ಪ್ರೀತಿ ವಿಶ್ವಾಸದ ಗಂಟು
ದ್ವೇಷಿಸುವುದು ಏತಕೆ ಮನವೇ
ಸಿಟ್ಟು ಆಕ್ರೋಶ ಸಿಡುಕುತನ ತರವೇ
ಒಳಗೊಳಗೆ ಸುಟ್ಟು ಹೋಗುವೆ ಏಕೆ
ಪ್ರೀತಿ ಕರುಣೆಯಿಂದ ನೋಡಬಾರದೇಕೆ
ದ್ವೇಷದಿಂದ ಏನನ್ನು ಸಾಧಿಸಲಾಗದು
ಆದ ಸಂಕಷ್ಟವನ್ನು ಅಳಿಸಲಾಗದು
ಅಳಿದದ್ದು ಮತ್ತೆ ಮರಳಿಬಾರದು
ಅಸೂಯೆಯಿಂದ ಏನನ್ನು ಪಡೆಯಲಾಗದು
ನೋವು ನಲಿವು ಎಲ್ಲರಿಗೂ ಉಂಟು
ಸೋಲು ಗೆಲುವು ಕಾರ್ಯದೊಳುಂಟು
ಇರಬೇಕು ಎಲ್ಲರೊಡನೆ ಪ್ರೀತಿಯ ನಂಟು
ಕಟ್ಟಿಕೊಳ್ಳಬೇಕು ಪ್ರೀತಿ ವಿಶ್ವಾಸದ ಗಂಟು
ಚಿಕ್ಕ ರಂದ್ರವು ಸಾಕು ದೋಣಿಯ ಮುಳುಗಿಸಲು
ದ್ವೇಷದ ಕಿಡಿ ಸಾಕು ಮನೆ ಮನವ ಸುಡಲು
ಹಂಗಿನ ಅರಮನೆಗಿಂತ ಸಾಕು ಪುಟ್ಟ ಗುಡಿಸಲು
ಪ್ರೀತಿ ಅಕ್ಕರೆ ಬೇಕು ದ್ವೇಷವ ಅಳಿಸಲು
ಹೊತ್ತೊಯ್ಯುವುದಿಲ್ಲ ಯಾರು ಕಾಸಿನಗಂಟು
ಹಿಡಿ ಕಾಳಜಿಯಲ್ಲಿ ಒಲವ ಬದುಕುಂಟು
ಪ್ರೀತಿಯ ಗಂಜಿ ಊಟದಲ್ಲೂ ನೆಮ್ಮದಿಯುಂಟು
ಪ್ರೀತಿ ನೆಮ್ಮದಿಗಿಂತ ಬೇಕೆ ಬೇರೆ ನಂಟು
ಸಂಬಂಧಗಳ ಎಂದಿಗೂ ಮರೆಯದಿರು
ಪ್ರೀತಿಯ ಬಂಧವ ಎಂದು ತೊರೆಯದಿರು
ದ್ವೇಷದ ಜ್ವಾಲೆಯನ್ನು ಹೊತ್ತಿ ಉರಿಸದಿರು
ಹಿತ ಚಿಂತಕರ ಮಾತುಗಳನ್ನು ಕಡೆಗಣಿಸದಿರು
-ನಾಗರಾಜ ಜಿ. ಎನ್. ಬಾಡ, ಕುಮಟ
ಹಿತೋಪದೇಶದಂತಿರುವ ಕವನ ಮನಕ್ಕೆ ಮುದತಂದಿತು ಚೆನ್ನಾಗಿದೆ ಸಾರ್
ಚೆಂದದ ಕವನ
Tumba channagide sir
ಅರ್ಥ ಪೂರ್ಣ ಕವನ
ಚೆನ್ನಾಗಿದೆ ಕವನ
ಎಲ್ಲಾ ಕಾಲಕ್ಕೂ ಪ್ರಸ್ತುತ
ಉತ್ತಮ ಬಾಂಧವ್ಯಕ್ಕಾಗಿ ಪರಸ್ಪರ ದ್ವೇಷದ ಕಿಡಿಯನ್ನು ಉರಿಸದೆ ಪ್ರೇಮ ಪ್ರೀತಿಯಿಂದ ಇರಬೇಕೆಂಬ ಸಂದೇಶವನ್ನು ಹೊತ್ತ ಚಂದದ ಕವನ.
ದ್ವೇಷದ ಕಿಡಿಯ ಭಯಂಕರ ದುಷ್ಪರಿಣಾಮವನ್ನು ಸಮರ್ಥವಾಗಿ ಬಿಂಬಿಸುವ ಕವಿತೆ.