ ತಗಡುಗಳಲ್ಲಿ ದಾಖಲಿಸಿದರು. ಬಾಯಿಂದ ಬಾಯಿಗೆ ಪ್ರಸಾರಿಸಿ, ಕಾಪಿಟ್ಟರು. ಅಂದರೆ ಮನಸಿನಲೇ ಬರೆದರು. ಕಂಠಪಾಠ ಮಾಡಿ ಹಾಗೆಯೇ ಒಪ್ಪಿಸುತಿದ್ದರು. ಹಾಗಾಗಿ, ಸಂಗೀತವೂ ಬರೆಯಲ್ಪಟ್ಟುದೇ. ಬರೆವಣಿಗೆ ಎನ್ನುವುದನ್ನು ಕೇವಲ ಕಾಗದ ಕಂಡುಕೊಂಡ ಮೇಲೆ ಶುರುಮಾಡಿದ್ದು ಎಂಬುದು ಅಲ್ಪಜ್ಞಾನ. ಈಗ ಕಾಗದವೇ ಇಲ್ಲ. ನೇರವಾಗಿ ಟೈಪಿಸುತ್ತೇವೆ; ಕಂಪ್ಯೂಟರು ಮತ್ತು ಫೋನುಗಳಲ್ಲಿ ಓದುತ್ತೇವೆ. ಗುರುಮುಖೇನ ಕಲಿತ ಎಲ್ಲ ವಿದ್ಯೆಗಳೂ ಪಾರಂಪರಿಕವೇ. ಶಿಷ್ಟಸಾಹಿತ್ಯವು ಲಿಪಿಯನ್ನು ಆಧರಿಸಿ ಅಭಿವ್ಯಕ್ತವಾದರೆ, ಮೌಖಿಕ ಸಾಹಿತ್ಯಕ್ಕೆ ಜನಮಾನಸವೇ ದಿಕ್ಕುದೆಸೆ. ‘ಜನವಾಣಿ ಬೇರು; ಕವಿವಾಣಿ ಹೂವು’ ಎಂದಿದ್ದಾರೆ ಆಚಾರ್ಯ ಬಿಎಂಶ್ರೀಯವರು. ಸಂಗೀತವು ರಾಗ, ತಾಳ, ಸ್ವರಗಳಲ್ಲಿ ಮಾತಾಡಿದರೆ ಚಿತ್ರವು ರೇಖೆ, ಚುಕ್ಕಿ, ಬಣ್ಣಗಳಲ್ಲಿ ಮಾತಾಡುತ್ತದೆ. ಅದೇ ಶಿಲ್ಪಚಾತುರ್ಯವು ಗಣಿತ, ಕೌಶಲ್ಯ ಮತ್ತು ಶ್ರಮಗಳ ಮೂಲಕ ಸಂವಹನ ಮಾಡುತ್ತದೆ. ನೃತ್ಯವು ಭಾವಭಂಗಿಗಳಲ್ಲಿ ನಮ್ಮನ್ನು ಆವರಿಸಿ, ಸಾವರಿಸಿ, ಸಂತುಷ್ಟಗೊಳಿಸುತ್ತದೆ. ಅಂದರೆ ಎಲ್ಲ ಅಭಿವ್ಯಕ್ತಿಗಳ ಮೂಲೋದ್ದೇಶವೇ ಆನಂದ ಮತ್ತು ಅರಿವು. ಎಲ್ಲ ಬಗೆಯ ಭಾವಸಂವೇದ್ಯಗಳನ್ನು ಆನಂದದಲ್ಲೂ ಎಲ್ಲ ಬಗೆಯ ತಿಳಿವು, ಸಂದೇಶ, ಜಾಗೃತಿಗಳನ್ನು ಅರಿವಿನಲ್ಲೂ ಅಡಕಗೊಳಿಸಬಹುದು. ಈ ಎಲ್ಲವುಗಳನ್ನು ಸ್ಥೂಲವಾಗಿ ಆತ್ಮಸ್ಥ ಮತ್ತು ಪರಸ್ಥ ಎಂದು ವಿಂಗಡಿಸಿಕೊಂಡು ಅಧ್ಯಯನ ಮಾಡುತ್ತೇವೆ. ಆತ್ಮೋನ್ನತಿಯನ್ನೂ ಸಮಾಜೋನ್ನತಿಯನ್ನೂ ಏಕಕಾಲಕ್ಕೆ ಸಾಧಿಸಿ ತೋರಿಸಿದ ನಮ್ಮ ಶಿವಶರಣರಿಗಿಂತ ಬೇರೆ ನಿದರ್ಶನ ಬೇಕೆ? ಎಲ್ಲ ಲೌಕಿಕ ಜಂಜಡಗಳನ್ನು ತ್ಯಜಿಸಿ, ವೈರಾಗ್ಯ ಹೊಂದಿಯೂ ಜನಪರ ಸಾಹಿತ್ಯ ಕೊಟ್ಟು ಹೋದ ದಾಸರಿಗಿಂತ ಬೇರೆ ದರ್ಶನ ಬೇಕೆ? ಅಂದರೆ ಸಾಹಿತ್ಯವೆಂದರೆ ಈ ಎಲ್ಲವೂ. ಎಲ್ಲ ಬಗೆಯ ಅಭಿವ್ಯಕ್ತಿಗಳೂ ಸಾಹಿತ್ಯವೇ.

