ಕಾವ್ಯ ಭಾಗವತ 26: ಪ್ರಹ್ಲಾದ ಚರಿತೆ – 2
26.ಸಪ್ತಮ ಸ್ಕಂದ – ಅಧ್ಯಾಯ 2-3
ಪ್ರಹಾದ ಚರಿತ್ರೆ -2
ಬೆಳೆವ ಪೈರಿನ ಗುಣ
ಮೊಳಕೆಯಲ್ಲೆಂಬಂತೆ
ಹಿರಣ್ಯಕಶ್ಯಪು ಖಯಾದು ಪುತ್ರ
ಪ್ರಹ್ಲಾದ ಜನ್ಮತಃ ದೈವಭಕ್ತ
ಸದಾ ಧ್ಯಾನಮಗ್ನ
ಪ್ರಹ್ಲಾದನ ದೈವಭಕ್ತಿ
ಕೇವಲ ಹರಿಭಕ್ತಿಯೆಂದರಿತ
ಗುರುಗಳು ಚಂಡಾವರ್ಕರಿಗೆ
ಆಘಾತ ಉಂಟಾಗಿ, ಭಯಭಿತರಾಗಿ
ಹಿರಣ್ಯಕಶ್ಯಪನಿಗೆ
ಹೆದರುತ್ತಲೇ ಪ್ರಹ್ಲಾದನ
ಹರಿಭಕ್ತಿಯನ್ನರುಹಿದಾಗ,
ಕಶ್ಯಪ ಕ್ಷುದ್ರಗೊಂಡು
ಪ್ರಹ್ಲಾದನಿಗೆ
ನಿನಗೆ ಹರಿಭಕ್ತಿಯ. ದುರ್ಬುದ್ಧಿಯ
ಕಲಿಸಿದವರ್ಯಾರು?
ಎಂದಾರ್ಭಟಿಸಿದಾಗ,
ಶಾಂತಚಿತ್ತದಿಂ ಉತ್ತರಿಸಿದ
ಪ್ರಹ್ಲಾದ ನುಡಿ ಅನನ್ಯ
ಹರಿಭಕ್ತಿಯೆಂಬುದು
ಜನ್ಮಜನ್ಮಾಂತರದ
ನಿರಂತರ ಪ್ರಯಾಣದಿ
ಪಂಚೇಂದ್ರಿಯ ವಿಷಯ ಭೋಗದಿಂದಿರ್ಪ
ಜೀವಿಗೆ ಲಭಿಸಿದ ಹರಿಭಕ್ತಿ
ಅರಿಶಡ್ವರ್ಗಗಳ ಉಪಟಳದಿಂ
ಮುಕ್ತಿಹೊಂದಿ
ಭಗವಂತ ಪಾದಾರವಿಂದವೊಂದೆ
ಗತಿಯೆಂಬ ಭಾವದಿಂ
ಹರಿಯ ನೆನೆದೊಡೆ
ಹರಿಭಕ್ತಿ ಭಾಗ್ಯ ಪ್ರಾಪ್ತಿ
ಪ್ರಹ್ಲಾದನ ನುಡಿಗಳಿಂ
ನಖಶಿಖಾಂತ ಉರಿದ ಕಶ್ಯಪ
ಭಟರಂ ಕರೆದು
ಈ ವಂಶದ್ರೋಹಿಯ
ಹಿಂಸಿಸಿ ಸಾಯಿಸಿರಿ
ಎಂದಾಜ್ಞಾಪಿಸಿದರೂ
ಯಾವ ಆಯುಧವಾಗಲೀ
ಆನೆ, ವಿಷಸರ್ಪಗಳಾಗಲೀ
ಕೊನೆಗೆ ಸ್ವತಃ ಮಾತೆ ಖಯಾದುವಿನ
ವಿಷಪ್ರಾಶಣವಾಗಲೀ
ಪ್ರಹ್ಲಾದನ ಹರಿಭಕ್ತಿಯೆದುರು
ನಿಷ್ಕಿಯವಾದುದ ಕಂಡು
ಚಿಂತಿತ ಹಿರಣ್ಯಕಶ್ಯಪು
ಮತ್ತೆ ಮಗನ ಗುರುಕುಲಕೆ ಕಳುಹಿಸಿ
ಅವನ ತಿದ್ದಲೆತ್ನಿಸಿದರೂ ಫಲಕಾಣದೆ,
ರೌದ್ರಾವತಾರ ತಾಳಿ
