ಕಾದಂಬರಿ : ತಾಯಿ – ಪುಟ 9
(ಹಿಂದಿನ ಸಂಚಿಕೆಯಿಂದ ಮುಂದುವರಿದುದು……)
ನಾಲ್ಕು ದಿನದೊಳಗೆ ನೂತನ್‌ಮೆಲ್ ಒಪ್ಪಿಗೆ ಸಿಕ್ಕಿತು.
ಗೋದಾಮಣಿ, ಮಧುಮತಿ, ಭವಾನಿ ಕುಳಿತು ಚರ್ಚಿಸಿ ಕೆಲಸ ಹಂಚಿದರು.
- ಕ್ಯಾಶಿಯರ್ -ಗೋದಾಮಣಿ
- ಅಕೌಂಟೆAಟ್ – ಡಾ|| ಮಧುಮತಿ
- ದಿನಸಿ ವ್ಯವಸ್ಥೆ – ನಾಗಮಣಿ
- ಅಡಿಗೆ ಉಸ್ತುವಾರಿ – ಚಂದ್ರಮ್ಮ, ಸರಸಮ್ಮ
- ತರಕಾರಿ, ಹಣ್ಣು – ಗೌರಮ್ಮ, ರಾಜಲಕ್ಷಿö್ಮ, ಭವಾನಿ
- ಕೆಲಸದವರ ಉಸ್ತುವಾರಿ – ಮಾಲಾದೇವಿ, ಸಿಂಗಾರಮ್ಮ
- ಸಂಪೂರ್ಣ ವೃದ್ಧಾಶ್ರಮದ ಉಸ್ತುವಾರಿ – ಅಹಲ್ಯಾಬಾಯಿ, ಸೀತಾಬಾಯಿ
ಒಂದು ವಾರ ಕಳೆಯಿತು. ಒಂದು ದಿನ ಗೌರಮ್ಮ ಕೆಲಸಕ್ಕೆ ಬರಲಿಲ್ಲ. ಫೋನ್ ಮಾಡಿದರೂ ಫೋನ್ ತೆಗೆಯಲಿಲ್ಲ. ಚಿನ್ಮಯಿ ಕೂಡ ಕಾಲ್ ರಿಸೀವ್ ಮಾಡಲಿಲ್ಲ. ಗೌರಮ್ಮ ಅದೇ ಏರಿಯಾದಲ್ಲಿದ್ದಾರೆಂದು ತಿಳಿದಿತ್ತೇ ವಿನಃ ಯಾರಿಗೂ ಅವರ ಮನೆ ಎಲ್ಲಿದೆಯೆಂದು ಗೊತ್ತಿರಲಿಲ್ಲ. ಸೆಕ್ಯೂರಿಟಿಗೂ ಗೊತ್ತಿರಲಿಲ್ಲ.
“ಅಮ್ಮಾ, ಅವರ ಹಳೆಯ ಮನೆ ಗೊತ್ತಿತ್ತು. ಎರಡು ತಿಂಗಳ ಹಿಂದೆ ಬೇರೆ ಮನೆಗೆ ಹೋಗಿದ್ದಾರೆ. ಆ ಮನೆ ನನಗೆ ಗೊತ್ತಿಲ್ಲ” ಎಂದ.
ಸರಸಮ್ಮ, ರಾಜಲಕ್ಷ್ಮಿ, ಚಂದ್ರಮ್ಮ ಸೇರಿ ಬೇಗ ಉಪ್ಪಿಟ್ಟು ಮಾಡಿದರು. ನಂತರ ಮಧ್ಯಾಹ್ನಕ್ಕೆ ಅನ್ನ, ಹುಳಿ, ತಿಳಿಸಾರು ಮಾಡಿದರು.
ಸುಮಾರು 2-30ಯ ಹೊತ್ತಿಗೆ ಗೌರಮ್ಮ ಬಂದರು. ಅತ್ತೂ ಅತ್ತೂ ಅವರ ಕಣ್ಣುಗಳು ಊದಿದ್ದವು.
“ಯಾಕೆ ಗೌರಮ್ಮ ಹೀಗಿದ್ದೀರಾ?” ಭವಾನಿ ಕೇಳಿದರು.
“ಮೊದಲು ಅವರಿಗೆ ಊಟ ಬಡಿಸಿ, ಆಮೇಲೆ ಅವರ ಸಮಸ್ಯೆ ಕೇಳೋಣ” ಎಂದರು ನಾಗಮಣಿ.
ಗೌರಮ್ಮ ಹೆಚ್ಚು ಉಪಚಾರ ಹೇಳಿಸಿಕೊಳ್ಳದೆ ಊಟ ಮಾಡಿದರು.
“ಹೇಳಿ ಗೌರಮ್ಮ ಏನು ನಿಮ್ಮ ಸಮಸ್ಯೆ?”
“ಏನು ಹೇಳಲಮ್ಮ? ನಮ್ಮ ಮನೆಯಲ್ಲಿರುವುದು ನಾನು, ನಮ್ಮ ಯಜಮಾನರು, ನಮ್ಮ ಚಿನ್ಮಯಿ. ಮೊದಲು ನಾವು ಒಂದು ವಠಾರದಲ್ಲಿದ್ದೆವು. ನಮ್ಮನೆಯವರು ನನಗಿಂತ 22 ವರ್ಷ ದೊಡ್ಡವರು. ನಾನು ಅವರಿಗೆ ಎರಡನೇ ಹೆಂಡತಿ. ಮೊದಲನೇ ಹೆಂಡತಿಗೆ ಮಕ್ಕಳಿರಲಿಲ್ಲ. ನನ್ನನ್ನು ಕಾಸೂ ಖರ್ಚಿಲ್ಲದೆ ಮದುವೆಯಾದರು.”
“ಅವರು ಏನು ಕೆಲಸದಲ್ಲಿದ್ದರು?”
“ಮೈಸೂರಿನ ಪ್ರೈವೇಟ್‌ಫರ್ಮ್ನಲ್ಲಿ ಗುಮಾಸ್ತರಾಗಿದ್ದರು. ಇಸ್ಪೀಟ್ ಹುಚ್ಚು. ನಮ್ಮ ಮದುವೆಯಾದ 10 ವರ್ಷದ ಮೇಲೆ ಚಿನ್ಮಯಿ ಹುಟ್ಟಿದಳು. ಸಂಪಾದನೆ ಸಾಲದೆ ನಾನು ಅಡಿಗೆ ಕೆಲಸಕ್ಕೆ ಸೇರಬೇಕಾಯ್ತು.”
“ಈಗ ನಿಮಗೆಷ್ಟು ವರ್ಷ?”
“60 ವರ್ಷ. ನನಗೆ ಮದುವೆಯಾದಾಗ 26 ವರ್ಷ. ಹೇಗೋ ಜೀವನ ನಡೀತಿತ್ತು. ಎರಡು ತಿಂಗಳ ಹಿಂದೆ ನಾವಿದ್ದ ವಠಾರಾನ್ನ ಮಾರಾಟ ಮಾಡಿದ್ರು. ನಾನು ಬೇರೆ ಮನೆಗೆ ಹೋಗಬೇಕಾಯ್ತು.”
“ಮನೆ ಅನುಕೂಲವಾಗಿದೆಯಾ?”
“ಓನರ್‌ದು ಓಡಾಡುವ ಕೆಲಸ. ಸಂಸಾರ ಚೆನ್ನೈ ನಲ್ಲಿದೆ. ಅವರು ಊರಿನಲ್ಲಿದ್ದಾಗ ಬೆಳಿಗ್ಗೆ ತಿಂಡಿ, ರಾತ್ರಿ ಚಪಾತಿ ಕಳಿಸ್ತಿದ್ದೆ. ವಾರದಿಂದ ನೀಲಕಂಠನ ಕಾಟ ಜಾಸ್ತಿಯಾಗಿದೆ.”
“ಅವನೇನು ಮಾಡ್ತಿದ್ದಾನೆ?”