ಬರೆದವರು ಹರಿಯದೇ ಪ್ರಕಟಿಸುವುದೇಕೆ? ಬರೆಯುವಲ್ಲೇ ಒಂದು ಬಗೆಯ ಬಿಡುಗಡೆಯ ಭಾವ. ಆನಂತರ ಪ್ರಕಟಿಸಿದಾಗ ಅಥವಾ ಪ್ರಕಟಗೊಂಡಾಗ ಏನೋ ಆತ್ಮಸಂತೋಷ. ಎಷ್ಟು ಜನರಿದ್ದಾರೋ ಅಷ್ಟೂ ದೃಷ್ಟಿಕೋನಗಳಿರುತ್ತವೆ. ಆರೂ ಮೂರೂ ಸೇರಿಯೂ ಒಂಬತ್ತು. ಐದೂ ನಾಲ್ಕೂ ಸೇರಿಯೂ ಒಂಬತ್ತು! ಇಂಗ್ಲಿಷಿನ ಒಂದು ಮಾತು ಇದು: ‘ದ ವೇ ಯು ಡು ಥಿಂಗ್ಸ್ ಈಸ್ ನಾಟ್ ಆಲ್ವೇಸ್ ದಿ ಓನ್ಲಿ ವೇ ಟು ಡು ದೆಮ್. ಸೋ, ರೆಸ್ಪೆಕ್ಟ್ ಅದರ್ ಪೀಪಲ್ಸ್ ವೇ ಆಫ್ ಥಿಂಕಿಂಗ್ ಆ್ಯಂಡ್ ಡುಯಿಂಗ್ ಥಿಂಗ್ಸ್.’ ನಾವು ಮಾಡುತ್ತಿರುವ ರೀತಿಯೇ ಎಲ್ಲಕ್ಕೂ ಏಕೈಕ ಮಾರ್ಗವಲ್ಲ. ಇತರರ ಚಿಂತನೆ ಮತ್ತು ಕಾರ್ಯಪದ್ಧತಿಯನ್ನು ಗೌರವಿಸುವುದು ಅಗತ್ಯ. ಪ್ರತ್ಯೇಕ ದೃಷ್ಟಿಕೋನಗಳು ಹೊಸ ನೋಟಗಳನ್ನು ಮತ್ತು ಪರಿಹಾರಗಳನ್ನು ಕೊಡಬಹುದು. ಪ್ರತಿಯೊಬ್ಬರೂ ತಮ್ಮದೇ ಆದ ಅನುಭವದ ಮತ್ತು ತರ್ಕದ ಆಧಾರದ ಮೇಲೆ ತಮ್ಮ ಕಾರ್ಯವಿಧಾನವನ್ನು ರೂಪಿಸಿಕೊಳ್ಳುತ್ತಿರುತ್ತಾರೆ. ಅದನ್ನು ಒಪ್ಪಿಕೊಳ್ಳುವುದರಿಂದ ಉತ್ತಮ ಸಂವಹನವುಂಟಾಗಿ ಸಂಬಂಧಗಳು ಸದೃಢಗೊಳ್ಳುತ್ತವೆ.

ಸಾಹಿತ್ಯವೆಂದರೆ ಇದೇ. ಕತೆ, ಕಾದಂಬರಿ, ಕವಿತೆ ಮೊದಲಾದ ಪ್ರಕಾರಗಳಲ್ಲಿ ಹೊಸೆಯುವ ರಚನೆಗಳಾಗಲೀ ರಸ, ಪ್ರಾಸ, ಅಲಂಕಾರ, ಪ್ರತಿಮೆ, ಪ್ರತೀಕ, ಸಂಕೇತ, ಜೀವನದರ್ಶನ, ಜೀವನ ಶೋಧನ ಎಂಬಂಥ ಪರಿಕರಗಳಾಗಲೀ ಅಂತಿಮವಾಗಿ ಹಲವು ರೀತಿಯ ದೃಷ್ಟಿ-ಕೋನಗಳನ್ನು ಅರಿಯುವುದು ಹಾಗೂ ಅವನ್ನು ಗೌರವಿಸುವುದು. ‘ಏನು ಹೇಳಿದ್ದೇನೆ?’ ಎಂಬುದು ವಸ್ತು ಮತ್ತು ಅನುಭವ ಎನಿಸಿಕೊಂಡರೆ, ‘ಹೇಗೆ ಹೇಳಿದ್ದೇನೆ?’ ಎಂಬುದು ರೂಪ ಮತ್ತು ಅಭಿವ್ಯಕ್ತಿ ಎನಿಸಿಕೊಳ್ಳುತ್ತದೆ. ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನಗಳು ಅಂತಿಮವಾಗಿ ಮಾನವಿಕಗಳ ವ್ಯಾಪ್ತಿಗೆ ಬರುತ್ತವೆ. ಮಾನವಿಕಗಳೆಂದರೇನೇ ವ್ಯಕ್ತಿಯ ಅಭಿವ್ಯಕ್ತಿಯನ್ನು ಮನ್ನಿಸುವುದು, ಅರ್ಥಮಾಡಿಕೊಳ್ಳುವುದು ಮತ್ತು ಚರ್ಚೆಯನ್ನು ವಿಸ್ತರಿಸಿಕೊಂಡು ಹೃದಯಸಂವಾದ ಆಗಿಸುವುದು. ನಾವೆಲ್ಲರೂ ಬದುಕಲು ಬಂದವರು. ಬದುಕಬೇಕು; ಇನ್ನೊಬ್ಬರು ಸಹ ಬದುಕಲು ಬಿಡಬೇಕು. ಇನ್ನೊಬ್ಬರು ನನಗೆ ಏನನ್ನು ಮಾಡಬಾರದು ಎಂದುಕೊಳ್ಳುತ್ತೇನೆಯೋ ಅದನ್ನು ನಾನು ಸಹ ಇನ್ನೊಬ್ಬರಿಗೆ ಮಾಡಬಾರದು! ಈ ವಿವೇಕವನ್ನು ಕಲಿಸುವುದೇ ಸಾಹಿತ್ಯದ ಆಶಯ.