ಮಗನ ಆಕ್ರಮಿಸಿ. ಚಂದ್ರಾಯುಧ ಝಳಪಿಸುತ
ಸಭಾಸ್ಥಂಭವ ಮುಷ್ಠಿಯಿಂ ಪ್ರಹರಿಸೆ
ಕೋಟಿ ಸಿಡಿಲುಗಳು ಏಕಕಾಲದಿಂ ಬಡಿದಂತೆ
ಸಭಾಸ್ಥಾನದಿ ಭೂಕಂಪವಾದಂತೆನಿಸಿ
ಹಿರಣ್ಯಕಶ್ಯಪು ಕಂಡ
ಮನುಷ್ಯ ಸಿಂಹಾಕೃತಿಗಳೆರಡೂ ಬೆರೆತ
ನರಸಿಂಹಾಕೃತಿಯ ಕಂಡು
ದೈತ್ಯೇಂದ್ರ ನಿಶ್ಚಲನಾಗಿ ನಿಂತ ಸಮಯದಿ
ಕೆಲಕ್ಷಣ ಅವನೊಡನೆ ರಣಕೇಳಿಯಾಟವಾಡಿ
ಕೊನೆಗೆ ಅವನ ಬಲವಾಗಿ ಹಿಡಿದು ಎಳೆದು
ಸಭಾಮಂದಿರದ ಹೊಸ್ತಿಲಲಿ
ತೊಡೆಯ ಮೇಲಿಟ್ಟುಕೊಂಡು
ಸೂರ್ಯ ಅಸ್ತಂಗತನಾಗುವ ಸಮಯದಿ
ತನ್ನುಗುರುಗಳಿಂದ ಅವನುದರ ಬಗೆದು
ಕೊರಳಮಾಲೆಯಾಗಿಸಿ ಚೆಲ್ಲಾಡಿದ
ರಕ್ತಪ್ರವಾಹದಿ ತೊಯ್ದ ಕೇಸರದಿಂ
ಉಗ್ರನಾಗಿದ್ದ ನರಸಿಂಹ ರೂಪವ
ನೋಡಲಾಗದೆ, ಹಿರಣ್ಯಕಶ್ಯಪನ ಪ್ರಾಣಪಕ್ಷಿ
ಹರಿಯ ಹೃದಯದಿ ಲೀನವಾಯ್ತು
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :https://www.surahonne.com/?p=41634
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಪ್ರಹ್ಲಾದ ಚರಿತೆಯ ಮೂಲಕ ಹಿರಣ್ಯ ಕಶ್ಯಪನ ಸಂಹಾರದ ನಿರೂಪಣೆ..ಸೊಗಸಾಗಿ..ತಂದಿದ್ದೀರಾ ಸಾರ್ ವಂದನೆಗಳು
ತುಂಬಾ ಚೆನ್ನಾಗಿದೆ
ಹಿರಣ್ಯ ಕಶ್ಯಪನ ಸಂಹಾರದ ಕಥಾ ಭಾಗ ಎಷ್ಟು ಬಾರಿ ಓದಿದರೂ ರೋಮಾಂಚನವಾಗದೆ ಇರದು. ಇಂದೂ ಅದೇ ಅನುಭವವಾಯಿತು.
ಚೆನ್ನಾಗಿದೆ ಸರ್, ಧನ್ಯವಾದಗಳು
ಪ್ರಹ್ಲಾದ ಚರಿತೆಯು ಅತ್ಯಂತ ಸೂಕ್ಷ್ಮ ರೂಪದಲ್ಲಿ, ಮಾರ್ಮಿಕವಾಗಿ ಮೂಡಿಬಂದೆ…ಇಂದಿನ ಕಾವ್ಯ ಭಾಗವತದಲ್ಲಿ. ಧನ್ಯವಾದಗಳು ಸರ್.