“ಚಿನ್ಮಯಿ ಹಿಂದೆ ಮುಂದೆ ಸುತ್ತುತ್ತಾ ‘ನನ್ನ ಮದುವೆ ಮಾಡಿಕೋ ನಿನ್ನ ರಾಣಿ ತರಹ ನೋಡ್ಕೋತೀನಿ’ ಅಂದನತೆ. ಇವಳು ಬೈದಳಂತೆ. ಒಂದೇ ಸಮನೆ ಕೆಟ್ಟಕೆಟ್ಟ ಮೆಸೇಜ್ ಕಳಿಸ್ತಿದ್ದ. ನೆನ್ನೆ ರಾತ್ರಿ 12 ಗಂಟೆ ಸಮಯದಲ್ಲಿ ಯಾರೋ ಬಾಗಿಲು ತಟ್ಟಿದಂತಾಯ್ತು. ನಾವು ಹೆದರಿಕೊಂಡೇ ರಾತ್ರಿ ಕಳೆದೆವು. ಬೆಳಿಗ್ಗೆ ಚಿನ್ಮಯಿ ಬಾಗಿಲಿಗೆ ನೀರು ಹಾಕುತ್ತಿದ್ದಾಗ ಬಂದು “ನೀನು ಮದುವೆಗೆ ಒಪ್ಪದಿದ್ದರೆ ನಾನು ನಿನ್ನ ಕಿಡ್ನಾಪ್ ಮಾಡಿಸಿ ಮದುವೆಯಾಗ್ತೀನಿ” ಅಂತ ಹೆದರಿಸಿ ಹೋಗಿದ್ದಾನೆ.”
“ಅಯ್ಯೋ ದೇವರೆ…”
“ನನಗೆ ಆ ಮನೇಲಿರಕ್ಕೆ ತುಂಬಾ ಭಯವಾಯ್ತು. ಬೆಳಿಗ್ಗೆ ಟ್ಯಾಕ್ಸಿ ಮಾಡಿಕೊಂಡು ಶ್ರೀರಂಗಪಟ್ಟಣಕ್ಕೆ ಹೋಗಿ ನಮ್ಮ ಯಜಮಾನರನ್ನೂ, ಚಿನ್ಮಯೀನ್ನೂ ನನ್ನ ಮೈದುನನ ಮನೆಯಲ್ಲಿ ಬಿಟ್ಟುಬಂದೆ.”
“ಚಿನ್ಮಯಿ ಅಲ್ಲಿದ್ರೆ ಅವಳ ಓದಿನ ಗತಿಯೇನು?”
“ಗೊತ್ತಿಲ್ಲಮ್ಮ. ನನಗೆ ಏನು ಮಾಡಬೇಕೋ ತೋಚುತ್ತಿಲ್ಲ.”
“ಗೌರಮ್ಮ, ನಿಮ್ಮ ಮೈದುನ ಅನುಕೂಲವಾಗಿದ್ದಾರಾ?”
“ಅಡಿಗೆ ಪಾರ್ಟಿ ಇಟ್ಟುಕೊಂಡಿದ್ದಾನೆ. ಅವನು ಅಣ್ಣನ್ನ ಇಟ್ಟುಕೊಳ್ತಾನಂತೆ. ತಿಂಗಳಿಗೆ 25,000 ಕೊಡಿ ಅಂತಿದ್ದಾನೆ.”
“ನೀವು, ನಿಮ್ಮ ಮಗಳು ಅಲ್ಲಿರಲು ಸಾಧ್ಯಾನಾ?”
“ಅಡಿಗೆ ಪಾರ್ಟಿಗೆ ಸೇರಿಕೊಳ್ಳಿ. ನೀವಿದ್ರೆ ನನಗೂ ಅನುಕೂಲ ಅಂತಿದ್ದಾನೆ. ಅವನ ಹೆಂಡತಿಗೆ ಇಷ್ಟವಿಲ್ಲ.”
“ಗೌರಮ್ಮ ಸಧ್ಯಕ್ಕೆ ನೀವು, ಚಿನ್ಮಯಿ ಇಲ್ಲೇ ಇರಿ. ಚಿನ್ಮಯಿ ಪರೀಕ್ಷೆ ಮುಗಿದ ಮೇಲೆ ಬೇರೆ ವಿಚಾರ ಯೋಚಿಸೋಣ” ಗೋದಾಮಣಿ ಹೇಳಿದರು.
ಯಾರೂ ಮಾತನಾಡಲಿಲ್ಲ.
“ಚಿನ್ಮಯೀಗೆ ಬರಲು ಫೋನ್ ಮಾಡಿ” ಎಂದರು ನಾಗಮಣಿ.
“ಬೇಡ. ನಾವೇ ಅವರ ಮನೆಗೆ ಹೋಗಿ ಬರೋಣ” ಎಂದರು ಗೋದಾಮಣಿ.
ಮರುದಿನ ಗೋದಾಮಣಿ, ನಾಗಮಣಿ ಮತ್ತು ಮಧುಮತಿ ಟ್ಯಾಕ್ಸಿ ಮಾಡಿಕೊಂಡು ಶ್ರೀರಂಗಪಟ್ಟಣಕ್ಕೆ ಹೊರಟರು.
“ಗೋದಾ, ನಿಮ್ಮ ಮನಸ್ಸಿನಲ್ಲಿ ಏನಿದೆ?”
“ನಾನು ಪ್ರತಿ ವರ್ಷ ನಮ್ಮ ತಾಯಿಯ ಹೆಸರಿನಲ್ಲಿ ಒಂದು ಬಡಕುಟುಂಬಕ್ಕೆ ಎರಡು ಲಕ್ಷ ಕೊಡ್ತಿದ್ದೆ. ಈ ಸಲ ಆ ಹಣಾನ್ನ ಗೌರಮ್ಮನ ಕುಟುಂಬಕ್ಕೆ ಕೊಡೋಣಾಂತಿದ್ದೇನೆ.”
“ನೀವು ಹೇಳ್ತಿರೋದೇನು?”
“ಅವರ ಮೈದುನಂಗೆ ತಿಂಗಳಿಗೆ 25,000 ರೂ. ಕೊಡ್ತೀನಿ. ನಿಮ್ಮಣ್ಣನ್ನ ಚೆನ್ನಾಗಿ ನೋಡಿಕೊಳ್ಳಿ’ ಅಂತ ಹೇಳಿ ಬರೋಣಾಂತ ಹಾಗೆ ಚಿನ್ಮಯೀನ್ನ ಕರ‍್ಕೊಂಡು ಬರೋಣ.”
“ಒಳ್ಳೆಯದು ಗೋದಾಮಣಿ. ಗೌರಮ್ಮ ನಮ್ಮ ವೃದ್ಧಾಶ್ರಮದಲ್ಲಿದ್ರೆ ನಮ್ಮ ಆಶ್ರಮಕ್ಕೆ ಒಂದು ರೀತಿಯ ಖಳೆ. ಪಾದರಸದ ಹಾಗೆ ಓಡಾಡ್ತಾ ಕೆಲಸ ಮಾಡ್ತಾರೆ. ಏನೂ ಹರಡಲ್ಲ. ಕೆಲಸ ಅಚ್ಚುಗಟ್ಟು ಅಂತಹವರಿಗೆ ಸಹಾಯ ಮಾಡಿದರೆ ತಪ್ಪಿಲ್ಲ” ನಾಗಮಣಿ ಹೇಳಿದರು.
“ಗೌರಮ್ಮನ ಜೊತೆ ಚಿನ್ಮಯಿಯೂ ಇರಲಿ ಅವಳ ಫೀಸು, ಪುಸ್ತಕ ಇತ್ಯಾದಿ ಖರ್ಚು ನಾನು ವಹಿಸಿಕೊಳ್ತೀನಿ” ಎಂದರು ಮಧುಮತಿ.
ಚಿನ್ಮಯಿ ಖುಷಿಯಿಂದ ಅವರ ಜೊತೆ ಹೊರಟಳು. ಅವಳಿಗೆ ವಾರದಲ್ಲಿ ಪರೀಕ್ಷೆ ಶುರುವಾಗುವುದರಲ್ಲಿತ್ತು. ಅವಳು ಕಾಲೇಜಿಗೆ ಹೋಗುವ ಅಗತ್ಯವಿರಲಿಲ್ಲ. ನಾಗಮಣಿಯೇ ಅವಳ ಹಾಲ್‌ಟಿಕೆಟ್ ತರಲು ಹೊರಟಾಗ ಕಂಪನಿಕೊಟ್ಟರು.
“ನೀನು ಪರೀಕ್ಷೆಗೆ ಬಸ್‌ನಲ್ಲಿ ಹೋಗಬೇಡ. ನಾವ್ಯಾರಾದ್ರೂ ನಿನ್ನ ಬಿಡ್ತೀವಿ” ಎಂದರು ಮಧುಮತಿ.
ದಿನಗಳು ಓಡುತ್ತಿದ್ದವು. ನೀಲಕಂಠನಿಗೆ ತುಂಬಾ ನಿರಾಶೆಯಾಗಿತ್ತು. ವೃದ್ಧಾಶ್ರಮದ ಆಡಳಿತವೂ ಸಿಕ್ಕಿರಲಿಲ್ಲ. ಚಿನ್ಮಯಿ ಕೂಡ ಸಿಕ್ಕಿರಲಿಲ್ಲ. ಏನಾದರೂ ಮಾಡಿ ವೃದ್ಧಾಶ್ರಮದವರನ್ನು ಬೇರೆ ಕಡೆಗೆ ಕಳುಹಿಸಿ, ಆ ಮನೆ ಕೊಂಡುಕೊಳ್ಳಬೇಕೆಂದು ಅವನು ಪ್ಲಾನ್ ಮಾಡುತ್ತಿದ್ದ.
ಇದೇ ಸಮಯದಲ್ಲಿ ಭರತ್ ರಾಜಲಕ್ಷ್ಮಿಗೆ ಫೋನ್ ಮಾಡಿದ. “ಈ ತಿಂಗಳ ಕೊನೆಯಲ್ಲಿ ನಾವು ರ‍್ತಿದ್ದೇವೆ. ಒಂಟಿಕೊಪ್ಪಲ್ ಮನೆಯನ್ನು 1 ಕೋಟಿ 25 ಲಕ್ಷಕ್ಕೆ ಕೊಡಲು ಓನರ್ ಒಪ್ಪಿದ್ದಾರೆ. ಅವರಿಗೆ ಬ್ಲಾಕ್ ಮನಿ ಬೇಡವಂತೆ. ನಾವು ಕೊಡುವ ಹಣದಲ್ಲಿ ಅವರು ಒಂದು ಮನೆ ಬೆಂಗಳೂರಿನಲ್ಲಿ ಕೊಂಡುಕೊಳ್ಳುತ್ತಾರಂತೆ.”
“ಸರಿ, ನೀವು ಮೋಹನನ ಹತ್ತಿರ ಒಂದು ಸಲ ಮಾತನಾಡಿ.”
“ಅವರು ಮನೆ ಕೊಂಡುಕೊಳ್ಳೋದು ಒಳ್ಳೆಯದು ಅಂದ್ರು. ರಜನಿ ನಿಮಗೆ 11/2 ಕೋಟಿ ಕೊಟ್ಟಿದ್ದಾಳೆ. ಮನೆ ಕೊಂಡಮೇಲೂ ನಿಮ್ಮ ಹತ್ತಿರ 25 ಲಕ್ಷ ಉಳಿಯುತ್ತದೆ.”
“ಆಯ್ತಪ್ಪ ಮನೆಕೊಂಡುಕೊಳ್ಳಿ” ಎಂದರು ರಾಜಲಕ್ಷ್ಮಿ. ಅಂದೇ ಅವರು ಮೋಹನನಿಗೆ ಫೋನ್ ಮಾಡಿ ಬರಲು ಹೇಳಿದರು.
ಮೋಹನ ಮರುದಿನ ಬೆಳಿಗ್ಗೆ 11 ಗಂಟೆಗೆ ಹಾಜರಾದ.
“ನೆನ್ನೆ ಭರತ್ ಫೋನ್ ಮಾಡಿದ್ರು. ಅವರು ಮನೆ ಕೊಂಡುಕೊಂಡು ನನ್ನ ಹೆಸರಲ್ಲಿ ರಿಜಿಸ್ಟರ್ ಮಾಡಿಸ್ತಾರಂತೆ. ರಜನಿ ದುಡ್ಡಿನಲ್ಲಿ 25 ಲಕ್ಷ ಉಳಿಯುತ್ತದೆ. ಅದರಲ್ಲಿ ವೃದ್ಧಾಶ್ರಮಕ್ಕೆ ಬೇಕಾದ ಪಾತ್ರೆ, ಪಡಗ, ಮಂಚ, ಫರ್ನೀಚರ್ ಕೊಳ್ಳಬಹುದು. ಆದರೆ ನನ್ನನ್ನು ಒಂದು ಸಮಸ್ಯೆ ಕಾಡ್ತಿದೆ.”
“ಏನು ಸಮಸ್ಯೆ?”
“ನಾನು ಹೇಳಿದ್ನಲ್ಲಾ ಆ ವೃದ್ಧಾಶ್ರಮದಲ್ಲಿರುವ 20-22 ಮಂದಿಗೆ ಒಳ್ಳೆಯ ಬದುಕು ಕೊಡಬೇಕು’ ಅನ್ನುವುದು ನನ್ನ ಉದ್ದೇಶ. ಆದರೆ ನನ್ನ ಹತ್ತಿರ ಇರುವ ಹಣದಿಂದ ವೃದ್ಧಾಶ್ರಮ ನಡೆಸಲು ಸಾಧ್ಯಾನಾ? ಬೇರೆ ಆದಾಯದ ವ್ಯವಸ್ಥೆ ಇದ್ದರೆ ಒಳ್ಳೆಯದಲ್ವಾ?”
“ಇಲ್ಲಿರುವವರನ್ನೂ ನಿಮ್ಮ ವೃದ್ಧಾಶ್ರಮಕ್ಕೆ ಸೇರಿಸಿಕೊಳ್ಳಿ. ಅವರು ತಿಂಗಳು ತಿಂಗಳಿಗೆ ಹಣ ಕೊಡ್ತಾರಲ್ವಾ? ಆಗ ನಿಮಗೆ ವೃದ್ಧಾಶ್ರಮ ನಡೆಸಲು ಕಷ್ಟವಾಗಲಾರದು.”
“ಮೊದಲನೆಯದಾಗಿ ಇವರೆಲ್ಲಾ ಬರಲು ಒಪ್ಪಬೇಕು. ಎರಡನೆಯದಾಗಿ ಇವರೆಲ್ಲಾ ಪ್ರತ್ಯೇಕ ಕೊಠಡಿ ಕೇಳ್ತಾರೆ. ನಾವು ಎಲ್ಲರಿಗೂ ಪ್ರತ್ಯೇಕ ಕೊಠಡಿ ಕೊಡಲು ಸಾಧ್ಯಾನಾ?”
“ಅಮ್ಮಾ, ಇವರಿಗೆ ಪ್ರತ್ಯೇಕ ಕೊಠಡಿಗಳನ್ನು ಕೊಡಿ. ಉಳಿದವರಿಗೆ ಬೇರೆ ವ್ಯವಸ್ಥೆ ಮಾಡೋಣ. ಮೊದಲು ನೀವು ಇಲ್ಲಿರುವವರಿಗೆ ವೃದ್ಧಾಶ್ರಮ ತೋರಿಸಿ, ನಂತರ ಮಾತಾಡೋಣ” ಎಂದ ಮೋಹನ.
ಮರುದಿನ ಬೆಳಿಗ್ಗೆ ತಿಂಡಿ ತಿನ್ನುವಾಗ ರಾಜಲಕ್ಷ್ಮಿ ತಮ್ಮ ಹೊಸ ಮನೆಯ ಬಗ್ಗೆ, ವೃದ್ಧಾಶ್ರಮ ಆರಂಭಿಸುವ ತಮ್ಮ ಯೋಜನೆಯ ಬಗ್ಗೆ ಹೇಳಿದರು.
“ನಾವು ಮೊದಲು ನಿಮ್ಮ ಮನೆ ನೋಡಬೇಕು. ಆಮೇಲೆ ಮುಂದಿನ ಮಾತು” ಎಂದರು ಗೋದಾಮಣಿ.
“ಮನೆ ಕೀ ಮೋಹನ್ ಹತ್ತಿರವಿದೆ. ನಾಳೆ ಅವನನ್ನು ಬರಲು ಹೇಳ್ತೀನಿ. ಎಷ್ಟು ಹೊತ್ತಿಗೆ ಹೋಗೋಣ?”
“ಮಧ್ಯಾಹ್ನ 4 ಗಂಟೆಗೆ ಹೋಗೋಣ. ವೆಂಕಮ್ಮ, ಚಿನ್ಮಯಿ ಎಲ್ಲರೂ ನಮ್ಮ ಜೊತೆ ಬರಲಿ.”
ರಾಜಲಕ್ಷ್ಮಿ ಮೋಹನನಿಗೆ ಫೋನ್ ಮಾಡಿದರು.
“ಅಮ್ಮಾ, ನಾನು ನಾಲ್ಕು ಗಂಟೆಗೆ ವ್ಯಾನ್ ತರ‍್ತೀನಿ. ಎಲ್ಲರೂ ರೆಡಿಯಾಗಿರಿ.”
ಅವರು ಒಂಟಿಕೊಪ್ಪಲ್‌ನಲ್ಲಿದ್ದ ಬಂಗಲೆಯ ಮುಂದೆ ಇಳಿದಾಗ 4.30 ಆಗಿತ್ತು. ಮೋಹನ ಲಾಕ್ ಓಪನ್ ಮಾಡಿದ. ಎಲ್ಲರೂ ಸಂಭ್ರಮದಿಂದ ಮನೆ ನೋಡಿ ಬಂದರು. ವೆಂಕಮ್ಮ ಅಡಿಗೆ ಮನೆ, ಉಟದ ಮನೆಗಳಲ್ಲಿ ಏನು ಬೇಕೆಂದು ಚಿನ್ಮಯಿ ಕೈಯಲ್ಲಿ ಲಿಸ್ಟ್ ಮಾಡಿಸಿದರು. ಮೋಹನ ಎಷ್ಟು ಮಂಚಗಳು ಬೇಕಾಗಬಹುದೆಂದು ಲೆಕ್ಕ ಹಾಕಿ, ಗುರುತು ಮಾಡಿಕೊಂಡ. ಸುಮಾರು ಆರುಗಂಟೆಯ ಹೊತ್ತಿಗೆ ಎಲ್ಲರೂ ವಾಪಸ್ಸಾದರು.
ರಾತ್ರಿ ಊಟವಾದ ನಂತರರಾಜಲಕ್ಷ್ಮಿ, ಗೋದಾಮಣಿ, ಮಧುಮತಿ ಜೊತೆ ಮಾತಾಡಿದರು.
“ರಾಜಮ್ಮ ನೀವು ಮಹಡಿ ನೋಡಿದ್ದೀರಾ?”
” ನೋಡಿದ್ದೇನೆ”
“ಅಲ್ಲಿ ರೂಮುಗಳು ತುಂಬಾ ದೊಡ್ಡದಿವೆ. ಕೆಳಗಿರುವ ರೂಮುಗಳು ದೊಡ್ಡದಾಗಿದೆ.”
“ಹೌದು.”
“ನಾವು ಕೆಳಗರ‍್ತೀವಿ. ಒಂದೊಂದು ರೂಮ್‌ನಲ್ಲಿ ಇಬ್ಬರಿರಬಹುದು. ಕೆಳಗಡೆ ಒಂದು ರೂಮ್ ನೀವಿಟ್ಟುಕೊಳ್ಳಿ. ಮೇಲುಗಡೆ ರೂಮ್‌ಗಳಲ್ಲಿ ಬೇರೆಯವರಿಗೆ ಮಂಚ ಹಾಕಿಸಿ.”
“ಆಫೀಸ್ ರೂಂ ಎಲ್ಲಿ ಮಾಡೋದು?”
“ಹಾಲ್‌ನಲ್ಲಿ ಮಾಡಬಹುದು. ಆಫೀಸ್‌ಗಳಲ್ಲಿ ಚೇಂರ‍್ಸ್ ಮಾಡ್ತಾರಲ್ಲಾ ಹಾಗೆ ಮಾಡಿ. ನಾವು ಇಲ್ಲಿ ಕೊಡುತ್ತಿರುವ ಹಾಗೆ 30,000 ಕೊಡ್ತೀವಿ. ವೆಂಕಮ್ಮ ಅಡಿಗೆ ಮಾಡ್ತಾರೆ. ಆದರೆ ನೀವು ಒಬ್ಬ ಕ್ಲರ್ಕ್ ಇಟ್ಟುಕೊಳ್ಳಬೇಕು.”
“ನಮಗೆ ತುಂಬಾ ಪರಿಚಯದ ಹುಡುಗ ಇದ್ದಾನೆ. ಅವನಿಗೆ ಹೇಳ್ತೀನಿ ಬಿಡಿ.”
“ಯಾರದು?”
“ನಮ್ಮ ನಂಜನಗೂಡಿನ ಹುಡುಗ ಅನಾಥ ಭಾಸ್ಕರ ಅಂತ ಅವನ ಹೆಸರು. ಬಿ.ಎ. ಆಗಿದೆ. ಸಧ್ಯದಲ್ಲಿ ಒಂದು ಲಾಯರ್ ಆಫೀಸ್‌ನಲ್ಲಿ ಕೆಲಸ ಮಾಡ್ತಿದ್ದಾನೆ.
“ಸರಿ ಆ ಹುಡುಗನ್ನ ಅಪಾಯಿಂಟ್ ಮಾಡಿಕೊಳ್ಳಿ. ಆ ಮನೆಗೆ ಸುಣ್ಣಬಣ್ಣ ಮಾಡಿಸಿ. ಒಂದು ಒಳ್ಳೆಯ ಹೆಸರಿಡಿ. ಒಂದು ತಿಂಗಳ ನಂತರ ಶಿಫ್ಟ್ ಆಗೋಣ.”
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://www.surahonne.com/?p=41653
-ಸಿ.ಎನ್. ಮುಕ್ತಾ
ಕಾದಂಬರಿ ಕುತೂಹಲದಿಂದ ಓದಿಸಿಕೊಂಡುಹೋಯಿತು.. ಹಾಗೇ ಸಾಮಾನ್ಯ ಜನರ ಬದುಕು ಬವಣೆ ಗಳತ್ತ.. ನಮ್ಮ ಚಿತ್ತವೂ ಸಾಗುವಂತಿದೆ ಮೇಡಂ.
ಕೆಳವರ್ಗದ ಮಂದಿ ಅನುಭವಿಸುವ ತೊಂದರೆಗಳನ್ನು ಯಥಾವತ್ತಾಗಿ ಚಿತ್ರಿಸಿದ, ಕಾದಂಬರಿಯ ಈ ಬಾರಿಯ ಕಂತು ಮನಮುಟ್ಟಿತು.
ಬಿರುಗಾಳಿಗೆ ಸಿಕ್ಕ ತರಗೆಲೆಗಳಂತಾಗಿದ್ದ ಹಲವಾರು ಹಿರಿಯರ ಬದುಕಿಗೆ ಒಂದು ಸಾತ್ವಿಕ ಅಂತ್ಯ ದೊರಕುವುದೇನೋ ಎಂಬ ಆಶಾ ಕಿರಣ ಮನದಲ್ಲಿ ಮೂಡುತ್ತಿದೆ.
ಕಾದಂಬರಿ ಪ್ರಕಟಿಸುತ್ತಿರುವ ಹೇಮಮಾಲಾ ಹಾಗೂ ಕಾದಂಬರಿಯ ಬಗ್ಗೆ ಅಭಿಪ್ರಾಯ ತಿಳಿಸಿದ ಆತ್ಮೀಯರೆಲ್ಲರಿಗೂ ಧನ್ಯವಾದಗಳು.
ಸುಂದರವಾದ ಕಾದಂಬರಿ. ವಾಸ್ತವಕ್ಕೆ ಹತ್ತಿರ.
ಸಮಾಜಕ್ಕೆ ಒಳಿತು ಮಾಡುವ ಮನಸ್ದಿದ್ದರೆ ಎಲ್ಲವೂ ತಂತಾನೆ ಒದಗುತ್ತವೆ. ತುಂ ಬಾ ಚೆನ್ನಾಗಿ ಮೂಡಿ ಬರುತ್ತಿದೆ ಕಾದಂಬರಿ