ವ್ಯಕ್ತಿ ಎಂದ ಮೇಲೆ ಅಭಿವ್ಯಕ್ತಿ ಇದ್ದದ್ದೇ. ಒಬ್ಬರು ಬರೆದು ವ್ಯಕ್ತಪಡಿಸಬಹುದು; ಇನ್ನೊಬ್ಬರು ಬರೆದು ಪ್ರಕಟಿಸಲೂ ಬಹುದು. ಮತ್ತೊಬ್ಬರು ಅದನ್ನು ಕುರಿತು ಮಾತಾಡಿ ತಮ್ಮ ಅಭಿಮತವನ್ನು ತಿಳಿಸಬಹುದು. ಮಗದೊಬ್ಬರು ಈಗಾಗಲೇ ಇರುವ ಹಲವು ರೀತಿಯ ತತ್ತ್ವ ಸಿದ್ಧಾಂತಗಳನ್ನು ಅನ್ವಯಿಸಿ, ಚರ್ಚೆಗೆ ಇಳಿಯಬಹುದು. ಒಬ್ಬರು ಬರೆದದ್ದನ್ನು ಕುರಿತು ಬರೆಯಬಹುದು; ಒಬ್ಬರು ಬರೆದದ್ದನ್ನು ಓದಿ, ಪ್ರೇರಿತಗೊಂಡು ಇನ್ನೊಂದನ್ನು ಸೃಜಿಸಬಹುದು. ‘ವಾದೇ ವಾದೇ ಜಾಯತೇ ತತ್ತ್ವಬೋಧಃ’ ಎಂಬಂತೆ, ಮೊಸರು ಕಡೆದಾಗಲೇ ಬೆಣ್ಣೆ ಬರುವುದು. ಈ ಮಂಥನಕಾರ್ಯವೇ ಸಾಹಿತ್ಯದ ನಿಜಾಶಯ. ಪ್ರಜಾಸತ್ತಾತ್ಮಕ ಆಶಯವೂ ಇದೇ. ಹಾಗಾಗಿ ಪ್ರಜಾಪ್ರಭುತ್ವವು ಅಭಿವ್ಯಕ್ತಿಗೆ ಅವಕಾಶ ನೀಡಿ, ಅದರ ಅನಿಸಿಕೆಗಳಿಗೆ ಕಿವಿಗೊಟ್ಟು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಇಂಬಾಗುತ್ತದೆ.

ಸಾಹಿತ್ಯದ ವಿಚಾರದಲ್ಲಿ ನನ್ನ ಅಭಿವ್ಯಕ್ತಿಯನ್ನು ಮನ್ನಿಸಲೇಬೇಕೆಂದು ಯಾರೂ ಒತ್ತಾಯಿಸುವಂತಿಲ್ಲ. ನಾನು ಬರೆದುದನ್ನು ಹಾಡಿ ಹೊಗಳಲೇಬೇಕೆಂದಿಲ್ಲ; ತೆಗಳಲೂ ಬಹುದು. ‘ಹಾಗಲ್ಲ, ಹೀಗೆ; ಹೀಗಲ್ಲ, ಹಾಗೆ’ ಎಂದು ಕಾರಣ ವಿವರಣ ಸಹಿತ ಟಿಪ್ಪಣಿಸಲೂಬಹುದು. ಇದು ಸರಿಯಿಲ್ಲ ಎನ್ನಲೂಬಹುದು, ಟೀಕಿಸಲೂಬಹುದು, ವ್ಯಕ್ತಿನಿಂದೆಗೂ ಕೆಲವರು ಇಳಿಯಬಹುದು! ಏಕೆಂದರೆ ಒಂದು ಹಂತ ಕಳೆದ ಮೇಲೆ ಸಾಹಿತ್ಯವನ್ನೂ ಸಾಹಿತಿಯನ್ನೂ ಒಟ್ಟೊಟ್ಟಿಗೆ ಒಂದೇ ತಕ್ಕಡಿಯಲಿಟ್ಟು ತೂಗುವುದು ಸಹಜ; ಹಾಗೆ ತೂಗಬೇಕೆನಿಸುವುದು. ಜೀವನಮೌಲ್ಯಗಳೇ ಸಾಹಿತ್ಯದ ಪ್ರಮುಖ ಆಡುಂಬೊಲ. ಹಾಗಾಗಿ ಮೌಲ್ಯವನ್ನು ವೈಯಕ್ತಿಕವಾಗಿ ಬದುಕುತ್ತಾ ಬರೆಯುವವರಿದ್ದಾರೆ. ಹಾಗೆ ಬದುಕಿದವರನ್ನು ಕುರಿತು ಬರೆಯುವವರೂ ಇದ್ದಾರೆ. ಅದನ್ನು ಸಾಮಾಜಿಕವಾಗಿ ಕಾರ್ಯಗತಗೊಳಿಸುವವರೂ ಇದ್ದಾರೆ. ಉದಾಹರಣೆಗೆ, ಹರಿಹರಕವಿಯು ಮೌಲ್ಯವನ್ನು ವ್ಯಕ್ತಿಗತ ನೆಲೆಯಲ್ಲಿ ಬದುಕಿ, ಬರೆದವ. ಮಹಾಕವಿ ಪಂಪನು ಮೌಲ್ಯವನ್ನು ಬರೆದು ಬೆಳಕಾಗಿರುವವ. ಸಂತರೂ ಕವಿಯೂ ಆದ  ಬಸವಣ್ಣನವರು ತಮ್ಮ ಬದುಕಿನಲ್ಲೂ ಬರೆಹದಲ್ಲೂ ಮೌಲ್ಯವಾಗಿಯೇ ಇದ್ದವರು. ಅಷ್ಟೇ ಅಲ್ಲ, ಸಾಮಾಜಿಕವಾದೊಂದು ಬದಲಾವಣೆಯ ಹರಿಕಾರರಾದವರು. ಧಾರ್ಮಿಕ ಮತ್ತು ಆಧ್ಯಾತ್ಮಿಕ ವ್ಯಕ್ತಿತ್ವವಾಗಿಯೂ ಪೂಜನೀಯವಾದವರು; ಹೊಸಯುಗದ ಹರಿಕಾರರಾದವರು. ಹೀಗೆ ಬದುಕೂ ಬರೆಹವೂ ಒಂದೇ ಎಂದು ತಿಳಿದವರು. ಇನ್ನು ಕೆಲವರ ವಾದ ಬೇರೆ: ‘ಬದುಕು ಬೇರೆ; ಬರೆಹ ಬೇರೆ. ಏನೇ ಆದರೂ ಬರೆದಂತೆ ಬದುಕಲಾಗದು. ಹಾಗೆ ಬದುಕಬೇಕೇಕೆ?’ ಎಂದು ಪ್ರಶ್ನಿಸುವರು. ಇದು ಬಹಳ ಹಿಂದಿನಿಂದಲೂ ಬಗೆಹರಿಯದ ಜಿಜ್ಞಾಸೆ. ಜೀವನಶೋಧನದಲ್ಲಿ ತೊಡಗಿಸಿಕೊಂಡ ಸಾಹಿತಿಗೆ ಈ ಬದ್ಧತೆ ಇರಬಾರದು ಎಂದೇ ನವ್ಯರ ವಾದವಾಗಿತ್ತು. ನವೋದಯದವರು ಇದರ ವಿರುದ್ಧ; ಅವರದು ಆದರ್ಶಮಯತೆ. ಸಾಹಿತಿಗೂ ಸಾಮಾನ್ಯನಿಗೂ ವ್ಯತ್ಯಾಸವಿದೆ. ರವಿ ಕಾಣದ್ದನ್ನೂ ಕವಿ ಕಾಣಬಲ್ಲ; ಹಾಗೆಯೇ ಜನಸಾಮಾನ್ಯನಲ್ಲೂ ಅಸಾಮಾನ್ಯತೆಯನ್ನು ಕಾಣಿಸಬಲ್ಲ! ವ್ಯಕ್ತಿ ಬೇರೆ; ವ್ಯಕ್ತಿ ಬರೆದ ಕಾವ್ಯನಾಮವೇ ಬೇರೆ ಎಂದು ಅವರು ಅಂದುಕೊಂಡರೂ ಬರೆದಂತೆ ಬದುಕಿದರು. ಇಲ್ಲೆಲ್ಲಾ ಏಳುವ ಪ್ರಶ್ನೆಯೇನೆಂದರೆ ಬರೆದು ಪ್ರಕಟಿಸಿದ ಮೇಲೆ ಅದು ಸಾರ್ವಜನಿಕ ಸ್ವತ್ತು. ಯಾರು ಏನೆಂದರೂ ಅನ್ನಿಸಿಕೊಳ್ಳಬೇಕು. ‘ನಾನು ಮಾತಾಡುತ್ತೇನೆ; ನನ್ನ ಬಗ್ಗೆ ಯಾರೂ ಮಾತಾಡಬಾರದು’ ಎಂಬ ನಿರಂಕುಶಾಧಿಕಾರವನ್ನು ಸಾಹಿತಿಗೆ ಯಾರು ಕೊಟ್ಟರು? ಸಾಹಿತಿಯು ನಿರಂಕುಶಾಧಿಕಾರಿಯಾದರೆ ಅಂಥವರಲ್ಲಿ ಸಾಹಿತ್ಯವೇ ಹುಟ್ಟುವುದಿಲ್ಲ; ಸತ್ತು ಹೋಗುತ್ತದೆ. ಆ ಕ್ಷಣದಲ್ಲಿ ಆಗ ಅವರಿಗೆ ಅದು ಅನಿಸಿತು; ಹಾಗಾಗಿ ಅವರು ಹಾಗೆ ಬರೆದರು ಅಷ್ಟೇ ಎಂಬುದೇ ಸತ್ಯ. ಏಕೆಂದರೆ ಸಾಹಿತಿಯು ಜನರ ನೋವಿಗೆ ಮಿಡಿವ ಪ್ರಾಣಮಿತ್ರನೆಂಬುದೇನೋ ಸರಿ; ಆದರೆ ಲೇಖನಿಯು ಖಡ್ಗವಾಗಬಾರದು. ಹಾಗಾದಾಗ ಆತನ ಸಾಹಿತ್ಯವು ವ್ಯವಸ್ಥಿತವಾದ ಪಿತೂರಿಯೇ ಸರಿ! ಹಿಂಸೆಗೆ ಪ್ರಚೋದಿಸುವ ಯಾವುದೂ ಸಾಹಿತ್ಯವಲ್ಲ. ಅನುಸಂಧಾನಕ್ಕೆ, ಅನುನಯಕ್ಕೆ ಮತ್ತು ಅನುರಾಗಕ್ಕೆ ತುಡಿಯುವ ಮತ್ತು ಮಿಡಿಯುವ ಮನೋಧರ್ಮದಲ್ಲಿ ಮಾತ್ರ ಸಾಹಿತ್ಯ ಉಸಿರಾಡುತ್ತದೆ. ಅಂತಿಮವಾಗಿ ಎಲ್ಲ ರೀತಿಯ ಸಮಸ್ಯೆಗಳಿಗೂ ಪ್ರೀತಿ ಮಮತೆ ಮಮಕಾರ ಮಾನವತೆಯೇ ಪರಿಹಾರ ಎಂಬುದನ್ನೇ ಸಾಹಿತ್ಯದ ದರ್ಶನ ಎನ್ನುವುದು. ದ್ವೇಷವನ್ನು ಬಿತ್ತುವ ಮತ್ತು ಅದನ್ನೇ ಹರಡುತ್ತಾ ವ್ಯಕ್ತಿಗತ ಸಂಕುಚಿತತೆಯಲ್ಲಿ ಹಾರಾಡಿ, ಕೂಗಾಡಿ, ಕಿರುಚಾಡಿ, ಗಬ್ಬೆಬ್ಬಿಸುವ ಬರೆಹಕ್ಕೆ ದೀರ್ಘಾಯುಷ್ಯವಿಲ್ಲ. ಜನ ಮರೆತು ಬಿಡುತ್ತಾರೆ ಹಾಗೆಯೇ ಅಂಥ ರಚನಾಕಾರರನ್ನು ದೂರವಿಡುತ್ತಾರೆ. ಏಕೆಂದರೆ ಓದುಗರು ಬುದ್ಧಿವಂತರು. ಯಾರನ್ನು ಎಲ್ಲಿ ಇಡಬೇಕೋ ಅಲ್ಲಿಯೇ ಇಡುವವರು. ಓದುಗರನ್ನು ಕೀಳಂದಾಜು ಮಾಡುವ ಮತ್ತು ಮಾಡಿದ ಯಾವ ಸಾಹಿತಿಗೂ ಉಳಿಗಾಲವಿಲ್ಲ.

ಬರೆದ ಮೇಲೆ ವಿಮರ್ಶೆ ಬೇಡವೆಂದರೆ ಆದೀತೇ? ಅರ್ಥಮಾಡಿಕೊಂಡು ಅನುನಯದಿಂದ ಆದರಿಸಿ, ವಿವರಿಸುವ ಮತ್ತು ವ್ಯಾಖ್ಯಾನಿಸುವ ಮಂದಿಯೂ ಇರುತ್ತಾರೆ. ಯಾವು ಯಾವುದೋ ಸಿದ್ಧಾಂತ ರಾದ್ಧಾಂತಗಳನ್ನು ಎಳೆ ತಂದು ಅನ್ವಯಿಸಿ, ಓರೆಕೋರೆ, ಲೋಪಕೋಪ, ತಪ್ಪುನೆಪ್ಪುಗಳನ್ನು ಹುಡುಕಿ ಹೀಗಳೆಯುವವರೂ ಇರುತ್ತಾರೆ. ಬರೆದು ಪ್ರಕಟಿಸಿದ ಮೇಲೆ ಇವು ನಿರೀಕ್ಷಿತ. ಇಂಥಲ್ಲಿ ಬರೆದವರಿಗೆ ತಾಳುಮೆ ಇರಬೇಕು. ಯಾರು ಯಾವ ಕೋನದಿಂದ ನೋಡಿ ಏನು ಹೇಳಿದ್ದಾರೆಂಬ ಕುತೂಹಲ ಇರಬೇಕು. ತಾನಂದುಕೊಂಡಿಲ್ಲದ್ದನ್ನೂ ಕುರಿತು ತನ್ನ ಸಾಲುಗಳನ್ನು ಬೇರೊಬ್ಬರು ಪರಿಭಾವಿಸಿರಬಹುದು; ಅವರಿಗೆ ಹಾಗೆನಿಸಿರಬಹುದು ಎಂಬ ವೈಶಾಲ್ಯವನ್ನು ಹೊಂದಿರಬೇಕು. ಇಂಥಲ್ಲಿ ಹಲವಾರು ದೊಡ್ಡ ದೊಡ್ಡ ಸಾಹಿತಿಗಳೇ ಎಡವಿದ್ದಾರೆ. ಇನ್ನು ಚಿಕ್ಕಪುಟ್ಟವರ ಮಾತೇಕೆ? ಕವಿಯ ಹೃದಯಕ್ಕೆ ಸಮಾನವಾದವರೇ ಸಹೃದಯರು. ಯಾವ ಕಾರಣಕ್ಕೆ ಯಾವ ಸಂದರ್ಭಕ್ಕೆ ಯಾರ ಹಿನ್ನೆಲೆ ಮುನ್ನೆಲೆಗಳಿಂದಾಗಿ ಆ ಬರೆಹ ಜನಿಸಿತು? ಎಂಬುದನ್ನು ಸಾಹಿತಿ ಹೇಳಬಹುದು ಅಥವಾ ಹೇಳದೆಯೂ ಇರಬಹುದು. ಹೇಳಬೇಕಿಲ್ಲ ಕೂಡ. ಇದುವೇ ಸಾಹಿತ್ಯದ ಸಲ್ಲಕ್ಷಣ. ಒಂದು ಕ್ರಿಯೆಗೆ ಇಂಥದೇ ಪ್ರತಿಕ್ರಿಯೆ ಬರಬೇಕೆಂದು ಬಯಸುವುದು ಮೂಢತನ. ‘ಸಾರ್ವಜನಿಕ ಬದುಕಿನಲ್ಲಿ ತೊಡಗಿರುವ ಪ್ರತಿಯೊಬ್ಬರೂ ಟೀಕೆ, ವಿಮರ್ಶೆ, ತಮಾಷೆಯನ್ನು ಎದುರಿಸಲು ಸಿದ್ಧರಾಗಿರಬೇಕು’ ಎಂಬುದು ಸಾಹಿತಿ ಹಾಗೂ ಪತ್ರಕರ್ತರಾದ ಪಿ ಲಂಕೇಶರ ಮಾತು. ಈ ಮಾತಿಗನುಗುಣವಾಗಿ ನಾವೆಷ್ಟು ಬದ್ಧರಾಗಿರುತ್ತೇವೆಂಬುದು ಬೇರೆ ಮಾತು! ಸಾರ್ವಜನಿಕ ಬದುಕಿನಲ್ಲಿ ತೊಡಗಿದವರಲ್ಲಿ ಬರೀ ರಾಜಕಾರಣಿಗಳು ಮಾತ್ರ ಬರುವುದಿಲ್ಲ; ಸಾಹಿತಿಗಳೂ ಸೇರುತ್ತಾರೆ. ವ್ಯಕ್ತಿಯ ಆಂತರ್ಯದಲ್ಲಿ ಮತ್ತು ಏಕಾಂತದಲ್ಲಿ ಸೃಷ್ಟಿಯಾಗುವ ಸಾಹಿತ್ಯಕ್ಕೆ ಲೋಕಾಂತವೇ ನಿಜಪಾತಳಿ. ಸಮಾಜವನ್ನು ಬಿಟ್ಟು ಸಾಹಿತಿಗೆ ಅಸ್ತಿತ್ವವಿಲ್ಲ. ಸಾಹಿತಿಯೂ ಒಂದಲ್ಲ ಒಂದು ಸಮಾಜದ ಸದಸ್ಯರೇ. ಏಕೆಂದರೆ ಸಾಹಿತ್ಯವೆಂಬುದು ಸಮಾಜದ ಪ್ರತಿಬಿಂಬ ಮಾತ್ರವಲ್ಲ; ಮತಿಬಿಂಬ ಕೂಡ.

‘ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಮನೋವೈಜ್ಞಾನಿಕ ನೆಲೆಗಳು’ ಎಂಬುದಾಗಿ ಅಧ್ಯಯನ ಮಾಡಿ ವಿಮರ್ಶೆ ಬರೆದ ಮೇಲೆ ‘ಮಹಾಕಾವ್ಯವು ಸಾಹಿತ್ಯ; ಅದರಲ್ಲೂ ಅದರ ವಸ್ತು ರಾಮಾಯಣ ಕಾಲದ್ದು. ಮನೋವಿಜ್ಞಾನ ಇತ್ತೀಚಿನದು. ಎಲ್ಲಿಗೆಲ್ಲಿಯ ಸಂಬಂಧ!?’ ಎಂದು ಅಚ್ಚರಿಗೊಳ್ಳುವ ಮೊದಲು ಅನ್ಯಜ್ಞಾನ ಶಿಸ್ತುಗಳ ಮೂಲಕ ಸಾಹಿತ್ಯವನ್ನು ನೋಡುವ ಪರಿಪಾಠ ಸಹ ವಿಮರ್ಶೆಯ ನೆಲೆ ಎಂಬುದನ್ನು ಅರಿತಿರಬೇಕು. ಕವಿಯು ಬರೆಯುವಾಗ ಆತ ಅಥವಾ ಆಕೆಯು ಕೇವಲ ವ್ಯಕ್ತಿಯಾಗಿರುವುದಿಲ್ಲ; ಅಖಂಡ ವಿಶ್ವದ ಅವ್ಯಕ್ತ ದನಿಯನ್ನೇ ಪ್ರತಿನಿಧಿಸುತ್ತಿರುತ್ತಾರೆ; ಅವರ ಅಭಿವ್ಯಕ್ತಿಯು ಅವರಿಂದಾಚೆಗೆ ಹರಡಿಕೊಂಡಿರುತ್ತದೆ. ಎಷ್ಟೋ ವೇಳೆ ಆತ ಅಥವಾ ಆಕೆಯು ನೆಪವಾಗಿ ಸಾಹಿತ್ಯವೇ ಮುಂದಾಗಿ ಬರೆಸಿಕೊಂಡಿರುತ್ತದೆ. ಇದೇ ಬರೆವಣಿಗೆಯ ಚೋದ್ಯ ಮತ್ತು ವೇದ್ಯ! ಒಮ್ಮೆ ಬರೆದದ್ದನ್ನೇ ಇನ್ನೊಮ್ಮೆ ಅದೇ ರೀತಿ ಬರೆಯಲು ಆಗದು ಎಂಬ ಸತ್ಯವನ್ನು ಮನಗಂಡರೆ ಈ ವಿಚಾರ ಮನದಟ್ಟಾಗುವುದು. ನವೋದಯದವರು ‘ಸ್ಫೂರ್ತಿ’ ಎಂದರು; ನವ್ಯರು ‘ಮೂಡ್’ ಎಂದರು. ಎರಡೂ ಒಂದೇ; ಕಾವ್ಯದ ತಂದೆ! ಪಂಪ, ಕುಮಾರವ್ಯಾಸ, ಹರಿಹರ, ಮುದ್ದಣ, ಬೇಂದ್ರೆ, ಕುವೆಂಪು, ಡಿವಿಜಿ, ಪುತಿನ ಮೊದಲಾದವರ ಕಾವ್ಯಗಳನ್ನು ಓದುವಾಗ ನಮಗೆ ಈ ಅನುಭವ ಆಗುತ್ತದೆ.

ಕವಿಗೆ ವಿಮರ್ಶಕ ಬೇಡದೇ ಹೋಗಬಹುದು. ಆದರೆ ವಿಮರ್ಶಕನಿಗೆ ಕವಿಯು ಬೇಕು. ಇಲ್ಲಿ ಸೋ ಕಾಲ್ಡ್ ಅಕಡೆಮಿಕ್ ವಿಮರ್ಶಕರೇ ಆಗಬೇಕು ಎಂದೇನಿಲ್ಲ. ಸಹೃದಯರೂ ಆಗಬಹುದು. ‘ಕಟ್ಟಿಯುಮೇನೋ ಮಾಲೆಗಾರನ ಪೊಸ ಬಾಸಿಗಂ, ಮುಡಿವ ಭೋಗಿಗಳಿಲ್ಲದೇ ಬಾಡಿಪೋಗದೇ’ ಎಂದು ಕವಿ ಜನ್ನನು ಕೇಳುವಾಗ ಸಾಹಿತ್ಯದ ಸಾರ್ಥಕ್ಯವಿರುವುದೇ ಸಹೃದಯ ಅರ್ಥ ಮಾಡಿಕೊಂಡಾಗ ಎಂಬ ಧ್ವನಿಯಿದೆ. ರುಚಿಕಟ್ಟಾದ ಅಡುಗೆ ಮಾಡಿ ಬಡಿಸಿದ ಮೇಲೆ ತಿಂದವರು ಚೆನ್ನಾಗಿತ್ತೆಂಬ ಮೆಚ್ಚುಮಾತನ್ನಾಡಿ, ‘ಅನ್ನದಾತೋ ಸುಖೀಭವ’ ಎಂದಾಗ ಆಗುವ ಆನಂದದಂತೆ. ಆದರೆ ‘ಇದೇ ಅರ್ಥದಲ್ಲಿ ನಾನು ಬರೆದದ್ದು; ನಿಮ್ಮ ಅರ್ಥಗಳು ವ್ಯರ್ಥ’ ಎಂದು ರಚನಾಕಾರರು ಮಾತಾಡಬಾರದು. ಅದು ಅಹಮಲ್ಲದೇ ಇನ್ನೇನಲ್ಲ. ‘ಏನೋ ಗೊತ್ತಿಲ್ಲ, ಈ ಅರ್ಥಗಳಲ್ಲಿ ನಾನು ಬರೆಯಲಿಲ್ಲ’ ಎಂದರೆ ‘ರಚನಾಕಾರರಿಗೇ ಗೊತ್ತಿಲ್ಲದಂಥ ಅರ್ಥದ ಆಯಾಮಗಳು ತೆರೆದುಕೊಂಡಿವೆ’ ಎಂದು ತಿಳಿಯಬೇಕು. ರವಿ ಕಾಣದ್ದನ್ನು ಕವಿ ಕಂಡರೆ, ಕವಿಯೂ ಕಾಣದೇ ಇರುವುದನ್ನು ವಿಮರ್ಶಕರು ಕಾಣುತ್ತಾರೆ. ಹಲವು ವಿಧದ ಅನ್ಯಜ್ಞಾನ, ಬಹುಜ್ಞಾನ ಶಿಸ್ತುಗಳ ಹಲವು ತೆರನಾದ ಥಿಯರಿಗಳನ್ನು ಅನ್ವಯಿಸಿಯೋ ಅಥವಾ ಇನ್ನೊಂದು ಸಾಹಿತ್ಯಕೃತಿಯೊಂದಿಗೆ ಹೋಲಿಸಿಯೋ ಆತ ಬೆಲೆಗಟ್ಟುವ ಕೈಂಕರ್ಯಕ್ಕೆ ತೊಡಗುವುದು ಸಹಜ. ಹೋಲಿಸುವುದು ತಪ್ಪಲ್ಲ; ಆದರೆ ಹೋಲಿಕೆಯ ನೆವದಲ್ಲಿ ಒಂದನ್ನು ಕೆಳಗಿಳಿಸಿಯೋ ಇನ್ನೊಂದನ್ನು ಮೇಲೇರಿಸಿಯೋ ಅನಾಹುತ ಮಾಡಬಾರದು. ವಿಶಾಲದೃಷ್ಟಿಯಲ್ಲಿ ಎಲ್ಲ ಬರೆಹವೂ ಅಭಿವ್ಯಕ್ತಿಯ ತಹತಹಗಳೇ; ತನ್ನೊಳಗಿನ ತಾಕಲಾಟಗಳೇ. ವೈಯಕ್ತಿಕತೆಯನ್ನು ಮೀರಿ ಸಾರ್ವತ್ರಿಕ ಆಯಾಮ ಪಡೆದಾಗ ಅಂಥ ಸಾಹಿತ್ಯವು ನೂರ್ಕಾಲ ಬಾಳುತ್ತದೆ. ಅಹಮಿನ ಶೋಧನೆಯಾಗದೇ ಅಹಮಿನ ವಿಜೃಂಭಣೆಯಾದರೆ ಅಂಥವು ಎಡವಿ ಮುಗ್ಗರಿಸುತ್ತವೆ. ನದಿಗಳಿಂದ ಸಮುದ್ರಕೆ ಎಷ್ಟು ನೀರು ಹರಿದು ಹೋಯಿತು; ಎಷ್ಟು ನೀರು ಆವಿಯಾಯಿತು; ಇನ್ನೆಷ್ಟು ಆವಿಯು ಮೋಡವಾಗಿ ಮಳೆಯಾಗಿ ಸುರಿಯಿತು ಎಂದು ಲೆಕ್ಕವಿಟ್ಟವರಾರು? ಯಾರೋ ಒಬ್ಬರಿಗೆ ಇನ್ನಾರೋ ಬರೆದದ್ದು ತಕ್ಷಣ ತಾಗಿ ಅದನ್ನು ತನ್ನ ಅನುಭವದೊಂದಿಗೆ ಕನೆಕ್ಟ್ ಮಾಡಿಕೊಂಡು, ತನಗನಿಸಿದ್ದನ್ನು ಬರೆಯಬಹುದು. ಇದು ಸಹ ಬರೆಹವೇ. ಅದರಿಂದ ಇದು ಜನಿಸಿತಾದರೂ ಆಧುನಿಕ ಭಾಷಾವಿಜ್ಞಾನಿಗಳು ಇಂಥ ಪ್ರಕ್ರಿಯೆಯನ್ನು ‘ಡಿಸ್‌ಕೋರ್ಸ್’ (ಸಂರಚನೆ) ಎಂದು ಕರೆದು ಎರಡಕ್ಕೂ ಸಮಾನ ಸ್ಥಾನಮಾನವನ್ನು ನೀಡುತ್ತಾರೆ. ವಾಲ್ಮೀಕಿ ರಾಮಾಯಣವು ಒಂದು ಸಂಕಥನವಾದರೆ ಕುವೆಂಪು ಅವರ ರಾಮಾಯಣ ದರ್ಶನಂ ಸಹ ಒಂದು ಸಂಕಥನ. ಅದರಿಂದ ಇದೂ ಇದರಿಂದ ಅದೂ ಪರಸ್ಪರ ಪೋಷಿತ; ದೂಷಿತವಲ್ಲ. ಕುವೆಂಪು ಅವರು ಬರೆದ ಮೇಲೆ ವಾಲ್ಮೀಕಿ ರಾಮಾಯಣವನ್ನು ನೋಡುವ ಕ್ರಮ ಸಹ ಬೇರೆಯಾಯಿತು. ಇದನ್ನೇ ಟಿ ಎಸ್ ಎಲಿಯಟ್ ತನ್ನ ‘ಪರಂಪರೆ ಮತ್ತು ವ್ಯಕ್ತಿಪ್ರತಿಭೆ’ ಎಂಬ ವಿಮರ್ಶಾ ಪ್ರಬಂಧದಲ್ಲಿ ಮುಖ್ಯವಾಗಿ ಪ್ರಸ್ತಾಪಿಸಿದ್ದು. ಸಾಹಿತ್ಯಕೃತಿಯೇ? ಎಂದು ನಿರ್ಧರಿಸಲು ಸಾಹಿತ್ಯಕ ಮಾನದಂಡಗಳು ಸಾಕು; ಆದರೆ ಅದು ಮಹತ್ವದ ಕೃತಿಯೇ? ಎಂದು ನಿರ್ಧರಿಸಲು ಸಾಹಿತ್ಯೇತರ ಮಾನದಂಡಗಳೂ ಬೇಕು ಎಂದು ಆತನು ಹೇಳುವುದರ ಮೂಲಕ ಅಭಿವ್ಯಕ್ತಿ ಕ್ರಮಗಳಿಗೊಂದು ಗೌರವ ಮತ್ತು ಮನ್ನಣೆ ತಂದುಕೊಟ್ಟನು. ಜೊತೆಗೆ ಬರೆದ ಮೇಲೆ ಅದು ಸಾರ್ವಜನಿಕ ಎಂಬ ಧ್ವನಿಯನ್ನೂ ಹೊರಡಿಸಿದನು. ಹಾಗಾಗಿ ಬರೆದು ಪ್ರಕಟಿಸಿದ ಮೇಲೆ ಬರೆಹಗಾರರು ಸಹ ಇನ್ನೊಬ್ಬ ಓದುಗರೇ!     

ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

10 Responses

  1. ಪದ್ಮಾ ಆನಂದ್ says:

    ಸಾಹಿತ್ಯ, ಬರವಣಿಗೆ, ಅಭಿವ್ಯಕ್ತಿ, ಲಲಿತಕಲೆಗಳನ್ನು ಕುರಿತಾಗಿ ಬರೆಯುವವರಿಗಲ್ಲದೆ ಓದುಗರಿಗೂ ಅರಿವು ಮೂಡಿಸುವ ಪ್ರಬುದ್ಧ ಲೇಖನ.

    • MANJURAJ H N says:

      ಧನ್ಯವಾದ ಮೇಡಂ…….ಹಲವು ಪ್ರಶ್ನೆಗಳಿಗೆ ಮತ್ತು ಪ್ರಶ್ನೆಗಳಂಥವಕ್ಕೆ
      ಉತ್ತರಿಸುವ ನನ್ನ ವಿನಮ್ರ ಪ್ರಯತ್ನ……

      ನೇರವಾಗಿ ಹೇಳಿದರೆ ಮನಸು ನೋಯಬಹುದು; ಕನಸು ಸಾಯಬಹುದು
      ಸ್ನೇಹ ಸವೆಯಬಹುದು !

      ಲೇಖನದ ಮೂಲಕ ಹೇಳಿದರೆ ನಮ್ಮಿಬ್ಬರಿಗೂ ಪಾಠ; ಅರಿವು ಕಣ್ದೆರೆಯುವ ವಿವೇಕದೂಟ.
      ಏನಂತೀರಿ!?

      ನಿಮ್ಮ ಪ್ರತಿಕ್ರಿಯೆಗೆ ಪ್ರಣಾಮಗಳು ಮೇಡಂ.

  2. ಬರೆಯುವವರಿಗೆ ಹಾಗೇ ಓದುವವರಿಗೂ ಕಣ್ತೆರೆಸುವಂತಿದೆ..ಬರೆದು ಪ್ರಕಟಿಸುವಂತಿದೆ ಎಂಬ ಲೇಖನ ಮಂಜು ಸರ್

  3. MANJURAJ H N says:

    ಧನ್ಯವಾದ ಮೇಡಂ

  4. ನಯನ ಬಜಕೂಡ್ಲು says:

    ಬಹಳ ಚೆನ್ನಾಗಿ ಹೇಳಿದ್ದೀರಿ ಸರ್. ಬರಹದ ಹಿಂದಿನ ಉದ್ದೇಶ, ಓದುಗರ ದೃಷ್ಟಿಕೋನ ಎಲ್ಲವನ್ನು ವಿಸ್ತೃತ ವಾಗಿ, ಅರ್ಥವಾಗುವಂತೆ ವಿವರಿಸಿದ್ದೀರಿ.

  5. ಶಂಕರಿ ಶರ್ಮ says:

    ಕ್ಲಿಷ್ಟವಾದ ಪ್ರಶ್ನೆಯೊಂದಕ್ಕೆ ಉತ್ತರ ಹುಡುಕುತ್ತಾ ಸಾಗಿದ ಪ್ರಬುದ್ಧ ಲೇಖನವು, ಚಿಂತನೆಗೆ ಹಚ್ಚುವ ಹಲವಾರು ವಿಷಯಗಳನ್ನು ಒಳಗೊಂಡು, ಎಂದಿನಂತೆ ಸೊಗಸಾಗಿ ಮೂಡಿಬಂದಿದೆ.

  6. Anonymous says:

    ನವ ಬರಹಗಾರರಿಗೆ ಸಂದೇಶದಂತೆ ಇದೆ ಉತ್ತಮ ಲೇಖನ ಸರ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: