ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 12
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ಹನೋಯ್ ನಲ್ಲಿ ಮೂರನೆಯ ದಿನ..17/09/2024
ವಿಯೆಟ್ನಾಂನಲ್ಲಿ ನಮ್ಮ ಮೂರನೆಯ ದಿನವಾದ 17/09/2024 ರಂದು ಬೆಳಗಾಯಿತು. ಆ ದಿನ ನಾವು ಬೆಳಗಿನ ಉಪಾಹಾರದ ನಂತರ ‘ಹಾಲಾಂಗ್ ಬೇ’ ಎಂಬಲ್ಲಿಗೆ ಹೋಗಬೇಕಿತ್ತು. ಸ್ಥಳೀಯ ‘ಹಲೋ ಏಶಿಯಾ ಟ್ರಾವೆಲ್ ‘ ಸಂಸ್ಥೆಯಿಂದ ನಮ್ಮ ಅಂದಿನ ಮಾರ್ಗದರ್ಶಿ ‘ಲಾರಿ’ ಎಂಬವರು ಬರಲಿದ್ದಾರೆಂದೂ, ನಾವು ಉಪಾಹಾರ ಮುಗಿಸಿ, ಚೆಕ್ ಔಟ್ ಆಗಿ, 0745 ಗಂಟೆಗೆ ಸಿದ್ದರಾಗಿ ಇರಬೇಕೆಂದೂ ಸಂದೇಶ ಬಂದಿತ್ತು. ಜೊತೆಗೆ ‘ಲಾರಿ’ ಎಂಬವರಿಂದ ಇನ್ನೊಂದು ಸಂದೇಶವಿತ್ತು. ಅದೇನೆಂದರೆ, ಅಂದು ನಮ್ಮನ್ನು ‘ಹಾಲಾಂಗ್ ಬೇ’ ಎಂಬಲ್ಲಿಗೆ ಕರೆದೊಯ್ಯುವ ಬಸ್ಸು ಚಿಕ್ಕದಾಗಿದ್ದು ಅದರಲ್ಲಿ ಲಗೇಜು ಇರಿಸಲು ಜಾಗವಿಲ್ಲವಾದುದರಿಂದ ಸೂಟ್ ಕೇಸ್ ಗಳನ್ನು ತರಬೇಡಿ, ಒಂದು ದಿನದ ಅವಶ್ಯಕ ವಸ್ತುಗಳುಳ್ಳ ಕೈಚೀಲ ಮಾತ್ರ ಇರಲಿ ಎಂದೂ ಇತ್ತು. ಈಗ ನಮಗೆ ಒಂದು ಹೊಸ ಸಮಸ್ಯೆಯ ಸುಳಿವು ಸಿಕ್ಕಿತು. ನಮಗೆ ಕೊಡಲಾದ ಮಾಹಿತಿಯಂತೆ, ಅಂದು ನಾವು ಹೋಟೆಲ್ ಬೆಬಿಲೋನ್ ನಿಂದ ಹೊರಟು , ನಮ್ಮ ಪ್ರಯಾಣ ‘ಹಾಲಾಂಗ್ ಬೇ’ ಕಡೆಗೆ ಸಾಗಲಿದೆ. ಆಮೇಲೆ ಇಲ್ಲಿಗೆ ಹಿಂತಿರುಗಿ ಬರುವ ಯೋಜನೆಯಿಲ್ಲ. ನಮ್ಮೊಂದಿಗೆ ಲಗೇಜನ್ನು ತರಬಾರದು ಎಂದಾದರೆ , ಅವುಗಳನ್ನು ಎಲ್ಲಿ ಇರಿಸುವುದು? ಪುನ: ಇಲ್ಲಿಗೆ ಬರಲಿದೆಯೇ? ನಮ್ಮ ನಿಗದಿತ ಕಾರ್ಯಕ್ರಮದಲ್ಲಿ ಇಲ್ಲ. ಸಣ್ಣ ಕೈಚೀಲದಲ್ಲಿ ಒಂದು ದಿನದ ಅಗತ್ಯ ವಸ್ತುಗಳನ್ನು ಇರಿಸಿಕೊಳ್ಳಿ ಎಂಬ ಮಾಹಿತಿಯನ್ನೂ ಎಲ್ಲೂ ಕೊಟ್ಟಿಲ್ಲ. ಇದನ್ನು ನಾವು ಹೊಂದಿಸಿಕೊಳ್ಳಬಹುದಾದರೂ, ಅವರು ನಮ್ಮ ಲಗೇಜು ತರಿಸಿಕೊಳ್ಳಲು ವ್ಯವಸ್ಥೆ ಮಾಡುತ್ತಾರೆಯೆ? ಇದನ್ನೇ ‘ಲಾರಿ’ಗೆ ವಾಟ್ಸಾಪ್ ನಲ್ಲಿ ತಿಳಿಸಿದೆವು. ಅದಕ್ಕೆ ಆತ ಏನೂ ಉತ್ತರಿಸಿರಲಿಲ್ಲ. ಏನಿದ್ದರೂ, ನಾವು ಲಗೇಜು ಸಮೇತವಾಗಿ ಸಿದ್ದರಾಗಿ ಇರೋಣ. ಅಕಸ್ಮಾತ್ ಲಗೇಜು ಒಯ್ಯಲು ಸಾಧ್ಯವಿಲ್ಲವೆಂದಾದರೆ, ನಮ್ಮ ಮುಂದಿನ ವಸತಿ ಇರುವಲ್ಲಿಗೆ ತಲಪಿಸಿಕೊಡುವುದು ಅವರ ಜವಾಬ್ದಾರಿಯಾಗುತ್ತದೆ. ಅವರ ಬಸ್ಸಿನಲ್ಲಿ ವ್ಯವಸ್ಥೆ ಇಲ್ಲದಿರುವುದು ನಮ್ಮ ತಪ್ಪಲ್ಲವಷ್ಟೇ, ಹಾಗೆಯೇ, ಹೇಳಿದರಾಯಿತು ಎಂದು ಮಾತನಾಡಿಕೊಂಡೆವು.
ಹಿಂದಿನ ದಿನದಂತೆಯೇ ರೆಸ್ಟಾರೆಂಟ್ ವಿಭಾಗಕ್ಕೆ ಬಂದು ನಮಗೆ ಕೊಡಲಾಗಿದ್ದ ಉಪಾಹಾರದ ಚೀಟಿಯನ್ನು ತೋರಿಸಿದೆವು. ಸಸ್ಯಾಹಾರಿ ವಿಭಾಗದಲ್ಲಿದ್ದ ವಿವಿಧ ಬ್ರೆಡ್ , ಕೇಕು. ಡೋನಟ್, ಜ್ಯಾಮ್ , ಹಣ್ಣುಗಳು, ಫ್ಲೇಕ್ಸ್ ಗಳು, ನೂಡಲ್ಸ್ ಗಳು, ಹಣ್ಣಿನ ರಸಗಳು…. ಇತ್ಯಾದಿ ಇದ್ದ ಬಫೆಟ್ ಉಪಾಹಾರದಲ್ಲಿ ನಮಗೆ ಬೇಕಾದುದನ್ನು ಆಯ್ಕೆ ಮಾಡಿ ತಿಂದೆವು. ಹೋಟೆಲ್ ನ ಸ್ವಾಗತಕಾರಿಣಿಯ ಬಳಿ ನಾವು ಚೆಕ್ ಔಟ್ ಆಗುವ ಬಗ್ಗೆ ತಿಳಿಸಿ, ಆಕೆ ಕೊಟ್ಟ ರಶೀದಿಗೆ ಸಹಿ ಮಾಡಿ ಲಗೇಜು ಸಮೇತವಾಗಿ ಹೊರಡಲು ಸಿದ್ದರಾಗಿ ಕುಳಿತಿದ್ದೆವು. ಸರಿಯಾದ ಸಮಯಕ್ಕೆ ಬಂದ ಹಸನ್ಮುಖಿ ಎಳೆಯ ತರುಣ ‘ಲಾರಿ’. ಮಾತು ಮಾತಿಗೆ ಮೈಕುಲುಕುತ್ತಾ ‘ಹಹ್ಹಾ..ಹಿಹ್ಹಿ..’ ಎಂದು ನಗುತ್ತಿದ್ದ ‘ಲಾರಿ’ಯ ಹೆಸರನ್ನು ಕೇಳಿ ನಮಗೂ ನಗು. ‘ದೇರ್ ಇಸ್ ನೊ ಲಗೇಜ್ ಕ್ಯಾರಿಯರ್ ಇನ್ ಅವರ್ ಬಸ್… ವಿಲ್ ಫೈಂಡ್ ಪ್ಲೇಸ್…ಕಮ್ ವಿಥ್ ಮಿ ‘ ಎನ್ನುತ್ತಾ ನಮ್ಮ ಒಂದು ಬ್ಯಾಗ್ ಅನ್ನು ತಾನೇ ತೆಗೆದುಕೊಂಡ. ಹೋಟೆಲ್ ಬೆಬಿಲೋನ್ ಗೆ ವಿದಾಯ ಹೇಳಿ, ಪಕ್ಕದ ರಸ್ತೆಯಲ್ಲಿದ್ದ ಬಸ್ ಗೆ ಬಂದೆವು. ಅದರಲ್ಲಿ ಆಗಲೇ ಸುಮಾರು 20 ಜನರಿದ್ದರು. ‘ಲಾರಿ’ ಬಸ್ಸಿನಲ್ಲಿ ಜಾಗ ಹುಡುಕಿ ನಮ್ಮ ಲಗೇಜುಗಳಿಗೆ ವ್ಯವಸ್ಥೆ ಮಾಡಿದ.
ನಮ್ಮ ಬಸ್ಸು ಚಲಿಸಿತು. ರಸ್ತೆಯುದ್ದಕ್ಕೂ ರಮಣೀಯವಾದ ಹಸಿರು ಗದ್ದೆಗಳು, ಪರ್ವತ ಪ್ರದೇಶಗಳು ಹಾಗೂ ಕೆಂಪು ನದಿಯ ಡೆಲ್ಟಾ ಪ್ರದೇಶವನ್ನು ಕಣ್ತುಂಬಿಕೊಂಡೆವು. ನಮ್ಮ ಮಾರ್ಗದರ್ಶಿ ‘ಲಾರಿ’ ತನ್ನನ್ನು ಪರಿಚಯಿಸಿಕೊಂಡು, ಇನ್ನು ಸ್ವಲ್ಪ ಸಮಯದಲ್ಲಿ ನಾವು ಚಹಾ ವಿರಾಮಕ್ಕಾಗಿ ಒಂದು ಮುತ್ತು ತಯಾರಿಸುವ ( Pearl Farming) ಘಟಕದ ಬಳಿ ಬಸ್ಸನ್ನು ನಿಲ್ಲಿಸುತ್ತೇವೆಂದೂ, ಆಸಕ್ತರು ಅಲ್ಲಿರುವ ವಸ್ತುಗಳನ್ನು ಖರೀದಿಸಬಹುದೆಂದೂ ತಿಳಿಸಿದ. ಆಮೇಲೆ ನಮ್ಮನ್ನು ‘ಹಾಲಾಂಗ್ ಬೇ’ ಎಂಬಲ್ಲಿಗೆ ಕರೆದೊಯ್ಯುತ್ತೇವೆಂದೂ ತಿಳಿಸಿದ. ಅನಂತರ ನಮ್ಮಲ್ಲಿ ಯಾರಿಗಾದರೂ ಯಾವುದಾದರೂ ಆಹಾರದ ಬಗ್ಗೆ ಅಲರ್ಜಿ ಇದೆಯೇ ಎಂದು ವಿಚಾರಿಸಿದ. ಆದಿನ ನಾವು ಸಮುದ್ರದಲ್ಲಿ ಕ್ರೂಸ್ ನಲ್ಲಿ ವಾಸ್ತವ್ಯ ಮಾಡಲಿದ್ದೆವು. ಕೆಲವರಿಗೆ ಸಮುದ್ರಜೀವಿಗಳನ್ನು ಬಳಸಿ ತಯಾರಿಸಿದ ಆಹಾರ ಅಲರ್ಜಿಯಾಗುವ ಸಾಧ್ಯತೆ ಇರುವುದರಿಂದ ಈ ಮುನ್ನೆಚ್ಚರಿಕೆ ಎಂದು ಆಮೇಲೆ ಗೊತ್ತಾಯಿತು.
ಅರ್ಧಗಂಟೆಯೊಳಗೆ ಬೃಹತ್ತಾದ ಕಟ್ಟಡವೊಂದರ ಸಮೀಪ ಬಸ್ಸು ನಿಂತಿತು. ಅಲ್ಲಿ ವಿವಿಧ ಬಣ್ಣದ, ವಿವಿಧ ವಿನ್ಯಾಸಗಳ ಮುತ್ತು, ಹವಳ, ಚಿನ್ನ,ಬೆಳ್ಳಿಯ ಆಭರಣಗಳನ್ನು ಮಾರಾಟಕ್ಕೆ ಇರಿಸಿದ್ದರು. ಚೆಂದದ ಸಮವಸ್ತ್ರ ಧರಿಸಿದ ಲಲನೆಯರು ವಿವರಣೆ ನೀಡುತ್ತಿದ್ದರು. ಸಮುದ್ರದಲ್ಲಿ ವಾಸಮಾಡುವ ಕಪ್ಪೆಚಿಪ್ಪು ಮೃದ್ವಂಗಿಗಳನ್ನು ಸಾಕಿ, ಅವುಗಳ ಮೂಲಕ ಮುತ್ತುಗಳನ್ನು ಉತ್ಪಾದಿಸುವ ವಿಧಾನದ ಪ್ರಾತ್ಯಕ್ಷಿಕೆಯನ್ನೂ ತೋರಿಸಿದರು. ನಮ್ಮೆದುರೇ ಕಪ್ಪೆಚಿಪ್ಪಿನ ಜೀವಿಯನ್ನು ಸೀಳಿ, ಅದರ ಶರೀರದಲ್ಲಿದ್ದ ನಾಲ್ಕಾರು ಮುತ್ತುಗಳನ್ನು ಹೊರತೆಗೆದು ತೋರಿಸಿದರು. ಮುತ್ತಿನ ತಯಾರಿಕೆಯ ಹಿಂದಿನ ಕ್ರೌರ್ಯ ಕಂಡು ಬೇಸರವಾಯಿತು. ಅಲ್ಲಿದ್ದ ಆಧುನಿಕ ಮಳಿಗೆಗಳಲ್ಲಿ ಹಲವಾರು ಆಭರಣಗಳು, ಬಟ್ಟೆಗಳು, ಕರಕುಶಲ ವಸ್ತುಗಳು ಇತ್ಯಾದಿ ಇದ್ದುವು. ಆದರೆ ಎಲ್ಲವೂ ದುಬಾರಿ ಎನಿಸಿತು. ನಾವಿಬ್ಬರೂ ಏನನ್ನೂ ಖರೀದಿಸದೆ ಬಸ್ಸಿಗೆ ಮರಳಿದೆವು.
ಪ್ರಯಾಣ ಮುಂದುವರಿದು ‘ ಹಾಲಾಂಗ್ ಬೇ ‘ ಎಂಬಲ್ಲಿರುವ ಬಂದರು ತಲಪಿತು. ನಮ್ಮ ಮಾರ್ಗದರ್ಶಿ ‘ಲಾರಿ’ ಯು ಸ್ಥಳೀಯ ಫೆರ‍್ರಿ ನಿರ್ವಾಹಕರೊಂದಿಗೆ ಮಾತನಾಡಿ, ನಾವು ಆ ದಿನ ಉಳಿದುಕೊಳ್ಳಲಿದ್ದ ಹಡಗು ಅಥವಾ ಕ್ರೂಸ್ ಗೆ ತಲಪಿಸುವ ವ್ಯವಸ್ಥೆ ಮಾಡಿದ. ನಿಮ್ಮ ಸರದಿ ಬಂದಾಗ ಫೆರ‍್ರಿ ಮೂಲಕ ಪ್ರಯಾಣಿಸಿ ಕ್ರೂಸ್ ಗೆ ತಲಪಿಸುತ್ತಾರೆ. ನಾಳೆ ಇಲ್ಲಿಗೆ ಪುನ: ತಂದು ಬಿಡುತ್ತಾರೆ. ನಾನು ನಿಮ್ಮನ್ನು ನಾಳೆ ಭೇಟಿ ಮಾಡುವೆ ಎಂದು ತಿಳಿಸಿದ.
ಹತ್ತು ನಿಮಿಷದ ನಂತರ ಒಬ್ಬರು ನಿರ್ವಾಹಕರು ನಮ್ಮ ಬಳಿ ಬಂದು, ಹೆಸರನ್ನು ಕೇಳಿ ಫೆರ‍್ರಿ ಹತ್ತಲು ತಿಳಿಸಿದರು. ಸುಮಾರು 20 ಮಂದಿ ಜನರು ಆಸೀನರಾದ ಮೇಲೆ ಫೆರ‍್ರಿ ವಿಶಾಲವಾದ ನದೀಪಾತ್ರದಲ್ಲಿ ಪ್ರಯಾಣಿಸುತ್ತಾ ಸಮುದ್ರದತ್ತ ಹೊರಟಿತು. ಹಸಿರು , ನೀಲ ಬಣ್ಣದ ಸ್ವಚ್ಚ ನೀರಿನ ‘ಹಾಲಾಂಗ್ ಬೇ’ ಯಲ್ಲಿ ಫೆರ‍್ರಿ ಪ್ರಯಾಣ ಮುದ ಕೊಟ್ಟಿತು. ಇಲ್ಲಿಯೂ ಕೆಲವು ಭಾರತೀಯರನ್ನು ಕಂಡೆವು. ಪ್ರಯಾಣ ಮುಂದುವರಿಯುತ್ತಿದ್ದಂತೆ ಸಮುದ್ರದಲ್ಲಿ ಅಲ್ಲಲ್ಲಿ ಲಂಗರು ಹಾಕಿದ್ದ ವಿವಿಧ ಗಾತ್ರದ ಕೆಲವು ಹಡಗುಗಳನ್ನು ಕಂಡೆವು . ಕೆಲವು ಹಡಗುಗಳು ಚಲಿಸುತ್ತಿದ್ದುವು. ಹೆಚ್ಚು ಕಡಿಮೆ ಎಲ್ಲಾ ಹಡಗುಗಳು ತೇಲುವ ಹೋಟೆಲ್ ನಂತೆ ಕಾಣಿಸುತ್ತಿದ್ದುವು.
ಸಮುದ್ರ ಶಾಂತವಾಗಿತ್ತು. ಸುಮಾರು ಇಪ್ಪತ್ತು ನಿಮಿಷಗಳ ಪ್ರಯಾಣದ ನಂತರ ‘ವೇಲಾರ್ ಆಫ್ ದಿ ಸೀಸ್’ ಎಂಬ ಹೆಸರಿನ ಹಡಗಿನ ಮುಂದೆ ನಮ್ಮ ಫೆರ‍್ರಿ ನಿಂತಿತು. ಅದು ಅಂದು ನಾವು ಉಳಕೊಳ್ಳಲಿರುವ ಕ್ರೂಸ್ ಆಗಿತ್ತು. ಹಡಗಿನ ಒಳಗೆ ಬರುತ್ತಿದ್ದಂತೆ, ಅಲ್ಲಿದ್ದ ಸಿಬ್ಬಂದಿ ನಗುಮುಖದಿಂದ, ಪಾನೀಯ ಕೊಟ್ಟು ಸ್ವಾಗತಿಸಿದರು. ತಂಡದವರಿಗೆ ಕೊಠಡಿಗಳ ಕೀಲಿಯನ್ನು ಕೊಟ್ಟರು. ರೂಮ್ ವಿಶಾಲವಾಗಿ, ಆಧುನಿಕ ಸವಲತ್ತುಗಳನ್ನು ಹೊಂದಿದ್ದು ಅಚ್ಚುಕಟ್ಟಾಗಿತ್ತು. ರೂಮಿನ ಬಾಲ್ಕನಿಯಲ್ಲಿ ಎರಡು ಖುರ್ಚಿಗಳಿದ್ದುವು. ಅಲ್ಲಿ ಕುಳಿತರೆ ಆರಾಮವಾಗಿ ಸಮುದ್ರ ದರ್ಶನವಾಗುತ್ತಿತ್ತು. ಸಮುದ್ರದಲ್ಲಿ ಅತ್ತಿತ್ತ ಹೋಗುವ ಒಬ್ಬನೇ ಚಲಾಯಿಸುವ ಕಯಾಕ್, ಇಬ್ಬರು ಚಲಾಯಿಸುವ ಕಯಾಕ್, ವಾಟರ್ ಸ್ಕೂಟರ್, ಸ್ಪೀಡ್ ಬೋಟ್, ನಾಲ್ಕು ಜನ ಕೂರಬಹುದಾದ ಪೆಡಲ್ ದೋಣಿ, ಏಳೆಂಟು ಮಂದಿ ಕೂರುವ ಸಾದಾ ದೋಣಿ, ಇಪ್ಪತ್ತರಿಂದ ನಲುವತ್ತು ಜನರನ್ನು ಹೊತ್ತೊಯುವ ಫೆರ‍್ರಿ ಹಾಗೂ ತೇಲುವ ಹೋಟೆಲ್ ನಂತಿದ್ದ ಹಡಗುಗಳು …….ಅಹಾ ನೀರಿನ ಮೇಲಿನ ಚಲನೆಯಲ್ಲಿ ಅದೆಷ್ಟು ವೈವಿಧ್ಯ ಅನಿಸಿತು .
ನಮಗೆ ಸಮುದ್ರ ಮಟ್ಟದಲ್ಲಿರುವ ಅಂತಸ್ತಿನಲ್ಲಿ ಕೊಠಡಿಗಳನ್ನು ಕೊಟ್ಟಿದ್ದರು. ರೂಮ್ ನಲ್ಲಿ ಅಳವಡಿಸಲಾದ ಧ್ವನಿವರ್ಧಕ ವ್ಯವಸ್ಥೆಯ ಮೂಲಕ ನಮಗೆ ಆಗಾಗ ಬೇಕಾದ ಮಾಹಿತಿ ಕೊಡುತ್ತಿದ್ದರು. ಮಧ್ಯಾಹ್ನ ಹನ್ನೆರಡುವರೆ ಗಂಟೆಯ ನಂತರ ಮೂರನೆಯ ಅಂತಸ್ತಿನಲ್ಲಿರುವ ರೆಸ್ಟಾರೆಂಟ್ ನಲ್ಲಿ ಊಟದ ವ್ಯವಸ್ಥೆ ಇತ್ತು.
ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=41685
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಪ್ರವಾಸ ಕಥನ ಎಂದಿನಂತೆ ಓದಿಸಿಕೊಂಡುಹೋಯಿತುಅದಕ್ಜೆ ಪೂರಕ ಚಿತ್ರ ಗಳು ಮುದ ತಂದಿತು..ಗೆಳತಿ ಹೇಮಾ
ಬಹಳ ಸುಂದರವಾಗಿದೆ
ವೈವಿಧ್ಯಮಯ ಜನಜೀವನದ, ಸ್ಥಳಗಳ ಮಾಹಿತಿಗಳನ್ನು ನೀಡುತ್ತಾ ಸುಲಲಿತವಾಗಿ ಸಾಗುತ್ತಿದೆ ಪ್ರವಾಸ ಕಥನ.
ಪ್ರವಾಸವನ್ನು ನಿಮ್ಮೊಂದಿಗೆ ನಾವೂ ಮಾಡಿದಂತಾಯಿತು…
ಧನ್ಯವಾದಗಳು
ವೈವಿಧ್ಯಮಯ ಆಹಾರ ಪದ್ಧತಿ, ಜಲಯಾನ, ‘ಲಾರಿ`ಯ ಗೌರವಾನ್ವಿತ ನಡತೆ ಇತ್ಯಾದಿಗಳ ಬಗ್ಗೆ ನೀಡಿದ ವಿವರಗಳು ಚೆನ್ನಾಗಿವೆ. ಅಂತೂ, ವಿಯೆಟ್ನಾಂ ಪ್ರವಾಸ ಅನುಕೂಲಕರವಾಗಿ ನಡೆಯುತ್ತಿರುವುದು ಸಂತಸದ ಸಂಗತಿ.
ಪ್ರವಾಸಕಥನವನ್ನು ಓದಿ, ಮೆಚ್ಚಿ, ಪ್ರತಿಕ್ರಿಯಿಸಿದ ತಮಗೆಲ್ಲರಿಗೂ ಧನ್ಯವಾದಗಳು.