ಕಾದಂಬರಿ : ಕಾಲಗರ್ಭ – ಚರಣ 26

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ವಿಷಯ ತಿಳಿದ ತೋಟದಲ್ಲಿನ ಆಳುಮಕ್ಕಳು, ಊರಿನ ಪರಿಚಿತರು ಮನೆಯ ಹತ್ತಿರ ಬರಲಾರಂಭಿಸಿದರು. ಮನೆಯವರಿಗೇ ವಿಷಯವೇನೆಂದು ಸರಿಯಾಗಿ ತಿಳಿದಿಲ್ಲ. ಇನ್ನು ಬಂದವರಿಗೇನು ಹೇಳಲು ಸಾಧ್ಯ. ಕೊನೆಗೆ ಗಂಗಾಧರಪ್ಪನವರಿಗೆ ಮನಸ್ಸು ತಡೆಯಲಾರದೆ ಸ್ನಾನ ಪೂಜೆ ಮುಗಿಸಿ, ಗಂಜಿಕುಡಿದು ಜೊತೆಗೊಬ್ಬ ಆಳುಮಗನನ್ನು ಕರೆದುಕೊಂಡು ಮ್ಯಸೂರಿನ ಜೆ.ಎಸ್.ಎಸ್. ಆಸ್ಪತ್ರೆಗೆ ಹೊರಡಲು ಸಿದ್ಧರಾದರು. ಅಷ್ಟರಲ್ಲಿ ಡಾ,ಚಂದ್ರಪ್ಪನವರೂ ಅಲ್ಲಿಗೆ ಬಂದರು. ಅವರನ್ನು ನೋಡಿ ಮನೆಯವರಿಗೆಲ್ಲ ಸ್ವಲ್ಪ ಬಲ ಬಂದಂತಾಯಿತು. ಅವರು ಮೈಸೂರಿನ ಆಸ್ಪತ್ರೆಯಿಂದಲೇ ಬಂದಿದ್ದಾರೆಂದು ತಿಳಿದು ತಾಜಾ ಸುದ್ಧಿ ತಿಳಿಯಲು ಕಾತರರಾದರು. ಅವರೆಲ್ಲರ ಆತಂಕ ನಿವಾರಿಸುವಂತೆ “ಗಾಭರಿಯಾಗಬೇಡಿ, ಇನ್ನೂ ಪರೀಕ್ಷೆಗಳನ್ನೇ ಮಾಡುತ್ತಿದ್ದಾರೆ. ಬೇಗನೇ ಹುಷಾರಾಗಿ ಮನೆಗೆ ಬರುತ್ತಾನೆ. ಈಗ ಸದ್ಯಕ್ಕೆ ಸುಬ್ಬು, ಶಂಕರಪ್ಪನವರಿಗೆ ಒಂದೆರಡು ಜೊತೆ ಬಟ್ಟೆಗಳು, ಟವೆಲ್ಲು ವಗೈರೆಗಳನ್ನು ತೆಗೆದುಕೊಟ್ಟರೆ ನಾನಲ್ಲಿಗೆ ತೆಗೆದುಕೊಂಡು ಹೋಗುತ್ತೇನೆ. ಅಲ್ಲಿ ನಮ್ಮ ಸಂಬಂಧಿಕರ ಮನೆ ಇದೆ. ನಾನು ಆಸ್ಪತ್ರೆಯಲ್ಲಿದ್ದು ಅವರನ್ನು ಮನೆಗೆ ಕಳುಹಿಸಿ ಅವರು ಸ್ನಾನ ವಗೈರೆಗಳನ್ನು ಮುಗಿಸಿಕೊಂಡು ಬರಲು ಹೇಳುತ್ತೇನೆ. ನೀವೀಗಲೇ ಅಲ್ಲಿಗೆ ಬರುವುದು ಬೇಡ. ಎಲ್ಲವೂ ಮುಗಿದಮೇಲೆ ನಾನೇ ಬಂದು ಕರದುಕೊಂಡು ಹೋಗುತ್ತೇನೆ. ಅಲ್ಲಿಯವರೆಗೆ ನೀವೆಲ್ಲಿಗೂ ಬರಬೇಕಾಗಿಲ್ಲ.” ಎಂದು ಬಟ್ಟೆ ಬರೆಯ ಬ್ಯಾಗ್ ತೆಗೆದುಕೊಂಡು ಹೊರಟರು ಚಂದ್ರಪ್ಪ.

ಕಾರಿನಲ್ಲಿ ಹೊರಟ ಚಂದ್ರಪ್ಪನವರ ಮನದಲ್ಲಿ ದೊಡ್ಡ ಕೋಲಾಹಲವೇ ಎದ್ದಿತ್ತು. ರಾತ್ರಿ ಬಸಮ್ಮನವರನ್ನು ಅವರ ಮನೆಗೆ ಬಿಟ್ಟು ತಮ್ಮ ಮನೆಗೆ ಹೋದ ಸ್ವಲ್ಪ ಹೊತ್ತಿನಲ್ಲೇ ರುದ್ರಪ್ಪನವರ ಫೋನ್ ಬಂದಿತ್ತು. ಸುದ್ಧಿ ಕೇಳಿದ ತಕ್ಷಣ ಹೊರಟು ಆ ಸ್ಥಳದಲ್ಲಿ ಕಂಡಿದ್ದೇನನ್ನು. ಯಾವ ಊನವೂ ಆಗದಂತೆ ನಿಂತಿದ್ದ ಮಹೇಶನ ಮೋಟಾರ್‌ ಬೈಕ್. ನಜ್ಜುಗುಜ್ಜಾಗಿದ್ದ ಅವನ ಮೊಬೈಲ್ ಫೋನ್. ಸುಮಾರು ದೂರದ ವರೆಗೆ ಎಳೆದುಕೊಂಡು ಹೋಗಿ ಬಿದ್ದಿದ್ದ ಮಹೇಶನ ದೇಹ. ಒಂದು ಕ್ಷಣ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ದೇವರಂತೆ ಅಲ್ಲಿಗೆ ಬಂದ ರುದ್ರಪ್ಪನವರಿಗೆ ಹಾಗೂ ಮೊದಲು ನನಗೇ ತಿಳಿಸಿದ ಅವರ ಮುಂದಾಲೋಚನೆಗೆ ಮನದಲ್ಲೆ ವಂದಿಸಿ ತಡಮಾಡದೇ ಸಾಧ್ಯವಿದ್ದ ಪ್ರಥಮ ಚಿಕಿತ್ಸೆ ಮಾಡಿ ಆಸ್ಪತ್ರೆಗೆ ತೆಗೆದುಕೊಂಡು ಹೋದರು. ರುದ್ರಪ್ಪನವರನ್ನು ಮತ್ತು ಚಂದ್ರಪ್ಪನವರನ್ನು ನೋಡಿದ ಅಸ್ಪತ್ರೆಯ ಸಿಬ್ಬಂದಿವರ್ಗ ಟೊಂಕಕಟ್ಟಿ ಉಪಚಾರಕ್ಕೆ ನಿಂತರು. ವಿಶೇಷ ತಜ್ಞರನ್ನೇ ಕರೆಸಲಾಯಿತು. ‘ಹಿಟ್ ಅಂಡ್ ರನ್ ಕೇಸ್’ ಬಲವಾಗಿ ಗುದ್ದಿದರಿಂದ ಬೆನ್ನು ಹುರಿಗೆ ಪೆಟ್ಟಾಗಿ ಕೋಮಾಸ್ಥಿತಿ ತಲುಪಿದ್ದಾನೆ. ಏನೂ ಮಾಡಲಾಗದು. ಪ್ರಜ್ಞೆ ಬಂದರೂ ಬರಬಹುದು, ಬಾರದಿರಬಹುದು. ಹಾಗೇ ಅಂತ್ಯವೂ ಆಗಬಹುದು ಎಂಬ ಅಭಿಪ್ರಾಯಕ್ಕೆ ಬಂದರು. ಹಿಂಬದಿಯಿಂದ ದೇಹವನ್ನು ಎಳೆದುಕೊಂಡು ಹೋಗಲಾಗಿದೆ. ಪ್ರಯೋಜನವಾಗದೆಂದು ಕೈ ಚೆಲ್ಲಿದ್ದಾರೆ. ಈಗ ಏನೆಂದರೂ ಅಲ್ಲೇ ವ್ಯವಸ್ಥೆ ಮಾಡಲು ಬಯಸುತ್ತಾರೋ ಅಥವಾ ಮನೆಯಲ್ಲೇ ಇಟ್ಟುಕೊಂಡು ನೋಡಿಕೊಳ್ಳುವ ವ್ಯವಸ್ಥೆ ಮಾಡುತ್ತಾರೋ ನೋಡಬೇಕು. ಅದೆಲ್ಲ ಆಗುವವರೆಗೂ ವಯೋವೃದ್ಧರಾಗಿರುವ ಬಸಮ್ಮ, ಗಂಗಾಧರಪ್ಪನವರನ್ನು ಹೇಗೆ ಸಂಭಾಳಿಸುವುದು. ಮುಖ್ಯವಾಗಿ ಆತನ ಸಂಗಾತಿ ದೇವಿ..ಪಾಪ ಆ ಹುಡುಗಿ ಮದುವೆಗೆ ಮೊದಲೇ ಚೆಂದಿತ್ತು. ಇಬ್ಬರೂ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಜಕ್ಕವಕ್ಕಿಗಳಂತೆ ಓಡಾಡಿಕೊಂಡಿದ್ದರು. ಹಾಗಿದ್ದವರು ಏಕೆ ಹೀಗಾದರು? ಈಗ ಮತ್ತೊಂದು ಆಘಾತ. ದೇವರೇ ಅವರೆಲ್ಲರಿಗೂ ಇದನ್ನು ತಡೆದುಕೊಳ್ಳುವ ಶಕ್ತಿಯನ್ನು ದಯಪಾಲಿಸೆಂದು ಮನದಲ್ಲೇ ಬೇಡಿಕೊಳ್ಳುತ್ತಾ ಆಸ್ಪತ್ರೆಗೆ ತಲುಪಿದರು.

ಬಟ್ಟೆಬರೆಗಳನ್ನು ತೆಗೆದುಕೊಂಡು ಹೋದ ಚಂದ್ರಪ್ಪನವರ ಮಾತುಗಳನ್ನು ಕೇಳಿ ಗಂಗಾಧರಪ್ಪನವರಿಗೆ ಇಲ್ಲಾ ಮಗನಿಗೇನೋ ಆಗಿದೆ. ಗಂಭೀರ ಪರಿಸ್ಥಿತಿ ಒದಗಿರಬಹುದು. ಅದನ್ನು ಕಣ್ಣಾರೆ ಕಂಡರೆ ತಡೆದುಕೊಳ್ಳಲಾರರು ಎಂದು ನಿಜಸ್ಥಿತಿಯನ್ನು ಮರೆಮಾಚುತ್ತಿದ್ದಾರೆ ಎನ್ನಿಸಿತು. ನನಗಿಂತಲೂ ಹಿರಿಯ ಜೀವವೊಂದು ಎದುರು ಮನೆಯಲ್ಲಿದೆ. ನಾನು ನನ್ನ ಗೆಳೆಯನನ್ನು ಕಳೆದುಕೊಂಡೆ, ಆಕೆ ತನ್ನ ಬಾಳಸಂಗಾತಿಯನ್ನು ಕಳೆದುಕೊಂಡರು. ಒಂಟಿಯಾಗಿದ್ದಾರೆ. ಇಂಥಹ ಸಮಯದಲ್ಲಿ ನಾನು ಆಧೀರನಾಗಬಾರದು. ಬಂದದ್ದನ್ನು ಎದುರಿಸೋಣ ಎಂದು ಮನದಲ್ಲೇ ನಿಶ್ಚಯಿಸಿಕೊಂಡರು. ಧಾವಂತಗೊಂಡು ಬಂದಿದ್ದ ಆಳುಕಾಳುಗಳನ್ನು, ಮತ್ತು ಪರಿಚಯದ ಜನರನ್ನು ಸಮಾಧಾನ ಹೇಳಿ ಹಿಂದಕ್ಕೆ ಕಳುಹಿಸಿದರು.

ಸುಬ್ಬವಂತೂ ಮನೆ ಆಸ್ಪತ್ರೆ ಎಂದು ಎಡತಾಕುತ್ತಾ ಒಂದು ವಾರ ಕಳೆಯುವುದರಲ್ಲಿ ಸೋತು ಸುಣ್ಣವಾದ. ಆಗ ಸಂಯಮ ಕಳೆದುಕೊಳ್ಳದ ಗಂಗಾಧರಪ್ಪ, ಶಂಕರಪ್ಪ, ವೈದ್ಯರ ಸೂಚನೆಯಂತೆ ತಾವು ವಾಸವಿದ್ದ ಮನೆಯ ಕೆಳಗಿನ ರೂಮನ್ನು ಆಸ್ಪತ್ರೆಯ ಕ್ಲಿನಿಕ್ಕಿನಂತೆ ಸಜ್ಜುಗೊಳಿಸಿದರು. ಇದೆಲ್ಲವನ್ನು ಗಮನಿಸಿದ ಮನೆಯವರುಗಳ ಗೋಳಾಟ ಮುಗಿಲು ಮುಟ್ಟಿತು. ಆಗಲೂ ಮನೆಯ ಹಿರಿಯ ಹೆಂಗಸರಿಬ್ಬರನ್ನು ಆಸ್ಪತ್ರೆಗೆ ಬರಗೊಡದಂತೆ ತಡೆಯುವುದರಲ್ಲಿ ಸಫಲರಾದರು ಗಂಗಾಧರಪ್ಪ. “ಆಗಿದ್ದು ಆಗಿಹೋಗಿದೆ, ಅಲ್ಲಿ ಹೋಗಿ ಏನು ಮಾಡಲು ಸಾಧ್ಯ ಸುಮ್ಮನಿರಿ . ಅವನನ್ನು ಇಲ್ಲಿಗೇ ಕರೆತರುತ್ತೇನೆ, ನೋಡುವಿರಂತೆ” ಎಂದು ಎಲ್ಲರನ್ನೂ ಬಾಯ್ಮುಚ್ಚಿಸಿದರು.

ಮನೆಗೆ ದಂಡಿನಂತೆ ಬಂದ ಎರಡೂ ಮನೆಯ ಮಕ್ಕಳು, ಬಂಧುಬಳಗ ಎಲ್ಲರಿಗೂ ಅದೇ ಉತ್ತರ ಕೊಡುತ್ತಾ ಸಂಭಾಳಿಸಿದರು. ಸುಮಾರು ಹದಿನೈದು ದಿನಗಳು ಆಸ್ಪತ್ರೆ ಮನೆಯ ಅಲೆದಾಟದಿಂದ ಬಸವಳಿದಿದ್ದ ಶಂಕರಪ್ಪ, ಸುಬ್ಬು, ಗಂಗಾಧರಪ್ಪನವರು ಮಾಡಿಕೊಂಡಿದ್ದ ವ್ಯವಸ್ಥೆಯಂತೆ ಸಿದ್ಧವಾಗಿದ್ದ ರೂಮಿನಲ್ಲಿ ಮಹೇಶನನ್ನು ಆಸ್ಪತ್ರೆಯಿಂದ ತಂದು ಸ್ಥಾಪಿಸಿದರು.

ಕಾಲಪ್ಪಳಿಸಿಕೊಂಡು ಆರ್ಭಟಿಸಿಕೊಂಡು ಮನೆಯಿಂದ ಹೊರಬಿದ್ದ ತನ್ನ ಗಂಡ ಈಗ ಜೀವಚ್ಛವವಾಗಿ ಬಂದದ್ದು ನೋಡಿದ ದೇವಿ ನಿರ್ವಿಕಾರಭಾವದಿಂದ ಅವನನ್ನು ಬರಮಾಡಿಕೊಂಡಳು. ಮಾತೇ ಮರೆತವಳಂತೆ ದಿನವೂ ಅವನನ್ನು ನೋಡುತ್ತಾ ಆಗಾಗ್ಗೆ ಡ್ರಿಪ್ ಬದಲಾಯಿಸುತ್ತ ಇರುವುದಷ್ಟೇ ಅವಳ ಪಾಲಿಗೆ ಉಳಿದಿತ್ತು. ಮೊಮ್ಮಗಳ ಬದುಕು ಹೀಗೆ ಮೂರಾಬಟ್ಟೆಯಾದುದನ್ನು ನೋಡಿದ ಅಜ್ಜಿ ಬಸಮ್ಮನವರು ಕೇವಲ ಒಂದು ವಾರದೊಳಗೇ ತಮ್ಮ ಇಹಲೋಕದ ವೈಪಾರವನ್ನು ಮುಗಿಸಿ ಹೋಗಿಬಿಟ್ಟರು.

ಎರಡೂ ಮನೆಯವರಿಗೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಎಂದು ಜನರು ಅಂದುಕೊಳ್ಳುವಂತಾಯ್ತು. ವೈದ್ಯರುಗಳ ಹೇಳಿಕೆಯಂತೆ ಮಹೇಶನ ಸ್ಥಿತಿ ಏನೊಂದೂ ಬದಲಾವಣೆಯಿಲ್ಲದೆ ಮುಂದುವರೆದಿತ್ತು. ಎರಡೂ ಮನೆಯ ಕೆಲಸ ಕಾರ್ಯಗಳು ನಿಲ್ಲದಂತೆ ಯಾಂತ್ರಿಕವಾಗಿ ನಡೆದಿದ್ದವು. ಒಂಬತ್ತುವರ್ಷದ ಚಂದ್ರಿಕಾಳ ಮಕ್ಕಳಿಬ್ಬರಿಗೂ ಪರಿಸ್ಥಿತಿಯ ಅರ್ಥವಾಗದಿದ್ದರೂ ತಮ್ಮ ದೊಡ್ಡಪ್ಪನಿಗೇನೋ ಆಗಿದೆ ಎಂದು ತಿಳಿಯುತ್ತಿತ್ತು. ಹೆಚ್ಚು ಗಲಾಟೆ ಮಾಡದೆ ವಯಸ್ಸಿಗೆ ಮೀರಿದ ತಿಳಿವಳಿಕೆ ಇದ್ದವರಂತೆ ಅವರ ಹತ್ತಿರ ಹೋಗಿನಿಂತು ಸಾಂತ್ವನಗೈಯುವಂತೆ, ದೇವರ ಪೂಜೆಯಾದ ಮೇಲೆ ಅವರ ಹಣೆಗೆ ವಿಭೂತಿಯ ಬೊಟ್ಟಿಟ್ಟು ಪ್ರಾರ್ಥನೆ ಮಾಡುತ್ತಿದ್ದವು. ತಮಗೆ ತಿಳಿದಂತೆ ದೊಡ್ಡಮ್ಮನನ್ನು ರಮಿಸುತ್ತಿದ್ದವು. ದೇವಿಯಂತೂ ತಾನು ಹಿಡಿದಿದ್ದ ಕೆಲಸವನ್ನು ಚಂದ್ರಾಳಿಗೆ ಒಪ್ಪಿಸಿ ಸಂಪೂರ್ಣವಾಗಿ ಅಂತರ್ಮುಖಿಯಾಗತೊಡಗಿದಳು.

ಸುದ್ಧಿ ತಿಳಿದ ಮಹೇಶನ ಗೆಳೆಯ ಗಣಪತಿ ತನ್ನ ಹೆತ್ತವರೊಡನೆ ಬಂದು ಸ್ವಲ್ಪ ದಿನ ಅಲ್ಲಿ ತಂಗಿದ್ದು ಹೋದ. ಯಾರಿಗೆ ಯಾರೂ ಸಂತೈಸುವ, ಮಾತನಾಡುವ ಹಂತದಲ್ಲಿರಲಿಲ್ಲ. ಒಂದು ರೀತಿಯ ನಿರ್ಲಿಪ್ತತೆ ಮನೆ ಮಾಡಿತ್ತು. ಇದೇ ಅವಸ್ಥೆಯಲ್ಲಿ ಒಂದು ವರ್ಷಕಾಲ ಮುಂದುವರೆದು ಕಣ್ಣನ್ನು ಮತ್ತೆ ತೆರೆಯದೇ ಮಹೇಶ ನೇಪತ್ಯಕ್ಕೆ ಸರಿದುಬಿಟ್ಟ.

ಒಂದು ವರ್ಷದಿಂದ ಬಂಧುಬಾಂಧವರ, ಅವರ ಮಕ್ಕಳ, ಸುತ್ತಮುತ್ತಲಿನವರ ಬಾಯಿಂದ ಹೊರಡುತ್ತಿದ್ದ ಮಾತುಗಳು, ಊಹಾಪೋಹಗಳ ಕತೆಗಳಿಂದ ಬೇಸತ್ತಿದ್ದ ದೇವಿ ತನ್ನ ಸಂಗಾತಿ ಮಹೀ ಇನ್ನಿಲ್ಲ ಎಂಬ ಸತ್ಯ ಅವಳನ್ನು ಪ್ರಜ್ಞೆ ತಪ್ಪುವಂತೆ ಮಾಡಿತ್ತು. ಅನಂತರ ಎಚ್ಚರವಾದರೂ ಮಸುಕು ಮಸುಕು ನೋಟ, ಹೆತ್ತವರು ಆಡುತ್ತಿದ್ದ ಮಾತುಗಳನ್ನು ಕೇಳಿ ಒಳಗೊಳಗೇ ನಗು, ಕೇವಲ ಮೂವತ್ತೈದಕ್ಕೆ ಮುಗಿದ ಅವಳ ಸಾಂಸಾರಿಕ ಜೀವನ. ನಿಜವಾಗಿ ಅವಳ ಬಾಳಿನ ಪುಟ ತೆರೆಯಲೇ ಇಲ್ಲ. ಅವಳ ಬಗ್ಗೆ ಹೆಚ್ಚಿನ ಅಕರಾಸ್ತೆ ಹೊಂದಿದ್ದ ಅಜ್ಜ ಅಜ್ಜಿ ಹಿರಿಯ ಜೀವಿಗಳು ತನ್ನ ಕಾರಣದಿಂದಲೇ ಕಣ್ಮರೆಯಾದರು. ಇನ್ನ್ಯಾವ ಚಕ್ರಾಧಿಪತ್ಯವನ್ನು ತಾನು ಆಳಬೇಕಾಗಿದೆ. ಇಷ್ಟೆಲ್ಲ ದುಃಖ ದುಮ್ಮಾನಗಳ ನಡುವೆಯೂ ಮಹೇಶನ ಸೋದರಿಯರಾಡಿದ ನಂಜಿನ ಮಾತುಗಳು “ಮಂಗಳಮ್ಮ ನೀವು ಮಗನನ್ನು ಕರೆದುಕೊಂಡು ನಮ್ಮ ಮನೆಗೆ ಬಂದ ಗಳಿಗೆ ಬಹಳ ಚೆನ್ನಾಗಿದೆ. ಈ ಜನ್ಮದಲ್ಲಿ ನನ್ನ ಸೋದರನಂತೂ ಮೇಲೇಳಲಾರ. ಇನ್ನವನ ಸಂಗಾತಿ ಹೇಗೆ ತೊಟ್ಟಿಲು ತೂಗಲು ಸಾಧ್ಯ. ನಮ್ಮ ಹೆತ್ತವರಿಗೆ ಹೇಗಾದರೂ ನೀವೇ ಎಲ್ಲ. ಅದೇನೋ ಹೇಳ್ತಾರಲ್ಲಾ ಗೆದ್ದಲು ಕಷ್ಟಪಟ್ಟು ಹುತ್ತ ಕಟ್ಟಿತು. ಅದರೊಳಕ್ಕೆ ಹಾವು ಬಂದು ಸೇರಿತು ಅನ್ನೊ ಹಾಗೆ” ಬೇಡವೆಂದರೂ ಅವರ ಮಾತುಗಳು ಕಿವಿಗಳಿಗೆ ಬಂದಪ್ಪಳಿಸಿದ್ದವು.

PC: Internet

ಮನಸ್ಸಿನಲ್ಲಿ ದೇವಿಯು “ಮುಂದಿನ ಜನ್ಮದಲ್ಲಾದರೂ ಒಬ್ಬರಿಗೊಬ್ಬರು ಅರಿತು ಬಾಳ್ವೆ ನಡೆಸೋಣ ಬರಲೇ ಮಹೀ” ಎಂದುಕೊಂಡಳು.

ಹೊರಗಡೆ ಆಂಬುಲೆನ್ಸ್ ಬಂತು ಎಂಬ ಶಬ್ಧ ಮಾದೇವಿಯನ್ನು ಎಚ್ಚರಿಸಲು ಬಂದವರಿಗೆ ಅವಳ ರೆಪ್ಪೆಯಲುಗದ ನೆಟ್ಟ ನೋಟ ವಾಸ್ತವ ಪರಿಸ್ಥಿತಿಯನ್ನು ತಿಳಿಸಿತ್ತು.

ಅಗಲಲಾರದ ಜೋಡಿಗಳು ಒಟ್ಟಿಗೇ ಹೊರಟವು ನೋಡಿ ಎಂಬ ಉದ್ಗಾರ ತೆಗೆದರು. ಅವರುಗಳ ಜೊತೆಯಲ್ಲಿ ಹಿಂಬಾಲಿಸಿ ಹೊರಡಲು ಸಿದ್ಧನಾಗಿದ್ದ ಗಣಪತಿಗೆ ಕೊನೆಗೂ ಗೆಳೆಯ ಮಹೇಶ ತನ್ನ ಅಂತರಂಗವನ್ನು ನಿಚ್ಚಳವಾಗಿ ತನ್ನಮುಂದೆ ಬಿಚ್ಚಿಡಲಿಲ್ಲ. ಅವನಿಗೆ ಚಿಕಿತ್ಸೆ ಮತ್ತು ಕೌನ್ಸೆಲಿಂಗ್ ಮಾಡಿದ ಡಾ.ಶರ್ಮಾರವರು ಈ ಸುದ್ಧಿಯನ್ನು ಕೇಳುತ್ತಿದ್ದಂತೆ “ಆ ದಂಪತಿಗಳಿಬ್ಬರೂ ಬುದ್ಧಿವಂತರೇ, ಆದರೆ ಅವರುಗಳು ರೈಲ್ವೇ ಹಾದಿಯ ಎರಡೂ ಕಂಬಿಗಳು ಸಮಾನಾಂತರವಾಗಿ ಚಲಿಸುವಂತೆ ತಮ್ಮತಮ್ಮದೇ ಲೋಕದಲ್ಲಿದ್ದರು. ಎರಡೂ ಕಂಬಿಗಳು ಕೂಡುವ ಸಂಭವ ಹೇಗೆ ಅಸಾಧ್ಯವೋ ಹಾಗೇ ಅವರು ತಮ್ಮ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಲು ಇಬ್ಬರೂ ಒಂದೆಡೆ ಕುಳಿತು ಪ್ರಯತ್ನಿಸಲೇ ಇಲ್ಲ. ಇದೇ ಅವರ ದುರಂತ ಅವಸ್ಥೆ ಮತ್ತು ಅವಸಾನಕ್ಕೆ ಸ್ವಯಂಕೃತ ಕಾರಣವಾಯಿತು ಎನ್ನಿಸುತ್ತದೆ” ಎಂದು ಮಾರ್ಮಿಕವಾಗಿ ನುಡಿದರು. ಅಂತೂ ಕೊನೆಯಲ್ಲಿ ಇಬ್ಬರೂ ತಮ್ಮದೇ ರೀತಿಯಲ್ಲಿ ಅಸಫಲ ಪ್ರಯತ್ನ ನಡೆಸಿದ್ದರು. ಆದರೆ ಅವರಿಬ್ಬರ ಸಂಬಂಧಗಳ ತೊಡಕಿನ ಹಿಂದೆ ಅಡಗಿದ್ದ ವಾಸ್ತವಿಕ ಸತ್ಯವನ್ನು ಹೊರಗೆಡಹದೆ ಅವನು ತಪ್ಪು ಮಾಡಿದರೆ, ಅದನ್ನು ಸಾವಧಾನವಾಗಿ ಕೇಳಿ ಸಹಾನುಭೂತಿಯಿಂದ ವರ್ತಿಸುವ ಸಾಹಸವನ್ನು ಅವಳೂ ತೋರಲಿಲ್ಲ. ಹಾಗಾಗಿ ಸರಿಹೋಗಬಹುದಾಗಿದ್ದ ಸಮಸ್ಯೆ ಯಾರಿಗೂ ಗೊತ್ತಾಗದಂತೆ ಕಾಲಗರ್ಭದಲ್ಲಿಯೇ ಲೀನವಾಯಿತಲ್ಲಾ ಎಂದು ಹಳಹಳಿಸುತ್ತ ಗಣಪತಿ ದೀರ್ಘವಾದ ನಿಟ್ಟುಸಿರಿಟ್ಟ. ಹಿರಿಯರು ಹೇಳಿದ್ದಾರೆ ಹುಡುಕಿದರೆ ಭಗವಂತನೇ ಸಿಗುತ್ತಾನೆಂದು ಅಂತದ್ದರಲ್ಲಿ ಒಂದು ಮಾನಸಿಕ ಸಮಸ್ಯೆಗೆ ಪರಿಹಾರ ದೊರೆಯದೆ ಜೀವಗಳೇ ನಷ್ಟವಾದುವಲ್ಲಾ ಎಂದವನ ಮನಸ್ಸು ದುಃಖಿಸಿತು.

ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ:     https://www.surahonne.com/?p=41209
(ಮುಗಿಯಿತು)

ಬಿ.ಆರ್.ನಾಗರತ್ನ, ಮೈಸೂರು

12 Responses

  1. Hema Mala says:

    ಹಲವರು ರೋಚಕ ತಿರುವುಗಳಿದ್ದ ಕಾದಂಬರಿಯು, ಪತಿ-ಪತ್ನಿಯರ ನಡುವೆ ಸೂಕ್ತವಾದ ಸಂವಹನದ ಕೊರತೆಯಿಂದ ದು:ಖಾಂತ್ಯವಾದಾಗ ಕಣ್ಣು ತೇವವಾಯಿತು. ಸೊಗಸಾದ ನಿರೂಪಣೆ.

  2. ನನ್ನ ಕಾಲಗರ್ಭ ಕಾದಂಬರಿ ಯನ್ನು ಸುರಹೊನ್ನೆಯಲ್ಲಿ ಪ್ರಕಟಸಿ ಪ್ರೋತ್ಸಾಹ ನೀಡಿ ಪ್ರತಿ ಕ್ರಿಯೆ ವ್ಯಕ್ತಪಡಿಸಿರುವ ನಿಮಗೆ ಹೃತ್ಪೂರ್ವಕವಾದ ಧನ್ಯವಾದಗಳು.. ಗೆಳತಿ ಹೇಮಾ

  3. ಮುಕ್ತ c. N says:

    ಅಂತ್ಯ ದುರಂತವಾಗಬಾರದಿತ್ತು

  4. SHARANABASAVEHA K M says:

    ಮುಂದೇನಾಗುವುದೋ ಎನ್ನುವ ಕುತೂಹಲ ಉಳಿಸಿಕೊಂಡು ಬಂದ ನಿರೂಪಣೆ………ಪ್ರತಿ ವಾರ ಕಾಯುವಂತೆ ಮಾಡಿತು………ಕುಟುಂಬದ ಸದಸ್ಯರ ಮಧ್ಯೆ ಇರುವ ಸಂಬಂಧಗಳು……..ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅಜ್ಜ ಅಜ್ಜಿ…. ಸ್ಪಂದಿಸುವ ಮನಸ್ಸು ಇರುವ ಸ್ನೇಹಿತರು… ಹೀಗೆ ವಿವಿಧ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಬರಹ….ಅತ್ಯುತ್ತಮ ಕಾದಂಬರಿ……. ಅಭಿನಂದನೆಗಳು ಬಿ.ಆರ್ ನಾಗರತ್ನ ಮೇಡಂ ಗೆ

  5. ನಿಮ್ಮ ಪ್ರತಿಕ್ರಿಯೆಯಾಗಿ ಧನ್ಯವಾದಗಳು ಸಾರ್

  6. ನಯನ ಬಜಕೂಡ್ಲು says:

    ಒಂದು ದೀರ್ಘ ಮೌನ, ಇಂತಹ ಒಂದು ತಿರುವು ಕತೆಯಲ್ಲಿ ಬರಬಹುದು ಅಂತ ಊಹೆ ಕೂಡಾ ಮಾಡಿರಲಿಲ್ಲ. ಅಂತ್ಯ ದುಃಖದಿಂದ ಕೂಡಿದ್ದರೂ ಬಹಳ ಚೆನ್ನಾಗಿ ಮೂಡಿ ಬಂತು ಕಾದಂಬರಿ.

  7. ನಿಮ್ಮ ಪ್ರೀತಿ ಯ ಮೆಚ್ಚುಗೆ ಹಾಗೂ ಸ್ಪಷ್ಟ ಅಭಿಪ್ರಾಯ ಕ್ಕಾಗಿ ಧನ್ಯವಾದಗಳು ನಯನ ಮೇಡಂ…

  8. ಶಂಕರಿ ಶರ್ಮ says:

    ಕಥಾನಾಯಕ ಮತ್ತು ನಾಯಕಿಯನ್ನು ಇಷ್ಟು ಬೇಗ ಕಾಲಗರ್ಭಕ್ಕೆ ಸೇರಿಸಿದ್ದು ಸರಿ ಎನಿಸಲಿಲ್ಲ. ಅಂತ್ಯವು ಥಟ್ಟನೆ ಕೊನೆಗೊಂಡಂತೆನಿಸಿತು…. ಆದರೆ, ಕೊನೆಗೆ ಮನದಲ್ಲಿ ವ್ಯಾಪಿಸಿತು ನೀರವ ಮೌನ. ಅತ್ಯಂತ ಸುಂದರ ಸಂಸಾರವೊಂದರ ಅಂತ್ಯದ ರೋಚಕ ತಿರುವು, ಕಥಾ ರೂಪದಲ್ಲಿ ಅತ್ಯಂತ ಸಮರ್ಥವಾಗಿ ರೂಪುಗೊಂಡಿದೆ. ಪೂರ್ತಿ ಕಥಾ ಹಂದರವು ಹದವಾಗಿ ಬಿಚ್ಚಿಕೊಳ್ಳುತ್ತಾ ಹೋದ ಪರಿ ಅದ್ಭುತ…! ಧನ್ಯವಾದಗಳು ನಾಗರತ್ನ ಮೇಡಂ. ನಿಮ್ಮ ಮುಂದಿನ ಕಥೆಯ ನಿರೀಕ್ಷೆಯಲ್ಲಿ….

  9. ನಿಮ್ಮ ವಿಶ್ಲೇಷಣೆ ಗೆ..ಹಾಗೂ ಪ್ರತಿಕ್ರಿಯೆ ಗೆ ಧನ್ಯವಾದಗಳು ಶಂಕರಿ ಮೇಡಂ..

  10. ಪದ್ಮಾ ಆನಂದ್ says:

    ದುರಂತ ಮುಕ್ತಾಯವನ್ನು ಓದಿದ ನಂತರ ವಿಷಾದನೀಯ ಮೌನವೇ ಲೇಸೆನಿಸುವಂತೆ ಮನವು ನೀರವವಾಯಿತು.

  11. ಧನ್ಯವಾದಗಳು ಗೆಳತಿ.. ವಾಸ್ತವ ಸಂಗತಿಗಳ ಅನಾವರಣ ಗೆಳತಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: